ಒಟ್ಟು ನೋಟಗಳು

Sunday, December 27, 2020

ಸಾಧನೆಯ ಹಾದಿಯೊಳು - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಸಾಧನೆಯ ಹಾದಿಯೊಳು ಭಾದಕಗಳ ಕಾಟವ  ದೂರ ಮಾಡೋ ನನ್ನ ದೊರೆಯೇ
ಮೂಡುವ ಭಾವನೆಯ ಅಲೆಗಳ ಶಾಂತಗೊಳಿಸಿ ಸ್ಥಿರ ಮನ ನೀಡೋ ನನ್ನ ಗುರುವೇ|

ಆಸೆಗಳ ಅಲೆಗಳ ಮೇಲೆ ತೇಲುತ ನಿನ್ನ ನೆನೆವುದೇ ಮರೆತನಯ್ಯ ಗುರುವೇ
ಗೊಂದಲದ ಗೂಡಾಗಿರುವ ಮನಕೆ ಸತ್ಯದ ಅರಿವು ನೀಡಿ ಹರಸೋ ಪ್ರಭುವೇ|

ಎಲ್ಲರಂತಲ್ಲ ಎನ್ನ ಮನವು ಮರ್ಕಟದ ಮತಿಯಂತೆ ಕುಣಿವುದು ನೋಡೋ ಪ್ರಭುವೇ
ಚಂಚಲತೆಯ  ಹೊಡೆತಕೆ ತತ್ತರಿಸಿ ಮನವು ಬರಿದಾಗಿ ಬೆದರಿತೋ ಗುರುವೇ|

ಕಾಮದಾ ಕಾಟಕೆ ಮನವು ಸೋತು ಸುಣ್ಣವಾಗಿ  ಮರುಗಿ ಮುದುಡಿತೋ ಮನವೇ
ನಾನೆಂಬ ಭಾವವು ಮನವ ಆವರಿಸಿ ದಾರಿ ತಪ್ಪಿಸಿ ಪಾಪದ ಹಾದಿ  ತುಳಿಯಿತೋ ಗುರುವೇ|

ಪರರ ಸೊತ್ತು ಅನ್ಯರಾ ವಿಷಯಗಳಿಗೆ ಮನವು ಹಂಬಲಿಸಿ ಬದುಕು ಬರಡಾಯಿತೋ
ಉಳಿದ ದಿನಗಳಾ ಬದುಕು ವ್ಯರ್ಥಮಾಡದೆ  ನಿನ್ನ ಸೇವಿಸುವ ಮನ ನೀಡೋ ಪ್ರಭುವೇ|

ಎಲ್ಲರೊಳು ಎನ್ನ ಸೇರಿಸಿ ನಿನ್ನವನೆಂದು ಪರಿಗಣಿಸಿ ಎನ್ನ ಕರುಣಿಸೋ ಗುರುವೇ
ನೀ ಎನ್ನ ಹರಸಲು ಇನ್ನೆಲ್ಲಿಯಾ ಭಯ ಎನಗೆ ಕರುನಾಳು ಎನ್ನ ಸಖರಾಯ ಪ್ರಭುವೇ|

Thursday, December 17, 2020

ನನ್ನದೆನ್ನಲು ಏನುಂಟೋ ಎಲ್ಲಾ ನೀಡುವವ - ರಚನೆ: ಶ್ರೀ. ಆನಂದ ರಾಮ್, ಶೃಂಗೇರಿ

ನನ್ನದೆನ್ನಲು ಏನುಂಟೋ ಎಲ್ಲಾ ನೀಡುವವ ಗುರುವೇ ನೀನೇ ಭಗವಂತನಂತೋ
ನಿನ್ನ ಮರೆತರೆ ನಾನೆಂತೋ ಬದುಕು ನಡೆಸುವ ಮಾತು ಇನ್ನೆಂತೋ|

ನಾನ್ಯಾರೋ ಗುರುವೇ ಸರಿ ತಪ್ಪು ಎನಲು ಎನ್ನ ದಾರಿಯೇ ಸರಿಯಿಲ್ಲವಂತೋ
ನಾನಾಡಿದ ಮಾತದು ಅಲಿಪರ ಮನಕೆ ನೋವು ನೀಡಿರೆ  ನಿನ್ನ ಮುಂದೆ ಸಲ್ಲುವುದೆಂತೋ|

ಮೆಲು ದನಿಯಲಿ ಪರರ ಜರಿದು ಮಡಿಯುಟ್ಟು ನಿನ್ನ ಭಜಿಸೆ  ಫಲವೇನುಂಟೋ
ಮನದೊಳು ಮಲಿನ ತುಂಬಿ ತುಟಿಯೊಳು ನಾಮಜಪಿಸಿರೆ ಸುಖವೇನುಂಟೋ|

ಅನ್ಯರ ಬದುಕ ಹಸನಾಗಿಸದೆ ದುರುಳ ಮಾತೊಳು ಹಂಗಿಸೆ ಏನು ಸುಖವುಂಟೋ
ನಾ ಮಾಡಿದೆನೆಂಬ ಬಕುತಿಯೊಳು ನಿನ್ನನೇ ಮರೆತಿರಲು ನಿನ್ನ ಪಡೆಯುವುದೆಂತೋ|

ಸಾಕು ಮಾಡೆನ್ನ ಬಕುತಿಯ ನಾಟಕವ ನೀ ಒಲಿಯದೆ ಬೇರೆ ದಾರಿ ಎಲ್ಲುಂಟೋ
ಸಖರಾಯಪುರವಾಸಿ ಎಲ್ಲರ ಮಹಾದೇವ ನೀ ಹರಸದೇ ಬಾಳು ಬೆಳಗುವುದೆಂತೋ|

Saturday, December 5, 2020

ಅವಧೂತನೆಂದರೆ ಅವ ಪರಮಾತ್ಮನು - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಅವಧೂತನೆಂದರೆ ಅವ ಪರಮಾತ್ಮನು ಸಖರಾಯಧೀಶನು ಭಕ್ತ ಜನ ಪೋಷಿತನು
ನಿತ್ಯ ನಿರಂತರ ಭಜಿಪರ ಕಾಯ್ವನು ಕರುಣಾಪೂರಿತ ನಮ್ಮ ಗುರುನಾಥನು|

ತೋರುವನು ಜಗದಾಟವ ಮೈ ಮರೆಸಿ ಚಿತ್ತವ ಬ್ರಮೆಯೊಳಿರಿಸಿ
ಮನವ ಕುಣಿಸಿ ಬಣ್ಣದ ಬದುಕ ನಿಜವೆನಿಸಿ ಜೀವವ ಭಾವದೊಳಿರಿಸಿ|

ಕಾಯೋ ಎಂದೆನೆಲು ಕರುಣೆಯ ತೋರುತ  ಮನದ ಸೋಲನು ಎತ್ತಿ ತೋರುತ
ಮುನ್ನೆಡೆವ ಹಾದಿಯೊಳು ಆಸೆ ಆಮಿಷ ತಂದಿರಿಸಿ ಗಟ್ಟಿ ಮನವ ಬಯಸುತ|

ಮನದೊಳು ಜ್ಯೋತಿ ಬೆಳಗಿಸೆ ನಿತ್ಯ ಬದುಕಿನ ಕತ್ತಲ ಕಳೆವನು ಅವಧೂತ
ಸತ್ಯವಾಗಿಹ ಜೀವಕೆ  ಜೊತೆಯಿರೆ  ಮುಕ್ತಿಪಥದ ಸಾರಥಿಯಾದನೋ ಭಗವಂತ I

ತನ್ನೊಳಗಿಹ ಆರು ಅರಿಗಳ ಭಯದಿಂದ ದೂರವಿರಿಸೆಂದು ಕೂಗಿ ಬೇಡುತಾ
ಧರೆಯೊಳು ಸಖರಾಯಪುರವೆಂಬ ವೈಕುಂಠದ ದೇವ ಗುರನಾಥನ ಬೇಡುತಾ|

Monday, November 23, 2020

ಮನದಿ ಭಯವೇತಕೋ - ರಚನೆ: ಶ್ರೀ. ಆನಂದ ರಾಮ್, ಶೃಂಗೇರಿ

ಮನದಿ ಭಯವೇತಕೋ  ನಿನ್ನ ಇರುವಿನ ಅರಿವು ಮೂಡಿಸೇ ದೂರಾಗುವುದು ಗುರುವೇ
ಸುಪ್ತ ಮನದೊಳು ಗುಪ್ತವಾಗಿಹ ಅರಿಗಳ ಕಾಟವೋ ಅದು ಪ್ರಭುವೇ|

ಬೇಡಿದೊಡೆ ನೀ ಸಲಹುವೆಂದೆನುತ ನಾ ಮಾಡಿದ ಕಾರ್ಯಗಳು ಮನ್ನವಾಗುವುದೇ
ಮನವ ಮನ ಬಂದಂತೆ ಓಡಲು ಬಿಡದೆ ನಿನ್ನ ಅಂಕೆಯಲಿ ನಿಲಿಸೋ  ಗುರುವೇ|

ನಡೆವುದಾ ನಡೆಸಿಹನು ಕಾಲನು ನಿನ್ನ ಅಭಯ ಸದಾ ಇದೆಯೆಂಬ ಭಾವ ನೀಡೋ 
ನನ್ನೊಡೆಯನಾ ಸನಿಹದಿ ಸುಳಿಯದಿರಲಿ ಹುಂಬತನದ ಭಾವವೋ|

ಮರೆತು ಮತ್ತಿನಲಿ ನಡೆದೊಡೆ ಬರಲಿ ಮನದೊಳು ಭಯದ ಭಾವವು
ಎನ್ನ ಇತಿಮಿತಿಯೊಳು ಮೈಮನಸ ಬಿಗಿದಿರಿಸಿ ಪೊರೆಯೋ ಪ್ರಭುವೇ|

ಆಡಿ ನಡೆಯಲಾಗದ ಪದವ ನುಡಿಸಬೇಡ ಅಲ್ಪ ಮತಿಯವನು ನಾನಲ್ಲವೇ
ನಿನ್ನ ಪದತಳದ ಸೇವಕನ ಕಾಯುವವ ನೀನೆಂದು ನಂಬಿ ಬಂದೆನೋ ಸಖರಯಾಧೀಶನೇ|

Thursday, November 19, 2020

ತೃಣ ಮಾತ್ರದ ಯೋಗ್ಯತೆಯಿರದೆ ನಿನ್ನ ಸ್ತುತಿಸಿಹೆನು - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ತೃಣ ಮಾತ್ರದ ಯೋಗ್ಯತೆಯಿರದೆ ನಿನ್ನ ಸ್ತುತಿಸಿಹೆನು ಪಾಮರನು ನಾನು
ಪಾಪದ ಹೊರೆ ಹೊತ್ತು ನಡೆಯಲಾರದೆ ತಲೆ ಎತ್ತದೆ ಬೇಡುತಿಹೆನು ನಾನು|

ಅಂತರಾಳದ ಅಳದಲಿ ಬರೀ ಸುಳ್ಳುಕಪಟದ ಬಕುತಿಯ ಅಲೆಗಳು
ತೋರಿಕೆಯ  ನಿತ್ಯ ಬದುಕಿನಲಿ ಆಡಂಬರದ ಹುಸಿ ತಂತ್ರಮಂತ್ರಗಳು|

ಅಂಜಿಕೆಯ ಮನಹೊತ್ತು ತನುವ ಬಾಗಿಸಿ ಬೇಡುವಾಪರಿ  ಟೊಳ್ಳು ಭಾವಗಳು
ಮನದ ತುಂಬಾ ತುಂಬಿಹಾ ಮೆಟ್ಟಿ ನಿಲ್ಲದಾ ಕಾಮನೆಗಳ ಅಲೆಗಳು|

ನಾನು ನಾನೆಂಬ ಭಾವವ ಮನದಿಂದ ಕಳಚದೆ ಮಾಡುವಾ ಸೇವೆಗಳು
ಅನ್ಯರಿಗಿಂತ ಮಿಗಿಲೆಂಬ ಭಾವದಿ ಸಲ್ಲಿಪ ಧಾನ ಧರ್ಮದ ಮುಖವಾಡಗಳು|

ಯಾರಿಗೂ ತೋರಿಪದೇ ನಿನ್ನ ಸೇವೆಯೊಳು ಮನ ನಿಲ್ಲಿಸೆಂಬ ಕೋರಿಕೆಯೊಳು
ಎಲ್ಲಾ ಬಲ್ಲ ಭಗವಂತನು ಸಖರಾಯಧೀಶನು ಎನ್ನ ಮನ್ನಿಸುವನೆಂಬ  ಬಯಕೆಯೊಳು|

ನಡೆ ನಡೆಯಲೂ ಅವನ ಇರುವಿನ - ರಚನೆ: ಶ್ರೀ. ಆನಂದ ರಾಮ್, ಶೃಂಗೇರಿ

ನಡೆ ನಡೆಯಲೂ ಅವನ ಇರುವಿನ ಅರಿವಾದಾಗ ಬದುಕಿನ ನಡೆ ಸುಲಭವೋ
ಮನದೊಳು ಅವನ ಮೂರುತಿ ನೆಲೆ ನಿಂತರೆ ದರುಶನ ಸುಲಭವೋ|

ಅವನಾಡುವ ಪ್ರತೀ ಪದವ ಅರಿತರೆ ಬದುಕಿನ ಪಾಠ ಬಲು ಹಗುರವೋ
ಮಾತು ಮನನ ಮಾಡಿ ನಡೆದು ತೋರಿದರೆ ಅವನ ಕರುಣೆ ನಿರಂತರವೋ|

ಅವನ ಆಸ್ಥಾನದಿ ಯಾರೂ ಮೇಲು ಕೀಳೆಂಬ ಭಾವಕೆ ಸ್ಥಳವಿಲ್ಲವೋ
ಸಭೆಯೊಳು ನುಡಿವ ಮಾತದು ಎಲ್ಲರ ಬದುಕಿಗೆ ಸೇರುವಂತಿಹುದೋ|

ಮುಚ್ಚು ಮರೆಎಂಬ ಪದಕಿಲ್ಲಿ ಸ್ಥಳವಿಲ್ಲವೋ ಅದು ಸರ್ವ ವಿದಿತವೋ
ಒಳಗಿಹ ಭಾವಗಳ ಬಡಿದೆಬ್ಬಿಸಿ ತಪ್ಪಿನರಿವ ನಯವಾಗಿ ತಿಳಿಸಿಹದೋ|

ಪ್ರಿಯ ಬಕುತನಿಗರಿವಿಲ್ಲದೆ ಬಂದು ಒದಗುವ ಗುರು ಕಾರುಣ್ಯವೋ
ನೋವ ನೀಗಿ ಬಲವ ನೀಡಿ ಸಂತೈಸುವ ಈ ಗುರುವಿನ ಪರಿ ಅತೀ ದುರ್ಲಭವೋ|

ಓಡುವ ಮನಕೆ ಕಡಿವಾಣ ಹಾಕಿ ಸಾಧನೆಯ ದಾರಿ ತೋರೋ ನನ್ನ ಗುರುವೇ
ಇನ್ನು ತಡಮಾಡದೆ ಎನ್ನ ಕುಕರ್ಮಗಳ ಗಣನೆ ಮಾಡದೆ ಹರಸೋ ಸಖರಾಯಪ್ರಭುವೇ|

Wednesday, November 18, 2020

ಶ್ರೀ ಸದ್ಗುರು ಮಹಿಮೆ ಗ್ರಂಥ ದೊರೆಯುವ ಸ್ಥಳ

ಆತ್ಮೀಯ ಗುರು ಬಂಧುಗಳೆ, ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದ ಸುಪ್ರಸಿದ್ಧ ಅವಧೂತರಾದ ಶ್ರೀ. ವೆಂಕಟಾಚಲ ಅವಧೂತರ ದಿವ್ಯ ಮಹಿಮೆಗಳನ್ನು ಒಳಗೊಂಡ  "ಸದ್ಗುರು ಮಹಿಮೆ" ಉದ್ಗ್ರಂಥವು ಈಗ ಬೆಂಗಳೂರಿನ ಚಾಮರಾಜಪೇಟೆಯ ವೇದಾಂತ ಬುಕ್ ಹೌಸ್ ನಲ್ಲಿ ಲಭ್ಯವಿದೆ. ಪುಸ್ತಕದ ಬೆಲೆಯನ್ನು 300 ರೂಪಾಯಿ ಎಂದು ನಿಗದಿ ಮಾಡಲಾಗಿದೆ. ಆಸಕ್ತ ಗುರು ಬಂಧುಗಳು ಗ್ರಂಥವನ್ನು ವೇದಾಂತ ಬುಕ್ ಹೌಸ್ ನಿಂದ  ಖರೀದಿಸಬಹುದು.

ಸೇವೆಯೊಳು ಮನ ನಿಲ್ಲಿಸಿ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಸೇವೆಯೊಳು ಮನ ನಿಲ್ಲಿಸಿ ನಿನ್ನ ನಾಮವನೇ ಉಸಿರಾಗಿಸಿ ಎನ್ನ ಪೊರೆಯೋ ಪ್ರಭುವೇ
ಜಗದೊಳು ತುಂಬಿಹಾ ವಿಷಯ ವಾಸನೆಗಳ ಮನ ಬಯಸದಿರಲಿ ನನ್ನ  ಗುರುವೇ|

ಇಂದು ಜನಿಸಿದ ಹಸುಗೂಸಿನ ಮನದಂತಿರಲಿ ಎನ್ನ ಮನವು  ಸದಾ ಕಾಲವು
ನೀನೇ ತಿದ್ದಿತೀಡಿ ಮುನ್ನಡೆಸು ಮಾತೆಯಂತೆ ಈ ನನ್ನ  ಬದುಕು  ನಾಳೆಯು|

ಸುಮ್ಮನೆ ಕಾಲ ಕಳೆಯದೆ ಲೌಕಿಕದ ಬಲೆಯೊಳು ಸಿಲುಕದೆ ಈ ನನ್ನ ಮನವು
ನನ್ನೊಡೆಯನ ಅನುಗಾಲವು ಬಜಿಸುತ ಧರೆಗೆ ಭಾರವಾಗದೆ ಇರಲಿ ಈ ಜೀವವು|

ಕರ್ಮದ ಫಲವು ಕಣ್ಣ ಮುಂದೆ ನಿಂತಿರಲು ನೀನಿಲ್ಲದೆ ಬದುಕು ಅಂತ್ಯವು
ಮಿಥ್ಯವನು ಸತ್ಯವೆನುತ ಅನಿತ್ಯದೆಡೆ ಬದುಕುಸಾಗಿಸೆ ಎಚ್ಚರಿಸಿದನು ಗುರುವು|

ಸಾಧಿಸಲು ಮನವ ಹದಗೊಳಿಸಿ ಮಧುರ ಭಾವಗಳ ನಿರಂತರ ಸ್ಫುರಿಸೋ
ಸಖರಾಯಧೀಶನೇ ಒಮ್ಮೆ ಕರುಣದಿ ಮನತುಂಬಿ ಪಾಮರನ ಹರಸೋ|

Tuesday, November 17, 2020

ವರವ ನೀಡು ವರದಾತ - ರಚನೆ :ಶ್ರೀಮತಿ. ಶೈಲಜಾ ಕುಮಾರ್, ಮೈಸೂರು

ವರವ ನೀಡು ವರದಾತ
ಅಭಯ ನೀಡು ಅಭಯಧಾತ 
ಬೇಡುತಿಹೆ ನಿನ್ನ ಅವಧೂತ ||

ನಿರ್ಮಲತೆಯು ತುಂಬುವಂತೆ
ಶಾಂತಮನವು ಕದಡದಂತೆ |
ದ್ವಂದ್ವಗಳು ಕಾಡದಂತೆ
ಭಕ್ತಿಭಾವ ಮೂಡುವಂತೆ || 1 ||

ಚಂಚಲತೆಯು  ಹೋಗುವಂತೆ
ದೃಢತೆಯು ಬರುವಂತೆ‌ |
ದಿವ್ಯತೆಯು ಬೆಳಗುವಂತೆ
ಮೌಢ್ಯಭಾವ ತೊಲಗುವಂತೆ || 2 ||

ನ್ಯಾಯಧರ್ಮ ಹಿಡಿಯುವಂತೆ
ದಯೆಯ ಮರ್ಮ ತಿಳಿಯುವಂತೆ |
ಸಕಲಜೀವಿಗಳಲು ನಿನ್ನ ಕಾಣುವಂತೆ
ಸಹನೆಯ ಸಿರಿಯ ಅರಿಯುವಂತೆ || 3 ||

|| ಸರ್ವದಾ ಸದ್ಗುರುನಾಥೋ ವಿಜಯತೇ ||
17-11-2020

Sunday, November 15, 2020

ದೀಪದ ಹಬ್ಬದ ಈ ಶುಭ ದಿನದಿ - ರಚನೆ: ಶ್ರೀ. ಆನಂದ ರಾಮ್, ಶೃಂಗೇರಿ

ದೀಪದ ಹಬ್ಬದ ಈ ಶುಭ ದಿನದಿ ದೀಪವಾಗಿ ದಾರಿ. ತೋರೋ ಗುರುವೇ
ತಮವನೆಲ್ಲ ಸರಿಸಿ ಮನದೊಳು ಜ್ಞಾನನೀಡುವ ಬೆಳಕಾಗಿ ಬಾರೋ ಗುರುವೇ|

