ಒಟ್ಟು ನೋಟಗಳು

Tuesday, March 14, 2017

ಶ್ರೀ ಸದ್ಗುರುನಾಥ ಲೀಲಾಮೃತ  - 2 

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ನಿತ್ಯ ಸತ್ಸಂಗ  - 5


ಅಂತರಂಗವರಿತ ಗುರು 


।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ನಾಗರ ಪಂಚಮಿ ನಾಡಿಗೆ ದೊಡ್ಡ ಹಬ್ಬ. ಅಣ್ಣ ತಮ್ಮಂದಿರು, ಅಕ್ಕ ತಂಗಿಯರು ಸಡಗರದಿಂದ ಬೆನ್ನು ತೊಳೆದು, ರಾಖಿ ಕಟ್ಟಿ, ವಿಶ್ವಾಸದಿಂದ ಸಡಗರಿಸುವ ದಿನ. ಅಂದು ಅದೆಷ್ಟು ದೂರದಿಂದ ಅಣ್ಣ ತಮ್ಮಂದಿರು ತಮ್ಮ ಸಹೋದರಿಯರೊಂದಿಗೆ ಹಬ್ಬವನ್ನಾಚರಿಸಲು ಬರುತ್ತಾರೆ. 

ಗುರುನಾಥರ ಒಬ್ಬ ಶಿಷ್ಯೆ. ಎಂದಿನಿಂದಲೂ ನಡೆದು ಬಂದ ಪದ್ಧತಿಯಂತೆ ತನ್ನ ಸಹೋದರ ಅಂದು ಮನೆಗೆ ಬರಬೇಕಿದ್ದವ ಅದ್ಯಾವುದೋ ಮುನಿಸು, ದುಃಖ ದುಮ್ಮಾನದಿಂದ ಬರಲೇ ಇಲ್ಲ. ಜೀವನದಲ್ಲಿ ಅದೇ ಪ್ರಥಮ ಇಂತಹ ವ್ಯತ್ಯಯ ಅವರ ಜೀವನದಲ್ಲಾಗಿದ್ದುದು ದುಃಖದ ಕಟ್ಟೆ ಒಡೆದು ಬಂದಿತು. ನೋವಾದಾಗ ಅಮ್ಮ ಎಂದು ಸಹಜವಾಗಿ ಕೂಗುವ ಮಗುವಿನಂತೆ, ಗುರುನಾಥರ ಶಿಷ್ಯರಿಗೆ ಸಂಕಟ ಬಂದಾಗ ಸಹಾಯ, ಮಾರ್ಗದರ್ಶನ ಸಿಗುವುದು ಸಖರಾಯಪಟ್ಟಣದ ವೆಂಕಟಾಚಲ ಅವಧೂತರಿಂದಲೇ. ಹಾಗಾಗಿ ಆ ಹೆಣ್ಣು ಮಗಳೂ ಕೂಡ ಗುರು ಮನೆಗೆ ಧಾವಿಸಿ ಬಂದರು. 

ಗುರುವಿನ ಬಳಿ ಬರುವುದೇ ಒಂದು ಸಂತಸದ ಕೆಲಸವಾಗಿದ್ದು, ಗುರು ಮನೆಯಲ್ಲಿ ಕೆಲಸ ಕಾರ್ಯಗಳಲ್ಲಿ ಯಾವಾಗಲೂ ತೊಡಗಿರುತ್ತಿದ್ದ ಆಕೆ ಈ ದಿನ ಎಂದಿನಂತಿರಲಿಲ್ಲ. ಆದರೂ ಗುರುನಾಥರಿಗೆ ನಮ್ಮ ನೋವನ್ನೆಲ್ಲಾ ಹೇಳಿ ಏಕೆ ಅವರಿಗೆ ಹಿಂಸೆ ನೀಡಬೇಕೆಂದು ಅವರು ಎಂದಿನಂತೆಯೇ ಇರುವ ನಾಟಕವಾಡುತ್ತಿದ್ದರು. ಏಕೆಂದರೆ ಭಕ್ತರ ನೋವನ್ನು ಕಂಡಾಗ ಗುರುನಾಥರ ಮೃದು ಮನಸ್ಸು ಒದ್ದಾಡದೇ ಇರುತ್ತಿರಲಿಲ್ಲ. 

