ಒಟ್ಟು ನೋಟಗಳು

Friday, April 14, 2017

ಶ್ರೀ ಸದ್ಗುರುನಾಥ ಲೀಲಾಮೃತ  - 2 

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ನಿತ್ಯ ಸತ್ಸಂಗ  - 36

 

ದರ್ಶನದಿಂದಲೇ ಇಹಸಾಧನ ಪೂರ್ಣಾನುಗ್ರಹ ಸತ್ಯದರ್ಶನ 


 

।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।

।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ । ಶೋಕ ಮೋಹ ವಿವರ್ಜಿತಂ ।। 
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।


'ಗುರುಚಿತ್ತವನ್ನರಿಯುವುದು ಬಹು ಕಷ್ಟ. ಅತ್ಯಂತ ಕರುಣಾಮಯಿ ಆದ ಆ ಗುರುವು ಒಂದು ನಮಸ್ಕಾರಕ್ಕೆ ತೃಪ್ತನಾಗಿ ತನ್ನ ಭಕ್ತರ ಜೀವನದ ಪರಿಪೂರ್ಣ ಜವಾಬ್ದಾರಿ ತೆಗೆದುಕೊಂಡು ನಡೆಸುತ್ತಿರುತ್ತಾನೆ. ಇದು ನಮ್ಮ ಪೂರ್ವಜರ ಪುಣ್ಯವೋ, ಮತ್ತೇನೋ? ಆದರೆ ಎಲ್ಲೋ ಒಂದೆಡೆ ಇದೆಲ್ಲಾ ನನ್ನಿಂದ ನಡೆಯುತ್ತಿದೆ ಎಂಬ ಭಾವನೆ ನಮ್ಮಲ್ಲಿ ಉಳಿದುಬಿಟ್ಟಿರುತ್ತದೆ. ಆ ಮೋಹ ಕಳೆಯಲು ಮತ್ತೆ ಗುರುವಿನ ಪೂರ್ಣಾನುಗ್ರಹವೇ ಆಗಬೇಕು. ಆ ದರ್ಶನ, ಪೂರ್ಣಾನುಗ್ರಹಗಳ ನಡುವಿನ ಮೈಸೂರಿನ ಗುರುನಾಥರ ಭಕ್ತರಾದ ಕುಮಾರಣ್ಣ ತಮ್ಮ ನಡುವಿನ ಗುರುನಾಥರ ಸಂಬಂಧ - ಅನುಬಂಧಗಳನ್ನು ನಿತ್ಯ ಸತ್ಸಂಗಕ್ಕಾಗಿ ಬಿಚ್ಚಿಟ್ಟಿದ್ದು ಹೀಗೆ.... 


ಮೊದಲಿನಿಂದ ದೊಡ್ಡವರು, ಗುರುಗಳೆಂದರೆ, ಒಂದು ನಮನ, ಗೌರವ ಕೊಡುವುದು ಇವರ ರೀತಿ. ಯಾವ ಯಾವ ದೊಡ್ಡವರ, ನಮನ ಯೋಗ್ಯರಿಗೆ ಇವರು ನಮಿಸುತ್ತಾ, ಆಶೀರ್ವಾದ ಪಡೆಯುತ್ತಾ ಬಂದಿದ್ದರೋ, 1998 ರಲ್ಲಿ ಸಖರಾಯಪಟ್ಟಣದ ಗುರುನಾಥರ ದರ್ಶನದ ಮಹಾಪರ್ವ ಇವರ ಜೀವನದಲ್ಲಿ ಬಂದಿತು. ಗುರುನಾಥರು ತುಂಬು ಮನಸ್ಸಿನಿಂದ ಇವರಿಗೆ ಆಶೀರ್ವಾದ ಮಾಡಿದ್ದರು. ಇವರು ಹಿಡಿದ ಕೆಲಸವೆಲ್ಲ ಸುಗಮವಾಗತೊಡಗಿದವು. ತಮ್ಮ ಕೆಲಸಗಳೆಲ್ಲಾ ಹೀಗೆ ನಿರಂತರ ಮೇರು ಗತಿಯಲ್ಲಿ ನಡೆಯುತ್ತಿರುವುದಕ್ಕೆ ನನ್ನ ತೋಳ್ಬಲ, ಬುದ್ಧಿ, ಪರಿಶ್ರಮ, ಪ್ರಯತ್ನಗಳೇ ಕಾರಣವೆಂಬ ಭಾವನೆಯೇ ಈ ಭಕ್ತರ ಮನದಲ್ಲಿ ಬೇರೂರಿಬಿಟ್ಟಿತ್ತು. ಅಂತೆಯೇ ಜೀವನ ಸಾಗತೊಡಗಿತ್ತು. 

