ಶ್ರೀ ಸದ್ಗುರು ಮಹಿಮೆ
ಅಧ್ಯಾಯ - 149
ಗ್ರಂಥ ರಚನೆ - ಚರಣದಾಸ
ಜಾತಕ ಫಲ
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಗುರುವಿನ ಶಕ್ತಿಯನ್ನು ಪದಗಳಲ್ಲಿ ಹಿಡಿದಿಡಲು ಅಸಾಧ್ಯ. ಅದೊಂದು ಕೊನೆ-ಮೊದಲಿರದ ಭಾವ. ಆದರೂ ಈಗ ಹೇಳ ಹೊರಟಿರುವ ವಿಷಯ ಬಹಳ ವಿಶೇಷವಾದದ್ದೆಂಬುದು ನನ್ನ ಅನಿಸಿಕೆ. ಕಾರಣ ಈ ವ್ಯಕ್ತಿಯಲ್ಲಿದ್ದ ಗುಣಗಳು ನನಗೆ ಇನ್ನೂ ಬಂದಿಲ್ಲ. ಅದೇ ಶರಣಾಗತ ಭಾವ.
ಇವರನ್ನು ಬಹುಶಃ 2010 ರಲ್ಲಿ ಒಮ್ಮೆ ನೋಡಿದ ನೆನಪಷ್ಟೇ.... ಮೊನ್ನೆ ಭೇಟಿಯಾದ ನಾನು ಅವರ ಮನೆಯಿಂದ ಹೊರಡುವವರೆಗೂ ಅವರಲ್ಲಿ ನಾ ಕಂಡಿದ್ದು ಉಕ್ಕಿ ಬರುತ್ತಿದ್ದ ಕಣ್ಣೀರು... ಭಾವ ಪರಿಶುದ್ಧತೆ ಮತ್ತು ಗುರುವಿಗಾಗಿ ನಿರಂತರ ತುಡಿತ.
ಚರಣದಾಸನಾದ ನನ್ನ ಬರುವಿಕೆಗಾಗಿಯೇ ಕಾಯುತ್ತಿದ್ದ ಆ ತಾಯಿ ಕಣ್ಣೀರೊರೆಸಿಕೊಳ್ಳುತ್ತಲೇ ಮಾತಿಗಿಳಿದರು.
ಈಗ್ಗೆ ಸುಮಾರು 23 ವರ್ಷಗಳ ಹಿಂದೆ ಗುರುನಾಥರ ಮೊದಲ ದರ್ಶನ ನಮ್ಮ ಮನೆಯಲ್ಲಿಯೇ ಆಯಿತು. ಆಗಿನ್ನೂ ಅವರ ವೇಷ ಭೂಷಣ ಸಾಮಾನ್ಯ ಜನರಂತೆಯೇ ಇತ್ತು. ನಮ್ಮತ್ತೆಯವರಿಗೆ ನಮಸ್ಕರಿಸಿ, ನಮ್ಮನ್ನು ಹರಸಿ ಹೋಗಿದ್ದರು.
ಆ ಮೇಲೆ ನನ್ನ ಮಗಳಿಗೆ ಹತ್ತೊಂಬತ್ತು ವರ್ಷ ತುಂಬಿತು. ನಂತರ ನಮ್ಮ ಮನೆಯಲ್ಲಿ ಸಮಸ್ಯೆಗಳು ಆರಂಭವಾಗಿತ್ತು. ಮಾಮೂಲಿನಂತೆ ಮಗಳ ಜಾತಕ ನೋಡಿದವರೊಬ್ಬರು ಆಕೆಗೆ ವಿಪರೀತ ಕುಜ ದೋಷವಿರುವುದಾಗಿಯೂ ಪರಿಹಾರವಾಗಿ ಎಪ್ಪತ್ತು ಸಾವಿರ ರೂಪಾಯಿ ವ್ಯಯಿಸಿ ಹೋಮ ಮಾಡಿಸಬೇಕೆಂದೂ, ಇಲ್ಲದಿದ್ದರೆ ಆಕೆಗೆ ವಿವಾಹ ಯೋಗ ಕಷ್ಟವೆಂದೂ ತಿಳಿಸಿದರು. ಇದು ನನ್ನ ನಿದ್ದೆಗೆಡಿಸಿತು. ಆಗ ಅಷ್ಟು ದೊಡ್ಡ ಮೊತ್ತ ನಮ್ಮಲ್ಲಿರಲಿಲ್ಲ.
