ಶ್ರೀ ಸದ್ಗುರುನಾಥ ಲೀಲಾಮೃತ - 2
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 29
ನುಡಿ ಮುತ್ತು ನೀಡಿದ ನಮ್ಮ ಗುರು
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ । ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।
"ನಾವು ನೀವು ಸಂಧಿಸಿದರೆ ಅದು ಇಂದಿನ ಸಂಬಂಧವಲ್ಲ.... ಅದು ಜನ್ಮ ಜನ್ಮಾಂತರದ ಸಂಬಂಧ" ವೆಂದು ಗುರುನಾಥರು ಹೇಳುತ್ತಿದ್ದರು ಎಂಬುದನ್ನು ಸ್ಮರಿಸುತ್ತಾ ಗುರುನಾಥರ ಬಂಧುಗಳೊಬ್ಬರು ಸತ್ಸಂಗವನ್ನು ಮುಂದುವರೆಸಿದರು. "ಜೀವನ ಎಂದರೆ ನೀರಾದರೆ ದೋಸೆ, ಗಟ್ಟಿಯಾದರೆ ಇಡ್ಲಿ, ಬಂದುದನ್ನು ಬಂದಂತೆ ಸ್ವೀಕರಿಸಬೇಕೆನ್ನುತ್ತಿದ್ದರು. ಯಾವುದು ಏನೇ ಆದರೂ, ನೀನು ಯಾರ ಮೇಲೂ ಆರೋಪ ಹೊರಿಸಬೇಡ. ನೀನು ಅದನ್ನು ನೋಡಿಯೂ ನೋಡದಂತೆ ಇದ್ದುಬಿಡು. ಆಗ ನಿನಗಾದರ ಸೋಂಕು ತಗಲುವುದಿಲ್ಲ" ಎನ್ನುತ್ತಿದ್ದ ಗುರುನಾಥರು ಸರ್ವಜ್ಞರಾಗಿದ್ದರು. ಎಲ್ಲೆಲ್ಲಿ ಏನೇನು ನಡೆಯುತ್ತದೆ. ಯಾವ ಶಿಷ್ಯರ ವರ್ತನೆ ತೋರಿಕೆಯದು, ಯಾರ ಭಾವ ನಿಜವಾದುದು ಎಂಬುದನ್ನೆಲ್ಲಾ ಅರಿತಿದ್ದರು. ಹಾಗಾಗಿ ಯಾರಾದರೂ ಯಾರ ಮೇಲಾದರೂ ಹೇಳು ಎಂದರೆ, ಚಾಡಿ ಹೇಳಬೇಡ. ಅವರವರ ಕರ್ಮಗಳಿಗೆ ತಕ್ಕ ಫಲ ಅವರೇ ಅನುಭವಿಸುತ್ತಾರೆ. ಇಲ್ಲಿ, ತೋಟದಲ್ಲಿ ಏನೇನು ನಡೆಯುತ್ತೆ ಯಾರು ಯಾರು ಏನೇನು ಒಯ್ಯುತ್ತಾರೆಂದು ನನಗೆ ಗೊತ್ತಿದೆ. ಯಾರಿಗೆ ಎಷ್ಟು ಕೊಡಬೇಕೋ ಅಷ್ಟು ಒಯ್ಯಲಿ ಎಂದೇ ನಾನು ಸುಮ್ಮನಿದ್ದೇನೆ ಎಂದು ಸ್ಥಿತಪ್ರಜ್ಞರಾಗಿ ಅವರು ನುಡಿಯುತ್ತಿದ್ದುದನ್ನು ಕಂಡರೆ ಗುರುನಾಥರ ವ್ಯಕ್ತಿತ್ವದ ಅರಿವು ನಮಗಾಗುತ್ತಿತ್ತು" ಎಂದು ಒಂದು ಕ್ಷಣ ಮೌನವಾದರು ಅವರು.
ಆ ಭಕ್ತರಿಗೆ ಗುರುನಾಥರ ಬಳಿ ಹೋದಾಗ ಅವರಾಡುವ ಒಂದೊಂದು ಮಾತನ್ನೂ ಬರೆದಿಟ್ಟುಕೊಳ್ಳಬೇಕೆನಿಸಿದರೂ ಅಸಂಖ್ಯಾತವಾದ ಆ ದಿವ್ಯ ವಾಣಿಯ ಆನಂದಾನುಭೂತಿಯಲ್ಲಿ ಎಲ್ಲವೂ ಮರೆತು ಹೋಗುತ್ತಿತ್ತಂತೆ. ಅವರ ಬಳಿ ಕುಳಿತಾಗ ಬರೆಯುವುದಾಗಲೀ, ಮತ್ಯಾವುದೇ ಚಿಂತನೆಯಾಗಲೀ, ಬೇಡವೆಂದೇ ಅನಿಸಿಬಿಡುತ್ತಿತ್ತಂತೆ/ ಆದರೂ ನಿರಂತರ ಮೆಲಕು ಹಾಕಲು, ಗುರುನಾಥರ ವಾಣಿಯನ್ನು ಸ್ಮೃತಿಗೆ ತಂದುಕೊಳ್ಳಲು ಅವರು ದಾಖಲಿಸಿದ ಕೆಲ ಮಾತುಗಳನು ನಿತ್ಯ ಸತ್ಸಂಗಕ್ಕಾಗಿ ಪ್ರಸಾದಿಸಿದ್ದಾರೆ ಅವರು.
