ಒಟ್ಟು ನೋಟಗಳು

Thursday, April 13, 2017

ಶ್ರೀ ಸದ್ಗುರುನಾಥ ಲೀಲಾಮೃತ  - 2 

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ನಿತ್ಯ ಸತ್ಸಂಗ  - 35

 

"ಗುರುದೇವ ದಯಾಳೋ ಹರೀ...." 


 

।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।

।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ । ಶೋಕ ಮೋಹ ವಿವರ್ಜಿತಂ ।। 
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।


"ಗುರುದೇವ ದಯಾಳೋ ಹರೀ....ಗುರು ವೆಂಕಟಾಚಲ ಗುರುನಾಥ ಗುರುದೇವ" ಎಂದು ಮುಂದುವರೆದು ನಾಲ್ಕಾರು ಚರಣಗಳ ನಂತರ "ಸಖರಾಯಪಟ್ಟಣವಾಸಿ" ಎಂದೊಂದು ಗುರುಗೀತೆಯನ್ನು ವೆಂಕಟಾಚಲ ಅವಧೂತರಿಗಾಗಿಯೇ ಭದ್ರಾವತಿಯ ಭಕ್ತರೊಬ್ಬರು, ತಮ್ಮ ಚಂಡಿಕಾದುರ್ಗಾ ಪರಮೇಶ್ವರಿ ದೇವಾಲಯಕ್ಕೆ ಬಂದು ಭಜನೆ ಮಾಡುವ ಭಕ್ತರೊಬ್ಬರಿಂದ ಬರೆಸಿದ್ದರು. ಅದೊಂದು ಕೇವಲ ಹಾಡಾಗಿ ಉಳಿಯಲಿಲ್ಲ. ಅದೇ ಅವರಿಗೆ ನಿತ್ಯ ಸ್ಮರಣೆಯ ಉಸಿರಾಗಿತ್ತು. 


ಹತ್ತೊವರೆಗೆ ಬ್ಯಾಂಕಿಗೆ ಹೋಗಬೇಕು. ಭದ್ರಾವತಿಯ ತಮ್ಮ ದೇವಾಲಯದ ಕೆಲಸ, ಬರುವ ಭಕ್ತರಿಗಾಗಿ ಇಲ್ಲೇ ಹತ್ತೂ ಕಾಲು ಆಗಿಬಿಡುತ್ತಿತ್ತು. ತರಾತುರಿಯಿಂದ ಹೊರಡುವಾಗ ಆ ಭಕ್ತರ ಬಾಯಲ್ಲಿ ಬರುತ್ತಿದ್ದ ಹಾಡು "ಗುರುದೇವ ದಯಾಳೋ ಹರೀ" ಬ್ಯಾಂಕ್ ತಲುಪುವುದರಲ್ಲಿ ಇವರ ಮಗಳು ಭದ್ರಾವತಿಯಿಂದ ಬ್ಯಾಂಕಿಗೆ ಫೋನಾಯಿಸಿ "ಸಾರ್ ನಮ್ಮ ತಂದೆ ಮನೆಯಿಂದ ಹೊರಟಿದ್ದಾರೆ.... ಇನ್ನೇನು ಬಂದುಬಿಡುತ್ತಾರೆ... ಸ್ವಲ್ಪ ತಡ.... "ಎಂದು ಹೇಳುವುದು ಆಗಾಗ್ಗೆ ಆಗುತ್ತಿತ್ತು. 

ಈಗವರ ಮಗಳು ಗುರುನಾಥರ ಕೃಪೆಯಿಂದ ವೈದ್ಯವಿದ್ಯೆ ಓದಿ ಕುಂದಾಪುರದಲ್ಲಿ ಕ್ಲಿನಿಕ್ ನಡೆಸುತ್ತಿದ್ದಾರೆ. ಗುರುನಾಥರ ಮಾತುಗಳ ಅರ್ಥ ನನಗೆ ಆವಾಗ ಆಗಿರಲಿಲ್ಲ ಎನ್ನುತ್ತಾ ಬಾಲ್ಯದಲ್ಲಿ ನಡೆದ ವಿಚಾರವನ್ನು ನೆನೆಸಿಕೊಳ್ಳುತ್ತಾರೆ. 

