ಶ್ರೀ ಸದ್ಗುರುನಾಥ ಲೀಲಾಮೃತ - 2
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 48
ಕರೆದದ್ದು ಶ್ರೀಕಾಂತರು ದರ್ಶನವಿತ್ತದ್ದು ಗುರುನಾಥರು
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ । ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।
ನನಗೇನು ಗುರುತತ್ವದ, ಗುರುಮಹಿಮೆಯ ಗಂಧ ಗಾಳಿ ಇರಲಿಲ್ಲ. ಗುರುನಾಥರನ್ನಂತೂ ಕಂಡೇ ಇರಲಿಲ್ಲ. ಆದರೆ ಭಜನಾ ಮಂಡಳಿಗಳಲ್ಲಿ ಅನನ್ಯವಾಗಿ ಹಾಡುವುದು ನನಗೆ ಪ್ರಿಯವಾದ ಕಾರ್ಯವಾಗಿತ್ತು. ಅದು ನನಗೇನು ಶಾಂತಿಯನ್ನು ಕೊಡುತ್ತಿತ್ತೋ, ನನಗಂತೂ ತಿಳಿದಿರಲಿಲ್ಲ. ನನಗರಿವಿಲ್ಲದೆ ಅದೆಷ್ಟು ಗುರುಗಳ ದೇವರ ನಾಮ ನನ್ನ ಬಾಯಿಂದ ಬರುತ್ತಿತ್ತೋ ಒಮ್ಮೆ ಒಂದು ದಿನ ಕನಸಿನಲ್ಲಿ ಅತ್ಯಂತ ಚಿಕ್ಕ ವಯಸ್ಸಿನ ಬಾಲಕರಂತಿರುವ, ಶ್ರೀಪಾದ ಶ್ರೀವಲ್ಲಭರಂತಹ ಗುರುವರ್ಯರೊಬ್ಬರು ಕನಸಿನಲ್ಲಿ ಬಂದು, 'ನಾನೀಗ ಹೊಸದುರ್ಗದಲ್ಲಿದ್ದೇನೆ. ಬಂದು ನನ್ನನ್ನು ಕಾಣು' ಎಂದು ಹೇಳಿದಂತಾಯ್ಹಿತು. ನಮ್ಮ ಗುಂಪಿನ ಸತೀಶ ಗುರೂಜಿಯವರನ್ನು ಈ ವಿಚಾರವಾಗಿ ಕೇಳಿದೆ. ಈ ಹೊಸದುರ್ಗದ ಯತಿವರ್ಯರು ಯಾರು? ಅವರೇಕೆ ನನಗೆ ಆಶೀರ್ವದಿಸುತ್ತಿದ್ದಾರೆ. ಅವರನ್ನು ನೋಡುವುದು ಹೇಗೆ? ಎಂದವರನ್ನು ಕೇಳಿದಾಗ ಅವರು 'ಕೃಷ್ಣಯೋಗಿಂದ್ರ ಸರಸ್ವತಿಗಳ ಆರಾಧನೆಗೆ ನಾವೆಲ್ಲಾ ಬಾಣಾವರಕ್ಕೆ ಹೋಗುತ್ತಿದ್ದೇವೆ. ಹಾಗೆ ಸಖರಾಯಪಟ್ಟಣಕ್ಕೆ ಹೋಗಿ ಅಲ್ಲೊಬ್ಬ ಅವಧೂತರಿದ್ದಾರೆ. ಅವರನ್ನು ಕಂಡು ನಂತರ ಹೊಸದುರ್ಗಕ್ಕೆ ಹೋಗೋಣ' ಎಂದರು. ನಾನು ಅವರಿಂದ ಪ್ರೇರಿತನಾಗಿ ಹೊರಟೆ. ನನಗೆ ಕನಸಿನಲ್ಲಿ ಕಂಡದ್ದು - ಶ್ರೀಕಾಂತ ಗುರೂಜಿ. ಆದರೆ ನನಗೆ ದರ್ಶನ ಕೊಟ್ಟವರು ಸಖರಾಯಪಟ್ಟಣದ ಅವಧೂತರು. ಕೇಳದೇ, ಪ್ರಯತ್ನಪಡದೇ ಗುರುನಾಥರ ದರ್ಶನವಾದ ಕಥೆಯನ್ನು ಬೆಂಗಳೂರಿನ ಒಬ್ಬ ಭಜನಾ ಪಟು, ಗುರುಭಕ್ತರಾದ ಶ್ರೀ ನಂಜುಂಡ ಅವರು ನಮ್ಮ ನಿತ್ಯ ಸತ್ಸಂಗಕ್ಕಾಗಿ ಹಂಚಿಕೊಂಡರು.
