ಒಟ್ಟು ನೋಟಗಳು

Friday, April 28, 2017

ಶ್ರೀ ಸದ್ಗುರುನಾಥ ಲೀಲಾಮೃತ  - 2 

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ನಿತ್ಯ ಸತ್ಸಂಗ  - 50

 

ಭಲೇ, ಮೆಚ್ಚಿದೆ ನಿಮ್ಮ ತಾಳ್ಮೆಗೆ ! 


 

।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।

।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ । ಶೋಕ ಮೋಹ ವಿವರ್ಜಿತಂ ।। 
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।


ಅದೆಷ್ಟು ಹೊತ್ತು ಪ್ರಭುದೇವರು ಅಲ್ಲಿ ಕುಳಿತಿದ್ದರೋ, ಬಹುಶಃ ಅವರ ಮನ ಪ್ರತಿ ಕ್ಷಣವೂ ಗುರುನಾಥರ ಕರುಣೆಗಾಗಿ ತುಡಿಯುತ್ತಿದ್ದಿರಬೇಕು. ಇಷ್ಟರಲ್ಲಿ ಮನೆಯ ಒಳ ಭಾಗಕ್ಕೆ ಅದೆಲ್ಲೆಲ್ಲಿಂದ ಜನರು ಬಂದರೋ... ರಾತ್ರಿಯಾದರೂ ಹೊರಗಿನಿಂದ ಬರುವ ಜನಗಳಿಗೆ ಕಡಿಮೆ ಇಲ್ಲ. ಜೇನುಗೂಡಿಗೆ ಮುತ್ತಿದ ಜೇನು ನೊಣಗಳಂತೆ. ಇಲ್ಲಿ ಸಿಗುವ ಗುರುಕೃಪೆ ಎಂಬ ಸವಿಜೇನು ಸವಿಯುವುದಕ್ಕೆ ಹಗಲು ರಾತ್ರಿಗಳ ಭೇದವೇ ಇಲ್ಲ. ಒಮ್ಮೊಮ್ಮೆ ಗುರುನಾಥರೇ ತಡರಾತ್ರಿ, ಮಧ್ಯರಾತ್ರಿಗಳಲೆಲ್ಲಾ ತಮ್ಮ ಭಕ್ತರನ್ನು ಅರಸಿ ಬಂದು, ತಮ್ಮ ದಿವ್ಯ ವಾಣಿಯ ಸತ್ಸಂಗವೆಂಬ ಮಧುವನ್ನು ಹಂಚಿದ ಘಟನೆಗಳೂ ಇವೆ. 

ಪ್ರಭುದೇವ ಚರಿತ್ರೆಯತ್ತ ಬರೋಣ ಗುರುಬಂಧುಗಳೇ... ಅವರ ಮಾತನ್ನು ಕೇಳೋಣ. 