ಇಷ್ಟು ದಿನ ಕತ್ತಲೆಯ ಕೂಪದೊಳು ಮಿಂದೆದ್ದು ಮಂದ ಮತಿಗಳಾದೆವೋ
ಇನ್ನಾದರೂ ಮತಿಯೊಳು ಬೆಳಕ ತುಂಬಿ ನೀ ನಡೆದ ಹಾದಿಯೊಳು ನಡೆಸೋ ದೊರೆಯೇ|

ಬೆಳಕಿನ ಚಿತ್ತಾರವ ಬದುಕಲಿ ಮೂಡಿಸಿ ಮನವ ಅರಳಿಸಿ ಹರಸೋ ಪ್ರಭುವೇ
ಮದ ಮತ್ಸರವೆಂಬ ಧೂಮವ  ತೊಳೆದು ಸಾತ್ವಿಕತೆಯ ತುಂಬೋ  ಗುರುವೇ|

ಲೋಭ ಮೋಹಗಳ ಒಡನಾಟ ನೀಡದೆ ಮನವ ಶುದ್ಧಗೊಳಿಸೋ ಗುರುವೇ
ಕಾಮ ಪ್ರೇಮದೊಳು ಮನ ತೋಯದೆ ನಿಜ ಭಕುತಿ ಪ್ರೇಮ ನೀಡೋ ಪ್ರಭುವೇ|

ಆರು ಅರಿಗಳ ಜಯಿಸಿ ಸದಾ ಮನವ ನಿನ್ನಲಿರಿಸಿ ಎನ್ನ ಕಾಯೋ ಸದ್ಗುರುವೇ
ಸಾಕ್ಷರಾಯಧೀಶನೇ ನಿನ್ನ ಪದಕಮಲದ ಸನಿಹ ಉರಿವ ದೀಪದ ಬತ್ತಿ ನಾನಾಗುವೇ|

Thursday, November 12, 2020

ಬೆಚ್ಚಿ ಬಿದ್ದೆನೋ ಬೆವೆತು ಹೋದೆನೋ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಬೆಚ್ಚಿ ಬಿದ್ದೆನೋ  ಬೆವೆತು ಹೋದೆನೋ ನಿನ್ನ ನಾಮ ಮರೆತು ಮೂಡನಾದೆನೋ
ಇನ್ನು ತಾಳಲಾರೆನೋ ಗುರುವೇ  ಕಾಯಲಾರೆನೋ ನಿನ್ನ ದರುಷನಕೆ ಬೇಡಿ ಬಂದೆನೋ|

ಭಕುತಿ ಗೊತ್ತಿಲ್ಲ ನೀತಿ ನಿಯಮದ ಅರಿವಿಲ್ಲದವ  ನಿನ್ನ ಬೇಡುತಿಹೆನೋ
ಕೈ ಜೋಡಿಸದೆ ತನುವು ಬಾಗಿಸದೆ  ನಿನ್ನ ಶಕುತಿಯ ಅರಿವಿಲ್ಲದೇ ಕೇಳುತಿಹೆನೋ|

ನಿನ್ನ ನಾಮವ ಸೇವಿಸದೇ ನಿನ್ನ ಪಾದಪದುಮ  ಪಿಡಿಯದೆ ಸಲಹು ಎಂದೆನೋ
ಮನದೊಳು ನಿನ್ನ ಮೂರುತಿ ನಿಲಿಸದೆ ಹೃದಯದಿ ನಿನ್ನ ನಾಮವಿಲ್ಲದೆ ಹರಸು ಎಂದೆನೋ|

ಲೌಕಿಕ ಬದುಕಿನ ವಾಸನೆಗಳ ಜೊತೆ ಕಾಲ ಕಳೆದು ಕಾಲಹರಣ ಮಾಡಿ ಮೂಡನಾದೆನೋ
ಅಲ್ಪ ಮತಿಯಹೊತ್ತು ಅಲ್ಪ ಸಂಗಗಳಿಸಿ ಬದುಕ ಬರಡು ಮಾಡಿಕೊಂಡೆನೋ|

ಲೋಭಿಯಂತೆ ಆಸೆ ಹೊತ್ತು ನಿತ್ಯ ಬದುಕಿನಾ ನರಕದಲ್ಲಿ  ಎಡವಿ ಬಿದ್ದೆನೋ
ಅಲ್ಪ ಸುಖದ ಬೆನ್ನಹತ್ತಿ ಮುಸುಕು ಕವಿದ ಬಾಳಿನಲ್ಲಿ ಕಳೆದು ಹೋದೆನೋ|

ನೀನೇ ಗುರುವು ನೀನೇ ಸರ್ವವೂ ಎಂದು ನುಡಿಯಲು ನಾನು ಅರ್ಹನಲ್ಲವೋ
ಸಖರಾಯಪುರದ ಮಹಾದೇವನೇ ಬೇಡದಲೇ ಎಲ್ಲವನೂ ಅರಿಯುವನೋ|

Tuesday, November 3, 2020

ಬರೀ ಆಸೆಗಳ ಈಡೇರಿಕೆಗೆ ಬೇಡುವುದೆಂತೋ - ರಚನೆ: ಶ್ರೀ. ಆನಂದ ರಾಮ್, ಶೃಂಗೇರಿ

ಬರೀ ಆಸೆಗಳ ಈಡೇರಿಕೆಗೆ ಬೇಡುವುದೆಂತೋ ದಣಿವಾಗಿದೆ ಗುರುವೇ 
ಮೂಡನು ನಾನು ಎನ್ನ ಮತಿಯ ಬೆಳಗಿ ನಿತ್ಯ ಸತ್ಯವ ತೋರೋ ಪ್ರಭುವೇ|

ಎನ್ನ ಬದುಕಿನ ಸುತ್ತಲೂ ಆಮಿಷಗಳಿರಿಸಿ ಮನವ ದುರ್ಭಲ ಮಾಡಬೇಡವೋ
ಕಷ್ಟ ಕೋಟಲೆಗಳ ನಡುವೆ ನಿಲ್ಲಿಸಿ ಎನ್ನ ದೂರ ಮಾಡಬೇಡವೋ ದೊರೆಯೇ|

ಬಣ್ಣದ ಚಿತ್ತಾರದ ನಡುವೆ ನಿಂತ ಮಾತು ಬಾರದ ಮನುಜನಾದೆನೋ
ಎತ್ತ ನೋಡಿದರೆತ್ತ  ಚಿತ್ತ ಕೆಡಿಸುವ ವಿಷಯ ವಾಸನೆಗಳ ದಾಸನದೆನೋ|

ಮತ್ತು ಬಂದಂತೆ ಬಕುತಿಯ ನಾಟಕವಾಡಿ ನಿನ್ನ ಅಂಗಳದಿ ಆಡಿಹೆನೋ
ಸುತ್ತಮುತ್ತಲ ನೋಟ ಎನ್ನ ಕಡೆಗಿರಲೆಂದು ಕಣ್ಮುಚ್ಚಿ ಕುಳಿತು ನಾಟಕವಾಡಿಹೆನೋ|

ಸಖರಾಯಧೀಶನೆ ನೀನು ಮನದೊಳಗಿಹ ಭಾವ ಬದಲಿಸಿ ಹರಸುವೆಯೇನೋ
ಉಸಿರುಗಟ್ಟಿಸುವ ಮನದ ಗೊಂದಲವ ದೂರಮಾಡಿ ಕಾಪಡೋ ಎನ್ನನು|

Thursday, October 29, 2020

ಎಲ್ಲಿ ಎಡವಿದೆನೋ ಅರಿಯೆ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಎಲ್ಲಿ ಎಡವಿದೆನೋ ಅರಿಯೆ ಬೆನ್ ತಟ್ಟಿ ಎಬ್ಬಿಸಿ  ಗುರುವು ಎಚ್ಚರಿಸಿದನೋ
ಹುಂಬತನವ ಬಿಡೆನುತ ಕಷ್ಟದಾ ಹಾದಿಯಾದರು ಆಸೆ ಪಡದಿರದೆಂದನೋ|

ಅಂತರಂಗದಲಿ ಹುದುಗಿಹ ಆಸೆಗಳಾ ಗೋಪುರವ ಬುಡಮೇಲು ಮಾಡಿದನೋ
ಎಟುಕುವ ಬದುಕು ನಡೆಸಿ ಗುಟುಕಾದರು ಬೇಸರಿಸದೆ ಮುಂದಡಿ ಇಡೆಂದನೋ|

ತುಂಬಿದಾ ಸಭೆಯೊಳು ಮಾನ ಉಳಿಸಿ ನಿತ್ಯ ಸತ್ಯದರಿವು ನೀಡುವನೋ
ಅನ್ಯರಾ ಬದುಕಿನ ವಿಷಯಾಸಕ್ತಿಗೆ ಮೂಗು ತೂರಿಸದೆ ಸುಮ್ಮನಿರೆಂದನೋ|

ಮನದಂಗಳದಿ ಮೂಡುವ ಕಾಮನೆಗಳಾಟವ ಹತ್ತಿಕ್ಕಿ ಬಕುತಿಯಲಿ ಬೇಡೆಂದನೋ
ಬದುಕು ನಡೆವ ಹಾದಿಯೊಳು ಬರುವ ಬವಣೆಗಳ ಬದಿಗಿಟ್ಟು ಕಾಯ್ವನೆಂದನೋ|

ಹಂಬಲಿಸುವ ನಿಜ ಬಕುತನ ಮನದಾಳದ ಭಕುತಿಯ ಅರಿತು ಹರಸುವನೋ
ಹುಂಬತನದಿ ಮೆರೆವ ಅಲ್ಪಮತಿಯ ಆಡಂಬರದ ಆಟಕೆ ತಾ ಒಲಿಯನೋ|

ಇನ್ನೆಗೆ  ಬಣ್ಣಿಸಲಿ ಸಖರಾಯ ಪುರದ ನನ್ನೊಡೆಯನಾ ಮನದಣಿಯ ಭಜಿಸುವೆನೋ
ಸಾಲಿನಲಿ ತುದಿಯ ಬಕುತನು ನಾನು ನಿನ್ನ ನೋಟಕೆ ಹಂಬಲಿಸಿ ಕಾಯುತಿಹೆನೋ|

ಗುರುವೇ ಬದುಕು ಜಗದಲಿ - ರಚನೆ :ಶ್ರೀಮತಿ. ಶೈಲಜಾ ಕುಮಾರ್, ಮೈಸೂರು

ಗುರುವೆಂಬ ಬೆಳಕು ಜಗದಲಿ
ಜೀವರಾಶಿಯ ಬೆಸೆದಿಹ ಜ್ಯೋತಿಯಲಿ |
ಆಸರೆಯಾಗಿಹುದು ಇಹದಲಿ
ದಾರಿ ತೋರುವುದು ಪರದಲಿ ||

ಜ್ಞಾನವೆಂಬ ಮಣ್ಣನು ತಂದು
ಸತ್ಯವೆಂಬ ಕುಲುಮೆಯಲಿ ಬೆಂದು |
ಪ್ರಜ್ಞಾನವೆಂಬ ಹಣತೆಯ ಮಾಡಿ
ಶುದ್ಧತೆಯ ತೈಲವನೆ ಸುರಿದು || 1 ||

ಭಕ್ತಿಯೆಂಬ ಹತ್ತಿಯ ಹೊಸೆದು
ಕಾಂತಿಯೆಂಬ ಎಳೆಯನು ಬೆಸೆದು |
ಅದ್ವೈತತತ್ತ್ವದಲಿ ಬೆಳೆದು
ಅರಿವೆಂಬ ಜ್ಯೋತಿಯು ಹೊಳೆದು || 2 ||

ಬದುಕ ಗಮ್ಯವು ತೋರಲಿ  
ದ್ವಂದ್ವದ ಭಾವವು ಕಳೆಯಲಿ !
ಆಶೆಯ ತಮವು ಕರಗಲಿ 
ಮುಕ್ತಿಯ ದೀಪ್ತಿಯು ಬೆಳಗಲಿ || 3 ||

||ಸರ್ವದಾ ಸದ್ಗುರುನಾಥೋ ವಿಜಯತೇ ||
29-10-2020

Sunday, October 18, 2020

ಮನವು ಬಯಸಿದೆ ನಿತ್ಯ ಸುಖವು - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಮನವು ಬಯಸಿದೆ ನಿತ್ಯ ಸುಖವು ನಿನ್ನ ಭಜಿಸದೆ ಅದೆಲ್ಲಿ ದೊರೆವುದು ಹೇಳು ಗುರುವೇ
ಮಿಥ್ಯಎಂಬ ಬ್ರಮೆಯೊಳು ಮನವು ಮಿಂದು ಲೌಕಿಕದ  ಕೂಪದೊಳು ನಿಂತೆನಲ್ಲವೇ|

ನೋವು ಬೇಡ ಹಸಿವು ಬೇಡ ಮಲಿನ ಮನವು ಸೌಖ್ಯ ಬಯಸಿದೆ
ಒಮ್ಮೆ ನಿನ್ನ ಸಂಗ ಬಯಸಿ ಬದುಕು ನಡೆವ ಹಾದಿ ದಿಕ್ಕ ಬದಲಿಸಲಾಗದೇ|

ಏನೋ ಬಯಸಿ ವೇಷಧರಿಸಿ  ಮನದ ತುಂಬ ಆಸೆ ಇರಿಸಿ ನಿನ್ನ ಕಾಣ ಬಂದೆನೋ
ಅಂತರಾತ್ಮ  ಶುದ್ಧವಿಲ್ಲ ಶಬ್ದದಲ್ಲೂ ಬಕುತಿಯಿಲ್ಲ ಇನ್ನು ನಿನ್ನ ಹೇಗೆ ಪಡೆವೆನೋ|

ಮನದ ತುಂಬ ಕಾಮ ಹೊತ್ತು ತೋರಿಕೆಯ ಭಕುತಿ ಬೀರಿ ನಿನ್ನ ಮುಂದೆ ನಿಂತೆನೋ
ನಾಲ್ಕು ಸಾಲು ಪದವ ಗೀಚಿ ಮಳ್ಳ ಮನದ ಆಸೆ ಅದುಮಿ ನಿನಗೆ ಶರಣು ಎಂದೆನೋ|

ನಿತ್ಯ ಬದುಕಿನಲ್ಲಿ ಸ್ವಾರ್ಥದ ಬೆನ್ನೇರಿ  ನಿನ್ನ ಸೇವೆಗೈವ ವೇಷದರಿಸಿಹೆನೋ
ಪಾಪ ಪುಣ್ಯಗಳ ಅರಿವಿದ್ದರೂ ಬಲು ಹುಂಬತನದಿ ಮೆರೆಯುತಿಹೆನೋ|

ಇನ್ಯಾವ ರೀತಿಯಲಿ ಭಜಿಸಿ ಪೂಜಿಸಲಿ ನಿನ್ನ ಎನ್ನ ಮನ್ನಿಸಿ ಕರುಣಿಸುವ ಮನ ಬಂದಿಲ್ಲವೇ
ಸಖರಾಯಪುರದ ಸರದಾರ ನೀನು ಒಮ್ಮೆ ತುಂಬು ಮನದಿ ಎನ್ನ  ಹರಸಬಾರದೇ|

Sunday, October 4, 2020

ನನ್ನೊಳಗಿಹ ನಾನು ನಾನೆಂಬ ಭಾವವ ನೀ - ರಚನೆ:ಶ್ರೀ. ಆನಂದ ರಾಮ್, ಶೃಂಗೇರಿ

ನನ್ನೊಳಗಿಹ ನಾನು ನಾನೆಂಬ ಭಾವವ ನೀ ಕಾಣದಾದೆಯಾ ಗುರುವೇ
ಇನ್ಯಾರ ಭಜಿಸಲಿ ನಾನು ಇದ ತ್ಯಜಿಸಿ ಬದುಕಲು ನೀ ಹೇಳೋ ಸಖರಾಯ ಪ್ರಭುವೇ|

ಎಲ್ಲರೊಡಗೂಡಿ ನಿನ್ನ ಸೇವೆಯ ಮಾಡಲು ನಿನ್ನ ಅಂಗಳಕೆ ಬಂದೆನೋ
ನಾನೆಂಬ ಮುಖವಾಡ ಧರಿಸಿ ನಿಜ ಬಕುತನಂತೆ ನಟಿಸಿ ನಿನ್ನೆದುರು ನಿಂತೆನೋ|

ಎಲ್ಲವನೂ ತ್ಯಜಿಸಿದಂತೆ ನಟಿಸಿ ಇಲ್ಲದನು ಹುಡುಕಿ ಮತಿಹೀನನಂತೆ  ಬಾಳಿದೆನೋ
ಎಲ್ಲರ ಸಂಗದಲಿ ನಾನೊಬ್ಬ ಬೇರೆ ಎನುತ ಪೊಳ್ಳು  ಬಕುತಿಯ ತೋರಿ ಬದುಕಿಹೆನೋ|

ನಿನ್ನ ಚರಿತವ ಪಾಡುವ ನಿಜ ಬಕುತರ ಮುಂದೆ ನಾನೊಬ್ಬ ಮಳ್ಳನಂತೆ ನಿಂತಿಹೆನೋ
ಆರು ಅರಿಗಳು ಮನತುಂಬಿ ಕುಳಿತಿರಲು ಶುದ್ದನಂತೆ ತೋರುತ ವಂಚಿಸಿಹೆನೋ|

ತಾಮಸಿಕ ಭಾವಗಳ ನಡುವಿನ ತೊಳಲಾಟದಲಿ ಸೋತು ನಿಂತಿಹೆ ಗುರುವೇ
ಸಾತ್ವಿಕರ ಒಡನಾಟ ಕುಲೀನ ಸಂಗವ ನೀಡಿ ಎನ್ನ ಉದ್ಧರಿಸೋ ಸಖರಾಯ ಪ್ರಭುವೇ|

Monday, September 28, 2020

ಮನವೆಂಬ ಮಲಿನ ಮಣ್ಣಿನೊಳು - ರಚನೆ:ಶ್ರೀ. ಆನಂದ ರಾಮ್, ಶೃಂಗೇರಿ

ಮನವೆಂಬ ಮಲಿನ ಮಣ್ಣಿನೊಳು ಬಕುತಿಯಾ ಬೀಜ ಬಿತ್ತಿ ಶ್ರದ್ದೆಯಾ ನೀರೆರೆದು ಭಜಿಸುವೆನು
ಗುರು ಕರುಣೆ ಎಂಬ ಸುಮವು ಉದಿಸಿ ನಿನ್ನ ಕಾರುಣ್ಯದ ಫಲ ನೀಡೋ ಗುರುದೇವ|

ಅಲ್ಲ ಸಲ್ಲದ ಜಗದ ವಿಷಯಗಳ ಹಳುವೆಂಬ ಮಲಿನವನು ದೂರ ಮಾಡೋ
ಪೊಳ್ಳು ಭಕುತಿಯಂಬ ಮನದ ಮಲಿನ ಜರಿಯ ಹರಿಯ ಬಿಡ ಬೇಡವೋ|

ನಾನು ತಾನೆಂಬ ಮನದ ಕೀಟವ ಹಾರಬಿಡದೆ  ಎಲ್ಲಾ ನೀನೆಂಬ ಅರಿವು ನೀಡೋ
ನಿಜ ಬಕುತಿಯ ಫಸಲು ನುಂಗುವ ಆಸೆ ಆಮಿಷಗಳ ಕೀಟವ  ನಾಶ ಮಾಡೋ|

ಮಿಥ್ಯೆಯಂಬ  ಜಂತುವ ಹತ್ತಿರ ಬಿಡದೇ ಬಕುತಿಯ ಫಸಲ ಕಾಯೋ ಗುರುದೇವ
ಸುಂದರ ಸುಮವಾಗಿ ನಿನ್ನ ಮೂರುತಿ ಮನದಿ ಕಾಣಲಿ ಮಹಾದೇವ|

ಹೂವು ಕಾಯಾಗಿ ಕಾಯಿ ಹಣ್ಣಾಗುವಂತೆ ನನ್ನ ಭಕುತಿ ಬಲಿಯಲಿ ನನ್ನ ದೇವ
ನಿನ್ನ ಚರಣಕೆ ಅರ್ಪಿಸುವೆ ನನ್ನ ಹೃದಯದ ದೈನ್ಯ ತುಂಬಿದ ಶುದ್ಧ ಭಾವವ|

