ಶ್ರೀ ಸದ್ಗುರುನಾಥ ಲೀಲಾಮೃತ - 2
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 39
ಗುರು ಕೊಡುವುದು ಹೀಗೆ . . . . ಅನಂತ, ಅಪಾರ
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ । ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।
ಗುರುವೆಂದು ಒಮ್ಮೆ ನಂಬಿದ ಮೇಲೆ ಗುರುವಾಕ್ಯದಲ್ಲಿ ನಂಬಿಕೆ ಇಡಬೇಕೇ ಹೊರತು ಅದನ್ನು ವಿಮರ್ಶಿಸುವುದಾಗಲೀ, ಅದರ ಬಗ್ಗೆ ಎರಡನೆಯ ಚಿಂತೆ ಮಾಡುವುದಾಗಲೀ ಮಹಾ ಪಾಪ ಎಂದು ಗುರುನಾಥರು ಆಗಾಗ್ಗೆ ನುಡಿಯುತ್ತಿದ್ದರಂತೆ. ಗುರುಕಥಾಮೃತವನ್ನು ನಮ್ಮ ಬ್ರಹ್ಮಾನಂದ ಗುರೂಜಿ ಹೀಗೆ ಮುಂದುವರೆಸಿದರು.
'ಊರಿನ ಅಭಿವೃದ್ಧಿ, ದೇವಸ್ಥಾನದ ಅಭಿವೃದ್ಧಿಗೂ ಮೀನಿನ ಬಲೆಗೂ ಏನು ಸಂಬಂಧ? ಎಂದು ಒಂದು ಕ್ಷಣ ಯೋಚನೆ ಬಂದರೂ, ಮರುಕ್ಷಣದಲ್ಲಿ ಏನಾದರಾಗಲೀ ಗುರುವಾಕ್ಯ ಪರಿಪಾಲನೆ ಮಾಡಬೇಕೆಂದು ತೀರ್ಮಾನಿಸಿದೆವು. ನಂತರ ಆರತಿ, ಪರಾಕುಗಳನ್ನು ಹೇಳಿ ಉಪಾಹಾರವಾದ ಮೇಲೆ ಗುರುನಾಥರು ಎಲ್ಲರನ್ನೂ ಹರಸಿ ಬೀಳ್ಕೊಟ್ಟರು. ಗುರುವಾಕ್ಯದಂತೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮೀನಿನ ಬಲೆ ತರಿಸಿ, ಮಣೆಯ ಮೇಲಿಟ್ಟು ಮರಳು ಹಾಕಿ ಅದರ ಮೇಲೆ ಮೀನಿನ ಬಲೆಯನ್ನಿಟ್ಟು ಅದರ ಮೇಲೆ ಅರಿಶಿನದ ಕೊಂಬನ್ನಿಟ್ಟು ಪ್ರತಿನಿತ್ಯ ಅರಿಶಿನ ಕುಂಕುಮ ಹೂವುಗಳಿಂದ ಪೂಜೆ ಸಲ್ಲಿಸಿದರು. ಆ ವರ್ಷ ಭರಮಸಾಗರ ಹಾಗೂ ಸುತ್ತಮುತ್ತಲೂ ಗುರುನಾಥರ ಕೃಪೆಯಿಂದ ಕುಂಭದ್ರೋಣ ಮಳೆಯಾಗಿ, ಮೂವತ್ತು ವರ್ಷಗಳಿಂದ ತುಂಬದಿದ್ದ ಭರಮಸಾಗರದ ಕೆರೆ ತುಂಬಿ ಕೋಡಿ ಬಿದ್ದು ಇಡೀ ಊರಿಗೆ ಊರೇ ಹರ್ಷಗೊಂಡು, ಕೆರೆಗೆ ಬಾಗಿನ ಅರ್ಪಿಸಿ ಅನ್ನಸಂತರ್ಪಣೆ ಮಾಡಿದರು. ಸುತ್ತಮುತ್ತಲ ತೋಟ, ಹೊಲಗದ್ದೆಗಳಿಗೆ ಸಮೃದ್ಧವಾದ ನೀರು ಸಿಕ್ಕಿ ರೈತರು ಉತ್ತಮವಾದ ಫಸಲು ತೆಗೆದರು. ಇದರಿಂದ ರೈತರ ಕೈಯಲ್ಲಿ ಧನಲಕ್ಷ್ಮಿ ತಾಂಡವ ಮಾಡುತ್ತಿದ್ದಳು. ಊರ ಕೆರೆ ತುಂಬಿದ್ದನ್ನು ನೋಡಿ ದೊಡ್ಡ ದೊಡ್ಡ ಬೆಸ್ತರು (ಮೀನುಗಾರರು) ಮೀನು ಹಿಡಿಯಲು ಗ್ರಾಮ ಪಂಚಾಯತಿಯಿಂದ ಕಾಂಟ್ರಾಕ್ಟ್ ತೆಗೆದುಕೊಂಡು, ಕೆರೆಗೆ ಮೀನಿನ ಮರಿಗಳನ್ನು ಬಿಟ್ಟು, ತದ ನಂತರ ಪ್ರತಿ ಸೋಮವಾರ ಬಲೆ ಹಾಕಿ ಅತ್ಯಂತ ದೊಡ್ಡ ದೊಡ್ಡ ಮೀನು ಹಿಡಿದು, ಬೇರೆ ಬೇರೆ ಕಾಡಿಗೆ ಲಾರಿಯಲ್ಲಿ ವ್ಯಾಪಾರಕ್ಕೊಯ್ದರು..... ಇಷ್ಟಾದ ಮೇಲೆ ನಮಗೆ ಗುರುನಾಥರು 'ಮೀನಿನ ಬಲೆ ಇಟ್ಟು ಪೂಜಿಸಲು' ಏಕೆ ಹೇಳಿದರು ಎಂದು ಗೊತ್ತಾಯ್ತು. ಮಳೆಯಿಂದ ಬೆಳೆ - ಬೆಳೆಯಿಂದ ರೈತರಿಗೆ ಹಣ, ಕೆರೆಯಲ್ಲಿ ನೀರಿದ್ದರೆ ಮೀನು - ಅದರ ಮಾರಾಟದಿಂದ ಧನಪ್ರಾಪ್ತಿ, ಇದರಿಂದ ಗ್ರಾಮದ ಸರ್ವತೋಮುಖ ಅಭಿವೃದ್ಧಿಯಾಯಿತು. ಹೀಗೆ ಗುರು ನೀಡುವಾಗ ಸಂತೃಪ್ತಿಯಾಗಿ ತುಂಬಿ ತುಳುಕಾಡುವಂತೆ ನೀಡುತ್ತಾನೆ. ಇದು ನಮ್ಮ ಸದ್ಗುರುನಾಥರ ಕೃಪಾವಿಶೇಷ'.
ಪದೇ ಪದೇ ಗುರುನಾಥರ ದರ್ಶನ ಲಾಭ - ಸುಯೋಗ
'ಬೆಂಗಳೂರಿನಲ್ಲಿ ವೆಂಕಟಾಚಲ ಅವಧೂತರ ತಂಗಿ ವಿಜಯಮ್ಮನವರ ಮನೆಯಲ್ಲಿ ಒಂದು ದಿನ ಅಕಸ್ಮಾತ್ ಗುರುನಾಥರ ದರ್ಶನ ಭಾಗ್ಯ ತೊರೆಯಿತು. ತುಂಬಾ ಪ್ರೀತಿಯಿಂದ ಮಾತನಾಡಿಸಿ ನನಗೆ ಭಿಕ್ಷೆ (ಅನ್ನಪ್ರಸಾದ) ಹಾಕಿಸಿದರು. ಅನಂತರ ನನಗೂ ಗುರುನಾಥರಿಗೆ ಊಟ ಮಾಡಿಸುವ ಭಾಗ್ಯವನ್ನು ಕರುಣಿಸಿದರು. ಅನಂತರ ಭಕ್ತರಿಂದ ವಸ್ತ್ರ ಕಾಣಿಕೆಗಳನ್ನು ಕೊಡಿಸಿ ಕಳುಹಿಸಿದರು'.
ಅದೃಷ್ಟ ಬರಲಿದೆ ಎಂದಾಗ ಎಚ್ಚೆತ್ತು ಅದರ ಸದುಪಯೋಗ ಮಾಡಿಕೊಳ್ಳಬೇಕು. ಅದರಲ್ಲೂ ಸಾಧು ಸತ್ಪುರುಷರ ದರ್ಶನ, ಅವರ ಸೇವೆ ಒದಗಿ ಬರುವುದು ದುರ್ಲಭ. . . ಶ್ರೀ ಬ್ರಹ್ಮಾನಂದ ಗುರೂಜಿಯವರು ಮತ್ತೆ ಗುರುನಾಥರ ಸಾನ್ನಿಧ್ಯದ ಇನ್ನೊಂದು ಪ್ರಸಂಗವನ್ನು ನೆನೆದುಕೊಂಡರು.
