ಶ್ರೀ ಸದ್ಗುರು ಮಹಿಮೆ
ಅಧ್ಯಾಯ - 62
ಗ್ರಂಥ ರಚನೆ - ಚರಣದಾಸ
ಹೆಂಡತಿ ಸತ್ತು ನಾಯಿಯಾಗಿ ಬಂದ ಕಥೆ
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಒಂದು ದಿನ ಬಹುಶಃ ಶಿವಮೊಗ್ಗ ಸುತ್ತಮುತ್ತಲಿನಲ್ಲಿ ವಾಸವಾಗಿದ್ದು ಅರೇಬಿಯನ್ ದೇಶದಲ್ಲಿ (ಸೌದಿ) ಒಳ್ಳೆಯ ಕೆಲಸದಲ್ಲಿದ್ದ ಓರ್ವ ವ್ಯಕ್ತಿ, ತನ್ನ ಕಾರಿನಲ್ಲಿ ಸಾಕಷ್ಟು ಹೂವು ಹಣ್ಣುಗಳೊಂದಿಗೆ ಗುರುನಿವಾಸಕ್ಕೆ ಬಂದರು.
ಆತ ಕಾವಿ ಧರಿಸಿದ್ದನ್ನು ಕಂಡ ಗುರುನಾಥರು "ಇದೇಕೆ ಹೀಗೆಂದು" ಪ್ರಶ್ನಿಸಿದರು.
ಆತ "ಸ್ವಾಮಿ, ನನ್ನ ಪತ್ನಿ ಸತ್ತು ಹೋದಳು. ನನಗಿನ್ನು ಜೀವನ ಬೇಡವಾಗಿದೆ. ಸನ್ಯಾಸಿಯಾಗಬೇಕೆಂದು ನಿರ್ಧರಿಸಿ ಬಂದಿರುವೆ" ಎಂದರು.
ಆಗ ಗುರುಮಹಾರಾಜರು "ಇಲ್ಲಿಗೆ ಹೇಗೆ ಬಂದೆ?" ಎಂದು ಪ್ರಶ್ನಿಸಿದರು.
ಆತ "ನನ್ನ ಕಾರಿನಲ್ಲಿ ಬಂದೆ" ಎಂದು ಉತ್ತರಿಸಿದರು.
ಆಗ ಗುರುಗಳು "ಸನ್ಯಾಸಿಯಾಗ ಹೊರಟವನಿಗೆ ಈ ಕಾರಿನ ವ್ಯಾಮೋಹವೇಕೆ? ಕಾವಿಯ ಹಂಗೇಕೆ? ಮನೆಯಲ್ಲಿ ನಿನ್ನ ಹೆಂಡತಿಯ ಸೀರೆ ಅಷ್ಟೊಂದಿದೆಯಲ್ಲಾ ಅದನ್ನೇಕೆ ಹಾಗಿಟ್ಟಿರುವೆ?"
"ಸನ್ಯಾಸವೆಂಬುದು ಯಾವುದೋ ಘಟನೆಯ ಆಧಾರದಲ್ಲಿ ಮೂಡುವ ಭಾವವಲ್ಲ. ಅದನ್ನು ಸನ್ಯಾಸವೆಂದು ಕರೆಯಲಾಗುವುದೂ ಇಲ್ಲ".
"ನಿನ್ನ ಹೆಂಡತಿ ಚಿಕ್ಕಮಗಳೂರು ಸಮೀಪ ಒಬ್ಬರ ಮನೆಯಲ್ಲಿ ನಾಯಿಯಾಗಿ ಹುಟ್ಟಿದ್ದಾಳೆ. ಆ ನಾಯಿಗೆ ಒಂದು ಕಣ್ಣಿಲ್ಲ. ಅಲ್ಲಿಗೆ ಹೋಗಿ "ಸೀತಾ" ಎಂದು ಕರೆ, ಬರ್ತಾಳೆ, ತೆಗೆದುಕೊಂಡು ಸರಿಯಾಗಿ ಸಾಕು" ಎಂದು ಹೇಳಿ ಕಳಿಸಿಕೊಟ್ಟರು.
