ಶ್ರೀ ಸದ್ಗುರುನಾಥ ಲೀಲಾಮೃತ - 2
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 40
"ಮಾತೆಯ ಮಮತೆಯ ಗುರುನಾಥರು"
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ । ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।
"ನಂತರ ಲಚ್ಚಣ್ಣ (ಲಕ್ಷ್ಮೀನರಸಿಂಹ ಐಯ್ಯಂಗಾರ್) ಮನೆಗೆ ಗುರುನಾಥರು ಬಂದರು. ನಾನೂ ಅಲ್ಲಿಗೆ ಹೋದೆ. ಗುರುನಾಥರು ಅನೇಕ ತತ್ವ ವಿಚಾರಗಳನ್ನು ತಿಳಿಸಿದರು. ಅಲ್ಲೇ ಇದ್ದ ಕಳಸಾಪುರದ ರಘು ಅವರನ್ನು 'ಏನಯ್ಯಾ ಸ್ವಾಮಿಗಳನ್ನು ಕಳಸಾಪುರಕ್ಕೆ ಕರೆದುಕೊಂಡು ಹೋಗುತ್ತೀಯೇನಯ್ಯಾ?' ಎಂದು ಕೇಳಿದರು. ಅವರು ಆಯ್ತು ಎಂದಾಗ, ನಾಗರಾಜ ವಕೀಲರ ಮನೆಯಲ್ಲಿ ಭಿಕ್ಷೆ ಮಾಡಿಕೊಂಡು ಸಂಜೆ ಕಳಸಾಪುರಕ್ಕೆ ಹೋದೆವು. ಅಲ್ಲೊಬ್ಬರು ಭಕ್ತರ ಮನೆಯಲ್ಲಿ ವೇದಿಕೆ ಕಾರ್ಯಕ್ರಮ ಇತ್ತು. ಅಲ್ಲಿಗೆ ಹೋಗಿ ಅಲ್ಲಿ ಸತ್ಸಂಗ ನೆರವೇರಿಸಿದರು. ರಾತ್ರಿ ರಘು ಅವರ ಮನೆಯಲ್ಲಿ ಉಳಿದು, ಬೆಳಿಗ್ಗೆ ಆ ಊರಿನ ಸುಮಾರು ಹನ್ನೆರಡು ಭಕ್ತರ ಮನೆಗಳನ್ನು ಸಂದರ್ಶಿಸಿ, ನಂತರ ಉಪಾಹಾರ ಸ್ವೀಕರಿಸಿ ಕಾರಿನಲ್ಲಿ ಅರಸೀಕೆರೆ ಕಡೆಗೆ ಹೊರಟೆವು. ವಿಚಿತ್ರವೆಂದರೆ ಒಂದು ಹತ್ತು ಕಿಲೋಮೀಟರ್ ಗಳು ಹೋಗಿರಬಹುದು. ಗುರುನಾಥರು ಮತ್ತೆ ದೂರವಾಣಿಯಲ್ಲಿ 'ಬ್ರಹ್ಮಾನಂದರನ್ನು ಸಖರಾಯಪಟ್ಟಣಕ್ಕೆ ಕರೆದುಕೊಂಡು ಬನ್ನಿ' ಎಂದು ಆದೇಶಿಸಿದರು. ಗುರುನಾಥರ ಮನೆಯಲ್ಲಿ ಮತ್ತೆ ಭಜನೆ, ಸತ್ಸಂಗ, ಆರತಿಗಳಾದವು. ನಮಗೆಲ್ಲಾ ಹೋಳಿಗೆಯ ಊಟ ಹಾಕಿಸಿ, ಹಣ್ಣು ವಸ್ತ್ರಗಳನ್ನು ನೀಡಿ, ಆಶೀರ್ವದಿಸಿ ಕಳುಹಿಸಿದರು. ಗುರುವಿನ ಅಪಾರ ಪ್ರೇಮದ ಅನುಭವ ನನಗೀಪಾರಿಯಾಯಿತು. ಪದೇ ಪದೇ ಕರೆಸಿಕೊಂಡು ಸಾನ್ನಿಧ್ಯ ಸುಖವನ್ನು ಗುರುನಾಥರು ಹೇಗೆ ನೀಡುತ್ತಿದ್ದರೆಂಬ ವಿಚಾರ ಅರಿವಾಗುತ್ತದೆ". ವೆಂಕಟಾಚಲ ಅವಧೂತರ ಪ್ರೇಮಗಂಗೆಯಲ್ಲಿ ಮಿಂದೆದ್ದ ಶ್ರೀ ಬ್ರಹ್ಮಾನಂದ ಗುರೂಜಿಗಳು ಅದನ್ನಿಲ್ಲಿ ನಮಗಾಗಿ ಹಂಚಿಕೊಂಡರು - ಅವರಿಗೊಂದು ನಮನ ಎಲ್ಲರ ಪರವಾಗಿ.