"ನಮ್ಮ ತಂದೆ ಆಗಾಗ್ಗೆ ಸಖರಾಯಪಟ್ಟಣಕ್ಕೆ ಗುರುನಾಥರನ್ನು ನೋಡಲು ಹೋಗುತ್ತಿದ್ದರು. ನಮ್ಮ ತಂದೆ ಅವರ ಕಾಲೊತ್ತುತ್ತಾ ಕುಳಿತಿರುತ್ತಿದ್ದರು. ನನಗೆ ಗುರುನಾಥರ ಬಗ್ಗೆ ಬರೆಸಿದ್ದ, ನಿತ್ಯ ಅವರು ಪ್ರೀತಿಯಿಂದ ಹೇಳಿಕೊಳ್ಳುತ್ತಿದ್ದ ಹಾಡನ್ನು ಹೇಳಲು ನಮ್ಮ ತಂದೆ ತಿಳಿಸಿದರು. "ಗುರುದೇವ ದಯಾಳೋ ಹರೀ ಗುರು ವೆಂಕಟಾಚಲ ಅವಧೂತ... ಸಖರಾಯಪಟ್ಟಣವಾಸ" ಎಂಬ ಹಾಡನ್ನು ಹಾಡಿದೆ. ಗುರುಗಳು ನನ್ನನ್ನು ಹತ್ತಿರ ಕರೆದರು. "ನೀನು ಕನ್ನಡಿಯಲ್ಲಿ ಯಾರನ್ನು ನೋಡುತ್ತೀ?" ಎಂದು ಪ್ರಶ್ನಿಸಿದಾಗ ನಾನು "ನನ್ನನ್ನು" ಎಂದೆ ಬಾಲ್ಯ ಸಹಜವಾಗಿ. ನಾನಾಗ ಐದನೇ ತರಗತಿಯಲ್ಲಿದ್ದೆ. ಮತ್ತೆ ನನ್ನನ್ನು ಕುರಿತು ಯಾಕೆ ಹಾಡುತ್ತಿ? ಹಾಡಬೇಡ ಎಂದಿದ್ದರು. ನನಗಾಗ ಏನೂ ಅರ್ಥವಾಗಿರಲಿಲ್ಲ. ಅವರ ಬಳಿ ಹೋಗುವುದು, ನಮಿಸುವುದಷ್ಟೇ ನನಗಾಗ ತಿಳಿಯುತ್ತಿದ್ದುದು. ಆದರೆ ಈಗ ಎಲ್ಲಾ ಅರ್ಥವಾಗುತ್ತಿದೆ. ಮನದಾಳದಲ್ಲಿ ಗುರುವನ್ನು ಬೇರೂರಿಸಿಕೊಂಡು ಭಜಿಸಿದರೆ ಮಾತ್ರಾ ನಮ್ಮ ನಮನ, ಭಜನೆ ಸಾರ್ಥಕವಾಗುತ್ತದೆಂದು. ಆ ಗುರುಕರುಣೆಯಿಂದ ನಾನೀ ಸ್ಥಿತಿಯಲ್ಲಿದ್ದೇನೆ. ನಮ್ಮ ಮನೆಯಲ್ಲಿಯೇ ಆ ನಾರಾಯಣಿ ನೆಲೆಸುತ್ತಾಳೆಂದು ಗುರುನಾಥರು ಆಡಿದ ಮಾತು ಸತ್ಯವಾಗಿದೆ. ನಮ್ಮ ತಂದೆ ತಾಯಿಗಳ ಮೇಲೆ ಗುರುನಾಥರ ಕೃಪೆಯಾಗಿದೆ. ಇಂತಹ ತಂದೆ ತಾಯಿಗಳ ಮಗಳಾಗಿರುವುದು, ಅಂತಹ ಸದ್ಗುರುಗಳ ಆಶೀರ್ವಾದ ದೊರಕಿರುವುದು ಅದೆಷ್ಟು ಜನ್ಮದ ಭಾಗ್ಯವೋ?" ಎಂದು ಸ್ಮರಿಸುತ್ತಾರೆ ಡಾ... ಅವರು. 

