ಶ್ರೀ ಸದ್ಗುರುನಾಥ ಲೀಲಾಮೃತ - 2
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 28
ಹಣ್ಣೆಲೆ ಇದೆಯಾ ಹುಡುಕಿ ತಾ....
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ । ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।
ಗುರುನಾಥರ ಬಳಿ ತಮ್ಮ ನೋವನ್ನು ತೋಡಿಕೊಂಡವರಿಗೆ, ಅವರವರ ಭಾವಭಕುತಿಗೆ ಅನುಗುಣವಾಗಿ ಚಿತ್ರವಿಚಿತ್ರ ರೀತಿಯ ಉಪಶಮನಗಳು ದೊರೆಯುತ್ತಿದ್ದವು. ಕೆಲವೊಮ್ಮೆ ತಪ್ಪು ಮಾಡುವುದು ಯಾರೋ, ಮತ್ತ್ಯಾರನ್ನೋ ತನ್ನ ಪರವಾಗಿ ಗುರುನಾಥರ ಬಳಿ ಕಳಿಸಿದರೆ, ಅದನ್ನವರು ಒಪ್ಪುತ್ತಿರಲಿಲ್ಲ. "ಉಪ್ಪು ತಿಂದವನು ನೀರು ಕುಡಿಬೇಕಯ್ಯಾ. ಅವನು ಬರಲಿ ನೋಡೋಣ" ಎಂದು ಬಿಡುತ್ತಿದ್ದರು.
ಹೀಗೆಯೇ ಒಂದು ಸಂಸಾರದಲ್ಲಿ ತನ್ನ ಪತಿಯ ವ್ಯವಹಾರದಲ್ಲಾದ ಅವಘಡದಿಂದ, ಮುಂಬರಬಹುದಾದ ಅನಾಹುತದಿಂದ ರಕ್ಷಣೆ ಪಡೆಯಲು ಹೆಣ್ಣು ಮಗಳೊಬ್ಬರು ಗುರುನಾಥರ ಬಳಿ ಬಂದರು. ತಮ್ಮ ಅಳಲನ್ನು ತೋಡಿಕೊಂಡರು. ಅದೆಷ್ಟೋ ಹೊತ್ತು ಗುರುನಾಥರ ಅಣತಿಯಂತೆ ಅವರು ಜಾಗ ಬಿಟ್ಟೇಳದಂತಹ ಆಜ್ಞೆಯನ್ನು ಗುರುನಾಥರು ಮಾಡಿಬಿಟ್ಟರಂತೆ.
ಎಲ್ಲ ಗುರುನಾಥರ ನಡೆನುಡಿಗಳಿಗೂ ಏನೋ ಒಂದು ಅರ್ಥವಿದ್ದೇ ಇರುತ್ತದೆ. ತನ್ನ ಬಳಿ ಆರ್ತನಾಗಿ ಬಂದ ಆತನನ್ನು ತನ್ನ ಪ್ರಭಾವಲಯದಲ್ಲಿ ಕೂರಿಸಿ, ಅವರ ಕಷ್ಟಗಳನ್ನು ದೂರ ಮಾಡಿದ್ದೂ ಇದೆ.
ಕೊನೆಗೆ ಅದೆಷ್ಟೋ ಹೊತ್ತಿನ ಮೇಲೆ... ಆ ಹೆಣ್ಣು ಮಗಳ ಕಡೆ ತಿರುಗಿ, "ಅಲ್ಲಿ ಮನೆ ಹಿಂದುಗಡೆ ಎಕ್ಕದ ಗಿಡವಿದೆ. ಅದರಲ್ಲಿರುವ ಒಂದು ಹಣ್ಣಾದ ಎಕ್ಕದ ಎಲೆಯನ್ನು ತೆಗೆದುಕೊಂಡು ಬಾ" ಎಂದು ಕಳಿಸಿದರಂತೆ.
