ಶ್ರೀ ಸದ್ಗುರುನಾಥ ಲೀಲಾಮೃತ - 2
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 23
ಯಾಕೆ ಕೈ ಹಾಕಿದಿರಿ ಭಗವತ್ಕೃಪೆ ಇದೆ ಮುಂದುವರೆಸಿ
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ । ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।
ಹೀಗೆ ಮುಂದುವರೆದ ಗುರುನಾಥರ ಅದಾಲತ್ ನಲ್ಲಿ ನಮ್ಮ ಹೊಸದುರ್ಗದ ಮಿತ್ರರ ಸರದಿ ಬಂದಿತ್ತು. ಯಾರೋ ನಮ್ಮ ಚಂದ್ರಪ್ರಕಾಶ್ ಅವರನ್ನು "ನಮ್ಮ ಬ್ರಾಹ್ಮಣ ಸಂಘದ ಪ್ರಸಿಡೆಂಟ್ ಇವರು" ಎಂದು ಪರಿಚಯಿಸಿ ಬಿಟ್ಟಿದ್ದೇ ತಡ ಗುರುನಾಥರು "ಬ್ರಾಹ್ಮಣ... ಯಾರು ಬ್ರಾಹ್ಮಣರು, ದೇವಸ್ಥಾನ.. ಪೂಜೆ... ಪೂಜೆ ಎಂದರೇನು? ಯಾವತ್ತಾದರೂ ಯಾರಾದರೂ ತೀರಿಕೊಂಡಾಗ ಅವರನ್ನು ಒಪ್ಪ ಮಾಡಲು ಹೋಗಿದ್ದೀರಾ? ಪರಮಾತ್ಮ ನೀಡಿದ ಈ ದೇಹವನ್ನು ಅವನಿಗೊಪ್ಪಿಸುವ ಕೊನೆಯ ಕೆಲಸ. "ಶಿವನ ಬಿಟ್ಟಿ" ಯ ಕೆಲಸ ನಿಷ್ಠೆಯಿಂದ ಮಾಡಿದರೆ ಎಲ್ಲ ಪೂಜೆ ಪುನಸ್ಕಾರ ಮಾಡಿದಂತೆ" ಎಂದರು.
ಮುಂದೆ ವಿಷಯಕ್ಕೆ ಬಂದ ಅವರು "ನೀವು ಈ ಕೆಲಸಕ್ಕೆ ಏಕೆ ಕೈ ಹಾಕಿದಿರಿ? ಆದಷ್ಟು ಸುಲಭವಲ್ಲ. ದೇವಸ್ಥಾನದ ಕೆಲಸ. ಇದರ ಮುಂದಾಳತ್ವ ವಹಿಸಿದವರು ಬೈಸಿಕೊಳ್ಳಬೇಕಾಗುತ್ತದೆ. ನಿಷ್ಠುರವಾಗುತ್ತೆ. ಆದರೆ ನೀವು ಕೈ ಹಾಕಿದಿರಿ. ಭಗವಂತ ನಿಮಗೆ ಕೃಪೆ ಮಾಡಿದ್ದಾನೆ. ಹೆದರಬೇಡಿ. ಮಧ್ಯೆ ಕೆಲಸ ಆಗಾಗ್ಗೆ ನಿಲ್ಲುತ್ತೆ. ವಿಘ್ನಗಳು ಬರುತ್ತೆ, ಅದು ಮುಂದೆ ಹೋಗುವುದಿಲ್ಲ, ನೀವೆ ತಳ್ಳಿಕೊಂಡು ಹೋಗಬೇಕು.... ಒಳ್ಳೆ ಕೆಲಸ ಮಾಡುತ್ತಿದ್ದೀರಿ, ಮುಂದುವರೆಸಿ" ಎಂದು ಧೈರ್ಯ ಹೇಳಿದರು.
