ಶ್ರೀ ಸದ್ಗುರುನಾಥ ಲೀಲಾಮೃತ - 2
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 32
ಸುಮ್ಮನಿರುವುದನ್ನು ಕಲಿ
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ । ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।
ಮನಸ್ಸು ಮರ್ಕಟ. ಅದಕ್ಕೆ ನಶೆಯ ಪಾನ, ಮೇಲೆ ಭೂತ ಸಂಚಾರ. ಹೀಗಾದರೆ ಏನಾಗುತ್ತದೋ, ಅಂತೆಯೇ ನಮ್ಮ ಮನದ ವರ್ತನೆಯಾಗಿರುತ್ತದೆ. ಬಾಯಿಗೆ ಬಂದಂತೆ, ಎಲುಬಿಲ್ಲದ ನಾಲಿಗೆ ಉಲಿಯುವುದನ್ನು ನಿಲ್ಲಿಸಲು ಗುರುನಾಥರು "ಮಾತನಾಡದೇ ಸುಮ್ಮನಿರುವುದನ್ನು ಕಲಿಯಿರಿ" ಎಂದೆನ್ನುತ್ತಿದ್ದರು. ಸುಮ್ಮನಿದ್ದವನನ್ನು ಬ್ರಹ್ಮನೂ ಗೆಲ್ಲಲಾರ ಎಂಬ ಮಾತೊಂದಿದೆ. ನೀನಾಡುವುದೇ ಆದರೆ ಯೋಚಿಸಿ, ಅರ್ಥಬದ್ಧವಾದ, ಇತರರಿಗೆ ಉಪಯೋಗವಾಗುವಂತೆ ನುಡಿಯಬೇಕೆನ್ನುತ್ತಿದ್ದರು. ಆಡಬಾರದ್ದನ್ನು ಆಡಿ, ಮಾಡಬಾರದ್ದನ್ನು ಮಾಡಿ, ಸಾರಿ, ಎಕ್ಸ್ ಕ್ಯೂಸ್ ಮೀ, ಧನ್ಯವಾದ ಎಂದುಬಿಡುವುದನ್ನು ಗುರುನಾಥರು ಎಂದೂ ಒಪ್ಪುತ್ತಿರಲಿಲ್ಲವಂತೆ. ಅದೊಂದು ಅರ್ಥಹೀನ ಪದ. ಅದನ್ನೆಂದೂ ಜೀವನದಲ್ಲಿ ಬಳಸದಂತೆ ನಡೆಯುವುದನ್ನು ನಾವು ಕಲಿಯಬೇಕು ಎನ್ನುತ್ತಿದ್ದರಂತೆ. ಆಡಬೇಡ ಆಡಿದನ್ನು ನಡೆಸು, "ಆಡದೆ ಮಾಡುವವನು ರೂಢಿಗೊಳಗುತ್ತಮನು" ಎಂಬುದರ ಅನಿಸಿಕೆಯಾಗಿತ್ತು. ಅಂತೆಯೇ ನಡೆದುಕೊಂಡವರು ಗುರುನಾಥರು. ಪುರಾಣ ಪುಣ್ಯಕಥೆ ಬೋಧನೆಗಲ್ಲ ಅದನ್ನು ಅನುಸರಿಸಲು.
ಮಕ್ಕಳನ್ನು ಬಯ್ಯುವಾಗ, ಯಾವುದೇ ಉದ್ವೇಗವಾದಾಗ ಸ್ವಲ್ಪ ಹೊತ್ತು ಸುಮ್ಮನಿರಿ... ಮಾತನಾಡದೇ ಇರಿ. ಇದನ್ನೆ ಅತಿರಥ ಮಹಾರಥ ಜ್ಞಾನಿಗಳು ಉಪದೇಶಿಸುತ್ತಾ ಬಂದಿದ್ದು.
"ಕಲ್ಪನೆಗಳಿಂದ ದೂರವಿದ್ದಾಗ ಮನಸ್ಸು ಪರಿಶುಭ್ರವಾಗಿರುತ್ತದೆ" ಎಂಬ ಗುರುನಾಥರ ಮಾತಂತೂ, ಆನಂದದ ಸಮಾಧಿಗೆ, ಬ್ರಹ್ಮಾನಂದದ ನೇರ ಮಾರ್ಗವಾಗಿತ್ತು.
ಸನ್ಯಾಸ, ವೈರಾಗ್ಯದ ಬಗ್ಗೆ ಗುರುನಾಥರ ಅರ್ಥ ವಿಶ್ಲೇಷಣೆ ಹೀಗಿರುತ್ತಿತ್ತು. "ಸನ್ಯಾಸವೆಂದರೆ - ಸನ್ಯಾಸ ತೆಗೆದುಕೊಳ್ಳುವುದೂ ಅಲ್ಲ, ಪಡೆದುಕೊಳ್ಳುವುದೂ ಅಲ್ಲ. ಸನ್ಯಾಸ ಎಂದರೆ ಎಲ್ಲ ಬಿಡುವುದು, ವೈರಾಗ್ಯ.... why ರಾಗ್ಯ".
