ಶ್ರೀ ಸದ್ಗುರುನಾಥ ಲೀಲಾಮೃತ - 2
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 30
ಗುರುಕರುಣೆಯ ಊರುಗೋಲು
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ । ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।
ಸಾರ್ವಜನಿಕ ಹಣದೊಂದಿಗೆ ಚೆಲ್ಲಾಟವಾಡುವ ಅನೇಕ ಕಂಪೆನಿಗಳಿಂದು ಎಲ್ಲೆಡೆ ಕಂಡು ಬರುತ್ತದೆ. ಆದರೆ ಪ್ರಾಮಾಣಿಕವಾಗಿ ಮಾರುಕಟ್ಟೆಯನ್ನು ಪರಿಶೀಲಿಸಿ, ಸಾರ್ವಜನಿಕರ ಹಣವನ್ನು ಮ್ಯುಚುಯಲ್ ಫಂಡ್ ಗಳಲ್ಲಿ ಹೂಡಿಸುವ ಒಬ್ಬರು ಮೊದಲಿನಿಂದಲೂ ಸಖರಾಯಪಟ್ಟಣಕ್ಕೆ ಬರುತ್ತಿದ್ದರು. ಗುರುನಾಥರ ಮೇಲೆ ಅವರಿಗೆ ಅಪಾರ ಭಕ್ತಿ. ಅಲ್ಲದೆ ಗುರುನಾಥರಿಗೂ ಇವರ ಪೂರ್ವಜರೆಲ್ಲರ ಪರಿಚಯವೂ ಇದ್ದಿತು.
ಒಮ್ಮೆ ಇವರು ಊರಲ್ಲಿ ಇಲ್ಲದಿದ್ದಾಗ, ಸಾರ್ವಜನಿಕ ಕ್ಷೇತ್ರದ ಸೊಸೈಟಿಯವರು ನಂಬಿಕೆಯಿಂದ ಹೂಡಿದ ಹಣವನ್ನು ತೆಗೆದುಕೊಳ್ಳಬೇಕೆಂದು ಆಶಿಸಿದ್ದರು. ಸೊಸೈಟಿಯ ನಿರ್ದೇಶಕರುಗಳು ಹಳಬರೆಲ್ಲಾ ಬದಲಾಗಿ ಹೊಸಬರು ಬಂದಿದ್ದರು. ಅಂತಹ ಸಂದರ್ಭದಲ್ಲಿ ಈ ವ್ಯಕ್ತಿಯ ಕೈಕೆಳಗಿದ್ದವರೊಬ್ಬರು, ಇವರು ಪರ ಊರಿನಲ್ಲಿದ್ದಾಗ, "ಹಣ ವಾಪಸಾತಿ ಮಾಡಿಕೊಳ್ಳಬಹುದೆಂದು - ಇದು ತಮ್ಮ ಬಾಸ್ ಅವರನ್ನೇ ಕೇಳಿ ತಿಳಿಸುತ್ತಿದ್ದೇನೆ" ಎಂದು ತಪ್ಪು ಮಾಹಿತಿ ನೀಡಿಬಿಟ್ಟಿದ್ದರು. ಲಕ್ಷಾಂತರಗಳ ಲಾಸು, ಆ ಖಾಸಗಿ ಸೊಸೈಟಿಗೆ ಆಗುತ್ತಿತ್ತು. ಎಲ್ಲರೂ ಸೇರಿ ಆ ಭಕ್ತರ ಮೇಲೆ ಮುಗಿಬಿದ್ದರು. ಕೆಟ್ಟ ಹೆಸರೂ ಬರಲಿತ್ತು.
ಎಲ್ಲಿಯೂ ಸಲ್ಲದಾಗ ನೀನೇ - ಸಂಕಟ ಬಂದಾಗ ವೆಂಕಟರಮಣನೆಂದು ಓಡುವವರಂತೆ ಗುರುನಾಥರ ಭಕ್ತರೂ ಇಲ್ಲಿಗೆ ಧಾವಿಸಿ ಬಂದು ಗುರುನಾಥರಲ್ಲಿ ತಮ್ಮ ಎಲ್ಲ ನೋವನ್ನು ತೋಡಿಕೊಂಡರು. "ಈ ದುಸ್ಥಿತಿಯಿಂದ ಪಾರು ಮಾಡಿರಿ" ಎಂದು ಅನನ್ಯವಾಗಿ ಬೇಡಿಕೊಂಡರು.
ಗುರುವಿಗೆ ಅಸಾಧ್ಯವಾದುದು ಏನಿದೆ? ಎಲ್ಲವನ್ನೂ ಆಲಿಸಿ ಅವರೆಂದರು. "ಹೆದರಬೇಡ ಹೋಗಯ್ಯಾ... ಅವರು ನಿನ್ನನ್ನು ಏನೂ ಮಾಡುವುದಿಲ್ಲ... ಎಲ್ಲಾ ಸರಿಯಾಗುತ್ತೆ. ನಿನ್ನದು ತಪ್ಪಿಲ್ಲ ಎಂದಾಗ ನೀನ್ಯಾಕೆ ಅಳುಕುತ್ತಿ?.. ಹೋಗು ಎಲ್ಲಾ ಸರಿಯಾಗುತ್ತೆ. ನಾನಿದ್ದೀನಿ. ಸ್ವಲ್ಪ ಸಮಯ ಸುಮ್ಮನಿರು" ಎಂದು ಅಭಯ ಹಸ್ತ ನೀಡಿ ಕಳಿಸಿದರಂತೆ.
