ಶ್ರೀ ಸದ್ಗುರುನಾಥ ಲೀಲಾಮೃತ - 2
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 1
ಸಖರಾಯಪಟ್ಟಣದ ಸಕ್ಕರೆ
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ನಮ್ಮ ಭರತ ಭೂಮಿ ಅಂದೂ, ಇಂದೂ ಪಾಶ್ಚಿಮಾತ್ಯ ದೇಶಗಳಿಗೂ ಮಾರ್ಗದರ್ಶಕ ವಾಗಿರುವುದು ಇಲ್ಲಿನ ಭವ್ಯವಾದ ಆಧ್ಯಾತ್ಮಿಕ ಪರಂಪರೆಯಿಂದ. ಈ ಪರಂಪರೆಯಲ್ಲಿ ಶಂಕರ, ರಾಮಾನುಜ, ಮಧ್ವರು ಮುಂತಾದ ಜಗದ್ಗುರುಗಳಿಂದ ನಿರಂತರ ಪ್ರವಹಿಸುವ ಒಂದು ಆಧ್ಯಾತ್ಮ ಧಾರೆ ಒಂದೆಡೆ ಕಂಡರೆ, ಈ ಜಗದ್ಗುರುಗಳು, ಮತಸ್ಥಾಪಕರು, ಆಚಾರ್ಯರುಗಳಿಗಿಂತ ವಿಭಿನ್ನವಾದ ಮತ್ತೊಂದು ಪರಂಪರೆ ಕಂಡುಬರುತ್ತದೆ. ಅದೇ ಅವಧೂತ ಪರಂಪರೆ. ಈ ಅವಧೂತರು ಯಾರೆಂದರೆ ಅದಕ್ಕಷ್ಟು ಸುಲಭವಾದ ಉತ್ತರವಾಗಲೀ, ಅವರನ್ನು ಗುರುತಿಸುವುದಾಗಲೀ ಸಾಧ್ಯವಾಗದು.
ಆಚಾರ್ಯ ಪರಂಪರೆಯ ನೇಮ, ನಿಷ್ಠೆ, ಕರ್ಮಕಾಂಡ, ಪಾಂಡಿತ್ಯ, ವಿಧಿ-ವಿಧಾನಗಳನ್ನು ಮೀರಿದವರು ಅವಧೂತರು. ಅವರು ನಡೆದದ್ದೇ ದಾರಿ, ನುಡಿದದ್ದೇ ಸತ್ಯ. ಅವರು ಹೇಳಿದುದೇ ಸಂಪ್ರದಾಯ. ಇವೆಲ್ಲಾ ಕಂಡುಬರುವುದು ನಿತ್ಯ ಸತ್ಯವೇ. ಆದರೆ, ಅದು ತರ್ಕಕ್ಕೆ ನಿಲುಕದ್ದು. ವಿಜ್ಞಾನಕ್ಕೂ ಸವಾಲಾಗಬಲ್ಲದು. ಕೇವಲ ಭಾವನೆಗೆ, ಪರಿಶುದ್ಧ ಭಕ್ತಿಗೆ ಮಾತ್ರ ಮನನವಾಗಬಲ್ಲದಂತಹದು. ಅವಧೂತರುಗಳಿಗೆ ಕಾಲ, ದೇಶ, ಭಾಷೆ, ಜಾತಿ-ಮತಗಳು, ಮೇಲುಕೀಳು, ಇದ್ಯಾವುದೂ ಗಣನೆಗೆ ಬಾರದು. ಇದೆಲ್ಲವನ್ನೂ ಮೀರಿ ನಿಂತವರು. ಮಾನಾಪಮಾನಗಳಾಗಲೀ, ಕಷ್ಟಸುಖಗಳಾಗಲೀ, ಅವರನ್ನೆಂದಿಗೂ ಮುಟ್ಟಲಾರವು. ಸದಾ ನಿತ್ಯ ಸತ್ಯದ ಆನಂದದಲ್ಲಿ ಮುಳುಗಿ, ಜನರು ಅಚ್ಚರಿಪಡುವಂತಹ ಅಘಟಿತ ಘಟನೆಗಳನ್ನು ನಡೆಸಿ, ತಮಗೂ ಇದಕ್ಕೂ ಯಾವ ಸಂಬಂಧವೂ ಇಲ್ಲವೆಂದು ನಿರ್ಲಿಪ್ತರಾಗಿ ತಾವೇ ತಾವಾಗಿ ನಿತ್ಯಾನಂದದಲ್ಲಿ ವಿಹರಿಸುವವರು. ಈ ಅವಧೂತರುಗಳು ಪ್ರೀತಿಯ ಕಡಲಾಗಿ, ಕಾರುಣ್ಯದ ಮಳೆಗರೆದು, ಸಂಸಾರದಲ್ಲಿದ್ದು ಅದರ ಬಂಧನಕ್ಕೆ ಅಂಟದಂತೆ ಬಾಳುವ ಇಂತಹ ಅವಧೂತರುಗಳ ಪರಂಪರೆ ನಮ್ಮ ನಾಡಿನುದ್ದಗಲಕ್ಕೆ ಸಾಗಿದೆ.