ಹೀಗೆ ಗುರುನಾಥರ ನೆನಪುಗಳನ್ನು ಮಾಡಿಕೊಳ್ಳುವ ಆ ಭಕ್ತರು, ಜೀವನದಲ್ಲಿ ಒಂದು ತಮ್ಮದೇ ರೀತಿ ನೀತಿ, ವರ್ತನೆಗಳಲ್ಲಿದ್ದವು. ಇದ್ದಕ್ಕಿದ್ದಂತೆ ತಮ್ಮ ಬಂಧುಗಳ ಮದುವೆಗೆ ಬಂದ ಗುರುನಾಥರನ್ನು ಕಂಡಾಗ ಯಾವುದೋ ದೈದೀಪ್ಯಮಾನವಾದ ಜ್ಯೋತಿಯೊಂದನ್ನು ಕಂಡಂತೆ, ಮರಳುಗಾಡಿನಲ್ಲಿ ನೀರಿಗಾಗಿ ಹಂಬಲಿಸುವವ ತಂಪು ಜಲಧಾರೆಯೊಂದನ್ನು ಕಂಡಂತೆ - ವಿವಶರಾಗಿಬಿಟ್ಟರಂತೆ. ಅವರಿಗೆ ಅರಿವಿಲ್ಲದೆ ಗುರುನಾಥರ ಪಾದಗಳಿಗೆ ಎರಗಿದುದಲ್ಲದೇ ಮಾರನೆಯ ದಿನವೇ ಅವರನ್ನು ನೋಡಲಾಗದೇ ಇರಲಾಗದೆಂಬ ತುಡಿತ ಉಕ್ಕತೊಡಗಿ, ಸಖರಾಯಪಟ್ಟಣಕ್ಕೆ ಧಾವಿಸಿದರು. ಅವರ ದರ್ಶನವಾದ ಮೇಲೆ ಮನಸ್ಸು ಸಮಾಧಾನವಾದದ್ದು. "ಗುರುನಾಥರ ರೀತಿಯೇ ಒಂದು ವಿಚಿತ್ರ. ಎಲ್ಲರನ್ನು ಅತ್ಯಂತ ಗೌರವದಿಂದ ಕಾಣುವ ಅವರ ರೀತಿಯೇ ಒಂದು ಆಕರ್ಷಣೆ. ಯಾರೋ ಒಬ್ಬ ತಾಲೂಕ್ ಆಫೀಸಿನವರು ಬಂದರೆ "ತಹಸೀಲ್ದಾರರೇ ಬರಬೇಕು" ಎನ್ನುವುದು, ಒಬ್ಬ ಎ.ಸಿ. ಲೆವೆಲ್ ನ ಅಧಿಕಾರಿಗಳು ಬಂದರೆ "ಡಿ.ಸಿ. ಸಾಹೇಬರು ಬರಬೇಕೆನ್ನುವುದು" ಎಲ್ಲರನ್ನೂ "ರಾಯರೇ", "ಸಾರ್" ಎಂದು ಗೌರವಿಸುವ ರೀತಿ, ಸಾಮಾನ್ಯ ಮೇಷ್ಟ್ರನ್ನು ಪ್ರಿನ್ಸಿಪಾಲ್ ಎಂದು ಕರೆಯುವುದು ಅವರ ರೀತಿಯಾಗಿತ್ತು. ಯಾರನ್ನೂ ಕೆಳಮಟ್ಟದಲ್ಲಿ ಕಾಣದೇ ಇರುವುದು ಗುರುನಾಥರ ದೊಡ್ಡತನ. ದೊಡ್ಡವರಿಗೇ ಮೀಸಲಾದ ಗುಣ" ಎನ್ನುತ್ತಾರೆ ಆ ಭಕ್ತರು.