ಮುಂದೆ ಆ ಭಕ್ತರ ಹಿಂದೆ ನಡೆದ ಷಡ್ಯಂತ್ರ ಬಯಲಾಯಿತು. ತಪ್ಪಿತಸ್ಥರಾರೆಂಬುದೂ ತಿಳಿಯಿತು. ಗುರು ಕೃಪೆಯಿಂದ ಮುಂದೆ ಆಗಬಹುದಿದ್ದ ಅನೇಕ ಅನಾಹುತಗಳೂ ತಪ್ಪಿದವು. ಅನರ್ಹರನ್ನು ವಿಶ್ವಾಸ ಪಾತ್ರರೆಂದು ಭಾವಿಸಿದ್ದಕ್ಕೆ ಸ್ವಲ್ಪ ನೋವು ಅನುಭವಿಸಬೇಕಾಯಿತು.
ಇಷ್ಟರಲ್ಲೇ.... ಮಾರುಕಟ್ಟೆಯ ಏರಿಕೆಯಿಂದ ಒಂದೆರಡು ತಿಂಗಳಲ್ಲೇ ನಷ್ಟವಾಗುವ ಜಾಗದಲ್ಲಿ ಗುರುವಾಕ್ಯದಂತೆ ಸೊಸೈಟಿಯವರಿಗೂ ಲಾಭಾವಾಯಿತು. ಹೀಗೆ... ಏನು ಏನೋ ಪರಿವರ್ತನೆಗಳಾಗಿ ಭಕ್ತರು ಗುರುನಾಥರನ್ನು ನಂಬಿ ಬಚಾವ್ ಆದರು. ಇಂದೂ ಆ ಗುರುನಾಥರ ಕರುಣೆಯೇ ಜೀವನದ ಊರುಗೋಲಾಗಿದೆ ಅವರಿಗೆ.
ಗುರುನಾಥರ ಸಂಗವೆಂದರೆ:
ಗುರುನಾಥರು ತಮ್ಮ ಬಳಿ ಬರುವ ಆರ್ತರ ನೋವನ್ನು ಅವರೇ ಪರಿಹರಿಸಿದರೂ ಹಲವು ಗುರು, ಮನೆ, ಮಠ, ತೀರ್ಥಕ್ಷೇತ್ರಗಳಿಗೆ ಕಳಿಸುತ್ತಿದ್ದುದು ವಾಡಿಕೆ.... ಗುರು ಮಠಗಳಿಗೆ ಹೋಗುವುದೆಂದರೆ ಅಲ್ಲಿ ಪುಷ್ಕಳವಾಗಿ ಊಟ ಮಾಡಿ ಬರುವುದಲ್ಲ. ನಾವು ಮಠಕ್ಕೇನು ಕೊಟ್ಟೆವೆಂದು ಚಿಂತಿಸಬೇಕು ಎನ್ನುತ್ತಿದ್ದರು. ಮಾತೆತ್ತಿದರೆ ಗುರುಗಳ ಮುಂದೆ ಫಲಮಂತ್ರಾಕ್ಷತೆಗಾಗಿ ಕೈ ಒಡ್ಡುತ್ತಾ ಕೂರದೆ, ಒಮ್ಮೆ ಒಬ್ಬ ಮಹಾತ್ಮರು ಫಲ ಮಂತ್ರಾಕ್ಷತೆ ನೀಡಿದರೆಂದರೆ ನಿನ್ನ ಅನೇಕ ಜನ್ಮಗಳೇ ಅವರ ರಕ್ಷಣೆಗಾಗಿ ಬರುವುದಲ್ಲದೇ, ನಿನ್ನ ಉದ್ಧಾರವಾಗಿಬಿಡುತ್ತದೆ ಎನ್ನುತ್ತಿದ್ದರಂತೆ. ಹಾಗಾದರೆ ಅಲ್ಲಿ ಹೋಗಿ ನಾವು ಮಾಡಬೇಕಾದ ಕೆಲಸವೆಂದರೆ, ಕ್ಷೇತ್ರ ದೇವತೆಯ ದರ್ಶನ, ಪೂಜೆ ಮಾಡಿ ಅನುಗ್ರಹ ಪಡೆದು, ಅಲ್ಲಿರುವ ಯತೀಶ್ವರರುಗಳ ಸಮಾಧಿಯ ದರ್ಶನ ಮಾಡಿ ಪುನೀತರಾಗುವುದು ಎನ್ನುತ್ತಿದ್ದರಂತೆ.