"ಬಂದವರನ್ನೆಲ್ಲಾ ಗುರುಗಳು ವಿಚಾರಿಸುತ್ತಿದ್ದರು. ಯಾರ್ಯಾರೋ ಏನೇನೋ ತಂದು ಕೊಡುತ್ತಿದ್ದರು. ಒಂದು ಚೂರನ್ನೂ ಅವರು ತೆಗೆದುಕೊಳ್ಳದೇ ತಂದವರ ಕೈಯಲ್ಲೇ ಎಲ್ಲವನ್ನೂ ಎಲ್ಲರಿಗೂ ಹಂಚಿಸಿಬಿಡುತ್ತಿದ್ದರು. ಅದು ಹಣ್ಣು ಹಂಪಲು ಇರಲಿ, ನೋಟುಗಳೇ ಇರಲಿ, ಯಾರ ಉಪಕಾರವೂ, ಋಣದ ಹೊರೆಯೂ ತಮಗೆ ಅಂಟದಂತೆ ಗುರುಗಳು ನಡೆದುಕೊಳ್ಳುತ್ತಿದ್ದ ರೀತಿಯನ್ನು ನೋಡಿದಾಗ ನನಗೆ ಬಹಳ ಸಂತೋಷವಾಯಿತು. ನಿಜವಾದ ಸದ್ಗುರುವಿನ ಬಳಿ ಬಂದಿದ್ದೇನೆ ಎಂಬ ಸತ್ಯ ಅರಿವಾಯಿತು. ಈ ಊರಿಗೆ ಬಂದು ಒಂದು ಸಂಬಂಧ ಕುದುರಿಸಲು ಅಸಫಲನಾದ ನಾನು ಗುರುಸಂಬಂಧವನ್ನು ಗಳಿಸಿಬಿಟ್ಟರೆ ಧನ್ಯನೆಂಬ ಭಾವದಿಂದ ಕುಳಿತೇ ಇದ್ದೆ. ಕಾಯುತ್ತಿದ್ದೆ. ಅದೆಷ್ಟೋ ಜನಗಳು ಬಂದು ಹೋಗುತ್ತಿದ್ದರು. ಎಲ್ಲರಿಗೂ ಊಟ ಹಾಕಿಸುತ್ತಿದ್ದರು. ನನಗೆ ಮತ್ತೊಮ್ಮೆ ಹಾಲನ್ನವನ್ನು ಬಡಿಸಿ ಉಣ್ಣಲು ಹೇಳಿದರು. ಎಲ್ಲ ನನ್ನ ಪ್ರಸಾದವಾಗಿದೆ, ಎಂದಾಗ 'ಇಲ್ಲಾ ತೆಗೆದುಕೊಳ್ಳಿ' ಎಂದು ಒತ್ತಾಯಿಸಿದರು. ಮತ್ತದನ್ನೂ ಸ್ವೀಕರಿಸಿದೆ. ಅಲ್ಲಿಯ ರೀತಿ ನೀತಿಗಳಿಗೆ ನಾನು ಹೊಸಬನಾಗಿದ್ದೆ. ಹೀಗೆ ಒಂದಾದ ಮೇಲೆ ಒಂದು 'ಪ್ರಸಾದ' ಗಳು ಬರುತ್ತಲೇ ಇದ್ದವು. 'ಗುರು ಅನುಗ್ರಹ' ವೆಂಬ ಪ್ರಸಾದ ಸಿಗುವ ಕಾಲವೂ ಸನ್ನಿಹಿತವಾಗಿತ್ತೇನೋ, ಗುರುನಾಥರು ಒಮ್ಮೆ ನನ್ನ ಕಡೆಗೆ ತಿರುಗಿ ಕರುಣಾಪೂರಿತ ನೇತ್ರರಾಗಿ 'ಭಲೇ ಮೆಚ್ಚಿದೆ ನಿಮ್ಮ ತಾಳ್ಮೆಗೆ..... ಇವತ್ತು ನೀವು ನನ್ನ ಪರೀಕ್ಷೆಯಲ್ಲಿ ಪಾಸಾಗಿಬಿಟ್ಟಿರಿ. ಗುರುವಿನ ಬಳಿ ಬಂದು ಗೆದ್ದಿರಿ' ಎಂದರು. ನಾನಾಗ ಎಂತಹ ಆನಂದದ ಅನುಭವದಲ್ಲಿ ಇದ್ದೆನೆಂದರೆ... ಸ್ವರ್ಗವೇ ಸಿಕ್ಕಂತಾಗಿತ್ತು ! ಗುರುಗಳ ಪಾದಕ್ಕೆರಗಿದೆ.... " 

ಪ್ರಭುದೇವರು ಕೆಲ ಕ್ಷಣ ಮೌನಕ್ಕೆ ಶರಣಾದರು. 

