ಒಟ್ಟು ನೋಟಗಳು

Sunday, April 2, 2017

ಶ್ರೀ ಸದ್ಗುರುನಾಥ ಲೀಲಾಮೃತ  - 2 

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ನಿತ್ಯ ಸತ್ಸಂಗ  - 24

 

ಬಾಣಾವರ ಮಹಾತ್ಮೆ 


 

।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।

।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ । ಶೋಕ ಮೋಹ ವಿವರ್ಜಿತಂ ।। 
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।


ಪ್ರಿಯ ಗುರು ಬಾಂಧವರೇ, ನಾವೀಗ ನಾಲ್ಕುನೂರು ವರ್ಷಗಳ ಹಿಂದಿನ ಘಟನೆಯೊಂದನ್ನು ಅರಿಯಲು ಅತ್ತ ಸಾಗುತ್ತಿದ್ದೇವೆ. ಅಯ್ಯನ ಮನೆತನದವರೆಂದು ಪ್ರಸಿದ್ಧರಾದ, ಎಳ್ಳಂಬಳಸೆಯ ಮೂಲದ ಕುಟುಂಬ ಒಂದು ಬಾಣಾವರದಲ್ಲಿ ಬಂದು ನೆಲೆಸಿತ್ತು. ಸದ್ಭಕ್ತರೂ, ಮಹಾನ್ ಸಾಧಕರೂ ಆದ ಕುಟುಂಬದ ಪ್ರಮುಖರು ಬಹುದೊಡ್ಡ ಯೋಗಿಗಳು, ಅವಧೂತರು ಅವರೇ ಕೃಷ್ಣ ಯೋಗಿಂದ್ರ ಸರಸ್ವತಿಗಳು. 

ಒಮ್ಮೆ ಬಾಣಾವರದಲ್ಲಿ ಅನೇಕ ಜನ ಕಾಶೀಯಾತ್ರೆ ಮಾಡಲು ಹೊರಟರು. ಪ್ರತಿಯೊಬ್ಬರಿಗೂ ಜೀವಿತದಲ್ಲಿ ಒಮ್ಮೆ ಕಾಶಿಯನ್ನು ಕಾಣುವ, ಕಾಶಿಯ ಗಂಗೆಯಲ್ಲಿ ಮಿಂದು ತಮ್ಮ ಜನ್ಮವನ್ನು ಪವಿತ್ರ ಮಾಡಿಕೊಳ್ಳುವ ಅಭಿಲಾಷೆ ಇರುತ್ತದೆ. ಇದು ಸಹಜವೂ ಹೌದು. ಅದರಲ್ಲಿಯೂ ನಮ್ಮ ಅಕ್ಕಪಕ್ಕದವರು, ಜೊತೆಯವರು ಕಾಶೀಯಾತ್ರೆ ಮಾಡುತ್ತಾರೆಂದರೆ "ನಮಗೂ ಇಂತಹ ಭಾಗ್ಯ ದೊರಕಿಸಪ್ಪ.. ನಮ್ಮಿಂದ ಕಾಶೀಯಾತ್ರೆ ಮಾಡಲಾಗುತ್ತಿಲ್ಲವಲ್ಲ" ಎಂದು ದೈನ್ಯವಾಗಿ ಆ ಪ್ರಭುವಿನಲ್ಲಿ ಬೇಡುವುದು ಸಹಜ. ಅಂತೆಯೇ ಬಾಣಾವರದಲ್ಲಿ ಕೃಷ್ಣ ಯೋಗಿಂದ್ರ ಸರಸ್ವತಿಯವರ ತಾಯಿಯೂ ಬೇಡಿದರಂತೆ. ತಾಯಿಯ ಹಂಬಲವನ್ನರಿತ ಗುರುಗಳು "ನೀನ್ಯಾಕೆ ಅಲ್ಲಿಗೆ ಹೋಗಬೇಕಮ್ಮಾ? ಕಾಶಿಯ ಗಂಗೆಯನ್ನೇ ತರಿಸುತ್ತೇನೆ" ಎಂದು ಎದುರಿಗಿದ್ದ ಗೋಡೆಯನ್ನು ಗುದ್ದಿದರಂತೆ. ಸದ್ಗುರುಗಳಿಗೆ ಅಸಾಧ್ಯವಾದುದು ಏನಿದೆ? ಆ ಕೂಡಲೇ ಆ ಗೋಡೆಯಿಂದ ಭಾಗೀರಥಿ ಹೊರ ಬಂದಳು. ಆ ಗುರುಮಾತೆ ಕಾಶಿಯ ಗಂಗೆಯಲ್ಲಿ ಮಿಂದು ಕೃತಾರ್ಥರಾದರಂತೆ. 

