ಒಟ್ಟು ನೋಟಗಳು

Saturday, April 15, 2017

ಶ್ರೀ ಸದ್ಗುರುನಾಥ ಲೀಲಾಮೃತ  - 2 

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ನಿತ್ಯ ಸತ್ಸಂಗ  - 37

 

ಅಯೋಮಯ ಅನುಭವ 


 

।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।

।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ । ಶೋಕ ಮೋಹ ವಿವರ್ಜಿತಂ ।। 
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।



ಗುರು ಸಾಮರ್ಥ್ಯಕ್ಕೆ ಕೊನೆ ಮೊದಲ್ಲೆಲ್ಲಿದೆ? ಸಖರಾಯಪಟ್ಟಣದ ಗುರುನಾಥರೊಂದಿಗೆ ಹಲವಾರು ಸಾರಿ ಭೇಟಿ ಮಾಡಿ ಅವರ ಅಪಾರ ಸಾಧನೆ, ತಪಶಕ್ತಿ ಹಾಗೂ ಆ ಶಕ್ತಿಯನ್ನು ಭಕ್ತರ ಉದ್ಧಾರಕ್ಕಾಗಿ ನಿಸ್ವಾರ್ಥವಾಗಿ ಬಳಸುತ್ತಿದ್ದ ವಿಚಾರಗಳನ್ನು ಶ್ರೀ ಬ್ರಹ್ಮಾನಂದ ಗುರೂಜಿಯವರು ಇಂದಿನ ನಿತ್ಯ ಸತ್ಸಂಗಕ್ಕಾಗಿ ಹೇಳಿದ ರೀತಿ ಹೀಗಿದೆ ನೋಡಿ. 

ಸಮಷ್ಟಿ ಬುದ್ಧಿ, ಹಿರಣ್ಯಗರ್ಭನ ಉಪಾಸನೆಯಿಂದ ಅದರೊಂದಿಗೆ ಏಕತ್ವವನ್ನು ಹೊಂದಿದ್ದ ಗುರುನಾಥರು ಬಹು ಕರಾರುವಕ್ಕಾಗಿ ದೂರದಲ್ಲಿರುವ ಘಟನೆ ದೃಶ್ಯಗಳನ್ನು ಆಗಲೇ ತಾವಿದ್ದ ಸ್ಥಳದಲ್ಲೇ ಹೇಳುತ್ತಿದ್ದರು. ತಮಗೆ ದೈವದೊಲುಮೆಯಿಂದ ಬಂದ ಆ ದಿವ್ಯ ಶಕ್ತಿಯನ್ನು ನಿರಪೇಕ್ಷವಾಗಿ, ನಿಸ್ಪೃಹರಾಗಿ ನೊಂದು ಬೆಂದು ಕಷ್ಟದಲ್ಲಿ ಇರುವವರಿಗೆ ಸರಳ ಪರಿಹಾರ ಹಿತ ಬಯಸುವುದಕ್ಕಾಗಿ ಉಪಯೋಗಿಸುತ್ತಿದ್ದರು. ಆಡಂಬರ, ಪ್ರಚಾರಗಳಿಂದ ಸದಾ ದೂರವಿರುತ್ತಿದ್ದರು. ಆಡಂಬರ ಮಾಡುವುದನ್ನು ಖಂಡಿಸುತ್ತಿದ್ದರು. ಅನೇಕರಿಗೆ ಗುರುಗಳ ಫೋಟೋ ತೆಗೆಯುವ ಹುಚ್ಚು - ಅಂತಹ ಸಂದರ್ಭದಲ್ಲಿ ಅವರಾಡುತ್ತಿದ್ದ ಮಾತು "ಭಾವವನ್ನು ಹೃದಯದಲ್ಲಿ ಇಟ್ಟುಕೊಳ್ಳಬೇಕು ಕಣಯ್ಯ, ಚಿತ್ರದಲ್ಲಿ ಅಲ್ಲ" ಎನ್ನುತ್ತಿದ್ದರು. 

