ಶ್ರೀ ಸದ್ಗುರುನಾಥ ಲೀಲಾಮೃತ - 2
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 38
ರಾಮನಾಮವೂ ಓಂಕಾರವೂ ಒಂದೇ
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ । ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।
'ಭಕ್ತ ಸಮೂಹದೊಂದಿಗೆ ನೇರವಾಗಿ ಗುರುನಾಥರ ಮನೆಗೆ ಹೋದೆವು. ಎಲ್ಲರನ್ನೂ ಸ್ವಾಗತಿಸಿದ ಗುರುನಾಥರು ನನ್ನನ್ನು ನೇರವಾಗಿ ದೇವರ ಮನೆಗೆ ಕರೆದೊಯ್ದರು. ಪಾದ ಪೂಜೆ ಮಾಡಿಸಿ, ಭಿಕ್ಷೆ ಹಾಕಿಸಿದರು. ಹೊರಗಡೆ ಹಾಲ್ ನಲ್ಲಿ ಬಾಕಿ ಭಕ್ತರಿಗೆ ಅನ್ನಸಂತರ್ಪಣೆಯಾಯಿತು. ಭಜನೆಯೂ ಪ್ರಾರಂಭವಾಯಿತು. ಭೋಜನದ ನಂತರ ಮತ್ತೆ ಸತ್ಸಂಗ ನಡೆಯಿತು. ನಾವು ಗುರುನಾಥರಿಗೋಸ್ಕರ ದಾವಣಗೆರೆಯ ಒಂದು ವಿಶೇಷ ಸಿಹಿ ಅಂಗಡಿಯಿಂದ ಉತ್ತಮವಾದ ಜಿಲೇಬಿಯನ್ನು ತೆಗೆದುಕೊಂಡು ಹೋಗಿದ್ದೆವು. ಅವರಿಗೆ ಒಂದು ತುಣುಕು ಜಿಲೇಬಿ ತಿನ್ನಿಸಿದೆವು. ಬಾಕಿ ಎಲ್ಲವನ್ನೂ ಬಾಕಿಯವರಿಗೆ ಹಂಚಿಸಿದರು. ನೋಡ ನೋಡುತ್ತಿದ್ದಂತೆ ಇವತ್ತರವತ್ತು ಜನ ಭಕ್ತರು ಬಂದು ಸೇರಿದರು. ಬಂದ ಭಕ್ತರು ಹಣ್ಣು ಹಂಪಲು, ಹೂವು, ರವಿಕೆ ಪೀಸ್ ಗಳನ್ನೆಲ್ಲ ತಂದಿದ್ದರು. ಎಲ್ಲರಿಗೂ ಹಣ್ಣು, ಹೂವು ರವಿಕೆ ಪೀಸ್ ಗಳನ್ನೂ ಆದರದಿಂದ ಕೊಟ್ಟು 'ತಂದೆ ತಾಯಿಗಳನ್ನು ಗೌರವಾದರದಿಂದ ದೇವರೆಂದು ತಿಳಿದು ಚೆನ್ನಾಗಿ ನೋಡಿಕೊಳ್ಳಿ. ಗುರುವನ್ನು ಭವದಲ್ಲಿ ನೋಡಿರಿ. ಭಗವಂತನು ಕೊಟ್ಟ ಈ ಮಾನವ ಜನ್ಮವನ್ನು ಸದಾಚಾರ, ಸೇವೆ, ನಾಮಸ್ಮರಣೆಯಿಂದ ಸದುಪಯೋಗಪಡಿಸಿಕೊಳ್ಳಿ' ಎಂದು ಎಲ್ಲರನ್ನೂ ಹರಸಿ, ಅಲ್ಲಿದ್ದ ಶ್ರೀ ಶ್ರೀ ಚಂದ್ರಶೇಖರ ಭಾರತಿ ಸ್ವಾಮಿಗಳ ಭಾವಚಿತ್ರಕ್ಕೆ ಆರತಿ ಮಾಡಿಸಿದರು. ಬಂದ ಭಕ್ತರಿಗೆಲ್ಲಾ ಪಕೋಡ ಕಾಫಿಗಳನ್ನು ಕೊಟ್ಟು ನನಗೊಂದು ಚಂದ್ರಶೇಖರ ಭಾರತಿ ಸ್ವಾಮಿಗಳ ಫೋಟೋವನ್ನು ಕೊಟ್ಟರು. ನಮ್ಮನ್ನೆಲ್ಲ ಭಜನೆ ಮಾಡುತ್ತಾ, ಊರಿನ ಹೊರಗಿನ ತನಕ ಜೊತೆಗೆ ಬಂದು ಪ್ರೀತಿಯಿಂದ ಬೀಳ್ಕೊಟ್ಟರು. ಮಾಳೇನ ಹಳ್ಳಿಯಲ್ಲಿ, ಶ್ರೀ ರಂಗನಾಥಾಶ್ರಮದಲ್ಲಿ 2-11-2008 ರ ಭಾನುವಾರದಂದು ರಾಮತಾರಕ ಹೋಮ ಬಹಳ ವೈಭವದಿಂದ ನಡೆದು, ಹೋಮ ಕುಂಡದ ಅಗ್ನಿಜ್ವಾಲೆಯಲ್ಲಿ ಸಂಸ್ಕೃತದ ಓಂಕಾರದ ಭಾವ ಮೂಡಿತು. ಶ್ರೀ ಬ್ರಹ್ಮಚೈತನ್ಯ ಮಹಾರಾಜರು 'ರಾಮನಾಮ ಬೇರೆಯಲ್ಲ - ಓಂಕಾರ ಬೇರೆಯಲ್ಲ' ಎಂದಿದ್ದರು. ಅದು ಅಂದು ಅಲ್ಲಿ ನಮಗೆಲ್ಲಾ ಸತ್ಯವಾಗಿ ಮನದಟ್ಟಾಯಿತು. ದೊಡ್ಡೇರಿಯ ಶ್ರೀ ಸತ್ ಉಪಾಸಿ ಗುರುಗಳ ಹಾಗೂ ಶ್ರೀ ವೆಂಕಟಾಚಲ ಅವಧೂತರ ಆಶೀರ್ವಾದದಿಂದ ಸಂತೃಪ್ತಿಯಾಗಿ ಎಲ್ಲ ನಡೆದು ದೊಡ್ಡ ಅಣ್ಣ ಸಂತರ್ಪಣೆಯೂ ಆಗಿ ಹಿಡಿದ ಕಾರ್ಯ ಹೀಗೆ ಸಂಪನ್ನವಾಗಿತ್ತು.
ಗುರುಕರುಣೆಯಾದಾಗ ಯಾವುದಕ್ಕೂ ಕೊರತೆಯಾಗದು ಎಂಬುದಕ್ಕೆ ಇಂತಹ ಅನೇಕ ಉದಾಹರಣೆಗಳು ನಮ್ಮ ಕಣ್ಣು ಮುಂದೆಯೇ ಜರುಗುತ್ತದೆಯಲ್ಲವೇ?
ಮೀನಿನ ಬಲೆ ತರಿಸಿ
ಗುರುದರ್ಶನಕ್ಕೆ ಕಾರಣ - ಕಾಲಗಳನ್ನು ನೋಡದೆ, ಎಷ್ಟು ಸಾರಿ ಅವಕಾಶ ಸಿಕ್ಕರೂ ಅದನ್ನು ಸದುಪಯೋಗಪಡಿಸಿಕೊಳ್ಳುವುದೇ ಮುಖ್ಯ. ಏನೇನೋ ಸಣ್ಣಪುಟ್ಟ ಕಾರಣಗಳನ್ನು ಒಡ್ಡಿ ಗುರುದರ್ಶನದ ಅವಕಾಶಗಳನ್ನು ಕಳೆದುಕೊಂಡರೆ ಅದರಿಂದ ನಮಗೇ ನಷ್ಟವಾಗುತ್ತದೆ. ಗುರುದರ್ಶನ ಅವಕಾಶವೂ ಹಾಗೆಲ್ಲಾ ಸುಮ್ಮಸುಮ್ಮನೆ ಬರುವಂತಹದ್ದಲ್ಲ. ಈ ದೃಷ್ಟಿಯಿಂದ ಸಮಯ ಬಂದಾಗಲೆಲ್ಲಾ ಗುರುನಾಥರ ಸಾನ್ನಿಧ್ಯಕ್ಕೆ ತೆರಳಿ ಅವರ ಕೃಪಾದೃಷ್ಟಿಯಿಂದ ಪುನೀತರಾದ ಬ್ರಹ್ಮಾನಂದ ಗುರುಗಳು ತಮ್ಮ ಅನುಭವವನ್ನು ಮತ್ತೆ ನಿತ್ಯ ಸತ್ಸಂಗಕ್ಕಾಗಿ ಮುಂದುವರೆಸಿದರು.