ಉತ್ತರದ ಕಾಶಿ ಎಲ್ಲಿ? .... ದಕ್ಷಿಣದ ಈ ತುದಿಯ ಬಾಣಾವರವೆಲ್ಲಿ? ಗುರು ಸಾಮರ್ಥ್ಯ ಏನೂ ಆಗಿಸಬಲ್ಲದೆಂಬುದಕ್ಕೆ ಇದು ಒಂದು ಸಣ್ಣ ಉದಾಹರಣೆ ಅಷ್ಟೇ. ಅಂತಹ ಮಹಾ ಸಮರ್ಥರು ಕೃಷ್ಣ ಯೋಗಿಂದ್ರ ಸರಸ್ವತಿಗಳು. 

ಓದುಗ ಬಂಧುಗಳೇ, ಇವತ್ತಿನ ನಿತ್ಯ ಸತ್ಸಂಗದಲ್ಲಿ ಸಖರಾಯಪಟ್ಟಣದ ಗುರುನಾಥರ ವಿಚಾರದ ಬದಲು ಮತ್ತೊಬ್ಬ ಮಹನೀಯರ ಸಂಗತಿ ಬರುತ್ತಿದೆ ಎಂದು ಚಿಂತಿಸುತ್ತಿರುವಿರಲ್ಲ? ಕಣ್ಣರಿಯದಿದ್ದರೂ ಕರುಳರಿಯದೇ? ಎಂಬ ಮಾತೊಂದಿದೆ. ಬಾಣಾವರದ ಕೃಷ್ಣ ಯೋಗಿಂದ್ರ ಮಹಾತ್ಮರಿಗೂ ಸಖರಾಯಪಟ್ಟಣದ ವೆಂಕಟಾಚಲ ಅವಧೂತರಿಗೂ ಬಹು ದೊಡ್ಡ ಸಂಬಂಧವಿದೆ, ಅನುಬಂಧವಿದೆ, ಜನುಮ ಜನುಮಗಳ ನಂಟಿದೆ. ಹಾಗಾಗಿಯೇ ಗುರುನಾಥರ ಸತ್ಸಂಗದಲ್ಲಿ ಬಾಣಾವರಕ್ಕೆ ಮಹತ್ತರವಾದ ಸ್ಥಾನವಿದೆ. ಹೇಗೆ ಏನೆಂಬುದು ಚಿದಂಬರ ರಹಸ್ಯ... ಆದರೂ ದೊರೆತ ಮಾಹಿತಿಗಳು ಭಾವುಕ ಭಕ್ತರಿಗಿಲ್ಲಿದೆ. 

