ಶ್ರೀ ಸದ್ಗುರುನಾಥ ಲೀಲಾಮೃತ - 2
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 25
ಗುರು, ಪರಮ ಗುರು, ಪರಾತ್ಪರ ಗುರು
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ । ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।
ಸಖರಾಯಪಟ್ಟಣದ ಗುರುನಾಥರಿಗೆ ಆರಾಧಕರಾದ ಶ್ರೀ ಶ್ರೀ ಕೃಷ್ಣ ಯೋಗಿಂದ್ರ ಸರಸ್ವತಿಯವರ ಗುರು ಮೂಲವನ್ನು ಅರಿಯಬೇಕಿದೆ. ಅರಸೀಕೆರೆ-ಹಾಸನ, ರಸ್ತೆಯಲ್ಲಿ ಅರಸೀಕೆರೆಯಿಂದ ಆರು ಮೈಲಿಗಳಷ್ಟು ಹೋದರೆ ಹಾರನಹಳ್ಳಿ - ಆಲೂರ ಹೊರಗೆ ಅಲ್ಲೊಂದು ತಪೋವನವಿದೆ. ಬಹು ದೊಡ್ಡ ಸಾಧಕರ ತಪೋ ಭೂಮಿಯದು. ಅವರೇ ಶ್ರೀ ಶ್ರೀ ನರಸಾರ್ಯರು. ಬಾಣಾವರದ ಕೃಷ್ಣ ಯೋಗಿಂದ್ರ ಸರಸ್ವತಿ ಗುರುಗಳ ಗುರುಗಳು. ಆ ಜಾಗವೋ ಅದೆಷ್ಟೋ ವರ್ಷಗಳು ಅಜ್ಞಾತವಾಗಿ ಉಳಿದಿತ್ತು. ವೆಂಕಟಾಚಲ ಅವಧೂತರ ಕೃಪೆಯಾಗುತ್ತಿದ್ದಂತೆ, ಹಾಗೂ ಆ ಮಹಾನ್ ತಪಸ್ವಿಗಳ ಮನಸ್ಸಿಗೆ ಬರುತ್ತಿದ್ದಂತೆ, ಅದೀಗ ಒಂದು ನಂದನವನವಾಗಿ, ತಪೋಭೂಮಿಯಾಗಿ ಸಾಧಕರ ನೆಲೆಯಾಗಿದೆ.
ಗುರುಬಾಂಧವರೇ, ಮತ್ತೆ ಬಾಣಾವರಕ್ಕೆ ಬರೋಣ.... ಗುರುನಾಥರ ಆರಾಧ್ಯರ ಬಗ್ಗೆ ಮತ್ತಷ್ಟು ಅರಿಯೋಣ.
ಗುರುನಾಥರ ನಿರಂತರ ಪ್ರಯತ್ನ, ತಪಸ್ಸಿನ ಫಲದಿಂದ, ಶ್ರಮದಿಂದ ಬಾಣಾವರ ಸುಕ್ಷೇತ್ರವಾಗಿ ಅನೇಕ ಜಾಗತಿಕ ಅದ್ಭುತಗಳೇ ನಡೆದದ್ದು ನಾವೆಲ್ಲಾ ಅರಿತಿದ್ದೇವೆ.
ಕೃಷ್ಣ ಯೋಗಿಂದ್ರರ ಕಾಲಮಾನ ಸುಮಾರು 1520 ರಿಂದ 1610ನೇ ಇಸವಿ. ಸುಮಾರು 90 ವರ್ಷಗಳು ಸಾಧನೆ ಮಾಡಿದ ಇವರಿಗೆ, ನಾಲ್ಕು ವೇದಗಳ ಪ್ರತೀಕವಾಗಿ ಎಲ್ಲ ವೇದಗಳ ಶಿಷ್ಯರೂ ಹಾಗೂ ಪ್ರಮುಖವಾಗಿ ಏಳು ಜನ ಶಿಷ್ಯರಿದ್ದರೆಂಬ ವಿಚಾರ ಹಾಗೂ ಕೆಲವೆಡೆ 28 ಜನ ಶಿಷ್ಯರಿದ್ದ ವಿಚಾರ ಪ್ರಚುರವಾಗಿದೆ. ಇವರೆಲ್ಲರೂ ಸಜೀವ ಸಮಾಧಿ ಹೊಂದಿದ ಮಹಾತ್ಮರುಗಳು. ಇಬ್ಬರ ಸಮಾಧಿ ಇಲ್ಲೇ ಇದೆ.
ಬಹು ದೊಡ್ಡ ಸಾಧಕರಾದ ಇವರು ಮಾಲೇಕಲ್ ತಿರುಪತಿಯಲ್ಲೇ ತಮ್ಮ ಬಹು ಸಾಧನಾ ಕಾಲವನ್ನು ಕಳೆದುದಲ್ಲದೇ, ಬೆಟ್ಟದ ಮೇಲಿನ ಆ ಪರಮಾತ್ಮನ ಅನನ್ಯ ಆರಾಧಕರಾಗಿದ್ದರು. ಅವರ ಅನೇಕ ಕುರುಹುಗಳಾದ ಪಾದುಕೆ, ದಂಡ ಮುಂತಾದವುಗಳು ಆ ಸ್ಥಳದಲ್ಲಿ ದೊರಕಿದೆಯಂತೆ.