ಅದೇ ಸಮಯಕ್ಕೆ ಚಿಕ್ಕಮಗಳೂರಿನ ಬಂಧುಗಳೊಬ್ಬರ ಮನೆಯ ಸಮಾರಂಭಕ್ಕೆ ಹೋಗುವ ಅವಕಾಶ ಸಿಕ್ಕಿ ಮಾವನೊಡನೆ ಅಲ್ಲಿಗೆ ಹೋದೆ. ಅಲ್ಲಿ ಗಡ್ಡಧಾರಿ ವ್ಯಕ್ತಿಯೊಬ್ಬರು ಎಲ್ಲರಿಗೂ ಬೈಯುತ್ತಿರುವುದು ಕಂಡಿತು. ನಾನು ಬೆದರುತ್ತಲೇ ಹೋಗಿ ನಮಸ್ಕರಿಸಲು ಗುರುಗಳು "ಮದುವೆಗೆ ಜಾತಕ ಅಡ್ಡಿ ಬರಲ್ಲಾ.... " ಅಂದ್ರು ಇದ್ದಕ್ಕಿದ್ದಂತೆ.......
ನಾನು ಬಾಗಿಲ ಬಳಿ ಬಂದಾಗ ಆ ಮಾತು ನನಗೇ ಹೇಳಿದ್ದೆನಿಸಿ ನನ್ನ ಮನಸ್ಸು ಹಗುರಾಯಿತು. ನಂತರ ಗುರುವಾಕ್ಯದಂತೆಯೇ ನನ್ನ ಮಗಳಿಗೆ ಒಳ್ಳೆಯ ವರ ಸಿಕ್ಕಿ ಹೂವೆತ್ತಿದಂತೆ ವಿವಾಹವೂ ನಡೆಯಿತು.. ಎಂದು ನುಡಿದು ಒಂದು ಕ್ಷಣ ನಿಲ್ಲಿಸಿದರು.
ಪ್ರಶ್ನೆ.... ಅಲ್ಲಿ..... ಉತ್ತರ.... ಇಲ್ಲಿ
ಗುರುಸ್ಮರಣೆ ಆ ತಾಯಿಯ ಮನದಲ್ಲಿ ಮಹೋತ್ಸಾಯ ಮೂಡಿಸಿತ್ತೆನಿಸುತ್ತೆ. ಮತ್ತೆ.... ಎಲ್ಲಿ ಮರೆತು ಬಿಡ್ತೀನೋ..... ಎಂಬಂತೆ ಲಗು-ಬಗೆಯಿಂದ ಹೇಳತೊಡಗಿದರು. ನಾನು ಮದುವೆಯಾಗಿ ಹಾಸನಕ್ಕೆ ಬರುವ ಮೊದಲು ನಾವೆಲ್ಲರೂ ಸಾಯಿಬಾಬಾನ ಪರಮ ಭಕ್ತರಾಗಿದ್ದೆವು. ನಾನು ಪ್ರತೀ ಬಾರಿ ಬಾಬಾನ ಆಶ್ರಮಕ್ಕೆ ತೆರಳಿದಾಗಲೂ ನನ್ನ ಮನದ ಪ್ರಶ್ನೆಗಳನ್ನು ಬರೆದಿಟ್ಟು ಬರುತ್ತಿದ್ದೆ. ಆ ನಂತರ ಇಲ್ಲಿ ಗುರುನಾಥರ ದರ್ಶನವಾದಾಗ, ಅಲ್ಲಿನ ಪ್ರಶ್ನೆಗಳಿಗೆ ಗುರುಗಳಿಂದ ಉತ್ತರ ಸಿಕ್ಕುತ್ತಿತ್ತು. ಇದು ನಮಗೆ ಆಶ್ಚರ್ಯ ಉಂಟು ಮಾಡಿತು.
ಆದರೆ ಪ್ರತೀ ಬಾರಿ ಸಿಕ್ಕಾಗಲೂ "ಈ ದೇಹದಲ್ಲಿರೋ ನಾನು ನಿನ್ನ ಗುರುವಲ್ಲ ಕಣಮ್ಮಾ... " ಎಂಬ ಗುರುನಾಥರ ಮಾತು ನನಗೆ ಇನ್ನೂ ಅರ್ಥವಾಗಿಲ್ಲ ಎಂದು ಬಿಕ್ಕಳಿಸಿದರು.
ಬಂದವನಾರು?
ಸಾಮಾನ್ಯವಾಗಿ ನಾನು ಮನದಲ್ಲಿ ಏನಂದುಕೊಂಡಿರುತ್ತೀನೋ ಅದಕ್ಕೆ ಹೆಂಗೋ ಗುರುಗಳಿಂದ ಉತ್ತರ ಸಿಕ್ಕಿ ಬಿಡುತ್ತಿತ್ತು. ಅದು ಇಂದಿಗೂ ನಡೆದುಬಂದಿದೆ.