ರಾಮಕೃಷ್ಣ ಪರಮಹಂಸರು, ಶಿಶುನಾಳ ಶರೀಫರು, ಶಂಕರಲಿಂಗ ಭಗವಾನರು, ಪರ್ವತೇಶ್ವರರು, ಹೊಳಲೂರು ಹನುಮಂತಪ್ಪನವರು ಹೀಗೆ ಒಬ್ಬರೇ ಇಬ್ಬರೇ. ಈ ಪರಂಪರೆಯಲ್ಲಿ ಇತ್ತೀಚಿನ ಕಾಲ ದಶಕಗಳಲ್ಲಿ ಕೇಳಿ ಬಂದ ಬಹು ದೊಡ್ಡ ಹೆಸರು ಶ್ರೀ ವೆಂಕಟಾಚಲ ಅವಧೂತರು. ಬಹು ದೊಡ್ಡ ಶಿಷ್ಯ ಪರಂಪರೆಯನ್ನು ಹೊಂದಿ, ಸಾವಿರಾರು ಜನರಿಗೆ ಅವರವರ ಮನೋಕಾಮನೆಗಳನ್ನು ಪೂರೈಸುವುದರ ಜೊತೆಗೆ ಸದ್ಧರ್ಮಕ್ಕೆ ಹಚ್ಚುತ್ತಾ, ಪ್ರೀತಿಯ ಪ್ರತಿಮೂರ್ತಿಯಾಗಿ, ಅತ್ಯಂತ ಸರಳವಾಗಿ ಸಹಜ ಜೀವನ ನಡೆಸುವ, ಇಲ್ಲದವರಿಗೆ ಹಂಚುವ, ಕಷ್ಟದಲ್ಲಿ ಇರುವವರ ಬಗ್ಗೆ ಸಹಕಾರ ಭಾವ ಬೆಳೆಸುವ, ಸಮಾಜ ಸ್ವಾಸ್ಥ್ಯ ಸುಧಾರಿಸುವ ಹಲವು ಬಗೆಯ ಸೇವೆಗೈಯುತ್ತಾ, ಎಲ್ಲೂ ತಾವು ಬೆಳಗದೆ ಭಕ್ತರನ್ನು ಬೆಳಗಿಸಿದ ಮಹಾನ್ ಚೇತನರು ಸಖರಾಯಪಟ್ಟಣದ ಶ್ರೀ ವೆಂಕಟಾಚಲ ಅವಧೂತರು. ಅತ್ಯಂತ ಸಾಮಾನ್ಯ ವ್ಯಕ್ತಿಯಂತಿದ್ದರೂ ಅಸೀಮ ಮಾನವತಾವಾದಿಗಳಾಗಿ, ಬಹು ದೊಡ್ಡ ಸಾಧನೆಗೈದು ಎಲ್ಲರಂತಿದ್ದ ಮಹಾತ್ಮರು ಅವರಾಗಿದ್ದರು.
ಸಖರಾಯಪಟ್ಟಣದ ಹಲಸು ಅದರ ರುಚಿಗೆ, ಅಲ್ಲಿಯ ಅಯ್ಯನ ಕೆರೆ ಪ್ರಕೃತಿ ಸೌಂದರ್ಯಕ್ಕೆ, ಸಕ್ಕರೆ ಪಟ್ಟಣದ ಸಕ್ಕರೆಯೇ ಅಲ್ಲಿನ ಬಲ್ಲಾಳೇಶ್ವರ. ಈ ದೇವಾಲಯವು ಬರಗಾಲದಲ್ಲಿ ಮಳೆ ಸುರಿಸಿ ಕಾಪಾಡುವುದಕ್ಕೆ ಹೆಸರಾದರೆ, ಶ್ರೀ ವೆಂಕಟಾಚಲ ಅವಧೂತರು ಭಕ್ತಿ ಪರಂಪರೆಯ ಉದ್ಧಾರಕ್ಕೆ, ಆಚಾರ್ಯ ಶಂಕರಾಚಾರ್ಯರ ನಂತರ ಮತ್ತೊಮ್ಮೆ ಗುರು ಭಕ್ತಿ, ಗುರುವಂದನೆ, ಗುರುಶಕ್ತಿಯಂತಹ ವಿಚಾರಗಳಲ್ಲಿ ಸ್ವಯಂ ಮೇರು ಪರ್ವತವಾಗಿ, ಜೊತೆಗೆ ಲಕ್ಷಾಂತರ ಜನ ಶಿಷ್ಯ ಪರಂಪರೆಯನ್ನು ಸೃಷ್ಟಿಸಿದರೆಂದರೆ ಅತಿಶಯೋಕ್ತಿಯಲ್ಲ.