ಆ ವ್ಯಕ್ತಿ ಗುರುನಾಥರು ಹೇಳಿದ ಜಾಗಕ್ಕೆ ಹೋಗಿ ನೋಡಲು ಆ ನಾಯಿ ಇದ್ದು ಸೀತಾ ಎಂದು ಕರೆದಾಗ ಬಂತು. ಅದನ್ನವರು ಸಾಕಲು ಕೊಂಡು ಹೋದರು.
ಆಧ್ಯಾತ್ಮವನ್ನು ಇಷ್ಟೊಂದು ಸುಲಭವಾಗಿ ಹೇಳುತ್ತಿದ್ದುದು ನಿಜಕ್ಕೂ ವಿಶೇಷ: - "ಪಾತ್ರೆಯಲ್ಲಿ ನೀರಿಟ್ಟು ಅದರೊಳಗೆ ಎಣ್ಣೆ ಸುರಿದರೆ, ಎಣ್ಣೆ ನೀರು ಎಷ್ಟು ಅನ್ಯೋನ್ಯವಾಗಿ ಹೊಂದಿಕೊಂಡಿರುವಂತೆ ತೋರುವುದಲ್ಲಾ?. ಆದರೆ ಅವನ್ನು ಬಹು ಸುಲಭವಾಗಿ ಬೇರ್ಪಡಿಸಬಹುದು. ಹಾಗೆಯೇ ಜೀವನದಲ್ಲಿ ಬರುವ ಎಲ್ಲಾ ಘಟನೆಗಳಿಗೂ ನಾವು ಅಂಟಿಯೂ ಅಂಟದಂತೆ ಇರುವುದೇ ಸನ್ಯಾಸ" ಎನ್ನುತ್ತಿದ್ದ ಮಾತು ಇಂದಿಗೂ ಕಿವಿಯಲ್ಲಿ ಮಾರ್ದನಿಸುತ್ತದೆ.
ನಾಯಿ ನೀಡಿ ಜೀವ ಉಳಿಸಿದ್ದು
ಚನ್ನರಾಯಪಟ್ಟಣದ ಸಮೀಪದ ಹಳ್ಳಿಯ ವಾಸಿಯಾದ ವ್ಯಕ್ತಿಯೋರ್ವರು ಕೌಟುಂಬಿಕ ಭಿನ್ನಾಭಿಪ್ರಾಯದಿಂದಾಗಿ ತನ್ನ ಕುಟುಂಬದೊಂದಿಗೆ ಚಿಕ್ಕಮಗಳೂರಿನಲ್ಲಿ ವಾಸವಾಗಿದ್ದರು.
ಶಂಕರ ಜಯಂತಿಯ ಹಿಂದಿನ ದಿನ ರಾತ್ರಿ ಗುರುನಿವಾಸದಲ್ಲಿದ್ದ ಆ ವ್ಯಕ್ತಿಯನ್ನು ಕರೆದ ಗುರುನಾಥರು "ನಾಳೆ ಬೆಳಿಗ್ಗೆ ನಿನ್ನ ಮಗನಿಗೆ ಉಪನಯನ ಮಾಡು. ಮುಹೂರ್ತ ಒಳ್ಳೆಯದಿದೆ" ಎಂದರು.
ಧಿಢೀರನೆ ಬಂದ ಈ ಆದೇಶದಿಂದ ಒಂದು ಕ್ಷಣ ವಿಚಲಿತರಾದರೂ, ಗುರುವಾಕ್ಯ ಪ್ರಮಾಣವೆಂದರಿತ ಆತ ಒಪ್ಪಿ ಮಧ್ಯರಾತ್ರಿಯೇ ಚಿಕ್ಕಮಗಳೂರಿಗೆ ಹೋಗಿ ಮರುದಿನ ಉಪನಯನ ಶಾಸ್ತ್ರ ಮುಗಿಸಿದರು.
