ಒಟ್ಟು ನೋಟಗಳು

Thursday, April 20, 2017

ಶ್ರೀ ಸದ್ಗುರುನಾಥ ಲೀಲಾಮೃತ  - 2 

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ನಿತ್ಯ ಸತ್ಸಂಗ  - 42

 

ಫುಟ್ ಪಾತ್ ನಲ್ಲಿ ಕಾಫಿ ಸಂತರ್ಪಣೆ 


 

।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।

।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ । ಶೋಕ ಮೋಹ ವಿವರ್ಜಿತಂ ।। 
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।



ಗುರುನಾಥರು ಬೆಂಗಳೂರಿನ ತಮ್ಮ ಬಂಧುಗಳೊಬ್ಬರ ಮನೆಗೆ ಬಂದಾಗ ಅವರ ಮನೆಯವರೆಲ್ಲರೊಂದಿಗೆ ತುಂಬಾ ಸರಳವಾಗಿ ಇರುತ್ತಿದ್ದರಂತೆ. ತಮ್ಮ ಜೊತೆ ಆದಿ ಬೆಳೆದ ಭಾವನೊಂದಿಗೂ ಅದೇ ಪ್ರೀತಿ. ಮನೆಯ ಮುಂದಿನ ಫುಟ್ ಪಾತ್ ನಲ್ಲಿ ಕುಳಿತು ಭಾವನವರಿಗೆ 'ಇಲ್ಲಿಗೆ ಕಾಫಿ ತಂದು ಕೊಡುತ್ತೀರಾ?' ಎಂದು ಕೇಳುತ್ತಿದ್ದರಂತೆ. ಅಲ್ಲಿಗೇ ಕಾಫಿ ಸರಬರಾಜು ಮಾಡುವ ಭಾವನವರು, ಅದನ್ನು ಅಕ್ಕಪಕ್ಕ ಬಂದ ಜನಕ್ಕೆ ಹಂಚುವ ಗುರುನಾಥರು! 

ಒಮ್ಮೆಯಂತೂ ಈ ರೀತಿ ಹತ್ತು ಸಾರಿ ಕಾಫಿಯನ್ನು ತರಿಸಿಕೊಂಡು ಇತರರಿಗೆ ಹಂಚಿ, ಕೊನೆಗೆ ಹನ್ನೊಂದನೆಯ ಸಾರಿ ನೀಡಿದ ಕಾಫಿಯನ್ನು ತಾವು ಕುಡಿದರಂತೆ. 'ಹೀಗೆ ನಮ್ಮ ತಾಳ್ಮೆಯನ್ನು ಗುರುನಾಥರು ಪರೀಕ್ಷಿಸುತ್ತಿದ್ದರೋ, ದಾನ ಮಾಡುವುದನ್ನು ಕಲಿಸುತ್ತಿದ್ದರೋ.... ' ಎನ್ನುತ್ತಾರೆ ಗುರುನಾಥರ ಬಂಧುಗಳು. 

ಅವರು ಮುಂದುವರೆದು 'ಗುರುನಾಥರ ನುಡಿಗಳು, ಅವರು ಆಗಾಗ ಹೇಳುವ ಅನೇಕ ವಿಚಾರಗಳು ನಮಗಾಗ ಅರ್ಥವಾಗುತ್ತಿರಲಿಲ್ಲ. ಅವರ ಮಾತುಗಳಿಗೆ ಲೌಕಿಕ ಕಾರ್ಯ ಕಾರಣ ಸಂಬಂಧಗಳು ಕಂಡುಬರದಿದ್ದಾಗ, ಅನೇಕ ಸಾರಿ ನಾನು ಸಲುಗೆ ಇರುವುದರಿಂದ, ವಾದ ಮಾಡಿದ್ದಿದೆ, ಜಗಳವಾಡಿದ್ದಿದೆ. 