ಗುರುವೇ ಎಂದು ಯಾರಾದರೂ ನಮಸ್ಕರಿಸಿದರೆ "ಏನಯ್ಯಾ ಈಗ ನೀನು ಗುರುವೇ ಎಂದು ನಮಸ್ಕರಿಸುತ್ತಿದ್ದೀಯ. ಈ ಗುರುಭಾವವನ್ನು ಕೊನೆಯವರೆಗೂ ಇಟ್ಟುಕೊಳ್ಳುತ್ತೀಯೇನಯ್ಯ" ಎಂದು ಕೇಳುತ್ತಿದ್ದರು. "ಗುರು ಎಂದರೆ ಗೋಪ್ಯ ಕಣಯ್ಯಾ. ಅದನ್ನು ಅಷ್ಟು ಹಗುರವಾಗಿ ಬಳಸಬಾರದು" ಎನ್ನುತ್ತಿದ್ದರು. "ಸಾಧಕನು ಸಾಧನೆಯನ್ನು ರಹಸ್ಯವಾಗಿ, ಗೋಪ್ಯವಾಗಿ ಮಾಡಬೇಕು - ತೋರಿಕೆಗಾಗಿ ಅಲ್ಲ" ಎನ್ನುತ್ತಿದ್ದರು. ನಾನು ಹೊಳೆನರಸೀಪುರ ಆಧ್ಯಾತ್ಮ ಕಾರ್ಯಾಲಯ ಬಿಟ್ಟ ಮೇಲೆ ಅನೇಕ ವರ್ಷಗಳು ಗುರುನಾಥರ ಭೇಟಿ ಮಾಡಲಾಗಲಿಲ್ಲ. ನಂತರ ನಾನು ಸನ್ಯಾಸ ದೀಕ್ಷೆ ಪಡೆದ ನಂತರ ಬೆಂಗಳೂರಿನಲ್ಲಿ ದೈವಯೋಗದಿಂದ ಆಕಸ್ಮಿಕವಾಗಿ ಮತ್ತೀಕೆರೆಯ ಗುರುಭಕ್ತ ಸುಧಾಕರ್ ಮನೆಯಲ್ಲಿ ಗುರುನಾಥರು ಇದ್ದಾರೆಂಬುದು ದೂರವಾಣಿ ಮುಖಾಂತರ ಗೊತ್ತಾಗಿ ಅಲ್ಲಿಗೆ ನಾನು ಹಾಗೂ ಅಚ್ಚಣ್ಣನವರ ಮಗ ಮಂಜಣ್ಣನೂ ಗುರುನಾಥರ ದರ್ಶನಕ್ಕಾಗಿ ಅಲ್ಲಿಗೆ ಹೋದೆವು. ಮನೆ ಬಾಗಿಲಿನ ಮುಂದೆ ಬರುತ್ತಿದ್ದಂತೆಯೇ ಪೂರ್ಣಕುಂಭದೊಂದಿಗೆ ಸ್ವಾಗತಿಸಿ, ನೇರವಾಗಿ ದೇವರ ಮನೆಗೆ ಕರೆದುಕೊಂಡು ಹೋಗಿ, ಕುರ್ಚಿಯ ಮೇಲೆ ಕೂರಿಸಿ, ಅವರ ಭಕ್ತರೆಲ್ಲರಿಂದ ರುದ್ರಾಧ್ಯಾಯದೊಂದಿಗೆ ನನ್ನ ಪಾದಪೂಜೆ ಮಾಡಿಸಿದರು. ಇದೆಲ್ಲಾ ನನಗೆ ಅಯೋಮಯವಾಗಿತ್ತು. ಸುಮ್ಮನೆ ಕಣ್ಣು ಮುಚ್ಚಿ ಗುರುವನ್ನು ಧ್ಯಾನಿಸುತ್ತಾ ಕುಳಿತಿದ್ದೆ. ಗುರುನಾಥರ ಮಹಾಗುಣಗಳನ್ನು ಸ್ಮರಿಸುತ್ತಾ ಗುರುವಿನ ಗುರುತನ ಕಂಡು ವಿಸ್ಮಿತರಾಗದೇ ಉಳಿಯಲು ಅದಾರಿಗೆ ಸಾಧ್ಯ - ಅವನ ಲೀಲೆಯೇ ವಿಚಿತ್ರ ಅಲ್ಲವೇ? 

