ಶ್ರೀ ಸದ್ಗುರುನಾಥ ಲೀಲಾಮೃತ - 2
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 51
ಭಕ್ತಪ್ರೇಮಿ ಗುರುನಾಥರು
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ । ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।
ತಾವಲ್ಲಿಗೆ ಹೋದ ಪ್ರತಿ ಕ್ಷಣದಲ್ಲಿ ಗುರುನಾಥರು ಒಂದಲ್ಲ ಒಂದು ಪಾಠವನ್ನು ನೀಡುತ್ತಲೇ ಇದ್ದರು. ಆದರೆ ಅದು ಯಾರನ್ನೂ ಕುರಿತಾದುದಲ್ಲ. ಯಾರಿಗೆ ಬೇಕೋ ಅವರಿಗದು ಲಭ್ಯವಾಗುತ್ತಿತ್ತು. ಗುರುವಾಕ್ಯದಲ್ಲಿ ಶ್ರದ್ಧೆ ಭಕ್ತಿ ಇದ್ದಾಗ ಮಾತ್ರಾ. ಅವರ ಒಂದೊಂದು ನಡೆನುಡಿಯೂ ಅನುಕರಣೀಯವಾಗಿತ್ತು ಎನ್ನುವ, ಗುರುನಾಥರ ಈ ಭಕ್ತರ ಅನುಭವವನ್ನು ಸವಿಯೋಣ.
"ಒಂದು ಊಟ ಹಾಕುವ ಸಂದರ್ಭದಲ್ಲೂ, ಬಂದವರನ್ನು ಆದರಿಸಿ ಸತ್ಕರಿಸುತ್ತಿದ್ದ ರೀತಿ ಎಂದರೆ - ಶುಭ್ರವಾದ ಜಾಗದಲ್ಲಿ ಕೂರಿಸಿ, ಎಲೆ ತೊಳೆದು, ರಂಗವಲ್ಲಿ ಇತ್ತು ಎದುರಿಗೆ ಅದಾರೋ ಕುಳಿತಿದ್ದುದಲ್ಲ, ಸಾಕ್ಷಾತ್ ಭಗವಂತನೇ ಕುಳಿತಿದ್ದಾನೆಂಬ ಭಾವನೆಯಿಂದ ಬಡಿಸುತ್ತಿದ್ದ ರೀತಿ ಅಲ್ಲಿ ಕಂಡುಬರುತ್ತಿತ್ತು. ಭಕ್ತರು ಏನೇ ತರಲಿ ಅದನ್ನು ಪ್ರೀತಿಯಿಂದ ಮುಟ್ಟಿ ಎಲ್ಲವನ್ನೂ ಎಲ್ಲರಿಗೂ ಹಂಚಿಸಿಬಿಡುತ್ತಿದ್ದ ನಿಸ್ವಾರ್ಥ ರೀತಿ, ಲವಲೇಶವೂ ಆಸೆ ಇಲ್ಲದ ಆ ರೀತಿ ಗುರುನಾಥರಿಗೆ ಮಾತ್ರ ಮೀಸಲೇನೋ!"
"ಒಮ್ಮೆ ಮನೆಯಿಂದ ಒಂದಿಷ್ಟು ಉಪ್ಪಿಟ್ಟು ಮಾಡಿಸಿಕೊಂಡು ಹೋಗಿದ್ದೆ. ಗುರುನಾಥರ ಮುಂದಿಟ್ಟೆ, 'ಸ್ವೀಕರಿಸಿ ಗುರುಗಳೇ' ಎಂದಾಗ 'ನೀನೇ ಕೊಡಯ್ಯಾ ಒಂದು ಚೂರು.... ಬಾಕಿದು ಎಲ್ಲರಿಗೂ ಹಂಚಿಬಿಡು' ಎಂದರು. ಇಲ್ಲಾ ನೀವೇ ತೆಗೆದುಕೊಳ್ಳಿ ಎಂದೆ. 'ನಾ ತೆಗೆದುಕೊಂಡು ತಿಂದು ಎಂಜಲು ಮಾಡುವುದು ಬೇಡ... ನೀವೇ ಪ್ರಸಾದವನ್ನು ನನಗೂ ಕೊಟ್ಟು ಹಂಚಿ' ಎಂದರು. 'ಅಬ್ಬಾ.. ಏನಾಶ್ಚರ್ಯ, ಆ ತುತ್ತತುದಿಯ ಅಗ್ರಸ್ಥಾನದಲ್ಲಿದ್ದೂ ಗುರುನಾಥರು, ಒಬ್ಬ ಸಾಮಾನ್ಯರು ತಂದ, ತಿನ್ನುವ ವಸ್ತುವನ್ನು ಪ್ರಸಾದವೆಂದು ಸ್ವೀಕರಿಸುವ ದೊಡ್ಡ ಗುಣ ನಮಗೊಂದು ಪಾಠವಾಗಿತ್ತು".
