ಒಟ್ಟು ನೋಟಗಳು

Wednesday, April 5, 2017

ಶ್ರೀ ಸದ್ಗುರುನಾಥ ಲೀಲಾಮೃತ  - 2 

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ನಿತ್ಯ ಸತ್ಸಂಗ  - 27

 

ಚಿಂದಿ ಆಯುವವರಲ್ಲ.... ದತ್ತ ಸ್ವರೂಪಿಗಳು   


 

।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।

।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ । ಶೋಕ ಮೋಹ ವಿವರ್ಜಿತಂ ।। 
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।


ಗುರುನಾಥರ ಹತ್ತಿರದ ಬಂಧುಗಳೊಬ್ಬರು ತಮಗೆ ಗುರುನಾಥರ ಸಾನ್ನಿಧ್ಯ ದೊರೆತ ರೀತಿಯನ್ನು ಹೀಗೆ ವಿವರಿಸಿದರು. 1985-90 ರಲ್ಲಿ ನಮ್ಮ ಮನೆಯಲ್ಲಿ ಒಬ್ಬ ಅಜ್ಜಿ ಇದ್ದರು. ಅವರು ಶಂಕರಲಿಂಗ ಭಗವಾನರ ಅನನ್ಯ ಸೇವೆ ಮಾಡಿದವರಲ್ಲೊಬ್ಬರು. ನಮ್ಮ ಮನೆಗೆ ಬಂದಾಗ ಗುರುನಾಥರ ಲೀಲೆಗಳನ್ನು ಮಾತನಾಡಿಕೊಳ್ಳುತ್ತಿದ್ದರು. 

ಒಮ್ಮೆ ತಂಗಿಯ ಮನೆಗೆ ಗುರುನಾಥರು ನಾಲ್ಕು ಜನ ಗುರುಭಕ್ತರೊಂದಿಗೆ ಬಂದಿದ್ದರು. ಮನೆಯಲ್ಲಿ ತಿಂಡಿಯ ಸಮಯ. ಆದರೆ ಅಲ್ಲಿದ್ದುದು ಕೇವಲ ನಾಲ್ಕು ಇಡ್ಲಿಗಳು. ಎಲ್ಲರಿಗೂ ಕೊಡಬೇಕೆಂದರೆ ಸಾಕಾಗದ ಪರಿಸ್ಥಿತಿ. ಮನೆಯಲ್ಲಿದ್ದ ಬಾಳೆ ಹಣ್ಣನ್ನು ದತ್ತಾರ್ಪಣೆ  ಎಂದು ಬಂದವರಿಗೆ ಕೊಟ್ಟರು. ಗುರುನಾಥರು ಹಣ್ಣನ್ನು ಹಾಗೆಯೇ ಹಿಡಿದುಕೊಂಡಿದ್ದರು. ಅದನ್ನು ಮೂರು ಭಾಗ ಮಾಡಿಕೊಂಡರು. 

ಎಲ್ಲರೂ ನೋಡುತ್ತಿದ್ದಂತೆ ಜಹೊರಬಂದ ಗುರುನಾಥರು, ಆಗ ತಾನೇ ಎದುರಿಗೆ ಬಂದ ಮೂರು ಚಿಂದಿ ಆಯುವ ಹುಡುಗರಿಗೆ ಹಣ್ಣನ್ನು ತಿನ್ನಿಸಿ "ದತ್ತನಿಗೆ ಸಮರ್ಪಿತವಾಯಿತು. ಇವರು ಚಿಂದಿ ಆಯುವ ಹುಡುಗರಲ್ಲ. ಇವರೇ ದಟ್ಟ ಸ್ವರೂಪಿಗಳು" ಎಂದರಂತೆ. 

ಗುರುನಾಥರನ್ನು ಅನೇಕರು ದಟ್ಟ ಸ್ವರೂಪಿಗಳೆಂದೇ ಭಾವಿಸುವುದು. "ಯದ್ಭಾವಂ ತದ್ಭವತಿ" ಎಂಬಂತೆ ಮನೆಯಲ್ಲಿರುವುದನ್ನು ದತ್ತಾರ್ಪಣ ಎಂದು ಮನೆಯವರು ನೀಡಿದ್ದರೇನೋ, ಗುರುನಾಥರು ಆ ಭಾವನೆಯನ್ನು ಸಾಕಾರಗೊಳಿಸಿದ್ದರು. 

