ಶ್ರೀ ಸದ್ಗುರುನಾಥ ಲೀಲಾಮೃತ - 2
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 22
ಹಸಿದವರ ಹೊಟ್ಟೆ ತುಂಬಿಸಿದರು
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ । ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।
ಗುರುನಾಥರ ಸಂದರ್ಶನಕ್ಕೆಂದು ಹೊಸದುರ್ಗದ ಬ್ರಾಹ್ಮಣ ಸಮಾಜದ ಮುಖಂಡರುಗಳೆಲ್ಲಾ ಸಖರಾಯಪಟ್ಟಣಕ್ಕೆ ಹೊರಟರು. ಭಕ್ತರೆಂದರೆ ಅವರು ಹೊರಟ ಘಳಿಗೆಯೇ ಸುಮುಹೂರ್ತ. ಗುರವೇನು ಮಾಡುತ್ತಿರುತ್ತಾರೆ, ಹೇಗೆ ಎಂಬ ಚಿಂತೆ ಅವರೆಂದೂ ಮಾಡುವುದಿಲ್ಲವಲ್ಲ. ಅಂತೂ ಒಂದು ಗುಂಪು, ಚಂದ್ರಪ್ರಕಾಶ್ ಮುಂತಾದವರೆಲ್ಲಾ ಸಖರಾಯಪಟ್ಟಣ ತಲುಪಿ, ಗುರುನಾಥರ ಮನೆಯನ್ನು ತಲುಪಿದಾಗ ಅವರಿಗೆ ತಿಳಿದ ವಿಚಾರ "ಗುರುನಾಥರ ಮನೆಯಲ್ಲಿ ಅಂದು ಪಿತೃಯಜ್ಞವಿದೆ, ಅವರು ಹೊರಗೆ ಬರುವುದಿಲ್ಲ" ಎಂದು ಸಿಗುವುದು ಅಸಾಧ್ಯ ಎಂದು.
ಆದರೆ ಈ ಭಕ್ತಗಣ ಅಷ್ಟು ದೂರದಿಂದ ಬಂದು ಗುರುನಾಥರನ್ನು ನೋಡದೇ ಹೋಗಬಯಸದ ಇವರು "ಎಷ್ಟು ಹೊತ್ತಾದರೂ ಗುರುನಾಥರು ಮನೆಯಿಂದ ಹೊರಬಂದೇ ಬರುತ್ತಾರಲ್ಲ" ಎಂಬ ದೃಢ ನಿಶ್ಚಯದಿಂದ ಎದುರು ಮನೆ ಕಟ್ಟೆಯ ಮೇಲೆ ಮೂರೂವರೆಯವರೆಗೆ ಕಾಯುತ್ತಾ ಕುಳಿತೇಬಿಟ್ಟರು.
ಅದುವರೆಗೆ ವೆಂಕಟಾಚಲ ಅವಧೂತರನ್ನು ಯಾರೂ ಮುಖತಃ ಕಂಡೇ ಇರಲಿಲ್ಲ. ಅವರ ಹೆಸರು, ಕೀರ್ತಿ ಕೇಳಿ ತಮ್ಮ ಊರ ಸಮಸ್ಯೆಯನ್ನು ಇವರೆಲ್ಲಾ ಪರಿಹರಿಸಿ, ಮಾರ್ಗದರ್ಶನ ಪಡೆಯಲು ಬಂದವರಾಗಿದ್ದರು. ಒಬ್ಬ ವ್ಯಕ್ತಿ ಎದುರು ಮನೆಯಿಂದ ಇಳಿದು ಅತ್ತ ಹೋಗುತ್ತಿದ್ದಾಗ, ಯಾರೋ ಕೇಳಿದರು, "ನೀವು ಯಾಕೆ ಬಂದಿರುವುದು? ನೋಡಿ ಅಲ್ಲಿ ಹೋಗುತ್ತಿದ್ದಾರಲ್ಲ ಅವರೇ ಅವಧೂತರು". ಅಷ್ಟು ಹೊತ್ತಿಗೆ ರಸ್ತೆಯಲ್ಲಿ ಇವರ ಹಿಂದೆ ಹತ್ತಾರು ಜನ ಸೇರಿದ್ದರು. ನಮ್ಮ ಹೊಸದುರ್ಗದ ಭಕ್ತರುಗಳೂ ಸರಸರ ಹಿಂಬಾಲಿಸಿದರು. ಗುರುನಾಥರು ಮುಂದೆ ನಡೆದು, ಅರಳಿ ಕಟ್ಟೆಯ ಮೇಲೆ ಕುಳಿತುಕೊಂಡರು. ಕೆಲವೇ ಕ್ಷಣಗಳಲ್ಲಿ ಇರುವೆ ಬೆಲ್ಲಕ್ಕೆ ಮುತ್ತುವಂತೆ ಜನ ಬಂದು ಮುತ್ತಿದ್ದರು. ಅಲ್ಲೇ ರಸ್ತೆಯಲ್ಲೇ ಎಲ್ಲಾ ಕುಳಿತರು. ಸುಮಾರು ನಲವತ್ತೈವತ್ತು ಜನರಾದರು.