ಯಾರ ಹಂಗಿಗೂ ಸಿಗದವರು 

ಹೀಗೆ ಗುರುನಾಥರ ಸಂಬಂಧದ ತಂತು ಸಿಕ್ಕ ಮೇಲೆ ಪ್ರಭುದೇವರ ಜೇವನದ ಗತಿಯೇ ಬದಲಾಯಿತು. ಪ್ರೀತಿಯಿಂದ ಅದೆಷ್ಟೋ ವರ್ಷಗಳ ಸಂಬಂಧ ಇರುವಂತೆ ಗುರುನಾಥರು ತೋರಿಸುತ್ತಿದ್ದ ಪ್ರೀತಿಯನ್ನು ಅವರಿಂದೂ ನೆನೆಸುತ್ತ ಗುರುನಾಥರ ವಿಶಿಷ್ಟ ರೀತಿಯಾದ ಒಂದು ಘಟನೆಯನ್ನು ನಮ್ಮೊಂದಿಗೆ ಹಂಚಿಕೊಂಡರು. 

"ನಂತರ ಗುರುನಾಥರು, ನಾನು ಶಿವಮೊಗ್ಗದವನೆಂದಾಗ... ಅನೇಕರ ಹೆಸರು ಕೇಳಿದರು. ಅವರೆಲ್ಲರ ಪರಿಚಯವಿದೆ ಎಂದೆ. ಶಿವಮೊಗ್ಗದ ಒಬ್ಬ ಅಡಿಕೆ ಮಂಡಿಯ ಭಕ್ತರ ಮನೆಗೆ ಬರುತ್ತಿರುತ್ತೇನೆ ಎಂದಾಗ ಅಲ್ಲಿ ಬಂದು ಅವರ ನಂಬರ್ ತೆಗೆದುಕೊಂಡು ವಿಚಾರಿಸಿದಾಗ ಅವರು 'ಬರುತ್ತಾರಪ್ಪ.... ಯಾವಾಗ ಬರುತ್ತಾರೆ, ಹೇಗೆ ಬರುತ್ತಾರೆ... ಯಾವಾಗ ಇಲ್ಲಿಂದ ಹೊರಡುತ್ತಾರೆ ಎಂಬುದೇ ನಮಗೆ ತಿಳಿಯೋಲ್ಲ' ಅಂದುಬಿಟ್ಟರು. ಅದೊಂದು ದಿನ ಇದ್ದಕ್ಕಿದ್ದಂತೆ ಗುರುನಾಥರನ್ನು ನೋಡಬೇಕೆಂದು ಆ ಭಕ್ತರ ಮನೆಗೆ ಹೋದಾಗ ನನ್ನ ಅದೃಷ್ಟದೇವತೆ ಅಲ್ಲಿ ದರ್ಶನ ನೀಡಿದರು. ನಮ್ಮ ಬಂಧುಗಳನ್ನೆಲ್ಲಾ ಕರೆದೊಯ್ದೆ. ಭಜನೆ ನಡೆಯುತ್ತಿತ್ತು. ಇದ್ದಕ್ಕಿದ್ದಂತೆ ಗುರುನಾಥರು ಅದು ಯಾವಾಗಲೋ ಅಲ್ಲಿಂದ ಮತ್ತೆಲ್ಲಿಗೋ ಹೊರಟು ಹೋಗಿದ್ದರು. ಗುರುನಾಥರನ್ನು ಕಾಣಬೇಕೆಂದನಿಸಿದಾಗ, ನಾನವರ ಬಳಿ ಹೋದಾಗ, ತುಂಬಾ ಪ್ರೀತಿಯಿಂದ ಹರಸಿ ಕಳಿಸುತ್ತಿದ್ದರು". 