ಗುರು ಶಿಷ್ಯರೆಂದರೆ....
ಗುರುವೆಂದರೆ ಯಾರು? ಯಾರಿಗೆ ಯಾರೂ ಗುರುಗಳಲ್ಲ. ನನ್ನ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಗುರುವೆಂಬ ಭಾವ ಬಂದು, ನನ್ನಲಿ ಆ ಗುರುಶಕ್ತಿ ಇದೆ ಎಂದು ಭಾವಿಸಿ ಬರುವಿರಲ್ಲ. ಆ ಭಾವನೆಯೇ ಗುರು ಎಂದು ಗುರುನಾಥರು ಪದೇ ಪದೇ ಹೇಳುತ್ತಿದ್ದರಂತೆ.
ಗುರುತರವಾದದ್ದು, ಗಹನವಾದದ್ದು, ಅಲ್ಪವಲ್ಲದ - ಮಹತ್ವದ್ದು ಹಾಗೂ ಜೀವನದ ಉನ್ನತ ಗುರಿಯೇ ಗುರುವು.
ಗುರುವಿಗೆ ಒಮ್ಮೆ ನಮಸ್ಕರಿಸಿ, ನಿಮ್ಮದನ್ನೆಲ್ಲಾ ಸಂಪೂರ್ಣವಾಗಿ ಒಪ್ಪಿಸಿಬಿಟ್ಟರೆ, ನೀವು ಗುರುವಿನ ಗುಲಾಮನಾದರೆ, ಆಗ ಗುರುವು ನಿಮಗೆ ಗುಲಾಮನಾಗಿ, ನಿಮ್ಮೆಲ್ಲ ಜವಾಬ್ದಾರಿಯನ್ನೂ ಹೊತ್ತೊಯ್ಯುತ್ತಾನೆ. ಪರಿಪೂರ್ಣ ಅರ್ಪಿಸಿ, ನಿಶ್ಚಿಂತರಾದ ಭಕ್ತರ ಭಾರ ಹೊರುವ ಗುರುತರ ಜವಾಬ್ದಾರಿ ಗುರುವಿನದು. ಈಗ ಯಾರು-ಯಾರ ಗುಲಾಮರು... ? ನೀವೇ ಯೋಚಿಸಿ !
ಮೇಲ್ನೋಟಕ್ಕೆ ಒಮ್ಮೆ ಕಂಡು, ನಮಸ್ಕರಿಸಿದ ಕೂಡಲೇ ಶಿಷ್ಯತ್ವ ಲಭಿಸದು. ಈ ರೀತಿ ಸಾಮಾನ್ಯವಾಗಿ ಕಂಡು ಊರಿನಲ್ಲಿದ್ದು, ಪರಿಚಿತರಾಗಿಯೋ, ರಕ್ತಸಂಬಂಧಿ, ಬಂಧು ಬಾಂಧವರಾಗಿಯೋ - ಸಾಮಾನ್ಯ ಸಂಬಂಧ ಬೆಳೆಸಿಕೊಂಡಾಗ, ಆತನ ಕಾರ್ಯ ವೈಖರಿ, ಜೀವನ ಶೈಲಿಗಳನ್ನು ಎಲ್ಲರಂತೆ ಚರ್ಚಿಸಿ, ವಿಮರ್ಶಿಸುವುದು ಒಂದು ರೀತಿಯಾದರೆ, ಪರಿಪೂರ್ಣ ಮನಸ್ಸಿನಿಂದ ನಿಮ್ಮನ್ನು ಅರ್ಪಿಸಿಕೊಂಡು, 'ಈತನೇ ನನ್ನ ಸದ್ಗುರು. ಇವನಿಲ್ಲದೆ ಅನ್ಯತ್ರ ಇಲ್ಲ' ಎಂದು ಒಮ್ಮೆ ಒಪ್ಪಿಕೊಂಡ ಮೇಲೆ ಚಕಾರವೆತ್ತದೆ ಗುರುವನ್ನು ಅಪ್ಪಿಕೊಳ್ಳುವುದೊಂದೇ ಮಾರ್ಗ. ಆತನ ನಡೆ-ನುಡಿ, ನಿರ್ಧಾರ ಯಾವುದನ್ನೂ ಪ್ರಶ್ನಿಸುವ ಹಕ್ಕು ಶಿಷ್ಯನಿಗೆ ಇರುವುದಿಲ್ಲ. ಹಾಗೇನಾದರೂ ಆತ ಮಾಡಿದರೆ ಪಥಭ್ರಷ್ಟನಾದಂತೆ. ಅಂಗೀರಸ ಮುನಿಯ ಸೇವೆಗೆ ಕಟಿಬದ್ಧನಾದ ದೀಪಕನು ಹರಿಹರಬ್ರಹ್ಮಾದಿಗಳು ಬಂದು ಏನು ಬೇಕೆಂದು ಕೇಳಿದರೂ 'ಗುರುವಿನಲ್ಲಿ ನನ್ನೀ ಮನ ಸ್ಥಿರವಾಗಿರಲಿ. ನಿಮ್ಮ ಯಾವ ವಾರವೂ ನನಗೆ ಬೇಡ' ಎಂದು ಹೇಳಿದಂತೆ ದೃಢಚಿತ್ತ ಶಿಷ್ಯನದಾದರೆ, ಭವತಾರಣ ಸುಲಭಸಾಧ್ಯ.
