ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಒಮ್ಮೊಮ್ಮೆ ಮಗುವಿನಂತೆಯೇ ಮುಗ್ಧವಾಗಿ, ತಾಯಿಯಂತೆ ಕರುಣಾಳುವಾಗಿ ಇದ್ದಕ್ಕಿದಂತೆಯೇ ಕುಡಿದ ಅಮಲಿನ ವ್ಯಕ್ತಿಯಂತೆ, ಮತ್ತೊಮ್ಮೆ ಜ್ಞಾನಿಯಂತೆ ಕಂಗೊಳಿಸುತ್ತಿದ್ದ ಗುರುನಾಥರು ಭಕ್ತರ ಪಾಲಿನ ಆಶಾಕಿರಣವಾಗಿದ್ದರು. ಕಷ್ಟಕಾರ್ಪಣ್ಯದಿಂದ ಕೆಂಗೆಟ್ಟು ಬಂದ ಭಕ್ತರ ಕೂಗಿಗೆ ದನಿಯಾಗಿ ಎಲ್ಲಿದ್ದರೂ ಪ್ರತ್ಯಕ್ಷವಾಗಿ ಅವರ ಈತಿಯನ್ನು ಪರಿಹರಿಸಿ, ಪರೀಕ್ಷಿಸಲು ಬರುವವರ ಕಣ್ಣು ತಪ್ಪಿಸಿ ಹೋಗುತ್ತಿದ್ದ ಗುರುನಾಥರು ಗಾಳಿಯ ತರಹ.
"ಇದೋ ಊರಿನಲಿಲ್ಲ, ಇಂದು ಬರುವರೋ ತಿಳಿಯದು" ಎಂದು ಉತ್ತರಿಸಿ ಮುಗಿಸುವ ಮುನ್ನ ಎಲ್ಲಿಂದಲೋ ಬಂದಿಳಿದಿರುತ್ತಿದ್ದರು.
ಹಾಗೆಯೇ ಜನರೆಲ್ಲರೂ ಮುತ್ತಿಕೊಂಡಾಗ ಯಾರಿಗೂ ಕಾಣದಂತೆ ಇನ್ನೆಲ್ಲೋ ಹೋಗಿ ಬಿಡುತ್ತಿದ್ದರು. ಸದಾ ಮನೆಯ ಮುಂದೆ ಹಸುಗಳು, ಕಟ್ಟೆಗಳು ತನ್ನ ಸುತ್ತ ನಾಲ್ಕು ನಾಯಿಗಳು, ಇವು ಅವರ ಜೀವನದುದ್ದಕ್ಕೂ ಭೂಷಣದಂತೆ ಇರುತ್ತಿದ್ದವು.
ಸದಾ ಒಂದು ದೊಡ್ಡ ಟವೆಲ್ ಅಥವಾ ಒಂದು ಮಾಸಿದ ಪಂಚೆ ಹೆಗಲ ಮೇಲೆ ಒಂದು ಟವೆಲ್, ಕಾಲಿಗೊಂದು ಜೊತೆ ಹವಾಯಿ ಚಪ್ಪಲಿ; ಕೈಯಲ್ಲೊಂದು ಹೂವು, ಹಣ್ಣು, ತಿಂಡಿ ತುಂಬಿದ ಚೀಲ ಇವು ಅವರ ನಿತ್ಯ ಬಳಕೆಯ ವಸ್ತುಗಳಾಗಿದ್ದವು.
ಸಂಕಲ್ಪ ಮಾಡಿದರೆ ಕ್ಷಣಾರ್ಧದಲ್ಲಿ ಏನನ್ನು ಬೇಕಾದರೂ ಪಡೆವ ತಾಕತ್ತಿದ್ದರೂ "ವೇದಾಂತೇ ಚ ಪ್ರತಿಷ್ಠಿತಃ" ಎಂಬಂತೆ ಎಲ್ಲವನ್ನು ಜಾಡಿಸಿ ನಿಂತಿದ್ದ ಗುರುನಾಥರು ಉಂಡು ಉಪವಾಸಿ, ಬಳಸೀ ಬ್ರಹ್ಮಚಾರಿ ಎಂಬಂತಹ ಸ್ಥಿತಿಯಲ್ಲಿ ಇರುತ್ತಿದ್ದರು.