"ಕಷ್ಟಗಳು ಬರಬೇಕಯ್ಯ. ಕಷ್ಟಗಳು ಬಂದಾಗಲೇ ನಾವು * * ಮಾಡಿ, ಕಲ್ಮಶ ಮುಕ್ತರಾಗಿ ಆತನ ಸ್ಮರಣೆಯಲ್ಲಿ ಸಾಗುವುದು. ಬಂಗಾರ ಪುಟಕ್ಕಿಟ್ಟಾಗ ಮಾತ್ರವಲ್ಲವೇ ಶುದ್ಧವಾಗುವುದು?" ಎನ್ನುವ ಮಾತನ್ನು ಗುರುನಾಥರು ಆಗಾಗ್ಗೆ ಹೇಳುತ್ತಿದ್ದರು. ಇದು ಕಷ್ಟದಲ್ಲಿರುವವರಿಗೆ ಸಾಂತ್ವನ, ಧೈರ್ಯ ನೀಡುವ ಗುರುನಾಥರ ರೀತಿಯಾಗಿತ್ತು. ಗುರುನಾಥರ ಅನುಗ್ರಹಕ್ಕೆ ಎಲ್ಲ ಜಾತಿಯ ಅಲ್ಲ ಸ್ತರದ ಜನಗಳೂ ಬರುತ್ತಿದ್ದರು. ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದ ಗುರುನಾಥರು ಸಮತಾವಾದಿಗಳು. ಯಾವ ಪಂಚಾಗ, ನಕ್ಷತ್ರ, ತಿಥಿಗಳ ಲೆಕ್ಕವಿಲ್ಲದೇ ಮುಂದಾಗಬಹುದಾದ ಎಲ್ಲ ವಿಚಾರಗಳನ್ನು ಗುರುನಾಥರು ಹೇಳುತ್ತಿದ್ದರು. ಗುರುನಾಥರಿದ್ದಾರೆ ಎಂದರೆ ಅಲ್ಲಿ ಜನಜಂಗುಳಿಯೇ ಇರುತ್ತಿತ್ತು. ಸಖರಾಯಪಟ್ಟಣದಲ್ಲೂ ಹಾಗೇ. ಜನಗಳ ಓಡಾಟ ಅವರ ಮನೆಯ ಮುಂದಿತ್ತೆಂದರೆ ಗುರುಗಳು ಅಲ್ಲಿದ್ದಾರೆಂಬುದು ಖಚಿತ. ಬಂದವರು ಗುರುಗಳನ್ನು ದೇವರೆಂದು ಭಾವಿಸಿದ್ದರೆ , ಗುರುನಾಥರು ಭಕ್ತರನ್ನೇ ಪರಮಾತ್ಮನೆಂದು ಪೂಜಿಸಿ, ಆರಾಧಿಸಿ ಸತ್ಕರಿಸುವುದನ್ನು ಗುರುಮನೆಯಲ್ಲಿ ಕಾಣಬಹುದಿತ್ತು. ಭಕ್ತರ ಒಂದು ನೋವಿನ ಕೂಗಿಗೆ ಎಲ್ಲಿಂದ ಎಲ್ಲಿಗೋ ಹೋಗಿ ಭಕ್ತಗಣದ ನೋವನ್ನು ಪರಿಹರಿಸುತ್ತಿದ್ದ ಭಕ್ತ ಪ್ರೇಮಿ ಗುರುನಾಥರನ್ನು ಕಾಣುವುದು, ಅರಿಯುವುದು, ಅವರ ಕೃಪೆಗೆ ಪಾತ್ರರಾಗಲು ಜನುಮ ಜನುಮದ ಪುಣ್ಯ ಬೇಕು" ಎಂದು ತಮ್ಮ ಅನುಭವವನ್ನು ಡಾ.ಪ್ರಭುದೇವ ನಮ್ಮ ನಿತ್ಯ ಸತ್ಸಂಗಕ್ಕೆ ಹಂಚಿಕೊಂಡ ರೀತಿ ಇದು.