ಸಂಜೆಯಾಗುತ್ತಿದೆ, ಗುರುನಾಥರನ್ನು ಮೊದಲ ಬಾರಿಗೆ ಕಂಡ ಹೊಸದುರ್ಗದ ಭಕ್ತಜನರಿಗೆ ಗುರುನಾಥರ ನುಡಿಗಳು ನೂರು ಅಶ್ವಬಲ ತಂದಿತ್ತಿತ್ತು. ಅವರ ದರ್ಶನ, ಅವರ ಮಾತುಗಳು ಮನಸ್ಸಿಗೆ ನೆಮ್ಮದಿ ಉಂಟುಮಾಡಿತ್ತು. ಸದ್ಗುರುವನ್ನು ಕಾಣಲು ಇಷ್ಟು ಹೊತ್ತು ಕಾದಿದ್ದು ಸಾರ್ಥಕವೆನಿಸಿತ್ತವರಿಗೆ.
"ಒಳ್ಳೆಯ ಕೆಲಸದ ಪ್ರಾರಂಭ ಮೊದಲು ನಿನ್ನಿಂದಾಗಲಿ" ಎನ್ನುವ ಮಾತೊಂದಿದೆ. ಗುರುನಾಥರು ಈ ರಾಮಮಂದಿರ ನಿರ್ಮಾಣಕ್ಕೆ ಹೊರಟ ಚಂದ್ರಪ್ರಕಾಶ್ ಮತ್ತವರ ಗುಂಪಿನವರಿಗೆ ಒಂದು ಸಾವಿರ ದೇಣಿಗೆಯನ್ನು ನೀಡಿ ನಿಮ್ಮ ಕೆಲಸ ಮುಂದುವರೆಯಲಿ, ಒಳ್ಳೆಯದಾಗುತ್ತದೆಂದು ಹರಸಿದರು.
ಭಕ್ತರ ಗುಂಪಿಗೆ ಸಂತಸವಾಯಿತು. ಗುರುನಾಥರ ಉದಾರತೆ ಕಂಡು ಬೆರಗಾಯಿತು. ಎಲ್ಲ ಭಕ್ತರ ಮನದಲ್ಲಿ ದೇವಾಲಯದ ಕೆಲಸ ಆಗಿ ಹೋದಷ್ಟೇ ಸಂತಸವಾಯಿತು. ತಮ್ಮ ಸಮಾಜದ ಈ ಕೆಲಸ ಅನೇಕ ದಿನಗಳಿಂದ ನೆನೆಗುದಿಗೆ ಬಿದ್ದುದು ಈ ರೀತಿ ಗುರುಕೃಪೆಯಿಂದ ಸುಲಭವಾಗಿ ಪರಿಹಾರ ಮಾರ್ಗಕ್ಕೆ ಬಂದಿತ್ತು.
ಗುರುನುಡಿಯನ್ನು ಅರಿಯುವುದು ಸುಲಭವಲ್ಲ:
ಬಂದ ಕೆಲಸ ಈ ರೀತಿ ಆಗುವ ಲಕ್ಷಣ ಕಂಡ.. . ಆ ಭಕ್ತರು "ಗುರುಗಳೇ ಈ ಮಂದಿರದ ಪ್ರಾರಂಭೋತ್ಸವಕ್ಕೆ ತಾವೇ ಬಂದು ನಡೆಸಿಕೊಡಬೇಕೆಂದು" ಭಕ್ತಿಯಿಂದ ಬೇಡಿತು.
ಗುರುನಾಥರು "ನಾನಿರೋಲ್ಲ" ಎಂದುಬಿಟ್ಟರು.
ಯಾರಿಗೂ ಈ ಮಂದಿರ ಯಾವಾಗ ಮುಗಿಯುತ್ತೆ, ಯಾವಾಗ ಪ್ರಾರಂಭೋತ್ಸವ? ಎಂಬುದು ತಿಳಿದೇ ಇಲ್ಲ, ಆದರೆ ಗುರುನಾಥರಂತಹ ಮಹಾತ್ಮರು ಬರಬೇಕೆಂಬ ಒಂದೇ ಭಾವದಲ್ಲಿ ಆಮಂತ್ರಣ ನೀಡಿದ್ದರು. ಮತ್ತೆ ಗುರುವನ್ನು ಬರಲು ಒತ್ತಾಯಿಸಿದರು.