ಆ ಸ್ವಾಮಿ ಇಷ್ಟೆಲ್ಲ ನಮ್ಮನ್ನು ಕಾಪಾಡುತ್ತಿದ್ದರೂ "ಮನೆಯ ಐದು ಜವಾಬ್ದಾರಿಗಳನ್ನು ನೀನೆ ನಡೆಸಬೇಕು" ಎಂಬ ಗುರುವಾಕ್ಯವನ್ನು ನನ್ನಿಂದ ನಡೆಸಲಾಗಲಿಲ್ಲವಲ್ಲ ಎಂಬ ಕೊರಗು ನನಗಿದೆ ಎಂದು ಅಳಲು ತೋಡಿಕೊಂಡರು.
ಮತ್ತೊಮ್ಮೆ ನನ್ನನ್ನು ಕರೆದು "ನಿಮ್ಮ ಮನೆಯ ಆಸ್ತಿ ಬೀರು ಒಳಗಿಟ್ಟ ಹಣ್ಣಿನಂತೆ, ಅಲ್ಲೇ ಹಾಳಾಗುತ್ತೆ ಯಾರಿಗೂ ಲಾಭವಿಲ್ಲ" ಎಂದಿದ್ದರು. ಆ ಮಾತೂ ನನಗಿನ್ನೂ ಅರ್ಥವಾಗಿಲ್ಲ ಅಂದರು.
ನನ್ನ ಮಗಳ ಮದುವೆಯಾಗಿ ಕೆಲ ವರ್ಷದ ನಂತರ ಒಮ್ಮೆ ಗುರುದರ್ಶನ ಮಾಡಿ "ಗುರುಗಳೇ ನನಗೆ ತೊಟ್ಟಿಲು ತೂಗುವಾಸೆ" ಎಂದು ವಿನಂತಿಸಲು, "ಆಗುತ್ತೆ... ಸುಮ್ಮನಿರು, ಅವಳಿಗೆ ಮೂರು ಮಕ್ಕಳ ಭಾಗ್ಯವಿದೆ" ಎಂದು ಅಭಯವಿತ್ತರು.
ಇದಾಗಿ ಕೆಲ ದಿನಗಳ ನಂತರ ಕುಟುಂಬದ ಆಪ್ತನೊಬ್ಬ ಬಂದು ಗುರುನಾಥರ ಫೋಟೋ ಮುಂದೆ ನಿಂತು ನನ್ನ ಮಗಳ ಕುಶಲ ವಿಚಾರಿಸಿದನು. ನಾನು, ಆಕೆ ಇನ್ನೂ ತಾಯ್ತನದ ಸೂಚನೆ ನೀಡಿಲ್ಲ ಕಣೋ... ಎಂದೆ ಬೇಸರದಿಂದ. ಕೂಡಲೇ ಆತ "ಅದನ್ನು ಹೇಳಿ ಬಾ" ಎಂದು ಗುರುಗಳೇ ನನ್ನನ್ನು ಕಳಿಸಿದ್ರು ಅಂದನು. ಆ ಮಾತು ಕೇಳಿ ನಾನು ಆನಂದದಿಂದ ಗುರುನಾಥರ ಫೋಟೋ ನೋಡುತ್ತಾ ನಿಂತುಬಿಟ್ಟೆ. ಆತನಿಗೆ ಏನು ಕೊಡಲಿಲ್ಲ.
ನಂತರ ಛೇ... ಏನು ಮಾಡಿಬಿಟ್ಟ ಎಂದು ಯೋಚಿಸಿ ಪಕ್ಕದಲ್ಲೇ ಇದ್ದ ಆತನ ಬಂಧುಗಳ ಮನೆಗೆ ಹೋಗಿ ಆತ ಬಂದಿದ್ದನೇ? ಎಂದು ವಿಚಾರಿಸಲು ಇಲ್ಲಾ ಎಂಬ ಉತ್ತರ ಸಿಕ್ಕಿತು. ಗಲಿಬಿಲಿಗೊಂಡ ನಾನು ನನ್ನ ಮಾವನವರಲ್ಲಿ ವಿಚಾರಿಸಲು, ಅಲ್ಲೂ "ಆತ ಬಂದಿಲ್ಲ" ಎಂಬ ಉತ್ತರ ಸಿಕ್ಕಿತು. ಹಾಗಾದ್ರೆ ಆತನ ರೂಪದಲ್ಲಿ ಮನೆಗೆ ಬಂದು ಸಿಹಿ ಸುದ್ದಿ ಹೇಳಿದವನಾರು?... ನನಗಿನ್ನೂ ಉತ್ತರ ಸಿಕ್ಕಿಲ್ಲ. ಆತನೆಂದಂತೆಯೇ ನನ್ನ ಮಗಳು ಗರ್ಭಿಣಿಯಾದ ಸಿಹಿ ಸುದ್ದಿ ಬಂದಿತು, ಎಂದು ಗುರುಕಾರುಣ್ಯವನ್ನು ನೆನೆದರು.