ಗಿಡವೆಂದ ಮೇಲೆ ಹಸಿರೆಲೆ-ಹಣ್ಣೆಲೆ ಇರುವುದು ಸಹಜ ತಾನೇ. ಇವರ ದುರಾದೃಷ್ಟಕ್ಕೆ ಒಂದು ಹಣ್ಣೆಲೆಯೂ ಇವರಿಗೆ ಕಂಡು ಬರಲಿಲ್ಲ. ಇಡೀ ಎಕ್ಕಡ ಗಿಡವನ್ನು ಹತ್ತಾರು ಬಾರಿ ಪ್ರದಕ್ಷಿಣೆ ಹಾಕಿ, ಯಾವ ಭಾಗದಿಂದ ಪರಿಶೀಲಿಸಿದರೂ ಹಣ್ಣೆಲೆ ಕಾಣಲಿಲ್ಲ. ಒಳ ಬಂದು ಗುರುನಾಥರಿಗೆ ಇದನ್ನು ತಿಳಿಸಿದಾಗ "ಸರಿಯಾಗಿ ಹುಡುಕಮ್ಮ ಹಣ್ಣೆಲೆ ಸಿಗುತ್ತೆ" ಎಂದರು ಗುರುನಾಥರು.
ಮತ್ತೆ ವಿಫಲರಾಗಿ ಎರಡನೇ ಸಾರಿ ಬಂದಾಗಲೂ, ಗುರುನಾಥರು ಮರಳಿ ಯತ್ನವ ಮಾಡಲು ಹೇಳಿ "ಸರಿಯಾಗಿ ನೋಡಮ್ಮಾ ಸಿಗುತ್ತೆ" ಎಂದು ಬಿಟ್ಟರಂತೆ.
ನಮಗೇನು ಮಂಕು ಕವಿದಿರುತ್ತದೆಯೇ? ನಮ್ಮ ಅದೃಷ್ಟವೇ ಹಾಗಿರುತ್ತದೆಯೋ, ಎಂದಿನಂತೆ ಕಾಲಿಗೆ ತೊಡಕುವ ವಸ್ತು ಅಂದು ಕಣ್ಮರೆಯಾಗಿ- ಕಾಣಿಸದಂತಾಗಿ ಬಿಡುವುದಿದೆ.ಏನು ಮಾಯೆಯೋ?
ಅಂತೂ ಮೂರನೆಯ ಬಾರಿ ಎಕ್ಕದ ಗಿಡದ ಬಳಿ ಬಂದ ಆ ಹೆಣ್ಣು ಮಗಳು ಒಂದೊಂದು ಟೊಂಗೆಯನ್ನು ಬಗ್ಗಿಸಿ, ಎತ್ತಿ ನೋಡುತ್ತಾ ಗಿಡವನ್ನು ಸುತ್ತಾಡಿದಾಗ ಒಂದು ಸಣ್ಣ ಹಣ್ಣೆಲೆ ಆ ಎಕ್ಕದ ಗಿಡದಲ್ಲಿ ಕಂಡು ಬಂದಿತು. ಅಂತೂ ಗುರುಕೃಪೆಯಾಯಿತು. ಸಂಭ್ರಮದಿಂದ ಆ ಸಣ್ಣ ಹಣ್ಣಾದ ಎಕ್ಕದ ಎಲೆಯನ್ನು ಜತನವಾಗಿ ತಂದು ಭಕ್ತಿಯಿಂದ ಗುರುನಾಥರಿಗೆ ಇತ್ತರು.
ಹಸನ್ಮುಖಿಗಳಾದ ಗುರುನಾಥರು ಆ ಎಕ್ಕದ ಎಲೆಯನ್ನು ಮಂತ್ರಿಸಿ, ಆ ಹೆಣ್ಣು ಮಗಳಿಗೀಯುತ್ತಾ "ಅಲ್ಲಮ್ಮಾ, ಅವನು ಬರುವುದನ್ನು ಬಿಟ್ಟು ನಿನ್ನನ್ನು ಕಳಿಸಿದ್ದಾನಲ್ಲ... ಹೋಗಲಿ ಇದನ್ನು ಮನೆಯಲ್ಲಿಟ್ಟು ಭಕ್ತಿಯಿಂದ ಒಂದು ವಾರ ಪೂಜೆ ಮಾಡಿ ಆ ನಂತರ ಇದನ್ನು ಒಂದು ಹಸಿರು ಗಿಡದ ಮೇಲೆ ಹಾಕು... ನಿನ್ನ ಕಷ್ಟಗಳೆಲ್ಲಾ ಪರಿಹಾರವಾಗುತ್ತದೆ" ಎಂದು ಹರಸಿ ಕಳಿಸಿದರಂತೆ.
