ಒಟ್ಟು ನೋಟಗಳು

Monday, December 12, 2016

ಶ್ರೀ ಸದ್ಗುರು ಮಹಿಮೆ   


   ಅಧ್ಯಾಯ  - 69


    ಗ್ರಂಥ ರಚನೆ - ಚರಣದಾಸ 


ಗುರುಭಕ್ತಿ 






ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಈಗ ಹೇಳಲಿರುವ ವ್ಯಕ್ತಿಯ ಬಗ್ಗೆ ಗುರುನಾಥರ ಮಾತಿನಲ್ಲಿ ಹೇಳುವುದಾದರೆ "ಗುರುಭಕ್ತಿ ಎಂದರೇನು ಅನ್ನೋದಕ್ಕೆ  ಉತ್ತರ ಈ ಮಹಾತಾಯಿ". 

ಸಿರಿವಂತರಾದ ತವರುಮನೆ ಹಾಗೂ ಗಂಡನಮನೆ,  ಇದ್ದಾಗ್ಯೂ ಅಕಾಲದಲ್ಲಿ ಪತಿ ವಿಯೋಗವಾಯಿತು. 

ಗುರುನಾಥರನ್ನು ಪ್ರೀತಿಯಿಂದ ಮಾವ... ಎಂದೇ ಕರೆಯುತ್ತಿದ್ದರು. 

ಚರಣದಾಸನಾದ ನನಗೆ ಅವರ ಬಗ್ಗೆ ಅಭಿಮಾನ ಹಾಗೂ ಸಲುಗೆಯೂ ಇದ್ದು, ಇತ್ತೀಚೆಗೆ ಭೇಟಿಯಾದಾಗ "ನೀ ನಮ್ಮನೆಗೆ ಬರಬೇಕು ಕಣೋ... " ಅಂದ್ರು ಪ್ರೀತಿಯಿಂದ. 

ಅಂತೆಯೇ ಮೊನ್ನೆ ಅಲ್ಲಿಗೆ ಹೋಗಿದ್ದೆ. ಆ ತಾಯಿಗೆ ಗುರು ವಿಚಾರ ಎಷ್ಟು ಹೇಳಿದ್ರೂ ಸಾಲದು... 

ಹೀಗೆ ಮಾತನಾಡುತ್ತಾ ಗುರುವಾಕ್ಯವನ್ನು ಅಸಡ್ಡೆ ಮಾಡಿದರೆ ಏನಾಗುತ್ತದೆ ಅನ್ನೋದಕ್ಕೆ ನನ್ನ ಜೀವನಾನೇ ಉತ್ತಮ ನಿದರ್ಶನ ಕಣೋ... ಎಂದು ಉದಾಹರಣೆ ಸಹಿತ ಹೇಳತೊಡಗಿದರು. 

"ನೋಡು. ನನ್ನ ತವರುಮನೆಯವರಿಗೆ ಮೊದಲಿನಿಂದಲೂ ಗುರುನಾಥರ ಸಂಪರ್ಕವಿತ್ತು. ನಮ್ಮನೆಗೆ ಆಗಾಗ ಬರ್ತಿದ್ರು. ನಮ್ಮೆಜಮಾನರು ಅವರನ್ನ ನಂಬುತ್ತಿರಲಿಲ್ಲ.

ಒಮ್ಮೆ ಮನೆಗೆ ಬಂದ ಮಾವ ನಮ್ಮ ಯಜಮಾನರ ವ್ಯವಹಾರ, ಶೇರು ವಹಿವಾಟು, ಅದರ ಬೆಲೆಯನ್ನು ಪೈಸೆಯೂ ಬಿಡದಂತೆ ಹೇಳಿ ಹೋದರು. ಮನೆಗೆ ಬಂಡ ನಮ್ಮ ಯಜಮಾನರು ಎಲ್ಲ ಲೆಕ್ಕ ತೆಗೆದು ನೋಡಿದ್ರೆ ಗುರುನಾಥರು ಹೇಳಿದ್ದು ಸರಿಯಾಗಿತ್ತು. 

ನಮ್ಮ ಯಜಮಾನರು ಮರುದಿನವೇ ಸಖರಾಯಪಟ್ಟಣಕ್ಕೆ ಹೊರಟರು. ಅಲ್ಲಿ ಗುರುನಾಥರು "ಬನ್ನಿ ನಿಮಗಾಗೇ ಕಾಯುತ್ತಿದ್ದೆ" ಅಂದು ಒಳಗೆ ಕರೆದರು. ಆ ನಂತರ  ಒಂದು ದಿನ ನಮ್ಮ ಮನೆಯವರನ್ನು ಕರೆದ ಗುರುನಾಥರು "ನಿಮ್ಮ ಮಗನಿಗೆ ಇನ್ನು 2-3 ದಿನದಲ್ಲಿ ಮುಂಜಿ ಮಾಡಿಬಿಡಿ. ಆ ನಂತರ ಬೇಕಾದ್ರೆ ಅದ್ದೂರಿ ಊಟ ಹಾಕಿಸಿ ಆಗೋಲ್ವೇ.. " ಅಂತ ಪರಿಪರಿಯಾಗಿ ಕೇಳಿದ್ರೂ ನಮ್ಮ ಮನೆಯವರು ಒಪ್ಪಲಿಲ್ಲ. 