ಇದಕ್ಕೂ ಕೆಲ ತಿಂಗಳ ಮುಂಚೆ ಕುಟುಂಬ ಸಮೇತರಾಗಿ ಸಖರಾಯಪಟ್ಟಣಕ್ಕೆ ಬಂದಿದ್ದ ಅವರಿಗೆ ಗುರುಗಳು ಬಂದು ನಾಯಿ ಮರಿ ನೀಡಿ "ಇದನ್ನು ಸಾಕು, ಜೀವ ಉಳಿಸುತ್ತೆ" ಎಂದು ಹೇಳಿ ಕಳಿಸಿದ್ದರು.
ಉಪನಯನವಾದ ನಂತರ ಗುರುಗಳು ಅವರ ಮನೆಗೆ ಹೋದರು ಒಳಗೆ ಹೋಗದೆ ಒಂದು ಜಾಗದಲ್ಲಿ ನಿಂತು ಅಲ್ಲಿಯೇ ಆತಿಥ್ಯ ಸ್ವೀಕರಿಸಿ ಹೊರ ನಡೆದಿದ್ದರು.
ಅದಾಗಿ ಕೆಲ ದಿನಗಳಲ್ಲಿ ಅಂದು ಗುರುನಾಥರು ನಿಂತಿದ್ದ ಜಾಗದಲ್ಲಿಯೇ ಆ ನಾಯಿಮರಿಯನ್ನು ಕಟ್ಟಿದ್ದರು. ಆ ವ್ಯಕ್ತಿಯ ಹೆಂಡತಿ ಕೆಲಸ ನಿಮಿತ್ತ ಹೊರ ಹೋಗಿದ್ದರು. ಆ ವ್ಯಕ್ತಿ ಆಗ ತಾನೇ ಮನೆಯಿಂದ ಹೊರ ಹೊರಟಿದ್ದರು.
ಆಗ ಉಪನಯನವಾಗಿದ್ದ ಆ ಹುಡುಗ ಮನೆಯ ಮೇಲೆ ಹತ್ತಿ ಯಾವುದೋ ಕಾರಣಕ್ಕೆ ಕೆಳ ನೋಡಲು ತಲೆ ತಿರುಗಿ ಬಂದು ಹದಿನೆಂಟು ಅಡಿ ಎತ್ತರದಿಂದ ಆಯತಪ್ಪಿ ಕೆಳಬಿದ್ದನು. ಆದರೆ ಗುರುಕರುಣೆ. ಅಂದು ಗುರುಗಳು ನಿಂತಿದ್ದ ಜಾಗದಲ್ಲಿ ಆ ನಾಯಿಯನ್ನು ಕಟ್ಟಿದ್ದು ಆ ಹುಡುಗ ನಾಯಿಯ ಮೇಲೆ ಬಿದ್ದು ಅಲ್ಪ ಸ್ವಲ್ಪ ಏಟು ತಿಂದನೇ ವಿನಃ ಪ್ರಾಣಾಪಾಯದಿಂದ ಪಾರಾದನು.
"ದೊಫ್" ಎಂಬ ಸದ್ದು ಕೇಳಿ ಹಿಂತಿರುಗಿ ಬಂದ ಆ ವ್ಯಕ್ತಿ ಕೂಡಲೇ ಮಗನನ್ನು ಆಸ್ಪತ್ರೆಗೆ ಕೊಂಡೊಯ್ದರು. ಆ ಹುಡುಗ ಇದೀಗ ಬಹುಶಃ ಕಾಲೇಜು ಓದುತ್ತಿದ್ದು ಆರೋಗ್ಯದಿಂದಿದ್ದಾನೆ. ಗುರು ನೀಡಿದ ನಾಯಿ ಮರಿ ತಾನು ಸತ್ತು ಹುಡುಗನ ಜೀವ ಉಳಿಸಿತ್ತು.
"ನಂಬಿದರೆ ಶಿವ, ನಂಬದಿರೆ ಶವ" ಎಂಬ ಗುರುಗಳ ಮಾತಿಗೆ ಇದಕ್ಕಿಂತ ದೊಡ್ಡ ನಿದರ್ಶನ ಬೇಕಿಲ್ಲವೆನಿಸುತ್ತದೆ....,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
No comments:
Post a Comment