ಬಯಸದೇ ಬಂದ ಭಾಗ್ಯ
ಮನುಷ್ಯನಿಗೆ ನೋವು ಬರದೇ ಮರಕ್ಕೆ ಬರುತ್ತದೆಯೇ? ಅಂತೆಯೇ ಒಬ್ಬ ಗುರು ಭಕ್ತರು. ಅವರು ಕಡೂರಿನಲ್ಲಿ ವೈದ್ಯರಾಗಿ ವೃತ್ತಿ ನಡೆಸುತ್ತಿದ್ದರು. ತುಂಬ ಸಂಕಟದ ದಿನಗಳು ಬಂದೊದಗಿತು. ಏನು ಮಾಡುವುದೆಂದು ತೋಚಲಿಲ್ಲ. ಹತ್ತಿರದಲ್ಲಿರುವ ಬನಶಂಕರಿ ದೇವಸ್ಥಾನದ ಅರ್ಚಕ ಮಿತ್ರರಾದ ಸ್ವಾಮಿಯವರ ಮನೆಗಿವರು ಹೋಗುವುದು ವಾಡಿಕೆ. ಅಂತೆಯೇ ಅಂದೂ ಹೋಗಿ ತಮ್ಮ ಕಷ್ಟ ಸುಖಗಳನ್ನು ಹೇಳಿಕೊಳ್ಳುತ್ತಿದ್ದಾಗ, ಆ ಮನೆಯ ಮಕ್ಕಳು 'ತಾತ ಬಂದರು... ತಾತ ಬಂದರು' ಎಂದು ಸಂತಸದಿಂದ ಕುಣಿಯುತ್ತಿದ್ದರು. ಈ ಸಂತಸ ಮಕ್ಕಳಿಗೆ ಮಾತ್ರವಲ್ಲ ಇವರಿಗೂ ಸಿಕ್ಕುವ, ಇವರ ಭವದ ನೋವುಗಳ ಬಿಡುಗಡೆಯ ಸಂತರಾಗಿ ಅವರು ಇವರ ಜೀವನದಲ್ಲಿ ಬಂದರು ಆ ತಾತ. ಅರ್ಚಕ ಮಿತ್ರರು 'ಹಾಂ ತಡೀರಿ, ಒಳ್ಳೆಯ ಸಮಯಕ್ಕೆ ನೀವೂ ಬಂದಿದ್ದೀರಿ, ಅವರೂ ಬಂದಿದ್ದಾರೆ. ನೀವಿನ್ನು ಚಿಂತಿಸಬೇಕಿಲ್ಲ' ಎಂದು ಆ ತಾತನ ದರ್ಶನ ಮಾಡಿಸಿದರು. ಒಂದು ತುಂಡು ಪಂಚೆಯುಟ್ಟು, ಮುಖದ ತುಂಬಾ ಗಡ್ಡ ಮೀಸೆಗಳೇ ತುಂಬಿರುವ, ದೈದೀಪ್ಯಮಾನವಾದ ಕಣ್ಣುಗಳನ್ನು ಹೊಂದಿದ್ದು, ಆ ಒಂದು ದೃಷ್ಟಿಯಲ್ಲೇ ಎಲ್ಲವನ್ನು ಅರಿತು ಬಿಡುವ ಒಬ್ಬ ಮಹಾನ್ ವ್ಯಕ್ತಿಯನ್ನು ಪರಿಚರಿಸಿದರು. ಯಾರವರು.. ? ಯಾರವರು? ಅವರು ಮತ್ತಾರಾಗಲು ಸಾಧ್ಯ? ನಮ್ಮ ನಿಮ್ಮ ಎಲ್ಲರ ನೆಚ್ಚಿನ ಗುರುನಾಥರೇ ಅವರಾಗಿದ್ದರು. ಅನೇಕರು ಕೇಳಿ, ಬಯಸಿ, ಶ್ರಮಪಟ್ಟು ಗುರುದರ್ಶನ ಪಡೆದರೆ, ಈ ವೈದ್ಯ ಗೌರಿಶಂಕರರಿಗೆ ಗುರುನಾಥರ ಕೃಪೆ, ಆಶೀರ್ವಾದ ಬಯಸದೇ ಬಂದ ಭಾಗ್ಯವಾಗಿತ್ತು. ಗೌರೀಶಂಕರನೇ ಗುರುನಾಥರ ರೂಪದಲ್ಲಿ ಬಂದು ಹರಸಿದ್ದರು. ಗುರುವಿನ ಮೊದಲ ನೋಟದ ರೀತಿಯನ್ನು ಪಂಡಿತ ಗೌರೀಶಂಕರರು ಹೀಗೆ ಹೇಳುತ್ತಾರೆ.
