ಶ್ರೀ ಸದ್ಗುರುನಾಥ ಲೀಲಾಮೃತ - 2
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 26
ಅನಾಥರನಾಥರಾದ ಸದ್ಗುರುನಾಥರು
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ । ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।
ಕಷ್ಟದಲ್ಲಿರುವವರಿಗೆ ಕಾಮಧೇನುವಾದ ಗುರುನಾಥರು, ಒಬ್ಬ ವಯೋವೃದ್ಧರನ್ನು ಭದ್ರಾವತಿಯ ಆಸ್ಪತ್ರೆಯೊಂದಕ್ಕೆ ಸೇರಿಸಬೇಕಾಗಿ ಬಂದಿತು. ಸಖರಾಯಪಟ್ಟಣವೆಲ್ಲಿ ಭದ್ರಾವತಿ ಎಲ್ಲಿ? ಗುರುನಾಥರಿಗೆ ವಿಶ್ವದ ತುಂಬ ಬಂಧುಗಳಿರುವಾಗ ಅವರಿಗೇನು ಚಿಂತೆ. ಆದರೆ ಗುರುನಾಥರು ಯಾರಿಗಾದರೂ ಒಂದು ಸೇವೆಯನ್ನು ಕೊಡುವಲ್ಲಿ, ಸೇವೆ ಮಾಡುವವರ ಪೂರ್ವಪುಣ್ಯವೂ ಅಗಾಧವಾದದ್ದೇ ಇರಬೇಕು.
ಗುರುನಾಥರು ಯಾರಿಗೆ ಏನು ಆಜ್ಞೆ ಮಾಡಿದರೂ ಶಿರಸಾವಹಿಸುವ ಭಕ್ತಗಣವಿದ್ದರೂ, ಗುರುನಾಥರು ಏನಾದರೂ ಕೆಲಸ ವಹಿಸುವಾಗ ಅವರ ಪ್ರೀತಿಯ ನುಡಿಗಳು, ಅವರ ಮಮತೆ, ಅನುನಯದ ಮಾತುಗಳು ಎಂತಹವನನ್ನೂ ಕರಗಿಸಿಬಿಡುವಂತಹದು. ಯಾರಿಗೂ ಹೊರೆಯಾಗದಂತೆ ಗುರುಗಳು ನಡೆದುಕೊಳ್ಳುತ್ತಿದ್ದ ರೀತಿಯೇ ಚೆಂದ. ಅಂದು ಹೇಮಕ್ಕನ ಸೇವೆಯನ್ನವರು ಆರಿಸಿಕೊಂಡಿದ್ದರು.
ಎಂದಿನಂತೆ ಅಂದು ಹೇಮಕ್ಕನ ಮನೆಗೆ ಬಂದ ಗುರುನಾಥರು ಉಭಯಕುಶಲೋಪರಿಯಾದ ಮೇಲೆ "ಹೇಮಾ... ಅಮ್ಮಾ ಮಗಳೇ ನಿನಗೆ ಒಂದು ಭಾರದ ಕೆಲಸವನ್ನು ವಹಿಸುತ್ತಿದ್ದೀನಿ... ಮಾಡ್ತೀಯಾಮ್ಮಾ" ಎಂದು ಕೇಳಿದಾಗ "ಅಯ್ಯೋ, ಗುರುನಾಥರೇ.... ನಿಮ್ಮ ಮನೆ ಇದು.... ನೀವು ಏನು ಬೇಕಾದರೂ ಆಜ್ಞೆ ಮಾಡಿ... ಹೀಗೆ ಮಾತ್ರ ಕೇಳುವುದು ಬೇಡ... ಇವೆಲ್ಲಾ ನಿಮ್ಮದೇ ಅಲ್ಲವೇ" ಎಂದು ಸಂತಸದಿಂದ ಗುರುನಾಥರ ಆಜ್ಞೆಯನ್ನು ಶಿರಸಾವಹಿಸಲು ಸಿದ್ಧರವರು.
ಗುರುನಾಥರು ತಮ್ಮ ದೂರದ ಸಂಬಂಧಿ, ತಮ್ಮ ಊರಿನ ವಯೋವೃದ್ಧರೊಬ್ಬರನ್ನು ಭದ್ರಾವತಿಯ ನರ್ಸಿಂಗ್ ಹೋಮ್ ಗೆ ಸೇರಿಸಿದ್ದರು. ಹನ್ನೊಂದೋ..... ಹದಿನೈದೋ ದಿನಗಳು.... ಗುರುನಾಥರು ಅವರ ಸೇವೆಗೈಯುತ್ತಿದ್ದರು, ಊಟ ಉಪಚಾರಗಳನ್ನು ತಂದು ಕೊಡುವ ಭಾಗ್ಯ ಹೇಮಕ್ಕನಿಗೆ ಒದಗಿಸಿದ್ದರು.