ಅದ್ಯಾರೋ ಒಂದು ಬಕೆಟ್ ತುಂಬಾ, ಇಡ್ಲಿ ಚಟ್ನಿ ತಂದರು. ಎಲ್ಲರಿಗೂ ಕೈಗೇ ಇಡ್ಲಿ ಚಟ್ನಿ ಇಟ್ಟರು. ಬಂದವರು ತಿನ್ನುತ್ತಿದ್ದರು. ಮತ್ಯಾರೋ ಒಂದು ಪೇಪರ್ ನೀಡಿ ಅವಲಕ್ಕಿಯನ್ನು ಹಂಚುತ್ತಿದ್ದರು. ಇನ್ಯಾರೋ ಬಂದು ಮತ್ತೇನನ್ನೋ ನೀಡಿದರು. ಕೈ ತೊಳೆಯಲು ನೀರೆಲ್ಲಿ? ಅಂತೂ ಎಲ್ಲರ ಹೊಟ್ಟೆ ತುಂಬಿತು. ಆಗ ತಾನೇ ಹಿರಿಯರ ಕಾರ್ಯ ಮುಗಿಸಿ ಬಂದಿದ್ದ ಗುರುನಾಥರು, ತಮಗಾಗಿ ಕಾದಿದ್ದ ಎಲ್ಲ ಜನರ ಹಸಿವನ್ನು ಹೀಗೆ ತೀರಿಸಿ, ಆಭ್ಯಾಗತ ಸ್ವಯಂ ವಿಷ್ಣು ಎಂದು ಎಲ್ಲರ ಮೂಲಭೂತವಾದ ಜಠರಾಗ್ನಿಯನ್ನು ಶಮನಗೊಳಿಸಿದರು. ಎಲ್ಲ ಬಲ್ಲ ಗುರುನಾಥರಿಗೆ ತಿಳಿಯದದ್ದು ಏನಿದೆ? ಮುಂದೆ ಗುರುನಾಥರ ಒಡ್ಡೋಲಗದಲ್ಲಿ ಬಂದವರ ಕಷ್ಟ ಸುಖಗಳನ್ನವರು ವಿಚಾರಿಸತೊಡಗಿದರು. ಬೇರೆ ಯಾರಾದರೂ ಆಗಿದ್ದರೆ ತಮ್ಮ ಸುಸ್ತನ್ನು ನಿವಾರಿಸಿಕೊಳ್ಳಲು ಗಂಟೆಗಟ್ಟಲೆ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರೇನೋ? ಅನಾಥರ ನಾಥರಾದ ಗುರುನಾಥರಿಗೆ ಸದಾ ಭಕ್ತರದೇ ಚಿಂತೆ. ಹಾಗಾಗಿ, ಅವರಿಗೆ ವಿರಾಮವೆಲ್ಲಿಯದು.
