ಶ್ರೀ ಸದ್ಗುರುನಾಥ ಲೀಲಾಮೃತ - 2
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 10
ಆಂಬ್ಯುಲೆನ್ಸ್ ನ್ನು ಎತ್ತಿಟ್ಟವರಾರು?
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಭವರೋಗ ನಿವಾರಕರಾದ ಗುರುನಾಥರ ಕೃಪೆ, ಯಮನ ಮುಖದಲ್ಲಿದ್ದ ಭಕ್ತರನ್ನು ವಾಪಸ್ಸು ಕರೆತಂದ ಅಘಟಿತ ಘಟನೆಯೇ ಇಂದಿನ ಸತ್ಸಂಗ. ವಿಚಿತ್ರ ಆದರೂ ನಿಜ ಘಟನೆ.
ಎರಡು ಸಾವಿರ ಹದಿನಾಲ್ಕರಲ್ಲಿ ಗುರುನಾಥರ ಭಕ್ತರಾದ ನೀಲಕಂಠರಾಯರು ಹಾಗೂ ಅವರ ಸಹೋದರರು ಬೈಕಿನಲ್ಲಿ ಬರುತ್ತಿದ್ದಾಗ ಶುಗರ್ ಫ್ಯಾಕ್ಟರಿಯ ಬಳಿ ಭೀಕರ ಅಪಘಾತಕ್ಕೆ ಒಳಗಾದರು. ಎಲುಬುಗಳೆಲ್ಲಾ ಮುರಿದಿದ್ದವು. ಕೈ ಪೂರ್ತಿ ಸ್ವಾಧೀನ ತಪ್ಪಿತ್ತು. ಮುಖ ಮೈಗಳಿಂದ ನೆತ್ತರು ಹರಿಯುತ್ತಿತ್ತು. ಅವರ ತಮ್ಮನ ಸ್ಥಿತಿಯೂ ಹೀಗೆಯೇ.... ಅಣ್ಣನ ಭೀಕರತೆ ಕಂಡ ಅವರು ಮೂರ್ಛೆ ತಪ್ಪಿದರು. ಗುರುನಾಥರ ಸ್ಮರಣೆ ಆಗಲೂ ಇವರನ್ನು ಕಾಪಾಡಿತೋ, ಅವರೇ ಎಲ್ಲಾ ನಿಂತು ಮಾಡಿಸಿದರೋ, ಅಂತೂ ಸಕಾಲದಲ್ಲಿ ನಂಜಪ್ಪ ಆಸ್ಪತ್ರೆಗೆ ಅದ್ಯಾರೋ ತಂದು ಸೇರಿಸಿದರು. ಇವರನ್ನು ನೋಡಲು ಗುರುನಾಥರ ಹಲವು ರೂಪಗಳಾದ ಶ್ರೀಕಾಂತ ಗುರೂಜಿ, ಶಿವಾನಂದ ತೀರ್ಥ ಗುರುಗಳು, ವಾಸುದೇವ ಶಾಸ್ತ್ರಿಗಳು,ಶ್ರೀ ಶ್ರೀ ವಿರಜಾನಂದ ತೀರ್ಥರು ಹೀಗೆ ಎಲ್ಲರೂ ಧಾವಿಸಿ ಬಂದರು. ಒಬ್ಬ ಗುರುವನ್ನು ನೆನೆದರೆ ಗುರುನಾಥರುಗಳ ದಂಡೇ ಬಂದಿತು. ಸಾಂತ್ವನ ಹೇಳಿತು. ಮನದಲ್ಲೇ ಹರಸಿತು. ಗುರುಕರುಣೆಯ ಮುಂದೆ ಮತ್ತೇನು ಬೇಕಿದೆ. ಜೊತೆಗೆ ಅಪಾರ ಬಂಧು ಬಳಗವೂ ಬಂದಿತು. ಅದಕ್ಕಿಂತ ಹೆಚ್ಚಾಗಿ ಗುರುಬಂಧುಗಳೂ ಬಂದರು.
ಡಾಕ್ಟರುಗಳು ಪರೀಕ್ಷಿಸಿ "ಇಲ್ಲಿ ಏನೂ ಮಾಡಲಾಗುವುದಿಲ್ಲ... ಹಲವು ತೊಡಕುಗಳಿವೆ. ಎಡಭಾಗದ ಕೈ ತುಂಡಾಗಿದೆ. ಅದನ್ನು ತೆಗೆಯಲೇಬೇಕು. ಆದರೆ ಹೃದಯ ಭಾಗಕ್ಕೆ ಗಾಳಿ ನೀರು ಸೇರಿದಂತೆ ಕಾಣುತ್ತಿದೆ. ನೀವು ಮನೆಗೆ ಕರೆದುಕೊಂಡು ಹೋಗಿ... ಅಥವಾ ಇನ್ನೆಲ್ಲಿಗಾದರೂ ಹೋಗಿ ಪ್ರಯತ್ನಿಸಿ" ಎಂದು ನುಡಿದರು.