ಸಕಾಲಿಕ ವೈದ್ಯರ ಸೇವೆ, ಗುರುನಾಥರ ಕೃಪೆ ಇವುಗಳಿಂದ ಆ ವೃದ್ಧರು ಸ್ವಸ್ಥರಾದರು. ಅವರನ್ನು ಸಖರಾಯಪಟ್ಟಣಕ್ಕೆ ತಲುಪಿಸಲು ಹೊರಟಾಗ, ಹೇಮಕ್ಕನನ್ನೂ ಕರೆದೊಯ್ದಿದ್ದರು. ಸ್ವಸ್ಥರಾದ ವೃದ್ಧರ ಮನೆಯ ತುಂಬ ಮಕ್ಕಳು, ಮೊಮ್ಮಕ್ಕಳು ಎಲ್ಲ ಇದ್ದರು. ಗುರುನಾಥರ ಸೇವೆಗೆ ಆ ಮನೆಯ ಜನ ನಮಸ್ಕರಿಸಿ ಧನ್ಯವಾದ ಹೇಳಲು ಬಂದಾಗ ದೂರದಿಂದ ಗುರುನಾಥರು ಪಾದಗಳನ್ನು ಹಿಂದಕ್ಕೆಳೆದುಕೊಂಡು "ನೀವು ಇಷ್ಟೆಲ್ಲಾ ಇದ್ದೀರಿ..... ಯಾರು ಎಷ್ಟು ಸಲ ಬಂದು ಅವರನ್ನು ನೋಡಿದಿರಿ? ಮಗಳಾಗಿದ್ದರೋ... ಇವರು ತಾಯಿಯಂತೆ ಸೇವೆ ಮಾಡಿದರು.... ಇದೇನಾ ಸಂಬಂಧ" ಎಂದು ನೇರ ನುಡಿಗಳಿಂದ ಆ ಮನೆಯವರ ತಪ್ಪನ್ನು ಎತ್ತಿ ಆಡಿದರಂತೆ.
ಸನ್ಮಾನ್ಯ ಮಿತ್ರರೇ.. ನಾವೂ ಮನುಷ್ಯರು.... ಎಂದಾದರೂ ಇಂತಹ ಘಟನೆ ನಮ್ಮ ಜೀವನದಲ್ಲಿ ಬಂದರೆ.... ಗುರುನಾಥರ ನುಡಿ, ಈ ಸತ್ಸಂಗ ನಮ್ಮನ್ನು ಎಚ್ಚರಿಸಿದರೆ... ಸತ್ಸಂಗ ಸಾರ್ಥಕವಾದಂತೆ. ಈ ರೀತಿಯ ದೃಷ್ಟಾಂತಗಳು ಒಂದೆರಡಲ್ಲ, ಹಲವು.
ಯಾರೂ ಏನೂ ಮಾಡಬೇಡಿ ಅದಕ್ಕೆ ದಾರಿ ಬಿಡಿ:
ಒಮ್ಮೆ ಗುರುನಾಥರ ಮನೆಯ ಒಳಗೆ ಎಲ್ಲ ಕುಳಿತಿದ್ದರು. ಭಕ್ತರೊಂದಿಗೆ ಸಮಾಲೋಚನೆಗಳಾಗುತ್ತಿರುವಾಗ ಇದ್ದಕ್ಕಿದ್ದಂತೆ ಅಲ್ಲಿ ಕುಳಿತ ಗುರುನಾಥರು ಮೇಲೆದ್ದರು. ಎಲ್ಲರೂ ಕೂಡಲೇ ಗುರುನಾಥರು ಎಲ್ಲಿಗೋ ತೆರಳುವರೇನೋ ಎಂದು ಎದ್ದು ನಿಂತು ಹಿಂದೆ ಸರಿದರು. ಒಬ್ಬ ಹೆಣ್ಣು ಮಗಳು ಹಾಸಿದ್ದ ಚಾಪೆಯನ್ನು ಸುತ್ತಲೂ ಕೈ ಹಾಕಿದಳು. ಕೂಡಲೇ ಗುರುನಾಥರು "ಬೇಡ ಬೇಡ ಚಾಪೆ ಮಾಡಿಸಬೇಡ ದೂರ ನಿಲ್ಲು" ಎಂದರು. ಏನು ಎತ್ತ? ಅರಿವಾಗದೇ ಎಲ್ಲರೂ ನೋಡುತ್ತಿರುವಾಗ ದೊಡ್ಡ ಚೇಳೊಂದು ಚಾಪೆಯ ಅಡಿಯಿಂದ ಹರಿಯುತ್ತ ಮುಂದೆ ಬಂದಿತು. ಅದು ತನ್ನಷ್ಟಕ್ಕೆ ಬಾಗಿಲಿನಿಂದ ಹೊರ ಹೊರಟು ಹೋಯಿತು. "ಅದೇನು ಮಾಡುವುದಿಲ್ಲ. ಸುಮ್ಮನೆ ಇದ್ದುಬಿಡಿ. ಅದು ಬಂದ ಜಾಗಕ್ಕೆ ಹೋಗುತ್ತದೆ" ಎಂದರಂತೆ ಗುರುಗಳು.