ಸಕರಾಯಧೀಶನ ಆಸ್ಥಾನದಿ ಬಕುತ ಜನಗಳ ಗುಂಪಿನಲಿ ನಿನಗಾಗಿ ಕಾಯುವೆನು ನಾನು
ಎನ್ನ ಬಕುತಿಯಾ ಹೊರೆ  ಇಳಿಸಿ ಎನ್ನ ಸರಿ ತಪ್ಪುಗಳ ತಿಳಿಸೋ ಸದ್ಗುರು ದೇವಾ|

Friday, September 25, 2020

ಜಗದೊಳಿಹ ಬಕುತರಲಿ ನಾನೇ ಮೂರ್ಖನೋ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಜಗದೊಳಿಹ ಬಕುತರಲಿ ನಾನೇ ಮೂರ್ಖನೋ ನಿನ್ನ ಸೇವಿಸದೆ ಮರುಳನಾದೆನೋ
ವಿದ ವಿಧದ ಬಕುತಿಯಾ ಮಾಡಿ ನಿನ್ನ ಪಡೆವರ ಕಂಡರೂ ಕಾಲ ಹರಣ ಮಾಡಿದೆನೋ|

ಅಂದದಾ ಪಲ್ಲಕ್ಕಿಯಲಿ ಕುಳ್ಳಿರಿಸಿ ಮುಗದ ಬಕುತಿಯ ತೋರಿ ಕುಣಿವರೋ
ಚಂದದಾ ಪದದಿಂದ ರಾಗದಾ ಮಾಲೆಮಾಡಿ  ಹಾಡಿ ಪಾಡಿ ನಲಿವರೋ|

ಬಣ್ಣದ ಪುಷ್ಪವಿರಿಸಿ ಗಂಧದಾ ಪರಿಮಳ ಸೂಸಿ ನಿನ್ನ ಸಿಂಗರಿಸಿ ನಲಿವರೋ
ಪೂರ್ಣ ಫಲ ಹಣ್ಣುಗಳಿರಿಸಿ ಧನ್ಯತಾ ಭಾವದಲಿ ಮೈ ಮರೆತು ನಮಿಪರೋ|

ಆರು ಅರಿಗಳ ಸಂಗ ಬೇಡವೆಂದು ಬೇಡುತ ನಿನ್ನ ಪದಕಮಲ ಪಿಡಿವರೋ
ಜನುಮ ಜನುಮಕೂ ನೀನೇ ಗುರುವೆಂದೆನುತ ಸಾರಿ ಸಾರಿ ಬೇಡುವರೋ|

ಭವ ಭಂದನವ ಬಿಡಿಸೆನುತ ಕರ್ಮಗಳ ಹೊರೆ ತಾಳೆನುತ ಧೈನ್ಯದಲಿ ಬೇಡುವರೋ
ಅಜ್ಞಾನ ತುಂಬಿದ ಅಂಧಕಾರದ ಬದುಕು ಸಾಕೆನುತ
ಮುಕ್ತಿ ನೀಡೆನ್ನುವರೋ|

ಮಿಥ್ಯವನೇ ಸತ್ಯವೆನುತ ತೋರಿಕೆಯನೇ ಬಕುತಿಯೆನುತ ಬಾಳಿದೆನೋ
ಎನ್ನ ಮನ್ನಿಸೆನ್ನಲು ಪದ ಸಿಗದೆ ಸೋತು ಹೋದೆನು ನಾನು ಸಖರಾಯಧೀಶನೇ|

ಏನು ಲೀಲೆಯೋ ಗುರುವೇ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಏನು ಲೀಲೆಯೋ ಗುರುವೇ ನಿನ್ನದು ಮರೆತು ನಡೆವಂತಿಲ್ಲ ಎಚ್ಚರಿಸುವೆ
ಆನಂದದಾ ನಡುವೆ ಆತಂಕವಾ ತೋರಿ ನಗುತ ಕಷ್ಟ ಪರಿಹರಿಸುವೇ|

ಮೆಲುದನಿಯ ನುಡಿಯ ಕೇಳಿ ಕೇಳದಂತೆ ನಟಿಸಿ ಎಲ್ಲವನು ಕರುಣಿಸುವೆ
ಅಬ್ಬರದ ಪೂಜೆಯಾ ಕೂಗಿಗೆ ಉತ್ತರಿಸದೆ ಶುದ್ಧಭಾವದ ಮನಕೆ ಒಲಿಯುವೆ|

ನಿನ್ನ ಬೇಡಲು ಕಾಡಲು ಎನ್ನ ಸಂಕಟದ ನಾಟಕಕೆ ಮುನಿದು ಸಂತೈಸುವೆ
ಹುಸಿಮುನಿಸ ತೋರಿ ಬಿರು ನುಡಿಯಂತೆ ನಟಿಸಿ ಕೈ ಎತ್ತಿ ನೀ ಹರಸುವೆ|

ಜೀವನದ ಪಾಠವ ಮಗುವಿನ ಮನ ಸೇರುವಂತೆ ತಿಳಿಸಿ ಉದ್ಧರಿಸುವೆ
ಅಗಾಧ ಶಕುತಿಯು ನೀನು ಪೊಳ್ಳು ಬಕುತನು ನಾನು ಆದರೂ ಕನಿಕರಿಸುವೆ|

ನಿರ್ಮಲ ಭಕುತಿಗೆ ಒಲಿಯುವ ಮಹದೇವ ನೀನು ಎನ್ನನೂ ಮನ್ನಿಸಿ ಪೊರೆಯುವೆ
ಸ್ವಾರ್ಥದ ಮುಖವಾಡ ಧರಿಸಿ ನಿನ್ನ ಕೂಗಿದರೂ ಬದಲಾವಣೆಗೆ ದಾರಿ ತೋರುವೇ|

ಎಲ್ಲರೂ ನಿನ್ನ ನಿಜ ಭಕುತಿ ತೋರಿ ಸೇವಿಸಿ ಧಾನ್ಯರಾದರು ಗುರುವೇ
ಮಳ್ಳ ನಾನು ಎನ್ನ ಹುಸಿ ಭಕುತಿಗೂ ಮುನಿಸು ಮಾಡದೇ ಸಲಹೋ ಸಖರಾಯಧೀಶ|

Tuesday, September 15, 2020

ನಿನ್ನ ಕಣ್ಣು ತಪ್ಪಿಸಿ ಬದುಕು ನಡೆಸಲಾರೆ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ನಿನ್ನ ಕಣ್ಣು ತಪ್ಪಿಸಿ ಬದುಕು ನಡೆಸಲಾರೆ ಆಸೆ ಆಮಿಷಗಳ ಸುಳಿಯಿಂದ ಹೊರಬರಲಾರೆ
ಉದ್ದಾರ ಮಾಡೆನ್ನನು ಎನ್ನಲು ಎನ್ನ ನಾಲಗೆ ಮಲಿನವಾಗಿದೆ ಗುರುದೇವಾ|

ಕಾಣುತಿಹದು ಕಾಮದಾಟವ ಮನಸು  ಧರಿಸಿಹುದು ಕಪಟ ವೇಷವ
ನುಡಿಯುತಿಹುದು ನಾಲಗೆಯು ನಿನ್ನ ನಾಮವ ತೋರಿಕೆಯ ಬಕುತಿ ಭಾವವ|

ಹಣದಾಸೆಯ ಅಮಲಿನಲಿ ನಾನೆಂಬ ಭಾವದಲಿ ಬಕುತಿಯೆಂದು ನಟಿಸುತಿಹೆನೋ
ಹುಂಬತನದ ಮಾತಿನಲಿ ಎಲ್ಲಾ ಬಲ್ಲೆನೆಂಬ ಗರ್ವದಲಿ ಬದುಕುತಿಹೆನೋ|

ಹಲವು ವೇಷದರಿಸಿ ಹಲವು ಮಂತ್ರ ಜಪಿಸಿ ನಾಟಕವಾಡುತ  ಉಸಿರಾಡುತಿಹೆನೋ
ಎನ್ನ ಕುಕರ್ಮಕೆ ಎನ್ನ ಅಪರಾಧಕೆ ಅನ್ಯರ      ದೂಶಿಸಿ ನಿನ್ನ ಬೇಡುತಿಹೆನೋ|

ಬದುಕಿಗಾಗಿ ಕಾಯಕ ಮಾಡುತಾ ಇತಿಮಿತಿಯ ಎಲ್ಲೆ ಮೀರುತ ನಡೆಯುತಿಹೆನೋ
ಅನ್ಯರ ಏಳಿಗೆಯ ಮಾತಿನಲಿ ಸಹಿಸುತ ಒಳಮನದಿ ಕರುಬುತ ಮುಖವಾಡ ದರಿಸಿಹೆನೋ|

ಮಾಡುವುದೆಲ್ಲ ಮಾಡಿ ಆಡುವುದೆಲ್ಲ ಆಡಿ ಮುಗಿಸಿ ದೈವವ ದೂರುತಿಹೆನೋ
ಸಖರಾಯಪುರದ ನ್ಯಾಯಾಧೀಶ ನೀನು ಎನ್ನ ಕಾರ್ಯಕೆ  ನಿನ್ನಂಗಳದ ತೀರ್ಪು ನೀಡೋ|

Thursday, September 10, 2020

ಸೇವಕನಾಗುವೆನು ನಾನು ಎನ್ನ ಗುರುವಿನ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಸೇವಕನಾಗುವೆನು  ನಾನು ಎನ್ನ ಗುರುವಿನ ಪದಕಮಲ ಕಾಯ್ವ ಸೇವಕನಾಗುವೆನು
ಸೇವೆಯ ಮಾಡುವೆನು ಗುರುವಿನ ಪಾದದೂಳಿಯ ಕಣವಾಗುವೆನು|

ಎನ್ನ ಅಂತರಂಗದಿ ನೆಲೆ ನಿಲ್ಲೆನುತ ಬಕುತಿಯ ಕಾಯಕದ  ಸೇವೆ ನೀಡುವೆನು
ಮನದ ಬಕುತಿಯ ಭಾವಗಳ ಮಾಲೆ  ಮಾಡಿ ಗುರುವಿನ ಪದಕರ್ಪಿಸಿ ಸೇವೆಗೈವೆನು|

ಪಾಮರನಾನು ತೊದಲು ನುಡಿಗಳಾಡುತ ಮನ ಬಂದಂತೆ ಪಾಡುತ ನಿನ್ನ ಪಾದವ ಕಾಯುವೆನು
ಸನಿಹದಿ ಹರಿವ ನೀರನೆ ಗಂಗೆಯೆನುತ ನಿನ್ನ ಪಾದ ಪದ್ಮಗಳ ತೊಳೆದು ಸೇವೆ ಮಾಡುವೆನು|

ದೊರೆವ ಪುಷ್ಪವನೆ ಜಾಜಿ ಮಲ್ಲಿಗೆ ಎನುತ ನಿನ್ನ ಪಾದ ಕಮಲಕರ್ಪಿಸಿ ಸೇವೆ ಎನ್ನುವೆನು
ಸುಗಂಧ ದ್ರವ್ಯಗಳ ಮನದಿ ಕಲ್ಪಿಸಿ ಪಾದವ ತೊಳೆದು ಶುದ್ಧ ಭಾವದಿ ಸೇವೆ ನೀಡುವೆನು|

ಮೂಡುವ ಮಲಿನ ಭಾವಗಳ ದಮನ ಮಾಡೆನ್ನುತ ಕೂಗಿ ಬೇಡುವ ಸೇವಕನಾಗಿಹೆನು
ಮಧುರ ಮಾತುಗಳ ಕಪಟ ಆಟಗಳ ಬದುಕು ಬೇಸತ್ತು ನಿನ್ನ ಪಾದ ಪಿಡಿವೆನು|

ಸಖರಾಯಧೀಶನೆ ನಿನ್ನ ಮನ ಒಪ್ಪಿದರೆ ಎನ್ನ ಸೇವೆ ಸ್ವೀಕರಿಸಿ ಹರಸು ಎನ್ನನು
ಒಪ್ಪಿ ನೀ ಒಲಿದರೆ ಮುದದಿ ಶಿರವೆತ್ತಿ ಕೈ ಮುಗಿದು ನಿನ್ನ ದರುಶನವ ಬೇಡುತಿಹವೆನು|

Wednesday, September 9, 2020

ಎನ್ನೊಡೆಯನ ದಣಿವಿಲ್ಲದೆ ಭಜಿಸುವೆನು - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಎನ್ನೊಡೆಯನ ದಣಿವಿಲ್ಲದೆ ಭಜಿಸುವೆನು ಜಗದೊಡೆಯ ಅವನು
ತಡಮಾಡದೆ ಹರಸುವನು ಎಮ್ಮನು ಕರುಣಾಮಯ ಗುರುನಾಥನು|

ತಾನಿರುವ ಅನುಭವವ ಕಾಣದಿರು ನೀಡುತ ಗುರುವು ಸಲಹುವನು 
ನೆರಳಂತೆ ಹಿಂಬಾಲಿಸುತ ಜತನದಿ ಕಾಯುತ ಕೈ ಹಿಡಿದು ನಡೆಸುವನು|

ಮುಸುಕು ತುಂಬಿದ ಬಾಳಿನೊಳು ಆಶಾ ಕಿರಣದ ಬೆಳಕ ನೀಡುತ ಪೊರೆಯುವನು
ಮನದೊಳಿಹ ಅಲ್ಪ ಭಾವಗಳ ಅಳಿಸಿ ಜಗದರಿವ ನೀಡಿ ಕರುಣಿಸುವನು|

ಚಂದದಿ ಬದುಕಿನರ್ಥವ ತಿಳಿಸಿ  ಸ್ವಾರ್ಥವನಳಿಸಿ ಬದುಕು ಹಸನಾಗಿಸುವನು
ಅನ್ಯರ ನೋವನು ಕ್ಷಣದಿ ಪರಿಹರಿಸಿ ಮಾದರಿಯ ಬದುಕು ನೆಡೆಸೆನ್ನುವನು|

ನಿತ್ಯವೂ ಬದುಕೊಂದು ಯಜ್ಞವೆನುತ ಸಾಧಿಸಿ ಗುರುವು ದಾರಿ ದೀಪವಾಗಿಹನು
ಹಣದಾಸೆಯ ಮೋಹದ ಬಲೆಯ ಕಿತ್ತೊಗೆದು ನಂಬಿದವರ ಪೊರೆಯುತಿಹನು|

ಮಂತ್ರ ತಂತ್ರದ ಅರಿವಿಲ್ಲದ ಪಾಮರ ಬಕುತ  ನಾನೂ ನಿನ್ನ ಸ್ಮರಿಸೆ ಅಭಯ ಪಡೆವೆನು
ಸಖರಾಯಪುರದ ಮಹದೇವನವನು ಗುರುವು ಬಕುತರ ಭಗವಂತನವನು|

Wednesday, August 19, 2020

ನಾನಲ್ಲ ನಾನಲ್ಲ ಗುರುವೇ ನಿನ್ನ ಬಕುತನು ನಾನಲ್ಲ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ನಾನಲ್ಲ ನಾನಲ್ಲ ಗುರುವೇ ನಿನ್ನ ಬಕುತನು ನಾನಲ್ಲ
ಮನವ ಹಿಡಿಯಲಾರದೆ ನಾ ಸೋತು ಶರಣಾದೆನಲ್ಲ|

ಕಾಮ ಕ್ರೋಧವೇ ಮೇಲಾಯಿತಲ್ಲ ಅಲ್ಪ ಸುಖದ ಆಸೆಯೇ ಹೆಚ್ಚಾಯಿತಲ್ಲ
ಮುಸುಕು ಧರಿಸಿ ಬದುಕು ನಡೆಸಿ ಮೈ ಮರೆತು ಹೋದೆನಲ್ಲ ಗುರುವೇ|

ದುರಾಸೆಯ ಬಲೆಯು ಮೈ ಮರೆತ ಮನವ ಸೆಳೆದು ಬೆಂಬಿಡದೆ ಕಾಡಿತಲ್ಲ
ಅನ್ಯರ ಸೊತ್ತು ಪಾಷಾಣವೆಂದರೂ ಮನಸು ಆಸೆಪಟ್ಟು ಬಯಸಿತಲ್ಲ|

ಕಂಡವರ ಸುದ್ದಿ ಮೈಲಿಗೆ ಅಂದರೂ ನಾಲಿಗೆಯು ದೂರ ನಿಲ್ಲದಲ್ಲ
ಶುದ್ದವಿಲ್ಲದ ಮನವ ಹೊತ್ತು ಮಡಿ ಮಡಿ ಎಂದು ಜಪವ ಮಾಡಿದೆನಲ್ಲ|

ಹಸಿದವರಿಗೆ ಅನ್ನ ನೀಡದೆ ತೋರಿಕೆಯ ಧರ್ಮ ಮಾಡಿ ಮೆರೆದೆನಲ್ಲ
ಕೂಡಿಟ್ಟ ಧನವನು ಮನವಿಲ್ಲದೇ ನೀಡಿ ದಾನವೆಂದು ಬೀಗಿದೆನಲ್ಲ|

ಕರ್ಮ ಕಳೆಯದೇ ದೇವ ನೀ ಒಲಿಯದೇ ಎನ್ನ ಬದುಕು ಬದಲಾಗದಲ್ಲ
ಸಖರಾಯಪುರದ ದೇವ ನೀನು ಕರುಣಿಸದೆ ಎನ್ನ ಕೂಗು ನಿಲ್ಲದಲ್ಲl

Sunday, August 16, 2020

ಹರಣವಾಗಲಿ ಎನ್ನ ಗರ್ವವು - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಹರಣವಾಗಲಿ ಎನ್ನ ಗರ್ವವು ನಿನ್ನ ಮರೆತು ಮೆರೆಯುತಿಹೆ ನಾನಿಲ್ಲಿ
ಬರಲಿ ಎನ್ನ ಮನಕೆ ನಿನ್ನ ಸ್ಮರಣೆಯು ಬದುಕಿನ ಪ್ರತಿ ಹೆಜ್ಜೆ ಹೆಜ್ಜೆಯಲಿ|

ಯಾರಗೊಡವೆ ಎನಗೆ ಬೇಡ ನೀಡೆನಗೆ ಮನದ ಶಾಂತಿ ನಿನ್ನ ಬಜಿಪ ಕಾಯಕದಲಿ
ನಿತ್ಯ ಎನ್ನ ಬದುಕಲಿ  ನಿನ್ನ ಕರುಣೆಯ ಫಲವಾಗಿ ಭಕುತಿ ತುಂಬಿ ಹರಿಯಲಿ|

ಮನವ ಮರ್ಧಿಸಿ  ನಾನೆಂಬ ಭಾವವ ಅಳಿಸಿ ಅಲ್ಪ ನಾನೆಂಬುದ ತಿಳಿಸಿ ಹೇಳಲಿ
ನಿನ್ನ ದರುಶನ ದೊರೆಯಲಿಲ್ಲ  ಅಂದು ಮಾಡಿದ ಕುಕರ್ಮ ಕಾಡಿತೆನ್ನ ನಾನೇನು  ಮಾಡಲಿ|

ಏನು ಅರ್ಪಿಸಿ ನಿನ್ನ ಬೇಡಲಿ ಶುದ್ಧ ಭಾವದ ಕೊರತೆ ನೀಗಿ ನನ್ನ ಬಾಳ ಹರಸಲಿ
ಬೇಡಿತೆನ್ನ ಮನವು ಇಂದು ಒಂದು ನೋಟ ಮನದ ಬ್ರಾಂತಿ ದೂರ ಮಾಡಲಿ|

ಆರು ಅರಿಗಳ ಸಂಗ ಮಾಡಿ ಪ್ರತೀ ಗಳಿಗೆ ವ್ಯರ್ಥವಾಯ್ತು ಯಾರ ಬಳಿ ಹೇಳಲಿ
ಅಲ್ಪ ಸುಖದ ಬೆನ್ನ ಏರಿ ಎಲ್ಲಾ ಪಡೆದೆನೆಂಬ ಹುಂಬತನದಿ ಸೋತು ಬಂದಿಹೆನಿಲ್ಲಿ|

ಎಲ್ಲಾ ಅರಿತಿಹ ಮಹದೇವ ನೀನು ನನ್ನ ಬಾಳ ದಾರಿದೀಪವಾಗಿ ಬೆಳಗಲಿ
ಸಖರಾಯಧೀಶ ಪ್ರಭುವೇ  ಮೊರೆಯ ಕೇಳೋ ಉಳಿದ ಬಾಳು  ನಿನಗೆ ಮೀಸಲಾಗಲಿ|

Thursday, August 13, 2020

ಎಷ್ಟು ಬೇಡಲಿ ನಿನ್ನ ಇನ್ನೆಷ್ಟು ಕಾಡಲಿ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಎಷ್ಟು ಬೇಡಲಿ ನಿನ್ನ ಇನ್ನೆಷ್ಟು ಕಾಡಲಿ ಗುರುವೇ ನಿನ್ನ ಒಲುಮೆಗೆ
ನಿನ್ನಿಷ್ಟದ ಪೂಜೆ ಎನಗೊಲಿದಿಲ್ಲವೋ ಮನ್ನಿಸೋ ಸಖರಾಯ ಪ್ರಭುವೇ|

