ಒಟ್ಟು ನೋಟಗಳು

Wednesday, March 29, 2017

ಶ್ರೀ ಸದ್ಗುರುನಾಥ ಲೀಲಾಮೃತ  - 2 

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ನಿತ್ಯ ಸತ್ಸಂಗ  - 20

 

ಎಂದೋ ಎಲ್ಲ ನಿರ್ಧಾರವಾಗಿರುತ್ತದೆ  


 

।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।

।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ । ಶೋಕ ಮೋಹ ವಿವರ್ಜಿತಂ ।। 
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।



ಭದ್ರಾವತಿಯ ಗುರುಭಕ್ತರೊಬ್ಬರಿಗೆ ಗುರುನಾಥರು ಫೋನಾಯಿಸಿದರು. "ನೀಲಕಂಠ ರಾವ್, ನಿಮ್ಮ ಮನೆಗೆ ಎರಡು ಶಿವಲಿಂಗಗಳು ಬರುತ್ತದೆ. ಅದಕ್ಕೆ ನಿಮ್ಮ ಮನೆಯಲ್ಲಿ ಮೊದಲ ಪೂಜೆಯಾಗಬೇಕು. ಬಂದವರಿಗೆ ಒಂದು ಚೂರು ತಣ್ಣಗೆ ಮಾಡಿ ಕೂಡಲೇ ಕಳುಹಿಸಿ ಕೊಡಬೇಕು". 

"ಗುರುನಾಥರು ಫೋನು ಮಾಡಿಬಿಟ್ಟರು. ಅವರು ಪರೀಕ್ಷಿಸುವ ರೀತಿಯೇ ವಿಚಿತ್ರ. ಅಂಗಡಿಯಲ್ಲಿ ಅಪ್ಪ ಮಗ ಇಬ್ಬರೂ ಅದೇ ತಾನೇ ಬಾಗಿಲು ತೆರೆದಿದ್ದರು. ಇದರ ಜೊತೆಗೆ ಅವರ ಸಂಬಂಧಿಗಳ ಮರಣದ ಸೂತಕವೂ ಇವರಿಗೆ ಇತ್ತು. ಮನಸ್ಸು ಒಂದು ಕ್ಷಣ ಡೋಲಾಯಮಾನವಾಯಿತು. 'ಆಗುವುದಿಲ್ಲ ಗುರುಗಳೇ, ಹೀಗೆ ನಮಗೆ ಮೈಲಿಗೆ ಎಂದು' ಹೇಳಿಬಿಡೋಣವೇ ಎಂದು ಯೋಚಿಸುತ್ತಿದ್ದಂತೆ ಗುರುವಾಣಿಯೊಂದು ಥಟ್ಟನೆ ನೆನಪಿಗೆ ಬಂದಿತು. ಮೈಲಿಗೆ ಯಾರಿಗಯ್ಯಾ, ಈ ದೇಹಕ್ಕೋ, ಮನಸ್ಸಿಗೋ, ಆಡುವ ಮಾತಿಗೋ". 

ಮತ್ತೆ ಕ್ಷಣಾರ್ಧದಲ್ಲಿ ಅಂಗಡಿಯ ಬಾಗಿಲು ಹಾಕಿ ಮನೆಗೆ ಓಡಿ ಬಂದದ್ದಾಯಿತು. ಸ್ನಾನ ಮಾಡಿ ಶುಭ್ರವಸನ ಧರಿಸುವುದರಲ್ಲಿ ಎರಡು ಶಿವಲಿಂಗಗಳು ಮನೆಗೆ ಬಂದವು. ಹತ್ತು ಹದಿನೈದು ಜನ ಭಕ್ತರಿದ್ದರು. ಎಲ್ಲ ಮರೆತು ಗುರುವನ್ನು ನೆನೆಯುತ್ತಾ ಭಕ್ತಿ ಭಾವದಿಂದ ಆ ಶಿವಲಿಂಗಗಳಿಗೆ ಪೂಜೆ ಮಾಡಿ ಬಂದವರಿಗೆಲ್ಲಾ ಯತ್ಕಿಂಚಿತ್ ಸತ್ಕರಿಸಿ, ಗುರುಗಳು ಹೇಳಿದಂತೆ ಬೀಳ್ಕೊಡಲಾಯಿತು. ಮುಂದೆ ಆ ಶಿವಲಿಂಗಗಳಲ್ಲಿ ಒಂದು ಬಾಣಾವರದಲ್ಲಿ, ಮತ್ತೊಂದು ಅರಸೀಕೆರೆಯಲ್ಲಿ ಪ್ರತಿಷ್ಠಾಪಿಸಿದರು. 

