ಒಟ್ಟು ನೋಟಗಳು

Monday, May 1, 2017

ಶ್ರೀ ಸದ್ಗುರುನಾಥ ಲೀಲಾಮೃತ  - 2 

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ನಿತ್ಯ ಸತ್ಸಂಗ  - 53

 

ಅಂದು, ಇಂದು, ಎಂದೆಂದೂ.... 


 

।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।

।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ । ಶೋಕ ಮೋಹ ವಿವರ್ಜಿತಂ ।। 
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।



ಗುರುನಾಥರ ಲೀಲೆಗಳು ನಿರಂತರ, ಕಾಲಾತೀತ, ದೇಶಾತೀತವೆಂಬುದು ಎಲ್ಲ ಭಕ್ತರ ಅನಿಸಿಕೆ. ಹೀಗೆಯೇ ಗುರುನಾಥರ ಲೀಲಾ ವಿನೋದಗಳನ್ನು ಸಂಗ್ರಹಿಸುತ್ತಾ ಸಾಗಿದಾಗ, ಗುರುನಾಥರ ಹೆಸರನ್ನು ಕೇಳುತ್ತಿದ್ದಂತೆಯೇ, ಶಿವಮೊಗ್ಗದ ವಾಣಿ ಎಂಬುವರು ಒಂದು ಸತ್ಯ ಪ್ರಸಂಗವನ್ನು ಹೀಗೆ ಹಂಚಿಕೊಂಡರು. 

'ನಮ್ಮ ಕಸಿನ್ ಬ್ರದರ್ ಒಬ್ಬರು, ಶಿವಕುಮಾರ್ ಎಂಬುವವರು, ಪಿಳ್ಳೇನಹಳ್ಳಿಯ ಶಾಲೆಗೆ ಕುಡಿಯುವ ನೀರಿನ ಬೋರ್ ವೆಲ್ ತೆಗೆಸುತ್ತಿದ್ದರು. ಸರ್ಕಾರ ಇದಕ್ಕೆ ಅನುದಾನ ನೀಡಿತ್ತು. ಮನುಷ್ಯ ಪ್ರಯತ್ನಕ್ಕೆ ಒಂದು ಮಿತಿ ಇದೆ. ಸಾವಿರಾರು ಅಡಿಗಳ ಬೋರ್ ತೆಗೆದರೂ ನೀರು ಮಾತ್ರ ಬರಲಿಲ್ಲ. ಅವಧೂತರ ಭಕ್ತರಾದ ಅವರು ಬಾಣಾವರದಲ್ಲಿರುವ ಗುರುನಾಥರ ಸಮಾಧಿಗೆ ತೆರಳಿದರು. ತಮ್ಮ ಕೆಲಸಕ್ಕೆ ಬಂದಿರುವ ವಿಘ್ನವನ್ನು ಪರಿಹರಿಸಿ ನೀರು ಸಿಗುವಂತೆ ಮಾಡು ಗುರುನಾಥ' ಎಂದು ಭಕ್ತಿಯಿಂದ ಬೇಡಿಕೊಂಡರಂತೆ. ಮಾರನೆಯ ದಿನ ಬಂದು ಗುರುನಾಥರ ಹೆಸರು ಹೇಳಿ ಕೆಲಸ ಪ್ರಾರಂಭಿಸಿ, ಒಂದೆರಡು ಅಡಿ ಆಳ ಕೊರೆಯುವುದರಲ್ಲಿ ಗಂಗೆ ಉದ್ಭವಿಸಿ, ಕೈಗೊಂಡ ಕೆಲಸ ಪರಿಪೂರ್ಣವಾಯಿತು'. 

