ಒಟ್ಟು ನೋಟಗಳು

Wednesday, April 19, 2017

ಶ್ರೀ ಸದ್ಗುರುನಾಥ ಲೀಲಾಮೃತ  - 2 

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ನಿತ್ಯ ಸತ್ಸಂಗ  - 41

 

ನಮಗೊದಗಿ ಬಂದ ಸುಯೋಗ 


 

।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।

।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ । ಶೋಕ ಮೋಹ ವಿವರ್ಜಿತಂ ।। 
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।



ಗುರುವೂ ಒಬ್ಬ ತಂದೆ ತಾಯಿಗಳ ಮುಖಾಂತರವೇ, ಈ ಕಲಿಯುಗದಲ್ಲಿ ಲೋಕೋದ್ಧಾರ ಮಾಡಲು ಜನಿಸುವುದು ಅನಿವಾರ್ಯ. ಅಕ್ಕ, ತಂಗಿ, ಅಣ್ಣ, ತಮ್ಮ ಹೀಗೆ ಎಲ್ಲರೊಂದಿಗೆ ಆತ ಬೆಳೆದು ಅವರೊಂದಿಗೆ ಸಲಿಗೆಯ, ಪ್ರೀತಿ, ಆದರ, ಸ್ನೇಹ ಸಂಬಂಧಗಳೊಂದಿಗೆ ಬೆಳೆದ ಆ ಜೀವ ಗುರುವಾದಾಗ ಯಾರು ಹೇಗೆ ವರ್ತಿಸುತ್ತಾರೆ, ವರ್ತಿಸಬೇಕು? ಎಂಬುದೂ ಒಂದು ಗುರುಲೀಲೆಯೇ ಎಂದರೆ ತಪ್ಪಾಗದು. 

ತುಂಬು ಸಂಸಾರದಲ್ಲಿ ಜನಿಸಿ ಪ್ರೇಮದ ಸಾಕಾರಮೂರ್ತಿಯಾಗಿ, ನೊಂದವರಿಗೆ ಕಷ್ಟದಲ್ಲಿರುವವರಿಗೆ ಕಾಮಧೇನುವಾದ ಗುರುನಾಥರು ತಮ್ಮ ಪ್ರೀತಿಯ ಬಂಧುವಿನಿಂದಿಗೆ ನಡೆಸಿದ ಲೀಲಾ ವಿನೋದವನ್ನು ಬೆಂಗಳೂರಿನಲ್ಲಿರುವ ಆ ತಾಯಿ, ಬಹಳ ಬೇಡಿಕೆಯ ನಂತರ ನಮ್ಮ ನಿತ್ಯ ಸತ್ಸಂಗಕ್ಕೆ ಹಂಚಿಕೊಂಡರು. ಗುರುನಾಥರ ಬಗ್ಗೆ ಅಪಾರ ಪ್ರೀತಿ, ಗೌರವ, ಭಯ ಭಕ್ತಿಗಳಿದ್ದ ಅವರು ಒಂದೊಂದು ಅನುಭವಗಳನ್ನು ಬಿಚ್ಚಿದಾಗಲೂ ಆರ್ತರಾಗಿ - ಮಾತನಾಡದೆ, ಮೂಕಾವಸ್ಥೆಗೆ ಜಾರುತ್ತಿದ್ದರು. ಗುರುನಾಥರ ಪ್ರೀತಿಯೇ ಒಂದು ಅಂತಹ ಅಗಾಧವಾದದ್ದಲ್ಲವೇ. ಬನ್ನಿ ಅವರ ಮಾತುಗಳನ್ನು ಆಲಿಸೋಣ. 

