ಒಟ್ಟು ನೋಟಗಳು

Tuesday, March 7, 2017

ಶ್ರೀ ಸದ್ಗುರು ಮಹಿಮೆ   


ಅಧ್ಯಾಯ - 154


    ಗ್ರಂಥ ರಚನೆ - ಚರಣದಾಸ 

ಸಕ್ಕರೆಯ ಸಿಹಿ ಸಾನ್ನಿಧ್ಯದಲ್ಲಿ 



ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।

ಮತ್ತೆ ಮಾತಿಗಿಳಿದ ಆತ ಹೀಗೆ ಹೇಳತೊಡಗಿದರು. ನೋಡಿ ಈಗ್ಗೆ ಹಲವು ವರ್ಷದ ಹಿಂದೆ ನನಗೆ ಹಿಮಾಲಯದ ಸಾಧು ಸಂತರ ಕುರಿತ ಕೃತಿಯೊಂದನ್ನು ಓದುವ ಅವಕಾಶ ಸಿಕ್ಕಿತ್ತು. ನಾನು ಆಗ, ನನಗೂ ಇಂತಹ ಸಾಧುಗಳು ಸಿಗಬಾರದೇ? ಎಂದು ಯೋಚಿಸಿದ್ದೆ. ಅದಾಗಿ ಕೆಲವೇ ದಿನದಲ್ಲಿ ನನ್ನ ಗುರುನಾಥರು ನನಗೆ ಸಿಕ್ಕರು. ಅದನ್ನ ನನಗೆ ಸಾಕ್ಷಿ ರೂಪವಾಗಿ ತೋರಿಸಿದ್ದರು ಕೂಡಾ.... ಒಮ್ಮೆ ಚಿಕ್ಕಮಗಳೂರಿನ ಒಬ್ಬರ ಮನೆಗೆ ಹೋದ ಸಂದರ್ಭ, ಆ ಮನೆಯ ವ್ಯಕ್ತಿಯೊಬ್ಬರು ಸಿಡುಬಿನಿಂದ ಬಳಲುತ್ತಿದ್ದರು. ಇದನ್ನು ಕಂಡು ಕರಗಿದ ಗುರುನಾಥರು ಆ ಸಿಡುಬು ಪೀಡಿತ ವ್ಯಕ್ತಿಗೆ ಮೂರು ಪ್ರದಕ್ಷಿಣೆ ಹಾಕಿದವರೇ ನನ್ನೊಂದಿಗೆ ನೇರವಾಗಿ ದಂಟರಮಕ್ಕಿ ಕೆರೆಯ ಸಮೀಪ ಬಂದರು. ಇಬ್ಬರೂ ಬಹಳ ಹೊತ್ತು ಅಲ್ಲಿಯೇ ಇದ್ದರು. ಆಗ ಇದ್ದಕ್ಕಿದ್ದಂತೆ ಗುರುಗಳ ದೇಹದ ಮೇಲೆ ಸಿಡುಬಿನ ಗುಳ್ಳೆಗಳು ಗೋಚರಿಸಿದವು. ಗುರುಗಳು ಬಹಳ ಸುಸ್ತಾದರು. ಸ್ವಲ್ಪ ಹೊತ್ತಾದ ನಂತರ ಆ ಗುಳ್ಳೆಗಳು ತಾನೇ ತಾನಾಗಿ ಮಾಯವಾಗತೊಡಗಿದವು. ಆ ಹೊತ್ತಿಗೆ ಸರಿಯಾಗಿ ಸಿಡುಬಿನಿಂದ ನರಳುತ್ತಿದ್ದ ಆ ವ್ಯಕ್ತಿಯ ಖಾಯಿಲೆಯು ವಾಸಿಯಾದ ವಿಚಾರ ತಿಳಿದುಬಂತು. ಇದೇ ರೀತಿಯ ಘಟನೆಯನ್ನು ಆ ಪುಸ್ತಕದಲ್ಲಿ ಓದಿದ್ದು ನನಗೆ ನೆನಪಿಗೆ ಬಂದು ನಾನೆಂತಹ ಅದೃಷ್ಠವಂತನೆಂದುಕೊಂಡೆ, ಎಂದು ನುಡಿದು ಶೂನ್ಯದತ್ತ ದಿಟ್ಟಿಸಿದರು. 

ಅದೇ ರೀತಿ ಆ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದವರನ್ನು ನೋಡಬೇಕೆಂದು ಬಯಸಿದ್ದೆ. ಅದೂ ಸಹ ಗುರುನಾಥರ ಸಮಾಧಿ ಹತ್ತಿರ ಇತ್ತೀಚೆಗೆ ನೆರವೇರಿತು. ಇಷ್ಟು ಹೇಳಿ ಆ ಜ್ಯೋತಿಗೆ ಸಮರುಂಟೆ ಎಂಬಂತೆ ನನ್ನತ್ತ ದಿಟ್ಟಿಸಿ ನಕ್ಕರು. 