ಸದಾ ಸಂಸಾರದಲ್ಲಿ ಮುಳುಗಿ ಮಕ್ಕಳು, ಮೊಮ್ಮಕ್ಕಳು, ಚಿಕ್ಕಪ್ಪ, ದೊಡ್ಡಪ್ಪ ಇತ್ಯಾದಿಯಾಗಿ ಎಲ್ಲ ಸಂಬಂಧ ಇಟ್ಟುಕೊಂಡಿದ್ದರೂ ಅದು ಕರ್ತವ್ಯ ನಿರತ ಸಂಬಂಧವಾಗಿತ್ತೇ ವಿನಃ ಮೋಹ ಸಂಬಂಧವಾಗಿರಲಿಲ್ಲ.
ಕ್ಷಮೆ ಅವರಲ್ಲಿದ್ದ ದೊಡ್ಡ ಗುಣ. ತನಗೆಷ್ಟೇ ಅವಮಾನ ಮಾಡಿದರೂ ತಾಯಿ ಮಕ್ಕಳನ್ನು ಕ್ಷಮಿಸುವಂತೆ ಕ್ಷಮಿಸಿ ಮುನ್ನಡೆಯುತ್ತಿದ್ದರು. ತಪ್ಪನ್ನೆಲ್ಲ ಒಪ್ಪಿ ಸರಿ ದಾರಿಯಲ್ಲಿ ನಡೆಯಲಿಚ್ಚಿಸಿ ಬಂದ ಭಕ್ತರಿಗೆ ಏನು ಸಾಧ್ಯವೋ ಅದೆಲ್ಲವನ್ನೂ ಮಾಡುತ್ತಿದ್ದ ಗುರುನಾಥರು ಪರೀಕ್ಷಿಸಲು ಬಂದ ದುರಹಂಕಾರಿಗಳಿಗೆ ಜನ್ಮ ಜಾಲಾಡುತ್ತಿದ್ದ ರೀತಿ ನಿಜಕ್ಕೂ ರೋಚಕ. ಆದರೆ ಅದರ ಉದ್ದೇಶ ಅವರಿಗೆ ತಪ್ಪಿನ ಅರಿವು ಮೂಡಿಸುವುದಾಗಿತ್ತೇ ವಿನಃ ಹಿಂಸಿಸುವುದಾಗಿರಲಿಲ್ಲ.
ಊರಿನಲ್ಲಿದ್ದಾಗ ಪ್ರತಿದಿನ ಬೆಳಿಗ್ಗೆ ಊರೊಳಗೆ ಹೋಗಿ ಈಶ್ವರ ದರ್ಶನ ಮಾಡಿ ಅದರ ಹಿಂದಿದ್ದ ಮಜ್ಜಿಗೆ ಹಳ್ಳಿ ಮಠದ ಯತೀಶ್ವರರ ಸಮಾಧಿಯ ಸಮೀಪವೋ ಅಥವಾ ಅರಳೀ ಮರದ ಕೆಳಗೆ ಕುಳಿತಿರುತ್ತಿದ್ದ ಅವರಿಗೆ ಆ ಜಾಗವೇ ದರ್ಬಾರ್ ಹಾಲ್ ಕೂಡಾ ಆಗಿರುತ್ತಿತ್ತು. ಎದುರಿದ್ದ ಈಶ್ವರನಿಗೆ ಎಷ್ಟು ಹಾಲು ಅಭಿಷೇಕ ಮಾಡಿದರೂ, ಎಷ್ಟು ಹೂವು ಹಾಕಿದರೂ ಗುರುನಾಥರಿಗೆ ತೃಪ್ತಿಯಾಗುತ್ತಿರಲಿಲ್ಲ. ಬಂದವರ ಹತ್ತಿರವೆಲ್ಲ ಈಶ್ವರನಿಗೆ ಹಾಲು, ನೀರಿನ ಅಭಿಷೇಕ ಮಾಡಿಸುತ್ತಿದ್ದರು.
