ಶ್ರೀ ಸದ್ಗುರುನಾಥ ಲೀಲಾಮೃತ - 2
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 18
ರೂಪ ಬೇರೆಯಾದರೂ ಒಳಗಿನ ಚೈತನ್ಯ ಒಂದೇ
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ । ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।
ಶಿವಮೊಗ್ಗದ ಒಬ್ಬ ಹೆಣ್ಣು ಮಗಳು, ಗುರು ಪರಂಪರೆ, ಸಾನ್ನಿಧ್ಯಗಳಿರುವ ಮನೆತನದಿಂದ ಬಂದವರು. ಹಲವಾರು ಗುರುಗಳ ದರ್ಶನವಾದರೂ ವಯೋಮಾನ, ಜೀವನಾನುಭವದ ಕೊರತೆಗಳಿಂದ, ಜೀವನದಲ್ಲಾವ ನೋವುಗಳನ್ನೂ ಕಾಣದಿದ್ದರಿಂದ ಮನವಿನ್ನೂ ಪಕ್ವವಾಗಿರಲಿಲ್ಲ. ಸದ್ಗುರುವಿನ ಸ್ವರೂಪವರಿಯದೆ ಮುಗ್ಧ ಸ್ವಭಾವ, ಭೋಳೆತನದಿಂದ "ಬೆಳ್ಳಗಿರುವುದೆಲ್ಲಾ ಹಾಲೆಂದು" ನಂಬುವ ಕಪಟವರಿಯದ ಮನದವರು.
ಅವರ ಸಹೋದರಿಯ ಮನೆಗಿವರು ಹೋದಾಗ, ಕರ್ಮಧರ್ಮ ಸಂಯೋಗವೆಂಬಂತೆ ಗುರುನಾಥರ ದರ್ಶನ ಪ್ರಾಪ್ತಿಯಾಯಿತು. ತನ್ನ ಹಾಡಿನ ಸೇವೆಯ ಮುಖಾಂತರ ಗುರುನಾಥರಿಗೆ ಪ್ರಿಯವಾದ ಅಕ್ಕ ಗುರುನಾಥರ ಬಳಿ ಕುಳಿತು ಹಾಡುತ್ತಿದ್ದರು. ತಂಗಿ ದೂರದಲ್ಲಿ ಕುಳಿತಿದ್ದಳು. ಗುರುನಾಥರಿಗೆ ಅದೇನು ಕರುಣೆ ಬಂತೋ, ಅಥವಾ ಈ ಮುಗ್ಧೆ ಮುಂದಾವುದೋ ಸಂಕಟದ ಸುಳಿಯಲ್ಲಿ ಸಿಕ್ಕಬಹುದೆಂದು ಅರಿತೋ ಏನೋ, ಅವರನ್ನು ತಮ್ಮ ಬಳಿಗೆ ಕರೆದು ಪ್ರೀತಿಯಿಂದ ಆಶೀರ್ವದಿಸಿದರು. "ನಿನಗೇನು ಬೇಕಮ್ಮ, ಏನು ಹುಡುಕುತ್ತಿದ್ದೀಯಾ" ಎಂದು ಅಂತಃಕರಣದಿಂದ ಪ್ರಶ್ನಿಸಿದರು.
"ಸದ್ಗುರುವನ್ನು ಗುರುಗಳೇ" ಎಂದರಿವರು. ಕೂಡಲೇ ಗುರುನಾಥರು "ನೀನು ಏನನ್ನು ನೋಡುತ್ತಿದ್ದೀ?" ಎಂದು ಪ್ರಶ್ನೆ ಕೇಳಿ ಆಶೀರ್ವದಿಸಿದರು. ಎಲ್ಲದಕ್ಕೂ ಕಾಲ ಕೂಡಿ ಬರಬೇಕು. ಮೌಢ್ಯ ಹರಿಯಬೇಕಲ್ಲ. ಆದರೂ ಗುರುನಾಥರ ಕರುಣೆ ಇವರ ಮೇಲಾಯಿತು- ಅದಾಕೆಗೆ ಈಗ ತಿಳಿಯಲಿಲ್ಲ.
