ಶ್ರೀ ಸದ್ಗುರು ಮಹಿಮೆ
ಅಧ್ಯಾಯ - 74
ಗ್ರಂಥ ರಚನೆ - ಚರಣದಾಸ
ಕಾಲವೇ ಗುರು
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಆಗಿನ್ನೂ ಗುರುನಾಥರು ಲೋಕಕ್ಕೆ ಪ್ರಕಟವಾಗಿರಲಿಲ್ಲ. ಆದರೂ ಅವರಿಂದ ಆಕರ್ಷಿತರಾದ ಓರ್ವರು ಸದಾ ಗುರುನಾಥರ ಸಂಗದಲ್ಲಿ ಇರಬಯಸುತ್ತಿದ್ದರು. ಆ ವ್ಯಕ್ತಿ ಸರ್ಕಾರಿ ನೌಕರರೂ ಆಗಿದ್ದರು.
ಒಮ್ಮೆ ಬೆಂಗಳೂರಿನ ಗುರುನಾಥರ ಸಹೋದರಿ ಮನೆ ಸಮೀಪ ನಡೆಯುತ್ತಿದ್ದ ಹೋಮಕ್ಕೆ ಹೋಗಲು ತೀರ್ಮಾನಿಸಿದ ಗುರುನಾಥರು ಆ ವ್ಯಕ್ತಿಯೊಡನೆ ರಾಜಾಜಿನಗರಕ್ಕೆ ಹೋದರು. ಅಲ್ಲಿ ಆ ವ್ಯಕ್ತಿಯನ್ನು ಕೆಲಕಾಲ ಅಲ್ಲೇ ಇರಲು ತಿಳಿಸಿದ ಗುರುನಾಥರು ಒಳ ಹೋದರು.
ಕೂಡಲೇ ನೌಕರಿಗೆ ರಜಾ ಹಾಕಲು ಇಷ್ಟವಿರದ ಆ ವ್ಯಕ್ತಿ ತನ್ನ ದ್ವಿಚಕ್ರ ವಾಹನವನ್ನೇರಿ ಕಚೇರಿಗೆ ಬಂದರು. ಕೆಲ ಸಮಯದ ನಂತರ ಹೊರಬಂದ ಗುರುನಾಥರಿಗೆ ಆ ವ್ಯಕ್ತಿ ಕಾಣಲಿಲ್ಲ. ಕೂಡಲೇ ಅವರ ಕಚೇರಿಗೆ ಹೋಗಿ ಆ ವ್ಯಕ್ತಿಯನ್ನು ಮತ್ತೆ ಕರೆ ತಂದು "ನೀ ಎಲ್ಲೇ ಹೋದ್ರೂ ನಾ ನಿನ್ನ ಬಿಡಲ್ಲ ಕಣೋ" ಎಂದು ನಕ್ಕರು. ಇದು ಗುರುನಾಥರ ಎರಡರಿಯದ ಸ್ನೇಹವನ್ನು ಬಿಂಬಿಸುತ್ತದೆ.
ಮತ್ತೊಮ್ಮೆ ಅದೇ ವ್ಯಕ್ತಿ ಗುರುನಿವಾಸಕ್ಕೆ ಬಂದಿದ್ದರು. ಸಾಮಾನ್ಯವಾಗಿ ಸಮೀಪದ ಈಶ್ವರ ದೇಗುಲಕ್ಕೆ ಹೋಗುತ್ತಿದ್ದ ಗುರುನಾಥರು ಅಂದು ಆ ವ್ಯಕ್ತಿಯೊಂದಿಗೆ ದೇಗುಲ ಸಮೀಪಿಸಿ ಒಳ ನಡೆದರು.
ಹೊರಗಿನ ಕಂಬ ದಾಟುತ್ತಿದ್ದ ಆ ವ್ಯಕ್ತಿಯನ್ನು ದಿಢೀರನೆ ತನ್ನತ್ತ ಎಳೆದ ಗುರುನಾಥರು "ಅಲ್ಲಿ ನೋಡು ಮಾಯೆ... ಆಚೆ ಸರಿ" ಎಂದರು.
ಆ ವ್ಯಕ್ತಿ ಗಾಬರಿಯಾಗಿ ನೋಡಿದರೆ ಅಲ್ಲೊಂದು ಹಸಿರು ಹಾವಿದ್ದು ಅವರು ಇನ್ನೇನು ತುಳಿಯುವುದರಲ್ಲಿದ್ದರು. ಅದರ ಮರ್ಮವೇನೆಂದು ಅವರಿಗೆ ತಿಳಿಯಲಿಲ್ಲ.