ದಾರಿಯಲ್ಲಿ ಎದುರು ಸಿಗುವ ಪ್ರತಿಯೊಬ್ಬರೂ ಗುರುನಾಥರನ್ನು "ನರವೇಷಧಾರಿ ಹರ" ನೆಂದೇ ನಂಬಿ ನಮಸ್ಕರಿಸಿ ಹೋಗುತ್ತಿದ್ದರೆ, ಗುರುನಾಥರು ಮಾತ್ರ ಎಲ್ಲರನ್ನು "ಅಣ್ಣ, ಅಯ್ಯಾ, ಅಮ್ಮ" ಎಂದು ಸಂಬೋಧಿಸುತ್ತಾ ಕೈಯಲ್ಲಿದ್ದ ಹಣ್ಣು, ಬಟ್ಟೆ ಎಲ್ಲವನ್ನು ನೀಡಿ ನಮಸ್ಕರಿಸಿ "ನಂಗೆ ಯಾಕಪ್ಪ ನಮಸ್ಕರಿಸುತ್ತೀರಾ? ಮನೆಯಲ್ಲಿರುವ ಅಪ್ಪ-ಅಮ್ಮನ ಚಂದಾಗಿ ನೋಡಿಕೊಳ್ಳಿ. ಒಡಹುಟ್ಟಿದವರಿಗೆ ಮೋಸ ಮಾಡಬೇಡಿ. ಗುರು ಹಿರಿಯರನ್ನು ಗೌರವಿಸಿ. ಯಾರಲೂ ಎರಡು ಎಣಿಸದಂತೆ ಬದುಕಿ. ಸದಾ ಕರ್ತವ್ಯ ನಿರತರಾಗಿರಿ" ಎಂದು ಮುಂತಾಗಿ ಅವರವರಿಗೆ ಬೇಕಾದ ತಿಳವಳಿಕೆಯನ್ನು ಹೇಳುತ್ತಾ, "ಅದುವೇ ಗುರು ಕಂಡ್ರಪ್ಪಾ" ಅಂತ ಆಧ್ಯಾತ್ಮವನ್ನು ಹೇಳುತ್ತಿದ್ದ ರೀತಿ ನಿಜಕ್ಕೂ ವಿಶಿಷ್ಟವಾಗಿರುತ್ತಿತ್ತು.
ಸಾಮಾನ್ಯವಾಗಿ ಗುರುನಾಥರು ಸದಾ ಕರ್ತವ್ಯ ನಿರತರಾಗಿರುತ್ತಿದ್ದು ಒಂದು ಕ್ಷಣವನ್ನು ಹಾಲು ಮಾಡುತ್ತಿರಲಿಲ್ಲ. ಹಾಗೂ ಜೊತೆಗಿದ್ದ ನಮ್ಮಲ್ಲೂ ಅದೇ ಗುಣವಿರಬೇಕೆಂದು ಹೇಳುತ್ತಿದ್ದರು. ಆದರೆ ಯಾವುದೇ ಒಂದು ಕೆಲಸವನ್ನು "ಯಾರಿಗಾಗಿಯೂ, ಯಾರ ಹೆದರಿಕೆಗಾಗಿಯೂ ಮಾಡಬೇಡ. ನೀನೆ ಒಪ್ಪಿ ಮನಃ ಪೂರ್ವಕವಾಗಿ ಮಾಡು. ಅದುವೇ ನಿಜವಾದ ಪೂಜೆ. ಎಂದೂ ಯಾರನ್ನೂ ನೋಯಿಸಬೇಡ. ನೀನು ನೋವು ಮಾಡಿಕೊಳ್ಳಬೇಡ. ಅದೇ ನಿಜವಾದ ಪೂಜೆ, ಮತ್ಯಾವ ಪೂಜೆಯೂ ಬೇಡ" ಅಂತಿದ್ರು.
ಈ ದೇಹ ತಂದೆ-ತಾಯಿಯಿಂದ ಬಂದಿದ್ದು. ನಾವು ಅವರು ನೀಡಿದ ಬಾಡಿಗೆ ಮನೆಯಲ್ಲಿ (ದೇಹ) ಇದ್ದೀವಿ. ಈ ದೇಹವೆಂಬ ಬಾಡಿಗೆ ಮನೆಯಲ್ಲಿರುವ "ಆ ನಾನು ಯಾರು?" ಅಂತ ಹುಡುಕಬೇಕು. ಈ ಬಾಡಿಗೆ ಮನೇನ ಹಾಳಾಗದಂತೆ ಸ್ವಚ್ಛವಾಗಿ ಇಟ್ಟುಕೊಂಡು, ನಮ್ಮ ಒಳ್ಳೆಯತನ, ಮಾತು, ನಡವಳಿಕೆಗಳಿಂದ ಬೆಲೆಯಾಗಿ ಬಾಳಿ ಮತ್ತೆ ತಂದೆ-ತಾಯಿಗಳಿಗೆ ಬಿಟ್ಟುಕೊಡಬೇಕು".