ಹೀಗೆ ಗುರುನಾಥರು ನಮ್ಮನ್ನು ಪರೀಕ್ಷಿಸಲೋ, ಉದ್ಧಾರ ಮಾಡಲೋ ಹಲವು ಬಾರಿ ಇಂತಹ ಸದಾವಕಾಶಗಳನ್ನು ನಮಗೆ ಕಲ್ಪಿಸಿದ್ದಾರೆ. ಅದು ನಮ್ಮ ಪುಣ್ಯ. ಭಗವಂತನನ್ನು ಪೂಜಿಸಲು ದೇವಾಲಯಕ್ಕೆ ಎಲ್ಲಾ ಹೋಗುವುದು ವಾಡಿಕೆಯಾದರೆ, ಗುರುನಾಥರು ನಮ್ಮ ಮನೆಯ ಬಾಗಿಲಿಗೇ ಎರಡೆರಡು ಶಿವಲಿಂಗಗಳನ್ನು ಕಳಿಸಿ ಪೂಜಿಸುವ ಸದಾವಕಾಶ ಒದಗಿಸಿದ್ದಕ್ಕೆ ನಾವೆಷ್ಟು ಋಣಿಗಳಾಗಿದ್ದರೂ ಸಾಲದು. ಮುಂದೆ ಇದೇ ಮನೆಯಲ್ಲಿ ಗುರುವರ್ಯರೊಬ್ಬರ ಸಮಾಧಿಯೂ (ವೇದಿಕೆ) (ಶ್ರೀ ವಿರಜಾನಂದರ) ನಿರ್ಮಾಣವಾಗಿ ಇದೊಂದು ಮನೆಯಲ್ಲ ದೇಗುಲವಾಗಿಬಿಟ್ಟಿದೆ ಈಗ. ಬಹುಶಃ ಗುರುನಾಥರಿಗೆ 2008ರಲ್ಲೇ 2015ರಲ್ಲಿ ನಡೆಯುವ ಕಾರ್ಯ ತಿಳಿದಿತ್ತೇನೋ ಎನ್ನುತ್ತಾರೆ ಗುರುನಾಥರನ್ನು ಭಕ್ತಿ ಭಾವದಿಂದ ಸ್ಮರಿಸುತ್ತ ನೀಲಕಂಠರಾಯರು. 

ನಾನು ಹೇಳುವವರೆಗೆ ಏಳಕೂಡದು: 

ಗುರುಭಕ್ತರೊಬ್ಬರಿಗೆ, ಹತ್ತಿರದಲ್ಲೇ ಇರುವ ಮದುವೆಯ ಕರೆಯೋಲೆಯನ್ನು ಹಂಚುವ ಗುರುತರ ಜವಾಬ್ದಾರಿಯನ್ನು ಅವರ ಮನೆಯವರು ವಹಿಸಿದ್ದರು. ಬೆಳಗಿನ ಹತ್ತಕ್ಕೆಲ್ಲಾ ಮನೆಯಿಂದ ಹೊರಟ ಆ ಭಕ್ತರು, ಅವರ ಸೋದರತ್ತೆಯವರು ಗುರುನಾಥರಿಗೆ ಮೊದಲು ಆಹ್ವಾನ ಪತ್ರಿಕೆ ನೀಡಿ ಹೊರಡುವುದೆಂದು ಸಖರಾಯಪಟ್ಟಣದ ಗುರುನಾಥರ ಬಳಿ ಬಂದರು. 

ಗುರುಸ್ಥಾನಕ್ಕೆ ಬರುವುದಾಗಲೀ, ಅಲ್ಲಿಂದ ಹೊರಡುವುದಾಗಲೀ, ಎಲ್ಲ ಗುರುವಿನಿಚ್ಛೆಯಂತೆಯೇ ನಡೆಯುವುದು. ಬಂದ ಆ ಹೆಣ್ಣು ಮಗಳ ಪ್ರಕಾರ, ಗುರುವಿಗೆ ಆಹ್ವಾನ ಪತ್ರಿಕೆ ನೀಡಿ ನಮಸ್ಕಾರ ಮಾಡಿಬಿಟ್ಟರೆ ಮುಗಿಯಿತು. ಅಲ್ಲಿಂದ ಹೊರಡಬಹುದೆಂದು ಭಾವನೆ - ಜೊತೆಗೆ ಇನ್ನೂ ಅನೇಕ ಕಡೆ ಕಡೂರು, ಅರಸೀಕೆರೆಯ ಮನೆಗಳಿಗೆಲ್ಲಾ ಅಂದೇ ಪತ್ರಿಕೆ ಕೊಡುವ ಜವಾಬ್ದಾರಿಯಿತ್ತು. ಅದರ ಆತಂಕ ಬೇರೆ. 