ಎಷ್ಟು ನಾಟಕ ಯಾರ ಮುಂದೆ ಸಾಗುತ್ತದೆ ಹೇಳಿ. ಜಗನ್ನಿಯಾಮಕ, ಜಗನ್ನಾಟಕ ಸೂತ್ರಧಾರಿಯಾದ ಗುರುನಾಥರು ಕೂಡಲೇ ತಮ್ಮ ಭಕ್ತೆಯ ನೋವನ್ನು ಅರಿತು "ಅಲ್ಲಮ್ಮಾ, ಕೇವಲ ರಕ್ತ ಸಂಬಂಧದಿಂದ, ಒಡ ಹುಟ್ಟಿನಿಂದ ಮಾತ್ರಾ ಸಹೋದರತ್ವ ಸಿದ್ಧಿಸುತ್ತಾ, ನಿಮ್ಮ ಸಹೋದರ ಬರಲಿಲ್ಲವೆಂದು ಇಷ್ಟೊಂದು ಯಾಕೆ ಕೊರಗುತ್ತೀಯಾ..... ಅಲ್ಲಿ ನೋಡು ಶ್ರೀಕಾಂತನಿಗೆ ಬೆನ್ನು ತೊಳೆದು ರಾಖಿ ಕಟ್ಟು ಎಂದರು. 

ಅಲ್ಲೇ ಇದ್ದ ಗುರುಪುತ್ರನಿಗೆ ಬೆನ್ನು ತೊಳೆದು, ರಾಖಿ ಕಟ್ಟಿ ಸಂತಸಗೊಂಡ ಆ ಹೆಣ್ಣು ಮಗಳು "ಅಂತರಂಗವರಿತು ಆದರ ತೋರಿದ ಗುರುನಾಥರಿಗೆ ಶತಕೋಟಿ ನಮನಗಳನ್ನು ಸಲ್ಲಿಸಿದರಂತೆ" ಎಲ್ಲ ವರುಷಗಳಿಗಿಂತ ಆ ವರ್ಷದ ನಾಗರಪಂಚಮಿ ಸಾರ್ಥಕವಾಯಿತು ಎಂದು ಸಂತಸಪಟ್ಟರು. 

ನೀನು ವಿದೇಶಕ್ಕೆ ಹೋಗುತ್ತೀಯ


ಕಷ್ಟಪಟ್ಟು ಓದಿದ್ದಾಯಿತು. ಒಳ್ಳೆಯ ಅಂಕವನ್ನು ಗಳಿಸಿ ಇಂಜಿನೀಯರಿಂಗ್ ಮುಗಿಸಿದ ಆ ವಿದ್ಯಾರ್ಥಿಗೆ ಅಮೇರಿಕಾದಲ್ಲಿ ಒಳ್ಳೆಯ ಕೆಲಸ ಸಿಗುವುದಿತ್ತು. ಅವರ ಮನೆಯ ವಾತಾವರಣದಲ್ಲೂ ಪೂಜೆ, ಪುನಸ್ಕಾರ, ಗುರು ನಾಮಸ್ಮರಣೆಗಳೆಲ್ಲಾ ನಿರಂತರವಾಗಿ ಸಾಗಿ ಬಂದಿತ್ತು. ಆದರೆ ಅದೇಕೋ ವಿದೇಶಕ್ಕೆ ಹೋಗುವುದಕ್ಕೆ ವೀಸಾ ಸಿಗುವುದೇ ದುಸ್ತರವಾಗಿತ್ತು. 

ತಾವು ಮಾಡುವ ಎಲ್ಲ ರೀತಿಯ ಮನುಷ್ಯ ಪ್ರಯತ್ನವನ್ನು ಅವರ ತಂದೆ ತಾಯಿಗಳು ಮಾಡಿದರು. ಏನೂ ಫಲ ಕಾಣದಾದಾಗ, ತಮ್ಮ ಸ್ನೇಹಿತರಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದಾಗ ಅವರಿಗೆ ಸ್ನೇಹಿತರು ತೋರಿಸಿದ್ದುದು ಸಖರಾಯಪಟ್ಟಣದ ಅವಧೂತರನ್ನು. ಮಿತ್ರರು ಸಖರಾಯಪಟ್ಟಣದ ಗುರುಗಳ ಬಳಿಗೆ ಇವರನ್ನು ಕರೆದುಕೊಂಡು ಬಂದರು. 

