ಒಟ್ಟು ನೋಟಗಳು

Wednesday, April 12, 2017

ಶ್ರೀ ಸದ್ಗುರುನಾಥ ಲೀಲಾಮೃತ  - 2 

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ನಿತ್ಯ ಸತ್ಸಂಗ  - 34

 

ನ ಖ್ಯಾತಿ ಲಾಭ ಪೂಜಾರ್ಥಂ 


 

।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।

।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ । ಶೋಕ ಮೋಹ ವಿವರ್ಜಿತಂ ।। 
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।


ತಮ್ಮ ಪೂರ್ವಾಶ್ರಮದಲ್ಲಿ ಹೊಳೆನರಸೀಪುರದಲ್ಲಿ ಬ್ರಹ್ಮಾನಂದ ಗುರೂಜಿಗಳು ಆಧ್ಯಾತ್ಮ ವಿದ್ಯಾಭ್ಯಾಸದಲ್ಲಿ ತೊಡಗಿದ್ದಾಗ ಆಗಾಗ್ಗೆ ಆಧ್ಯಾತ್ಮದ ಸಾಕಾರಮೂರ್ತಿಯಾದ ಸಖರಾಯಪಟ್ಟಣದ ವೆಂಕಟಾಚಲ ಅವಧೂತರಲ್ಲಿಗೆ ಬರುತ್ತಿದ್ದರು. ಅವರ ಸರಳವಾದ ಇರುವಿಕೆಯನ್ನು ನೋಡಿದರೇ ಸಾಕು, ಹತ್ತಾರು ಆಧ್ಯಾತ್ಮ ಪುಸ್ತಕಗಳನ್ನು ಓದಿದ ಅನುಭವ, ನೂರಾರು ಪ್ರವಚನಗಳನ್ನು ಕೇಳಿದ ಅನುಭವಗಳಾಗುತ್ತಿತ್ತು. ಇದನ್ನು ನಮ್ಮ ಶ್ರೀ ಶ್ರೀ ಬ್ರಹ್ಮಾನಂದ ಗುರೂಜಿಗಳ ಮಾತಿನಲ್ಲಿ ಕೇಳಿದರೆ ಇನ್ನೂ ಪ್ರಶಸ್ತವಾದೀತು. 

"ಗುರುನಾಥರು ಯಾವತ್ತೂ ಯಾವ ಲಾಭ, ಕೀರ್ತಿ, ಪ್ರತಿಷ್ಠೆಯನ್ನು ಬಯಸಿದವರಲ್ಲ. 'ನ ಖ್ಯಾತಿ ಲಾಭ ಪೂಜಾರ್ಥಂ' ಎಂಬಂತೆ. ನಾನು ಆಗ ಹೊಳೆನರಸೀಪುರದಲ್ಲಿ ಆಧ್ಯಾತ್ಮ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾಗ ಅಲ್ಲಿನ ಆಧ್ಯಾತ್ಮ ಕಾರ್ಯಾಲಯಕ್ಕೆ ಗುರುನಾಥರು ಪದೇ ಪದೇ ಬರುತ್ತಿದ್ದರು. ಅವರೆಷ್ಟು ಸರಳವೆಂದರೆ ಅಲ್ಲಿ ತೋಟದಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ, ಅಲ್ಲಿಯ ನಾಯಿಗೆ ಸಹ ನಮಸ್ಕರಿಸುತ್ತಿದ್ದರು. ಅಲ್ಲಿದ್ದ ಶ್ರೀ ಸಚ್ಚಿದಾನಂದೇಂದ್ರ ಸರಸ್ವತಿಯವರ ಸಮಾಧಿಗೆ ತಾವು ತಂದ ಹಣ್ಣು ಹಂಪಲು, ಅಕ್ಕಿ, ಕಾಯಿ, ಬೇಳೆ, ಬೆಲ್ಲ, ಸಕ್ಕರೆ ಇತ್ಯಾದಿ ವಸ್ತುಗಳನ್ನು ಸಮರ್ಪಿಸಿ, ತಾವು ತಂದ ಹೂಮಾಲೆಯನ್ನು ಹಾಕಿ ದೀರ್ಘದಂಡ ನಮಸ್ಕಾರ ಮಾಡಿ, ಅಲ್ಲಿದ್ದವರಿಗೆಲ್ಲಾ ಹಣ್ಣು ಹಂಪಲುಗಳನ್ನು ಹಂಚಿ, ಅನಂತರ ಅಣ್ಣ ಪ್ರಸಾದವನ್ನು ಕೈಯಲ್ಲೇ ಸ್ವೀಕರಿಸಿ, ಕೈತೊಳೆಯದೆ ಕಾಲಿಗೆ ಒರೆಸಿಕೊಂಡು ತಮ್ಮ ಭಕ್ತರ ಜೊತೆ ಹೊರಟುಬಿಡುತ್ತಿದ್ದರು. (ಸಂಸಾರಿಯಾಗಿಯೂ ಸನ್ಯಾಸಿಗಳ ರೀತಿಯಾದ 'ಕರತಲ ಭಕ್ಷಃ ತರುತಲ ವಾಸಃ' ಎಂಬುದನ್ನು ಗುರುನಾಥರು ಪಾಲಿಸುತ್ತಿದ್ದರು. ಸಖರಾಯಪಟ್ಟಣದ ಅವರ ಮನೆಗಿಂತ, ಅವರ ದರ್ಬಾರು ಎಂದೇ ಪ್ರಖ್ಯಾತವಾಗಿದ್ದ ಅರಳಿ-ಬೇವಿನ ಕಟ್ಟೆಯಲ್ಲಿಯೇ ಅವರು ದಿನದ ಬಹು ಸಮಯವನ್ನು ಕಳೆಯುತ್ತಿದ್ದುದು. ಅವರನ್ನು ಕಂಡವರಿಗೆ ಇದು ನೆನಪಿರಬಹುದು). ಒಮ್ಮೆ ಅವರು ತಮ್ಮ ಮಗಳೊಂದಿಗೆ ಬಂದಾಗ ನದಿಯಲ್ಲಿ ಇಬ್ಬರೂ ಸ್ನಾನಮಾಡಿ ಸಚೇಲರಾಗಿ (ಒದ್ದೆಬಟ್ಟೆಯಲ್ಲಿಯೇ) ಸಚ್ಚಿದಾನಂದ ಸರಸ್ವತಿ ಸ್ವಾಮಿಗಳ ಸನ್ನಿಧಿಗೆ ಬಂದು ಹೂವು ಹಣ್ಣನ್ನು ಸಮರ್ಪಿಸಿ, ದೀರ್ಘದಂಡ ನಮಸ್ಕರಿಸಿದರು. ಮೊದಮೊದಲು ಅಂಗಿಯನ್ನು ಧರಿಸುತ್ತಿದ್ದರು. ತದನಂತರ ಅಂಗಿಯೂ ಇಲ್ಲದೆ, ಬರೀ ಪಂಚೆ ನಂತರ ದೊಡ್ಡದೊಂದು ವಲ್ಲಿ ಆದರೆ ಸಾಕು ಉಟ್ಟುಕೊಂಡಿರುತ್ತಿದ್ದರು...." ಅದರಲ್ಲಿ ಅವರನ್ನು ಕಾಣುವುದೇ ಎಲ್ಲರಿಗೂ ಪೂಜ್ಯ ಭಾವನೆ ತರುತ್ತಿತ್ತು. 

