ಶ್ರೀ ಸದ್ಗುರುನಾಥ ಲೀಲಾಮೃತ - 2
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 49
ಹೆಣ್ಣಿನ ಸಂಬಂಧವಲ್ಲ ಬೆಳೆದದ್ದು ಗುರುಬಾಂಧವ್ಯ
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ । ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।
'ಗುರುವನ್ನು ಅರಿಯುವುದು ಕಷ್ಟ' ವೆಂಬುದನ್ನು ಪ್ರಾತ್ಯಕ್ಷಿಕವಾಗಿ ಕಂಡ ಭಕ್ತರೊಬ್ಬರು, ಅಂದು ಸಖರಾಯಪಟ್ಟಣಕ್ಕೆ ಸಂಜೆ ಏಳರ ಸಮಯಕ್ಕೆ ಗುರುನಾಥರ ದರ್ಶನಾಕಾಂಕ್ಷಿಯಾಗಿ, ಅವರ ಮನೆಯ ಒಳಗೆ ಅಡಿ ಇಟ್ಟಿದ್ದರು. ಬರುವ ಮೊದಲೇ ಪಕ್ಕದ ಅಂಗಡಿಯಲ್ಲಿ ಗುರುನಾಥರು ಊರಲ್ಲಿದ್ದಾರೆ ಎಂಬ ಖಚಿತ ಮಾಹಿತಿಯನ್ನು ಸನಿಹದ ಅಂಗಡಿಯಲ್ಲಿ ಪಡೆದಿದ್ದರು. ಮನೆಯೊಳಗೆ ಕಾಲಿಟ್ಟಾಗ ಒಬ್ಬ ವ್ಯಕ್ತಿ ಬಂದು 'ಯಾರು ಬೇಕು' ಎಂದು ಪ್ರಶ್ನಿಸಿದಾಗ, ಈತ 'ಅದೇ ವೆಂಕಟಾಚಲಯ್ಯ ಸ್ವಾಮಿಗಳು ಬೇಕು. ಅವರನ್ನು ನೋಡಲು ಬಂದಿದ್ದೇನೆ' ಎಂದರು. ಆದರೆ ಎದುರಿಗಿದ್ದ ವ್ಯಕ್ತಿ 'ಇಲ್ಲಿ ಅಂತಹವರು ಯಾರೂ ಇಲ್ಲ' ಎಂದಾಗ ಮತ್ತೆ ಅನುಮಾನಗೊಂಡ ಇವರು ನಿಂತೇ ಇದ್ದರು. 'ಹೇಳಿದೆನಲ್ಲಾ ಮತ್ಯಾಕೆ ನಿಂತಿದ್ದೀರಿ.. ಇಲ್ಲಿ ವೆಂಕಟಾಚಲನೆಂಬೋರು ಯಾರೂ ಇಲ್ಲ.. ಯಾವ ಸ್ವಾಮಿಗಳೂ ಇಲ್ಲಿಲ್ಲ... ಹೊರಡಿ ಹೊರಡಿ' ಎಂದು ಕಠೋರವಾದ ನುಡಿ ಕೇಳಿ ಬಂದಾಗ... ಮಾಡುವುದಿನ್ನೇನು? ಅವರು ಅನುಮಾನ ಪಡುತ್ತಲೇ ಹೊರಟು... ಮತ್ತೆ ಬಂದದ್ದು ಅಂಗಡಿಗೆ. 'ಏನು ಸ್ವಾಮಿ ವೆಂಕಟಾಚಲ ಗುರುಗಳು ಹೇಗಿದ್ದಾರೆ... ನಾನವರನ್ನು ಇದುವರೆವಿಗೂ ನೋಡಿಲ್ಲ' ಎಂದಾಗ ಆತ 'ಗಡ್ಡ ಬಿಟ್ಟಿದ್ದಾರೆ. ಒಂದು ಪಂಚೆ ಉಟ್ಟಿದ್ದಾರೆ.... ಬಹಳ ಸರಳರು' ಎಂದುಬಿಟ್ಟ.