ಗುರುನಾಥರ ಸಾನ್ನಿಧ್ಯದಲ್ಲಿ ಆಗದಿರುವುದೇನಿದೆ? ನಾವು ಮಾಡುವೆವೆಂದಾಗ ಬಂದ ವಿಘ್ನಗಳೆಲ್ಲ ಗುರುನಾಮ ಸ್ಮರಣೆ, ಗುರುವಿಗೆ ಶರಣಾದ ಕೆಲ ಕ್ಷಣದಲ್ಲಿ ನಿರ್ಮೂಲ. ಬಾಣಾವರದ ಮನೆಯೊಂದರಲ್ಲಿ ಕೃಷ್ಣ ಯೋಗಿಂದ್ರ ಸರಸ್ವತಿಗಳು ಗೋಡೆಯನ್ನು ಗುದ್ದಿ ಗಂಗೆ ತರಿಸಿದ ಕಥೆ ನೀವು ಬಲ್ಲಿರಿ. ಇಲ್ಲಿ ಗುರುನಾಥರನ್ನು ಸ್ಮರಿಸಿದ ಮಾತ್ರಕ್ಕೆ ಪಾತಾಳದಿಂದ ಗಂಗೆ ಹೊರಬಂದಿದ್ದರಲ್ಲಿ ಆಶ್ಚರ್ಯವೇನಿಲ್ಲ. ಎಲ್ಲಿಯೋ ಸಾಗಬೇಕಿದ್ದ ಭದ್ರಾ ನಾಲೆಯನ್ನು ಶಂಕರಲಿಂಗ ಭಗವಾನರು ತಮ್ಮ ಭಕ್ತರ ನೀರಿನ ಬವಣೆ ಹರಿಸಲು ತಮ್ಮ ಆಶ್ರಮದ ಮುಂದೆ ಗಂಗೆ ಹರೀತಾಳೆ ಎಂದು ಭವಿಷ್ಯ ನುಡಿದು, ಅದು ಇವತ್ತು ಸತ್ಯವಾಗಿರುವುದನ್ನು ಕಂಡರೆ ಗುರು ಸಮರ್ಥನೆಂಬ ಪದದ ಸತ್ಯದರ್ಶನವಾಗುತ್ತದೆ. 

ಒಬ್ಬ ಸುಶಿಕ್ಷಿತ ವೈದ್ಯ ದಂಪತಿಗಳು ಇದ್ದಕ್ಕಿದ್ದಂತೆ ಸಖರಾಯಪಟ್ಟಣವನ್ನು ಅರಸಿ ಬಂದರು. ವೈದ್ಯ ವಿಜ್ಞಾನಕ್ಕೆ ಸವಾಲೆಸೆಯುವಂತೆ ಅವರ ಬಂಧುಗಳು ಆಸ್ಪತ್ರೆ ಸೇರಿ ಗುಣಮುಖವಾಗದೇ, ಎಲ್ಲ ಚಿಕಿತ್ಸೆಗಳು ಕೈ ಚೆಲ್ಲಿದಾಗ - ಅದ್ಯಾರೋ, ಆ ಪ್ರಸಿದ್ಧ ವೈದ್ಯ ದಂಪತಿಗಳಿಗೆ ಸಖರಾಯಪಟ್ಟಣದ ಗುರುನಾಥರ ವಿಚಾರ ತಿಳಿಸಿ - ಅವರ ವೇದಿಕೆಗೆ ಭಕ್ತಿಯಿಂದ ಪೂಜಿಸಿ, ನಿಮ್ಮ ಸಮಸ್ಯೆ ನಿವಾರಣೆಯಾಗುವುದೆಂದು ತಿಳಿಸಿದರಂತೆ. 

ಅಂದು ಬಂದ ಆ ಗುರುಭಕ್ತ ದಂಪತಿಗಳು, ಗುರುನಾಥರ ಇರುವನ್ನು ಭಾವಿಸಿ, ಅನನ್ಯವಾಗಿ ಸೇವೆ ಸಲ್ಲಿಸಿ  ಗುರುವೇದಿಕೆಯ ಸುತ್ತ ಶುದ್ಧಮಾಡಿ, ಭಕ್ತಿ ಭಾವದಿಂದ ಪೂಜೆ ನಮನಗಳನ್ನು ಮಾಡಿ, ರೋಗಿಯ ವಸ್ತ್ರ ಒಂದನ್ನು ಅಲ್ಲಿಟ್ಟು ಹೊರಟರಂತೆ. 