ಬ್ರಹ್ಮಾನಂದಜೀಯವರು ಒಂದು ನಿಮಿಷದ ವಿರಾಮಕ್ಕೊಳಗಾದರು. ಬಹುಶಃ ಅವರ ಮನದಲ್ಲಿ ಆ ದತ್ತ ದಿಗಂಬರನ ಅಪರಾವತಾರವಾದ ಗುರುನಾಥರ ರೂಪ ಕಂಡಿತೇನೋ. 

ಗುರುನಾಥರಿದ್ದಲ್ಲಿ ಭಜನೆ - ಭೋಜನ 

"ಗುರುನಾಥರು ಬಂದರೆಂದರೆ ನಾವೆಲ್ಲಾ ಸೇರುತ್ತಿದ್ದೆವು. ಗುರುನಾಥರಿಗೆ ನಮಸ್ಕರಿಸುತ್ತಿದ್ದೆವು. ಗುರುನಾಥರನ್ನು ಒಂಟಿಯಾಗಿ ಕಾಣುವುದೇ ದುಸ್ತರ. ಯಾವಾಗಲೂ ಭಕ್ತ ವೃಂದ ಅವರನ್ನು ಸದಾ ಮುತ್ತಿಕೊಂಡಿರುತ್ತಿತ್ತು. ಗುರುನಾಥರಿಗೆ ಭಜನೆ ಎಂದರೆ ಪ್ರೀತಿ. ಅವರೊಂದಿಗಿದ್ದ ಭಾವುಕ ಭಕ್ತರು ಒಳ್ಳೆಯ ಭಾವನೆಯಿಂದ ಸುಶ್ರಾವ್ಯವಾಗಿ ಭಜನೆ ಮಾಡುತ್ತಿದ್ದರು. ಎಲ್ಲರನ್ನೂ ಪ್ರೀತಿಯಿಂದ ಗುರುನಾಥರು ಮಾತನಾಡಿಸುತ್ತಿದ್ದರು. ಯಾರ ಮನಸ್ಸನ್ನೂ ನೋಯಿಸುತ್ತಿರಲಿಲ್ಲ. ಸಾಂತ್ವನದ ಮಾತನಾಡುತ್ತಾ, ಭಕ್ತರನ್ನು ಸನ್ಮಾರ್ಗಕ್ಕೆ ಹಚ್ಚುತ್ತಿದ್ದರು. ಸಾಂದರ್ಭಿಕವಾಗಿ ನೆರೆದ ಭಕ್ತಗಣದ ಮನವರಿತು ಗುರುಭಕ್ತಿ, ಸೇವೆ, ಉತ್ತಮ ಸಾರ್ಥಕ ಜೀವನ, ಪ್ರೇಮ, ಅಹಿಂಸೆ, ತ್ಯಾಗ, ಸತ್ಯ, ಭಗವದ್ಭಕ್ತಿಯ ವಿಚಾರವನ್ನು ಹೇಳುತ್ತಿದ್ದರು. ಭಜನೆಯ ನಂತರ, ಸತ್ಸಂಗದ ನಂತರ ಎಲ್ಲರಿಗೆ ಹೊಟ್ಟೆ ತುಂಬುವ ಪ್ರಸಾದ ವಿನಿಯೋಗವಾಗುತ್ತಿತ್ತು". 