ಒಮ್ಮೆ 'ಏನಿದೆಯಯ್ಯಾ ಆ ಪೇಪರ್ ಹಿಡಿದು ಬೆಳಗೆದ್ದು ಓದುತ್ತಾ ಕೂರುತ್ತೀಯಲ್ಲಾ.,... ದಯಮಾಡಿ ಪೇಪರ್ ಓದುವುದನ್ನು ಬಿಟ್ಟುಬಿಡಿ' ಎಂದರು. ದಿನಾ ಬೆಳಗೆದ್ದು ಪೇಪರ್ ಓದುತ್ತ ಕಾಫಿ ಕುಡಿಯುವ ಅಭ್ಯಾಸ ನನ್ನದು. ಅದನ್ನು ಬಿಡುವುದು ಅಷ್ಟು ಸುಲಭವಾಗಿರಲಿಲ್ಲ. ಒಮ್ಮೆ ನಾವೆಲ್ಲಾ ಕಾರಿನಲ್ಲಿ, ಸಖರಾಯಪಟ್ಟಣಕ್ಕೆ ಹೋಗುತ್ತಿದ್ದೆವು. ಗುರುನಾಥರೂ ಇದ್ದರು. ಯಾರೋ ಒಬ್ಬರು ಜೋರಾಗಿ ಪೇಪರ್ ಓದುತ್ತ, ಎಲ್ಲಿಯೋ ನಡೆದ ಭೀಕರ ಅಪಘಾತದ ಸುದ್ದಿಯನ್ನೋದಿದರು. ಇದಾದ ಕೆಲವೇ ನಿಮಿಷಗಳಲ್ಲಿ ನಮ್ಮ ಕಾರೂ ಒಂದು ಸಣ್ಣ ಅಪಘಾತಕ್ಕೆ ಒಳಗಾಯಿತು. ಆದರೆ ಅದೃಷ್ಟವಶದಿಂದಲೋ, ಗುರುನಾಥರ ಸಾನ್ನಿಧ್ಯದಿಂದಲೋ ಎಲ್ಲರೂ ಬಚಾವಾಗಿದ್ದೆವು. 'ನೋಡಿ ಇಲ್ಲಿಯೂ ನಡೆದ, ಬೇಡದ ವಿಚಾರವನ್ನು ಇಲ್ಲಿಗೆ ಯಾಕೆ ಕರೆಯುತ್ತೀರಿ? ಒಳ್ಳೆಯದಾದರೆ ಸರಿ, ಪೇಪರ್ ತುಂಬಾ ಇಂದು ಕಾಣುವುದು ಕೊಲೆ, ಅಪಘಾತ, ಕಳವು, ಇವೆ ಸುದ್ದಿಗಳು. ಇದನ್ನು ಇಲ್ಲಿಗೆ ನಾವು ತರಬೇಕೆ? ನಮ್ಮ ಸತ್ ಸ್ಪಂದನಗಳಿಗೆ ಅವು ಭಂಗ ತರುತ್ತವೆ' ಎಂದರು. ಇಂದೂ ಸಹಾ ಆ ಘಟನೆ ನನಗೆ ಮೈ ಜುಮ್ಮೆನಿಸುತ್ತದೆ. ಗುರುನಾಥರ ಪ್ರತಿಯೊಂದು ನುಡಿಯ ಹಿಂದೆ ಅಪಾರ ಅರ್ಥವಿದೆ. ಆ ಕ್ಷಣಕ್ಕೆ ನಮಗೆ ಅರಿವಾಗದು' ಎಂದರು. 

ಕಾರ್ತಿಕ ಸೋಮವಾರ, ಸಾಕ್ಷಾತ್ ಪರಮೇಶ್ವರ ಬಂದಿದ್ದಾನೆ.... 

ಗುರುನಾಥರು ಬೆಂಗಳೂರಿನ ತಮ್ಮ ಬಂಧುಗಳ ಮನೆಗೆ ಆಗಾಗ್ಗೆ ಬರುವಂತೆ ಅಂದೂ ಬಂದರು. ಮನೆಯಲ್ಲಿ ಅವರ ಅತ್ತೆ ಕಾರ್ತಿಕ ಸೋಮವಾರವೆಂದು ಮಡಿಯಿಂದ ಪೂಜೆ ಮಾಡುತ್ತಿದ್ದರು. ಆ ಮನೆಯೊಡತಿಗೆ ಗುರುನಾಥರು 'ನಾನೊಂದು ವಿಚಾರ ಹೇಳುತ್ತೇನೆ. ಅದರಂತೆ ಮಾಡುವಿಯಾ?' ಎಂದು ಕೇಳಿದರು. ಗುರುನಾಥರೊಂದಿಗೆ ಅನೇಕ ವರ್ಷಗಳ ಒಡನಾಟವಿರುವುದರಿಂದ ಲೋಕದ ಕಣ್ಣಿಗೆ ವಿಚಿತ್ರವಾಗಿ ಕಾಣುವ ಅವರ ಎಲ್ಲ ನುಡಿಗಳಲ್ಲೂ ಅದೇನೋ ಒಂದು ವಿಶೇಷವಿರುತ್ತದೆಂದು ನಂಬಿದ್ದ ಹಾಗೂ ಅದರಂತೆಯೇ ನಡೆಯುತ್ತಿದ್ದ ಆ ತಾಯಿ 'ಹೇಳಪ್ಪಾ, ಅದೇನು ಹೇಳುತ್ತೀಯೋ ಹಾಗೆ ಮಾಡುತ್ತೇನೆ' ಎಂದು ಭರವಸೆ ಇತ್ತರು. ಆಗ ಗುರುನಾಥರು 'ನೋಡು ನಿಮ್ಮ ಮನೆಯ ಮುಂದೆ ಬಂದಿರುವ ಆ ಕಸ ಗುಡಿಸುವವರಿಗೆ ಹೊಟ್ಟೆ ತುಂಬಾ ತಿಂಡಿ ಕಾಫಿ ನೀಡಿ ಹಣ್ಣು ಹಂಪಲು ದಕ್ಷಿಣೆ ಕೊಟ್ಟು ನಮಸ್ಕರಿಸಿ ಬಾ. ಅಲ್ಲಿ ಬಂದಿರುವವನು ಮತ್ಯಾರೂ ಅಲ್ಲ, ಸಾಕ್ಷಾತ್ ಶಿವಸ್ವರೂಪಿ' ಎಂದಾಗ ಬಾಕಿ ಏನನ್ನೂ ಯೋಚಿಸದೇ, ಗುರುನಾಥರು ಹೇಳಿದ ಕೆಲಸವನ್ನು ಭಕ್ತಿಯಿಂದ ಮಾಡಿ ಬಂದರು. ಸ್ನಾನ ಮಾಡಿ ಮಡಿಯುಟ್ಟು ಅವರು ಮತ್ತೆ ಅಲ್ಲಿಂದ ಬಂದು ಬಟ್ಟ್ಟೆ ಬದಲಿಸಬೇಕೇ.. ಬೇಡವೇ.. ಅತ್ತೆಯವರು ಏನೆಂದುಕೊಂಡಾರು? ಎಂಬ ಯಾವ ಚಿಂತೆಯನ್ನೂ ಮಾಡಲಿಲ್ಲವಂತೆ. 