ಅವರು ಊರು ತಲುಪುವುದರೊಳಗಾಗಿ ಯಾವ ಚಿಕಿತ್ಸೆಗೂ ಸ್ಪಂದಿಸದಿದ್ದ ರೋಗಿ ಚಿಕಿತ್ಸೆಗೆ ಸ್ಪಂದಿಸಿ, ತದನಂತರ ನಿಧಾನವಾಗಿ ಗುಣಮುಖರಾದ ವಿಚಾರವನ್ನು ಗುರುಸೇವಕರಾದ ಅಣ್ಣಯ್ಯನವರು ಸ್ಮರಿಸುತ್ತಾರೆ. ಭವರೋಗ ವೈದ್ಯನ ಶರಣು ಹೋಗಲು ಅದ್ಯಾವ ಖಾಯಿಲೆ ತಾನೇ ನಿಂತೀತು! 

ಮಾತಿಗೆ ತಪ್ಪುವವನಲ್ಲ ಇವನು 

ಹಾಸನದ ಗಿರಿಜಾಂಬ ಅವರಿಗೆ ಗುರುನಾಥರು ಹೇಳುತಿದ್ದ ಮಾತೆಂದರೆ 'ನಾನು ನಿಮ್ಮನೆಗೆ ಬರ್ತೀನಿ, ಬಂದೇ ಬರ್ತೀನಿ ಕಣಮ್ಮಾ' ಎಂದು. 'ಯಾವಾಗ ಬರ್ತೀರಿ ನಾನು ಕಾಯುತ್ತಿರುತ್ತೀನಿ' ಎಂದು ಇವರು ಅನ್ನುತ್ತಿದ್ದರಂತೆ. ಅದೆಷ್ಟು ಸಾರಿ ಇವರು ದರ್ಶನ ಮಾಡಿದಾಗಲೂ ಗುರುನಾಥರು 'ನಿಮ್ಮ ಮನೆಗೆ ಬರ್ತೀನಿ ಕಣಮ್ಮಾ. ಮಾತಿಗೆ ತಪ್ಪುವವನು ನಾನಲ್ಲ. ಖಂಡಿತಾ ಮನೆಗೆ ಬರ್ತೀನಿ' ಎನ್ನುತ್ತಲೇ ಇದ್ದರು. ಅವರ ಜೀವಿತ ಕಾಲದಲ್ಲಿ ಗುರುನಾಥರು ಹಾಸನದ ಈ ಭಕ್ತರ ಮನೆಗೆ ಬರಲಾಗಲಿಲ್ಲ. ಅಥವಾ ಅವರು ಯಾವ ರೂಪದಲ್ಲಿ ಬಂದು ಇವರ ಸಂಕಷ್ಟಗಳನ್ನೆಲ್ಲಾ ಹರಿಸಿ ಹೋಗುತ್ತಿದ್ದರೋ. ಏಕೆಂದರೆ ಇವರಿಗೆ ಯಾವ ತೊಂದರೆ ಬಂದೆರಗಿದರೂ ಇವರು ಸ್ಮರಿಸುತ್ತಿದ್ದುದು ಗುರುನಾಥರನ್ನೇ. ಸಂಕಟಹರ ಗುರುವಾದ ಗುರುನಾಥರು ತಮ್ಮ ಕೆಲಸವಾದ ಮೇಲೆ, ಒಂದು ಕ್ಷಣ ಅಲ್ಲಿರುತ್ತಿರಲಿಲ್ಲ. ಹಾಗಾಗಿ ಗುರುನಾಥರು ಯಾವ ರೂಪದಲ್ಲಿ ಬಂದು ಸಹಕರಿಸಿದರೆಂಬುದನ್ನು ಅರಿಯುವುದೆಂತು? ಇವರು ಅರಿಯದಾಗಿದ್ದರು. ಮುಂದೆ ಕಾಲ ಬಂದಾಗ ಅರಿವು ಉದಯಿಸಿತು. 