ಬೆಳೆಯುವ ಭಕ್ತರ ಹುಮ್ಮಸ್ಸನ್ನು ನೋಡಿ ಬೆನ್ನೆಲುಬಾಗಿ ನಿಂತ ಗುರುನಾಥರು.... 'ಎಂದೂ ಇದು ನನ್ನ ಬಲದಿಂದಾದುದು ಕಣಯ್ಯಾ' ಎಂದು ಹೇಳಲಿಲ್ಲ. ಭಕ್ತನ ಪುರೋಭಿವೃದ್ಧಿಯನ್ನು ನೋಡಿ ಸಂತೋಷಿಸುತ್ತಿದ್ದರೂ, ಕೇವಲ ಪ್ರಾಪಂಚಿಕರಾಗಿ ಮೂಲದ ಅರಿವಾಗದ ಇವರ ಸ್ಥಿತಿ ನೋಡಿ, ಮನದಲ್ಲಿ ಮರುಗುತ್ತಿದ್ದರೋ, ಅವರೇ ಮಾತ್ರ ಅರಿಯಬಲ್ಲರು. 

ಬೇಕೆನಿಸಿದಾಗೆಲ್ಲಾ ಗುರುನಾಥರ ಬಳಿ, ಭಕ್ತಿಯೊಂದಿಗೆ ಹೋಗುವುದು, ಗುರುನಾಥರು ತಿಳಿಸಿದ ಪುಣ್ಯ ಸ್ಥಳಗಳಿಗೆ ಯಾತ್ರೆ ಮಾಡುವುದು, ಅನೇಕ ಸಾರಿ ತಿರುವಣ್ಣಾಮಲೈಗೂ ಹೋಗಿ ಬರುತ್ತಿದ್ದರು. ಗುರುನಾಥರ ಪ್ರೀತಿಯ ಮಾತುಗಳು ಇವರ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದವು. ಪದೇ ಪದೇ ಆ ಪ್ರಭಾವವಲಯದಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದರು. ಅದೊಂದು ಸಂತಸ. 