ಮತ್ತೊಂದು ಸಂದರ್ಭ ಆ ವ್ಯಕ್ತಿ ತನ್ನ ಸೋದರನೊಡನೆ ಬೆಂಗಳೂರಿನಿಂದ ಸಖರಾಯಪಟ್ಟಣದೆಡೆಗೆ ಹೊರಟರು. ಹೊರಡುವ ಮೊದಲು ಆ ವ್ಯಕ್ತಿ "ತಾನು ಗುರುನಾಥರನ್ನು ನೋಡಲೇಬೇಕು" ಅಂದುಕೊಂಡರು.
ಅವರ ಸೋದರ "ತನಗೆ ಗುರುನಿವಾಸಕ್ಕೆ ಭೇಟಿ ನೀಡಿ ಬಂದರೂ ಸಾಕು" ಎಂದುಕೊಂಡರು. ಗುರುನಿವಾಸಕ್ಕೆ ಬಂದರೆ ಗುರುನಾಥರು ಇರಲಿಲ್ಲ. ಊಟ ಮಾಡಿದ ಆ ವ್ಯಕ್ತಿ ತಾನೊಬ್ಬನೇ ಮುಖ್ಯ ರಸ್ತೆ ತನಕ ನಡೆದುಬಂದರು.
ಆಗ ಇದ್ದಕ್ಕಿದ್ದಂತೆಯೇ ಅವರ ಸಮೀಪ ನಿಂತ ಕಾರಿನಿಂದ ಯಾರೋ "ಹಾಕ್ಕೊಳ್ರೋ ಒಳಕ್ಕೆ ಅವನ್ನ" ಎಂದದ್ದು ಕೇಳಿಸಿತು. ಒಳ ನೋಡಿದರೆ ಗುರುನಾಥರು.... !
ಆಶ್ಚರ್ಯದಿಂದ ಕಾರನ್ನೇರಿದ ಅವರಿಗೆ ಗುರುನಾಥರು "ನೋಡಯ್ಯಾ ನೀ ನನ್ನೇ ನೋಡಬೇಕು ಅಂದುಕೊಂಡು ಬಂದೆ.. ಅದೇ ನಿನ್ನ ತಮ್ಮ ಮನೆ ಮುಟ್ಟಿದ್ರು ಸಾಕು ಅಂದುಕೊಂಡು ಬಂದ ಅಲ್ಲವೇ? ಇದು ನಿನ್ನ ಲಭ್ಯತೆ. ಅದು ಅವನ ಲಭ್ಯತೆ. ಬಾ ಹೋಗೋಣ" ಎಂದು ನಗುತ್ತಾ ನುಡಿದರು.
ಅದೇ ವ್ಯಕ್ತಿ ಮತ್ತೊಂದು ದಿನ ಬೆಂಗಳೂರಿನಿಂದ ಹೊರಟು ಬರುವಾಗ ದಾರಿಯಲ್ಲಿ "ಈ ದಿನ ಗುರುನಾಥರ ತೋಟಕ್ಕೆ ಹೋಗಿ ಎಳನೀರು ಕುಡಿಯಬೇಕು" ಎಂದು ಮನದಲ್ಲೇ ಅಂದುಕೊಂಡರು.
ಗುರುನಿವಾಸಕ್ಕೆ ಬಂದ ಅವರನ್ನು ಗುರುನಾಥರು ನೇರವಾಗಿ ತೋಟಕ್ಕೆ ಕರೆದುಕೊಂಡು ಹೋದರು. ಹೋದವರೇ "ಎಳನೀರು ಕೀಳಬೇಕಾಗಿತ್ತು. ಯಾರೂ ಇಲ್ಲವಲ್ಲಾ, ಯಾರಪ್ಪಾ ಯಾರಾದರೂ ಇದ್ದೀರಾ?" ಎಂದು ಕೂಗಲು,
"ನಾನಿದ್ದೀನಿ ಬುದ್ಧಿ" ಎಂದು ಒಬ್ಬ ಅಪರಿಚಿತ ವ್ಯಕ್ತಿ ಬಂದನು. ಆತ ಗುರುನಾಥರ ವಿನಂತಿಯಂತೆ ಮರವನ್ನೇರಿ ಎಳನೀರು ಕೊಯ್ದನು. ಕೆಳಗಿಳಿದ ಅವನಿಗೆ ಗುರುನಾಥರೇ ಸ್ವತಃ ಎಳನೀರು ನೀಡಿದರು. ಆತ ಹಿಂಜರಿಯುತ್ತಾ ಕುಡಿಯಲಾರಂಭಿಸಲು, ಆತನ ಪಾದ ಮುಟ್ಟಿ ನಮಸ್ಕರಿಸಿದ ಗುರುನಾಥರು "ನೀನೇ ಭಗವಂತ" ಎಂದು ಹೇಳಿ ಆ ವ್ಯಕ್ತಿಯೊಂದಿಗೆ ಮನೆ ದಾರಿ ಹಿಡಿದರು.