ಮುಂದೆ ಆಗಬಹುದಾದ ಅನಾಹುತದಿಂದ, ಬಹುಶಃ ಗುರುನಾಥರ ಕೃಪೆಯಿಂದ ಬಚಾವಾದರು. ಇಂದು ಆಯಾಚಿತವಾಗಿ ಗುರುನಾಥರ ಫೋಟೋ, ಪುಸ್ತಕಗಳು ಅವರ ಬಳಿ ಬಂದು ಧೈರ್ಯ, ಸ್ಥೈರ್ಯ, ಸಂತಸಗಳನ್ನೆಲ್ಲಾ ನೀಡಿವೆ. ಇಂದು ಆಕೆಯೂ ಗುರುನಾಥರ ಅನನ್ಯ ಭಕ್ತೆಯಾಗಿದ್ದಾರೆ . "ಸದ್ಗುರುವನ್ನಲ್ಲವೇ ನೀನು ನೋಡುತ್ತಿರುವುದು ಎಂದು ಗುರುನಾಥರು ಒತ್ತಿ ಹೇಳಿದರೂ ನನಗಾಗ ತಿಳಿಯುವ ಸಾಮರ್ಥ್ಯವೇ ಇರಲಿಲ್ಲ. ಆದರೂ ಗುರುನಾಥರು ನನ್ನ ಮೇಲೆ ಕೃಪೆ ತೋರಿದ್ದಾರೆ. ಎಂತಹ ಕರುಣಾಳುಗಳು" ಎಂದು ಮನದಲ್ಲೇ ನಮಿಸುತ್ತಾರೆ. ದರ್ಶನ ಮಾತ್ರವೇ, ಸ್ಮರಣ ಮಾತ್ರದಲ್ಲೇ ಭಕ್ತರನ್ನು ಉದ್ಧರಿಸುವ ಭಕ್ತೋದ್ಧಾರಕರಲ್ಲವೆ.
ಗುರುನಾಥರನ್ನು ಕಾಣಲಾಗಲಿಲ್ಲವಲ್ಲಾ
ಭದ್ರಾವತಿಯ ತಾಯಿಯೊಬ್ಬರು ಗುರುನಾಥರ ಪ್ರಭಾವಕ್ಕೆ ಒಳಗಾಗಿ ಎರಡು ಮೂರು ಬಾರಿ ಗುರುನಾಥರು ಬಂದಿದ್ದಾರೆಂದು ತಿಳಿದು ಆ ಸ್ಥಳಕ್ಕೆ ಹೋದರೂ ಗುರುನಾಥರ ದರ್ಶನವಾಗಿರಲಿಲ್ಲ. ಆ ತಾಯಿ ಯಾರ ಬಳಿಯೂ ತನ್ನ ದುಃಖವನ್ನು ತೋಡಿಕೊಳ್ಳದೇ ಮನದಲ್ಲೇ ಕೊರಗುತ್ತಿದ್ದರು. ಇಷ್ಟರಲ್ಲಿ ಅವರು ಬೆಂಗಳೂರಿಗೆ ಹೋಗಿ ನೆಲೆಸಿದರು. ದಿನ, ವರ್ಷಗಳು ಉರುಳಿದವು. "ಸದ್ಗುರುನಾಥ ಲೀಲಾಮೃತ" ವೆಂಬ ಪುಸ್ತಕವನ್ನು ತೆಗೆದುಕೊಂಡು ಹೋದ ನಾನು, ಅವರ ಮಗನಿಗೆ ಕೊಟ್ಟೆ. ನನ್ನ ಕೆಲಸಕ್ಕೆ ನಾನೆತ್ತಲೋ ಹೋಗಿ ಬರುವಾಗ ಮಧ್ಯಾನ್ಹ ಒಂದಾಗಿತ್ತು.
ಆ ತಾಯಿಯ ಮುಖದಲ್ಲಿ ಉಕ್ಕಿದ ಸಂತಸ - ಸಂಭ್ರಮ ಕಂಡು ನನಗೆ ಆಶ್ಚರ್ಯವಾಯಿತು. ಸ್ನಾನ ಮಾಡಿ ಬಂದವರು ದೇವರ ಪೂಜೆಗೆಂದು ಹೋಗಿ ಅಲ್ಲಿ ಗುರುನಾಥರ ಮುಖಪುಟವಿರುವ ಪುಸ್ತಕ ತೆಗೆದು ಓದುತ್ತಾ ತನ್ಮಯರಾಗಿಬಿಟ್ಟರು. ಮತ್ತೊಮ್ಮೆ ಗುರುನಾಥರ ದರ್ಶನವಾಗಲಿಲ್ಲವೆಂಬ ನೋವು ಅವರ ಮನದಲ್ಲಿ ಜಾಗೃತವಾಯಿತು.