"ದುಶ್ಚಟಗಳ ಆಕರ್ಷಣೆ ತಪ್ಪಲ್ಲ. ಆದರೆ, ಅದೇನೆಂದು ತಿಳಿದ ಬಳಿಕ ಬಿಟ್ಟು ಬಿಡಿ. ಅದಕ್ಕೆ ದಾಸರಾಗಿ ಜೀವನ ಹಾಲು ಮಾಡಿಕೊಳ್ಳಬಾರದು ಅಲ್ಲವೇ?" ಎಂದು ನಸುನಗುತ್ತಾ ಕೇಳುತ್ತಿದ್ದ ಗುರುನಾಥರ ಮಾತು ಎಲ್ಲ ಜನಾಂಗದವರಿಗೂ ತಿಳವಳಿಕೆ ಆಗಿರುತ್ತಿತ್ತು.
"ಇನ್ನೊಂದು ವಿಚಾರಕ್ಕೆ ಹೋಗುವುದೇ ಮೈಲಿಗೆ. ಯಾವ ವಿಚಾರಕ್ಕೂ ಹೋಗದೇ ತನ್ನಲ್ಲಿ ತಾನು ನೆಲೆ ನಿಲ್ಲುವುದೇ ನಿಜವಾದ ಮಡಿ" ಎನ್ನುತ್ತಿದ್ದ "ಅಣ್ಣ" ನ (ಆ ಸೀಮೆಯಲ್ಲಿ ತಂದೆಯನ್ನು ಅಣ್ಣಾ ಎಂದು ಕರೆಯುವ ಪದ್ಧತಿಯಿದ್ದು, "ನಾನೇ ಅವನಿಗೆ ತಂದೆ ಸ್ಥಾನದಲ್ಲಿದ್ದೀನಿ. ಅಂತ ಆಗಾಗ್ಗೆ ನನ್ನ ಬಗ್ಗೆ ಹೇಳುತ್ತಿದ್ದರು. ಚರಣದಾಸನಾದ ನಾನು ಕೂಡಾ ಅವರನ್ನು ಅಣ್ಣಾ ಎಂದೇ ಕರೆಯುತ್ತಿದ್ದೆ). ಮಾತು, ಮಡಿ, ಮೈಲಿಗೆಗಳ ಮೌಢ್ಯಾರ್ಥವನ್ನು ಬಯಲಿಗೆಳೆಯುವಂತಿತ್ತು.
"ಎಂತದಯ್ಯಾ ಸ್ನಾನ? ಈ ಬಿಳಿ ಬಟ್ಟೆ? ಈ ಸ್ನಾನ ವಸ್ತ್ರಗಳು ನಿನ್ನೊಳಗಿನ ಮತ್ಸರ-ಮೋಸ, ಕೊಳಕುತನವನ್ನು ಶುದ್ಧಗೊಳಿಸ್ತಾವ? ಹಾಗಾದ್ರೆ ಇವನ್ನೆಲ್ಲಾ ಮಾಡಿ. ಇಲ್ಲಾಂದ್ರೆ ಆಡಂಬರಕ್ಕಾಗಿ ಯಾರನ್ನೋ ಮೆಚ್ಚಿಸೋಕೆ ಮಾಡಬೇಡಿ" ಅಂತಿದ್ದ ಮಾತುಗಳು ಶುದ್ಧ-ಅಶುದ್ಧದ ನಿಜಾರ್ಥವನ್ನು ತಿಳಿಸುತ್ತಿತ್ತು.