ಕನಕನಾಗಿ ತಿರುಗಿ ನಿಂತ ಕೃಷ್ಣ ಪ್ರಭು
ಕೃಷ್ಣಯೋಗಿಂದ್ರ ಸರಸ್ವತಿಗಳ ಆರಾಧನೆ ಮುಗಿಸಿ ಇವರ ಗುಂಪು ಸಖರಾಯಪಟ್ಟಣಕ್ಕೆ ಬಂದಾಗ,. ಗುರುನಾಥರ ಮನೆ ಭಕ್ತರಿಂದ ತುಂಬಿ ತುಳುಕುತ್ತಿತ್ತು. ಕೊನೆಗೆ ಹೋದ ಇವರಿಗೆ, ಬಾಗಿಲಿನ ತುದಿಯಲ್ಲಿ ಕೊನೆಯ ಸಾಲಿನಲ್ಲಿ ಸ್ಥಳ ಸಿಕ್ಕಿತು. ಅಲ್ಲಿಯವರೆಗೆ ಗುರುನಾಥರನ್ನು ಕಂಡಿರದ ನಾನು ಅವಧೂತರ ಆಗಮನಕ್ಕಾಗಿ ಕಾಯುತ್ತಿದ್ದೆ. ಹೊರಗಿನಿಂದ ಬಂದ ಅವಧೂತರು, ಮನೆಯ ಒಳಗೆ ಕಾಲಿಡುತ್ತಿದ್ದಂತೆ, ಒಂದು ಕುರ್ಚಿಯನ್ನು ತರಿಸಿಕೊಂಡು ಬಾಗಿಲಿನಲ್ಲಿಯೇ ಕುಳಿತುಬಿಟ್ಟರು. 'ಎಲ್ಲರೂ ಇತ್ತ ಕಡೆ ತಿರುಗಿ ಕುಳಿತುಕೊಳ್ಳಿರಿ' ಎಂದರು. ಕೊನೆಯ ಸಾಲಿನಲ್ಲಿದ್ದು, ಗುರುನಾಥರನ್ನು ದೂರದಿಂದ ಕಾಣಬೇಕಲ್ಲ ಎಂದು ಚಿಂತಿಸುತ್ತಿದ್ದ ಇವರು ಮೊದಲ ಸಾಲಿಗೆ ಬಂದುಬಿಟ್ಟಿದ್ದರು. ಗುರುವಿನ ಅತಿ ಹತ್ತಿರದಲ್ಲಿ ಕುಳಿತು ಅವರ ಪ್ರೇಮಮಯ ದೃಷ್ಟಿಯನ್ನು ಆಸ್ವಾದಿಸುವ ಕರುಣೆಯು ನಂಜುಂಡ ಅವರಿಗೆ ಸಿಕ್ಕಿತು.
ಅಲ್ಲಿ ಉಡುಪಿಯಲ್ಲಿ ಕನಕನ ಮೊರೆಗೆ ಕೃಷ್ಣನೇ ಕನಕನ ಕಡೆಗೆ ಮುಖ ಮಾಡಿ ತಿರುಗಿ ನಿಂತುಬಿಟ್ಟ. ಇಲ್ಲಿ ಗುರುನಾಥರು ಭಕ್ತನ ಮಾನಸಿಕ ಬೇಡಿಕೆಯನ್ನು ಈ ರೀತಿ ತೀರಿಸಿರಬೇಕೇನೋ ಅನ್ನಿಸದಿರದು.
'ಸದ್ಗುರು ಚರಣ ಆತ್ಮಾರಾಮ' ಎಂಬ ಭಜನೆ ಇದ್ದಕ್ಕಿದ್ದಂತೆ ನಂಜುಂಡ ಅವರಿಂದ ಹೊರಬಂದಿತು. ಹಾಡನ್ನು ಕೇಳಿದ ಗುರುನಾಥರು ತಮ್ಮ ಮತ್ತೊಬ್ಬ ಭಕ್ತರಿಂದ 'ತೀರ್ಥಯಾತ್ರೆಗೆ ಫಲ ಒಂದು' ಎಂಬ ಹಾಡನ್ನು ಹಾಡಿಸಿದರು.