ನನ್ನ ಬಳಿ ಮಾತನಾಡಿ ಎಲ್ಲ ತೋಡಿಕೊಂಡರು. "ಚಿಂತಿಸಬೇಡಿ ಅಮ್ಮ ಗುರುನಾಥರು ಎಲ್ಲೂ ಹೋಗಿಲ್ಲ. ಎಲ್ಲೆಡೆ ಇದ್ದಾರೆ. ಪುಸ್ತಕದ ರೂಪದಲ್ಲಿ ನಿಮಗೆ ಸಂತಸ ನೀಡಿದ್ದಾರೆ. ಅವರು ಮನಸ್ಸು ಮಾಡಿದರೆ ಏನೂ ಸಾಧ್ಯ" ಎಂದು ನನಗೆ ತಿಳಿದುದನ್ನು ಹೇಳಿದೆ.
ಅದೇ ಸಮಯಕ್ಕೆ "ಲೀಲಾಮೃತ" ಪುಸ್ತಕ ತೆಗೆದುಕೊಂಡು ಹೋಗಲು ಅನಂತಣ್ಣ (ಅನಂತರಾಮ್ - ಬೆಂಗಳೂರು) ಆ ಮನೆಗೆ ಬಂದರು. ಅವರದು ಊಟವಾಗಿರಲಿಲ್ಲ. ಶಂಕರಮಠದಲ್ಲಿ ನಾಳಿನ ಯಾವುದೋ ಕಾರ್ಯಕ್ರಮದ ಉಸ್ತುವಾರಿಯಲ್ಲಿದ್ದವರು, ಅಲ್ಲಿ ಹತ್ತಾರು ಜನ ಊಟ ಮಾಡಿರೆಂದು ಹೇಳಿದರೂ ಕೇಳದೆ ಮನೆಗೆ ಹೋಗಿ ಊಟ ಮಾಡುವೆನೆಂದು ಹೇಳಿ ಹೊರಟು ಬಂದಿದ್ದರು.
ನನ್ನಿಂದ ಪುಸ್ತಕ ಪಡೆದು ಹೊರಡಲನುವಾದಾಗ, ಮನೆಯವರು ಬಿಡಲೊಪ್ಪರು. ಕೊನೆಗೆ ಪೂರ್ವಾಪರಗಳ ವಿಚಾರ ಮಾಡಿದಾಗ ಎಲ್ಲ ಗುರುಬಂಧುಗಳೆಂಬುದರ ಅರಿವಾಯಿತು. ಬಲವಂತವಾಗಿ ಊಟಕ್ಕೆ ಎಬ್ಬಿಸಿ, ಭಕ್ತಿಭಾವದಿಂದ ಆ ತಾಯಿ ಉಣಬಡಿಸಿದರು. ಶ್ರೀ ಸದ್ಗುರುನಾಥರೇ ಅವರ ಮನೆಗೆ ಬಂದಷ್ಟು ಸಂತಸ ಆ ತಾಯಿಗಾಗಿತ್ತು. ಅನಂತಣ್ಣನವರನ್ನು ಕಂಡಾಗ ಸದ್ಗುರುನಾಥರನ್ನು ಕಂಡಷ್ಟು ಸಂತಸಪಟ್ಟು, ಮನೆ ಮಂದಿಯನ್ನೆಲ್ಲಾ ನಮಸ್ಕರಿಸಲು ತಿಳಿಸಿ ಸಂಭ್ರಮಿಸಿದರು. ಯದ್ಭಾವಂ ತದ್ಭವತಿ, ಅಂತೂ ಆ ತಾಯಿಯ ಮನದ ಕೊರಗಾಗಿ ಉಳಿದ ಗುರುನಾಥರ ದರ್ಶನದ ಆಸೆ ಹೀಗೆ ಪೂರೈಸಿತ್ತು.
ಪ್ರಿಯ ಓದುಗ ಮಿತ್ರರೇ, ಗುರುನಾಥರು ಇಹ ಲೀಲೆಯನ್ನು ತೊರೆದ ಮೇಲೂ ಕಾಶಿಯಲ್ಲಿ, ಜಗನ್ನಾಥದಲ್ಲಿ ತಮ್ಮ ಭಕ್ತರಿಗೆ ದರ್ಶನ ಇತ್ತಿದ್ದಾರೆ. ಭಾವುಕರಿಗೆ ನಿರಾಸೆಯಾಗದು, ರೂಪ ಭಿನ್ನವಾದರೇನು ಅವರೊಳಗಿನ ಚೈತನ್ಯ ಮಾತ್ರ ಗುರುನಾಥರದೇ ಅಲ್ಲವೇ. ಪ್ರಿಯ ಓದುಗ ಬಾಂಧವರೇ, ನಾಳೆಯೂ ನಮ್ಮೊಂದಿಗಿರಿ....,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
Poojya venkatachala gurugalige e shuba somavaarada saashtaanga pranaamagalu. Sarvarannu uddarisi asheervadisi Kaapadi Guruvarya. Hari om tatsat.
ReplyDelete