"ವೈದ್ಯೋ ನಾರಾಯಣೋ ಹರಿಃ" ಎನ್ನುವ ಮಾತಿದೆ. ವಿಜ್ಞಾನ ಅತಿಯಾಗಿ ಮುಂದುವರೆದಿದೆ.. ಆದರೂ ಕೆಲವೊಮ್ಮೆ ಕೈಚೆಲ್ಲಿ ಕುಳಿತಾಗ.. ನಂಬಿದವರನ್ನು ಮತ್ಯಾವುದೋ ಶಕ್ತಿ ಕಾಯುತ್ತದೆ.
ಸರಿ ಅಲ್ಲಿ ಆಗುವದಿಲ್ಲವೆಂದ ಮೇಲೆ ಬೆಂಗಳೂರಿಗೆ ಒಯ್ಯುವುದೆಂದು ತೀರ್ಮಾನಿಸಿ ಅಲ್ಲಿಗೂ ಹೋದರು. ಏನೂ ಮಾಡಲಾಗದ ಸ್ಥಿತಿಯಲ್ಲಿದ್ದ ನೀಲಕಂಠ ರಾಯರು ಗುರುನಾಥರ ಸ್ಮರಣೆಯನ್ನಲ್ಲದೇ ಮತ್ತೇನು ಮಾಡಲು ಸಾಧ್ಯ?
ಬೆಂಗಳೂರಿನಲ್ಲಿ ಒಂದೆರಡು ದಿನವಿಟ್ಟುಕೊಂಡರು. "ಇದು ನಾವು ಗ್ಯಾರಂಟಿ ಕೊಡಲಾಗದ ಕೇಸ್. ಎಡಭಾಗ ಕಟ್ಟಾಗಿದೆ. ಪೇಷೆಂಟ್ ಆಪರೇಷನ್ ಗೆ ಸ್ಪಂದಿಸುವ ಸ್ಥಿತಿಯಲ್ಲಿಲ್ಲ. ಬೆಲ್ಟ್ ಕೊಡುತ್ತೇವೆ.. ಹಾಕಿರಿ..... ಇದ್ದಷ್ಟು ದಿವಸವಿರಲಿ. ಉತ್ತಮವಾದರೆ ಕರೆತನ್ನಿ. ಎಡಗೈಯಂತೂ ಬರುವುದಿಲ್ಲ ಕಟ್ ಮಾಡಬೇಕು" ಎಂದರು.
"ಪಾಪಿ ಸಾಗರ ಹೊಕ್ಕರೂ ಮೊಳಕಾಲುದ್ದ ನೀರು" ಎಂಬ ಗಾದೆ ಇದೆ. "ನಾನೆಂತಹ ತಪ್ಪು ಮಾಡಿದೆನೋ, ಗುರುದೇವರು ನನ್ನನ್ನು ಹೀಗೆ ಪರೀಕ್ಷಿಸುತ್ತಿದ್ದಾರೆ. ಆದರೆ ಅವರ ನುಡಿಗಳು ಅವರ ಕರುಣಾದೃಷ್ಟಿ ನನ್ನನ್ನು ಕಾಪಾಡುತ್ತದೆ" ಎಂಬ ಭರವಸೆ ನೀಲಕಂಠ ರಾಯರ ಮನದಲ್ಲಿ ಆಗಾಗ್ಗೆ ಮೂಡುತ್ತಿತ್ತು.
ಗುರುವಿನ ಪರೀಕ್ಷೆ ಸಾಮಾನ್ಯವಾದುದಲ್ಲ. ಆತ್ಮಸ್ಥೈರ್ಯ, ದೃಢ ಭಕ್ತಿ ಭಾವವಿದ್ದಾಗಲೇ ಪಾರಾಗುವುದು. ಶ್ರೀಪಾದವಲ್ಲಭರ ಚರಿತ್ರೆಯಲ್ಲಿ ಶಂಕರ ಭಟ್ಟನಿಗೆ ಕಾಗೆಗಳಿಂದ ಕಚ್ಚಿಸಿ, ವಿಷ ಸರ್ಪಗಳಿಂದ ಕಡಿಸಿ ಕೊಡಬಾರದ ನೋವುಗಳನ್ನೆಲ್ಲಾ ನೀಡಿ ನಂತರ ಶಂಕರಭಟ್ಟನನ್ನು ಉದ್ಧರಿಸಿದ ಕಥೆ ಬರುತ್ತದೆ. ನಿತ್ಯ ಲೀಲಾ ವಿಹಾರಿಗಳಾದ ಶ್ರೀಪಾದರ ಸ್ವರೂಪವೇ ಅಲ್ಲವೇ ಗುರುನಾಥರು.