ನೀನು ಸರಿಯಾಗಿದ್ದೀಯಾ - ತಾಯಿಯಾಗಿರಮ್ಮಾ:
ಇಷ್ಟರಲ್ಲಿ ಕೆಲವರು ಗುರುಗಳು ಸಿಗುವುದಿಲ್ಲವೆಂದು ಬಸ್ ಸ್ಟ್ಯಾಂಡ್ ಗೆ ಹೋದವರು, ಮತ್ತೆ ಬಂದು ಗುಂಪಿನಲ್ಲಿ ಕುಳಿತಿದ್ದರು. ಆ ಗುಂಪಿನಲ್ಲಿದ್ದ ವಯಸ್ಸಾದ ಅಜ್ಜಿಯೊಬ್ಬರು ಪದೇ ಪದೇ ಎದ್ದು ನಿಲ್ಲುತ್ತಿದ್ದುದನ್ನು ನೋಡಿ ಗುರುನಾಥರು "ಕೂತುಕೊಳ್ಳಮ್ಮಾ ಏನು ಅವಸರ?" ಎಂದರು. "ಇಲ್ಲಾ ಸ್ವಾಮಿ, ನಾನು ಬೇಗ ಹೋಗಬೇಕು" ಎಂದಾಗ ಗುರುನಾಥರು ತಮಾಷೆ ಮಾಡುತ್ತಾ "ಎಲ್ಲಾ ಹೋಗೋರೆ ಕಣಮ್ಮಾ .... ನಿನಗೆ ಅರವತ್ತೈದಾಗಿದೆಯಲ್ಲಾ, ಈ ದೇಹ ನೋಡು ನನಗೂ ಅಷ್ಟೇ ಆಗಿದೆ. ಎಲ್ಲಾ ಹೋಗೋರೆ" ಎಂದರು ಮಾರ್ಮಿಕವಾಗಿ.
ಅಜ್ಜಿ ತನ್ನ ದೂರನ್ನು ಪ್ರಾರಂಭಿಸಿ ತನ್ನ ಸೊಸೆಯ ದೋಷಗಳ ಪಟ್ಟಿ ಮಾಡುತ್ತಾ "ನೀವು ಅವಳಿಗೆ ಬುದ್ಧಿ ಕೊಡಬೇಕಪ್ಪ" ಎಂದು ಬೇಡಿದಳು. ಎಲ್ಲವನ್ನೂ ಪ್ರಶಾಂತವಾಗಿ ಕೇಳಿದ ಗುರುನಾಥರು "ಅಜ್ಜಿ, ನಿನ್ನ ಸೊಸೆಯನ್ನು ತೆಗಳುತ್ತೀಯಲ್ಲಾ, ಅತ್ತೆಯಾಗಿ ನೋಡಬೇಡ, ತಾಯಿಯಾಗಿ ಪ್ರೀತಿಯಿಂದ ನೋಡಿಕೋ, ಸಣ್ಣವಳಲ್ಲವಾ... ಸರಿಯಾಗುತ್ತಾಳೆ. ದೊಡ್ಡವರು ಸಣ್ಣವರ ತಪ್ಪನ್ನು ಮನ್ನಿಸಬೇಕು. "ಯಾರು ಏನು ನೂರು ಪರ್ಸೆಂಟ್ ಸರಿಯಾಗಿರುತ್ತಾರಾ?" ಎಂದು ಬುದ್ಧಿವಾದ ಹೇಳಿದರು, ಗುರುನಾಥರು.