"ಗುರುದೇವ ದಯಾಳೋ ಹರಿ" ಎಂದು ರಸ್ತೆಯಲ್ಲಿಯೇ ಹಾಡಿಕೊಳ್ಳುತ್ತಾ ತಡವಾಗಿ ಕೆಲಸಕ್ಕೆ ಹೋದಾಗಲೂ ಎಂದೂ ಇವರ ತಂದೆಯವರನ್ನು ಬ್ಯಾಂಕಿನ ಅಧಿಕಾರಿಗಳು ಬೈದಿರಲಿಲ್ಲ. ಗುರುನಾಥರು ಯಾರ್ಯಾರ ಒಳಗೆ ಕುಳಿತು ತಮ್ಮ ಭಕ್ತರನ್ನು ಅದು ಹೇಗೆ ಹೇಗೆ ರಕ್ಷಿಸುತ್ತಾರೋ! 

"ನನಗೆ ನೆನಪಿರುವ ಮತ್ತೊಂದು ಗುರುನಾಥರ ಮಾತೆಂದರೆ 'ಬರೀ ಇಷ್ಟು ಮಾಡಿದರೆ ಸಾಲದು... ಸಾಕಾಗುವುದಿಲ್ಲ... ಏನೇನೂ ಸಾಕಾಗುವುದಿಲ್ಲ. ಗುರುವೆಂದರೆ ನಮಸ್ಕಾರ ಮಾಡಿಬಿಟ್ಟರೆ ಆಗಿ ಹೋಯಿತು. ಬಹಳ ಶ್ರಮ ಪಡಬೇಕು ಗುರುಕೃಪೆಯಾಗಲು'. ಇದು, ಈಗಲೂ ನನ್ನ ಕಿವಿಯಲ್ಲಿ ಕೇಳಿಬರುತ್ತದೆ. ನಮ್ಮ ತಂದೆಯವರು ಹೋದಾಗ ಅನೇಕ ಸಾರಿ ಗುರುನಾಥರು ಈ ಮಾತುಗಳನ್ನಾಡಿದ್ದಾರೆ" ಎಂದು ತಮ್ಮ ಬಾಲ್ಯದಲ್ಲಿ ಆದ ಅನುಭವವನ್ನು ನೆನಪಿಸಿಕೊಂಡರು. ಆಗ ಅವರಿಗೆ ಅರ್ಥವಾಗದ್ದು ಈಗ ಅರ್ಥವಾಗಿದೆ. 