ಆ ಹೆಣ್ಣು ಮಗಳು ಗುರುಗಳ ಮನೆಯಲ್ಲಿ ಕುಳಿತವರು "ಬರುತ್ತೀನಿ" ಎಂದು ಎದ್ದಾಗ "ಏಳಬೇಡಿ, ನಾನು ಹೇಳುವವರೆಗೆ ಅಲ್ಲೇ ಕುಳಿತಿರಿ, ಎದ್ದರೆ ಏನಾಗುತ್ತದೆಂದು ನಿಮ್ಮ ಸೋದರಳಿಯನ್ನ ಕೇಳಿರಿ" ಎಂದುಬಿಟ್ಟರು. 

ಗುರುಗಳು ಮನಸ್ಸು ಮಾಡಿದರೆ ಯಾವ ಕೆಲಸ ಏನು ಮಹಾ? ಜೊತೆಗೆ "ನಿಮ್ಮ ಮನೆಯಲ್ಲಿ ಮದುವೆ ಸುಖವಾಗಿ ನಡೆಯಲು ವೀಣಾವಾದನವನ್ನು ಕೇಳಿರಿ" ಎಂದಿದ್ದರು ಗುರುನಾಥರು. 

ಎರಡು ಗಂಟೆಯಾದರೂ ಅವರಿಲ್ಲಿಯೇ ಇರುವುದನ್ನು ಅರಿತ ಮನೆಯವರು "ನೀವು ಹೀಗೆ ಮಾಡಿದರೆ ಎಲ್ಲಾ ಆದಂತೆ" ಎಂದು ವ್ಯಂಗ್ಯವಾಡಿದರು. 

ಮುಂದೆ ಗುರುವಿನ ಆಜ್ಞೆಯಂತೆ ಅವರು ಹೊರಟಾಗ ಮೂರು ಗಂಟೆ. ಕಡೂರು, ಬೀರೂರು, ಅರಸೀಕೆರೆಯ ಎಲ್ಲ ಕರೆಗಳನ್ನು ಮುಗಿಸಿಕೊಂಡು ಅವರು ಸುಖವಾಗಿ ರಾತ್ರಿ ಹನ್ನೊಂದಕ್ಕೆ ಊರು ತಲುಪಿದರು. 

ಚಿಕ್ಕಮಗಳೂರಿನಂತಹ ಊರಿನಲ್ಲಿ ವೀಣಾವಾದಕರನ್ನೆಲ್ಲಿ ಹುಡುಕಿ ತರುವುದು. ಮನೆಯವರು ವೀಣಾವಾದನ ಕೇಳಬೇಕಲ್ಲ, ಎಂದು ಚಿಂತಿಸುತ್ತಾ ಟಿವಿ ಹಾಕಿದರೆ ಅದರಲ್ಲಿ ವೀಣಾವಾದನವೇ ಬರುತ್ತಿತ್ತಂತೆ. 

ಸಮಯದ ಮೇಲೆ ನಮ್ಮ ಹಿಡಿತವಿದೆ ಎಂಬುದು ಸುಳ್ಳು. ಎಲ್ಲವನ್ನು ಗುರುನಾಥರೇ ನಿರ್ಧರಿಸುವಾಗ ಎಲ್ಲವೂ ಸಕಾಲದಲ್ಲಿ ಸಾಗುತ್ತಿದ್ದಿತು. ಗುರುನಾಥರ ಶಿಷ್ಯರೊಬ್ಬರು "ಎಲ್ಲ ಸಮಯಕ್ಕಾಗಬೇಕು" ಎಂದು ಹೇಳುತ್ತಿದ್ದಾಗ ಗುರುನಾಥರು ನಗುತ್ತಾ "ಸಮಯ ಮುಹೂರ್ತಗಳು ಯಾರ ಕೈಯಲ್ಲಿದೆ. ಎಲ್ಲ ನಮ್ಮ ಭ್ರಮೆ, ಎಲ್ಲವೂ ಎಂದೋ ಪೂರ್ವ ನಿರ್ಧಾರವಾಗಿರುತ್ತದೆ. ನಾವದಕ್ಕೆ ಬದ್ಧರಾಗಿ ನಡೆಯುವುದಷ್ಟೇ ನಮ್ಮ ಕೆಲಸ" ಎನ್ನುತ್ತಿದ್ದ ಮಾತನ್ನಿಲ್ಲಿ ಸ್ಮರಿಸಬಹುದು. 

ಗುರುನಾಥರ ಮತ್ತಷ್ಟು ಸತ್ಸಂಗಕ್ಕಾಗಿ ನಾಳೆ ಬರುವಿರಲ್ಲಾ... ಮಿತ್ರರೇ....,  

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ. 

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


For more info visit :  http://srivenkatachalaavadhoota.blogspot.in 

1 comment:

  1. Poojya Guruvarya venkatachala Avara Divya charanamruta galige nanna bhakti poorvaka namanagalu. Poojyare yellarigu manashanti haagu nemmadi honduvante asheervadisi Guruvarya. Sarve jano sukinobavantu.

    ReplyDelete