ಆದರೆ ಅಜ್ಜಿ ತಾನು ಸರಿಯಾಗಿದ್ದೇನೆ, ನಾನೇನು ತಪ್ಪೇ ಮಾಡಿಲ್ಲ.... ನೀವು ಅವಳಿಗೆ ಬುದ್ಧಿ ಕೊಡಿ ಎಂದು ಹಠ ಹಿಡಿದಾಗ, ಗುರುನಾಥರು ಅಜ್ಜಿಯನ್ನು ಬಳಿಗೆ ಕರೆದು, ಅವಳ ಹಣೆಯ ಮೇಲೆ ಕೈ ಇಟ್ಟು ಎರಡು ನಿಮಿಷಗಳ ನಂತರ "ಅಲ್ಲಮ್ಮಾ, ನೀನು ನಿನ್ನ ಹತ್ತೊಂಬತ್ತನೆಯ ವಯಸ್ಸಿನಲ್ಲಿ ಯಾರದ್ದೋ ಜೊತೆ ಓಡಿ ಹೋಗಿದ್ದೆಯಲ್ಲಾ..... ನೀನೇನು ತಪ್ಪೇ ಮಾಡಿಲ್ಲವಾ. ಆಮೇಲೆ ನಿಮ್ಮವರು ನಿನ್ನ ಒಪ್ಪಿಕೊಂಡು ಜೊತೆಗೆ ಇರಲಿಲ್ಲವಾ... ಇಷ್ಟೇ ಸಾಕೋ ಇನ್ನೂ ಹೇಳಲಾ...." ಎಂದಾಗ ಅಜ್ಜಿ ಬೆವರಿ ಹೋದರಂತೆ, ಗುರುನಾಥರ ಕಾಲಿಗೆ ಬಿದ್ದು "ಅಪ್ಪಾ ತಪ್ಪಾಯಿತಪ್ಪಾ.. ಕ್ಷಮಿಸು. ನಾನು ಇನ್ನು ಮೇಲೆ ತಾಯಿಯಾಗಿ ಇರುತ್ತೀನಿ. ಸೊಸೆಯನ್ನು ಮಗಳಂತೆ ನೋಡ್ಕೋತೀನಿ" ಎಂದು ತಾನಿನ್ನು ಅವಳ ಬಗ್ಗೆ ದೂರುವುದಿಲ್ಲವೆಂದು ಅಲ್ಲಿಂದ ಗುರು ಅಪ್ಪಣೆ ಪಡೆದು ನಡೆದರು. ಇನ್ನೂ ನಾಲ್ಕೈದು ಜನ ಅಂತಹವರ ಕಡೆಗೆ, ಗುರುನಾಥರು "ನಿಮ್ಮದೇನು" ಎಂದು ಕೇಳಿದಾಗ ಅವರೆಲ್ಲಾ "ನಮ್ಮದೇನೂ ಇಲ್ಲ ಗುರುವೇ" ಎಂದು ನಮಸ್ಕರಿಸಿ ಎದ್ದರು. ಗುರುನಾಥರು ಯಾರಿಗೋ ಹೇಳಿ ಆ ಅಜ್ಜಿ ಮತ್ತು ಅವರ ಸಂಗಡಿಗರನ್ನು ಕಾರಿನಲ್ಲಿ ಬಸ್ ಸ್ಟ್ಯಾಂಡ್ ಗೆ ಬಿಡಿಸಿ, ಊರಿಗೆ ಬೇಕಾದ ಚಾರ್ಜನ್ನು ಕೊಡಿಸಿ ಕಳಿಸಿದರು.
ಎಂತಹ ಕರುಣಾಶಾಲಿಗಳು ಗುರುನಾಥರು "ಮನೆಯನ್ನು ಒಂದು ಮಾಡಿದ ಮಹನೀಯರು, ಮನವನ್ನು ಕಲಕದೆ ತಿಳಿಗೊಳಿಸಿದ ಪ್ರಸನ್ನವದನರು".
ಮಾನ್ಯ ಗುರು ಬಾಂಧವರೇ.... ನಮ್ಮ ಹೊಸದುರ್ಗದ ಮಿತ್ರರು ಇದನ್ನೆಲ್ಲಾ ನೋಡುತ್ತಾ ಗುರುನಾಥರ ಅದಾಲತ್ ನ ತೀರ್ಮಾನ ಕಂಡು ಬೆರಗಾಗಿದ್ದರು. ಮುಂದಿನ ಸತ್ಸಂಗಕ್ಕೆ ನಾಳೆ ನಮ್ಮೊಂದಿಗೆ ಇರುತ್ತೀರಲ್ಲ... ಇದು ಆ ಅಜ್ಜಿಯ ಸಮಸ್ಯೆ ಮಾತ್ರವಲ್ಲ... ಮನೆ ಮನೆಯ ರಾಮಾಯಣವಿರಬಹುದಲ್ಲವಾ? ......,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
Poojya venkatachala avadootarige nanna bhakti poorvaka namanagalu. Sarvarigu arogya ayasu rakshe sahane samadhaana talme buddhi shreyasu santosha karunisi asheervadisi Guruvarya. Sarve jano sukinobavantu.
ReplyDelete