ಇಲ್ಲೂ ಅಂತಹ ಮತ್ತೊಂದು ಅವಘಡವನ್ನು, ಪರೀಕ್ಷೆಯನ್ನು ಎದುರಿಸುವ ಸಂದರ್ಭ ಬಂದಿತು. ಬೆಂಗಳೂರಿನ ಆಸ್ಪತ್ರೆಯಿಂದ ಭದ್ರಾವತಿಗೆ ಆಂಬ್ಯುಲೆನ್ಸ್ ಧಾವಿಸುತ್ತದೆ. ಬೀರೂರಿನ ರೈಲು ಗೇಟು ಹಾಕಿದೆ. ಆಂಬ್ಯುಲೆನ್ಸ್ ಹಾರ್ನ್ ಗೆ, ರೈಲು ಇನ್ನೂ ಬರುವುದು ತಡವಿರುವುದರಿಂದ ಗೇಟು ತೆರೆದುಕೊಂಡಿತು. ಹಳಿಯ ಮಧ್ಯೆ ಬಂದು ಆಂಬ್ಯುಲೆನ್ಸ್ ಆಫ್ ಆಯಿತು. ಡ್ರೈವರ್ ಶತ ಪ್ರಯತ್ನ ಮಾಡಿದರೂ ಗಾಡಿ ಸ್ಟಾರ್ಟ್ ಆಗಲಿಲ್ಲ. ದೂರದ್ಲಲಿ ಯಮನಂತೆ ರೈಲು ಬುಸುಗುಡುತ್ತಾ ಬರುತ್ತಿದೆ. ನೀಲಕಂಠರಾಯರು ಗುರುನಾಥರನ್ನು ನೆನೆಸಿಕೊಳ್ಳುತ್ತಾ ಮಗ ಮತ್ತು ಡ್ರೈವರ್ ಗೆಂದರು. "ಹೇಗೂ ನಾನು ಅರ್ಥ ಸತ್ತಿದ್ದೀನಿ.. ನೀವಿಬ್ಬರೂ ಕೆಳಗಿಳಿದು ಓಡಿ ಬಿಡಿ". ಇದಕ್ಕೆ ಒಪ್ಪದ ಡ್ರೈವರ್ ಮತ್ತೆ ಪ್ರಯತ್ನಿಸುತ್ತಿದ್ದರು. ಇದ್ದಕ್ಕಿದ್ದಂತೆ ಅದ್ಯಾರೋ ಇಡೀ ಆಂಬ್ಯುಲೆನ್ಸ್ ಅನ್ನು ಎತ್ತಿ ದೂರ ತಂದಿಟ್ಟರಂತೆ. ಮೃತ್ಯು ಮುಖದಿಂದ ಪಾರಾಗಿದ್ದರು. ಯಾರದೀ ಚಮತ್ಕಾರ? ಹೇಗೆ ಪಾರಾದೆವು? ಎಂಬುವ ಪ್ರಶೆಗೆ ಗುರುನಾಥರ ಶಾಂತಚಿತ್ತದ ಭಾವಚಿತ್ರವೇ ಉತ್ತರ ಹೇಳಬೇಕು. ಭವಸಾಗರ ತಾರಕನಿಗೆ ಇದೆಲ್ಲಾ ಏನೂ ದೊಡ್ಡದಲ್ಲ.
ಪ್ರಿಯ ಓದುಗ ಭಕ್ತರೇ, ಇಲ್ಲಿ ಉಳಿಸಿದ ಗುರುನಾಥರು ನಡೆಯಲಾಗದಂತಿದ್ದ ತಮ್ಮ ಭಕ್ತರನ್ನು ನಿರೋಗಿ ಮಾಡಿದ ಚಿಕಿತ್ಸಾ ಪುರವಣಿಯನ್ನು ನಾಳೆ ಓದೋಣವೇ... ದಯಮಾಡಿ ಕಾಯಿರಿ, ನಮ್ಮೊಂದಿಗಿರಿ....
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
For more info visit : http://
Sadgurunaatha Mahaaraajaru ki jai
ReplyDeletePoojya venkatachala avadootara paadagalige nanna saashtaanga pranaamagalu .Sarvarannu uddarisi asheervadisi Kaapadi Guruvarya. Sarve jano sukinobavantu.
ReplyDelete