ಶ್ರೀ ಸದ್ಗುರುನಾಥ ಲೀಲಾಮೃತ - 2
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 33
ಅಲಖ್ ನಿರಂಜನರಾಗಿದ್ದ ಗುರುನಾಥರು
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ । ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।
ಪ್ರಿಯ ಭಕ್ತ ಮಹಾಶಯರೇ ಈ ದಿನ, ಸತ್ಸಂಗಕ್ಕಾಗಿ ತಮ್ಮ ಅನುಭವಗಳನ್ನು ಧಾರೆ ಎರೆಯುತ್ತಿರುವವರು, ಗುರುನಾಥರೊಂದಿಗೆ ನಿರಂತರ ಸಮೀಪವಾಗಿದ್ದ ಮತ್ತೊಬ್ಬ ಸನ್ಯಾಸಿಗಳೂ, ಗುರುಬಂಧುಗಳೂ ಆದ ಬ್ರಹ್ಮಾನಂದ ಗುರೂಜಿಯವರು. ಅವರು ಕಂಡಂತೆ ವೆಂಕಟಾಚಲ ಅವಧೂತರು "ಬಾಲ್ಯ, ಯೌವನ, ಗೃಹಸ್ಥಾಶ್ರಮಗಳಲ್ಲಿ ಇರುವಾಗಲೇ ಸಖರಾಯಪಟ್ಟಣದ ವೆಂಕಟಾಚಲ ಗುರುಗಳು ಸುಪ್ತವಾಗಿ - ಗುಪ್ತವಾಗಿ ಅನೇಕ ಸಾಧು ಸತ್ಪುರುಷರುಗಳನ್ನು ದರ್ಶಿಸಿ, ಯಾರಿಗೂ ಅರಿಯದಂತೆ ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿ ಭಗವದ್ಕೃಪೆಯಿಂದ ಜ್ಞಾನಸಿದ್ಧಿಯನ್ನು ಪ್ರಾಪ್ತ ಮಾಡಿಕೊಂಡು, ಗೃಹಸ್ಥರಾಗಿದ್ದರೂ ತಾನು ತನ್ನದು ಎಂಬ ಮೋಹವನ್ನು ತ್ಯಜಿಸಿ - ಜೀವನದ ಕಷ್ಟಕಾರ್ಪಣ್ಯಗಳಲ್ಲಿ ನೊಂದು ಬೆಂದವರು. ಆದರೆ, ಅವರ ಸನಿಹಕ್ಕೆ ಬಂದವರಿಗೆ ಅತ್ಯಂತ ಸರಳವಾದ, ಸುಲಭದಲ್ಲಿ ಕಷ್ಟ ಪರಿಹಾರದ ಮಾರ್ಗ ತೋರುವ ಅನ್ವರ್ಥ ಅವಧೂತರಾಗಿದ್ದರು. ಬ್ರಹ್ಮಾನುಭವದಲ್ಲಿ ನೆಲೆ ನಿಂತು ಪರಮ ತೃಪ್ತರಾಗಿ ಯಾರಿಂದಲೂ ಒಂದು ಬಿಡಿಕಾಸೂ ತೆಗೆದುಕೊಳ್ಳದ ದಯಾಮಯ ಕರುಣಾಮಯರಾಗಿ, ಸಮಸ್ತ ಜೀವರಾಶಿಯನ್ನು ಸಂತೃಪ್ತಿಪಡಿಸುತ್ತಿದ್ದ ಗುರುನಾಥರು ಮಮತಾಮಯಿ ಮಾತೃಸ್ವರೂಪರಾಗಿದ್ದರು.