ಇಷ್ಟ ದೇವನು ನೀನು ಎನ್ನ ಕಷ್ಟಗಳ ದೂರ ಮಾಡೆಂದು ಅರಿಕೆ ಸಲ್ಲಿಸಿಹೆ ನಾನು
ನಿನಗರಿವಿಲ್ಲವೇ ದೊರೆಯೇ ಏನು ನೀಡಲು ಸುಮ್ಮನಾಗುವೆನೆಂದು ನಾನು|

ದಾರಿ ಕಾಣದು ಎನಗೆ ಬರೀ ಅಂಧಕಾರವೇ ಮನದಿ ತುಂಬಿಹುದು ಗುರುವೇ
ಬೆಳಕು ಚೆಲ್ಲಿ ಎನ್ನ  ಮನವ ಅರಳಿಸಿ ನಿನ್ನ ಸ್ತುತಿಪ  ಭಾವ  ತುಂಬೋ ಪ್ರಭುವೇ|

ಬದುಕಿನ ದಾರಿಯದು ಕಲ್ಲೋ ಮುಳ್ಳೋ ಏನಗರಿವಿಲ್ಲವೋ ಗುರುವೇ
ನೀ ನಡೆಸುವ ದಾರಿಯ ಅಂದ ಚೆಂದದ ಗೊಡವೆ ಏನಗೇಕೋ  ಪ್ರಭುವೇ|

ಆಡುವ ಮಾತು ಸತ್ಯವೋ ಅಸತ್ಯವೋ ಎಲ್ಲಾ ನುಡಿಸುವುದು ನೀನಲ್ಲವೇ ಗುರುವೇ
ಇಷ್ಟವಾಗದ ಮಾತು ಪದಕೆ ನಿನ್ನ ಹುಸಿಮುನಿಸು ಉತ್ತರವಲ್ಲವೇ ನನ್ನ ದೊರೆಯೇ|

ಮಹಾದೇವನೇ ನೀನು ಪಾಮರನು ನಾನು  ಬೇಡುವುದೆಂತೋ ನಿನ್ನ ಗುರುವೇ
ಮನವ ಹರಿಬಿಟ್ಟು ಪದಗಳ ಮಾಲೆ ಮಾಡಿ ಅರುಹಿದರೆ ಒಲಿಯುವೆಯಾ ಪ್ರಭುವೇ|

Sunday, July 26, 2020

ಎಂಥಾ ವೈಭವವೋ ಬಲು ಆನಂದವೋ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಎಂಥಾ ವೈಭವವೋ ಬಲು ಆನಂದವೋ ಕೈಲಾಸದರೆಗಿಳಿದೆದೆಯೋ
 ಧರೆಗಿಳಿದ ಮಹಾದೇವನೋ ಗುರುವು  ಸಖರಾಯಪುರದವಾಸನೋ|

ಬೃಂದಾವನವೋ ಅದು ನಿಜ ಬಕುತರ ನೆಮ್ಮದಿಯ ತಾಣವೋ
ಹಸಿರು ತುಂಬುದೆಯೋ ತೆಂಗು  ಕಂಗುಗಳ ನಿರ್ಮಲ  ಪುಣ್ಯಭೂಮಿಯೋ|

ವಿಶ್ವ ವ್ಯಾಪಿಯೋ ನನ್ನ ಗುರುವಿನ ಕರುಣೆಯೋ ಬಲು ಅಪರೂಪವೋ
ಎಲ್ಲರಿಗೂ ದೊರೆವುದೋ ಮಹಾಮಹಿಮನ ಕೃಪೆಯ ಹಾರೈಕೆಯೋ|

ಪೂಜೆಯ ಆಡಂಬರವ ಒಲ್ಲನೋ ಗುರುವು ಮನದಾಳದ ಭಕುತಿಗೆ ಒಲಿದನೋ
ಅರಿತ ಬಕುತರ ಗುರುತಿಸೆ ನಾನೆಂಬ ಭಾವವ ಅಳಿಸೆ ಮುದದಿ ಸಲಹುವನೋ|

ಏನೂ ಬೇಡನೋ ನನ್ನ ಗುರುವು ತೋರದಿರು ನಿನ್ನ ಬಕುತಿಯ ಬಡತನವೋ
ಎಲ್ಲಾ ನೀನೆನುತ  ಪಡೆವೆನು ನೆಮ್ಮದಿಯ ಬದುಕಿನ  ನಿತ್ಯ ಪ್ರಸಾದವೋ|

Sunday, July 19, 2020

ಮೌನವಾಗಿರದ ಮನವು ನಿನ್ನ ನಾಮ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಮೌನವಾಗಿರದ ಮನವು ನಿನ್ನ ನಾಮ ಜಪಿಸದಲೇ ಕೊರಗಿಹುದು
ಮಾಡಿದ ಕರ್ಮಗಳ ನೆನೆ ನೆನೆದು ಎನ್ನ ಹೃದಯ ಭಾರವಾಗಿಹುದು ಗುರುವೇ|

ಬೆಳಕ ಕಾಣುವ ಹಂಬಲದಿ ಕತ್ತಲೆಯೊಳು ನಿನ್ನ ನುಡಿ ಕೇಳಲು ಕಾದಿಹೆನೋ
ಸರಿ ತಪ್ಪುಗಳ ಜಂಜಾಟದಲಿ ತಪ್ಪನೇ ಸರಿಯೆಂದು ಭ್ರಮಿಸಿ ಸೋತಿಹೆನೋ|

ಇನ್ಯಾರದೋ ಬಕುತಿಯನು ಮೀರಿಸುವ ಬರದಿ ತೋರಿಕೆಯ ಭಕುತಿ ತೋರಿದೆನೋ
ಹುಂಬ ತನದಿ ನಟಿಸಿ ನಿನ್ನ ಕರುಣೆಯ ಮಾತು ಕೇಳದೇ ಸಮಯ ಕಳೆದೆನೋ|

ನಿನ್ನ ಒಂದು ನೋಟಕೆ ಹಂಬಲಿಸಿ ಹುಂಬನಾಗಿ ನಿನ್ನ ಬೇಡುವುದೇ ಮರೆತೆನೋ
ಸೇವೆ ಮಾಡದೆಲೆ ಎನ್ನ ಕರುಣಿಸೆನ್ನಲು  ನನಗ್ಯಾವ ಬಲವಿದೆ ಅರಿಯೆನೋ|

ಪರಿಪೂರ್ಣ ಮಾಡೆನ್ನ ಬದುಕು ಬರಡಾಗಿ ಹೋಗದಿರಲಿ ಹರಸೆನ್ನನು
ಸಖರಾಯಧೀಶ ನೀನೇ ನನ್ನ ಪ್ರಭುವು ತೆರೆಯೋ ನನ್ನ ಒಳಗಣ್ಣನು |

ಇನ್ನೆಷ್ಟು ಹಾಡಲಿ ಗುರುವೇ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಇನ್ನೆಷ್ಟು ಹಾಡಲಿ ಗುರುವೇ ನಿನಗಿಷ್ಟವಾದ ಪದಗಳಲಿ
ಇನ್ನೆಷ್ಟು ಬೇಡಲಿ ಪ್ರಭುವೇ ನೀ ಒಪ್ಪುವ ಭಕುತಿಯ ವಿಧದಲಿ|

ನೀಡಿದೆ ಮತಿಯ ನೀನು ಪದಗಳಲಿ ಪೂಜಿಸುವ ಪರಿಯ ಎನ್ನ ಮನದಲಿ
ನಿಂತರೂ ಕುಳಿತರೂ ನಿನ್ನನೇ ನೆನೆಯುತ ಭಾವಗಳ ಬೆರೆಸಿ ಹಾಡುತಲಿ|

ಯಾಗ ಯಜ್ಞಗಳ ಹೊರತಾಗಿ ಮನದ ಮಾತುಗಳೇ  ಮಂತ್ರವಾಗಿದೆಯಿಲ್ಲಿ
ನೇಮ ನಿಯಮಗಳು ಅರಿವಿಲ್ಲ ಎನಗೆ ನಿನ್ನ ನಾಮ ಬಲವೊಂದೇ ಸಾಕೆನಿಸಿದೆ ಇಲ್ಲಿ|

ಮೌನದಲಿ ಮನದ ಭಾವನೆಗಳು ನಿನ್ನ ಭಜಿಸುವ ಹಾಡಾಗಿದೆ ಇಲ್ಲಿ
ಹೃದಯ ಕಮಲವು ನಿನ್ನ ಕುಳ್ಳಿರಿಸುವ ಮಂದಿರವಾಗಿ ಕಾದಿದೆ ಇಲ್ಲಿ|

ನೀ ನೆಲೆಸಿಹ ಬೃಂದಾವನವ ಕಾಣುವ ಹಂಬಲದಿ ಮನವು ಕಾದಿದೆ ಇಲ್ಲಿ
ಸಖರಾಯಪುರವದು ಪುಣ್ಯಭೂಮಿಯಾಗಿದೆ ನೀನು ಅವತರಿಸಿ ಹರಸಿದಾಗ ಇಲ್ಲಿ|

Monday, July 13, 2020

ಮನದ ಮಂದಿರದಲಿ ನಿನ್ನ ಕುಳ್ಳಿರಿಸಿ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಮನದ  ಮಂದಿರದಲಿ ನಿನ್ನ ಕುಳ್ಳಿರಿಸಿ ಮುದದಿ ಭಜಿಸುವೆನು ಗುರುದೇವಾ
ಅಂತರಂಗದ ಕದವ ತೆರೆದು ಒಳಗಣ್ಣ ತೆರೆಸಿ ಹರಸೋ ನನ್ನ ಮಹಾದೇವ|

ಬಿರುಗಾಳಿಯಂತೆ ಬರುವ ಮನದ ಬಯಕೆಗಳ ಅಲೆಯ ತಡೆಯೋ ಗುರುದೇವ
ಎನ್ನೊಡಲ ಆಳದಲಿ ಹುದುಗಿಹ ಲೌಕಿಕದ ದುರಾಸೆಯ ನಾಶಮಾಡೋ ದೇವ|

ಎಲ್ಲರಲೂ ದೈವ ಕಾಣುವ ಮನವಿತ್ತು ಮನುಜನಾಗಿ ಮಾಡೋ ಮಹಾದೇವ
ಎನ್ನ ಮನದೊಳಗಿನ ಕಪಟ ವಾಸನೆಯ ದೂರಮಾಡಿ ಶುದ್ಧಗೊಳಿಸೋ ಗುರುದೇವ|

ಬರೀ ಬದುಕಿಗಾಗಿ ಭಜಿಸದೆಲೆ ನಿನ್ನ ಇರುವ ಅರಿವಿನ  ಬಲ ನೀಡಿ ಸಲಹೋ ದೇವ
ಕಷ್ಟ ಕಾರ್ಪಣ್ಯಗಳ ಸುಳಿಯಲಿ ಸಿಲುಕಿಸಿ ಹದಮಾಡಿ ಹರಸೋ ನನ್ನ ದೇವ|

ಅಂತೆಕಂತೆಗಳ ನಡುವೆ ಸಂತೆ ಮಾಡುತಿಹ ಮನದ ಭ್ರಾಂತಿ ದೂರ ಮಾಡೋ ದೇವ
ಅತ್ತಿತ್ತ ಓಡುತಿಹ ಮತಿಯ ನಿನ್ನತ್ತ ಸೆಳೆದು ಕಾಪಾಡೋ ಸಖರಾಯಪುರದ ಮಹನೀಯ|

ಶ್ರೀ ವೆಂಕಟಾಚಲ ಅವಧೂತ ಸ್ತುತಿ - ರಚನೆ: ಶ್ರೀ ಸಾಯಿ ವರ್ಧನ , ಗಾಯನ: ವಿದೂಷಿ ಶ್ರೀಮತಿ. ರೇಖಾ ರವಿಶಂಕರ, ಮೈಸೂರು

ಗುಬ್ಬಿ ಚಿದಂಬರ ಆಶ್ರಮದ ವೇದಪಾಠ ಶಾಲೆಯ ಆಚಾರ್ಯರಾದ ಶ್ರೀ ಸಾಯಿ ವರ್ಧನ ( ಕಾವ್ಯ ನಾಮ:ಲಲಿತಸುತ , ಇವರು ಶ್ರೀ ವಿದ್ಯಾ ಉಪಸಕರು) - ಇವರು ಸಖರಾಯಪಟ್ಟಣ ವೆಂಕಟಾಚಲ ಅವಧೂತರ  ಕುರಿತು ಮಾಡಿರುವ ಸ್ತುತಿ, ಗಾಯನ: ಶ್ರೀಮತಿ. ರೇಖಾ ರವಿಶಂಕರ, ಮೈಸೂರು  - ವಿಡಿಯೋ ಕೃಪೆ: ಶ್ರೀಮತಿ. ಹೇಮಾ, ಬೆಂಗಳೂರು 

ಪಂಕಜಾಸನ ಫಾಲಲೋಚನ ಪಕ್ಷಿವಾಹನ ಸನ್ನಿಭಂ
ಚಂದ್ರಶೇಖರ ಭಾರತೀ ಗುರು ಪಾದ ಪಂಕಜ ಪೂಜಕಮ್
ಸದ್ಗುರುಂ  ಸಖರಾಯಪತ್ತನ ವಾಸಿನಂ ಕರುಣಾಕರಂ
ವೆಂಕಟಾಚಲ ದೇಶಿಕಂ ಪ್ರಣಮಾಮಿ ಮತ್ಪರಿಪಾಲಕಮ್ 

ಚಿತ್ತಶೋಧಕ ಮುಕ್ತಿದಾಯಕ ಹಂಸನಾಮಕ ಸದ್ಗುರುಂ 
ಆಶ್ರಿತಾಖಿಲ ಭಕ್ತಸಂಘ ಸಮಸ್ತಪಾಪ ನಿಬರ್ಹಣಂ
ವಾಂಛಿತಾರ್ಥಫಲ ಪ್ರದಾಯಕ ಪಾವನಾಂಘ್ರಿ ಸರೋರುಹಮ್
ವೆಂಕಟಾಚಲ ದೇಶಿಕಂ ಪ್ರಣಮಾಮಿ ಮತ್ಪರಿಪಾಲಕಮ್ 

ಸುಸ್ಮಿತಾನನಮಚ್ಯುತಂ ಮಮ ಚಿತ್ತಪದ್ಮ ದಿವಾಕರಂ
ಲೀಲಯಾ ಧೃತ ದೇಹಿನಂ ಮಮ ಕರ್ಮಬಂಧ ವಿಮೋಚಕಮ್
ಶ್ರೀ ಗುರುಂ ಕರಣಾಲಯಂ ಲಲಿತಾಸುತಾರ್ತಿ ನಿವಾರಣಂ
ವೆಂಕಟಾಚಲ ದೇಶಿಕಂ ಪ್ರಣಮಾಮಿ ಮತ್ಪರಿಪಾಲಕಮ್


Friday, July 10, 2020

ಬರುವನೋ ಗುರುನಾಥ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಬರುವನೋ ಗುರುನಾಥ ಕರೆದಾಗ ನಿಮ್ಮ ಮನದ ಮನೆಯೊಳಗೆ
ನಿಲ್ಲುವನೋ ಮನೆಯೊಳಗೂ ಹೊರಗೂ ಭಾವ ಶುದ್ದಿ ತುಂಬಿ ಬೇಡಿದಾಗ|

ಮಂತ್ರ ತಂತ್ರ ಕೇಳಲೊಲ್ಲ ಅವ ನಿರಂತರ ಭಜಿಸಿರೆ ಸುಲಭದಿ ದೊರೆಯುವ
ನಾನು ಎನ್ನುತಾ ಮುಂದಡಿಯಿಟ್ಟರೆ ಮತ್ತೆಂದೂ ಸಿಗದೆ ಬಲು ಕಾಡಿಸುವ|

ನುಡಿಯ ನಂಬಿ ನಡೆದುದಾದರೆ ಭವ ಬಂಧನವನು ದಾಟಿಸಿ ಬಿಡುವನವ
ಅನುಮಾನಿಸದೆ ದಾರಿ ತುಳಿದರೆ ದಾರಿ ದೀಪವಾಗಿ ಬೆಳುಕು ತೋರುವವ|

ಸಾಧಕನ ನಿಜ ಗುರು ಅವ ಬಾಧಕಗಳ ಬಡಿದೋಡಿಸಿ ಕಾಯುವವ
ಅರಿವಿನರಿವು ಬೇಕೆನುತ ಭಜಿಸುತ ಬೇಡುವ ಬಕುತಗೆ ಹರುಷದಿ ಹರಸುವವ|

ಇನ್ನೇನು ಬೇಕು ನಿಜಬಕುತಗೆ ನಿನ್ನ ಪದತಲದಿ ಶಿರವಿಟ್ಟು ಶರಣಾಗಿ ಬೇಡುವ
ಸಖರಾಯಪುರದ ಮಹನೀಯ ನಿನ್ನೊಲುಮೆ   ಬೇಡುವ ಈ ಪಾಮರಗೆ ಒಲಿಯುವೆಯಾ|

Thursday, July 9, 2020

ಎಂಥಾ ಭಕುತನೋ ನಾನು - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಎಂಥಾ ಭಕುತನೋ ನಾನು ಬರೀ ಪದಗಳಲೇ ನಿನ್ನ  ಪೂಜಿಸಿಹೆನೋ
ನಿಜ ಭಕುತಿ ಮಾಡಲಿಲ್ಲ ನಾನು ಬೇಡುವುದೆಲ್ಲಾ ನೀಡು ಎನುತಿಹೆನೋ|

ಅಭಿಷೇಕ ಮಾಡಲಿಲ್ಲ ನಾನು ಧೂಪ ದೀಪ ತೋರದೇ ಬರಿಗೈಲಿ ಬೇಡುತಿಹೆನೋ
ಪುಷ್ಪ ಗಂಧಗಳಿಲ್ಲ ಮಲಿನ ತುಂಬಿದ ಮನಹೊತ್ತು ನಿನ್ನ ಮುಂದೆ ನಿಂತಿಹೆನೋ|

ಸೇವೆ ಮಾಡಲಿಲ್ಲ ನಾನು ನಿನ್ನ ಸೇವಕರ ಸಂಗ ತೊರೆದು ಹೋದೆನಲ್ಲೋ
ಪಾದ ನೋಡಲಿಲ್ಲ ನಾನು ತಲೆಯೆತ್ತಿ ತೋರಿಕೆಗೆ ಭಜಿಸಿ ನಿಂತೆನಲ್ಲೋ|

ಎಲ್ಲಾ ನೋಡುವರೆಂದು ಸಾಲಿನಲಿ ಮುಂದೆ ನಿಂತು ಬೀಗುತಿಹೆನೋ
ವೇಷ ಭೂಷಣಕೆ ಮೊರೆ ಹೋಗಿ  ನಿಜ ಭಕುತರ ಭಕುತಿ ಅರಿಯದಾದೆನೋ|

ನಿನ್ನಣತಿ ಇಲ್ಲದೇ ನಿನ್ನ ಭಕುತನೆನುತ ನಿನ್ನ ನಾಮ ಜಪಿಸುತಿಹೆನೋ
ಸಖರಾಯಪುರದ ದೊರೆಯೇ ಗುರುವೇ ನೀನು ಎನ್ನ ಮನ್ನಿಸಿ ಸಲಹುವೆಯಾ ಇನ್ನುI

Saturday, July 4, 2020

ಕಂಡಿರೇ ಕಂಡಿರೇ ನಮ್ಮ ನಡೆದಾಡುವ ಭಗವಂತನ ಕಂಡಿರೇ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಕಂಡಿರೇ ಕಂಡಿರೇ ನಮ್ಮ ನಡೆದಾಡುವ ಭಗವಂತನ  ಕಂಡಿರೇ
ಸಖರಾಯಪುರವೆಂಬ ದಿವ್ಯ ಸನ್ನಿಧಿಯೊಳು ನೆಲೆಸಿಹ  ಮಹಾದೇವನ ಕಂಡಿರೇ|

ಗುರುನಾಥನೆನ್ನುವರು ಭಕುತರು ಸದ್ಗುರುಮಹಾರಾಜನೆಂದು ಭಜಿಸುವರು
ಭವಸಗರ ದಾಟಿಸುವ ಅಂಬಿಗನ ಅವತಾರವೇ ಅವಧೂತನೆನ್ನುವರು|

ಗುರುವೇ ನನ್ನ ದೊರೆಯೇ ಎನ್ನುತ ದೈನ್ಯದಿ ಅವನಂಗಳದಿ ಕಾಯುವರೋ
ಕರ್ಮಗಳ ಹೊರೆಹೊತ್ತು ಅವನ ದಿವ್ಯ ಪಾದರವಿಂದದಲಿ ಶಿರವಿಟ್ಟು ಮನ್ನಿಸೆನ್ನುವರು|