ಪ್ರಾಣಿ ಮಾತ್ರರಿಗೂ ಗುರುನಾಥರು ನೋವು ಮಾಡುತ್ತಿರಲಿಲ್ಲ. ನಮ್ಮ ಮನದಲ್ಲಿ ಚೇಳು, ಹಾವು ಕಂಡರೆ.... ನಮ್ಮ ಕಠೋರತೆ ಅದೆಷ್ಟು ಬೇಗ ಹೊರಬರುತ್ತದೆ. ಆದರೆ ಗುರುನಾಥರ ಮನದಲ್ಲಿ ಎಲ್ಲ ಜೀವಜಂತುಗಳ ಬಗ್ಗೆಯೂ ಎಂತಹ ಕರುಣೆ ಇದ್ದಿತೆಂಬುದು ಭಕ್ತರಿಗೆ ಕಂಡು ಬಂದಿತು.
ಒಮ್ಮೆ ಭದ್ರಾವತಿಯ ಒಬ್ಬ ಭಕ್ತರಿಗೆ "ಅವರಿಗೇನೋ ತೊಂದರೆಯಿದೆ. ಪರ್ವಕಾಲದಲ್ಲಿ ಹೋಗಿ ನದಿಯಲ್ಲಿ ಸ್ನಾನ ಮಾಡಲು ತಿಳಿಸಿ" ಎಂದು ಗುರುನಾಥರು ಸಖರಾಯಪಟ್ಟಣದಿಂದ ತಿಳಿಸಿದರು.
ಅಲ್ಲಿಯೇ ಕುಳಿತ ಗುರುನಾಥರಿಗೆ ಎಲ್ಲ ಅರಿವಾಗಿ, ಸೀದಾ ಭದ್ರಾವತಿಗೆ ಬಂದು "ಏನು ರಾಯರೇ, ಪರ್ವ ಕಾಲದಲ್ಲಿ ನದಿಗೆ ಹೋಗಿ ಸ್ನಾನ ಮಾಡಿದಿರಾ?" ಎಂದು ಕೇಳಿದರು. ಏನೂ ಅರಿಯದ ಇವರು "ನನಗೇನೂ ಗೊತ್ತೇ ಇಲ್ಲ... ಪರ್ವಕಾಲ ಎಂದರೆ ಯಾವಾಗ?" ಎಂದು ಮುಗ್ಧರಾಗಿ ನುಡಿದಾಗ, "ಬನ್ನಿ ಇವತ್ತೇ ಆ ಪರ್ವ ಕಾಲ. ನಡೆಯಿರಿ ಹೋಗೋಣ" ಎಂದು ರಾಯರನ್ನು ಕರೆದುಕೊಂಡು ಸುಣ್ಣದಳ್ಳಿಯ ಬಳಿ ಭದ್ರಾ ನದಿಯಲ್ಲಿ ಮಂತ್ರೋಕ್ತವಾಗಿ ಅವರಿಗೆ ಸ್ನಾನ ಮಾಡಿಸಿ, ತಾವೂ ಸ್ನಾನ ಮಾಡಿಕೊಂಡು ಬಂದರಂತೆ.
ಅಬ್ಬಾ ಎಂತಹ ಜವಾಬ್ದಾರಿ ಗುರುಸ್ಥಾನದಲ್ಲಿ ನಿಂತ ಗುರುನಾಥರಿಗೆ ಇದು ಹೀಗೆ ಆಗುತ್ತದೆಂದು ಅಲ್ಲಿಂದಲೇ ಗಮನಿಸಿ ಓಡಿಬಂದ ಗುರುನಾಥರ ಕರುಣೆ.... "ಕೃಪಾ ಎಂದು ಕೂಗಿದ ಕೂಡಲೇ ಓಡಿ ಬಂದು ಗಜೇಂದ್ರ ಮೋಕ್ಷ ಮಾಡಿದ ಶ್ರೀ ಕೃಷ್ಣ ಪರಮಾತ್ಮನಿಗಿಂತ ದೊಡ್ಡದು". ಏಕೆಂದರೆ ಇಲ್ಲಿ ಭಕ್ತರು ಕೂಗದಿದ್ದರೂ ಗುರುನಾಥರೋಡಿ ಬಂದು ಶಿಷ್ಯನ ಪಾಪ ತೊಳೆದಿದ್ದರು... ಭಕ್ತವರೇಣ್ಯರೇ ಇಂತಹ ಕರುಣಾ ಸಮುದ್ರರ ನಿತ್ಯ ಸತ್ಸಂಗಕ್ಕೆ ನಾಳೆಯೂ ನಮ್ಮೊಂದಿಗೆ ಇರಿ......
ಅದಕ್ಕೆ ಸಾಧಕರಿಗೆ ಯೋಗಿಂದ್ರರ ವೇದಿಕೆ ಎಂದರೆ ರೀಚಾರ್ಚಬಲ್ ಬ್ಯಾಟರಿ ಇದ್ದಂತೆ ಎಂದು ಪದೇ ಪದೇ ಹೇಳುತ್ತಿದ್ದರು.....,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
Parama poojya sakaraayapurada Dore venkatachala gurugalige nanna poojya namanagalu. Yella kaaladalli Sarvarannu uddarisi asheervadisi Kaapadi Guruvarya. Hari om tatsat.
ReplyDelete