ಆ ನಂತರ ಒಮ್ಮೆ ಗುರುನಿವಾಸಕ್ಕೆ ಬಂಡ ನಮ್ಮ ಮನೆಯವರು "ಗುರುಗಳೇ ನಾವು ತಿರುಪತಿಗೆ ಹೋಗುತ್ತಿದ್ದೇವೆ" ಅಂದ್ರು. ಅದಕ್ಕೆ ಗುರುಗಳು ಇನ್ನು 2-3 ದಿನ ಬಿಟ್ಟು ಹೋದ್ರೆ ಆಗಲ್ವಾ?" ಎಂದರೂ ನಮ್ಮ ಮನೆಯವರು ಒಪ್ಪಲಿಲ್ಲ. 

ಸರಿ ಕೊನೆಗೆ ನಿರ್ವಾಹವಿಲ್ಲದೇ ಗುರುಗಳು "ಸರಿ ನಾಳೆ ಹೊರಡೋದೇ ಆದ್ರೆ ಬೆಳಿಗ್ಗೆ 6ಕ್ಕೆ ಹೊರಡಿ. ಇಲ್ಲಾ ಅಂದ್ರೆ 8 ಗಂಟೆ ಒಳಗಾದ್ರೂ ಹೊರಡಲೇಬೇಕು. ಅದಕ್ಕಿಂತ ತಡ ಮಾಡಬೇಡಿ" ಎಂದು ವಿನಂತಿಸಿದರು. ಆದ್ರೆ ಅದೇನು ವಿಧಿಯಾಟನೋ.... 

ನಾವು ಹೊರಡುವಾಗ ಬೆಳಿಗ್ಗೆ 10 ಗಂಟೆ ಆಯಿತು. ಇದನ್ನರಿತ ಗುರುನಾಥರು ಒಂದೂ ಮಾತನಾಡದೇ ಮನೆಯವರಿಗೆಲ್ಲಾ "ನನ್ನ ಯಾರು ಎಬ್ಬಿಸಬೇಡಿ" ಎಂದು ಹೇಳಿ ಮಲಗಿದವರು ಮೂರು ದಿನ ಏಳಲಿಲ್ಲ. ಉಪವಾಸದಲ್ಲಿ ಇದ್ದರು. 

ನಲಮಂಗಲದ ಸಮೀಪ ನಮ್ಮ ಕಾರು ಮರಕ್ಕೆ ಗುದ್ದಿ ನನ್ನ ಪತಿಯವರು ಮರಣಿಸಿದರು. ನಮ್ಮನ್ನು ಉಳಿಸಬೇಕೆಂಬ ಗುರು ಪ್ರಯತ್ನಕ್ಕೆ ವಿಧಿಯೇ ಅಡ್ಡಗಾಲಾಯ್ತೋ ಅಥವಾ ನಾವೇ ಎಡವಿದೆವೋ? ತಿಳಿಯದು ಎಂದು ಹೇಳಿ ಕಣ್ಣೀರೊರೆಸಿಕೊಂಡರು. 

ಈ ಸಂದರ್ಭದಲ್ಲಿ ಗುರುನಾಥರೇ ಹೇಳಿದ ಇನ್ನೊಂದು ಘಟನೆಯನ್ನು ಬಿಚ್ಚಿಟ್ಟರು. 

ಓರ್ವ ಜಮೀನುದಾರರು ಗುರುನಿವಾಸಕ್ಕೆ ಬರುತ್ತಿದ್ದರು.... ಗುರುನಾಥರೂ ಅವರ ಮನೆಗೆ ಹೋಗಿ ಬರುತ್ತಿದ್ದು ಪರಸ್ಪರ ಸಲುಗೆ ಬೆಳೆದಿತ್ತು. 

ಆ ಜಮೀನುದಾರರ ಪತ್ನಿ ಗಂಡನ ಗಮನಕ್ಕೆ ತರದೇ ಲೇವಾದೇವಿ ವ್ಯವಹಾರ ಮಾಡುತ್ತಿದ್ದರು. ಒಮ್ಮೆ ಒಬ್ಬಾಕೆಯ ಓಲೆಯನ್ನು ಅಡವಿಟ್ಟುಕೊಂಡು ಹಣ ನೀಡಿದ ವಿಚಾರ ಗುರುನಾಥರ ಗಮನಕ್ಕೆ ಬಂತು. 