ಗುರುತತ್ವ ಅರಿಯಿರಿ ಎಂದೆನುತ  ಹಿರಿತನದಲಿ ಭಕುತರ ಸಲಹುತ  ಹರಸುವರೋ
ಗುರುವಾಕ್ಯ ಪ್ರಮಾಣವು ಅನುಮಾನಿಸದೆ ಸೇವಿಸಿ ಬದುಕೆನ್ನುವರು|

ಇಂದು ಶುಭ ದಿನವು ಗುರುವಿಗೆ ನಮನವು ಶುದ್ಧ ಭಾವಕೆ ಬೆಲೆ ಎನ್ನುವರು
ಸಖರಾಯಧೀಶನ ದಿವ್ಯರೂಪದ ಸ್ಮರಣೆಯು ಮನಕೆ ನೆಮ್ಮದಿಯ ನೀಡಲೆನ್ನುವರು|

ಮಧುರ ಮಧುರ ಅತೀ ಮಧುರವೋ ನಿನ್ನ ನಾಮದಾ ಸವಿಯೋ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಮಧುರ ಮಧುರ ಅತೀ ಮಧುರವೋ ನಿನ್ನ ನಾಮದಾ ಸವಿಯೋ
ದಿವ್ಯ ಔಷಧವೋ ಬೇಡಿ ಬಂದ ನೊಂದ ಮನಕೆ ಅದು ಅಮೃತವೋ|

ದಿವ್ಯ ದಿವ್ಯವೋ ತುಂಬಿದ ಭಕುತರ ಸಭೆಯೊಳು ನಿನ್ನ ದರುಷನವೋ
ಒಂದೇ ಒಂದು ಕರುಣಾಪೂರಿತ ನೋಟವು ಸಾಕೆಮಗೆ ದಿವ್ಯ ಅನುಭವವೋ|

ನೋವುಂಡು ಬಂದ ಜೀವಕೆ ನೀ ನೀಡುವ ಅಭಯವು ಜೀವ ಬಲವೋ
ಕಳ್ಳ ಮನಸಿನ ಪೊಳ್ಳು ಭಕುತಿಗೆ ನಿನ್ನ ಮಾತಿನ ಚಾಟಿಯ ಶಿಕ್ಷೆಯೋ|

ದೇಹೀ ಎಂದು ಬಂದವರ ಬಾಳಿಗೆ  ಜೊತೆಯಾಗಿ ಬಾಳು ನೀಡಿವಿಯೋ
ಎಲ್ಲರಲೂ ಸಮಭಾವ ತುಂಬಿ ನಾನೆಂಬ ಹಮ್ಮನು ಹೊಡೆದೋಡಿಸಿದೆಯೋ|

ಅಂಜುತಲಿ ಹಿಂದೆ ನಿಂತ ಭಕುತನ ಕೂಗು ಆಲಿಸಿ ಹರೆಸುವೆಯೋ
ಸಖರಾಯಪುರದಲಿ ದಿವ್ಯ ವೇದಿಕೆಯಲಿ ನೆಲೆಸಿ ಮುದದಿ ಎಲ್ಲರಾ ಹರೆಸುವಿಯೋ|

Thursday, July 2, 2020

ಉಸಿರು ಉಸಿರಲೂ ಸದಾ ನಿನ್ನ ನಾಮವೇ ತುಂಬಿರಲಿ ಗುರುವೇ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಉಸಿರು ಉಸಿರಲೂ ಸದಾ ನಿನ್ನ ನಾಮವೇ ತುಂಬಿರಲಿ ಗುರುವೇ
ಆಡುವ ಮಾತುಗಳಲಿ ನಿತ್ಯ ನಿನ್ನ ಚರಿತವೇ ಕೇಳಿ ಬರಲಿ ಪ್ರಭುವೇ|

ನಾ ಗಳಿಸುವ ನಿತ್ಯ ಜೀವನದ ಕೂಳು ನಿನ್ನ ನಾಮ ಜಪಿಸಿದ ಫಲವಾಗಿರಲಿ
ಎನ್ನ ಜೀವನಕೆ ನಿನ್ನ  ನೆನಪು ಸದಾ ಜೀವ ಸಂಜೀವಿನಿಯಾಗಿ ಬಲ ನೀಡಲಿ|

ಅನುಮಾನದ ಗೂಡಾಗಿರುವ ಈ ಮನಕೆ  ನಿನ್ನ ಸ್ಮರಣೆಯು ಬಲ ನೀಡಿ ಹರಸಲಿ
ಎನ್ನ ಅಂತರಂಗದಲಿ ಹುದುಗಿಹ ಮಾಯೆಯ ಮುಖವಾಡ  ಕಳಚಿ ಬೀಳಲಿ|

ಬೆದರಿ ಬದುಕು ನಡೆಸಿ ರೋಗ ರುಜಿನಗಳಿಗೆ ಅಂಜಿ ನಿಂತೆನು ನಿನ್ನಂಗಳದಲಿ
ಭವರೋಗ ವೈದ್ಯ ನೀನು ಮನದಾಳದ ಭಯ ಓಡಿಸಿ ಸದಾ ಹರಸುವಂತಾಗಲಿ|

ಎಲ್ಲಾ ಮರೆತಂತೆ ನಟಿಸಿ ಎನ್ನ ಮನ್ನಿಸೆಂದು ಬೇಡುತ  ಮತ್ತೆ ಮತ್ತೆ ತಪ್ಪೆಸಿಗಿಹೆನಿಲ್ಲಿ
ಸಖರಾಯಧೀಶ ನೀನು ಎನ್ನ ಭಗವಂತನು ನಿತ್ಯವೂ ಭಜಿಸುತಿರೇ ಮನ್ನಿಸುವನಿಲ್ಲಿ||

Sunday, June 28, 2020

ಬೇಡುವ ಬಕುತನ ಮನದಲಿ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಬೇಡುವ ಬಕುತನ ಮನದಲಿ ಮೂಡುವ ಬಯಕೆಗೆ ಕೊನೆಯುಂಟೆ
ಬಾವಿಕ ಬಕುತನ ಸಲಹುವ ಗುರವೇ ನಿನ್ನ ಲೀಲೆಗೆ ಮಿತಿಯುಂಟೇ|

ಎಲ್ಲೆಲ್ಲೋ ಅಲೆದು ನೀನೇ ಗತಿಯೆಂದು
ಬೇಡುತಿಹ ಎನ್ನನು ದೂರಮಾಡುವುದುಂಟೆ
ಅಂತರಂಗದಲಿ ನಿಜ ಭಾವ ಭಕುತಿ ಮೂಡದ ಹೊರತು ನೀ ಸಲಹುವುದುಂಟೇ|

ಎನ್ನನೇ ಆವರಿಸಿರುವೇ ಗುರುವೇ ನಿನ್ನ ಹೊರತು ಅನ್ಯರ ಬಜಿಸಿರೆ ಬದುಕುಂಟೆ
ಇಷ್ಟವೋ ಕಷ್ಟವೋ ಎನ್ನ ಸಹಿಸಿ ಮುನಿಸು ತೋರದೇ ಹರಸದಿರೆ ನಾ ಬಾಳುವುದುಂಟೇ|

ನೋಡುಗರ ನೋಟಕೆ ನಾನೂ ಬಕುತನೆಂದು ನಾ ನಟಿಸಿರೆ ನೀ ಎನ್ನ ಒಪ್ಪುವುದುಂಟೇ
ಕಣ್ಣಾಲಿಗಳಲಿ ತುಂಬಿಹ ಬಕುತಿಯ ಹನಿಗಳ ನೀ ಕಾಣದೆ ಎನ್ನ ಕೂಗಿಗೆ ಬೆಲೆಯುಂಟೇ|

ಕಾಣದ ಗುರುವಿಗೆ ಹಂಬಲಿಸಿ ಸೋತಿಹ ಮನಕೆ ನೀ ಒಲಿಯದೇ ಬೇರೆ ದಾರಿಉಂಟೇ
ಸಖರಾಯದೀಶ ಬಕುತರ ಭಗವಂತ ಎನ್ನ ನುಡಿಗಳ ಆಲಿಸದೆ ದೂರಮಾಡುವುದುಂಟೇ|

Wednesday, June 10, 2020

ಗುರುಕಥಾಸಾಗರ - ಜಪತಪಧ್ಯಾನ

ಶಿಷ್ಯ :- ಗುರುಗಳೇ ಜಪ ಎಂದರೇನು ?
ಗುರುನಾಥ:- .......(ಮೌನ)
ಶಿಷ್ಯ :- ಗುರುಗಳೇ ಜಪ ಎಂದರೇನು ? 
ಗುರುನಾಥ:- .......(ಮೌನ)
ಶಿಷ್ಯ :- ಗುರುಗಳೇ ಜಪ ಎಂದರೇನು ?ದಯವಿಟ್ಟು ನನ್ನ ಪ್ರಶ್ನೆಗೆ ಉತ್ತರ ಕೊಡುವಿರಾ?
ಗುರುನಾಥ :- ನಮ್ಮೆಡೆಗೆ ತಿರುಗಿ ಕಣ್ಣು ಮಿಟುಕಿಸುತ್ತಾ "ಹೀಗೆ ಪದೇ ಪದೇ ಕೇಳುತ್ತಿರುವೆಯಲ್ಲಾ ಅದನ್ನೇ ಜಪ ಎನ್ನುವದು" ಮತ್ತೆ ಮುಸುನಗುತ್ತಾ "ಅಂದರೇ .ಯಾವ ವಿಷಯವನ್ನು  ತಿಳಿದುಕೊಳ್ಳಬೇಕೆಂಬ ಇಚ್ಛೆಯಿದ ಅದೇ ವಿಷಯವನ್ನು  ಪದೇ ಪದೇ ಮನಸ್ಸಿಗೆ ತಂದುಕೊಳುತ್ತೇವೋ ಅದರ ಸಲುವಾಗಿ ಸಾಧನವಾಗಿ ಯಾವುದಾದರೊಂದು ಮಂತ್ರವನ್ನೋ ಶ್ಲೋಕವನ್ನೋ ಸಾಧನವಾಗಿಟ್ಟು ಕೊಂಡು ಅದನ್ನೇ  ಪುನಃ ಪುನಃ ಪಠಿಸುವ  ಕ್ರಿಯೆಗೆ ಜಪ ಎನ್ನುತ್ತಾರೆ. 
ಶಿಷ್ಯ :- ಎಷ್ಟು ಕಾಲದ ವರೆಗೆ ಮತ್ತು ಎಷ್ಟು ಸಂಖ್ಯೆ ಜಪ ಮಾಡಬೇಕು ?
ಗುರುನಾಥ :- ಎಲ್ಲಿಯವರೆಗೆ ಮನಸ್ಸು ಹತೋಟಿಗೆ ಬರುವದಿಲ್ಲವೋ ಅಲ್ಲಿಯವರೆಗೆ ಮಾಡಬೇಕು.
ಶಿಷ್ಯ :- ಜಪದ ಮಣಿಗಳನ್ನು ಏತಕ್ಕಾಗಿ ಉಪಯೋಗಿಸುವರು ?
ಗುರುನಾಥ :-ಮತ್ತೆ ಗುರುನಾಥರು ಹಸನ್ಮುಖರಾಗಿ  "ಸಂಕಲ್ಪಸಿದ ಸಂಖ್ಯೆಯ ಲೆಕ್ಕ ತಪ್ಪದಿರಲು ಉಪಯೋಗಿಸುತ್ತಾರೇನೋ , ನನಗೆ ಸರಿಯಾಗಿ ತಿಳಿದಿಲ್ಲ.ನಾನಂತೂ ಜಪ ಮಾಡುವದಿಲ್ಲ " ಎನ್ನುವಾಗ ಅವರ ಹುಸಿನಗೆಯಲ್ಲಿ ಅಡಗಿದ್ದ ಅವರ ಸಹಜ ಸ್ಥಿತಿಯ ಅರಿವು ತಂದುಕೊಳ್ಳುವ  ವಿಫಲ ಪ್ರಯತ್ನ ನಮ್ಮಿಂದ." 
ಗುರುನಾಥ:- ಜಪವು ಆಂತರಿಕ ಕ್ರಿಯೆಯಾಗಿ ಮಾರ್ಪಾಡುವಾಗುವವರೆಗೂ ಸಂಖ್ಯೆ , ಕಾಲ ಇವುಗಳು ಬಾಹ್ಯ ವಿಷಯವಾಗೇ ಇರುತ್ತದೆ. 
ಶಿಷ್ಯ :- ಹೆಚ್ಚು ಸಂಖ್ಯೆಗಳಲ್ಲಿ ಜಪವನ್ನು ಮಾಡುವಲ್ಲಿ ಜಪಮಣಿಯು ಅನುಕೂಲ ಮಾಡುತ್ತದೆ ಅಲ್ಲವೇ ಗುರುಗಳೇ .? 
ಗುರುನಾಥ :  ಮತ್ತೆ ಗುರುನಾಥರು ಹಸನ್ಮುಖರಾಗಿ  " ಆಗಲೇ ಹೇಳಿದೆನಲ್ಲಾ .ಜಪವು ಆಂತರಿಕ ಕ್ರಿಯೆಯಾಗಿ ಮಾರ್ಪಾಡಾಗುವವರೆಗೂ ಸಂಖ್ಯೆ , ಕಾಲ ಇವುಗಳು ಬಾಹ್ಯ ವಿಷಯವಾಗೇ ಇರುತ್ತದೆ. 
ಶಿಷ್ಯ :- ಜಪವು ಫಲಕಾರಿಯಾಗುವ ಸೂಚನೆ ಹೇಗೆ ?
ಗುರ್ನಾಥರು :- " ಇದಪ್ಪಾ ಪ್ರಶ್ನೆ ?"  ನನ್ನ ಕಡೆಗೆ ತಿರುಗಿ " ಏನಯ್ಯಾ ಯಾವಾಗಲೂ  ಮಾವ ..ಮಾವ  ಆಂತ ಜಪ ಮಾಡುತ್ತಿರುತ್ತೀಯಲ್ಲಾ ಇದಕ್ಕೆ ಏನು ಉತ್ತರ ಕೊಡುತ್ತೀಯಾ ? ಎಂದು ಕೇಳಿದಾಗ  ನಾನು " ನಿಮ್ಮ ಒಡನಾಟ" ಎಂಬುದಾಗಿ ಮನದಲ್ಲಿ ಅಂದುಕೊಳ್ಳುವಷ್ಟರಲ್ಲೇ ’ಭಾವೋದ್ರೇಕ ಬೇಡ ,ಸರಿಯಾಗಿ ಹೇಳು" ಎಂದಾಗ ನಿರ್ಮನಸ್ಕನಾಗಿ ಮೌನವಾದೆ.ಗುರುನಾಥರ ಉತ್ತರ ಅತ್ಯಂತ ಮಾರ್ಮಿಕವಾಗಿತ್ತು . 
ಗುರುನಾಥ :- ನೀನು ದಿನಕ್ಕೆ ಎಷ್ಟು ಸಂಖ್ಯೆಗಾಯತ್ರೀ  ಜಪ ಮಾಡುತ್ತೀಯೇ ? 
ಶಿಷ್ಯ :- ಕೊನೇ ಪಕ್ಷ ಒಂದುಸಾವಿರದೆಂಟು. 
ಗುರುನಾಥ :- ಗಾಯತ್ರೀ ಜಪದ ಸಂಕಲ್ಪ ಹೇಳುವೆಯಾ ?
ಶಿಷ್ಯ :- ಮಮೋಪಾತ್ತ .....ಯಥಾ ಶಕ್ತಿ ಗಾಯತ್ರೀ ಮಂತ್ರ ಜಪಂ ಕರಿಷ್ಯೇ .
ಗುರುನಾಥ :- ಯಥಾ ಶಕ್ತಿ ಎಂದು ಸಂಕಲ್ಪ ಮಾಡಿದರೂ  ಸಾವಿರದೆಂಟು ಮಾಡುವಷ್ಟೇ ನಿನ್ನ ಶಕ್ತಿಯ ಪರಿಮಿತಿ ಎಂದಾಯಿತು ಅಲ್ಲವೇ.?  ಮಣಿಯ  ಸಹಾಯದಿಂದಲೇ ಜಪದ ಎಣಿಕೆ ಮಾಡುವೆಯಾ ?  ಮಧ್ಯೆ ಲೆಕ್ಕ ತಪ್ಪುವದಿಲ್ಲವೇ ?
ಶಿಷ್ಯ :- ಹೌದು. ಕೆಲವೊಮ್ಮೆ ಲೆಕ್ಕ ತಪ್ಪುತ್ತದೆ. 
ಗುರುನಾಥರು:-  ಎಷ್ಟು ಜಪ ಮಾಡಿದೆ ಎಂಬುದಾಗಿ ಲೆಕ್ಕ ಮಾಡಿಕೊಳ್ಳಲು ಜಪದ ಮಣಿ ಸಹಾಯವಾಗುತ್ತದೆಯೆಂದು  ನೀನೇ ಹೇಳಿದ ಮಾತು ಸುಳ್ಳಾಯಿತೋ ? ಜಪವನ್ನು ಮಾಡುತ್ತಿರುವಾಗ ಮನಸ್ಸು ಮಂತ್ರದ ಮೇಲೆ ಕೇಂದ್ರೀಕೃತವಾಗಿರುತ್ತದೆಯೋ ಅಥವಾ ಎಣಿಕೆ ಮಾಡುವದರ ಮೇಲೆ ಕೇಂದ್ರೀಕೃತವಾಗಿರುತ್ತದೆಯೋ ? ಮನಸು ಮಂತ್ರದ ಮೇಲಿದ್ದರೇ ಲೆಕ್ಕದ ಅರಿವಿರುವುದಿಲ್ಲ,ಕಾಲದ ಅರಿವೂ ಇರುವದಿಲ್ಲ ,ಇದನ್ನು ಜಪ ಎನ್ನಬಹುದು. ಆದರೇ ಅದೇ ಮನಸ್ಸು ಜಪಮಣಿಯನ್ನು ಎಣಿಸುವದರ ಮೇಲಿದ್ದರೇ ಜಪ ವ್ಯರ್ಥವಾದಂತೆ  ಅಲ್ಲವೇ ? ಅಥವಾ ಜಪಮಾಡುವಾಗ ಮನಸ್ಸು ಮಂತ್ರದ ಮೇಲಿರದೆ ಬೇರೇಯಾವುದನ್ನೋ ಆಲೋಚನೆ ಮಾಡುತ್ತಿದ್ದರೇ ಜಪ ಮಾಡುವ ಕ್ರಿಯೆಯೇ ಕೇವಲ ಕಾಲಹರಣವಾದಂತಲ್ಲವೇ ? 
ಶಿಷ್ಯ :- ಹಾಗಾದರೇ ಜಪವು ಫಲಕಾರಿಯಾಗುತ್ತಿದೆ ಎಂಬ ಸೂಚನೆ ಹೇಗೆ ಸಿಗುತ್ತದೆ ?
ಗುರುನಾಥರು :-  ಜಪವನ್ನು ಮಾಡುತ್ತಿರುವಾಗ ಕಾಲದ ಅರಿವು ಇಲ್ಲವಾಗಬೇಕು ಅರ್ಥಾತ್ ಮನಸ್ಸು ಯಾವಾಗ ಆಚೀಚೇ ಅಲ್ಲಾಡದೇ ಒಂದೇ ವಿಷಯದಲ್ಲಿ ಕೇಂದ್ರೀಕೃತವಾಗುತ್ತದೆಯೋ ಆಗ  ಕಾಲದ ಅರಿವು ಉಂಟಗುವದಿಲ್ಲ.ಜಪದ ನಂತರ ಮನಸ್ಸು ಅತ್ಯಂತ ನಿರ್ಮಲವಾಗಿ ಶಾಂತವಾಗಿರುತ್ತದೆ. ಇದು ಜಪ ಫಲಕಾರಿಯಾಗುತ್ತಿರುವ ಸೂಚನೆ.
ಶಿಷ್ಯ :- ಜಪವು ಫಲಕಾರಿಯಾಗುತ್ತಿಲ್ಲ ಎಂಬುದಾಗಿ ಹೇಗೆ ತಿಳಿಯುವದು?
ಗುರುನಾಥ : ಮೇಲೆ ಹೇಳಿದ ಅನುಭವ ಆಗದಿದ್ದರೇ ಜಪವು ವ್ಯರ್ಥವೇ ಎಂಬುದಾಗಿ ತಿಳಿಯಬೇಕು.ಲೆಕ್ಕ ತಪ್ಪುವದು ಅರ್ಥಾತ್ ಮನಸ್ಸು ಬಹಿರ್ಮುಖವಾಗುವದು ,ನಾನು ಇವತ್ತು ಇಷ್ಟು ಜಪ ಮಾಡಿದೆ ಎಂದು ಹೆಮ್ಮೆ ಪಟ್ಟುಕೊಳ್ಳುವದು , ಜಪದ ಮಣಿಯನ್ನು ಜೋಪಾನವಾಗಿ ಇಟ್ಟುಕೊಳ್ಳ ಬೇಕು ಎನ್ನುವದು, ಎಲ್ಲರಿಗೂ ಕಾಣುವಂತೆ ಜಪದಮಣಿಯನ್ನು ಇಟ್ಟುಕೊಂಡು ಜಪಮಾಡುವದು , ಇವೆಲ್ಲ ಜಪಮಣಿಯ *ಸೈಡ್  ಎಫೆಕ್ಟ್* ಕಣಯ್ಯಾ ಎನ್ನುತ್ತಾ ಮತ್ತೆ ಮುಗುಳ್ನಕ್ಕರು. 
ಇದಕ್ಕೆ ವ್ಯತಿರಿಕ್ತವಾಗಿ ಜಪದ ಮಣಿಗೇ ಬೆಳ್ಳಿಯ ದಾರ ಹಾಕಿಸಬೇಕು , ಚಿನ್ನದ ಮಣಿ ಹಾಕಿಸಬೇಕೆದು ಮುಂತಾಗಿ ಪ್ರಾಪಂಚಿಕ ವಿಷಯದ ಕಡೆಗೆ ಮನಸ್ಸು ಎಳೆದರೇ ಜಪದ ಫಲ ವಿಪರೀತವೆಂದೂ  ತಿಳಿಯಬೇಕು.ಎಲ್ಲರಿಗೂ ಕಾಣಿಸುವಂತೆ ಜಪಮಣಿ ಕೈಯ್ಯಲ್ಲಿ ಇಟ್ಟುಕೊಂಡು ಬಾಯಲ್ಲಿ ಪಿಟಿ ಪಿಟಿ ಜಪಮಾಡುವದಂತೂ ಕೇವಲ ಹೆಗ್ಗಳಿಕೆಗೇ ಹೊರತು ಅದರಿಂದ ಪರಮಾರ್ಥ ಸಾಧನವೇನೂ ಸಾಧ್ಯವಿಲ್ಲ. ಜಪಮಣಿ ಕೇವಲ ಕ್ಷಣಿಕ ಬಾಹ್ಯ ಸಾಧನವಷ್ಟೇ , ಇದರ ಉಪಯೋಗ ಜಪಸಂಖ್ಯೆಯ ಲೆಕ್ಕಾಚಾರಕ್ಕೆ ಹೊರತು ಆಂತರಿಕ ಸಾಧನೆಗೆ ಇದರ ಆತ್ಯಂತಿಕ ಉಪಯೋಗವಿಲ್ಲವಷ್ಟೇ . ಜಪಕ್ರಿಯೆ ಅಂತರ್ಮುಖರಾಗುವದಕ್ಕೆ ಸಹಾಯವಾಗಬೇಕು . ಏಕೆಂದರೇ ಅಂತರ್ಮುಖರಾದವರಿಗೆ ಜಗತ್ತಿನ ಪರಿವೆಯೇ ಬೇಕಿರುವದಿಲ್ಲ , ಅಂಥವರಿಗೆ ಜಪದ ಮಣಿಯಿಂದ ಆಗಬೇಕಾದುದೇನು? 