'ಒಮ್ಮೆ ನಾನು ಬೆಂಗಳೂರಿಗೆ ಹೋಗಿದ್ದೆ. ಅಲ್ಲಿನ ಕೆಲಸ ಮುಗಿದು ಭರಮಸಾಗರಕ್ಕೆ ಹೋಗಿ ನಂತರ ಮೂರು ನಾಲ್ಕು ದಿನ ಬಿಟ್ಟು ಮೈಸೂರಿನಲ್ಲಿ ಒಂದು ಕಾರ್ಯಕ್ರಮಕ್ಕೆ ನಾನು ಹೋಗಬೇಕಿತ್ತು. ಇನ್ನೇನು ಊರಿಗೆ ಹೋಗಿ ಬರುವುದು? ಅರಸೀಕೆರೆಯ ಶಂಕರಲಿಂಗ ಆಶ್ರಮದಲ್ಲಿ ನಾಲ್ಕು ದಿನಗಳಿದ್ದು, ಅಲ್ಲಿಂದಲೇ ನೇರವಾಗಿ ಮೈಸೂರಿನ ಕಾರ್ಯಕ್ರಮಕ್ಕೆ ಹೋದರಾಯಿತೆಂದು ಅರಸೀಕೆರೆಯ ಆಶ್ರಮಕ್ಕೆ ಹೋದೆ. ಅಲ್ಲಿರುವಾಗ ಹೆಬ್ಬಳ್ಳಿಯ ದತ್ತಾವಧೂತರು ಸಖರಾಯಪಟ್ಟಣದಿಂದ ತಮ್ಮ ಭಕ್ತರೊಂದಿಗೆ ಬಂದರು. ಆಶ್ರಮದಲ್ಲಿ ಅವರಿಗೆ ಸ್ವಾಗತ, ಆತಿಥ್ಯಗಳನ್ನು ಮಾಡಿದರು. ಅಷ್ಟರಲ್ಲಿ ಸಖರಾಯಪಟ್ಟಣದ ಗುರುನಾಥರಿಂದ 'ದತ್ತಾವಧೂತರು ಅವರ ಶಿಷ್ಯರುಗಳೆಲ್ಲಾ ಕೂಡಲೇ ಸಖರಾಯಪಟ್ಟಣಕ್ಕೆ ಬರುವುದು' ಎಂದು ದೂರವಾಣಿ ಕರೆ ಬಂದಿತು. ಆಗ ನಾನೂ ಏಕೆ ಹೋಗಿ ಅವಧೂತರ ದರ್ಶನ ಮಾಡಬಾರದು? ಎಂದು ಅವರೊಂದಿಗೆ ಹೋದೆ. ಸಖರಾಯಪಟ್ಟಣಕ್ಕೆ ಹೋಗುತ್ತಿದ್ದಂತೆ ಗುರುನಾಥರು ಆರತಿ ಮಾಡಿಸಿ, ಸತ್ಸಂಗ, ಭಜನೆಗಳನ್ನು ನಡೆಸಿ ಎಲ್ಲರಿಗೂ ಊಟ ಹಾಕಿಸಿ ಕೈತುಂಬಾ ದಕ್ಷಿಣೆಗಳನ್ನು ಕೊಡಿಸಿ ಆದರಿಸಿದರು. ನಮಗೆ ಮಾತ್ರ ಚಿಕ್ಕಮಗಳೂರಿನ ನಾಗರಾಜ ವಕೀಲರ ಮನೆಗೆ ಹೋಗಲು ಹೇಳಿದರು. ರಾತ್ರಿ ಅವರ ಮನೆಯಲ್ಲಿ ಮಲಗಿ ಬೆಳಿಗ್ಗೆ ಹೋಗಲು ತಿಳಿಸಿದರು. ಅವರ ಮನೆ ತಲುಪಿ ರಾತ್ರಿ ಅಲ್ಲಿದ್ದು, ಬೆಳಿಗ್ಗೆ ಎದ್ದು ಸ್ನಾನ ಜಪಾನುಷ್ಠಾನಗಳನ್ನು ಮುಗಿಸಿ, ವಕೀಲರ ಕುಟುಂಬದ ಸದಸ್ಯರೊಂದಿಗೆ ಗುರುನಾಥರ ಲೀಲಾಮೃತವನ್ನು ಚಿಂತಿಸಿ, ಇನ್ನೇನು ಅರಸೀಕೆರೆಗೆ ಹೋಗಲು ಯೋಚಿಸುತ್ತಿದ್ದಾಗ, ಗುರುನಾಥರು ತಮ್ಮ ಭಕ್ತರೊಂದಿಗೆ ಅಲ್ಲಿಗೆ ಬಂದು ಬಿಸಿ ಬಿಸಿ ರವೆ ಇಡ್ಲಿಯನ್ನು ತಂದು ನನಗೂ, ದತ್ತಾವಧೂತರಿಗೂ ಸಂತೃಪ್ತಿಯಾಗಿ ತಿನ್ನಿಸಿ, ನನ್ನನ್ನು ಇಲ್ಲೇ ಇರಿ ಎಂದು ಹೇಳಿ ದತ್ತಾವಧೂತರು ಮತ್ತವರ ಶಿಷ್ಯರನ್ನು ಬೀಳ್ಕೊಟ್ಟರು'.
ನಾವೊಂದು ಎಣಿಸಿದರೆ - ಗುರು ಒಂದು ಚಿಂತಿಸುತ್ತಿರುತ್ತಾನೆ, ಗುರುವಿನ ತೀರ್ಮಾನದಲ್ಲೇ ನಮ್ಮ ಹಿತವಿದೆ. ಅವರು ಹೇಳಿದಂತೆ ನಡೆಯುವುದೊಂದೇ ನಮ್ಮ ಸೌಭಾಗ್ಯ. ಗುರು ಬಾಂಧವರೇ, ನಾಳೆ ನಮಗೇನು ಗುರುನಾಥರು ಪ್ರಸಾದಿಸುತ್ತಾರೋ.... ನಾಳಿನ ನಿತ್ಯ ಸತ್ಸಂಗಕ್ಕೆ ಬರುವಿರಲ್ಲಾ......
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
No comments:
Post a Comment