"ಹೀಗೆ ಗುರುನಾಥರ ಲೀಲೆಗಳು ಅನೇಕ ಇವೆ.. ಇವತ್ತೂ ನಮ್ಮನ್ನು ರಕ್ಷಿಸುತ್ತಿದ್ದಾರೆ ಗುರುನಾಥರು. ನಾವಿಷ್ಟೊಂದು ಆನಂದವಾಗಿ, ನೆಮ್ಮದಿಯಿಂದ ಅವರ ಸೇವೆ ಮಾಡುತ್ತಾ ಜೀವನ ಸಾಗಿಸುತ್ತಿರುವುದೇ, ಅವರಿಂದೂ ಇರುವುದಕ್ಕೆ ಸಾಕ್ಷಿ" ಎಂದರು. 

ಗೋಣಿ ಚೀಲದಲ್ಲಿದೆ ಶಿವಲಿಂಗ : 


ಮುಂದೆ ಗುರುನಾಥರ ಲೀಲೆಯ ಮತ್ತೊಂದು ಪ್ರಸಂಗ ಹೀಗೆ ಪ್ರಕಟವಾಯಿತು. ಗುರುನಾಥರು ಶ್ರೀ ಶ್ರೀ ಚಂದ್ರಶೇಖರ ಭಾರತೀ ಸ್ವಾಮಿಗಳ ಭಾವ ಸಮಾಧಿಯನ್ನು ನಿರ್ಮಿಸಲು ಆಯ್ದುಕೊಂಡ ಮೊದಲ ಕ್ಷೇತ್ರವಾದ ಬಾಣಾವರದಲ್ಲಿ, ನಿರ್ಮಾಣ ಕಾರ್ಯ ಸಾಗುತ್ತಿತ್ತು. ಅಲ್ಲಿ ಕೂರಿಸಿ ಪೂಜಿಸಲು ಶಿವಲಿಂಗದ ಬಾಣಕ್ಕಾಗಿ ನರ್ಮದಾ ತೀರದಿಂದ ಬಾಣ ತರಿಸುವುದೆಂದು ಶಿಷ್ಯರನ್ನು ಕಳಿಸಿದರು. 

ಅಲ್ಲಿ ಹೋಗಿ ಹುಡುಕಾಡಿ, ಎಲ್ಲಿಯೂ ಶಿವಲಿಂಗದ ಬಾಣ ಸಿಗದಾಗ ಗುರುನಾಥರನ್ನು ಕೇಳಿದರಂತೆ. ಅದಕ್ಕವರು ಇಲ್ಲಿಂದಲೇ "ಅಲ್ಲೇ ನೋಡಿರಯ್ಯಾ, ಒಂದು ಗೋಣಿಚೀಲದಲ್ಲಿ ಬಾಣವನ್ನು ಇಟ್ಟುಕೊಂಡು ಒಬ್ಬ ಮಾರಲು ತಂದಿದ್ದಾನೆ. ಬಹು ಬೆಲೆ ಬಾಳುವುದು ಅದನ್ನೇ ತನ್ನಿರಿ ಕೊಡುತ್ತಾನೆ" ಎಂದರಂತೆ. ಲಕ್ಷಗಳ ಮೌಲ್ಯದ್ದಾಗಿತ್ತು ಅದು. 

ಗುರುವಿನ ಅನುಮತಿ ರಾಜಾಜ್ಞೆಯನ್ನು ಮೀರಿದ್ದು. ಅಂತೂ ಶಿಷ್ಯರುಗಳು ಪತ್ತೆ ಹಚ್ಚಿದರು. ಆ ಗೋಣಿಚೀಲದಲ್ಲಿದ್ದ ಬಾಣಲಿಂಗ ಸರ್ವ ಶ್ರೇಷ್ಠವಾದುದು. ಕೊನೆಗೆ ಆತ ಬಂದವರ ಉದ್ದೇಶ ಅರಿತು, ಆ ಅಪೂರ್ವ ಬಾಣಲಿಂಗವನ್ನು ಇತ್ತನಂತೆ. 

ಜಟೆ, ಸೂರ್ಯ, ಚಂದ್ರ, ಓಂಕಾರ ಹೀಗೆ ಹಲವು ವೈಶಿಷ್ಟ್ಯಗಳ ಆ ಸುಂದರ ಬಾಣ ಲಿಂಗವಿಂದು ಪ್ರಥಮ ಭಾವಸಮಾಧಿಯಲ್ಲಿ ವಿರಾಜಿಸುತ್ತಾ, ಭಕ್ತರ ಅಭೀಷ್ಟ ನೆರವೇರಿಸುತ್ತಿದೆ ಬಾಣಾವರದಲ್ಲಿ. 