ಶಿಷ್ಯ : ಹಾಗಾದರೇ ಜಪದ ಮಣಿ ಫಲಕಾರಿಯಾಗುತ್ತದೆ ಎಂದು ಹೇಗೆ ತಿಳಿಯುವದು ? 
ಗುರುನಾಥರು :- ಜಪದ ಮಣಿಯ ಅವಶ್ಯಕತೆಯೇ ಇಲ್ಲವಾಗಿ ಹೆಚ್ಚುಹೆಚ್ಚು ಜಪಮಾಡಬೇಕು ಎನ್ನುವ ಹಂಬಲ ಉಂಟಾದಕೂಡಲೇ ಜಪದ ಮಣಿಯ ಅವಶ್ಯಕತೆಯು ಇಲ್ಲವಾಗುವದು.ಇದೇ ಅದರ ಪ್ರಯೋಜನ. ಸಾಮಾನ್ಯವಾಗಿ ಮನಸ್ಸಿಗೆ ಸಾವಿರ ಕಾಲುಗಳಿವೆ. ಒಂದೊಂದು ಬಾರಿ ಒಂದೊಂದು ಕಡೆ ನಮಗರಿವಿಲ್ಲದೇ ಚಲಿಸುತ್ತಿರುತ್ತದೆ.ಅದನ್ನು ಹಿಡಿದು ಕಟ್ಟು ಹಾಕಬೇಕು.ಮಂತ್ರದಮೇಲಿನ ಗಮನ ಮತ್ತು ಎಣಿಕೆಯ ಮೇಲಿನ ಗಮನ ಮನಸ್ಸಿನ ಮಿಕ್ಕೆಲ್ಲಾ ಕಾಲುಗಳನ್ನು ಕತ್ತರಿಸಿ ಕೇವಲ ದ್ವಿಪದಿಯನ್ನಾಗಿ ಮಾಡುತ್ತದೆ.ಇಷ್ಟರ ಮಟ್ಟಿಗೆ ಮಾತ್ರ ಜಪದ ಮಣಿ ಸಹಾಯ ಮಾಡುತ್ತದೆ. ಹೀಗೆ ಸಾಧನೆ ಮಾಡುತ್ತಾ ಮಾಡುತ್ತಾ ಮನಸ್ಸು" ಜಪದ ಮಣಿ " ಎಂಬ ಎರಡನೆಯ ಕಾಲನ್ನೂ ಕಳೆದುಕೊಂಡು ಕೇವಲ ಮಂತ್ರದ ಮೇಲೊಂದೇ ಕೇಂದ್ರೀಕೃತವಾಗಿ ಏಕಪದಿಯಾಗುತ್ತದೆ. ಈ ರೀತಿಯಾಗಿ ಮಂತ್ರದಲ್ಲೇ ಲೀನವಾಗಿ ಅಂತರ್ಮುಖಿಯಾದಾಗ ಇದ್ದ ಇನ್ನೊಂದೇ ಕಾಲನ್ನೂ ಅರ್ಥಾತ್ ಮನಸ್ಸನ್ನು ಕಳೆದುಕೊಂಡು ಕೇವಲ ಸಾಕ್ಷಿಯಾಗುತ್ತಾನೆ.ಇದುವೇ ಜಪದ ಆತ್ಯಂತಿಕ ಫಲ.

ಜೈ ಗುರುದೇವ ದತ್ತ.
ಹರಿ ಓಮ್ ತತ್ ಸತ್ 
ಸತ್ಯಪ್ರಕಾಶ.

Tuesday, June 9, 2020

ಎಲ್ಲೋ ಕಳೆದು ಹೋಗುತಿಹ ಮನವನು - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಎಲ್ಲೋ ಕಳೆದು ಹೋಗುತಿಹ ಮನವನು ನಿನ್ನ ನೆನೆವ ಬುದ್ದಿ ನೀಡಿ ಸರಿಮಾಡೋ
ಇನ್ನ್ಯಾರೋ ಬದುಕಿನಲಿ ಮನವ ತೂರಿಸದೆ ಎನ್ನ ಮನವ ಸರಿಮಾಡೋ ಗುರುನಾಥ.

ಬಕುತಿಯೆಂದರೆ ಅರಿಯದ ಮೂಡತ್ಮ ನಾನು ನಿನ್ನ ಭಜಿಸುವ ಬಗೆಯೆಂತೋ
ನಿಜ ಭಕುತಿ ತೋರುವವರ ಸಂಗನೀಡಿ ನಿನ್ನ ಸೇರುವ ಪರಿಯ ತೋರೋ|

ಬರೀ ಮಾತಾಗದೇ ಒಳ ಮನದಿ ಶುದ್ಧ ಭಾವವ ತುಂಬಿ ಹರಸೋ ಗುರುವೇ
ಕಳ್ಳ ಮನದ ಮಳ್ಳ ಯೋಚನೆಗಳ ಬಹಿರಂಗ ಪಡಿಸಿ ಬುದ್ದಿ ಕಲಿಸೋ ದೊರೆಯೇ|

ಉಳ್ಳವನಂತೆ ನಟಿಸಿ ತೋರಿಕೆಯ ಬಕುತನ ನಟನೆ ಸಾಕುಮಾಡೋ ಪ್ರಭುವೇ
ಡಂಬತನದ ಬದುಕು ಸಾಕು ನಿನ್ನ ಇರುವಿನ ಅರಿವು ಬೇಕೆನೆಗೆ ಕರುಣಿಸೋ ಗುರುವೇ|

ಮಾಡುವ ಕೆಲಸದಿ ನೋಡುವ ನೋಟದಿ ಆಡುವ ಮಾತಲಿ ನಿನ್ನ ನಾಮವಿರಲಿ
ಎಲ್ಲೇ ಇರಲಿ ಹೇಗೇ ಇರಲಿ ನಾನಿರುವ ಭೂಮಿ ಸಖರಾಯಪುರವಾಗಿರಲಿ ದೊರೆಯೇ|

Monday, May 25, 2020

ನಾನು ಬಕುತನೂ ಅಲ್ಲ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ನಾನು ಬಕುತನೂ ಅಲ್ಲ ನಿನ್ನ ಬೇಡುವ ಪರಿಯ ಅರಿತವನೂ ಅಲ್ಲ
ಬರೀ ಮಾತುಗಳಲಿ ನಿನ್ನ ಪೂಜಿಸಿ ನಿಜ ಬಕುತನೆಂದೆನಲ್ಲ ಗುರುವೇ|

ಮನಸಿನಾಳದ ಭಾವನೆಗಳ ಹೊಡೆದಾಟದಿ ಮಂಕುಹಿಡಿದು ನಿನ್ನ ಬೇಡುವುದೆಂತು
ಅಡುವುದೊಂದು ಮಾಡುವುದೊಂದು ಮಾಡುತ ನಿನ್ನ ಬೇಡುವುದೆಂತೋ|

ಸರಿ ತಪ್ಪುಗಳ ಅರಿವಿದ್ದು ಬದುಕು ನಡೆಸುವ ಬರದಲಿ ಎಡುವತಿಹೆನೋ
ಮತ್ತೆ ಮತ್ತೆ ಎನ್ನ ಮನ್ನಿಸೆನುತ ನಿನ್ನ ಬೇಡುವ ನಾಟಕವಾಡುತ ನಿಂತಿಹೆನೋ|

ಧರ್ಮದ ದಾರಿಯದು ಬಲು ದುಸ್ತರವು ನಾನೂ ನಡೆವೆನೆ0ಬ ಹುಂಬಿನಲಿ ಕಾಲಿಟ್ಟೆನೋ
ಮುಗ್ಗರಿಸಿ ಬಿದ್ದು ಕರ್ಮದ ಕೂಪದೊಳು ಸಿಲುಕಿ ನಿನ್ನ ಮೊರೆ ಹೋಗುವೆನೋ|

ಕಾಮ ಕಾಂಚಾಣದ ಮೋಹವೆಂಬ ಮಾಯಾ ಜಾಲದ ಬಲೆಗೆ ಸಿಲುಕಿದ ಹುಳುವಾದೆನೋ
ಎನ್ನ ಉದ್ಧರಿಸಿ ನಿನ್ನ ನಾಮದಲೇ ಎನ್ನ ಉಸಿರಿರಿಸಿ ಸಲಹೋ ಸಖರಾಯಧೀಶನೇ|

Sunday, May 17, 2020

ಎಲ್ಲಿ ನೋಡಲಿ ಗುರುವೇ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಎಲ್ಲಿ ನೋಡಲಿ ಗುರುವೇ ಸದಾ ನಿನ್ನ ಇರುವನ್ನೇ ಕಾಣುತಿಹೆನು
ಏನಾದರೂ ಕೇಳುತಿಹನೆಂದರೆ ಪ್ರಭುವೇ ಅದು ನಿನ್ನ ನಾಮವ ಹೊರತು ಬೇರೇನನು |

ಕಣ್ಣು ಮುಚ್ಚಿದೊಡೆ ನಿನ್ನ ಬೃಂದಾವನದ ಸುಂದರ ಪರಿಸರವು ಎನ್ನ ಸೆಳೆವುದು
ಮೈ ಬಾಗಿಸಿ ನಮಿಸಿರೆ ನಿನ್ನ ಚರಣಾರವಿಂದವೇ ಎನಗೆ  ಗೋಚರಿಸುವುದು|

ನಿನ್ನ ಮಧುರ ಮಾತುಗಳು ವೇದಗಳ ದ್ವನಿಯಂತೆ ಬಲ್ಲವರು ಹೇಳುತಿಹರು
ನೀನಾಡುತ್ತಿದ್ದ ಮಾತುಗಳು ಮಹಾದೇವನ ಅದೇಶವೆಂಬಂತೆ ನಂಬಿಹರು|

ಒಳಗೊಂದು ಹೊರಗೊಂದು ಭಾವವ ನೀ ಸಹಿಸದವನೆಂದು ಬಕುತರು ಅರಿತಿದ್ದರು
ನುಡಿದೆಯಂದರೆ ಅಂತಃಕರಣವ ಮುಟ್ಟಿ ಬದುಕು ಬದಲಾಗುವುದ ಕಂಡರೋ|

ಭವರೋಗ ವೈದ್ಯನು ನೀನಂತೆ ನಿನ್ನ ಕಾಣದೇ ಬದುಕು ಬರಡಾಯಿತು ಎನ್ನದು
ನಿನ್ನ ಚರಿತವ ಕೇಳಿ ಪಾಡಿ ಬದುಕು ಕಟ್ಟಿ ಮುನ್ನೆಡವ ಆಸೆ ನನ್ನದೋ|

ನಿಜ ಬಕುತರ ಸಾಲಿನಲ್ಲಿ ನಾನಿಲ್ಲ ಎನ್ನ ಮನ್ನಿಸಿ ಮುನಿಸು ತೋರದಿರೋ
ಎನ್ನಂತರಂಗದಲಿ ನೆಲೆ ನಿಲ್ಲೋ ಪ್ರಭುವೇ ಸಖರಾಯಪುರದ ಸಂತನೋ|

ಸಕಲವೂ ಗುರುವೇ - ರಚನೆ : ಶ್ರೀಮತಿ. ಶೈಲಜಾ ಕುಮಾರ್, ಮೈಸೂರು

!! *ಸಕಲವೂ ಗುರುವೇ* !!

ನಮ್ಮೊಳು ನೀವಿರಲು 
ನಿಮ್ಮೊಳು ಜಗವಿರಲು
ಭಯದಾ ಮಾತೇಕೆ !! ೧ !!

ಅರಿವನು ನೀ ನೀಡಲು
ಅಕ್ಷರವ ನೀ ಬರೆಸಲು
ಅಜ್ಞಾನದಾ ಭ್ರಮೆಯೇಕೆ !! ೨ !!

ಮಾತನು ನೀ ನುಡಿಸಲು
ಮೌನದಿ ನೀ ಪೊರೆಯಲು
ಮಾಯೆಯಾ ಮುನಿಸೇಕೆ !! ೩ !!

ಉಸಿರಲಿ ನಿನ್ನ ನಾಮವಿರಲು
ಅಭಯವ ನೀ ನೀಡಲು
ಬದುಕಲಿ ಬೇರೆ ಚಿಂತೆಯೇಕೆ !! ೪ !!

!! ಸರ್ವದಾ ಸದ್ಗುರುನಾಥೋ ವಿಜಯತೇ !!
೧೫-೫-೨೦೨೦

Saturday, May 16, 2020

ಕಾಣದಾಗಿದೆ ಬದುಕು ನಡೆಸುವ ದಾರಿ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಕಾಣದಾಗಿದೆ ಬದುಕು ನಡೆಸುವ ದಾರಿ ನಿನ್ನ ನಾಮ ಮರೆತು ಗುರುವೇ
ಭಾರವಾಗಿದೆ ಮನಸು ನಿನ್ನ ನಾಮ ಭಜಿಸದೆ ಮನ್ನಿಸೋ  ಸಖರಾಯಧೀಶ  ಪ್ರಭುವೇ|  

ಎಷ್ಟು ಬೇಡುವುದೋ ಗುರುವೇ ಎನ್ನ ಮನದ ದುಗುಡ ಅರಿಯಲಾರೆಯ
ಇನ್ನಷ್ಟು ಕಷ್ಟ ಕೊಡೋ ದೊರೆಯೇ ನಿನ್ನ ಮರೆತು ಬದುಕುವೆನೆಂದೆಯಾ|

ನಿನ್ನ ಒಲಿಸಿ ಕೊಳ್ಳಲು ಅಂತರಂಗ ಬಹಿರಂಗ ಶುದ್ದಿ ಬೇಕೆನ್ನುವರೋ
ನೀ ಎನ್ನ ನೋಡಿ ಹರಸದೆ ಇನ್ನೆಲ್ಲಿಯ ಶುದ್ಧ ಮನವ ಹುಡುಕಲೋ ಪ್ರಭುವೇ|

ಇಡುವ ಹೆಜ್ಜೆಯದು ತಪ್ಪಾಗಿದ್ದರೆ ಮುಂದಿನ ದಾರಿ ತೋರದೇ ನಿಲ್ಲಿಸೆನ್ನನು
ಎಲ್ಲಾ ಮನದ ಆಟವೆನ್ನುತ ಕಪಟ ವೇಷ ಧರಿಸಿ ನಿನ್ನ ಭಜಿಸುವ ನಾಟಕವೇನೋ|

ಲೌಕಿಕದ ಆಸೆಯ ಬಲೆಯೊಳು ಮನವು ಸಿಲುಕಿ ನಿನ್ನ ಬೇಡುವುದು ಸರಿಯೇ ಗುರುವೇ
ಇಷ್ಟು ದಿನ ಎನ್ನ ದೂರವಿಟ್ಟರೂ ನಿನ್ನ ಮನ ಕರಗಿ ಸಲಹ ಬಾರದೇ ದೊರೆಯೇ|

ಸಖರಾಯಪುರದ ಅರಸ ನೀನು ನಿನ್ನರಸಿ ಓಡೋಡಿ ಬಂದ ಪಾಮರ ನಾನು
ಬೃಂದಾವನದ  ಆ ತಂಪು ನೆರಳು ಮನಕೆ ಶಾಂತಿ ನೀಡಿ ಹರಸ ಬಾರದೇನೋ|

Sunday, April 12, 2020

ಸುಮ್ಮನಿರಲಾರೆ ನಾನು ಗುರುವೇ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಸುಮ್ಮನಿರಲಾರೆ ನಾನು ಗುರುವೇ ನಿನ್ನನು ನೆನೆಯದಲೇ
ಮೌನ ತಾಳಲಾರೆ ಪ್ರಭುವೇ ನಿನ್ನ ನಾಮವನ ಭಜಿಸದೆಲೆ|

ನಿತ್ಯ ಗಳಿಸುವ ಕೂಳಿಗಾಗಿ ನಿತ್ಯ ಬದುಕಿನ ಅಸರೆಗಾಗಿ  ನಿನ್ನ ಕೂಗುವೆನು
ನಿತ್ಯ  ಬಾಳ ಪಗಡೆಯಾಟದಲಿ ನಿನ್ನ ಬೇಡುತ ನಡೆಯ ನಡೆಸುವೆನು  |

ನಿನ್ನ ನೆನಪು ನೀಡುವ ಆ ಸಂತಸದ ಕ್ಷಣವ ಎಂದೂ ಮರೆಯಲಾರೆನೋ
ನೀನಿಲ್ಲದ ಗಳಿಗೆಯ ಊಹಿಸಿ ಉಸಿರು ನಿಂತ ಭಾವಾದಲಿ ಬೆವೆತು ಹೋದೆನೋ| 

ನಿನ್ನ ಹಿತನುಡಿಯ ಅಲಿಸದಲೇ ಈ ಮನವು ಮರುಗಿ ಕೂಗಿದೆಯೋ
ನಿನ್ನ ಚಾರಣ ಸೇವೆಯ ಬಯಸಿ ಈ ಜೀವವು ಬಲು ಪರಿತಪಿಸಿದೆಯೋ|

ನಿನ್ನ ವೇದಸಾರ ತುಂಬಿದ ಮಾತು ಕೇಳುವ ಯೋಗವು ಎನಗೆ ಬರಲಿಲ್ಲವೋ
ನಿನ್ನ ಕಂಡು ಪಾದಪಿಡಿದು ನಿನ್ನೊಲುಮೆ ಪಡೆಯುವ ಭಾಗ್ಯ ಪಡೆಯಲಿಲ್ಲವೋ|