ಬೈಗುಳವೇ ಆಶೀರ್ವಾದ
ಮತ್ತೆ ಮತ್ತೆ ಗುರುಕಾರುಣ್ಯವನ್ನು ನೆನೆದು ಕಣ್ಣೀರಿಡುತ್ತಲೇ ಮಾತನಾಡುತ್ತಿದ್ದ ಆ ತಾಯಿ, ನೋಡಿ, ನಾನು ಕೊನೆಯ ಬಾರಿ ಗುರುದರ್ಶನ ಮಾಡಿದ್ದು 2010 ರ ಮಧ್ಯಭಾಗದಲ್ಲಿ ಎನಿಸುತ್ತೆ.
ಅಂದು ನನ್ನ ಬಂಧುಗಳೊಬ್ಬರ ಕಾರಿನಲ್ಲಿ ಬಂದ ವಿಷಯ ತಿಳಿದ ಗುರುಗಳು "ಏನು ಕಾರು ಕಂಡ ಕೂಡಲೇ ಬಂದು ಬಿಡೋದೇ... ?" ಎಂದು ಗದರಿದರು. ನಾನು ತಲೆಬಾಗಿ ನಿಂತೆ.
ನಂತರ ಇದ್ದಕ್ಕಿದ್ದಂತೆಯೇ ನನ್ನನ್ನು ಸಮೀಪಿಸಿ "ನಾ ಚಟ್ಟ ಏರಿ ಸ್ಮಶಾನಕ್ಕೆ ಹೋಗ್ತೀನಿ...... ಬರುತ್ತೀಯಾ ನನ್ನ ಜೊತೆ..... ?" ಅಂದರು. ನಂಗೇನೂ ದಿಕ್ಕೇ ತೋಚಲಿಲ್ಲ.
ನಾನು ಏನು ತಪ್ಪು ಮಾಡಿದ್ದೀನೋ ನಂಗೊತ್ತಿರೋದಿಲ್ಲ ಆಲ್ವಾ... ? ಅದಕ್ಕೆ ಆ ಸ್ವಾಮಿ ನನಗೆ ಸದಾ ಬೈತಾನೆ ಇರಬೇಕು... ಅದೇ ನನಗೆ ಆನಂದ, ಆಶೀರ್ವಾದ ಅಂದರು..... ಬಾಷ್ಪ ಸುರಿಸುತ್ತಾ......
ಮತ್ತೆ ಸಾವರಿಸಿಕೊಂಡು "ಅದಾಗಿ ಎರಡೇ ದಿನ... ಆ ನನ್ನ ದೇವರು ದೇಹ ಬಿಟ್ಟ ವಿಚಾರ ತಿಳೀತು.... "
ನೀನಿರುವಲ್ಲೇ ಸದಾ ಈ ಜೀವವನ್ನಿರಿಸು ಎಂಬುದಷ್ಟೇ ನನ್ನ ನಿರಂತರ ಪ್ರಾರ್ಥನೆ ಎಂದು ಕಣ್ಣೀರಿಡುತ್ತಾ ಕೈ ಮುಗಿದರು ಆ ತಾಯಿ.
ಶರಣಾಗತ ಭಾವವಿರುವಲ್ಲಿ ಹರಿವ ಕಣ್ಣೀರು ನಮ್ಮ ಮನವನ್ನು ಶುದ್ಧಗೊಳಿಸುವುದಂತೆ. ಆ ಭಾವ, ಶರಣಾಗತಿ ನನಗೂ ನೀಡು ಗುರುವೇ... ಎಂದು ಪ್ರಾರ್ಥಿಸಿ ಚರಣದಾಸನಾದ ನಾನು ಆ ತಾಯಿಗೆ ನಮಸ್ಕರಿಸಿ ಹೊರಟು ಬಂದೆ.....,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
Parama poojya venkatachala gurugalige nanna bhakti poorvaka namanagalu. Swamy Yellaranu sadaa kaala nimma aashirvaada haagu rakshe inda baaluvante Harasi. Sarve jano sukinobavantu.
ReplyDelete