'ಅವನು ನಮ್ಮ ಮನೆಗೆ ಬರುತ್ತಿದ್ದ. ಬೆಂಗಳೂರಿನ ನಮ್ಮ ಮನೆ ಎಂದರೆ ಅದೇನೋ ಬಹು ಆಪ್ಯಾಯ ಅವನಿಗೆ. ನಮ್ಮ ಅತ್ತೆ ಮಾವಂದಿರಾಗಲೀ, ನಮ್ಮ ಯಜಮಾನರಾಗಲೀ, ಎಲ್ಲರೊಂದಿಗೆ ಅದೇ ಸ್ನೇಹಭಾವವಿತ್ತು... ಅವರೂ ಸಹ ಹಾಗೇ ಪ್ರೀತಿಸಿ ಗೌರವಿಸುತ್ತಿದ್ದರು. ಯಾವಾಗಲೆಂದರೆ ಆವಾಗ, ತನಗಿಷ್ಟವಾದಾಗ ಇಲ್ಲಿಗೆ ಬಂದು ಬಿಡುವುದು. ಹೊರಗಡೆಯೇ ನಿಂತುಕೊಂಡು 'ಭವತಿ ಭಿಕ್ಷಾಂದೇಹಿ' ಎನ್ನುತ್ತಿದ್ದ. 'ಇದೇನಣ್ಣಾ ಒಳಗೆ ಬಾ, ಹೊರಗೇ ನಿಂತು ಹೀಗೆ ಮಾಡಿದರೆ ಹೇಗೆ?' ಎಂದು ನಾವು ಕೇಳಿದರೆ 'ನೋಡಮ್ಮಾ ಹೊರಗೆ ನೀಡಿದರೆ ಭಿಕ್ಷೆ, ಒಳಗೆ ಕರೆದು ಕೊಟ್ಟರೆ ಅದು ಆತಿಥ್ಯ' ಎಂದು ಮಾರ್ಮಿಕವಾಗಿ ಮಾತನಾಡುತ್ತಿದ್ದ. ಅನೇಕ ಸಾರಿ ಮನೆಯ ಹೊರಗೇ ಕುಳಿತು ಊಟ- ತಿಂಡಿ ಮಾಡಿದ್ದಿದೆ. ನಮಗೇನೋ ಮನದಲ್ಲಿ ನಮ್ಮಣ್ಣ ದತ್ತಸ್ವರೂಪ, ಗುರು - ಎಂಬುದು ಗೊತ್ತು. ಆದರೆ ಹೊರಗಡೆ ನೋಡಿದವರು ಏನೆಂದುಕೊಳ್ಳುತ್ತಾರೆ? ಎಂಬ ಭಯ ನಮಗೆ. ನನ್ನ ಮನದಲ್ಲಂತೂ ಸಂಬಂಧದಿಂದ ನಮ್ಮಣ್ಣನೆಂಬ ಪ್ರೀತಿ, ಆದರ, ಗೌರವಗಳಿದ್ದರೂ, ಎಂದಿನಿಂದಲೋ 'ಗುರು'ವೆಂಬ ಭಾವನೆ ಭದ್ರವಾಗಿತ್ತು. ಪ್ರೀತಿಯಿಂದ ಏಕವಚನದಲ್ಲೇ ಮಾತನಾಡುತ್ತಿದ್ದೆ. 

ಇಂತಹ ಮಹನೀಯನ ಆತ್ಮ ಬಂಧುವಾಗಿ, ಈ ರೀತಿ ನಿಕಟವಾಗಿ ಅವನ ಲೀಲೆಗಳನ್ನು ಕಾಣುವ ಅವಕಾಶ ನನಗೆ ಸಿಕ್ಕ ಸುಯೋಗವೆನಿಸಿದರೂ, ನಮ್ಮ ರೀತಿ - ಆತನಿಗೇನಾದರೂ ಅಪಚಾರ ಮಾಡಿದೆಯಾ? ಎಂಬ ಚಿಂತೆ ಮನದಲ್ಲಿ ಬಂದರೂ, ಆ ನಿಷ್ಕಲ್ಮಶ ಮೊಗ, ಆ ಪ್ರೀತಿಯ ಸೆಲೆ - ಎಲ್ಲವನ್ನೂ ಮರೆಸಿತ್ತು. ಎಂದು ನುಡಿದು ಒಂದು ಕ್ಷಣ ಅವರು ಮೌನರಾದರು. 

ಗುರುಪರೀಕ್ಷೆ ಅದೆಷ್ಟು ಕಠಿಣ, ಗುರುವಾಕ್ಯದಂತೆ ಆತ್ಮ ಸಂಬಂಧಿಯನ್ನು ಹೊರ ಕೂರಿಸಿ ಭಿಕ್ಷೆ ನೀಡಬೇಕೋ, ಬಂಧುವೆಂದು ಒಳ ಕರೆದು ಆದರ, ಸತ್ಕಾರ ಮಾಡಬೇಕೋ ಎಂಬ ತಾಕಲಾಟ, ಸಮಸ್ಯೆಗಳು - ಜನರೇನು ಅಂದಾರು ಎಂಬ ಭಾವ ಬಂದಾಗ..... 

ಭಗವಂತ ಕರೆದಾಗ ಹೋಗುವಂತೆ..... 