'ಅಂದು ಭರಮ ಸಾಗರದ ಭಕ್ತರು, ಅರಸೀಕೆರೆಯಲ್ಲಿರುವ ಶ್ರೀ ಶಂಕರಲಿಂಗ ಭಗವಾನರ ಶಿಷ್ಯರಾದ ಚಿನ್ಮಯಪುರಿ ಹಂಸರ ಆಶ್ರಮ, ಅವರ ವೇದಿಕೆಗಳನ್ನು ನೋಡಬೇಕೆಂದು ಆಶಿಸಿದಾಗ ನನ್ನನು ಅವರು ಒಂದು ವ್ಯಾನು ಮಾಡಿಕೊಂಡು ಕರೆದೊಯ್ದರು. ಆಶ್ರಮದಲ್ಲಿ ಭಜನೆ, ಪೂಜೆಯ ನಂತರ ಮಹೇಶ್ ದೇಸಾಯಿ ದಂಪತಿಗಳು ಉಪಾಹಾರ, ಕಾಫಿಯ ವ್ಯವಸ್ಥೆ ಮಾಡಿದ್ದರು. ನಂತರ ಅಲ್ಲಿಂದ ಬಾಣಾವರದ ಕೃಷ್ಣ ಯೋಗಿಂದ್ರರ ಸಮಾಧಿ ಸನ್ನಿಧಿಗೆ ಹೋಗಿ ಅಲ್ಲಿ ಗುರುಭಜನೆ ಮಾಡಿ, ಮಹಾಪ್ರಸಾದ ಸ್ವೀಕರಿಸಿ, ಗುರುನಾಥರ ಇರುವಿನ ಬಗ್ಗೆ ವಿದ್ಯಾಧೀಶರಿಂದ ಸುಳಿವು ಪಡೆದುಕೊಂಡು ಚಿಕ್ಕಮಗಳೂರಿಗೆ ಹೊರಟೆವು. ಅಲ್ಲಿನ ವಕೀಲ, ಭಕ್ತರಾದ ಲಚ್ಚಣ್ಣ (ಶ್ರೀ ಲಕ್ಷ್ಮೀನರಸಿಂಹ) ನವರ ಮನೆಗೆ ಹೋದೆವು. ಅಲ್ಲಿ ಅವರ ಮನೆಗೆ ಹೋದಾಗ ಗುರುನಾಥರು, ಬಾಗಿಲಲ್ಲಿ ನಿಂತಿದ್ದರು. 'ನಿಮಗೋಸ್ಕರ ಕಾಯುತ್ತಿದ್ದೆ' ಎಂದು ಪ್ರೀತಿಯಿಂದ ಸ್ವಾಗತಿಸಿ, ಎಲ್ಲರನ್ನೂ ಒಳಗೆ ಕರೆದೊಯ್ದರು. ಬಿಸಿ ಬಿಸಿ ಇಡ್ಲಿ, ಕಾಫಿ ಕೊಡಿಸಿದರು. ನಂತರ ಭಜನೆಯಾಯಿತು. ನಂತರ ಭರಮಸಾಗರದ ಭಕ್ತರೊಬ್ಬರು, ತಮ್ಮ ವೈಯಕ್ತಿಕವಾಗಿ ಏನೂ ಕೇಳದೆ ಊರಿನ ಜನರ ಹಿತಕ್ಕಾಗಿ ಆಂಜನೇಯನ ದೇವಸ್ಥಾನ ಅಭಿವೃದ್ಧಿಗಾಗಿ ಕೇಳಿದಾಗ ತತ್ ಕ್ಷಣ ಗುರುನಾಥರು 'ಒಂದು ಮೀನಿನ ಬಲೆ ತರಿಸಿ, ಮಣೆಯ ಮೇಲೆ ಮರಳು ಹಾಕಿ ಆ ಮೀನಿನ ಬಲೆ ಇಟ್ಟು, ಅದರ ಮೇಲೆ ಅರಿಶಿನದ ಕೊಂಬು ಇಟ್ಟು, ಪ್ರತಿನಿತ್ಯ ಅರಿಶಿನ, ಕುಂಕುಮ, ಹೂವಿನಿಂದ ಪೂಜೆ ಮಾಡಿರಿ' ಎಂದರು. ಪ್ರಿಯ ಓದುಗ ಮಿತ್ರರೇ, ಗುರುನಾಥರ ಬಳಿ ನಮ್ಮ ಸಮಸ್ಯೆಗಳನ್ನು ತೆಗೆದುಕೊಂಡು ಹೋದಾಗ ಅವರು ಹೇಳುವ ಸಮಾಧಾನಗಳು ಒಂದಕ್ಕೊಂದು ಸಂಬಂಧವಿಲ್ಲದಂತೆ ಕಂಡು ಬಂದರೂ ಆಂತರ್ಯದಲ್ಲಿ ಅದೇನೋ ಸಂಬಂಧವಿದ್ದೇ ಇರುತ್ತಿತ್ತು. ಊರು, ಆಂಜನೇಯ ದೇವಾಲಯದ ಅಭಿವೃದ್ಧಿಗೂ ಮೀನಿನ ಬಲೆಗೂ ಏನು ಸಂಬಂಧ? ಭರಮ ಸಾಗರದ ಭಕ್ತರು ಮುಂದೇನು ಮಾಡಿದರು? ಗುರುವಾಕ್ಯದಂತೆ ನಡೆದರೋ? ಎಲ್ಲ ವಿಚಾರಗಳನ್ನು ಅರಿಯಲು, ದಯಮಾಡಿ ನಾಳಿನ ನಿತ್ಯ ಸತ್ಸಂಗಕ್ಕೆ ನಮ್ಮೊಂದಿಗೆ ಇರುತ್ತೀರಲ್ಲಾ....
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
No comments:
Post a Comment