"ಅವರು ತನ್ನನ್ನು ತಾನು ಹುಚ್ಚನೆಂದು ಕರೆದುಕೊಳ್ಳುತ್ತಿದ್ದರು. ಅತ್ಯಂತ ಸರಳಾತಿ ಸರಳವಾಗಿ ತಾನು ಏನೂ ಅಲ್ಲ - ಎಂಬಂತೆ ನಿರಹಂಕಾರಿಯಾಗಿದ್ದರು. ಸಮಸ್ತ ಚರಾಚರಗಳಲ್ಲಿ ದಯೆ, ಪ್ರೇಮಭಾವ ಉಳ್ಳವರಾಗಿ, ಎಲ್ಲರಲ್ಲಿಯೂ ಸದ್ಭಾವ ರೂಪದ ದೈವವನ್ನೇ ಕಾಣುತ್ತಿದ್ದರು. ಅತಿ ಕಷ್ಟಕರವಾದ ಜೀವನದ ಸಮಸ್ಯೆಗಳನ್ನು ಅತಿ ಸುಲಭವಾಗಿ ಪರಿಹರಿಸಿಬಿಡುತ್ತಿದ್ದರು. ನೇರವಾಗಿ ಯಾರಿಗೂ ಏನೂ ತಿಳಿವಳಿಕೆ ಹೇಳದೆ, ಸುಮ್ಮನೆ ಸಹಜವಾಗಿ ಯಾರನ್ನೋ ಕುರಿತು ಮಾತನಾಡಿದಂತೆ ಮಾತಾಡುತ್ತಿದ್ದರು. ಭಕ್ತರಿಗೆ, ಗೃಹಿಣಿಯರಿಗೆ ಗುರುನಾಥರು ತಾಯಿ, ತಂದೆ, ಗುರು, ಮಾರ್ಗದರ್ಶಕರಾಗಿ ಪ್ರೇಮಾಮೃತದ ಕಡಲನ್ನೇ ಹರಿಸುತ್ತಿದ್ದರು. ಭಕ್ತರು ತಪ್ಪು ಮಾಡದಂತೆ ಎಚ್ಚರಿಸುತ್ತ, ಭೂತ, ಭವಿಷ್ಯತ್, ವರ್ತಮಾನವನ್ನು ಬಲ್ಲ ಶಿವನೇ ಆಗಿದ್ದರು. ಉಪನಯನ, ಮದುವೆಗಳೆಂಬುದನ್ನು ಅತ್ಯಂತ ಸರಳವಾಗಿ ನೆರವೇರಿಸುತ್ತ ಭಕ್ತರ ರಕ್ಷಣೆಗೈಯುತ್ತಾ, ಭತ್ತ, ಅಕ್ಕಿ, ಹೂವು, ಹಣ್ಣು, ಧಾನ್ಯ, ಇತ್ಯಾದಿಗಳನ್ನು ಕೊಡುವುದರಲ್ಲಿ ಎತ್ತಿದ ಕೈ ಅವರದಾಗಿತ್ತು". 

"ಗುರುಗುಣಲಿಖ್ಯಾ ನಜಾಯ್" ಎಂಬ ಕಬೀರರ ಮಾತಿನಂತೆ ಗುರುನಾಥರಲ್ಲಿ ಅದೆಷ್ಟು ದೊಡ್ಡ ಗುಣಗಳಿವೆಯಲ್ಲಾ! ನಮ್ಮ ನಿತ್ಯ ಸತ್ಸಂಗದಿಂದ ಅದರಲ್ಲಿನ ಬಿಂದುಮಾತ್ರವನ್ನಾದರೂ ನಾವು ರೂಢಿಸಿಕೊಂಡರೆ ನಿತ್ಯ ಸತ್ಸಂಗ ಸಾರ್ಥಕವೇನೋ... ನಾಳೆಯೂ ನಮ್ಮೊಂದಿಗಿರಿ....... 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ. 

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


For more info visit :  http://srivenkatachalaavadhoota.blogspot.in

No comments:

Post a Comment