ಒಟ್ಟು ನೋಟಗಳು

Sunday, April 30, 2017

ಶ್ರೀ ಸದ್ಗುರುನಾಥ ಲೀಲಾಮೃತ  - 2 

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ನಿತ್ಯ ಸತ್ಸಂಗ  - 52

 

ಅಂತರಂಗದ ಮಾತುಗಳು 


 

।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।

।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ । ಶೋಕ ಮೋಹ ವಿವರ್ಜಿತಂ ।। 
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।



ಗುರುನಾಥರ ನುಡಿಗಳು ವೈದ್ಯರನ್ನು ದಿಗ್ಬ್ರಾಂತಗೊಳಿಸುವುದರ ಜೊತೆಗೆ ಯಾವ ಜನ್ಮದ ಸಂಬಂಧವೆಂದು ಚಿಂತಿಸುವಾಗ, ಗುರುನಾಥರು ನಗುತ್ತಾ 'ಇಲ್ಲಿ ಸ್ವಲ್ಪ ದೂರದಲ್ಲಿ ಒಂದು ಶನಿದೇವರ ದೇವಸ್ಥಾನವಿದೆ. ಆದಷ್ಟು ದಿವಸ ಅಲ್ಲಿಗೆ ಹೋಗಿ ಬಾ. ಎಲ್ಲಾ ತಾಪತ್ರಯಗಳೂ ಹರಿಯುತ್ತೆ' ಎಂದರು. 

ಭಕ್ತರಿಗೆ ಏನಾದರೂ ಹೇಳುವಾಗಲೂ ಗುರುನಾಥರು ಸುಲಭವಾದ, ಭಕ್ತರು ಭಕ್ತಿಯಿಂದ ಮಾಡಬಹುದಾದಂತಹ ಸರಳ ಕೆಲಸವನ್ನೇ ಹೇಳುತ್ತಿದ್ದರು. ಇಲ್ಲಿ ವೈದ್ಯರಿಗೂ ಸನಿಹದಲ್ಲಿರುವ ಶನಿದೇವರ ದೇವಸ್ಥಾನಕ್ಕೆ ಹೋಗಲು ತಿಳಿಸಿದರು. ಹೀಗೆ ಪರಿಚಯವಾದ ಗುರುನಾಥರು ಕಡೂರಿಗೆ ಬಂದಾಗಲೆಲ್ಲಾ ದರ್ಶನ ಕೊಡುತ್ತಿದ್ದು, ವೈದ್ಯರ ಕ್ಷೇಮ ಸಮಾಚಾರವನ್ನು ವಿಚಾರಿಸುತ್ತಿದ್ದರು. 

ಮುಂದೊಂದು ದಿನ ಗುರುನಾಥರ ಬಳಿ ಏನೋ ಹೇಳಿಕೊಳ್ಳಲು ಇವರು ಹೋದಾಗ, 'ನನಗೆಲ್ಲಾ ಗೊತ್ತಿದೆ ಸುಮ್ಮನಿರಪ್ಪಾ, ಬಂದಿಲ್ಲಿ ಸುಮ್ಮನೆ.....' ಎಂದು ನಿಲ್ಲಿಸಿಬಿಟ್ಟಿದ್ದನ್ನು ಅವರು ತಿಳಿಸಿದರು. 

ಮತ್ತೊಮ್ಮೆ ಗುರುನಾಥರು ಬಂದಾಗ, ಇವರನ್ನು ಪ್ರೀತಿಯಿಂದ ಡಾಕ್ಟರೇ ಎಂದು ಕರೆಯುತ್ತಾ 'ಅಲ್ಲಪ್ಪಾ, ನಿನ್ನೆ ರಾತ್ರಿ ನೀನು ಈ ರೀತಿ ಯೋಚನೆ ಮಾಡಿದ್ದು ನಿನ್ನಂತಹವನಿಗೆ ಸರಿ ಏನಪ್ಪಾ? ಏನೋ ಯೋಚನೆ ಮಾಡಿದ್ಯಲ್ಲಪ್ಪ ಯಾಕೆ?' ಎಂದು ಗುರುನಾಥರು ಪ್ರಶ್ನಿಸುವುದರ ಜೊತೆಗೆ ಅಂತರಂಗದ ಆಲೋಚನೆಗಳನ್ನೆಲ್ಲಾ ಅರಿತು ಎಚ್ಚರಿಸಿದಾಗ ವೈದ್ಯರು ಸಂಭ್ರಾಂತರಾಗಿದ್ದರು. ಸಕಾಲಿಕ ಪ್ರಜ್ಞೆ, ಎಚ್ಚರಿಕೆ ನೀಡಿ ನಿರ್ದೇಶಿಸುವ ಗುರುನಾಥರು ಅವರಿಗೆ ಸ್ವಯಂ ಶಿವಸ್ವರೂಪಿಯಾಗಿ ಕಂಡರು. 