"ಲೆಸ್ ಲಗ್ಗೇಜ್ ಮೋರ್ ಕಂಫರ್ಟ್ ಟು ಟ್ರಾವಲ್ ಎ ಪ್ಲೇಶರ್ ಜರ್ನಿ" ಎನ್ನುವುದಂತೂ ಮರೆಯುವಂತಿಲ್ಲ. ಎಷ್ಟೆಷ್ಟು ಪಾಪ ಕರ್ಮಗಳನ್ನು, ಮಾಡಬಾರದ ಕೆಲಸಗಳನ್ನು ಮಾಡಿ ಕಟ್ಟಿಕೊಳ್ಳಬೇಕು? ಅದರ ಬದಲು ಎಲ್ಲ ತೊರೆದು, ಆತನ ಲೀಲೆಯಂತೆ ನಡೆದರೆ - ಪರದ ಹಾದಿ ಆನಂದದಾಯಕವಾಗುವುದಲ್ಲವೇ? ಎಂಬುದನ್ನು ಗುರುನಾಥರು ಪದೇ ಪದೇ ಹೇಳುತ್ತಿದ್ದರಂತೆ.
ಎಷ್ಟೋ ಜನಗಳು ಈ ಪ್ರಪಂಚದಲ್ಲಿ ಎಡತಾಕುತ್ತಾರೆ. ಆದರೆ ಕೆಲವರೊಂದಿಗೆ ಮಾತ್ರ ಬೆರೆಯಲು, ಮಾತನಾಡಲು, ನಗಲು, ಅರಮನೆಗೆ ಹೋಗಲು ಮನಸ್ಸಾಗುತ್ತದೆ. ಅದು ಇವತ್ತಿನ ಸಂಬಂಧ ಅಲ್ಲವೇ ಅಲ್ಲ. ನಿನ್ನಿಚ್ಛೆಯಂತೆ ಆದುದೂ ಅಲ್ಲ.
ಅದು ಪೂರ್ವ ಕರ್ಮಾನುಸಾರವಾಗಿ ಸಾಗುತ್ತಿರುತ್ತದೆ. ಅಲ್ಲಿ ನಿನ್ನ ಪ್ರಯತ್ನವೇನೂ ಇರುವುದಿಲ್ಲವೆಂಬುದನ್ನು ಮರೆಯಬೇಡಿ ಎನ್ನುತ್ತಿದ್ದರು. "ನಿನ್ನೆ ನಾಳೆಗಳಲ್ಲಿ ನಾಳೆಗಳನ್ನೇ ಯೋಚಿಸುತ್ತಾ ಐವತ್ತನ್ನು ಕಳೆದುಕೊಳ್ಳಬೇಡ. ಲಘು ಸಮಾಧಿಯೇ ಶ್ರೇಷ್ಠ. ಯಾವುದನ್ನೂ ಅಂದುಕೊಳ್ಳಬೇಡ. ಯಾವುದಕ್ಕೂ ಸಿದ್ಧತೆಯನ್ನು ಮಾಡಿಕೊಳ್ಳಬೇಡ. ಏನು ಬಂದರೂ ಎದುರಿಸಲು ಸಿದ್ಧವಾಗಿರು" ಎಂದು ತಮ್ಮ ಭಕ್ತರನ್ನು ಗುರುನಾಥರು ಸವಿ ನುಡಿಗಳಿಂದಲೇ ಸಿದ್ಧಪಡಿಸುತ್ತಿದ್ದರು.