"ಒಮ್ಮೆ ಅವರ ಕಾಲಿಗೆ ಏನೋ ತೊಂದರೆಯಾಗಿತ್ತು. ಭವರೋಗ ವೈದ್ಯರಿಗೆ ರೋಗವೇ? ಅದೊಂದು ಅವರ ಲೀಲಾ ನಾಟಕ. ನನಗವರ ಉಪಚಾರ ಸೇವೆ ಮಾಡುವ ಒಂದು ಅವಕಾಶ ನೀಡಿ ನನ್ನಲ್ಲಿ ಧನ್ಯತಾಭಾವ ಬೆಳೆಯಲು ಅವರೇ ರಚಿಸಿದ ಲೀಲೆ ಇರಬೇಕು. ಗುರುನಾಥರು ಲವಲೇಶದ ಹೊರೆಯನ್ನು ತಮ್ಮ ಮೇಲಿಟ್ಟುಕೊಳ್ಳದ ಮಹಾತ್ಮರಾಗಿದ್ದರು. ಅಂದು ಅವರು ತಮ್ಮ ಮಗನನ್ನು ಕರೆಸಿ ಹಣ್ಣು ಹಂಪಲು, ದುಡ್ಡುಗಳನ್ನಿಟ್ಟು 'ವೈದ್ಯರೇ, ನೀವಿದನ್ನು ತೆಗೆದುಕೊಳ್ಳಬೇಕು. ಬೇರೆ ಏನೂ ಹೇಳಬೇಡಿ' ಎಂದು ಕರುಣೆಯಿಂದ ಆಜ್ಞಾಪಿಸಿದಾಗ ನಾನು ಮೂಕವಿಸ್ಮಿತನಾಗಿದ್ದೆ. ಸ್ವೀಕರಿಸಿದೆ ಗುರುಪ್ರಸಾದವೆಂದು. ಏಕೆಂದರೆ ಅವರೇ ಎಲ್ಲೆಡೆಯೂ ಸಾರ್ವಭೌಮರು. ಅವರ ವಾಕ್ಯವೊಂದೇ ಎಲ್ಲೆಡೆ ಜಾರಿಯಾಗುವುದು. ಎಲ್ಲರ ಮೇಲೆ ಗುರುನಾಥರದೊಂದೇ ಪ್ರಭುತ್ವ, ಕರುಣೆ, ಅಪಾರ ಪ್ರೀತಿಯ ಸಾಮ್ರಾಜ್ಯ ನಡೆಯುವುದು, ಹೀಗೆನ್ನುತ್ತಾ ಮತ್ತೆ ಗುರುಕೃಪೆಯ ನೆನಪಾಗಿ ಅವರು ಗದ್ಗದಿತರಾದರು. 

ಪ್ರಿಯ ನಿತ್ಯ ಸತ್ಸಂಗ ಬಳಗದವರೇ, ಮೊದಲು ಕಠೋರವಾಗಿ ಕಂಡ ಗುರುನಾಥರು ತ್ವರಿತವಾಗಿ ಮೇಣದಂತೆ ಮೃದುವಾದುದೇಕೆ? ಬಹುಶಃ ಭಕ್ತರ ನಿಷ್ಕಲ್ಮಶ ಪ್ರೀತಿಯಿಂದಲೇ ಅಲ್ಲವೇ ! ಅಂತಹ ನಿಷ್ಕಲ್ಮಶ  ಪ್ರೀತಿಯನ್ನು ಗುರುವಿಗಾಗಿ ಧಾರೆ ಎರೆಯುತ್ತಾ ನಾವೂ ಆನಂದ ಹೊಂದೋಣ.... 

ನಾಳಿನ ಸತ್ಸಂಗಕ್ಕೆ ಗುರುನಾಥರು ಅದಾವ ಭಕ್ತಿ ಎಂಬ ಹೋಳಿಗೆಯೂಟವನ್ನು ನಮ್ಮ ಜೋಳಿಗೆಗೆ ನೀಡುತ್ತಾರೋ! ನಾಳೆಯೂ ಬನ್ನಿ, ಎಲ್ಲರೂ ಒಟ್ಟಾಗಿ ಆ ಗುರುಕೃಪಾ ಭಿಕ್ಷೆಯನ್ನು ಪಡೆದು ಅನುಭವಿಸೋಣ. ಬರುವಿರಲ್ಲವೇ? 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ. 

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


For more info visit :  http://srivenkatachalaavadhoota.blogspot.in

No comments:

Post a Comment