ಒಮ್ಮೆ ವೆಂಕಟರಮಣನ ಪೂಜಾರರಿಗೆ ವಿಸ್ಮಯವೊಂದು ಕಾಡತೊಡಗಿತು. ಪೂಜೆ ಮುಗಿದು, ಬೀಗ ಹಾಕಿಕೊಂಡು ಬೆಟ್ಟವಿಳಿದು ಬಂಡ ಪೂಜಾರಿಗೆ ಮಾರನೆಯ ದಿನ ಬೆಳಗಿನ ಜಾವ ಹೋದಾಗ ಸ್ವಾಮಿಯು ಆಗತಾನೇ ಪೂಜೆಗೊಂಡು, ಅಲಂಕಾರಗೊಂಡು ನಿಂತಿದ್ದನ್ನು ಕಂಡು ವಿಸ್ಮಿತರಾದರು. ಇದರ ಮೂಲವನ್ನು ಹುಡುಕಲು ಹೋದಾಗ ಕಂಡಿದ್ದು ಮತ್ತೂ ವಿಸ್ಮಯವಾದದ್ದು. ಕೃಷ್ಣ ಯೋಗಿಂದ್ರ ಸರಸ್ವತಿಗಳು ನಿಂತು, ಬೀಗ ಮುದ್ರೆ ಹಾಕಿದ್ದ ದೇವಾಲಯದೊಳಗೆ ವೆಂಕಟರಮಣನನ್ನು ಪೂಜಿಸುತ್ತಿದ್ದರು. ಸಜೀವ ಸಮಾಧಿಯಾದ ಕೃಷ್ಣ ಯೋಗಿಂದ್ರರು ಹೀಗೆ ಎಲ್ಲ ಮೀರಿ ನಿಂತಿದ್ದ ಸಾಧಕರು. ಅವರ ಕೃಪಾಶೀರ್ವಾದ, ಅವರ ಅಂಶವೇ ಆದ ನಮ್ಮ ಗುರುನಾಥರೂ ಹೀಗೆಯೇ ಪ್ರಕಟವಾದ ಘಟನೆಗಳಿವೆಯಲ್ಲಾ.
ಅವಿನಾಶಿ ಸದ್ಗುರು
'ಕೃಷ್ಣ ಭಕ್ತೆ ಮೀರಾ ಲೋಕದ ಕಣ್ಣಿಗೆ ವಿಧವೆಯಾಗಿ ಪತಿ ರಾಯಣನ ಮೃತ್ಯುವಾದರೂ ಆಕೆ ತನ್ನ ಪತಿ ಶ್ರೀ ಕೃಷ್ಣ ಪರಮಾತ್ಮ, ಅವಿನಾಶಿ ಪ್ರಭುವಿಗೆ ಕೊನೆ ಎಲ್ಲಿ? ನಾನು ಸುಮಂಗಲಿ - ದೇವಾನುದೇವತೆಗಳ ಸಮ್ಮುಖದಲ್ಲಿ ಕೃಷ್ಣನೊಂದಿಗೆ ನನ್ನ ಮದುವೆಯಾಗಿದೆ' ಎಂದವಳು ಸಮಾಜದ ಯಾವ ಕಟ್ಟುಕಟ್ಟಳೆಗಳು, ಆ ಭಕ್ತೆಯನ್ನು ಬಂಧಿಸಲಾರದಾದವು. ನಿರಂತರ ಸ್ವಯಮಾನಂದದಲ್ಲಿದ್ದ ವಿಚಾರವನ್ನಿಲ್ಲಿ ಸ್ಮರಿಸಬಹುದು.
ಹಾಗೆಯೇ ಗುರುವೆಂದರೆ ಅವಿನಾಶಿ. ಕೃಷ್ಣ ಯೋಗಿಂದ್ರ ಸರಸ್ವತಿಗಳಿಗೂ ಸಖರಾಯಪಟ್ಟಣದ ಗುರುನಾಥರಿಗೂ ಈ ಸಂಬಂಧ. ಅವರೇ ಇವರಾಗಿ ಬಂದಿದ್ದಾರೆಂಬುದನ್ನು ಅನೇಕ ತಮ್ಮ ಅಂತರಂಗದ ಭಕ್ತರ ಅರಿವಿಗೆ ತಂದಿದ್ದಾರೆ. ಆತ್ಮಕ್ಕೆ ಅಳಿವಿಲ್ಲ... ಗುರುಶಕ್ತಿ ನಿರಂತರ ವಿವಿಧ ರೂಪಗಳಲ್ಲಿ ಪ್ರಕಟವಾಗುತ್ತಲೇ ಸಾಗಿದೆ ಭಕ್ತ ಜನರ ಉದ್ಧಾರಕ್ಕಾಗಿ.