ಗುರುನಾಥರ ಮಹಾನಿರ್ವಾಣವೂ ಆಗಿಹೋಯಿತು. ಕೆಲ ದಿನಗಳ ನಂತರ ಈ ಭಕ್ತರಿಗೆ ಗುರುನಾಥರಿಂದ ದೂರವಾಗಿ ಇರುವಿಕೆ ಅಸಹನೀಯವಾಯಿತು. ಮನದಲ್ಲಿ ನೋವು ಅಧಿಕವಾಯಿತು. ಅಂತಹ ಸಂದರ್ಭಗಳಲ್ಲೆಲ್ಲಾ ಗುರುನಾಥರ ವಾಣಿ 'ಗುರುವೆಂದರೆ ದೇಹವಲ್ಲ - ಅದು ಭಾವ - ಗುರುವಾಕ್ಯ ಪ್ರಮಾಣ. ಅದರಲ್ಲಿ ಭಾವ ದೃಢವಿರಬೇಕು' ಇದರ ಮನಸ್ಸಿಗೆ ಧೈರ್ಯ ತುಂಬುತ್ತಿತ್ತು. 

ಅಂದು ಶ್ರೀಕಾಂತ ಗುರೂಜಿಯವರು ಮೊದಲ ಬಾರಿಗೆ ಮನೆಯ ಮುಂದೆ ಬಂದು ನಿಂತಿದ್ದರು. ಈ ಮನೆ 'ದತ್ತ ನಿವಾಸ' ವೆಂದು ಒಳಬಂದಿದ್ದರು. 'ನಾನೇ ಗುರುನಾಥ, ನಿಮ್ಮ ಮನದ ಚಿಂತೆಗೆ ಇಂದು ಕೊನೆ. ಗುರುನಾಥರಿದೋ ನಿಮ್ಮ ಮನೆಗೆ ಬಂದಿದ್ದಾರೆ' ಎಂದು ಅಂದು ಈ ಭಕ್ತರಿಂದ ಸೇವೆ ಪಡೆದರು, ಆಶೀರ್ವದಿಸಿದರು. ಗುರುವಾಕ್ಯವನ್ನು ನೆನಪಿಸಿ, ದೃಢ ಚಿತ್ತ ನೀಡಿ 'ಗುರು ಎಂದರೆ ದೇಹವಲ್ಲ' ಎನ್ನುವುದನ್ನು ಸಾಬೀತುಪಡಿಸಿದರು. 

ಪ್ರಿಯ ಓದುಗ ಮಿತ್ರರೇ, ಗುರುವಾಕ್ಯ ಸುಳ್ಳಾಗದು. ಮಾತಿನಂತೆ ಗುರುನಾಥರು ಹಾಸನದ ಆ ಭಕ್ತೆಯ ಮನೆಗೆ ಬಂದಿದ್ದು ವಿಚಿತ್ರ ಆದರೂ ಸತ್ಯ. 

ಇಂತಹ ನಿತ್ಯ ಸತ್ಯ ಗುರುಲೀಲೆಗಾಗಿ ನಾಳೆಯೂ ನಮ್ಮೊಂದಿಗಿರುವಿರಲ್ಲವಾ ? ಹೀಗೆ ಗುರು ಅಂದು, ಇಂದು, ಎಂದೆಂದೂ ಇರುವ ನಿತ್ಯ ಚೈತನ್ಯರಲ್ಲವೇ? ! 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ. 

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


For more info visit :  http://srivenkatachalaavadhoota.blogspot.in

No comments:

Post a Comment