'ಮುಂದಾಗುವುದು ಗೊತ್ತಾಗುವುದು ಅವಧೂತರಿಗೆ ಮಾತ್ರ. ಹಿಂದಿನದು ಯಾರಾದರೂ ಹೇಳಬಹುದು' ಎಂದು ಸ್ಮರಿಸುವ ಗೌರಿಶಂಕರ್ ಅವರೆನ್ನುತ್ತಾರೆ, 'ವೈಯಕ್ತಿಕ ಯೋಚನೆಗಳನ್ನೂ ಗುರುವಿನ ಬಳಿ ಮುಚ್ಚಿಡಲಾಗದು. ಗುರುವು ನಮ್ಮವನಾದಾಗಲೇ ಅಷ್ಟು ಅಂತರಂಗದ ವಿಚಾರವನ್ನು ನಿರ್ಭೀಡೆಯಾಗಿ ತಿಳಿಸುವುದು' ಎಂದ ಇವರು ಗುರುವಾಣಿಯನ್ನು ಹೀಗೆ ಸ್ಮರಿಸಿದರು. 'ಅಲ್ಲಯ್ಯ, ಯಾಕೆ ಹೀಗೆ ನೀನು ಯೋಚನೆ ಮಾಡಿದೆ?' ಎಂದು ಗುರುಗಳು ಕೇಳಿದಾಗ 'ಏನು ಮಾಡುವುದಪ್ಪ, ನಾನು ಪ್ರಾಪಂಚಿಕ. ಯೋಚನೆಗಳು ಬಂದು ಹೋಗುತ್ತವೆ' ಎಂದಿದ್ದರು. 

ಗುರುನಾಮ ಒಂದೇ ಸಾಕೆಮಗೆ 

ಅದಕ್ಕೆ ಗುರುನಾಥರು 'ನೀನು ಪ್ರಪಂಚದಿಂದ ಬಹುದೂರ ಬಂದಿದೀಯ. ಮತ್ಯಾಕೆ ಅಂತಹ ಯೋಚನೆಗಳು? ನೀನೇನು ಪ್ರಪಂಚದಲ್ಲಿದ್ದೀನಿ ಎಂದು ತಿಳಿದುಕೊಂಡಿದ್ದೀಯಾ? ಪ್ರಪಂಚ ನಿನ್ನಲ್ಲಿದೆ ಅನ್ನುವುದು ತಿಳಿದುಕೋ' ಎಂದು ಮಾರ್ಮಿಕವಾಗಿ ನುಡಿದರಂತೆ. 

ಎರಡು ಮೂರು ಸಾರಿ ಸಖರಾಯಪಟ್ಟಣಕ್ಕೆ ಹೋದಾಗಲೂ ವೈದ್ಯರಿಗೆ ಗುರು ದರ್ಶನವಾಗಲಿಲ್ಲ. ಆದರೆ ಇವರು ಅರಸೀಕೆರೆಯಲ್ಲಿ ಇದ್ದಾಗ ಪಾಂಡುರಂಗನ ದೇವಾಲಯದಲ್ಲಿದ್ದಾಗ ಅಲ್ಲಿಗೇ ಹೋಗಿ ಗುರುನಾಥರು ದರ್ಶನ ನೀಡಿ 'ನೀನು ಇಲ್ಲಿ ಇದೀಯಾ ಅಂತ ಗೊತ್ತಾಯಿತಪ್ಪಾ, ನೋಡಿಕೊಂಡು ಹೋಗೋಣ ಅಂತ ಬಂದೆ' ಅಂದರು. ಇದ್ಯಾಕೆ ನನಗಿಂತಹ ಕರುಣೆ ತೋರಿಸುತ್ತಾರೆಂಬುದೇ ವೈದ್ಯರಿಗೆ ಅರಿಯದಾಗಿತ್ತು. 