ಇವತ್ತೂ ಎಲ್ಲೂ ಹೊರಗೆ ಹೋಗದಿರಲು ತಿಳಿಸಿ
ಒಮ್ಮೆ ಗುರುನಾಥರು ಇದ್ದಕ್ಕಿದ್ದಂತೆ ತಮ್ಮ ಬೆಂಗಳೂರಿನ ಬಂಧುವೊಬ್ಬರಿಗೆ 'ಈ ದಿನ ಅವರು ಎಲ್ಲೂ ಹೊರಗೆ ಹೋಗುವುದು ಬೇಡ, ಮನೆಯಲ್ಲೇ ಇರಲು ಹೇಳಿ' ಎಂದು ಹೇಳಿ ಕಳುಹಿಸಿದರಂತೆ. ಆದರೆ ಈ ವಿಚಾರ ಆ ಬಂಧುವನ್ನು ತಲುಪುವುದರ ಒಳಗೆ ಅವರು ಮನೆಯಿಂದ ಕಾರ್ಯನಿಮಿತ್ತ ಹೊರ ಹೋಗಿಯಾಗಿತ್ತು. ಅವರು ಬಹುದೊಡ್ಡ ಆಕ್ಸಿಡೆಂಟ್ ಗೆ ತುತ್ತಾದರು. ಗುರುಕೃಪೆ - ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಜೀವಕ್ಕೆ ಹಾನಿಯಾಗದಿದ್ದರೂ ಅನೇಕ ದಿನಗಳು 'ತುರ್ತು ನಿಗಾ' ದಲ್ಲಿ ಇರಬೇಕಾಯಿತು. ಪ್ರತಿದಿನ ಶೃಂಗೇರಿಯಿಂದ ಬೆಂಗಳೂರಿಗೆ ತೀರ್ಥಪ್ರಸಾದಗಳು ಬರುತ್ತಿತ್ತು.
ಕೊನೆಗೊಂದು ದಿನ ಏನೂ ಚೇತರಿಕೆ ಕಾಣದಾದಾಗ ಗುರುನಾಥರೇ ಬಂದು 'ಇವರನ್ನು ಮನೆಗೆ ಕಳುಹಿಸಿಬಿಡಿ' ಎಂದು ಡಿಸ್ ಛಾರ್ಚ್ ಮಾಡಿಸಿಕೊಂಡು ಹೋದರು. ನಂತರ ಗುರುನಾಥರ ಕೃಪೆಯಿಂದ ಅವರಿಗೆ ಹಂತಹಂತವಾಗಿ ಜ್ಞಾನ ಬರತೊಡಗಿತು. ಕೊನೆಗೆ ಅವರು ಸುಧಾರಣೆಗೊಂಡು, ಇಂದು ಎಲ್ಲರಂತೆ ಇದ್ದಾರೆ. ಆದರೆ ಪ್ರತಿ ಕ್ಷಣವೂ ಗುರುನಾಥರ ಕರುಣೆ ತಮ್ಮ ಮೇಲಿರುವುದಕ್ಕಾಗಿ ಅವರು ಅತ್ಯಂತ ಕೃತಜ್ಞರಾಗಿ ಗುರುನಾಥರನ್ನು ಸ್ಮರಿಸುತ್ತಾರೆ.
ಪ್ರಿಯ ಗುರುಬಾಂಧವರೇ, ಹೀಗೆ ಹುಡುಕುತ್ತಾ, ಕೇಳುತ್ತಾ ಹೊರಟ ನನಗೆ, ಗುರುನಾಥರ ಅಪಾರ ಲೀಲೆಗಳು ಸಿಗುತ್ತಲೇ ಸಾಗಿದೆ. ನಾಳೆಯೂ ನಮ್ಮೊಂದಿಗಿರಿ. ನಿತ್ಯ, ಸತ್ಯ, ಘಟನೆಗಳ ಆಧಾರಿತವಾದ ಗುರುನಾಥರ ಲೀಲಾವಿನೋದಗಳನ್ನು ಹಂಚಿಕೊಂಡು ಆನಂದಿಸೋಣ. ನಾಳೆ ಬರುವಿರಲ್ಲಾ....
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
No comments:
Post a Comment