ಸಖರಾಯದೀಶನೆ ಕನಿಕರಿಸಿ ಈ ಪಾಮರನ ಹರಸೋ  ದೊರೆಯೇ
ನಿನ್ನ  ಒಲುಮೆಯ ನುಡಿ ಕೇಳುವ ಭಾಗ್ಯ ಕನಸಲಿ ಬಂದು ಪೂರೈಸೋ ದೊರೆಯೇ|

Sunday, April 5, 2020

ಹಚ್ಚಿದೆವು ದೀಪವ ಕತ್ತಲೆಯ ದೂರ ತಳ್ಳಿ ಮನವ ಬೆಳಗಿಸೆಂದು - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಹಚ್ಚಿದೆವು ದೀಪವ ಕತ್ತಲೆಯ ದೂರ ತಳ್ಳಿ ಮನವ ಬೆಳಗಿಸೆಂದು 
ತಮವ ಕಳೆದು ಜ್ಞಾನವ ನೀಡಿ ಅರೋಗ್ಯವ ಕರಿಣಿಸೆಂದು ಗುರುನಾಥ|

ಉಸಿರಾಡುವ ಗಾಳಿಯಲೂ ತುಂಬಿಹುದು ವಿಷವು ಏನೂ ದಾರಿ ತೋರದು
ಮನುಜ ಮನುಜನ ಒಡನಾಟವೂ ದುಸ್ತರವಾಗಿ ಗುರುವೇ ಬದುಕು ನರಕವಾಗಿಹುದು |

ಸದಾ ನಿನ್ನ ನೆನೆಯುತ ಸಂತಸ ಕಂಡ ಮನಗಳು ಅನುಮಾನದ ಗೂಡಾಗಿದೆ
ಉಸಿರು ತಾಕದಂತೆ ಕಂಡರೂ ಕಾಣದಂತೆ ಬದುಕು ನಡೆಸುತಿಹೆವು ಭಗವಂತ|

ಕಂಡೂ ಕೇಳರಿಯದ ಈ ಭಯವು ನೀ ಜನಿಸಿದ ಭುವಿಗೇಕೆ ಬಂತು ಗುರುವೇ
ಮದ್ದಿಲ್ಲದ ಈ ಪೀಡೆಯಿಂದ ನಿನ್ನ ಬಕುತರಿರುವ ಈ ಭುವಿಯ ಕಾಪಾಡೋ ದೊರೆಯೇ|

ತಪ್ಪು ನಡೆದಿಹುದು ಅರಿವಿದ್ದರೂ ಅನವರತ ನಿನ್ನ ನ0ಬಿಹೆವು ಪೊರೆಯೋ ಎಮ್ಮನು
ಬೇಡುವುದೊಂದೇ ನಮ್ಮ ಬದುಕು ಭವರೋಗ ವೈದ್ಯನು ನೀನು ಸಲಹೋ ಎಲ್ಲರನು|

Thursday, March 26, 2020

ನಿನ್ನಲ್ಲೊಂದು ಅರಿಕೆಯು ನನ್ನದು ಗುರುನಾಥನೇ ಕೇಳುವೆಯಾ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ನಿನ್ನಲ್ಲೊಂದು ಅರಿಕೆಯು ನನ್ನದು ಗುರುನಾಥನೇ ಕೇಳುವೆಯಾ
ಮಹಾಮಾರಿಯೊಂದು ಅವರಿಸಿಹುದು ನಿನ್ನ ಬಕುತರಿರುವ ಜಗದಲಿಂದು|

ಎಲ್ಲಾ ನಾನೆಂಬ ಬಾವದೊಳು ಬದುಕು ನಡೆಸುವ ಮನುಜಗೆ ಪಾಠವೇ ಇದು
ಇನ್ನೂ ಬೇಕೆಂಬ ದುರಾಸೆಯು ಕರ್ಮ ಕೂಪಕೆ ದಾರಿ ತೋರಿಹಿದೋ|

ಗುರುಹಿರಿಯರ ಸಾದುಸಂತರ ಸೇವೆ ಸಲ್ಲಿಸದ ಮೋಜು ಮಸ್ತಿಗೆ ಇದು ಉತ್ತರವೇ
ಎಲ್ಲಾ ಪಡೆವೆನೆಂಬ ಧಾವಂತದ ಓಟಕೆ ನಿನ್ನ ಮೌನದ ಕಡಿವಾಣವೇ|

ಮಲಿನ ಮನದ ದುರಂಹಕಾರದ ನಡೆ ನುಡಿಗೆ ಮನುಜ ತೆರುತಿರುವ ದಂಡವೇ
ಮಾತೆ ಭಗಿನಿಯರ ನೋವು ನಿಟ್ಟಿಸುರಿಗೆ ಲೋಕ ಕೊಡುತಿಹ ತೆರಿಗೆಯೇ|

ಗುರುವೇ ನಿನ್ನಲೊಂದು ಮನವಿಯು ಎಲ್ಲರನು ಮನ್ನಿಸಿ ಪೊರೆಯೋ  ದೊರೆಯೇ
ನಿನ್ನ ಮಕ್ಕಳ ತಪ್ಪು ಒಪ್ಪುಗಳ ಗಣನೆ ಮಾಡದೆ ಎಚ್ಚರಿಕೆ ನೀಡಿ ಸಲಹೋ ಪ್ರಭುವೇ|

Thursday, March 12, 2020

ಗುರುನಾಥ ಒಲಿದರೆಂದರೆ ಯಾತರ ಭಯವೋ ಇನ್ಯಾತರ ಭಯವೋ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಗುರುನಾಥ ಒಲಿದರೆಂದರೆ ಯಾತರ ಭಯವೋ ಇನ್ಯಾತರ ಭಯವೋ
ಸದ್ಗುರು ಹರಸಿದೆನೆಂದರೆ ಬದುಕೆಲ್ಲಾ ಸುಂದರವೋ ಬಲು ಸುಂದರವೋ|

ಬೇಡುವ ಬಕುತನ ಮನವನು ಅರಿತು ದುರಿತಗಳ ದೂರ ಮಾಡುವ ಗುರುನಾಥ
ಮನದಲೇ ನೆನೆದು ಬಕುತಿಯ ತೋರಿರೆ ದಾರಿಯ ತೋರುವ ಗುರುನಾಥ|

ಸಂತನ ಸನಿಹದಿ ಮಧುರ ನುಡಿಗಳ ಅಲಿಸೆ ದೊರೆವುದು ಮನಕೆ ನೆಮ್ಮದಿಯು
ಬಿರುನುಡಿಯನಾಡದೆ ಸಲಹುವ ತಂದೆಯು ಸಕರಾಯಪುರದ ನಮ್ಮ ಗುರುವು|

ತುಪ್ಪದ ದೀಪಕೆ ತಾ ಒಲಿದು ಬಕುತನ ಕರುಣಿಸೆ ಹರಸುವ ಸಖರಾಯದೀಶನೋ
ಆತಂಕವ ದೂರಮಾಡುತ ಮನದ ಭಯವ ನಾಶಮಾಡುವ ಮಹಾದೇವನೋ|

ಮನದ ಭಾವಗಳ ಮಲಿನ ತೊಳೆಯುತ ಶುದ್ಧ ಅಂತಃಕರಣ ಕರುಣಿಸುವ ಗುರುದೇವ
ಬೃಂದಾವನ ಸನಿಹ ನಿಜ ಬಕುತಿಯ ತೋರಲು ಹರಸುವ ಸಖರಾಯಪುರದ ಮಹಾದೇವ|

ಏನು ಬೇಡಲಿ ಗುರುವೇ ಹೇಗೆ ಬಜಿಸಲಿ ಪ್ರಭುವೇ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಏನು ಬೇಡಲಿ ಗುರುವೇ ಹೇಗೆ ಬಜಿಸಲಿ ಪ್ರಭುವೇ
ಎನ್ನ ಕಡೆಗಣಿಸದೇ ಸಲಹು ಎನ್ನಗೆ ಮತಿ ನೀಡಿ ಹರಸು ಎನ್ನಲೇ|

ನಾನು ಬೇಡುವ ಪರಿಯೆಲ್ಲಾ ನಿನ್ನ ಪಡೆಯಲು ಸೋತಿತು ದೊರೆಯೇ
ಇನ್ನಾದರೂ ನಿಜ ಅರಿವ ನೀಡಿ ಸರಿ ದಾರಿಯಲಿ ನಡೆಸಿ ಕನಿಕರಿಸೋ ಗುರುವೇ|

ಅಂಧಕಾರವೇ ತುಂಬಿಹ ಮನದ ಒಳ ಹೊರಗು ಶುದ್ಧ ಮಾಡೋ ಪ್ರಭುವೇ
ಜ್ಞಾನಬೆಳಕಿನ ಕಿಡಿಯ ಹೊತ್ತಿಸಿ ಹೃದಯದ ಮಲಿನವ ನಾಶ ಗೊಳಿಸೋ ಸದ್ಗುರುವೆ|

ಎಲ್ಲರನು ಸಲಹುವ ತಂದೆ ನೀನು ಈ ಪಾಮರನ ದೂರ ತಳ್ಳಬೇಡ ಗುರುವೇ
ಕಳ್ಳ ಮನಸಿನ ಸುಳ್ಳು ನುಡಿಗಳೇ ಬದುಕೆಂದು ನಂಬಿಹಾ ನನ್ನ  ತಿದ್ದಿ ಉದ್ಧರಿಸೋ ದೊರೆಯೇ|

ನಿನ್ನ ಕಾಣುವ ಹಂಬಲ ಯಾಕೋ ನಾನರಿಯೆ ಸ್ವಾರ್ಥವಿರಬಹುದು ನಾ ತಿಳಿಯೇ
ನಿನ್ನ ನೆನೆವ ಮನಸೇಕೋ ಮೂಡಿತು ಅದು ನಿನ್ನ ಲೀಲೆಯ ಪರಿಯಲ್ಲವೇ ದೊರೆಯೇ|

Tuesday, March 10, 2020

ಸಕಲಗ್ರಹಬಲ ನೀನೇ ಸಖರಾಯಾಧೀಶ - ಶ್ರೀಮತಿ. ಶೈಲಜಾ ಕುಮಾರ್, ಮೈಸೂರು

ಸಕಲಗ್ರಹಬಲ ನೀನೇ ಸಖರಾಯಾಧೀಶ
ನಿನ್ನ ನಂಬಿದವಗೆ ಕಷ್ಟವೆಲ್ಲಿದೆ ಅಮೃತಪುರೀಶ !

ದುರಿತವ ಸುಡುವ ಸೂರ್ಯನು ನೀನು
ಮಂಗಳವ ತರುವ ಮಂಗಳವೂ ನೀನು !
ಬುದ್ಧಿಯನು ಪ್ರಚೋದಿಪ ಬುಧನೇ ನೀನು
ಮನದಲಿ ಚೈತನ್ಯ ನೀಡುವ ಗುರುವೇ ನೀನು !! ೧!!

ಮನೋಮಯದಲಿ ಹೊಳೆವ ಶುಕ್ರನೇ ನೀನು 
ಕರ್ಮಗಳ ಕಳೆಯುವ ಶನಿಗ್ರಹವೂ ನೀನೇ !
ದೀನನಿಗುಣಿಸಿಹ ಶಶಿಯ ಕಿರಣವೂ ನೀನು
ಮನದ ಛಾಯೆಯ ಶುದ್ಧಿಗೈವ ರಾಹುಕೇತುವೂ ನೀನು !! ೨ !!

ಚಿತ್ತಾಕಾಶದಿ ಮಿನುಗುವ ತಾರೆಯೂ ನೀನು 
ಹೃನ್ಮಂದಿರದಿ ಬೆಳಗುವ ಅರುಣನೂ ನೀನೇ !
ಎಮ್ಮ ಜೀವನ ಬೆಳಗುವ ತೇಜೋರಾಶಿಯೂ ನೀನು 
ಗ್ರಹರಾಶಿಯನು ಆಳ್ವ ಪರಂಜ್ಯೋತಿಯೇ ನೀನು !! ೩ !!

!! ಸರ್ವದಾ ಸದ್ಗುರುನಾಥೋ ವಿಜಯತೇ !!
೯-೩-೨೦೨೦

Thursday, February 27, 2020

ದತ್ತದೇವ ಶರಣಂ ಗುರು ದತ್ತದೇವ ಶರಣಂ - ರಚನೆ : ಶ್ರೀಮತಿ. ಶೈಲಜಾ ಕುಮಾರ್, ಮೈಸೂರು

ದತ್ತದೇವ ಶರಣಂ 
ಗುರು ದತ್ತದೇವ ಶರಣಂ
ಪ್ರಭು ದತ್ತದೇವ ಶರಣಂ l

ಅತ್ರಿತಪೋವರದಾತ
ಅನುಸೂಯ ಸುಖದಾತ l
ಅಗಣಿತವರದಾತ
ದತ್ತ ಪ್ರಭೋ ವಿಶ್ವವಿಧಾತ ll ೧ ll

ವಿಭೂತಿಭೂಷಿತ ಗಾತ್ರ
ಮನೋಹರಸ್ಮಿತ ನೇತ್ರ l
ಸಕಲಕಲಾಗಮ ಸೂತ್ರ
ದತ್ತ ತವ ದಿವ್ಯಮಂತ್ರ ll ೨ ll

ದಂಡಕಮಂಡಲುಧಾರಿ
ಭಕ್ತಮಾನಸಸಂಚಾರಿ
ಅಮಿತಲೀಲಾವಿಹಾರಿ
ದತ್ತ ಪ್ರಭೋ ಮನೋಹಾರಿ ll ೩ ll

!! ಸರ್ವದಾ ಸದ್ಗುರುನಾಥೋ ವಿಜಯತೇ !!
೨೭-೨-೨೦೨೦

ಮನತುಂಬಿ ಹಾಡಿದಂತೆ ನಟಿಸುತ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಮನತುಂಬಿ ಹಾಡಿದಂತೆ ನಟಿಸುತ ಮಲಿನ ಭಾವದಿ ನಿನ್ನ ಬೇಡಿ ಫಲವುಂಟೇನು
ಓಡುತಿಹ ಆಸೆಗಳ ಬೆನ್ನತ್ತಿ ಭಜಿಸಿ ಕರುಣಿಸೆಂದರೆ  ಗುರು ಒಪ್ಪುವನೇನು|

ಯಾರೂ ತೋರದ ಭಕುತಿ ನಾ ತೋರುವನೆಂಬ ಆತುರದಿ  ಮುಗ್ಗರಿಸಿ ಬಿದ್ದೆನೇನೋ
ಮರುಳ ಮಾತಿನ ಪದವನು ಜೋಡಿಸುತ  ಶುದ್ಧ ಬಕುತಿಗೆ ವಂಚಿಸಿ ಸೋತು ಹೋದೆನೇನೋ|

ನೀ ಕರುಣಿಸೆಂದು ಬೇಡುತ ಮನಸಿನ ದುರಾಸೆ ಮರೆಮಾಚದೆ ನೀ ಹರುಸುವಿಯೇನು
ಅನ್ಯರ ಹಿತ ಕಾಯದೆ ಸ್ವಾರ್ಥದಲಿ ಬದುಕು ನಡೆಸಿರೆ ನೀ ನನ್ನ ಒಪ್ಪುವಿಯೇನು|

ನೀ ನುಡಿವಂತೆ ನಿನ್ನ ಕರುಣೆಗಾಗಿ ಹಂಬಲಿಸುವ ಬಕುತರ ಕೂಗಿನ ಮುಂದೆ ನಾನಿಲ್ಲವೇನೋ
ಬರೀ ತೋರಿಕೆಯ ಅರಿಕೆಗೆ ನೀ ಒಲಿಯಲಾರೆಂಬ ಅರಿವು  ನನ್ನ ಮನ ಅರಿಯದಾಯಿತೇನೊ|

ಎನ್ನ ಬದುಕನು ಬದಲಿಸಿ ನಿನ್ನಲೇ ನೆಲೆಯಿರಿಸಿ ನೀ ಕಾಯಬಾರದೇನೋ
ಇನ್ನೆಷ್ಟು ಬೇಡಲಿ  ಗುರುವೇ  ದಾರಿ ತೋರಿ ಪಾಮರನ ಹರಸಬಾರದೇನೋ|

Monday, February 17, 2020

ದೂರ ತಳ್ಳಬೇಡಿ ಎನ್ನ ಗುರುವೇ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ದೂರ ತಳ್ಳಬೇಡಿ ಎನ್ನ ಗುರುವೇ ನಿಮ್ಮ ಸೇವೆಗೈವ ಭಾಗ್ಯದಿಂದ
ಮುನಿಸು ತೋರಬೇಡಿ ಪ್ರಭುವೇ ನಾನು ನಿಮ್ಮ ಭಜಿಪ ರೀತಿಯಿಂದ|

ತರವಲ್ಲದ  ಬದುಕು ನಡೆಸಿ ಮುಖವಾಡ ಹೊತ್ತು ನಿನ್ನ  ಬೇಡುವುದೆಂತು
ನುಡಿವ ಮಾತುಗಳಲಿ ಶುದ್ಧಭಾವ ಇಲ್ಲದಿರಲು ಗುರು ನೀಡುವುದೇನುಂಟು|

ಅಳುಕು ಮನವ ಹೊತ್ತು ತಳಕು ಭಾವ ತೋರಿ ನಿನ್ನ ವಂಚಿಸುವುದೆಂತು
ಹೃದಯದಲಿ ಮಲಿನ ಆಸೆ ತುಂಬಿ ಬಕುತನ ವೇಷಧರಿಸಿ ನಿನ್ನ ಬೇಡುವುದೆಂತು|

ಹೆತ್ತ ತಂದೆತಾಯಿಗಳ ಸೇವೆಗೈಯಲಿಲ್ಲ ಮುನಿಸು ತೋರದೆ ಹೇಗೆ ಹರಸಬಲ್ಲ
ನಾನೇ ದುಡಿವನೆಂಬ ಹುಂಬಿನಲಿ ಗುರುವೇ ನಿನ್ನ ಮಾತು ಮರೆತನಲ್ಲ|

ನಿನ್ನ ನೆನೆವ ಮನವ ನೀಡಿ ಅನ್ಯರ ಸೊತ್ತಿನಾಸೆ ನೀಡಬೇಡ ಗುರುವೇ
ನಿನ್ನ ಸೇವೆಯ ಭಾಗ್ಯವ  ನೀಡಿ  ನೀ ನಡೆದ ದಾರಿಯ ದೂಳು ಮಾಡಿ ಹರಸೋ ದೊರೆಯೇ|

Saturday, February 15, 2020

ಕರುಣಿಸ ಬಾರದೇ ಗುರುವೇ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಕರುಣಿಸ ಬಾರದೇ ಗುರುವೇ ಎನ್ನನು ಇನ್ನೆಷ್ಟು ತಡ ಮಾಡುವೆ ಪ್ರಭುವೇ 
ನಿನ್ನ ಬೇಡುವ ಮನವೇತಕೆ ನೀಡಿದೆ ಎನಗೆ ಇದು ನಿನ್ನ ಲೀಲೆಯ ಪರಿಯಲ್ಲವೇ|

ಓಡುವ ಮನದ  ಅರ್ಥವಿಲ್ಲದ ದುರಾಸೆಯ ಸೆಳೆತವ  ತಾಳದಾದೆನೋ
ಅರಿವಿದ್ದರೂ ಎಡವುತಿಹ  ಈ ನನ್ನ ಮನದ ಹುಂಬ ತನಕೆ ಸೋತುಹೋದೆನೋ|

ಕರ್ಮ ಕಳೆಯದೇ ಎನ್ನ ಮನ ಶುದ್ಧಿಯಾಗದೆ ನಿನ್ನ  ಕರುಣೆ ದೊರೆಯದೇನೊ
ಕಪಟ ಭಾವಗಳ ಸಂಗಮದಿ ಬದುಕು ಬಸವಳಿದು ಸೋತಿತೇನೋ|

ಓಡುವ ಬದುಕಿನ ದಾರಿಯಲಿ ಬರೀ ಪೊಳ್ಳು ಮಾತುಗಳ ದ್ವನಿ ಕೇಳಿದೆಯೋ
ಗುರಿ ತಲುಪಿಸುವ ಮುನ್ನ ನೀ ಮೆಚ್ಚುವ ಬದುಕು ನಡೆಸುವ ಬಗೆ ತಿಳಿಸೋ ದೊರೆಯೇ|

ನೇಮನಿಷ್ಠೆಗಳ ಅರಿವೆನಗಿಲ್ಲ ನಿನ್ನ ಸೇವಿಸುವುದರ ಬಿಟ್ಟು ಬೇರೇನೂ ಬೇಕಿಲ್ಲಾ
ನೀ ಕರುಣಿಸುವ ಬಕುತರ ನಡುವೆ ಈ ಪಾಮರನೂ ಒಬ್ಬನಾಗಿರಲಿ ಗುರುದೇವ|


.