ಗುರುನಾಥರಿಂದ ಪ್ರೇರೇಪಿತರಾಗಿ ಎಕ್ಕದ ಗಿಡದ ಪ್ರದಕ್ಷಿಣೆ ಮಾಡಿ ಇಂಡೈರೆಕ್ಟಾಗಿ ಗಣಪನ ಸೇವೆ ಸಂದಿತು, ಗುರುನಾಥರ ಕೃಪಾನುಗ್ರಹವಾಯಿತು. ಅಂತೂ ಸಖರಾಯಪಟ್ಟಣದಿಂದ ಕಡೂರಿಗೆ ಬರುವಾಗಲೇ ಇವರಿಗೆ ತಮ್ಮ ಕಷ್ಟ ಪರಿಹಾರವಾದ ಬಗ್ಗೆ ಫೋನು ಬಂದಿತ್ತು. ಅಲ್ಲದೆ ಯಾರೋ ಮಾಡಿದ ತಪ್ಪಿನಿಂದ ಮತ್ಯಾರದೋ ಮೇಲೆ ಬರಲಿದ್ದ ಆರೋಪವೂ ತಪ್ಪಿತ್ತು. ಗುರುನಾಥರ ಒಂದು ದರ್ಶನ ಅವರ ಪ್ರಭಾ ವಲಯದಲ್ಲಿ ಒಂದಷ್ಟು ಹೊತ್ತು ಕುಳಿತದ್ದು ಇವರ ಅದೆಷ್ಟೋ ಸಮಸ್ಯೆಗಳನ್ನು ನಿವಾರಿಸಿತ್ತು.
ಹೀಗೆಯೇ ಮತ್ತೊಂದು ಘಟನೆಯಲ್ಲಿ, ಗುರುದರ್ಶನ ಮಾಡಿ ಅರ್ಜೆಂಟ್ ಊರಿಗೆ ಹೊರಡಲಿದ್ದ ತಾಯಿಯೊಬ್ಬರನ್ನು ಗುರುನಾಥರು ಸಂಜೆಯವರೆಗೆ "ಮಾತನಾಡದೇ ಸುಮ್ಮನೆ ಕುಳಿತಿರಿ" ಎಂದು ಕೂರಿಸಿಬಿಟ್ಟರಂತೆ. ಬೆಳಗಿನ ತಿಂಡಿ, ಕಾಫಿ, ಮಧ್ಯಾನ್ಹದ ಉಪಾಹಾರ, ಎಲ್ಲವೂ ಆದ ಮೇಲೆ ಸಂಜೆ, ಆಂಜನೇಯನ ದೇವಾಲಯದ ಬಳಿ ಕರೆದೊಯ್ದು.... ಒಂದು ಸಣ್ಣ ಕಲ್ಲನ್ನು ನೀಡಿ "ಇದನ್ನು ಇಟ್ಟುಕೋ.. ನಿನ್ನ ಕಾಪಾಡುತ್ತೆ.. ನನಗೇನು ನಿಮ್ಮನ್ನು ಇಲ್ಲಿ ಸುಮ್ಮನೆ ಕೂರಿಸಿ ಊಟ ಹಾಕಲು ಗ್ರಹಚಾರವೇ? ... ಈಗ ಹೋಗಿ ಬನ್ನಿ" ಎಂದು ಕಳಿಸಿದರಂತೆ.
ತಮ್ಮ ಭಕ್ತರನ್ನು, ತಮ್ಮ ಬಳಿ ಅನನ್ಯ ಭಾವದಿಂದ ಬಂದವರನ್ನು ಸಲಹುವ, ಅನಾಹುತಗಳಿಂದ ರಕ್ಷಿಸುವ ಗುರುನಾಥರು... ಕೆಲವೊಂದು ಸಂದರ್ಭದಲ್ಲಿ ಕಠಿಣವಾಗಿ ಮಾತನಾಡುವಂತೆ ಕಂಡುಬಂದರೂ - ಅಲ್ಲೆಲ್ಲಾ ಭಕ್ತರ ಹಿತ ಚಿಂತನೆಯೇ ಅಡಗಿರುತ್ತಿತ್ತು. ಅಲ್ಲಿಗೆ ಹೋಗಲೂ ಅಲ್ಲಿಂದ ಹೊರಡಲೂ ಗುರುನಾಥರ ಕೃಪೆ, ಅನುಜ್ಞೆ ಬೇಕು ಎಂದು ಅರಿತರಷ್ಟೇ ಸಾಕು.. ಎಂತಹ ವಿಚಿತ್ರವಲ್ಲವೇ ಗುರುಲೀಲೆ.... ನಾಳೆ ಮತ್ತೆ ಸೇರೋಣ ಬನ್ನಿ.....,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
No comments:
Post a Comment