ಶಿವಮೊಗ್ಗದ ಮತ್ತೊಬ್ಬ ಗುರುಭಕ್ತರು ತಮ್ಮ ಮನದಳಲನ್ನು ತೋಡಿಕೊಂಡಾಗ 'ನೀವೇನೂ ಚಿಂತೆ ಮಾಡಬೇಡಿ. ಅವರ ಬಂಧುವಾಗಿ ಜನಿಸಿ, ಅವರ ಸೇವೆ ಮಾಡುವ ಅಪಾರ ಭಾಗ್ಯ ಪಡೆದ ನೀವೇ ಧನ್ಯರು. ಅವರು ಹೇಗೆ ಹೇಳುತ್ತಾರೋ ಹಾಗೆ ಮಾಡಿ - ಎಲ್ಲದಕ್ಕೂ ಗುರುನಾಥರೇ ಒಂದು ಉಪಾಯವನ್ನು ತೋರಿಸುತ್ತಾರೆ... ನೀವು ಖಂಡಿತ ಚಿಂತಿಸುವುದೂ ಬೇಡ... ಅಳುವುದೂ ಬೇಡ.,.. ಇದು ನಿಮಗೆ ದೊರೆತ ಬಹು ದೊಡ್ಡ ಭಾಗ್ಯ' ವೆಂದಾಗ ಆ ಬಂಧುವಿಗೆ ಗುರುನಾಥರೇ ಈ ರೂಪದಲ್ಲಿ ಸಲಹೆ ನೀಡುತ್ತಿದ್ದಾರೆಂದು ಸಂತಸಪಟ್ಟರಂತೆ. ಮತ್ತೆ ತಮ್ಮ ಅನುಬಂಧವನ್ನು ಅವರು ಮುಂದುವರಿಸಿದರು. 