ಗುರುಪರಂಪರೆಗೆ, ಯತಿಗಳಿಗೆ, ಸಾಧು ಸಂತರಿಗೆ ಗೌರವಿಸುವುದರಲ್ಲಿ ಅವರನ್ನು ಸನ್ಮಾನಿಸುವುದರಲ್ಲಿ ದಾನದ ಮತ್ತೊಂದು ಹೆಸರೇ ಅವಧೂತರಾಗಿದ್ದರು.
ಜೀವಂತವಾಗಿರುವಾಗಲೇ ದಂತಕಥೆಯಾಗಿತ್ತು ಅವರ ನಿತ್ಯ ಸತ್ಯ ಲೀಲಾವಿನೋದಗಳು. ಒಂದೇ ಕಾಲದಲ್ಲಿ ಹಲವು ಎಡೆಗಳಲ್ಲಿ ಕಂಡುಬರುವ, ಇದ್ದ ಸ್ವಲ್ಪವನ್ನೇ ಅಕ್ಷಯ ಮಾಡಿಸುವ, ಮಹಾವ್ಯಾಧಿಗಳನ್ನೆಲ್ಲಾ ಸುಲಭ ರೀತಿಯಲ್ಲಿ ಪರಿಹರಿಸಿಬಿಡುವ, ಮನು ಕುಲದ ಹಿತಕ್ಕಾಗಿ ಅನಿವಾರ್ಯವಾದರೆ ಪ್ರಕೃತಿಯ ಮೇಲೂ ಹಿಡಿತ ಸಾಧಿಸಿ ತೋರಿದ ಗುರುನಾಥರ ಲೀಲಾ ವಿನೋದಗಳು, ಭಾವುಕ ಭಕ್ತರಿಗೆ ವೇದ್ಯವಾದದ್ದೇ. ಒಂದೊಂದೆಡೆಯಲ್ಲಿ ಒಂದೊಂದು ಘಟನೆಗಳು ಜರುಗಿವೆ. ಒಬ್ಬೊಬ್ಬರಿಗೆ ಒಂದೊಂದು ರೀತಿ ವೇದ್ಯವಾಗಿದೆ. ಇಲ್ಲೆಲ್ಲಾ ತರ್ಕಕ್ಕೆ ಮೀರಿದ ಘಟನೆಗಳೇ ಅಧಿಕ. "ಯದ್ಭಾವಂ ತದ್ಭವತಿ" ಎಂಬಂತೆ ಸಾಗಿದೆ.
ಅತ್ಯಂತ ಕರುಣಾಮಯಿಯಾದ ಗುರುನಾಥರಿಗೆ ಉಳ್ಳವರು, ಎಲ್ಲದವರೆಂಬ ಬೇಧವಿರಲಿಲ್ಲ. ಹಣ ಅವರಿಗೆ ತೃಣಕ್ಕೆ ಸಮಾನ. ನಿರ್ಮಲ ಭಕ್ತಿಗಷ್ಟೇ ಅವರ ಬಳಿ ಸ್ಥಾನ. "ಸದ್ಗುರು ದೊರಕಿದ್ದಾನಯ್ಯಾ ನಿಮಗೆ. ಧರ್ಮ, ಅರ್ಥ, ಕಾಮಗಳಿಗಷ್ಟೇ ಮಿತಿಗೊಳಿಸಿಕೊಳ್ಳದೇ ಮುಂದಿನದನ್ನು ಪಡೆಯಿರಯ್ಯಾ" ಎನ್ನುವ ಅವರ ಮಾತುಗಳು ಅನೇಕರಿಗೆ ಪ್ರಶ್ನೆಯಾಗಿವೆ. ನಾವು ಗುರುನಾಥರಿಂದ ಪಡೆದದ್ದೇನೆಂದು ಚಿಂತಿಸಲು ಹಚ್ಚಿದೆ. ಗುರುನಾಥರನ್ನು ಕಂಡವರೇ ಅದೃಷ್ಟವಂತರು. ಅವರ ನುಡಿಯಂತೆ ನಡೆದವರೇ ಭಾಗ್ಯವಂತರು. ಇಂತಹ ಮಹಾನ್ ಮಾನವತಾವಾದಿಗಳಾದ ಅವಧೂತರ ಬಗ್ಗೆ ನಾಳೆ ಮತ್ತಷ್ಟು ತಿಳಿಯೋಣವೇ......,,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
Poojya venkatachala avadootarige nanna saashtaanga pranaamagalu. Yellaranu sadaa kaala Kaapadi Harasi haagu uddarisi Guruvarya. Sarve jano sukinobavantu.
ReplyDelete