ಪ್ರಿಯ ಓದುಗ ಮಿತ್ರರೇ ಗುರುನಾಥರೊಂದಿಗೆ ನಿಕಟ ಸಂಬಂಧ ಹೊಂದಿದ್ದು, ಗುರುನಾಥರನ್ನು ಅರಿತು - ಅವರ ಪ್ರೇಮಾನುಭೂತಿಯನ್ನು ನಮಗಾಗಿ ನೀಡುತ್ತಿರುವ ಶ್ರೀ ಬ್ರಹ್ಮಾನಂದ ಗುರೂಜಿಯವರು ಸತ್ಸಂಗವನ್ನು ಮತ್ತೆ ಮುಂದುವರೆಸಿದರು. 

"ಪಾದಪೂಜೆಯ ನಂತರ ಎಲ್ಲರಿಗೂ ಕಾಫಿಯ ಸಮಾರಾಧನೆಯಾಯಿತು. ಎಲ್ಲರೂ ಗುರುಭಜನೆಯಲ್ಲಿ ತೊಡಗಿದರು. ಗುರುನಾಥರ ಸಾನ್ನಿಧ್ಯವೇ ಹಾಗೆ. ಎಲ್ಲರೂ ಭಜನೆಯಲ್ಲಿ ಭಕ್ತಿಯಿಂದ ಕೆಲಕ್ಷಣ ಮೈಮರೆತರು. ಭಜನೆಯ ನಂತರ ಗುರುನಾಥರು ನನಗೆ ಸತ್ಸಂಗ ಮಾಡಲು ಹೇಳಿದರು. 'ಮರೆಹೊಕ್ಕೆ ಸದ್ಗುರುರಾಯ ದೂರಮಾಡೋ ಮಹಾ ಮಾಯಾ' ಎಂಬ ಭಜನೆ ಮಾಡಿ, ನಂತರ ಗುರುಸ್ಮರಣೆ ಮಾಡಿ, ನನ್ನ ಮಾತಿಗೆ ತೋಚಿದಂತೆ ಗುರುತತ್ವ, ಗುರುವಿನ ಮಹಿಮೆಯ ಬಗ್ಗೆ ಹೇಳಿದೆ. ನಂತರ ಎಲ್ಲರಿಗೂ ಅನ್ನಸಂತರ್ಪಣೆಯಾಯಿತು. ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇತ್ತು. ಸತ್ಸಂಗ, ಭಜನೆ, ಉಪದೇಶ, ಪ್ರಸಾದ ವಿತರಣೆಗಳೂ ಸಾಗುತ್ತಿತ್ತು. ನಂತರ ಗುರುವಂದನೆ ಎಂಬಂತೆ ಹಣ್ಣು, ಹಂಪಲು, ಪಂಚೆ, ದಕ್ಷಿಣೆಗಳನ್ನು ಭಕ್ತರಿಂದ ಕೊಡಿಸಿದರು. ನಂತರ ನಾನು ಹೋಗಿ ಬರುತ್ತೇನೆಂದು ನಮಸ್ಕರಿಸಿ ಗುರುನಾಥರಲ್ಲಿ ಅಪ್ಪಣೆ ಬೇಡಿದಾಗ, ಪ್ರೇಮಾದರದಿಂದ 'ಬರುವುದು ನಿಮ್ಮಿಚ್ಛೆ. ಆದರೆ ಕಳಿಸುವುದು ನಮ್ಮಿಚ್ಛೆ' ಎಂದು ನುಡಿದು ಮತ್ತೂ ಒಂದು ಗಂಟೆ ಗುರುನಾಥರು ನನ್ನನ್ನು ತಮ್ಮ ಬಳಿಯೇ ಉಳಿಸಿಕೊಂಡರು. ನಂತರ ಕೊನೆಗೆ ಪ್ರೇಮದಿಂದ ನಮ್ಮನ್ನು ಹರಸಿ, ಮಂಜಣ್ಣನನ್ನು, ನನ್ನನ್ನೂ ತಮ್ಮ ಭಕ್ತರ ಕಾರಿನಲ್ಲಿ ನಾವು ಸೇರಬೇಕಾದ ಸ್ಥಳಕ್ಕೆ ಕಳಿಸಿಕೊಟ್ಟರು'. ಗುರುನಾಥರ ಪ್ರೀತಿ, ಆದರ, ಗೌರವಗಳನ್ನು ಒಮ್ಮೆ ನೋಡಿದವರು ಎಂದೂ ಅದರಿಂದ ದೂರ ಸರಿಯುವುದಿಲ್ಲ. ಹಾಗಾಗಿಯೇ, ಗುರುನಾಥರ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಅಪಾರವಾಗುತ್ತಾ ಸಾಗಿದ್ದುದು. 