ನಂತರ ಗುರುನಾಥರು.... "ಆಯ್ತು ಮಾಡಿ ಎಲ್ಲಾ ಚೆನ್ನಾಗಿ ಆಗುತ್ತೆ.... ನಾನು ಅವಾಗ ಬರ್ತೀನಿ" ಎಂದು ಭಕ್ತರನ್ನು ಸಂತೈಸಿ ಕಳಿಸಿದರು. ಹೊಸದುರ್ಗದಲ್ಲಿ ಬ್ರಾಹ್ಮಣ ಸಮಾಜದ ರಾಮಮಂದಿರವೂ ಪೂರ್ತಿಯಾಯಿತು. ದೊಡ್ಡ ಚೌಲ್ಟ್ರಿಯೂ ಆಯಿತು. ಅನೇಕ ವರ್ಷಗಳ ಸಮಾಜದ ಈ ಕಾರ್ಯ ಮುಗಿದಿದೆ. ಸಮಾಜಕ್ಕೊಂದು ಉಪಕಾರವಿದಾಗಿದೆ ಈಗ.
ಗುರು ಬಾಂಧವರೇ.... ಆದರೆ ಈ ಎಲ್ಲಾ ಕಾರ್ಯಗಳಾಗುವುದರಲ್ಲಿ ಮೂರು ನಾಲ್ಕು ವರ್ಷಗಳೇ ಕಳೆದಿವೆ. ಈ ತಂಡ ಗುರುವನ್ನು ಕಂಡ ಒಂದು ನಾಲ್ಕಾರು ತಿಂಗಳುಗಳಲ್ಲಿ ಗುರುನಾಥರು ಇಹಲೀಲೆಯನ್ನು ಸಮಾಪ್ತಗೊಳಿಸಿದ್ದರು.
ಇಂದು ಈ ಗುರುಭಕ್ತರುಗಳೆಲ್ಲಾ ಸಖರಾಯಪಟ್ಟಣದ ಅವಧೂತರ ಮಾತನ್ನು ನೆನೆದು "ತ್ರಿಕಾಲ ಜ್ಞಾನಿಗಳ ಮಾತು 'ನಾನಿರೋಲ್ಲ....' ಎನ್ನುವುದರ ಅರ್ಥ ನಮಗೀಗ ಆಗುತ್ತಿದೆ. ನಾನು ಎಂಬುದು ದೇಹ ಮಾತ್ರಾ... ಆದರೆ ಗುರುನಾಥರ ಆತ್ಮ ಶಾಶ್ವತವಾದದ್ದು, ಅವರ ಕೃಪೆ ಅನಂತವಾದದ್ದು, ಅವರ ಮಾತು ನಿತ್ಯ ಸತ್ಯವಾದದ್ದು. ಆಡಿದಂತೆ ಎಲ್ಲ ನಡೆಸಿಕೊಟ್ಟರು. ಅದಾವ ರೂಪದಿಂದ ಬಂದಿದ್ದರೋ... ಸಾಮಾನ್ಯರಾದ ನಾವು ಹೇಗೆ ಅರಿಯಲು ಸಾಧ್ಯ ಎಂದು ಗುರುನಾಥರನ್ನು ಗೌರವದಿಂದ ಸ್ಮರಿಸುತ್ತಾ, ನಿತ್ಯ ಸತ್ಯರೂ, ಶಾಶ್ವತರೂ, ಭಕ್ತ ಪ್ರೇಮಿಗಳೂ ಆದ ಗುರುನಾಥರನ್ನು ಸ್ಮರಿಸುತ್ತಾರೆ.
ಗುರುಬಾಂಧವರೇ, ನಾಳೆ ನಮ್ಮೊಂದಿಗೆ ನಿತ್ಯ ಸತ್ಸಂಗದಲ್ಲಿ ಇರುತ್ತೀರಲ್ಲಾ... ಗುರುನಾಥರ ಮತ್ತೊಂದು ಲೀಲೆಯನ್ನು ಅನುಭವಿಸೋಣ ಬನ್ನಿ.....
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
Poojya venkatachala avadootarige nanna poojya namanagalu. Yellarigu nimma krupe haagu rakshe kottu Kaapadi Guruvarya. Hari om tatsat.
ReplyDelete