ಶ್ರೀ ಸದ್ಗುರು ಮಹಿಮೆ
ಅಧ್ಯಾಯ - 151
ಗ್ರಂಥ ರಚನೆ - ಚರಣದಾಸ
ಜ್ಯೋತಿಷ್ಯವೆಂದರೇನು ?
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಒಮ್ಮೆ ಗುರುನಾಥರು ನಿವಾಸದಲ್ಲಿದ್ದ ಸಂದರ್ಭ. ಓರ್ವ ದಂಪತಿಗಳು ಗುರು ನಿವಾಸಕ್ಕೆ ಬಂದರು. ಜೊತೆಯಲ್ಲಿ ಅತ್ತೆ ಮಾವನೂ ಇದ್ದರೆನಿಸುತ್ತದೆ. ಅವರು ಬಂದ ಕಾರಣವನ್ನು ತಿಳಿದು ಅದಕ್ಕೆ ಪರಿಹಾರವನ್ನು ಪಡೆದಾಯಿತು. ಆಗ ಅವರ ತಾಯಿ ತನ್ನ ಮಗಳ ಕುರಿತು "ಗುರುಗಳೇ ನನ್ನ ಮಗಳು ಜ್ಯೋತಿಷ್ಯ ಕಲೀತಿದ್ದಾಳೆ" ಎಂದರು ಹೆಮ್ಮೆಯಿಂದ. ಆಗ ಗುರುನಾಥರು "ಹೌದೇ? ಎಲ್ಲಿ ನೋಡುವ ನನ್ನ ಜ್ಯೋತಿಷ್ಯ ಹೇಳ್ತೀಯೇನಮ್ಮಾ?" ಎಂದರು ನಗುತ್ತಾ.
ಆ ಹೆಣ್ಣು ಮಗಳು ತುಸು ಅಹಂಭಾವದಿಂದ ಗುರುಗಳನ್ನು ಸಮೀಪಿಸಿ, ಹಸ್ತರೇಖೆಯನ್ನು ನೋಡಿ ಏನೋ ಹೇಳಲಾರಂಭಿಸಿದಳು. ಕೆಲವೇ ಹೊತ್ತಿನಲ್ಲಿ ಆಕೆಯ ಪತಿಗೆ ದೂರವಾಣಿ ಕರೆಯೊಂದು ಬಂತು. ಆತ ಮಾತನಾಡಿ ಗಡಿಬಿಡಿಯಿಂದ ಹೊರಡಲನುವಾದನು. ಆತನ ತಂದೆಯ ಸ್ಥಿತಿ ಗಂಭೀರವಾಗಿದೆ ಎಂಬ ವಿಚಾರ ಆತನ ಆತುರಕ್ಕೆ ಕಾರಣವಾಗಿತ್ತು.
ಅವರ ಆತುರವನ್ನು ಗಮನಿಸಿದ ಗುರುನಾಥರು "ನೋಡಿ ನೀವು ಬಾಡಿಗೆ ಕಾರು ಮಾಡಿಕೊಂಡು ಹೋಗಬೇಡಿ. ನಿಧಾನವಾಗಿ ಬಸ್ ನಲ್ಲೇ ಹೋಗಿ ತಿಳಿಯಿತೇ?" ಎಂದು ಹೇಳಿ ಗುರುಭಕ್ತರ ಕಾರಿನಲ್ಲಿ ಅವರನ್ನು ಬಸ್ ನಿಲ್ದಾಣದವರೆಗೆ ಬಿಡುವ ವ್ಯವಸ್ಥೆ ಮಾಡಿದರು.
ಅವರು ಅತ್ತ ಹೊರಟ ನಂತರ "ಜ್ಯೋತಿಷ್ಯವೆಂದರೇನಯ್ಯಾ......?" ಅಂದರು ನಮ್ಮತ್ತ ತಿರುಗಿ. ಮತ್ತೆ ಮುಂದುವರೆದು "ಅದು ಕೇವಲ ವಿದ್ಯೆಯಲ್ಲಪ್ಪಾ... ಜನರ ಮುಗ್ಧತೆಯನ್ನು ಬಳಸಿಕೊಂಡು ಆ ಹೋಮ, ಈ ಹೋಮ, ಪೂಜೆ ಮಾಡಿಸಿ ಹಣ ಕೀಳೋದಲ್ಲಯ್ಯಾ.... ತನ್ನ ಸಾಧನಾ ಬಲದಿಂದ ಇರೋದನ್ನ ನಡೆಯುವಂತೆ ಮಾಡುವುದು. ಸೋತ ಮನಸ್ಸಿಗೊಂದು ಬೆಳಕು ನೀಡುವುದು ಜ್ಯೋತಿಷ್ಯ ತಿಳಿಯಿತೇ.....?" ಅಂದ್ರು ನಗುತ್ತಾ.
"ಹೋದ್ರು ಕಣಯ್ಯಾ... ನಂಗೆ ಜ್ಯೋತಿಷ್ಯ ಹೇಳೋಕೆ ಬಂದ್ರಲ್ಲಾ ಅವರ ತಂದೆ ಹೋಗಿಬಿಟ್ಟರು ಗೊತ್ತೇ. ಅಲ್ಲಿ ಅವರು ದೇಹ ಬಿಟ್ಟಾಗಿದೆ. ಅದಕ್ಕೆ ಇವರು ಇಲ್ಲಿಂದ ಗಾಡಿ ಮಾಡಿ ಹಣ ಖರ್ಚು ಮಾಡಿಕೊಂಡು ಕಾರು ಮಾಡಿಕೊಂಡು ಆ ಚಾಲಕನಿಗೆ ಬೇಗ ಹೋಗಲು ಹೇಳಿ ಗಾಡಿಗೆ ಹೆಚ್ಚು ಕಡಿಮೆ ಆದರೆ ಯಾರಯ್ಯಾ ಹೊಣೆ? ಅದಕ್ಕೆ ಅವರಿಗೆ ಬಸ್ ನಲ್ಲೇ ಹೋಗಲು ಹೇಳಿದೆ" ಎಂದು ಮೌನವಾದರು.
ಗುರುವಿನ ದೂರಾಲೋಚನೆಗೆ ನಾನು ಮನದಲ್ಲೇ ವಂದಿಸಿದೆ......,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
Shree venkatachala avadootarige nanna bhakti poorvaka namanagalu. Yellarigu nimma aashirvaada haagu rakshe sadaa kaala doreyali. Sarve jano sukinobavantu.
ReplyDelete