ಅನೇಕ ಜನ ರಾಜಕಾರಣಿಗಳು ಗುರುನಾಥರ ಬಳಿ ಬರುತ್ತಿದ್ದರು. ಅವರಿಗೂ ನೀತಿಬೋಧೆ ಮಾಡುವಲ್ಲಿ, ಅನೇಕರಿಗೆ ಮಾತಿನ ಚಾಟಿ ಬೀಸಿದ್ದಿದೆ. ಕೆಲವರಿಗೆ ಅವರೇ ಕರೆದು ಹರಸಿ "ನೀವು ಮಂತ್ರಿಗಳಾಗುತ್ತೀರಿ.. ಯೋಚಿಸಿ ಉತ್ತಮವಾಗಿ ನಡೆದುಕೊಳ್ಳಿರಿ" ಎಂದಿರುವುದೂ ಉಂಟು. ಹಾಗೆಯೇ ಕೆಲವರಿಗೆ ಅಧಿಕಾರದ ಮದವೇರಬಹುದು, ಅದರಿಂದ ಅವರು ಹಾಳಾಗಬಾರದೆಂದು "ಹಿಂದಿನದನ್ನೂ, ಉಪಕಾರ ಮಾಡಿದವರನ್ನೂ, ನಿನ್ನ ಹಿಂದಿನ ಸ್ಥಿತಿಗಳನ್ನು ಎಂದೂ "ಮರೆ" ಯಬೇಡ. ಅಧಿಕಾರ, ಹಣ, ಸಂಪತ್ತು ಕ್ಷಣಿಕ... ಆದ್ದರಿಂದ ಅವುಗಳ ಬಲದ ಮೇಲೆ ಎಂದೂ "ಮೆರೆ" ಯಬಾರದು. ಒಮ್ಮೆ ಉಂಟಾದ ಸತ್ಸಂಗವನ್ನು ಉತ್ತಮ ಬಾಂಧವ್ಯವನ್ನು "ಮುರಿ" ದುಕೊಳ್ಳುವುದೂ ಸರಿಯಲ್ಲ. ಅದಕ್ಕೆ ಧಕ್ಕೆ ಬರದಂತೆ ಜೀವನ ಸಾಗಿಸಬೇಕು" ಎಂದು ಕಿವಿಮಾತು ಹೇಳಿದ್ದಿದೆ. ಈ ಮೂರು "ಮ" ಕಾರಗಳು ಗುರುನಾಥರು ಶಿಷ್ಯರಿಗೆ ನೀಡಿದ ಮೂರು ಮುತ್ತುಗಳಷ್ಟು ಅಪಾರ ಮೌಲ್ಯದ್ದಾಗಿತ್ತು.
ಪಾದರಕ್ಷೆಗಿಂತ ಪದರಕ್ಷೆ ಪ್ರಮುಖವಾದದ್ದು. ಪದವೆಂದರೆ ನಾವಾಡುವ ಮಾತುಗಳು. ಮಾತು ಬರುತ್ತದೆಂದು ಹೇಗೆ ಬಂದರೆ ಹಾಗೆ, ಮತ್ತೊಬ್ಬರ ಮನ ನೋಯುವಂತೆ, ನಾವಾಡಿದ್ದನ್ನು ನಾನೇ ನಡೆಸಲಾಗದಂತೆ ಆಡಬಾರದೆನ್ನುತ್ತಿದ್ದರು. ಇಲ್ಲಿ ಕಬೀರನ ಮಾತೊಂದನ್ನು ಸ್ಮರಿಸಬಹುದು. "ಬೋಲಿ ಏಕ್ ಅನ್ ಮೋಲ್ ಹೈ..... ಹಿಯತರಾಜು ತೋಲಿಕೈ ತವ ಮುಖ ಬಾಹರ್ ಆನಿ" ಎಂದರೆ ಪ್ರಾಣಿಗಳಲ್ಲಿ, ಮನುಷ್ಯನಿಗೆ ಸಿಕ್ಕಿರುವ ಒಂದು ವಿಶೇಷ ವರದಾನ ಈ ಮಾತು. ಅದನ್ನು ಭಗವಂತ ನೀಡಿರುವ ಬುದ್ಧಿ ಬಳಸಿ, ಹೃದಯವೆಂಬ ತಕ್ಕಡಿಯಲ್ಲಿ ತೂಗಿ ನೋಡಿ, ನಂತರ ಬಾಯಿಂದ ಹೊರ ಹಾಕಿದರೆ ಅದು ಎಲ್ಲರ ನೋವು ನೀಗಿಸುವ ಔಷಧಿಯಾಗುತ್ತದೆ. ವಿವೇಕವಿಲ್ಲದೇ ಆಡಿದ ಮಾತು ಮತ್ತೊಬ್ಬರ ಹೃದಯ ಚುಚ್ಚುವ ಶೂಲವಾದೀತು ಎಂದಿದ್ದಾರೆ.
ಗುರುನಾಥರ ಸವಿನುಡಿಗಳ ತಂಪನ್ನು ಅನುಭವಿಸಿ ಅದೆಷ್ಟು ಜೀವಿಗಳ ಉದ್ಧಾರವಾಗಿದೆಯೋ... ಅವರ ಒಂದೊಂದು ಮಾತುಗಳೂ ಒಂದೊಂದು ಸತ್ಸಂಗ. ಆ ಸವಿನುಡಿಗಳನ್ನು ನಾಳೆಯೂ ಸವಿಯೋಣವೇ.... ಭಕ್ತ ಮಹಾಶಯರೇ ? ಬನ್ನಿ..... ,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
No comments:
Post a Comment