"ಯಾವುದಯ್ಯಾ ಜಾತಿ? ನಂಗೆಂತ ಜಾತಿ? ನಿನ್ನ ನಡವಳಿಕೆನೇ ಜಾತಿ" ಎನ್ನುವಾಗ ಅವರ ಮನದಲ್ಲಿ ಎಲ್ಲರೂ ಬದಲಾಗಿ ಸಮಾನವಾಗಿ ಬಾಳಿ ಎಂಬ ಕಾಳಜಿ ಎದ್ದು ಕಾಣುತ್ತಿತ್ತು. ನಿನ್ನ ತಂದೆ-ತಾಯಿ ಯಾರೂಂತ ತಿಳಿಯುವುದು ಬಹಳ ಸುಲಭನಪ್ಪಾ, ನಿನ್ನ ಮಾತು, ನಡವಳಿಕೆ, ಆಚಾರ-ವಿಚಾರಗಳೇ ನಿಮ್ಮ ತಂದೆ-ತಾಯಿ ತಿಳೀತಾ?. ಅದಕ್ಕೆ ಈ ಜನ್ಮಕ್ಕೆ ಕಾರಣರಾದ ತಂದೆ-ತಾಯಿಗಳ ಗೌರವಕ್ಕೆ ಧಕ್ಕೆಯಾಗದಂತೆ, ನೋವಾಗದಂತೆ ಬಾಳಿ" ಎಂಬ ಅವರ ಮಾತು ಸಾರ್ವಕಾಲಿಕ ಸತ್ಯವನ್ನು ಸಾರಿ ಸಾರಿ ಹೇಳುತ್ತದೆ.
"ಅಪ್ಪ ಬಿಟ್ಟು ಹೋದ ಆಸ್ತಿಯೆಂದರೆ ಅಡಿಕೆ ಮರ, ಕಾಫಿ ಗಿಡ ಮಾತ್ರವಲ್ಲಪ್ಪಾ... ನಿನ್ನ ಒಡ ಹುಟ್ಟಿದವರು, ನಿನ್ನ ತಾಯಿ, ಬಂಧುಗಳು ನಿಜವಾದ ಆಸ್ತಿಯಪ್ಪಾ. ಎಂದೂ ಇವರು ಯಾರಿಗೂ ದ್ರೋಹ ಮಾಡಬೇಡಿ. ಮನೆ ಬಾಗಿಲಿಗೆ ಬಂದ ಯಾವ ಜೀವಿಗಳಿಗೂ ಅವಮಾನ ಮಾಡಿ ಬರಿಗೈಯಲ್ಲಿ ಕಲಿಸಬೇಡಿ. ಅದುವೇ ನಿಜವಾದ ಹೋಮ-ಹವನ" ಎನ್ನುತ್ತಾ ಅಲ್ಲಿದ್ದ ನಮ್ಮೆಲ್ಲರ ಮೌಢ್ಯಗಳನ್ನು ಮಟ್ಟ ಹಾಕಿಬಿಡುತ್ತಿದ್ದರು.
ನಾವುಗಳು ಯಾರಾದರೂ ಏನು ತಪ್ಪು ಮಾಡಿದರೂ ಎಂದೂ ಬಯ್ಯುತ್ತಿರಲಿಲ್ಲ. ಬದಲಿಗೆ ಮೌನವಾಗಿಬಿಡುತ್ತಿದ್ದರು. ಒಮ್ಮೆ ಯಾರೋ ಒಬ್ಬರಿಗೆ ಬಹಳ ದಿನಗಳಿಂದ ಹಣ್ಣು, ಆಹಾರ ಕಲಿಸುತ್ತಿದ್ದರು. ಆದರೆ, ಆ ವ್ಯಕ್ತಿಯು ಮತ್ತೆ ಮತ್ತೆ ತಪ್ಪು ಮಾಡುತ್ತಿದ್ದರು.
ಅದನ್ನು ತಿಳಿದ ನಾನು ಉದ್ವೇಗದಿಂದ, "ಅಲ್ಲಾ ಸಾರ್, ನೀವು ಅಷ್ಟೆಲ್ಲ ಮಾಡಿದ್ರು ಆತ ಬದಲಾಗಲಿಲ್ಲ ಅಂದ ಮೇಲೆ ನೀವು ಮಾಡಿದ ಕೆಲಸಕ್ಕೆ ಬೆಲೆ ಏನು ಬಂತು? ಏನು ಉದ್ದೇಶ ಸಾಧನೆಯಾಯಿತು" ಎಂದು ಅಸಹನೆಯಿಂದ ಕೇಳಿದೆ.