'ಗುರುನಾಥರ ದರ್ಶನ, ಅನುಗ್ರಹವಾದ ನಂತರ ನನಗೆ ಅನ್ನಿಸಿತು, ನಿಮ್ಮ ಜೀವನದಲ್ಲೇನು ಪರಿವರ್ತನೆ ಆಯಿತು' ಎಂಬ ಪ್ರಶ್ನೆಗೆ ಅವರು ನೀಡಿದ ಉತ್ತರವೇನೆಂದರೆ 'ನನಗೆ ಆಗ ಏನೂ ಎಂತಹ ಪರಿವರ್ತನೆಗಳಾದ ಅನುಭವ ಕೂಡಲೇ ಬಂದಿರಲೇ ಇಲ್ಲ... ಎಂತಹ ಮೌಢ್ಯ ನನ್ನದೆಂಬುದು ಈಗ ನೆನೆದರೆ ನಾಚಿಕೆಯಾಗುತ್ತದೆ. ಹರೆಯದ ಹುರುಪು ನನ್ನ ಎಲ್ಲ ಏಳಿಗೆಗಳು ನನ್ನ ತೋಳ್ಬಲ, ಆಯೋಜನೆ, ನನ್ನ ಪ್ರಯತ್ನದ ಬಲದ ಮೇಲೆ ಆಗುತ್ತಿದೆ ಎಂಬ ಭಾವನೆಯಲ್ಲೇ ನಾನು ಉಳಿದುಬಿಟ್ಟಿದ್ದೆ. ಅಸಾಧ್ಯವಾದುದುಗಳೆಲ್ಲಾ ಸಾಧ್ಯ ಮಾಡಿಸಿದರು ಗುರುನಾಥರು. ಗುರುನಾಥರ ಬಗ್ಗೆ ಅಪಾರ ಗೌರವಗಳಿದ್ದರೂ ಇದೆಲ್ಲಾ ಅವರಿಂದ ಆದದ್ದು, ನಾನು ನಿಮಿತ್ತ ಮಾತ್ರ ಎಂಬುದು ನನಗೆ ಹೊಳೆಯಲೇ ಇಲ್ಲ. 2004 ರಲ್ಲಿ ನಮ್ಮ ಬಿಲ್ಡಿಂಗ್ ಇದ್ದ ಜಾಗದಲ್ಲಿ 10 ಅಂಗಡಿಗಳಿದ್ದವು. ಇದನ್ನೆಲ್ಲಾ ಕೆಡವಿ ಕೋಟಿಗಳ ಅಂದಾಜಿನ ಕಾಂಪ್ಲೆಕ್ಸ್ ಕಟ್ಟಲು ನಮ್ಮ ತಂದೆಯವರನ್ನು ಕೇಳಿದಾಗ 'ಎಸ್' ಅಂದರು. ಯಾಕೆಂದರೆ ಅವರಿಗೆ ಈ ಹಳೆಯ ಅಂಗಡಿಯವರಾರೂ ಬಿಡುವುದಿಲ್ಲವೆಂಬ ಭದ್ರ ನಂಬಿಕೆ ಇತ್ತು. ಆದರೆ ನನ್ನ ಬೆನ್ನ ಹಿಂದೆ ಇದ್ದ ಗುರುನಾಥರು ಅವರನ್ನೆಲ್ಲಾ ಬಿಡುವಂತೆ ಪ್ರೇರೇಪಿಸಿದ್ದರು. ಮುಂದೆ ಅಷ್ಟೊಂದು ಹಣ ಸಾಲ ಬೇಕಾದಾಗ, ಆಮೇಲೆ ಸಾಲ ತೀರಿಸಿಕೊಳ್ಳಲು ಕೆಲ ಭಾಗ ಮಾರಿ ನೆಮ್ಮದಿ ಇಂದು ಬದುಕುವ ಯೋಚನೆ ಮಾಡಿದಾಗ.... ಎಲ್ಲವೂ ಅಸಾಧ್ಯವಾದ ಕೆಲಸಗಳಾಗಿದ್ದರೂ ನನಗೆ ಅರಿವೇ ಇರಲಿಲ್ಲ. 'ಆ ಮೌಢ್ಯದ ದಿನಗಳನ್ನು ನೆನೆದವರ ಮನ ಆ ದಿನಕ್ಕೋಡಿತು. ಸ್ವಲ್ಪ ಹೊತ್ತು ಅವರ ಬಾಯಿಂದ ಮಾತುಗಳು ಹೊರಡಲಿಲ್ಲ. 

ಕೂಡಿಬಂತೆನೆಗೆ ಗುರುಕರುಣೆ 

ಅರ್ಜುನ ಇಂದ್ರ ಕೀಲದಲ್ಲಿ ತಪ ಮಾಡಿ ಶಿವನನ್ನು ಒಲಿಸಿಕೊಂಡು - ಶಿವ, ಶಬರನ ವೇಷದಲ್ಲಿ ಬಂದು ಅರ್ಜುನನೊಂದಿಗೆ ವಾದಕ್ಕಿಳಿದು ಯುದ್ಧ ಮಾಡತೊಡಗುತ್ತಾನೆ. ಒಬ್ಬ ಬೇಡನ ಮೇಲೆ ಪಾರ್ಥನ ಎಲ್ಲ ಅಸ್ತ್ರಗಳೂ ವ್ಯರ್ಥವಾಗಿ ಕೊನೆಗೆ ಆ ಬೇಡನ ಏಟಿನ ಆಘಾತ ತಡೆಯಲಾರದೆ ಕೆಳಗೆ ಬಿದ್ದಾಗ ಇವನು ಸಾಮಾನ್ಯ ಬೇಡನಲ್ಲ - ಶಿವನೇ ಇರಬೇಕೆಂದು ಕೂಡಲೇ ಶಿವ ಪ್ರೀತಿಯಿಂದ ಎತ್ತಿಕೊಂಡು ಹರಸುತ್ತಾನಂತೆ. 