ಮತ್ತೊಮ್ಮೆ ಗುರುನಾಥರನ್ನು ಕಾಣಲು ಶ್ರೀ ಬ್ರಹ್ಮಾನಂದಜೀಯವರು ತಮ್ಮ ಭಕ್ತರೊಂದಿಗೆ ಗುರುನಿವಾಸದ ಊರಾದ ಸಖರಾಯಪಟ್ಟಣಕ್ಕೆ ಹೋದಾಗ ಆದ ಅನುಭವ ನೋಡಿ, ಅದು ಹೀಗಿದೆ. 

"ಚಿತ್ರದುರ್ಗದ ಶ್ರೀ ಶಂಕರಲಿಂಗ ಭಗವಾನ್ ಭಕ್ತ ಮಂಡಳಿಯವರು ಮಾಳೇನಹಳ್ಳಿಯಲ್ಲಿ ಹದಿಮೂರು ಲಕ್ಷ ರಾಮನಾಮ ಜಪ ತಾರಕ ಹೋಮ ಮುಂತಾದ ಮಹತ್ಕಾರ್ಯವನ್ನು ಮಾಡಲು, ವೆಂಕಟಾಚಲ ಅವಧೂತರ ಆಶೀರ್ವಾದ ಪಡೆದು ಬರಲು ನನ್ನನ್ನೂ ಜೊತೆಗೆ ಕರೆದುಕೊಂಡು ಹೊರಟರು". 

ಪ್ರಿಯ ಓದುಗ ಭಕ್ತರೇ, ಗುರುನಾಥರ ಬಳಿ ಬರುವ ಭಕ್ತರಲ್ಲಿ ದೇವಸ್ಥಾನ ನಿರ್ಮಿಸುವ, ಯಾಗ-ಯಜ್ಞ ಮಾಡಿಸುವ, ಊರ ಹಿತಕರ ಕಾರ್ಯ ಮಾಡುವ ಮಂದಿ ಮೊದಲು ಅವಧೂತರ ಬಳಿ ಬಂದು ಅನುಮತಿ ಪಡೆದರೆಂದರೆ ಎಲ್ಲ ವಿಘ್ನಗಳೂ ನಿವಾರಣೆಯಾಗಿ ಆ ಶುಭ ಕಾರ್ಯಗಳು ಮಂಗಳಮಯವಾಗಿ ಸಂಪನ್ನಗೊಂಡಂತೆಯೇ. ಇಂತಹ ಕಾರ್ಯಗಳಿಗೆ ಆಶೀರ್ವದಿಸುವುದರ ಜೊತೆಗೆ ಉದಾರ ಸಹಾಯವೂ ಆಗುತ್ತಿತ್ತು. 

ನಾಳೆ ನಮ್ಮೊಂದಿಗೆ ಇರುತ್ತೀರಲ್ಲ. ಶಂಕರಲಿಂಗರ ಭಕ್ತರು ನಡೆಸಿದ ಹೋಮದಲ್ಲಿ ಏನು ಅದ್ಭುತ ನಡೆಯಿತೆಂದು ತಿಳಿಯಲು ನಾಳಿನ ನಿತ್ಯ ಸತ್ಸಂಗದಲ್ಲಿ ತಪ್ಪದೇ ಭಾಗಿಯಾಗಿ..... 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ. 

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


For more info visit :  http://srivenkatachalaavadhoota.blogspot.in

No comments:

Post a Comment