ಕೂಡಲೇ ಗುರುನಾಥರು "ಬೇಡಮ್ಮಾ... ಆ ರೀತಿ ಓಲೆ, ಒಡವೆ ಅಡವಿಟ್ಟುಕೊಳ್ಳಬೇಡ.  ಅದು ನಿನ್ನ ಓಲೆ ಹಾಕೋ ಯೋಗವನ್ನು ಕಸಿದುಕೊಳ್ಳಬಹುದು" ಎಂದು ಎಚ್ಚರಿಸಿ ತುಸು ತಡೆದು "ನೋಡು ಇನ್ನು ಎರಡು ತಿಂಗಳ ಕಾಲ ನಿಮ್ಮ ಯಜಮಾನ ಮನೆ ಬಿಟ್ಟು ಬೇರೆಲ್ಲೂ ಊಟ ಮಾಡದಂತೆ ಕಾಪಾಡೋ  ನಿನ್ನದು ತಿಳೀತಾ?. ಯಾಕೆ ಅಂದ್ರೆ, ಅವರ ಜೀವಕ್ಕೆ ಆಪತ್ತಿದೆ" ಎಂದು ಎಚ್ಚರಿಸಿದರು . 

ಅದಾಗಿ ಕೆಲ ದಿನ ಕಳೆದಿರಬಹುದು. ಒಂದು ದಿನ ಆ ಜಮೀನುದಾರರ ಮಾವನ ಮನೆಯಿಂದ ಅವರ ಕರ್ಮದ ಬ್ರಾಹ್ಮಣಾರ್ಥ ಊಟಕ್ಕೆ ಕರೆ ಬಂತು. 

ತುಸು ಯೋಚಿಸಿದ ದಂಪತಿಗಳು ಅಲ್ಲಿ ಹೇಗೂ ನಾವೇ ಅಡುಗೆ ಮಾಡಬೇಕಾದುದರಿಂದ ತೊಂದರೆ ಇಲ್ಲ ಎಂದು ನಿರ್ಧರಿಸಿ ಮಾವನ ಮನೆಗೆ ಹೋದರು. ಅರ್ಧ ಊಟವಾಗೋ ಹೊತ್ತಿಗೆ ಆಹಾರದಲ್ಲಿ ಹಳ್ಳಿ ಬಿದ್ದಿರುವುದು ಗಮನಕ್ಕೆ ಬಂತು. ಅದಾಗಲೇ ಆ ಜಮೀನುದಾರರು ವಿಪರೀತ ವಾಂತಿ ಮಾಡತೊಡಗಿದ್ದರು. ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯದಲ್ಲಿ ಅಸುನೀಗಿದರು ಎಂದು ಮೌನವಾದರು. 

ನಂತರ ಮತ್ತೆ ಮುಂದುವರೆದು ಆ ನಂತರ ಒಮ್ಮೆ ತುಂಬಾ ಹೆದರುತ್ತಿದ್ದ ನನ್ನ ತಲೆ ಮೇಲೆ ಕೈಯಿಟ್ಟು "ನಾನಿದೀನಲ್ಲ . ಇನ್ನು ಭಯ ಬೇಕೆ?" ಎಂದು ಅಭಯವಿತ್ತರು. "ನೀ ಹಾಡುವುದನ್ನು ನಿಲ್ಲಿಸಬೇಡ. ಅದು ನಿಂಗೆ ಬದುಕು ನೀಡುತ್ತೆ ಅಂದಿದ್ರು ಒಂದು ದಿನ... " ಇಂದು ಅವರ ಮಾತೇ  ನಮ್ಮನ್ನು ಜೀವನದುದ್ದಕ್ಕೂ ಕೈ ಹಿಡಿದು ನಡೆಸುತ್ತಿದೆ ಎಂದು ಹೇಳಿ ಅಲ್ಲೇ ಇದ್ದ ಗುರುನಾಥರ ಫೋಟೋವನ್ನು ದಿಟ್ಟಿಸಿದರು. ಕಣ್ಣಾಲಿಗಳು ತೇವಗೊಂಡಿತ್ತು. ಆ ತಾಯಿಯ ಭಾವ ಪರಿಶುದ್ಧತೆ ಹಾಗೂ ಗುರುಭಕ್ತಿಯನ್ನು ಮತ್ತೆ ಮತ್ತೆ ಮನನ ಮಾಡುತ್ತಾ  ಅವರಿಗೆ ವಂದಿಸಿ ನಾನು ಅಲ್ಲಿಂದ ಹೊರಟು ಬಂದೆ..... ,,,,,,,,,,,


ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


No comments:

Post a Comment