ಅದೇ ಮೊದಲ ಬಾರಿಗೆ ಅಲ್ಲಿಗೆ ಬಂದ ಆ ಹುಡುಗನಿಗೆ ಅವರ ತಂದೆ ತಾಯಿಗಳಿಗೆ ಒಳ್ಳೆಯ ಊಟ ತಿಂಡಿಗಳು ಗುರುನಿವಾಸದಲ್ಲಿ ದೊರೆಯಿತಾದರೂ ಗುರುನಾಥರ ದರ್ಶನವಾಗಲಿಲ್ಲ. 

ಬಹಳ ಹೊತ್ತು ಕಾಯ್ದ ನಂತರ ಅವರು ಗುರುನಾಥರನ್ನು ಮನದಲ್ಲೇ ಬೇಡಿಕೊಂಡರು. ನಿಮ್ಮನ್ನು ನೋಡದೇ ಹೋಗುವುದಿಲ್ಲವೆಂಬ ಗಟ್ಟಿ ಮನಸ್ಸು ಮಾಡಿದರು. ಸಂಜೆಯಾಗುತ್ತಿದೆ. ಇದ್ದಕ್ಕಿದ್ದಂತೆ ಗುರುನಾಥರ ಆಗಮನವಾಯಿತು ಮನೆಗೆ. ಬಹಳ ಕಾಯ್ದು ನಿರಾಸೆಯಾಗಿದ್ದ ಇವರಿಗೆ ಹುಣ್ಣಿಮೆಯ ಚಂದ್ರನ ದರ್ಶನವಾದಷ್ಟು ಸಂತಸವಾಯಿತು. 

ಕರುಣಾಮಯಿಯಾದ ಗುರುವಿಗೆ ತಿಳಿಯದೇನಿದೆ? ಅಮೇರಿಕಾಕ್ಕೆ ಹೋಗಲು ತೊಂದರೆ ಅಡ್ಡಿಗಳನ್ನು ಎದುರಿಸುತ್ತಿರುವ ಆ ಹುಡುಗ ಭಕ್ತಿಯಿಂದ ನಮಿಸಿ, ಮನದಲ್ಲೇನು ಪ್ರಾರ್ಥಿಸಿದನೋ, ಗುರುನಾಥರು ಅಭಯ ಹಸ್ತ ತೋರಿದರು. "ಏನೂ ಯೋಚನೆ ಮಾಡಬೇಡ... ಎಲ್ಲ ವಿಘ್ನಗಳೂ ದೂರವಾಗಿ, ನೀನು ವಿದೇಶಕ್ಕೆ ಹೋಗುತ್ತೀಯಾ" ಎಂದರಂತೆ. 

ಬೆಟ್ಟದಂತೆ ಹೊರೆಯಾಗಿದ್ದ ಸಮಸ್ಯೆ ಅದೆಂತು ಹತ್ತಿಯಂತೆ ಹಗುರವಾಗಿಬಿಟ್ಟಿತೋ, ಎಲ್ಲ ಸಮಸ್ಯೆಗಳೂ ಗುರುನಾಥರ ಒಂದು ದರ್ಶನದಿಂದ, ಅವರ ಒಂದು ಆಶೀರ್ವಾದ-ಆಶ್ವಾಸನೆಯಿಂದ ಪರಿಹಾರವಾಗಿ ಆ ಹುಡುಗ ಅಮೇರಿಕಾಕ್ಕೆ  ಪ್ರಯಾಣಿಸಿದ, ಒಳ್ಳೆಯ ಹೆಸರು ಮಾಡಿದ. ಅಂದಿನಿಂದ ನಿರಂತರ ಗುರುನಾಥರ ಸ್ಮರಣೆ ಮನನವನ್ನು ಆತ ಅಲ್ಲಿ ಮಾಡಿದರೆ, ಇಲ್ಲಿ ಪೋಷಕರು ಬೆಳಿಗ್ಗೆ ಮೊದಲು ದರ್ಶನ ಮಾಡುವುದು ಗುರುನಾಥರನ್ನು.... ಗುರುಕೃಪಾ ಕಟಾಕ್ಷದ ಮುಂದೆ ಅದ್ಯಾವ ಸಮಸ್ಯೆ ನಿಲ್ಲಲು ಸಾಧ್ಯ?....... 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ. 


।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।



For more info visit :  http://srivenkatachalaavadhoota.blogspot.in/

1 comment:

  1. Poojya venkatachala gurugalige nanna poojya namanagalu. Yella kaaladalli Sarvarannu uddarisi asheervadisi Kaapadi Guruvarya. Hari om tatsat.

    ReplyDelete