ಗುರುನಾಥರಿಗೆ ವೈದ್ಯರು ಏನಾದರೂ ನೀಡಿದರೆ ಅಲ್ಲಿ ಅಕ್ಕಪಕ್ಕದಲ್ಲಿದ್ದವರಿಗೆ ಕೊಟ್ಟು ಬಿಡುತ್ತಿದ್ದರು. ಒಮ್ಮೆ ಇದ್ದಕ್ಕಿದ್ದಂತೆ ಗುರುಗಳು 'ನೀನು ಇಲ್ಲಿ ಜಾಸ್ತಿ ದಿವಸ ಇರೋಲ್ಲ, ಪರಿಸ್ಥಿತಿ ಬಿಗಡಾಯಿಸುತ್ತೆ. ಆದರೆ ನೀನೇನೂ ಹೆದರಲ್ಲ. ಯಾಕೆಂದರೆ ಯಾವಾಗಲೂ 'ಓಂ ನಮಃ ಶಿವಪ್ಪ' ಅಂತಿರ್ತೀಯಲ್ಲಾ' ಎಂದು ಅಂತರಂಗ ಸಾಧನೆಯ ವಿಚಾರವನ್ನು ವೈದ್ಯರಿಗೆ ಹೇಳಿಬಿಟ್ಟರಂತೆ. 

ಹೀಗೆ ಅಪಾರವಾದ ಗುರುನಾಥರ ಪ್ರೀತಿಯ ಸಲಹೆಯನ್ನು ಅನುಭವಿಸಿದ, ಆಧ್ಯಾತ್ಮ ಸಾಧನೆಯ ಮಾರ್ಗದಲ್ಲಿ ಮಾರ್ಗದರ್ಶನ ನೀಡಿದ ಗುರುನಾಥರ ವಿಯೋಗ ಇವರಿಗೆ ಸಹಿಸಲಾರದ ದುಃಖವಾಗಿತ್ತು. 'ಅವನ ನೆನಪಿನಲ್ಲಿಯೇ ಇರಪ್ಪ' ಎನ್ನುವ ಗುರುನಾಥರ ಮಾತುಗಳನ್ನು ವೈದ್ಯರು ಮರೆತಿಲ್ಲ. ಗುರುದೇವ ಗುರುದೇವ ಎಂದು ಜಪ ಮಾಡುವ ಇವರಿಗೆ ಕನಸಿನಲ್ಲಿ ಇತ್ತೀಚೆಗಷ್ಟೇ ಬಂದರಂತೆ. ಇವರೆಲ್ಲೋ ಪುಷ್ಕರಣಿಯೊಂದರ ಬಳಿ ಕುಳಿತಾಗ ಅಲ್ಲಿಗೆ ಬಂದ ಗುರುನಾಥರು 'ಏನಪ್ಪಾ ಇಲ್ಲಿ ಕುಳಿತಿದ್ದೀಯಾ? ಯಾಕೆ ಯೋಚನೆ ಮಾಡುತ್ತಿದ್ದೀಯೋ ಮಹರಾಯ. ಏನು ಸಮಾಚಾರ?' ಎಂದು ಕೇಳಿದರು. ನಂತರ 'ದೇವರು ಒಳ್ಳೆಯದು ಮಾಡ್ತಾನೆ. ಯಾಕೆ ಚಿಂತೆ ಮಾಡ್ತೀಯೋ?' ಎಂದರು. 

ಬೆಳಗಾಗಿ ಹೋಗಿತ್ತು. ಗುರುನಾಥರು ಹೀಗೆ ಸ್ವಪ್ನದಲ್ಲಿ ಬಂದು ಹರಸಿಹೋದ ಘಟನೆಯನ್ನು ಆನಂದದಿಂದ ನಮ್ಮೊಂದಿಗೆ ಹಂಚಿಕೊಂಡ ಗೌರಿಶಂಕರ್ ಅವರು ಗುರುನಾಮ ಒಂದೇ ಜನ್ಮ ಸಾರ್ಥಕ ಸಾಧನವೆನ್ನುತ್ತಾರೆ. 

ಪ್ರಿಯ ಗುರುಬಾಂಧವರೇ, ಇಂದಿನ ಸತ್ಸಂಗ ಬಯಸದೇ ಬಂದ ಭಾಗ್ಯ. ಅದು ಎಲ್ಲರದಾಗಬಾರದೇಕೆ? ನಾಳೆ ಮತ್ತೆ ನಮ್ಮೊಂದಿಗಿರುವಿರಲ್ಲಾ. ನಾಳಿನ ನಿತ್ಯ ಸತ್ಸಂಗ ನಿರಂತರವಾಗಿರಲಿ..... 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ. 

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


For more info visit :  http://srivenkatachalaavadhoota.blogspot.in

No comments:

Post a Comment