ಗುರುನಾಥರೊಂದಿಗೆ ಎರಡು ಮೂರು ದಶಕಗಳ ನಿರಂತರ ಸಹವಾಸದಲ್ಲಿದ್ದ ಈಗೋಯಿಸಂನ ಭಕ್ತರೊಬ್ಬರು ಹೀಗೆನ್ನುತ್ತಾರೆ: ಅವನನ್ನು ಖಂಡಿಸಿ ಬದಲಿಸುತ್ತಿದ್ದರು. ದೇವರು ದಿಂಡಿರು, ದೊಡ್ಡವರು ಎಂದರೆ ಅಂತಹ ಒಳ್ಳೆಯ ವರ್ತನೆ ಇಲ್ಲದ ನಾನು.... ಒಮ್ಮೆ ಒಂದು ಸಂದರ್ಭದಲ್ಲಿ ಇವರ ದರ್ಶನವಾಗುತ್ತಿದ್ದಂತೆಯೇ ಪರಿಪೂರ್ಣ ಬದಲಾದೆ. ಅವರ ಬಳಿ ಬಂದ ಎಂತಹವರನ್ನು ಗುರುನಾಥರು, "ಶಿಲ್ಪಿಯೊಬ್ಬರು ಉಳಿಯ ಪೆಟ್ಟಿನಿಂದ ಸುಂದರ ಮೂರ್ತಿಯನ್ನು ಮಾಡುವಂತೆ ಪರಿವರ್ತಿಸಿ ಬಿಡುತ್ತಿದ್ದರು. ಭಕ್ತರ ದುರ್ಗುಣಗಳನ್ನೆಲ್ಲಾ ತೊಳೆದು ಜಾಲಾಡುವ ಪರಿಶುದ್ಧ ಗಂಗೆಯವರು" ಎನ್ನುತ್ತಾರೆ.
"ಮಾತನಾಡುವ ದೇವರೇ ಆಗಿದ್ದ ಅವರಿಂದ ಅದೆಷ್ಟು ಸಂತ ಮಹಂತರ ಸಂಸರ್ಗ ನಮಗೆ ಆಯಿತೆಂದರೆ, ಕೂಡಲಿಯ ಜಗದ್ಗುರುಗಳು, ಶೃಂಗೇರಿಯ ಗುರುವರ್ಯರು, ಕೋಮಾರನಹಳ್ಳಿ, ಹನಸವಾಡಿ, ಬಾಣಾವರ, ಹೊಳಲೂರು, ಹಾರನಹಳ್ಳಿ, ಶಿವಗಂಗೆ, ಗುಬ್ಬಿ, ಚಿದಂಬರ, ಹೆಬ್ಬಳ್ಳಿ, ನಾರಾಯಣಾಶ್ರಮ, ಹೆಬ್ಬೂರು, ಅಗಡಿ ಆಶ್ರಮ, ಶಿವಗಂಗೆ ಆಶ್ರಮ, ದತ್ತಾವಧೂತರು ಹೊಳೆನರಸೀಪುರ ಆಶ್ರಮ, ಶಂಕರಾನಂದರು ಹೀಗೆ ಒಂದೆರಡಲ್ಲ, ಆಯಾ ಆಶ್ರಮಗಳ ಸದ್ಗುರುಗಳ ಕರುಣೆಗೆ ಪಾತ್ರರಾದದ್ದು ನಾವು ಗುರುನಾಥರಿಂದಲೇ" ಎಂದು ಸ್ಮರಿಸುತ್ತಾರೆ ಅವರು.
"ಸುಬ್ಬರಾಯ ಶರ್ಮಾರಂತೂ 'ನೀನೆಲ್ಲಿದ್ದರೂ ಬಾ... ಮಾತನಾಡುವ ದೇವರು ಬಂದಿದ್ದಾರೆ' ಎಂದೇ ತಮ್ಮನ್ನು ಗುರುದರ್ಶನಕ್ಕೆ ಕರೆಯುತ್ತಿದ್ದುದನ್ನು" ನೆನಪಿಸಿಕೊಳ್ಳುತ್ತಾರೆ.
ಗುರುನಾಥರ ಬಳಿ ಸುಮ್ಮನೆ ಕುಳಿತಿದ್ದರೆ ಸಾಕು ಅನೇಕಾನೇಕ ವಿದ್ವಾಂಸರುಗಳು, ಸಜ್ಜನರು ಅಲ್ಲಿ ಬಂದು ಕೂರುತ್ತಿದ್ದರು. "ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ" ಎಂಬ ನುಡಿ ಗುರುನಾಥರ ಪರ್ಯಾವರಣವನ್ನು ಕುರಿತಾಗಿಯೇ ಆಡಿದ್ದಿರಬಹುದು.
ಸಜ್ಜನರ ಸಂಗ, ಸತ್ಸಂಗ ದುರ್ಲಭವೆನ್ನುವ ಈ ದಿನಗಳಲ್ಲಿ ಪ್ರಿಯ ಗುರು ಬಾಂಧವರೇ, ಗುರುನಾಥರ ಈ ಕರುಣೆಯನ್ನು ನಮ್ಮದಾಗಿಸಿಕೊಳ್ಳಲು ನಾಳೆಯೂ ಬರುತ್ತೀರಲ್ಲವೇ?....,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
No comments:
Post a Comment