ಕಡೂರು ಅರಸೀಕೆರೆಯ ಮಧ್ಯದಲ್ಲಿ ಬಾಣಾವರ ಎಂಬ ಊರಿದೆ. ಎಲ್ಲರಿಗೂ ಇದರ ಪರಿಚಯವಿರಬಹುದು. ನೂರಾರು ಬಾರಿ ನಾವು ನೀವೆಲ್ಲಾ ಆ ರಸ್ತೆಯಲ್ಲಿ ಓಡಾಡಿರಬಹುದು. ಆದರೆ ಊರ ಒಳಗೆ ಹೋಗಿ ಒಂದು ಮೈಲಿಯಷ್ಟು ಮುಂದೆ ಸಾಗಿದರೆ ಎಡ ಭಾಗದಲ್ಲಿ ಸುಂದರ ಪುಷ್ಕರಣಿಯೊಂದು ಕಂಗೊಳಿಸುತ್ತದೆ. ಸಸ್ಯಶ್ಯಾಮಲೆಯ ನಡುವೆ, ಪ್ರಶಾಂತ ವಾತಾವರಣದಲ್ಲಿ ಬಹುದೊಡ್ಡ ಯತಿಗಳೊಬ್ಬರು ಸಜೀವ ಸಮಾಧಿಯಲ್ಲಿ ಲೋಕಹಿತ, ಮನುಕುಲ ಹಿತವನ್ನು ನಿರಂತರ ಬಯಸುತ್ತ, ಬಂಡ ಮುಮುಕ್ಷುಗಳಿಗೆ ಮೋಕ್ಷದ ಹಾದಿ ತೋರಿಸುತ್ತ ಸಮಾಧಿಯಂತರ್ಗತದಲ್ಲಿ 1610ರಿಂದ ಆವಾಸವಾಗಿದ್ದಾರೆ. ಅವರೇನಮ್ಮಾ ಬಾಣಾವರದ ಆಧ್ಯಾತ್ಮಿಕ ಮುಕುಟ ಮಹಾನ್ ಅವಧೂತರಾದ ಶ್ರೀ ಕೃಷ್ಣ ಯೋಗಿಂದ್ರ ಸರಸ್ವತಿಯವರು. 

ಅನೇಕ ಪವಾಡಗಳನ್ನೇ ಮೆರೆದ ಈ ಯತಿಗಳ ಈ ಸಮಾಧಿಸ್ಥಳ ಮೂವತ್ತೈದು ದಶಕಗಳವರೆಗೆ ಕೇವಲ ಅವರ ಪರಿವಾರದವರ ಆರಾಧನಾ ಸ್ಥಳವಾಗಿ ಒಂದು ರೀತಿ ಗುಪ್ತವಾಗಿಯೇ ಇದ್ದಿತು. 

ಸಿಹಿಯನ್ನು ಅದೆಷ್ಟು ದಿವಸ ಬಚ್ಚಿಡಲು ಸಾಧ್ಯ? ಸಖರಾಯಪಟ್ಟಣದ ಗುರುನಾಥರಿಗೆ ಇದರ ಪರಿಚಯವಿತ್ತು. ಅನೇಕ ಬಾರಿ ಇಲ್ಲಿ ಬಂದು ಈ ಮಹಾನ್ ಚೇತನದೊಂದಿಗೆ ಅದೇನೇನು ಸಂಧಾನ, ಒಸಗೆಗಳನ್ನು ಮಾಡಿ ಬೆಸುಗೆಯನ್ನು ಬೆಸೆದುಕೊಂಡರೋ.. ಶಿಥಿಲವಾಗಿದ್ದ ಆ ಜೀವ ಸಮಾಧಿಯನ್ನು ಪುನರುತ್ಥಾನಗೊಳಿಸುದುದಲ್ಲದೇ.. ತಮ್ಮ ಭಕ್ತ ವೃಂದಕ್ಕೂ ಅದರ ಪರಿಚಯ ಮಾಡಿಸಿ, ಇಷ್ಟ ಬಂದಾಗಲೆಲ್ಲಾ ತಮ್ಮ ಶಿಷ್ಯ ವೃಂದವನ್ನು ಇಲ್ಲಿಗೆ ಕಳುಹಿಸಿ ಅಲ್ಲಿ ಸೇವೆ ಮಾಡಲು ಹೇಳುತ್ತಿದ್ದರಂತೆ. 