ಅದಕ್ಕವರು "ಅಯ್ಯಾ ಯಾರೋ ತಪ್ಪು ಮಾಡುತ್ತಾರೆ ಅಂತ ನಾನು ನನ್ನ ಕರ್ತವ್ಯ ಬಿಡೋಕಾಗಲ್ಲ. ನಾನು ಸದಾ ನನ್ನ ದಾರೀಲೇ ಇರುತ್ತೇನೆ. ಬಲವಂತದಿಂದ ನಡೆಯುವುದು ಬದಲಾವಣೆಯಾಗೋಲ್ಲ, ಎಂದೋ ಒಂದು ದಿನ ದಿನ ಆತ ಹಿಂತಿರುಗಿ ನೋಡಿ, ಹೋ ನಾ ತಪ್ಪಿ ನಡೆದೆ ಎಂದು ತಿಳಿದು, ಸರಿ ದಾರಿಗೆ ಬರ್ತಾನಲ್ಲಾ ಅದು ನಿಜವಾದ ಬದಲಾವಣೆ". ಹೀಗೆ ಪ್ರತಿಯೊಬ್ಬರೂ ನಡೆದು ಪಥ ನಿರ್ಮಾಣ ಮಾಡಬೇಕು. ಅದುವೇ ಪರಿವರ್ತನೆ" ಎಂದರು.
ವಿಪರೀತ ಅಲಂಕಾರ, ವೇಷ-ಭೂಷಣವನ್ನು ಗುರುನಾಥರು ಎಂದೂ ಒಪ್ಪುತ್ತಿರಲಿಲ್ಲ. ಒಮ್ಮೆ ಒಬ್ಬ ವ್ಯಕ್ತಿ ಕೈಗೆ ವಾಚು, ಕುತ್ತಿಗೆಗೆ ಚಿನ್ನದ ಸರ, ಬೆರಳಿಗೆ ಉಂಗುರ ಹಾಕಿಕೊಂಡು ತನಗೆ ಸಮಸ್ಯೆ ಉಂಟು ಎಂದು ಗುರುನಾಥರಿಗೆ ನಮಸ್ಕರಿಸಿ ನಿಂತ.
ಆಗ ಗುರುನಾಥರು "ನಿಂಗೆಂತದಯ್ಯಾ ಸಮಸ್ಯೆ? ಪ್ಯಾಂಟ್ ಹಾಕಿದ್ಯಾ , ಸೂಟ್ ಇದೆ, ಉಂಗುರ, ಚೈನ್, ವಾಚು ಎಲ್ಲ ಉಂಟು. ಸಮಸ್ಯೆ ಹೆಂಗಯ್ಯಾ ಬರುತ್ತೆ? ಸಮಸ್ಯೆ ಇದ್ದಿದ್ರೆ ನನ್ನ ಹಂಗೆ ಇರುತ್ತಿದ್ದೆ ಅಲ್ಲವೇ?" ಎಂದು ಗದರಿಸಿದರು.
"ನೀವಾಡುವ ಮಾತು, ಕೆಲಸಗಳೇ ನಿಮಗೆ ಆಭರಣವಾಗಬೇಕಪ್ಪ. ಬಾಹ್ಯಾಡಂಬರದಿಂದ ಯಾರಿಗೂ ಪ್ರಯೋಜನವಿಲ್ಲ. ನಿನ್ನ ಹತ್ತಿರ ಎಂತಹ ವಸ್ತುಗಳಿವೆ ಎಂದು ನಾಲ್ಕು ಜನಕ್ಕೆ ತಿಳಿಯುತ್ತೆ. ನಿನ್ನ ಆರ್ಥಿಕ ಸ್ಥಿತಿ ತಿಳಿಯುತ್ತೆ ವಿನಃ ನಿನ್ನೊಳಗಿನ ನಿನ್ನನ್ನು ತಿಳಿಯೋಕೆ ಈ ಯಾವ ಅಲಂಕಾರಗಳೂ ಸಹಕರಿಸೋಲ್ಲ" ಎಂದರು.
ಸದಾ ಅನುಕೂಲವಾಗಿ, ವ್ಯವಸ್ಥಿತವಾಗಿ, ನೆಮ್ಮದಿಯಾಗಿ ಬದುಕಬೇಕಾದದ್ದು ನಮ್ಮ ಉದ್ದೇಶವಾಗಬೇಕೇ ವಿನಃ ನಮ್ಮ ಸಿರಿವಂತಿಕೆಯ ಪ್ರದರ್ಶನವಾಗಬಾರದು. ಅದರಿಂದ ನಮ್ಮ ಮೇಲೆ ಜನರ ವಕ್ರ ದೃಷ್ಠಿ ಬಿದ್ದು ಅಸೂಯೆ, ಮತ್ಸರಕ್ಕೆ ಕಾರಣವಾಗುತ್ತೆ ಅಲ್ಲವೇ?..... ಮನುಷ್ಯನ ಕಣ್ಣಿಗೆ ಮರವೇ ಸಿಡಿದು ಹೋಗುತ್ತದೆ ಅಪ್ಪಾ, ಅದಕ್ಕೆ ಎರಡು ಕಣ್ಣಾಗುವಂತೆ ಬಾಳಬೇಡಿ. ಬದಲಿಗೆ ಸಮಾಜದ ಕಣ್ಣಾಗಿ ಬಾಳಿ" ಎನ್ನುತ್ತಿದ್ದರು.