"ನನ್ನನ್ನು ನೋಡುತ್ತಲೇ ಗುರುನಾಥರು ಹಾಂ ಹಾಂ ಅಂದರು. ನನ್ನ ಎಲ್ಲ ಜಾತಕಗಳನ್ನೂ ತಿಳಿದವರಂತೆ ಚೆನ್ನಾಗಿದ್ದೀರಾ? ಎಂದು ನಕ್ಕರು. ನನ್ನ ಪರಿಚಯಿಸಲು ಅರ್ಚಕ ಮಿತ್ರರಾದ ಸ್ವಾಮಿಯವರು ಮುಂದೆ ಬಂದಾಗ 'ನೀನೇನು ಪರಿಚಯ ಮಾಡಿಕೊಡ್ತೀಯಾಯ್ಯ ಇವರನ್ನು... ನಿನಗೇನು ಗೊತ್ತಿದೆ ಇವರ ಬಗ್ಗೆ... ಹೇಳಲಾ ಎಲ್ಲಾ... ಎಷ್ಟು ಜನ್ಮಗಳಿಂದ ನಮ್ಮ ಸಂಬಂಧವಿದೆ' ... ಎನ್ನುತ್ತಾ.... 'ಆಯ್ತಲ್ಲಾ.. ಎಲ್ಲಾ ಇನ್ನು ಸರಿಯಾಗುತ್ತೆ. ಏನೂ ಚಿಂತೆ ಬೇಡ' ಎಂದು ಅದೆಷ್ಟೋ ಜನುಮಗಳ ಪರಿಚಯವಿರುವವರಂತೆ ಮಾತನಾಡಿಬಿಟ್ಟರು. ಮೊದಲ ನೋಟದಲ್ಲೇ ಜನುಮಜನುಮಗಳ ಅನುಬಂಧವಿದ್ದವರಂತೆ ಗುರುನಾಥರು ಮಾತನಾಡಿದಾಗ, ಅವರ ಒಂದು ನಗು, ಆಶೀರ್ವಾದ ವೈದ್ಯರ ಎಲ್ಲ ಚಿಂತೆ- ಬವಣೆಗಳನ್ನು ಹರಿಸಿಬಿಟ್ಟಿದ್ದವೇನೋ ! ಅವರಂತೂ ದಿಙ್ಮೂಢರಾಗಿದ್ದರು.
ಪ್ರಿಯ ಓದುಗ ಗುರುಬಂಧುಗಳೇ, ಗುರು ಸಾಮರ್ಥ್ಯಕ್ಕೆ ಎಣೆ ಎಲ್ಲಿದೆ! ಕಾಲಾತೀತರಾದ ಆ ಗುರುನಾಥರರಿಯದೆ ಇರುವುದೇನು? ಅವರ ಒಂದು ಕೃಪಾ ನೋಟ, ಹೀಗೆ ಬಯಸದೇ ಬಂದ ಭಾಗ್ಯವಾದಂತೆ, ನಮ್ಮ ನಿತ್ಯ ಸತ್ಸಂಗಾಭಿಮಾನಿಗಳಿಗೂ ಗುರುಕೃಪೆ ಒದಗಲಿ... ನಾಳಿನ ಸತ್ಸಂಗಕ್ಕೆ ಬರುವಿರಲ್ಲಾ ಮಿತ್ರರೇ....
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
No comments:
Post a Comment