Wednesday, February 12, 2020

ನಿನ್ನ ಕಾಣಲು ಓಡೋಡಿ ಬಂದೆನೋ ಗುರುವೇ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ನಿನ್ನ ಕಾಣಲು ಓಡೋಡಿ ಬಂದೆನೋ ಗುರುವೇ ಕದವೇಕೆ ತೆರೆಯಲಿಲ್ಲ
ಮನದ ತುಂಬಾ ಬಯಕೆಯೇ ತುಂಬಿ ನಿನ್ನ ಕಾಣಲು ಒಳಗಣ್ಣ ತೆರೆಯಲಿಲ್ಲ|

ಅದೇಕೋ ಮಾತು ಅತಿಯಾಗಿ ಮೌನಬಿನ್ನಹ ಮರೆಯಾಗಿ ಸೋತೆನೋ
ಮರೆಯಲಿ ನಿಲ್ಲಲಾರದೆ ತೋರಿಕೆಯ ಹಂಬಲ ಹೆಚ್ಚಾಗಿ ನಿನ್ನಿಂದ ದೂರಾದೆನೋ|

ಆರು ಅರಿಗಳ ಸಂಗವ ಬಿಡದೆ ಮೂರ್ಖನಾಗಿ ವ್ಯರ್ಥವಾಗಿ ನಿನ್ನ ಕೂಗಿಹೆನೋ
ಅಸೂಯೆ ಅಹಂಕಾರಗಳ ಒಡನಾಟದ ಫಲವಾಗಿ ನಿನ್ನ ಪಡೆಯದಾದೆನೋ|

ಹೊನ್ನು ಮಣ್ಣಿನ ಸಂಗ ಮಿತಿ ಮೀರದೆ ಬದುಕು ಮಿತವಾಗಿ ನಡೆಸೆಂದೆ ನೀನು 
ಇಡೀ ಬದುಕೇ ಅದೆಂಬ ಭ್ರಮೆಯ ಬಲೆಯೊಳು ಸಿಲುಕಿ ಬಲು ಮೂಡನಾದೆನೋ|

ನಿನ್ನ ಸೇರುವ ಪರಿ ನಿನ್ನ ಅರಿಯುವ ಪರಿ ಎನ್ನ ಮನಕೆ ತಿಳಿಯದಾಗಿದೆ ಗುರುವೇ
ಇನ್ನು ತಡಮಾಡದೆ ಒಮ್ಮೆಯಾದರೂ ದರುಶನ ನೀಡಿ ಹರಸೋ ಪ್ರಭುವೇ|

Monday, February 10, 2020

ಮೌನದಲಿ ಮಾತು ಭಾವಗಳೆಲ್ಲ ಲೀನವಾಗೋ - ರಚನೆ :ಶ್ರೀ ಆನಂದ ರಾಮ್, ಶೃಂಗೇರಿ

ಮೌನದಲಿ ಮಾತು ಭಾವಗಳೆಲ್ಲ ಲೀನವಾಗೋ ನಿನ್ನ ಮಾತ ನಿಜ ಮಾಡೋ ಗುರುವೇ
ಅರಿವಿಲ್ಲದೇ ನಾನು ನನ್ನ ಮರೆತು ನಿನ್ನ ಸೇರಿದ ಅನುಭವ ನೀಡೋ ದೊರೆಯೇ|

ನಾನೆಂಬ ಬಾವದೊಳು ಮನ ಕಳೆದಿಹುದು ಇದು ಮಿಥ್ಯವೆಂಬ ಅರಿವ ನೀಡೋ ಪ್ರಭುವೇ
ಮಾತಿಲ್ಲದೆ ಮೌನವಾಗಿ ನಿನಗೆ ಶರಣಾಗುವೆ ಶುದ್ಧ ಭಾವವ ಕರುಣಿಸೋ  ದೊರೆಯೇ|

ಅಂತರಾಳದಲಿ ಮೂಡಿಹ ಭಾವ ಕಣ್ಣ ಹನಿಯಾಗಿ ಹರಿದು ನಿನ್ನಲೇ ಸೇರಲಿ
ಭಾವವು ಬರೀ ಮಾತಾಗದೆ ಮೌನದಲಿ ಶರಣಾಗಿ ಸದಾ ನಿನ್ನಲೇ ಲೀನವಾಗಿರಲಿ|

ಮೌನದಲಿ ನಿನ್ನ ಸ್ಮರಿಸುವ ಮನವಿತ್ತು ಎನಗೆ ಮಾತುಗಳ ಸಂಗ ಬೇಡ ಗುರುವೇ
ಹೃದಯದಲಿ ನಿನ್ನ ಕೂರಿಸಿ ಮೌನದಲಿ ಮೆರವಣಿಗೆ ಮಾಡಿ ನಿನ್ನನೇ ಭಜಿಸುವೆ|

ತೋರಿಕೆಯ ಬಕುತಿಮಾಡದೆ ಶುದ್ಧ ಮನದಲಿ ನಿನ್ನ ಬೇಡುತಲಿ ಮೌನದಲಿ ಸ್ತುತಿಸುವೆ
ಶಬ್ದ ಬ್ರಹ್ಮನ ಅರಿವು ನೀಡಿ ಅಲ್ಲ ಸಲ್ಲದ ಪದಗಳ ನುಡಿಸದೆ ಕಾಯೆಂದು ಮೌನದಲಿ ಬೇಡುವೆ|

Sunday, February 9, 2020

ಇಷ್ಟ ಪಟ್ಟು ನಿನ್ನ ಬೇಡುವುದೋ ಯಾವ ಪರಿಯಲಿ ಬಜಿಸುವುದೋ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಇಷ್ಟ ಪಟ್ಟು ನಿನ್ನ ಬೇಡುವುದೋ ಯಾವ ಪರಿಯಲಿ ಬಜಿಸುವುದೋ ನಾನರಿಯೆ ಗುರುವೇ
ಎಲ್ಲರನು ಸಲಹುವ ಮಹಾದೇವ ನೀನು ನನ್ನ ಕಡೆಗಾಣಿಸದೆ ಹರಸೋ ದೊರೆಯೇ|

ಬೇಡದಲೇ ಬಂದು ಬಕುತರನು ಹರಸುವಿಯಂತೆ ನನ್ನ ಕೂಗು ಕೇಳಲಿಲ್ಲವೇ
ಬೆನ್ನ ಹಿಂದೆ ನಿಂತು ಕಷ್ಟಗಳ ದೂರ ಮಾಡುವ ನಿನಗೆ ಎನ್ನ ಮನವಿ ಬೇಡವೇ|

ನಿನ್ನ ನುಡಿಯಂತೆ ನಡೆಯಲಾರದೆ ನಿನ್ನ ಮನವ ಗೆಲ್ಲಲಾರದೆ ಹೋದೆನೋ
ಮನದ ಕಪಟ ಭಾವ ಮರೆಯಾಗದೆ ಕಣ್ಣೀರಿಟ್ಟು ಬೇಡಿದೊಡೆ ನೀ ಎಲ್ಲಿ ಒಲಿಯುವೆಯೋ|

ಯಾಕೆ ಬೇಡುವೆನೆಂದು ಅರಿಯದೆ ಸುಮ್ಮನೆ ನಿನ್ನ ಬೇಡುತಿಹೆನು ಇದು ತೋರಿಕೆಯಲ್ಲವೇ
ಎನ್ನ ಮನ್ನಿಸಿ ನಿನ್ನ ಪದತಳದಿ ಈ ಪಾಮರನ ಶಿರವಿರಿಸಿ ಬೇಡುವೆನೋ ಕರುಣಿಸೋ|

Thursday, February 6, 2020

ಎಷ್ಟೆಂದು ಬೇಡುವುದು - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಎಷ್ಟೆಂದು ಬೇಡುವುದು ಎಷ್ಟೆಂದು ಕಾಡುವುದು ನಾ ನಿನ್ನ ಗುರುವೇ
ಎಷ್ಟು ಬೇಡಿದರೂ ಮುಗಿಯದು ನನ್ನ ಬದುಕ ಬವಣೆಯು ಓ ನನ್ನ ಪ್ರಭುವೇ|

ಮೂರು ಹೊತ್ತಿನ ಕೂಳು ನೀಡಿ ನೀ ಸಲಹಿದರೂ ಇನ್ನೂ ಬೇಕೆಂಬ ಹಂಬಲವು
ಅನ್ಯರಿಗೆ ಅನ್ಯಾಯ ಮಾಡಿಯಾದರೂ ಬದುಕು ನಡೆಸುವ ಅಲ್ಪ ಮನದ ದುರಾಸೆಯು|

ಮಕ್ಕಳಿಲ್ಲದವರ ಬವಣೆ ಕಂಡರೂ ಇರುವ ಮಕ್ಕಳನು ಪೊರೆವುದು ಅರಿತಿಲ್ಲವೋ
ಅಂತ್ಯವಿಲ್ಲದ ಆಸೆಹೊತ್ತು ಈ ನಿಮಿಷದ ಸುಖವ ಕಳೆದುಕೊಂಡು ಮೂಡನಾದೆನೋ|

ಮೂರು ಮುಷ್ಟಿಯ ಕೂಳು ಒಂದು ಗೇಣಿನಾ ಹೊಟ್ಟೆಗೆ ಸಾಕಲ್ಲವೇ ಗುರುವೇ
ಕೂಡಿಟ್ಟು ಕೂಡಿಟ್ಟು ಅನ್ಯರ ಹಸಿವೆ ಇಂಗಿಸದೆ ನಡೆಸುವ ಬದುಕು ಬೇಕೇ ದೊರೆಯೇ|

ಅರ್ಥವಿರದ ಬದುಕು ನಡೆಸಿ ಮಣ್ಣು ಸೇರುವ ಮುನ್ನ ನಿನ್ನ ಇರುವು ತೋರೋ ಗುರುವೇ
ಅಷ್ಟಿಸ್ಟಾದರೂ ಜಗಕೆ ಒಳಿತು ಮಾಡುವ ಮನವ ನೀಡಿ ಹರಸೋ ಪ್ರಭುವೇ|

Friday, January 31, 2020

ಮನದೊಳಗೆ ಬಂದ ದೈವಕೆ - ರಚನೆ :ಶ್ರೀಮತಿ. ಶೈಲಜಾ ಕುಮಾರ್, ಮೈಸೂರು

ಮನದೊಳಗೆ ಬಂದ ದೈವಕೆ
ಮನೆಯೊಳಗೆ ಬಾರದ ಮನಸೇಕೆ !
ಮಗಿಲೊಳಗೆ ತುಂಬಿದ ಮಳೆಹನಿಗೆ
ಇಳೆಗೆ ಬಾರದ ಮುನಿಸೇಕೆ !

ತಪ್ಪು ಒಪ್ಪುಗಳೆಲ್ಲವು ನಿನಗೇ ಅರ್ಪಿತ
ಮಾನಸಮ್ಮಾನಕೆಲ್ಲ ನಿನದೇ ಅಂಕಿತ !
ಹೆಸರಿನೊಳಗಿನ ಉಸಿರೇ ನಿನ್ನದಯ್ಯ
ಇನ್ನಾದರೂ ತಡ ಮಾಡದೆ ಬಾರಯ್ಯ !!೧!!

ನಿನ ಪಾದದಡಿಯ ಕಣವು ನಾನು
ನನ್ನ ಪದಗಳೆಲ್ಲದರ ಭಾವವು ನೀನು !
ನಿನ್ನೊಂದು ದೃಷ್ಟಿಗೆ ಕಾದಿಹ ತೃಣವು ನಾನು 
ಬಂದೊಮ್ಮೆ ಉಣಿಸೋ ಭಕ್ತಿಯ ಜೇನು !! ೨!!

ನೀನಿದ್ದೆಡೆಯೇ ನಮಗೆ ಸುಖಧಾಮ 
ನಿನ್ನ ವಚನಗಳೇ ನಮಗೆ ಶಾಂತಿಧಾಮ !
ನೀನಿತ್ತ ವರಗಳೇ ನಮಗೆ ಚೈತನ್ಯಧಾಮ
ಬಂದೆಮ್ಮ ಗುರಿಮುಟ್ಟಿಸೋ  ಸೌಖ್ಯಧಾಮ !! ೩ !!

!! ಸರ್ವದಾ ಸದ್ಗುರುನಾಥೋ ವಿಜಯತೇ !!
೩೦-೧-೨೦೨೦

Tuesday, January 28, 2020

ಎನ್ನ ಅಂತರಂಗದ ಕದವ ತಟ್ಟಿ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಎನ್ನ ಅಂತರಂಗದ ಕದವ ತಟ್ಟಿ ನಾನೆಂಬ ಭಾವವ ಹೊರದೂಡೋ ಗುರುವೇ
ನಿನ್ನ ನಾಮದ ಬಲದಿಂದ ಮನವ ಶುದ್ಧಗೊಳಿಸಿ
ಭವ ಬಂಧನದಿಂದ ಮುಕ್ತ ಗೊಳಿಸೋ ಪ್ರಭುವೇ|

ನಾನೇನು ಮಾಡಿದೆನೋ ಅದೂ ನಿನ್ನ ಪ್ರೇರಣೆಯ ಫಲವೆಂದು ನಂಬಿಹೆನೋ
ಒಳಿತು ಮಾಡುವ ಮಾನವ ನೀಡಿ  ಸಾರ್ಥಕತೆಯ  ಜನುಮವ ನೀಡೋ ದೊರೆಯೇ|

ಎಷ್ಟು ಅರಿತರೂ ಸಾಲದು ನಿನ್ನ ಮಹಿಮೆಯ ಚರಿತವನು ಅದು ಅಕ್ಷಯವೋ
ಅರಿತಿಹೆನೆಂದು ಪಾಮರ ನಾನು ಬೀಗಿದರೆ ಬಲು ಮೂಡನಲ್ಲದೆ ಇನ್ನೇನೋ|

ನೀ ನುಡಿವ ನುಡಿಗಳಲಿ ಅಡಗಿಹ ವೇದಸಾರವ ಅರಿತರೆ ಜನುಮ ಪಾವನವೋ
ನುಡಿದಂತೆ ನಡೆದು ಜೀವನ ತೋರುವ ಮಹಾ ಪುರುಷ ನಿನ್ನ ಸಮಾನರಿಲ್ಲವೋ|

ಧರೆಗಿಳಿದು ಬಂದು ಸಖರಾಯಪುರವೆಂಬ ಪುಣ್ಯ ಭೂಮಿಯ ಪಾವನ ಮಾಡಿದೆಯೋ
ನಿನ್ನ ಅರಸಿ ಬರುವ ಬಕುತರ ಹಸಿವೆ ನೀಗಿ ಬದುಕು ಹಸನ ಮಾಡಿ ಹರಸಿದೆಯೋ|

ಎಷ್ಟು ವರುಷಗಳು ಉರುಳಿತು - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಎಷ್ಟು ವರುಷಗಳು ಉರುಳಿತು ಗುರುವೇ ನಿನ್ನ ಮೆಚ್ಚಿಗೆಯ ಪಡೆಯದೇ ಸೋತೆನೋ
ಎನ್ನ ಬಕುತಿಯಲಿ ಹುರುಳಿಲ್ಲವೆಂದು ನನ್ನ ನೆರಳಿಂದಲೂ ದೂರವಿರುವೆಯಾ ನೀನು|

ಯಾರದೋ ಭಕುತಿಯ ಕಂಡು ನಾನೂ ಭಕುತಿ ಮಾಡಿದೆನೆಂದು ತಿಳಿದೆಯಾ ದೊರೆಯೇ
ಎನ್ನಂತರಾತ್ಮದೊಳು ನೀ ನೆಲೆ ನಿಂತಿಹೆಯೆಂದು ನಂಬಿ ನಿನ್ನ ಬಜಿಸುವೆನೋ ಗುರುವೇ|

ನೇಮ ನಿಷ್ಠೆಯೊಳು ಎನಗೆ ಮನವಿಲ್ಲ ನಿನ್ನ ನಾಮದ ಹೊರತು ಬೇರೆ ಬೇಕಿಲ್ಲ
ನಿನ್ನ ಚರಿತೆಯೊಳು ನಿಲ್ಲಿಸಿಹೆ ಎನ್ನ ಮನವೆಲ್ಲ ಇನ್ನೇನು ಬೇಕೆನೆಗೆ ಎಲ್ಲಾ ನಿನ್ನದಲ್ಲ|

ನಾನೇಕೆ ನಿನ್ನ ನಂಬಿಹೆನೋ ಎನ್ನ ಮನಕೇ ತಿಳಿಯದಾಯಿತಲ್ಲ ಪ್ರಭುವೇ
ಇದೂ ನಿನ್ನ ಲೀಲೆಯ ಒಂದು ಪರಿಯಲ್ಲದೆ ಮತ್ತೇನು ಹೇಳೋ ಗುರುವೇ|

ನಿನ್ನೊಳು ಎನ್ನ ಮನ ಸದಾ ನಿಲ್ಲಿಸಲು ನಾ ಹೇಗೆ ಬಜಿಸಲಿ ಹೇಳೋ ನನ್ನ  ದೊರೆಯ
ಇನ್ಯಾವ ದೇವರನು  ನಾ ಬೇಡೆನು ನೀ ದೂರ ಮಾಡದೇ ಹರಸೋ ನನ್ನ ಗುರುವೇ|

Sunday, January 26, 2020

ಏನೂ ಅರಿಯದ ನಾನು - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಏನೂ ಅರಿಯದ ನಾನು ಏನು ಬರೆಯಲಿ ಪದಗಳಲಿ ಪ್ರಭುವೇ
ಸಾಲು ಸಾಲು ಪದಗಳ ಜೋಡಿಸಿ ಫಲವಿಲ್ಲ ಎಂದರಿತು ಮೌನಕೆ ಶರಣಾದೆ ಗುರುವೇ|

ಯಾರೂ ಅರಿಯದ ಲೀಲೆ ನೀ ಎನಗೆ ತೋರಿದರೆ ಜಗಕೆ ಸಾರುವೆ ನಾನು
ನನ್ನರಿವಿನ ಜಗದೊಳು ಪೊಳ್ಳು ಭಾವನೆ ತುಂಬಿರಲು ನೀ ಎಲ್ಲಿ ಒಲಿಯುವೆ ಎನಗೆ|

ಏನೂ ಅರಿಯನೆಂದು ಸಾರಿ ಜಗಕೆ ಹೇಳಿದರೂ ಬರೀ ತೋರಿಕೆಯಾಯ್ತು ನನದು
ಮನವು ಬರಿದು ಮಾಡಿ ನೀನೊಬ್ಬನೆಂಬ ಭಾವ ತುಂಬಲಾರದೆ ಸೋತಿಹ ಮನ ನನದು|

ಅನ್ಯರಗೊಡವೆ ಎನಗೆ ಬೇಡವೆಂದು ಮನಕೆ ನೀ ಹೇಳಿದರೂ ಬಿಡಲಿಲ್ಲ ಭ್ರಮೆಯು
ಇತರರ ಅನಂದದಲಿ ದೇವರನು ಕಾಣೆ0ದೆ ನೀನು
ಅದ ಅರಿಯದೇ ಮುಡನಾದೆ ನಾನು| 

ಕಳ್ಳ ಮನದೊಳು ನಂಜಿನಾ ಭಾವತುಂಬಿ ನಿನ್ನ ಭಜಿಸಿ ಫಲವೇನು
ಎಲ್ಲವನೂ ತ್ಯಜಿಸಿ ಪೂರ್ಣ ಶರಣಾಗದೆ ಬೇರೆ ದಾರಿ ತೊರೆಯಾ ನೀನು|

Saturday, January 4, 2020

ಅರ್ಥಪೂತಾಂ ಗುರೋರ್ವಾಕ್ಯಂ - ರಚನೆ :ಶ್ರೀಮತಿ. ಶೈಲಜಾ ಕುಮಾರ್, ಮೈಸೂರು

ಅರ್ಥಪೂತಾಂ ಗುರೋರ್ವಾಕ್ಯಂ
ಚಿತ್ತಪೂತಾಂ ಗುರೋರ್ದೃಷ್ಟಿಂ I
ವಚಃ ಪೂತಾಂ ಗುರೋರ್ತತ್ವಂ
ಆತ್ಮಪೂತಂ ಅನುಸರೇತ್ II

ಅರ್ಥಗರ್ಭಿತವಾದ ಪವಿತ್ರವಾದ ಗುರುವಾಕ್ಯವನ್ನು, ನಮ್ಮ ಮನಸ್ಸುಗಳನ್ನು ಪವಿತ್ರವಾಗಿರಿಸುವ ಗುರುದೃಷ್ಟಿಯನ್ನು,ನಮ್ಮ ಮಾತುಗಳನ್ನು ಶುದ್ಧಿಮಾಡುವ ಗುರುತತ್ತ್ವವನ್ನು ಶುದ್ಧಾತ್ಮರಾಗಿ ಅನುಸರಿಸಬೇಕು .

!! ಸರ್ವದಾ ಸದ್ಗುರುನಾಥೋ
ವಿಜಯತೇ!!
೫-೧-೨೦೨೦