'ಕಲ್ಲು ನಾಗರ ಕಂಡರೆ ಕೈಯ ಮುಗಿಯುವವರು ನಿಜದ ನಾಗರ ಕಂಡರೆ ಕೊಲ್ಲು ಕೊಲ್ಲೆಂಬರು' ಎನ್ನುವ ಜಗದ ರೀತಿ ನೀತಿಯ ಉಕ್ತಿಯಂತೆ, ನಿಜವಾಗಿ ಹಸಿವಾದವರ, ಕಷ್ಟದಲ್ಲಿರುವವರ ಸೇವೆ, ಅವರಿಗೆ ದಾನ ಧಾರ್ಮ ಮಾಡುವುದು ನಿಜವಾಗಿಯೂ ಪರಮಾತ್ಮನಿಗೆ ತಲುಪುತ್ತದೆಂಬುದನ್ನು ಸಾರುತ್ತ, ಅದೇ ರೀತಿ ನಡೆಯುತ್ತಾ ಬಂದ ಗುರುನಾಥರು, ತಮ್ಮ ಬಂಧುಗಳಿಗೆ ಹೀಗೆ ಸುಲಭದಲ್ಲಿ ಕಾರ್ತಿಕ ಸೋಮವಾರದಂದು ಶಿವನ ದರ್ಶನ ಮಾಡಿಸಿದ್ದರು. 

ಎಲ್ಲೆಡೆ ಪರಮಾತ್ಮನಿದ್ದಾನೆ. ಎಲ್ಲರಲ್ಲಿರುವ ಆ ವೈಶ್ವಾನರ, ಜಠರಾಗ್ನಿಗೆ ದಾನ ಮಾಡುವುದು ನಿಜವಾದ ಶಿವನ ಸೇವೆ ಎನ್ನುತ್ತಿದ್ದ ಗುರುನಾಥರ ವಾಕ್ಯವನ್ನು ಇಲ್ಲಿ ಸ್ಮರಿಸಬಹುದಾಗಿದೆ. 

ತಮ್ಮ ಗುರುನಾಥರು ಸಾಮಾನ್ಯರಲ್ಲ. ಅವರೇ ಸಾಕ್ಷಾತ್ ಶಿವಸ್ವರೂಪಿಗಳು. ಅವರೇ ದತ್ತಾತ್ರೇಯರು, ಎಂದು ನಂಬಿರುವ ಗುರುನಾಥರ ಆ ಬೆಂಗಳೂರಿನ ಬಂಧುಗಳು, ಆಗಾಗ್ಗೆ ತಮ್ಮ ಮನೆಗೆ ಬರುತ್ತ, ಹೀಗೆ ಹಲವು ವಿಸ್ಮಯಕಾರಿ ಘಟನೆಗಳನ್ನು ಜರುಗಿಸುತ್ತಿದ್ದುದನ್ನು ಆನಂದದಿಂದ ಸ್ಮರಿಸುತ್ತಾರೆ. 

ಪ್ರಿಯ ಗುರುಬಾಂಧವರೇ, ನಾಳೆಯೂ ಗುರುನಾಥರ ನಿತ್ಯ ಸತ್ಸಂಗ ಮುಂದುವರೆಯಲಿದೆ. ದಯಮಾಡಿ ನಮ್ಮೊಂದಿಗೆ ಇರಿ.. ಬರುವಿರಲ್ಲಾ.... 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ. 

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


For more info visit :  http://srivenkatachalaavadhoota.blogspot.in

No comments:

Post a Comment