ಇಲ್ಲಿಯೂ ಕುಮಾರ್ ಅವರಿಗೆ ಗುರುನಾಥರ ಶಿಷ್ಯರೊಬ್ಬರು ಮೈಸೂರಿನಲ್ಲಿಯೇ ಇರುವ ವಾಲುಕೇಶ್ವರ ತಪ ಸ್ಥಳಕ್ಕೆ ಹೋಗಿ ಬರಲು ತಿಳಿಸಿ - 'ಗುರುನಾಥರ ಆರಾಧನಾ ಜಾಗವದು' - ಎಂದಾಗ ಇವರು ಅಲ್ಲಿಗೆ ಹೋಗಿ ಗುರುನಾಥರ ಧ್ಯಾನ ಮಾಡತೊಡಗುತ್ತಾರೆ. ಮುಂದಿನದನ್ನು ಕುಮಾರಣ್ಣನವರಿಂದಲೇ ಕೇಳೋಣ. 'ಅವತ್ತು ಕಾರಿನಲ್ಲಿ ತಪ ಸ್ಥಳಕ್ಕೆ ಹೋಗುತ್ತಿದ್ದೆ. ಕಾರಿನಲ್ಲಿ ಒಮ್ಮೆ ರೇರ್ ಮಿರರ್ ನಲ್ಲಿ ನೋಡಿದಾಗ ಹಿಂಬದಿಯಲ್ಲಿ ಗುರುನಾಥರು ಕುಳಿತಿದ್ದು ಕಂಡುಬಂದು ಮೈ ಬೆವರಿ, ಪುಳಕಿತನಾದೆ.. ಸ್ಟೇರಿಂಗ್ ಬಿಟ್ಟು ಹಿಂದೆ ತಿರುಗಿ ನಮಸ್ಕಾರ ಮಾಡುತ್ತಿದ್ದೆ. ಎಷ್ಟು ಹೊತ್ತು ಕಾರು ಅದೇ ಸಾಗಿತ್ತೋ - ' ಮುಂದೆ ನೋಡು ಸ್ಟೇರಿಂಗ್ ಹಿಡಿ' ಎಂದು ಗುರುನಾಥರು ಆಜ್ಞೆ ಮಾಡಿದರು. ಮತ್ತೆ ಮುಂದೆ ತಿರುಗಿ ಸ್ಟೇರಿಂಗ್ ಹಿಡಿದಿದ್ದೆ'. 

ಅಂದಿನಿಂದ ಇಂದಿನವರೆಗೆ ಜ್ಞಾನೋದಯವಾಯಿತು. ಒಬ್ಬ ಸಾಮಾನ್ಯ ಕೋಟಿಗಳ ವ್ಯವಹಾರ ಮಾಡುವುದಾಗಲೀ, ಅಸಾಧ್ಯ ಕೆಲಸಗಳೆಲ್ಲಾ ಸಾಧ್ಯವಾಗಿಸಿದ್ದಾಗಲೀ, ಎಲ್ಲ ಗುರುನಾಥರು ಮಾಡಿಸಿದ್ದು ಎಂದು.  ಭಕ್ತನನ್ನು ಬೆಳೆಸಿ, ಎಲ್ಲ ಕೊಟ್ಟು ನೋಡಿ, ಕೊನೆಗೆ ಸುಜ್ಞಾನವನ್ನು ನೀಡಿ ಹರಸಿದ ಗುರುನಾಥರು ದೇವಾನುದೇವತೆಗಳಿಗಿಂತ ಕರುಣಾಶಾಲಿಗಳಲ್ಲವೇ. 

ಬನ್ನಿ ಗುರುಬಾಂಧವರೇ ನಾಳೆಯೂ ಮತ್ತಾರಾದರೂ ಗುರುಭಕ್ತರ ಸತ್ಸಂಗವನ್ನು ಗುರುನಾಥರು ಕರುಣಿಸದಿರರು... ನಮ್ಮೊಂದಿಗೆ ಇರುತ್ತೀರಲ್ಲಾ?.... 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ. 

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


For more info visit :  http://srivenkatachalaavadhoota.blogspot.in

1 comment:

  1. I would like to thank you whole heartedly for writing these blogs.. For us who were not blessed to even have his highness's darshana, this blog is a boon.. I cant explain in words the way Guru has always looked after me.. I'll be greatful if you can share where exactly is this Valikeshwara near Mysore. I would like to visit that place..

    ReplyDelete