ಗುರುವೆಂದು ತಮಗೆ ನಮಸ್ಕಾರ ಮಾಡಿದಾಗ "ಗುರುವೆಂದರೆ ದೇಹವಲ್ಲ, ಅದೊಂದು ಭಾವ-ತತ್ವ" ಎಂದು ಪದೇ ಪದೇ ಮನವರಿಕೆ ಮಾಡಿಸುತ್ತಿದ್ದರು. "ದೇಹದಲ್ಲಿ ಗುರುವನ್ನು ನೋಡಬೇಡಿ- ಭಾವದಲ್ಲಿ ಕಾಣಿರಿ" ಎಂದು ಸಾರುತ್ತಾ ಗುರುತತ್ವ, ಗುರುಭಕ್ತಿ, ಗುರುವಾಕ್ಯದಲ್ಲಿ ಇರಬೇಕಾದ ಶ್ರದ್ಧೆಯಲ್ಲಿ ಒಂದು ಹೊಸ ಪೀಳಿಗೆಯನ್ನೇ ಸೃಷ್ಠಿಸಿ ಕ್ರಾಂತಿಯನ್ನೇ ಮಾಡಿದರು. ಯಾರಿಗೂ, ಯಾವುದಕ್ಕೂ ಸಿಕ್ಕಿಕೊಳ್ಳದೇ "ಅಲಖ್ ನಿರಂಜನ" ರಾಗಿ ಗೃಹಸ್ಥರು ಹಾಗೂ ಸನ್ಯಾಸಿಗಳಿಗೆ ತಮ್ಮ "ನಿಜ ಕರ್ತವ್ಯ" ವನ್ನು ಸರಳವಾದ ಪ್ರೀತಿಯ ಮಾತುಗಳಲ್ಲಿ ತಿಳಿಸುತ್ತಿದ್ದರು. "ಒಬ್ಬಗೃಹಿಣಿ ಸದ್ ಗೃಹಿಣಿಯಾಗಿ, ತನಗೋಸ್ಕರ ಏನೂ ಆಶಿಸದೆ ಸಮರ್ಪಿತ ಜೀವನವನ್ನು ನಡೆಸುವುದರಿಂದ ಅವಳೂ ಸನ್ಯಾಸಿಯಾಗಬಲ್ಲಳು" ಎನ್ನುತ್ತಿದ್ದರು.
ಒಂದು ಕ್ಷಣ ಬ್ರಹ್ಮಾನಂದ ಗುರೂಜಿಯವರು, ಗುರುನಾಥರನ್ನು ತಮ್ಮ ಮನದಲ್ಲಿ ಕಾಣುತ್ತ ಬ್ರಹ್ಮಾನಂದದಲ್ಲಿ ಮುಳುಗಿದರೇನೋ, ಮತ್ತವರ - ಗುರುನಾಥರ ನಡುವಿನ ಸಂಬಂಧಗಳನ್ನು ನೆನಪು ಮಾಡಿಕೊಂಡು ಮುಂದುವರೆದರು....
ಅನ್ನದಾನ ಪ್ರಿಯರು - ಕೊಡುಗೈ ದೊರೆಗಳು
"ಮಾತೆಯರು, ಹೆಣ್ಣು ಮಕ್ಕಳು, ಸನ್ಯಾಸಿಗಳೆಂದರೆ ಗುರುನಾಥರಿಗೆ ಎಲ್ಲಿಲ್ಲದ ಗೌರವ - ಆದರ. ಅವರನ್ನು ಆದರಿಸಿ, ಪೂಜಿಸಿ ಹೊಟ್ಟೆಯ ತುಂಬ ಆಹಾರ (ಪ್ರಸಾದ), ಪಾನೀಯಗಳನ್ನು ನೀಡಿ, ವಸ್ತ್ರ, ಹಣ್ಣು-ಹಂಪಲು ಕೊಡುವುದರಲ್ಲಿ ಅವರಿಗೆಂತಹದೋ ಸಂತಸ. ಬಂದ ಭಕ್ತರು ಯಾರೂ ಹಸಿದುಕೊಂಡಿರುವುದು ಅವರಿಗೆ ಇಷ್ಟವಾಗದು. ಬಿಸಿ ಬಿಸಿ, ಅಡುಗೆಯನ್ನು ಮಾಡಿಸಿ ಬಡಿಸಿಸುವುದು, ಕೆಲವೊಮ್ಮೆ ಹೋಟೆಲಿನಿಂದಲೇ ಮಸಾಲೆದೋಸೆ ತರಿಸಿಕೊಡುವುದು, ಬಂದ ಭಕ್ತರಿಗೆಲ್ಲಾ (ಪ್ರಸಾದ) ಊಟ ಹಾಕುವುದು ಅವರಿಗೆ ನಿತ್ಯ ಪೂಜೆ. ಅಣ್ಣ ಸಂತರ್ಪಣೆ ಎಂದರೆ ಅವರಿಗೆ ಬಹು ಇಷ್ಟ. ದತ್ತಗುರು ಪರಂಪರೆಯಲ್ಲಿ ಅನ್ನದಾನ, ಅನ್ನಸಂತರ್ಪಣೆಗೆ ಮೊದಲ ಆದ್ಯತೆ. ಯಾರು ಗುರುನಾಥರ ಎದುರಿನಲ್ಲಿ ಹಸಿದಿರಬಾರದು. ಉಂಡು ಬಂದವರಿಗೂ ಮತ್ತೆ ಮತ್ತೆ ತಿನ್ನಿಸಿ ಸಂತಸಪಡುತ್ತಿದ್ದ ಅವರಿದ್ದಲ್ಲಿ, ಹಸಿವಿಗೆ ಸ್ಥಳವೇ ಇರುತ್ತಿರಲಿಲ್ಲ. ಅವರಿಗೆ ಅನ್ನದಾನವೊಂದು ಯಜ್ಞ, ನಿಜ ಪೂಜೆ - ಅದು ನಿಜವೂ ಹೌದು. ನಾವು ಸ್ವೀಕರಿಸುವ ಪ್ರತಿಯೊಂದು ತುತ್ತೂ ಆ ವೈಶ್ವಾನಿಕ ಜಠರಾಗ್ನಿಗೆ ಆಹುತಿಯಾಗಿ, ಪರಮಾತ್ಮನೇ ಅದನ್ನು ಪಚನ ಮಾಡುತ್ತಾನೆ ಎಂದು ಗೀತೆಯಲ್ಲಿ ಭಗವಂತನೇ ಹೇಳಿದ್ದಾನೆ. ಆ ಭಗವಂತನ ಸ್ವರೂಪವೇ ಆದ ಗುರುನಾಥರು ಇದನ್ನು ಅಕ್ಷರಶಃ ನಡೆಸಿಕೊಂಡು ಬಂದಿದ್ದರು.
ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಮ್ ದೇಹಮಾಶ್ರಿತಃ ।
ಪ್ರಾಣಾಪಾನ ಸಮಾಯುಕ್ತಮ್, ಪಚಾಮ್ಯನ್ನಂ ಚತುರ್ವಿಧಂ ।। ಗೀತೆ - 15-14 ।।
"ಭಕ್ಷ್ಯ, ಭೋಜ್ಯ, ಲೇಹ್ಯ, ಚೋಷ್ಯ ಎಂಬ ನಾಲ್ಕು ವಿಧವಾದ ಅನ್ನವನ್ನು ವೈಶ್ವಾನರನಾಗಿ ನಾನೇ ಪಚನ ಮಾಡುತ್ತೇನೆ " ಎಂದಿದ್ದಾನೆ, ಭಗವಂತ. ಇದು ನಿತ್ಯ ನಾವು ಮಾಡುವ ಯಜ್ಞರೂಪಿ ದೇವರ ಪೂಜೆಯಾಗಿದೆ. ಆದ್ದರಿಂದಲೇ ಅನ್ನದಾನ ಅಷ್ಟು ಪ್ರಾಶಸ್ತ್ಯ ಮತ್ತು ಮಹತ್ವದಿಂದ ಕೂಡಿದೆ. ಇದು ಪ್ರಾಣಿ, ಪಕ್ಷಿ, ಕ್ರಿಮಿ, ಕೀಟ, ಮನುಷ್ಯ ಮೂಲಕ ನೇರ ಭಗವಂತನಿಗೇ ಸೇರುತ್ತದೆ. ಈ ಸದ್ಭಾವದಿಂದ ಅನ್ನದಾನ ಮಾಡಬೇಕು. ಅನ್ನದಾನವೆಂಬ ಈ ಉತ್ತಮ ಸಂಸ್ಕಾರವನ್ನು ಗುರುನಾಥರು ತಮ್ಮ ಶಿಷ್ಯರಿಗೆ ಕಲಿಸಿದ್ದಾರೆ. ಅನ್ನಂ ಬ್ರಹ್ಮೇತಿ ವ್ಯಜಾನಾತ್, ಅನ್ನಂ ನ ನಿಂದ್ಯಾತ್ ಯಾ ತದ್ಬ್ರಹ್ಮಮ್ ಎಂಬ ನುಡಿಸಾರವನ್ನು ತಮ್ಮ ಭಕ್ತ ವೃಂದಕ್ಕೆ ನಿರಂತರ ಗುರುನಾಥರು ಬೋಧಿಸುತ್ತಿದ್ದರು. ಆಹಾರ ಪದಾರ್ಥವನ್ನು ವೃಥಾ ವ್ಯರ್ಥ ಮಾಡುವುದನ್ನು ಸಹಿಸರು.
ಬ್ರಹ್ಮಾನಂದ ಗುರೂಜಿಯವರು ಗುರುನಾಥರೊಂದಿಗಿನ ತಮ್ಮ ಖಾಸಗೀ ಅನುಭವಗಳನ್ನು ನಮ್ಮ ಓದುಗ ಮಿತ್ರರಿಗೆ ಹಂಚುತ್ತಿರುವುದು ನಮ್ಮ ಪುಣ್ಯ. ಗುರುಬಾಂಧವರೇ ನಾಳೆಯೂ ನಮ್ಮೊಂದಿಗಿರಿ.. ಸತ್ಸಂಗಕ್ಕಾಗಿ... ಬರುತ್ತೀರಲ್ಲವಾ?....
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
No comments:
Post a Comment