"ಯಾರನ್ನೂ, ಯಾರೂ ಬಲವಂತವಾಗಿ ಬದಲಿಸಲಾಗದು. ಆದರೆ ನಿಮ್ಮ ಒಳ್ಳೆಯ ಆಚರಣೆ ನಡವಳಿಕೆಯಿಂದ ಮೌನವಾಗಿ ಅವರು ಕೂಡಾ ನಿಮ್ಮನ್ನು ಅನುಸರಿಸುವಂತೆ ಮಾಡಿ. ಅದುವೇ ನಿಜವಾದ ಸಮಾಜ ಸೇವೆ" ಅಂತಿದ್ರು.
"ಮುತ್ತೈದೆ ಅಂದರೆ ರೇಷ್ಮೆ ಸೀರೆ ಉಟ್ಟು, ಮೈತುಂಬಾ ಬಂಗಾರ ಹೇರಿಕೊಂಡು ಇರೋದಲ್ಲ ಕಂಡ್ರಪ್ಪಾ. ಯಾವ ಸ್ಥಿತಿಯಲ್ಲಿ 'ತ್ಯಾಗ, ಸಹನೆ, ಕರುಣೆ, ಕ್ಷಮೆ ಹಾಗೂ ದಯೆ' ಈ ಐದು ಮುತ್ತಿನಂಥ ಗುಣವಿರುವುದೋ ಅವಳನ್ನ ಮುತ್ತೈದೆ ಅಂತಾರಪ್ಪಾ. ಮೈತುಂಬಾ ಬಂಗಾರ ಹೇರಿಕೊಂಡೋರೆಲ್ಲಾ ಮುತ್ತೈದೆ ಆಗಲ್ಲ" ಎನ್ನುತ್ತಿದ್ದರು.
"ದೇಹಕ್ಕೆ ಬಂಗಾರ ಹಾಕೋದ್ಯಾಕೆ ಗೊತ್ತೇ? ಬಂಗಾರದಂತಹ ನಡವಳಿಕೆ ಇಟ್ಕೋಬೇಕು ಅನ್ನೋದಕ್ಕೆ ಸೂಚ್ಯವಾಗಿ ಬಂಗಾರ ಹಾಕಬೇಕೆ ವಿನಃ ಪ್ರದರ್ಶನಕ್ಕಾಗಿ ಅಲ್ಲ" ಎನ್ನುತ್ತಿದ್ದರು.
ಹೆಂಡತಿ ಗಂಡನಿಗೆ ಚಂದ ಕಾಣಬೇಕೇ ವಿನಃ ಊರವರಿಗಲ್ಲ. ಈ ಕಾಲ ಹೇಗೆ ಬಂದಿದೆಯಪ್ಪಾ ಅಂದ್ರೆ ಹೆಣ್ಣು ಮಕ್ಕಳು ಗಂಡನ ಮುಂದೆ ಹರುಕು ಸೀರೆ ಉಟ್ಕೋತಾರೆ. ಪುರೋಹಿತರಉ ಬಂದರೆ ರೇಷ್ಮೆ ಸೀರೆ ಉಟ್ಕೋತಾರೆ. ಅದರ ಬದಲು ಗಂಡನ ಮುಂದೆ ಚಂದಾಗಿ ಕಂಡ್ರೆ ಆ ಗಂಡಸರು ಬೇರೆ ಕಡೆ ಯಾಕೆ ತಿರುಗುತ್ತಾರೆ?" ಎಂದು ಸಮಾಜದ ಓರೆ-ಕೋರೆಯನ್ನು ನೇರವಾಗಿ ಚುಚ್ಚುತ್ತಿದ್ದರು.....,,,,,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....