ಗುರುನಾಥರ ಗರಡಿ ಹೇಗಿತ್ತೆಂದರೆ, ಸಾವಿರಾರು ಜನ ಬಂದರೂ ತುಂಬಾ ಆತ್ಮೀಯದಿಂದ ಎಲ್ಲರೊಂದಿಗೆ ಮಾತನಾಡಿಸುತ್ತಾ ತಮ್ಮ ಸ್ವಭಾವ ವಲಯಕ್ಕೆ ಕರೆದುಕೊಳ್ಳುತ್ತಿದ್ದರು. ಒಬ್ಬ ಭಕ್ತರೆನ್ನುತ್ತಾರೆ: "ಗುರುನಾಥರ ಪ್ರಭಾವ ನಮ್ಮ ಮೇಲೆ ಇಷ್ಟಾಗಿತ್ತು ಎಂದರೆ ಅವರನ್ನು ನೋಡಲು ನೂರಾರು ಮೈಲಿಗಳು, ನಾನು ನನ್ನ ಸ್ನೇಹಿತರು ಕಾರಿನಲ್ಲಿ ಹೋಗುತ್ತಿದ್ದೆವು". ಅಲ್ಲಿ ಸಿಗಲಿಲ್ಲವೆಂದರೆ, ಬೇರೆಲ್ಲಿಗೆ ಹೋಗಿದ್ದಾರೆ" ಎಂದು ಅಲ್ಲಿ ತಿಳಿದುಕೊಂಡು ಮುಂದಿನ ನೆಲೆಗೆ ಹೋಗಿ, ಅವರನ್ನು ನೋಡಿದಾಗಲೇ ನಮ್ಮಿಬ್ಬರಿಗೂ ಸಮಾಧಾನ ಸಿಕ್ಕುತ್ತಿದ್ದುದು. ಇಂದು ಒಂದೆರಡು ಸಾರಿಯಲ್ಲ. ಅನೇಕ ಸಾರಿಯಾಗಿದೆ. ಗುರುನಾಥರನ್ನು ಕಂಡು, ಅವರ ಮಂದಸ್ಮಿತ ಮುಖವನ್ನು ನೋಡಿದರೆ ನಮಗೆ ಅದೇನೋ ಪರಮಾನಂದ. ಗುರುನಾಥರು ಒಬ್ಬ ಒಳ್ಳೆಯ ಎಲ್ ಕೆ ಜಿಯ ಮೇಷ್ಟರಿದ್ದಂತೆ ಎಂಬುದು ನನ್ನ ಭಾವನೆ. ಮನೆಯಿಂದ ಹಠ ಮಾಡುತ್ತಾ ಕಿಂಡರ್ ಗಾರ್ಟನ್ ಗೆ ಬರುವ ಮಗುವಿಗೆ ಮೇಡಂ ಚಾಕಲೇಟ್ ನೀಡಿ, ನಗಿಸಿ, ಆಟವಾಡಿಸುವಂತೆ, ನಮ್ಮನ್ನು ತಮ್ಮ ಬರುವ ಅನೇಕ ಭಕ್ತರನ್ನು ಗುರುನಾಥರು ತಿದ್ದುತ್ತಿದ್ದರು. ಅವರ ಕರುಣೆಗೆ ಪಾರವೇ ಇಲ್ಲ. ಒಮ್ಮೆ ನೋಡಿದ ಮೇಲೆ ಅವರನ್ನು ನನಗಂತೂ ಬಿಡಲೇ ಆಗಲಿಲ್ಲ. ಅಲ್ಲಿ ಬಂದವರಾರೂ ಹಿಂತಿರುಗಿರುವುದು ನಾನು ನೋಡಲೇ ಇಲ್ಲ. ನನ್ನ ಈ ರೀತಿಯನ್ನು ಕೆಲವರು "ಇದೇನು ಹುಚ್ಚು" ಎಂದದ್ದೂ ಇದೆ. ಆದರೆ ಅವರ ಸಾನ್ನಿಧ್ಯದಲ್ಲಿ ಸಿಗುವ, ಸಿಕ್ಕ ನೆಮ್ಮದಿ, ಆನಂದ ಇನ್ನೂ ನಮ್ಮ ಬದುಕಿನಲ್ಲಿ ನಿರಂತರವಾಗಿದೆ" ಎನ್ನುತ್ತಾರೆ.
ಗುರುನಾಥರ ದರ್ಶನಕ್ಕಾಗಿ ಪರಿತಪಿಸಿ, ದರ್ಶನವಾಗದೇ ಕೊರಗುವ ಮಂದಿ ಒಂದೆಡೆಯಾದರೆ, ಹೀಗೆ ಬಳಿಗೆ ಎಳೆದುಕೊಂಡು, ಪ್ರೀತಿಯ ಅಮೃತಧಾರೆ ಹರಿಸಿ ಅವರನ್ನು ಕೃತಾರ್ಥರನ್ನಾಗಿಸಿದ ಶಿಷ್ಯರು ಅನೇಕರಿದ್ದಾರೆ. ತಮ್ಮ -ಗುರುನಾಥರ ನಡುವಿನ ಅನುಭವವನ್ನು ನಿತ್ಯ ಸತ್ಸಂಗಕ್ಕಾಗಿ ಅವರು ಹಂಚಿಕೊಳ್ಳುವಾಗ ಅವರ ಮೊಗದಲ್ಲಿ ಕಾಣುವ ಧನ್ಯತಾ ಭಾವ ನೋಡಬೇಕು. ಯಾವುದೋ ಭಾವನಾಲೋಕದಲ್ಲಿ ಗುರುನಾಥರೊಂದಿಗೆ ಇರುವ ಅನುಭವ ಅವರದ್ದಾಗಿರುತ್ತದೆ.
ಪ್ರಿಯ ಓದುಗ ಮಿತ್ರರೇ.... ನಮಗೆಲ್ಲಾ ನಿತ್ಯ ಸತ್ಸಂಗಕ್ಕೆ ಬುತ್ತಿಯನ್ನು ನೀಡುತ್ತಿರುವ ಆ ಮಹನೀಯರಿಗೆಲ್ಲಾ ಒಂದು ನಮನ ಹೇಳೋಣ... ನಾಳೆ ಅದ್ಯಾವ ಬುತ್ತಿ ನಮಗಾಗಿ ಇದೆಯೋ..... ಬರುವಿರಲ್ಲಾ...
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
No comments:
Post a Comment