ಗುರುನಾಥರ ಗುರುಗಳಾದ ಕೃಷ್ಣ ಯೋಗಿಂದ್ರ ಸರಸ್ವತಿಗಳ ಪ್ರಮುಖ ನಾಲ್ಕು ಶಿಷ್ಯರ ಸಮಾಧಿಗಳಲ್ಲಿ ಮೂರನ್ನು ಗುರುನಾಥರೇ ಗುರುತಿಸಿದ್ದರಂತೆ. ನಾಲ್ಕನೆಯದನ್ನು ತಮ್ಮ ಶಿಷ್ಯರಿಗೆ ಗುರುತಿಸಲು ಗುರುನಾಥರು ಅಂದು ತಿಳಿಸಿ ಬಿಟ್ಟುಬಿಟ್ಟಿದ್ದರಂತೆ. ಶಿಷ್ಯರನ್ನು ಕಾರ್ಯ ಪ್ರವೃತ್ತರಾಗಲು ಪ್ರೇರೇಪಿಸಿ, ಗುರುನಾಥರು ಕರುಣಿಸಿದುದರ ಫಲ... ಆ ನಾಲ್ಕನೆಯ ಸಮಾಧಿಯೂ ಸಿಕ್ಕಿದೆ ಎಂಬ ವಿಚಾರ ತಿಳಿದುಬಂದಿದೆ... ಕೃಷ್ಣ ಯೋಗಿಂದ್ರರು ಹಾಗೂ ಅವರ ನಾಲ್ಕು ಜನ ಶಿಷ್ಯರುಗಳೂ ಜೀವ ಸಮಾಧಿಯಾದ ಪರಮ ಪುರುಷರು. 

ಕೃಷ್ಣ ಯೋಗಿಂದ್ರರಾಗಲಿ, ಅವರ ನಾಲ್ಕು ಜನ ಶಿಷ್ಯರುಗಳಾಗಲೀ ಗುರುನಾಥರಾಗಲೀ, - ಎಂದೂ ಪ್ರಚಾರ ಪ್ರಿಯರಾಗಿರಲಿಲ್ಲ. ಅನನ್ಯವಾಗಿ ಸದ್ಭಕ್ತಿಯಿಂದ ಬಂದವರಿಗೆ ದರ್ಶನವಿತ್ತು ಹರಸುವ ಕರುಣಾಶಾಲಿಗಳಾಗಿದ್ದರು. ಗುರುನಾಥರ ಪ್ರಯತ್ನದಿಂದ ಈ ಎಲ್ಲಾ ಮಹಾಯೋಗಿಗಳ ಸ್ಥಳಗಳೂ ಭಕ್ತಕೋಟಿಗೆ ದೊರೆತಿರುವುದು, ಗುರುಕರುಣೆಯೇ ಅಲ್ಲದೆ ಮತ್ತೇನು? 

"ಹೋಗಯ್ಯಾ ಬಾಣಾವರಕ್ಕೆ ಹೋಗಿ ಅಲ್ಲಿ ಆರಾಧಿಸಿ... ಅಲ್ಲಿ ಪೂಜಿಸಿದರೆ ನನಗೆ ಸಲ್ಲುತ್ತದೆ" ಎಂದು ಅನೇಕ ಸಾರಿ ತಮ್ಮ ಶಿಷ್ಯರನ್ನು ಗುರುನಾಥರು ಹೇಳಿ ಕಳುಹಿಸುತ್ತಿದ್ದುದನ್ನಿಲ್ಲಿ ಸ್ಮರಿಸಬಹುದು. 

ಎಲ್ಲಾ ತಾವೇ ಆಗಿದ್ದರೂ, ಎಲ್ಲವನ್ನು ಶಿಷ್ಯರಿಗವರು ಕರುಣಿಸಿದ್ದರೂ.... ತಾವೇನೂ ಅಲ್ಲವೇ ಅಲ್ಲ ಎಂದು ಬಿಡುತ್ತಿದ್ದ ಗುರುನಾಥರ ಭೋಳೆತನ.... ಅವರು ಭೋಳೆ ಶಂಕರನೇ ಎಂಬುದನ್ನು ಎಂದೋ ಶೃತಪಡಿಸಿದೆ... ಇಂತಹ ಗುರುನಾಥರ ಲೀಲೆಗಳು ಎಷ್ಟಿದೆಯೋ. 

ನಾಳೆಯೂ ಬನ್ನಿ ನಮ್ಮೊಂದಿಗಿರಿ, ಭಾವುಕ ಮಿತ್ರರೇ... ನಾಳೆ ಮತ್ತೇನನ್ನು ಕರುಣಿಸುತ್ತಾನೋ... ಸ್ವೀಕರಿಸೋಣ ಅಲ್ಲವೇ?....,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ. 

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


For more info visit :  http://srivenkatachalaavadhoota.blogspot.in 

1 comment:

  1. Poojya venkatachala gurugalige nanna poojya namanagalu. Sarvarigu arogya ayasu rakshe sahane samadhaana talme buddhi shreyasu santosha anugrahisi asheervadisi. Sarve jano sukinobavantu.

    ReplyDelete