'ಎಲ್ಲರಂತೆ ಇರಲಿಲ್ಲ ನಮ್ಮ ಸಂಬಂಧ. ಅದೆಷ್ಟು ಪ್ರೀತಿ ಎಂದರೆ, ತವರಿಗೆ ಹೋಗಿ ನಾವು ಮಾವನ ಮನೆಗೆ ಬರುವಾಗ ಮೂಟೆ ಮೂಟೆಗಳನ್ನು ತನ್ನ ತಲೆಯ ಮೇಲೆ ಹೊತ್ತು ತರುವುದು, ಮನೆ ಮುಟ್ಟಿಸಿ, ಅದಾವಾಗ ಕಣ್ಮರೆಯಾಗಿ ಬಿಡುತ್ತಿದ್ದನೋ ನಮಗಾರಿಗೂ ತಿಳಿಯುತ್ತಲೇ ಇರಲಿಲ್ಲ. ನಮ್ಮ ಮನೆಯಲ್ಲಿ ಮಾತ್ರವಲ್ಲ, ಎಲ್ಲ ಕಡೆಯೂ ಹೀಗೆ. ಯಾರಿಗೆ ಯಾವಾಗ ಯಾವ ಉಪಕಾರ ಮಾಡಬೇಕೋ ಅದನ್ನು ಮಾಡಿದ ನಂತರ ಅವರಿಗೆ ಹೇಳದೇ ಕೇಳದೇ ಅಲ್ಲಿಂದ ಹೊರಟು ಬಿಡುತ್ತಿದ್ದ. ಯಾರಿಂದಲೂ ಒಂದು ಧನ್ಯವಾದವನ್ನಾಗಲೀ, ಫಲಾಪೇಕ್ಷೆಯನ್ನಾಗಲೀ ಎಂದೂ ಅಪೇಕ್ಷಿಸುತ್ತಿರಲಿಲ್ಲ. ಎಲ್ಲರೂ ಅಣ್ಣ ಕೊಡಲಿಲ್ಲ ಎಂದು ದುಃಖಿಸಿದರೆ ನಾವು ಅತಿಯಾಗಿ ತಂದುಕೊಡುವ ನಮ್ಮಣ್ಣ ಇದೇಕೆ ಹೀಗೆ ಮಾಡುತ್ತಾನೆ, ನಮ್ಮಿಂದ ಏನೂ ಉಪಚಾರ ಪಡೆಯದೇ ಹೊರಟು ಹೋಗಿಬಿಡುತ್ತಿದ್ದಾನಲ್ಲಾ ಎಂದು ದುಃಖಿಸುತ್ತಿದ್ದೆವು. ಏಕೆಂದರೆ ಅವನೇನು ಎಂದು ನಮಗೆ ಅರಿವೇ ಆಗಿರಲಿಲ್ಲ. ಬಾಲ್ಯದಿಂದಲೂ ಅಷ್ಟೇ ಯಾವುದೂ ತನಗೇ ಬೇಕೆಂದು ಆಶಿಸಿ, ಅನುಭವಿಸುವ ಪ್ರವೃತ್ತಿ ಇರಲಿಲ್ಲ. ಅದಾಗೆ ಸಿಕ್ಕಾಗ ಹಿತಮಿತವಾದ ವೈರಾಗ್ಯದ ಬದುಕೇ ಅವನದಾಗಿರುತ್ತಿತ್ತು. ಆದರೆ ನಮಗೆ ಅದು ಆಗ ಅರ್ಥವಾಗಲಿಲ್ಲ. ಈಗಲೂ ಇನ್ನೂ ಪೂರ್ಣವಾಗಿ ಅರ್ಥ ಮಾಡಿಕೊಳ್ಳಲೂ ಆಗಲಿಲ್ಲ. ಒಂದು ಸಾರಿ ಶಿವಗಂಗೆ ಗುರುಗಳು ಬಂದಿದ್ದರು ಎಂಬ ವಿಚಾರವನ್ನು ತಿಳಿಸಿದೆವು. ಆವಾಗ ಅವನೆಂದದ್ದು 'ನಾನು ಆಗಿದ್ದಿದ್ದರೆ ಅಲ್ಲಿದ್ದು ದೊಡ್ಡ ಸಂತರ್ಪಣೆಯನ್ನೇ ಮಾಡಿಸಿಬಿಡುತ್ತಿದ್ದೆ' ಎಂದಿದ್ದ. ಎಂದರೆ ಸಾಧು ಸತ್ಪುರುಷರು ಅಲಭ್ಯರು, ಅವರು ಬಂದಾಗ ನಾವು ಹೇಗೆ ವರ್ತಿಸಬೇಕೆಂಬುದನ್ನು ನಮಗೆ ತಿಳಿಸಿದ್ದ. ಅವನ ಜೊತೆ ಇದ್ದು ನಾವೂ ಸಾಕಷ್ಟು ಬದಲಾವಣೆ ಮಾಡಿಕೊಳ್ಳಲು ಸಾಧ್ಯವಾಯಿತು. ನಾವು ಬೇರೆ ಊರಿಗೆ ಹೋಗುವಾಗ ನಮ್ಮ ಮನೆಗೆ ನಿರಂತರ ಬಂದು ಹೋಗುವವರು ಜಾಸ್ತಿ ಎಂದು ಫೋನಿಗೆ ಬೀಗ ಹಾಕಿ ಹೋದಾಗ, ಇದರಿಂದ ಕೆಲವರಿಗೆ ತೊಂದರೆ ಆದ ವಿಚಾರ ತಿಳಿದು ಯಾರೋ ಹೇಳಿದಂತೆ ಎರಡನೇ ಸಾರಿ ಹೋಗುವಾಗ ನಮ್ಮಣ್ಣ 'ನೋಡು, ಎಲ್ಲಿಗಾದರೂ ಹೋಗುವಾಗ ಭಗವಂತ ಕರೆದಾಗ ಹೇಗೆ ಎಲ್ಲ ಅಲ್ಲಲ್ಲೇ ಬಿಟ್ಟು ಹೋಗುತ್ತೇವೆಯೋ ಹಾಗೆ ಹೋಗಿಬಿಡಬೇಕು' ಎಂದು ಮಾರ್ಮಿಕವಾಗಿ ನಿಶ್ಚಿಂತೆಯಿಂದ ಜೀವನ ನಡೆಸುವ ರೀತಿಯನ್ನು ತಿಳಿಸಿದ್ದ. ಆ ಮಟ್ಟಕ್ಕೆ ಏರದ ನಾವು ಸಾಮಾನ್ಯರಂತೆಯೇ ವರ್ತಿಸುತ್ತಿದ್ದೆವು ಎಂದು ನುಡಿದರು. 

ತಮ್ಮ ಅಂತರಂಗದ ಅನುಭವವನ್ನು ಆ ವಿಶ್ವಗುರುವಿನ, ಮಹದುಪದೇಶಗಳನ್ನು ನಮ್ಮೊಂದಿಗೆ ಅವರ ಆತ್ಮಬಂಧು ಆ ತಾಯಿ ಹಂಚಿಕೊಳ್ಳುತ್ತಿದ್ದಾರೆ. ನಾಳೆಯೂ ಮುಂದುವರೆಯಲಿದೆ. ನಾಳೆಯೂ ನಿತ್ಯಸತ್ಸಂಗಕ್ಕೆ ನಮ್ಮೊಂದಿಗೆ ಇರುವಿರಲ್ಲಾ.... !!!!

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ. 

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


For more info visit :  http://srivenkatachalaavadhoota.blogspot.in

No comments:

Post a Comment