ಓಹೋ ನಾನು ನೋಡಿರುವುದು ಗುರುನಾಥರನ್ನೇ. ಮೌಖಿಕವಾಗಿಯೂ ಮಾತನಾಡಿದರೂ.... ನನ್ನ ಗ್ರಹಚಾರ ಕಳೆದಿಲ್ಲವೇನೋ... ಸದ್ಗುರುವಿನ ದರ್ಶನವಾಯಿತು, ಆದರೆ ಕೃಪೆಯಾಗಿಲ್ಲ.. ಬಿಡಬಾರದು ಹಿಡಿದುಕೊಳ್ಳಬೇಕು.. ಎಷ್ಟೇ ನಿಷ್ಟೂರವಾಗಿ ಅವರು ನುಡಿದರೂ ಗುರುಪಾದ ಸಿಗಲೇಬೇಕೆಂದು ಅವರು ಮನದಲ್ಲೇ ನಿರ್ಧರಿಸಿ, ಅಂಗಡಿಯವನೊಂದಿಗೆ 'ಮತ್ತೇಕೆ ಅವರು ಇದ್ದೂ ಇಲ್ಲವೆಂದರು?' ಎಂದು ಕೇಳಿದಾಗ 'ನಿಮ್ಮ ಅದೃಷ್ಟ ಅದು ಇಷ್ಟೇ ಇತ್ತು, ಎಂದು ಕಾಣುತ್ತದೆ' ಎಂದುಬಿಟ್ಟರು ಅಂಗಡಿಯವರು.
ಶಿವಮೊಗ್ಗದ ಡಾ.ಪ್ರಭುದೇವ ಅವರು ಗುರುನಾಥರ ಹೆಸರನ್ನು ಕೇಳಿದ್ದರು. ಅವರ ಮಹಿಮೆಯ ಅಲೌಕಿಕ ವಿಚಾರಗಳ ಪ್ರಭಾವ ಅವರ ಮೇಲಾಗಿತ್ತು. ಒಮ್ಮೆ ಒಂದು ಹೆಣ್ಣು ನೋಡಲು ಸಖರಾಯಪಟ್ಟಣಕ್ಕೆ ಹೋದಾಗ ಹೆಣ್ಣಿನ ಕಡೆಯವರನ್ನು ವಿಚಾರಿಸಿದಾಗ 'ವೆಂಕಟಾಚಲಯ್ಯ ಗುರುಗಳು ಈ ಊರಲ್ಲಿದ್ದಾರೆ... ಆದರೆ ಈ ಊರಿನವರಿಗಿಂತ ಬೇರೆ ಕಡೆಯಿಂದ ಜನ ಬರುತ್ತಾರೆ.. ನಾವು ಹೋಗುವುದು ಕಡಿಮೆ' ಎಂದಿದ್ದರು. ಮುಂದೆ ಆ ಸಂಬಂಧ ಆಗಿಬರಲಿಲ್ಲ. ಗುರುನಾಥರನ್ನು ಕಾಣುವ ಹಂಬಲ ಮಾತ್ರಾ ಮಹತ್ತಾಗಿ ಗುರು ಸಂಬಂಧವನ್ನು ಬೆಳೆಸಿಕೊಳ್ಳಬೇಕೆಂಬ ಅದಮ್ಯವಾದ ಬಯಕೆಯಂತೂ ಪ್ರಭು ದೇವರ ಮನದಲ್ಲಿ ಆಳವಾಗಿ ಬೇರೂರಿತ್ತು.
ಮರಳಿ ಯತ್ನವ ಮಾಡು
ಒಂದು ಸಾರಿ ಫೇಲಾದವೆಂದು ಓದುವುದನ್ನೇ ಬಿಟ್ಟರೆ, ನಮಗೆ ಹಾನಿಯೇ ಹೊರತು, ವಿದ್ಯೆಗೇನಾಗದು. ತಪ್ಪಾದನ್ನು ತಿದ್ದಿಕೊಂಡು, ಕೊಂಚ ಪ್ರಯತ್ನ ಮಾಡಿದಾಗ ಒಳ್ಳೆಯ ಫಲ ಸಿಕ್ಕೇ ಸಿಗುತ್ತದೆ. ನಮ್ಮ ಪ್ರಭುದೇವರು ಗುರುವಿನ ಪರೀಕ್ಷೆಯಲ್ಲಿ ಪಾಸಾದ ರೀತಿಯನ್ನು... ಬನ್ನಿ ಗುರುಬಾಂಧವರೇ ಅವರ ಬಾಯಿಂದಲೇ ಕೇಳೋಣ.