ಶಿಷ್ಯನ  ಮನೆ ಕಾದ ಗುರು :- 


ಇನ್ನೇನಾದರೂ ಹೇಳಿ ಎಂಬ ನನ್ನ ನೋಟಕ್ಕೆ ಆತ ನಸುನಕ್ಕು ಮುಂದುವರೆಸಿದರು: ನನಗೆ ಒಂದು ಮಗುವಾದ ನಂತರ ಗುರುನಾಥರು ನನ್ನ ತಂಗಿಯ ಜಾತಕ ಹೊರಡಿಸಲು ತಿಳಿಸಿದರು. ಕೆಲವೇ ದಿನದಲ್ಲಿ ನನ್ನ ತಂಗಿಯ ಮದುವೆ ನಿಶ್ಚಯವಾಯಿತು. 

ಈ ಮಧ್ಯೆ ಒಮ್ಮೆ ನಾನು ನನ್ನ ತಂಗಿಯೊಡನೆ ಸಂಬಂಧಿಯೊಬ್ಬರ ಮನೆಯ ಸಮಾರಂಭಕ್ಕೆ ಹೋದೆ. ಈ ವಿಷಯ ತಿಳಿದ ಗುರುನಾಥರು ನಮ್ಮ ಮನೆಗೆ ಬಂದು ನಮ್ಮಿಬ್ಬರಿಗೂ ತಿಳಿ ಹೇಳಿದರು: "ನೋಡಯ್ಯಾ ಹೆಣ್ಣಿಗೆ ವಿವಾಹ ನಿಶ್ಚಯವಾದ ದಿನದಿಂದಲೇ ಆಕೆ ಪರರಿಗೆ ಸೇರಿದಂತೆ. ಆಕೆ ಮನೆಯಿಂದ ಹೊರ ಹೋಗಬೇಕಾದರೆ ಭಾವಿ ಪತಿಯ ಅನುಮತಿ ಕೇಳಿ ಹೋಗಬೇಕಯ್ಯಾ.... ಗೊತ್ತೇ?. 

ಆಕೆ ಹೊರ ಹೋದ ಸಂದರ್ಭ ಭಾವಿ ಪತಿ ಕರೆ ಮಾಡಿ ಮಾತಾಡಬೇಕೆಂದರೆ ಏನು ಮಾಡುತ್ತೀ? ಹೊರಗೆ ಹೋಗಿದ್ದಾಳೆ ಅಂದರೆ ಆತ ಏನು ತಿಳಿಯಬಹುದು? ಯೋಚಿಸಬೇಕಲ್ಲವೇ......  " ಅಂದರು. ಧರ್ಮ ಎಷ್ಟು ಸೂಕ್ಷ್ಮವಲ್ಲವೇ ಅನ್ನಿಸಿತು ನನಗೆ. 

ಆ ನಂತರ ಮದುವೆ ಹಿಂದಿನ ದಿನ ನಾನು ಮನೆಗೆ ಬೀಗ ಹಾಕಿ ಕಾವಲಿಗೊಬ್ಬರನ್ನು ನೇಮಿಸಿ ಮಂಗಳೂರಿಗೆ ಹೋದೆ. ಅದೇದಿನ ಸಂಜೆ ಗುರುನಾಥರು ನನಗೆ ಕರೆ ಮಾಡಿ, ಅಯ್ಯಾ ನಾನು ನಿನ್ನ ಮನೆಯಲ್ಲಿ ಇದ್ದೀನಿ..... ನೀನು ಅಷ್ಟು ನನ್ನ ಕಾಪಾಡಿರುವಾಗ, ನಿನ್ನ ಮನೆ ಕಾಯುವುದು ನನ್ನ ಧರ್ಮವಲ್ಲವೇ ಎಂದು ನಕ್ಕರು. ನನಗೆ ಮಾತು ಹೊರಡಲಿಲ್ಲ. 

ಅಂದು ನಮ್ಮ ಮನೆಯಲ್ಲಿ ಇಪ್ಪತ್ತೈದು ಜನರಿಗೆ ಊಟ ಹಾಕಿಸಿ ನಾನು ಬರುವವರೆಗೂ ನನ್ನ ಮನೆಯನ್ನು ಕಾದ ಆ ಅಸಾಮಾನ್ಯ ಇಂದಿಗೂ ಉಸಿರಾಗಿ ನಮ್ಮಲ್ಲಿ ನೆಲೆ ನಿಂತಿರುವರು, ಎಂದು ಹೇಳಿ ಅಲ್ಲೇ ಇದ್ದ ಗುರು ಪಾದುಕೆಗೆ ಶಿರಸಾ ನಮಿಸಿದರು........,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 

।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।

1 comment:

  1. Poojya venkatachala avadootarige nanna bhakti poorvaka namanagalu. Swamy Yellaranu sadaa kaala Yellaranu Harasi haagu uddarisi asheervadisi Guruvarya.

    ReplyDelete