ಯಾವ ಜಂಜಾಟವೂ ಬೇಡವೆಂದು ಸಮಾಧಿಯೊಳಗೆ ಸಜೀವ ಸಮಾಧಿಯಾಗಿ ತಪಸ್ಸಿನಲ್ಲಿದ್ದವರು ಬಂದವರ ಅದಾವಾವ ಬೇಡಿಕೆಗಳನ್ನು ಪೂರೈಸಿದರೋ ಈಗ ಅದೊಂದು ಯಾತ್ರಾ ಸ್ಥಳವಾಗಿದೆ. 

ಮತ್ತೊಂದು ವಿಶೇಷವೆಂದರೆ ಸಖರಾಯಪಟ್ಟಣದ ಗುರುನಾಥರು ಜಗದ್ಗುರು ಚಂದ್ರಶೇಖರ ಭಾರತಿ ಸ್ವಾಮಿಗಳ ಭಾವ ಬೃಂದಾವನವನ್ನು ನೂರೆಂಟು ಕಡೆ ನಿರ್ಮಿಸಿ ತಮ್ಮ ಭಕ್ತ ಬಳಗಕ್ಕೆ ಸುಲಭವಾಗಿ ಅಲ್ಲಲ್ಲೇ ಶ್ರೀ ಶ್ರೀ ಚಂದ್ರಶೇಖರ ಭಾರತಿಗಳ ದಿವ್ಯ ಸಾನ್ನಿಧ್ಯ ದೊರಕುವಂತೆ ಮಾಡಲು ಮನ ಮಾಡಿದಾಗ, ಮೊಟ್ಟ  ಮೊದಲ ಬೃಂದಾವನವನ್ನು ತಮ್ಮ ಗುರುಗಳಾದ ಕೃಷ್ಣ ಯೋಗಿಂದ್ರ ಸರಸ್ವತಿಯವರ ಬೃಂದಾವನದ ಸನಿಹದಲ್ಲೇ ನಿರ್ಮಿಸಿದ ವಿಚಾರ ತಿಳಿದವರು ವಿರಳ... ಗುರುನಾಥರ ಲೀಲೆಯೇ ಹೀಗೆ... ಎಲ್ಲವನ್ನೂ ತಾವು ಮಾಡಿದರೂ ನನಗೂ ಇದಕ್ಕೂ ಏನೂ ಸಂಬಂಧವಿಲ್ಲ.. ಎಲ್ಲಾ ಮಹಾತ್ಮರದೆಂದು ತಿಳಿಸಿ ಹುಷಾರಾಗಿ ಯಾರ ಕೈಗೂ ಸಿಗದೇ ಜಾರಿಕೊಂಡು ಹಿಂದೆಲ್ಲೋ ನಿಂತುಬಿಡುತ್ತಿದ್ದುದು..... 

ಬಾಣಾವರಕ್ಕೂ ಗುರುನಾಥರಿಗೂ ಇರುವ ಅವಿನಾಭಾವ ಸಂಬಂಧವರಿಯಲು ನಮ್ಮೊಂದಿಗೆ ನಾಳಿನ ಸತ್ಸಂಗಕ್ಕೆ ಬರುವಿರಲ್ಲ. ಅವರೂ..... ಅವರ ಭಕ್ತರೂ ನೀಡಿದ ಸದ್ವಿಚಾರವೆಂಬ ಅಮೃತವನ್ನು ಮೆಲ್ಲುವಿರಲ್ಲಾ?  

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ. 

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


For more info visit :  http://srivenkatachalaavadhoota.blogspot.in 

1 comment:

  1. Poojya venkatachala gurugalige nanna bhakti poorvaka namanagalu. Sarvarannu Yella kaaladalli olleyadaaguvante asheervadisi Kaapadi Guruvarya. Sarve jano sukinobavantu.

    ReplyDelete