ಒಮ್ಮೆ ಸಖರಾಯಪಟ್ಟಣದಲ್ಲಿ ಗುರುನಾಥರು ಚಳಿ ಚಳಿ ಎಂದು ನಡುಗುತ್ತಿದ್ದರಂತೆ. ಎಲ್ಲರಿಗೆ ಇದು ಆಶ್ಚರ್ಯ. ಮುಂದೆ ತಿಳಿದು ಬಂದಿದ್ದೇನೆಂದರೆ ಬಾಣಾವರದ ಕೃಷ್ಣ ಯೋಗಿಂದ್ರ ಸರಸ್ವತಿಗಳ ಬೃಂದಾವನದ ಮೇಲ್ಭಾಗದ, ಬೃಂದಾವನದ ರಿಪೇರಿಯ ಸಂದರ್ಭದಲ್ಲಿ ಯಥೇಚ್ಛವಾಗಿ ನೀರನ್ನು ಹರಿಸಿದ್ದರು. ಅದು ಬೃಂದಾವನದ ಒಳಗೂ ಹರಿದಿತ್ತು. ಕೂಡಲೇ ಆ ನೀರನ್ನೆಲ್ಲಾ ಒರೆಸಿ, ಬೃಂದಾವನದ ಒಳಗೆ ಸೇರಲಿದ್ದ ಎಲ್ಲಾ ನೀರನ್ನು ಒರೆಸಿ, ಒಣಗಿಸಿದಾಗ ಗುರುನಾಥರ ಚಳಿ ತನ್ನಿಂದ ತಾನೇ ನಿಂತಿತಂತೆ.
ಅಷ್ಟೇ ಏಕೆ? ಅನೇಕ ಸಾರಿ ಬಾಣಾವರದಲ್ಲಿ ಬೃಂದಾವನದ ಬಳಿ ಏನಾದರೂ ಅಪಚಾರವಾದರೆ ಅದರ ಪ್ರಭಾವ ಗುರುನಾಥರ ಮೇಲಾಗಿ ಅವರು ಅಲ್ಲಿ ದೈಹಿಕ ನೋವಿಗೆ, ಮಾನಸಿಕ ಬಳಲಿಕೆಗೆ ತುತ್ತಾಗುತ್ತಿದ್ದರಂತೆ.
ಮತ್ತೊಂದು ಸಾರಿ ಗುರುನಾಥರಿಗೆ ಸಖಾರಾಯಪಟ್ಟಣದಲ್ಲಿ ಕರೆಂಟ್ ಲೀಕ್ ಆಗಿ ಶಾಕ್ ಆದ ಅನುಭವವಾಯಿತಂತೆ. ಕೂಡಲೇ ಅಲ್ಲಿಂದಲೇ ಅವರು 'ಬೃಂದಾವನ ವಿದ್ಯುತ್ ವೈರ್ ಜಾಲದಲ್ಲಿ ಏನೋ ಹೆಚ್ಚು ಕಮ್ಮಿ ಆಗಿ ಕರೆಂಟ್ ಹೊಡೀತಿದೆ... ನೋಡಿ ಗ್ರೌಂಡನ್ನು ಸರಿ ಮಾಡಿಸಿ' ಎಂದು ತಿಳಿಸಿದರಂತೆ. .. ಪರೀಕ್ಷಿಸಿದಾಗ ನಿಜವಾಗಲೂ ಇಲ್ಲಿ ಗ್ರೌಂಡ್ ಆಗುತ್ತಿತ್ತು. ಆಮೇಲೆ ಎಲ್ಲಾ ಸರಿಯಾಯಿತಂತೆ.
ಹೀಗೆ ಗುರುನಾಥರ ಲೀಲೆಗಳು, ನಿತ್ಯ ನೂತನ, ನಿತ್ಯ ಸತ್ಯ... ಆದರೆ, ಜೊತೆಗಿದ್ದೂ ಅರಿಯಲಾಗದ ಮೌಢ್ಯ ನಮ್ಮನ್ನು ಮುಸುಕಿದರೆ? ಅದನ್ನು ಪರಿಹರಿಸುವುದೂ ಗುರುನಾಥರದೇ ಜವಾಬ್ದಾರಿಯಲ್ಲವೇ?
'ಗುರುವೇ ನಿನ್ನಾಜ್ಞೆಯನು ಮೀರಿದ ನರನು - ನರನೆನ್ನಬಹುದೇ?' ಎಂದು ಹಾಡಿ ಹೊಗಳಿದ್ದಾರೆ. ಗುರುವಾಜ್ಞೆ ಇದ್ದಂತಾಗಲಿ ಎಂದಿದ್ದರೆ ಅದೇ ದೊಡ್ಡದು.
ಓದುಗ ಮಿತ್ರರೇ, ಅವಿನಾಶಿ ಸದ್ಗುರುನಾಥರ ಅಪಾರವಾದ ಲೀಲಾ ವಿನೋದಕ್ಕೆ ನಾಳೆಯೂ ಬನ್ನಿ.....,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
Guruvarya venkatachala Avara paadagalige nanna bhakti poorvaka namanagalu. Guruvarya Yellaranu sadaa kaala nimma aashirvaada haagu rakshe doreyuvante Harasi. Hari om tatsat.
ReplyDelete