"ಮೊನ್ನೆ ಗುರುನಾಥರ ಆರಾಧನೆ ತಾ: 24-7-2016 ರ ಭಾನುವಾರ ನಮ್ಮ ಮನೆಯಲ್ಲಿ ನಡೆಯುವುದಿತ್ತು. ಐದಾರು ವರ್ಷಗಳಿಂದ ನಮ್ಮಲ್ಲಿ 'ಆರಾಧನೆ' ನಡೆಯುತ್ತಿದ್ದರೂ ನನಗೆ ಒಂದಲ್ಲ ಒಂದು ಕಾರಣದಿಂದ ಬರಲಾಗುತ್ತಿರಲಿಲ್ಲ. ನನ್ನ ಕ್ಲಿನಿಕ್ ನಲ್ಲಿ ಹಾಕಿಕೊಂಡಿರುವ ಫೋಟೋದ ಮುಂದೆ ನಿಂತು ದೈನ್ಯದಿಂದ 'ಗುರುವೇ, ಈ ಸಾರಿಯಾದರೂ ಕರುಣಿಸುತ್ತೀರೋ, ಇಲ್ಲೇ ಬಿಟ್ಟು ಬಿಡುತ್ತೀರೋ' ಎಂದು ಬೇಡಿದ್ದೆ. ಅಂತೂ ವಿಚಿತ್ರವಾಗಿ ಆರಾಧನೆಯ ಕೆಲಸಕ್ಕೆ ಭದ್ರಾವತಿಗೆ ಬಂದೆ. ಹಿಂದಿನ ದಿನವೂ ಆರಾಧನೆಗಾಗಿ ಅಣಿ ಮಾಡುವಾಗ 'ನಾಳೆ ನೀವು ಸೇವೆ ಮಾಡಲಾಗುತ್ತೋ ಇಲ್ಲವೋ ಇವತ್ತೇ ಆದಷ್ಟು ಮಾಡಿಬಿಡು' ಎಂದು ಗುರುನಾಥರು ಅಂದಂತಾಯಿತು. ಮೇಲಿಂದ ಗುರುಗಳ ದೊಡ್ಡ ಫೋಟೋ ತಂದು, ಗುರುನಾಥರ ಶೇಷವಸ್ತ್ರದ ಪೆಟ್ಟಿಗೆಗಳನ್ನೆಲ್ಲಾ ತಂದು ಆರಾಧನೆಗೆ ಬೇಕಾದ ಎಲ್ಲ ಸಿದ್ಧತೆಯನ್ನವರು ನನ್ನ ಕೈಯಿಂದಲೇ ಮಾಡಿಸಿಕೊಂಡರು. ಬೆಳಗಿನಿಂದಲೇ ಸಾವಿರಾರು ಸಂಖ್ಯೆಯಲ್ಲಿ ಬಂದ ಗುರುಭಕ್ತರು, ಅಮ್ಮನವರ ಭಕ್ತರು, ಆ ಗಲಾಟೆಯಲ್ಲಿ ದಿನ ಕಳೆದುಹೋಗಿತ್ತು. ಹೀಗೆ ಕರುಣಾಮಯಿ ಗುರುನಾಥರು ಆರ್ತರಾಗಿ ಬೇಡಿದವರ ಬೇಡಿಕೆಯನ್ನು ಸಲ್ಲಿಸುತ್ತಲೇ ಬಂದಿದ್ದಾರೆ' ಎನ್ನುತ್ತಾರೆ ಗುರುನಾಥರ ಭಕ್ತೆ ಆ ವೈದ್ಯೆ. 

ಗುರುಭಕ್ತರೇ, ಗುರುನಾಥರು ಆಡುವ ಮಾತು ಯಾರನ್ನೋ ಕುರಿತಾಗಿ ಆಗಿದ್ದರೂ ಅದು ಹಲವರ ಮನಸ್ಸಿಗೆ ನಾಟಿದಾಗ ಅವರ ಜೀವನಶೈಲಿಯೇ ಬದಲಾಗಿ ಹೋಗಿದ್ದಿದೆ. ನುಡಿಯೊಳಗಿನ ಸತ್ಯವನ್ನು ಅರ್ಥ ಮಾಡಿಕೊಂಡಾಗ ನಮ್ಮ ಜೀವನ ಸಾರ್ಥಕವಾಗುತ್ತದೆ. 

ಮಾನ್ಯ ಗುರುಬಂಧುಗಳೇ, ಹೀಗೆ ಸೂಕ್ಷ್ಮವಾಗಿ ಮುಳ್ಳಿನಿಂದ ಮುಳ್ಳನ್ನು ತೆಗೆದು ಆನಂದದ ಸಾಗರವನ್ನೇ ಭಕ್ತರಿಗೆ ಈಯುವ ದಯಾಮಯ ಗುರುನಾಥರ ಸತ್ಕಥೆಯ ನಿತ್ಯಸತ್ಸಂಗ ನಿರಂತರವಾಗಿ ಸಾಗಲಿ, ನೀವೂ ನಮ್ಮೊಂದಿಗೆ ಇರಿ..... 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ. 

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


For more info visit :  http://srivenkatachalaavadhoota.blogspot.in

No comments:

Post a Comment