ಹೀಗೆ ಹಾಡುಗಳ ವಿನಿಮಯವಾದಾಗ, ಬಾಕಿಯೆಲ್ಲಾ ಭಕ್ತರನ್ನು ಕಳಿಸಿ ಇವರ ಗುಂಪನ್ನು ಮಾತ್ರಾ ಅಲ್ಲೇ ಕೂರಿಸಿಕೊಂಡು ಇಪ್ಪತ್ತು ನಿಮಿಷಗಳವರೆಗೆ ಗುರುತತ್ವದ ಬಗ್ಗೆ ಮಾತನಾಡಿದರಂತೆ. ಗುರುವನ್ನು ನೋಡಲು ನಾವು ಬಂದಿದ್ದೇವೆ ಎಂಬುದನ್ನರಿತ ಅವರು 'ಗುರುವನ್ನು ನೋಡುವುದು ಅಂದ್ರೆ ಏನು? ದೇಹವನ್ನು ನೋಡುವುದು ಗುರುದರ್ಶನವಲ್ಲ. ಗುರುವಿನ ಶಕ್ತಿ, ಭಾವನೆಯನ್ನು ಕಾಣುವ ಪ್ರಯತ್ನ ಮಾಡಬೇಕು' ಎಂದು ಗುರುದರ್ಶನದ ಸೂಕ್ಷ್ಮತೆಯನ್ನು ಗುರುನಾಥರು ಅತ್ಯಂತ ಸರಳವಾಗಿ ತಿಳಿಸಿದರು.
ಯಾವ ಗುರುವಾಗಲೀ ಅವರೊಳಗಿರುವ ತತ್ವಶಕ್ತಿ ಎಲ್ಲವೂ ಒಂದೇ, ಆದರೆ ಆಕಾರದಲ್ಲಿ ವಿಭಿನ್ನವಾಗಿ, ವಿಭಿನ್ನ ರೂಪದಲ್ಲಿ ದರ್ಶನವಾಗುತ್ತದೆ.
ನಂತರ ನಂಜುಂಡ ಅವರು ಹೊಸದುರ್ಗಕ್ಕೆ ಹೋದಾಗ ಅದೇ ಬಾಲರೂಪದ ಸದ್ಗುರು ಶ್ರೀ ಶ್ರೀಕಾಂತಾನಂದರ ದರ್ಶನವಾಯಿತು. "ಅದೇ ಮೊದಲ ಬಾರಿಗೆ ನಾನವರನ್ನು ಕಂಡಿದ್ದಾದರೂ 'ನಂಜುಂಡನಿಗೇಕೋ ನನ್ನ ಮೇಲೆ ಇವತ್ತು ಭಕ್ತಿ, ಪ್ರೀತಿಗಳು ಬಂದುಬಿಟ್ಟಿದೆಯಪ್ಪಾ... ಬಾ' ಎಂದು ಶ್ರೀಕಾಂತಾನಂದ ಗುರೂಜಿಯವರು ಪ್ರೀತಿಯಿಂದ ಸ್ವಾಗತಿಸಿದರು".
ಹೀಗೆ ಶ್ರೀಕಾಂತ ಗುರೂಜಿಗಳನ್ನು ನೋಡಲು ಹೊರಟವರಿಗೆ ಗುರುನಾಥರ ದರ್ಶನವಾದದ್ದಾಗಲೀ, ಕೋಮಾರನಹಳ್ಳಿಯ ಶಂಕರಲಿಂಗನ ಭಕ್ತೆ ಪಾರ್ವತಮ್ಮನವರಿಗೆ ಗುರುನಾಥರು ತಾನೇ ಶಂಕರಲಿಂಗನೆಂದು ತೋರಿಸಿದ್ದು, ಮತ್ತೆ ಕೆಲವೆಡೆ ಕೃಷ್ಣಯೋಗಿಂದ್ರ ಸರಸ್ವತಿಗಳು ತಾವೇ ಎಂದು ಗುರುನಾಥರು ತೋರಿಸಿರುವ ವಿಚಾರಗಳು ನಿಮಗೆಲ್ಲಾ ತಿಳಿದದ್ದೇ ಆಗಿದೆ.
ಗುರುನಾಥರ ಲೀಲೆಗಳು ಅನನ್ಯ, ಅನಂತ. ಅರಿಯಲು ಅಸಾಧ್ಯವಾದುದು.
ಗುರುವೆಂದರೆ ಒಬ್ಬನೇ. ಹಲವು ರೂಪಗಳಲ್ಲಿ ಅಲ್ಲಲ್ಲಿ ಕಂಡುಬರುವ ಗುರುವನ್ನು ಅರಿಯಲೂ ಆ ಗುರುನಾಥರ ಕರುಣೆ ಬೇಕೇ ಬೇಕಲ್ಲ.
ಗುರುಬಾಂಧವರೇ, ಗುರುನಾಥರ ಲೀಲೆಗಳ ನಿತ್ಯ ಸತ್ಸಂಗ ನಾಳೆಯೂ ಸಾಗಲಿದೆ. ಎಂದಿನಂತೆ ಬರುವಿರಲ್ಲಾ....
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
����������
ReplyDelete