'ರಾತ್ರಿ 7:30 ರ ಸಮಯ. ಮತ್ತೆ ನಾನು ಅದ್ಯಾವುದೋ ಪ್ರಬಲ ಇಚ್ಛೆಯಿಂದ ಗುರುನಾಥರ ಮನೆಯೊಳಗೆ ಕಾಲಿಟ್ಟೆ. ಮತ್ತೆ ಎರಡನೆಯ ಬಾರಿ ದರ್ಶನವಾಯಿತು. ಗುರುನಾಥರು ಹೇಳಿದೆನಲ್ಲಾ ಮತ್ಯಾಕೆ ಬಂದಿರಿ... ನಡೀರಿ' ಎಂದರು. 'ಇಲ್ಲಾ ಸ್ವಾಮಿ ನಿಮ್ಮನ್ನೇ ನೋಡಬೇಕೆಂದು ಬಂದಿದ್ದೀನಿ' ಎಂದು ಭಕ್ತಿಯಿಂದ, ಧೈರ್ಯದಿಂದ ಹೇಳಿದೆ. 'ಅಲ್ಲಿ ಕುಳಿತುಕೊಳ್ಳಿ' ಎಂದು ಹೇಳಿ ಅದ್ಯಾರಿಗೋ 'ಒಂದು ಲೋಟ ಬಿಸಿ ಹಾಲನ್ನು ಇವರಿಗೆ ತಂದು ಕೊಡಿ' ಎಂದು ಹೇಳಿ ಒಳ ನಡೆದರು. ಬಹುಶಃ ರಾತ್ರಿಯ ಎಂಟು ಗಂಟೆಯಾಗಿತ್ತು. ಊಟದ ಸಮಯವೇನೋ ಕೈಯಲ್ಲಿ ಹಾಲು ಹಿಡಿದು ಕುಳಿತ ನಾನು ಗುರುವಿನ ಕೃಪೆಯಾಗದ ಹೊರತು ಕುಡಿಯಬಾರದೆಂದು ಕೈಯಲ್ಲಿ ಲೋಟ ಹಾಗೆಯೇ ಹಿಡಿದು ಸ್ವಲ್ಪ ಹೊತ್ತು ಕುಳಿತಿದ್ದೆ. ಒಳಗಿನಿಂದ ಬಂದ ಒಬ್ಬರು 'ನೀವು ಹಾಲು ಕುಡಿಯಬೇಕು. ಅವರು ಹೇಳಿದ ಮೇಲೆ ಮುಗಿಯಿತು.... ನೀವು ಹಾಲು ಕುಡಿಯಿರಿ' , ಎಂದು ಒತ್ತಾಯಿಸಿದರು. ಗುರುವೆಂದು ನಂಬಿ ಬಂದ ಮೇಲೆ ಗುರುವಾಕ್ಯವನ್ನು ಶಿರಸಾವಹಿಸುವುದು ನನ್ನ ಮೊದಲ ಕರ್ತವ್ಯವೆಂದು ಭಾವಿಸಿದ ನಾನು ಹಾಲನ್ನು ಭಕ್ತಿಯಿಂದ ಕುಡಿದೆ. ಅಲ್ಲಿ ಒಳಗೆ ಕುಳಿತೇ ಇಲ್ಲಿ ಏನು ನಡೆದಿದೆ ಎಂದು ಬಲ್ಲವರಾಗಿ, ಅದಕ್ಕೆ ತಕ್ಕ ಆಣತಿಯನ್ನು ಗುರುನಾಥರು ಮಾಡಿದ್ದರು. ಮೊದಲು ಕಂಡಾಗ ಗುರುನಾಥರು ಆಡಿದ ಮಾತಿಗೂ ಈಗ್ಗೂ ಸಾಕಷ್ಟು ವ್ಯತ್ಯಾಸವಿತ್ತು. ಗುರುಕರುಣೆ ನನಗೆ ಅಮೃತವನ್ನೇ ನೀಡಿದ್ದರು. ಊರಿಗೆ ವಾಪಸ್ಸು ಹೋಗದೇ, ಮತ್ತೆ ನಾನು ಇಲ್ಲಿಗೆ ಬಂದದ್ದು, ಆ ದಿನ ಶಿವಮೊಗ್ಗದಿಂದ ನಾನು ತುಮಕೂರಿಗೆ ಹೋಗಬೇಕಾದವನು ಬಹುಶಃ ನಾನು ಬಂದದ್ದಲ್ಲ, ಅವರೇ ನನ್ನನ್ನು ಇಲ್ಲಿಗೆ ಕರೆಸಿದ್ದೇ ಇವರು ಇರಬೇಕು' ಎನ್ನುತ್ತಾರೆ ಅವರು.
ಪ್ರಿಯ ಗುರುಬಂಧುಗಳೇ..... ಇಂದಿನ ಸತ್ಸಂಗದಲ್ಲಿ ಗುರುಪರೀಕ್ಷೆಯ ಸೊಗಸಾದ ಘಟನೆಯ ಆಸ್ವಾದ ನಮಗಾಗಿದೆ. ಮುಂದೆ ಗುರುನಾಥರು ಏನು ಮಾಡಿದರು? ಅವರ ಮತ್ಯಾವ ಮುಖ ಅನಾವರಣಗೊಂಡಿತು? ಪರೀಕ್ಷೆಯ ಫಲಿತಾಂಶವೇನು ಬಂತು, ಎಂಬುದನ್ನು ಅರಿಯಲು ನಾಳಿನ ನಿತ್ಯ ಸತ್ಸಂಗಕ್ಕೆ ಬರುವಿರಲ್ಲಾ.....
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
No comments:
Post a Comment