ದಾರಿಯಲ್ಲಿ ಬೆಂಗಳೂರಿನ ಆ ವ್ಯಕ್ತಿಗೆ "ಅಯ್ಯಾ ಏನು ತಿಳ್ಕೊಂಡೆ ಇವತ್ತು?" ಎನ್ನಲು,
ಅವರು ಏನೂ ತಿಳಿಯದೇ ತಲೆ ಅಲ್ಲಾಡಿಸಿದರು.
ಆಗ ಗುರುನಾಥರು "ತೋಟ ನಿಂದು, ಮರವೂ ನಿಂದು, ಆದ್ರೆ ಕೊಯ್ದು ಕೊಟ್ಟವನೇ ಬೇರೆ ಯಾರೋ ಅಲ್ಲವೇ? ಹಾಗಾದ್ರೆ ನಿಜವಾದ ಭಗವಂತ ಕೊಯ್ದು ನೀಡಿ ನಿನ್ನ ಬಯಕೆ ತೀರಿಸಿದ ಆ ವ್ಯಕ್ತಿಯೇ ಅಲ್ಲವೇನಯ್ಯಾ?" ಎಂದರು.
ಈ ಘಟನೆಗಳು ಗುರುನಾಥರು ಯಾವಾಗಲೂ ಹೇಳುತ್ತಿದ್ದ ಆ ಕಾಲವೇ ಭಗವಂತ, ಅದುವೇ ಗುರು, ನಾವೆಲ್ಲರೂ ಕಾಲನ ಅಧೀನ, ಅದಕ್ಕೆ ಎಲ್ಲವನ್ನು ಕಾಲಕ್ಕೆ ಬಿಟ್ಟು ನೀನು ನಿನ್ನ ಕರ್ತವ್ಯದಲ್ಲಿ ನಿರತನಾಗು" ಎಂಬ ಮಾತನ್ನು ನೆನಪಿಗೆ ತರುತ್ತದೆ.
ಗುರುವಿಗೆ ಅಸಾಧ್ಯವೆಂಬುದು ಯಾವುದೂ ಇಲ್ಲ. ಅವನು ಕಾಲಾತೀತ, ದೇಶಾತೀತ, ಸಮಾಯಾತೀತ, ಸೃಷ್ಠಿಯ ಪರಮ ರಹಸ್ಯವೆಲ್ಲವೂ ಒಬ್ಬ ಸಮರ್ಥ ಗುರುವಿನ ಅಧೀನ.
ಒಮ್ಮೆ ಬೆಂಗಳೂರಿನ ಕಾಲೇಜೊಂದರಲ್ಲಿ ಶಿಕ್ಷಕರಾಗಿದ್ದ ವ್ಯಕ್ತಿಯೋರ್ವರು ಅಪಘಾತದಿಂದಾಗಿ ಕಾಲು ಮುರಿದುಕೊಂಡು ಆಸ್ಪತ್ರೆಗೆ ದಾಖಲಾದರು. ತದನಂತರ ವೈದ್ಯರ ಸಲಹೆಯಂತೆ ಆ ಮನೆಯಲ್ಲಿ ಊರುಗೋಲಿನ ಸಹಕಾರದಿಂದಲೇ ನಡೆಯುತ್ತಿದ್ದರು.
ಕೆಲ ದಿನಗಳ ಬಳಿಕ ವಿಷಯ ತಿಳಿದ ಗುರುನಾಥರು ನೇರವಾಗಿ ಆ ವ್ಯಕ್ತಿಯ ಮನೆಗೆ ಹೋಗಿ, "ಅಯ್ಯಾ ಆ ಊರುಗೋಲನ್ನು ಬಿಸಾಕಿ, ಬಾ ನನ್ನ ಬಳಿಗೆ" ಅಂದರು. ಅದುವರೆವಿಗೂ ಊರುಗೋಲಿನ ಆಸರೆಯಿಂದಲೇ ಇದ್ದ ಆ ವ್ಯಕ್ತಿ ಗುರುನಾಥರ ಮಾತಿನಂತೆ ನಡೆದು ಊರುಗೋಲನ್ನು ಬಿಸುಟು ಆರಾಮವಾಗಿ ನಡೆದುಬಂದರು.
ಹಾಗೆಯೇ ಮತ್ತೊಮ್ಮೆ ಮಲೆನಾಡು ಮೂಲದ, ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ವ್ಯಕ್ತಿಯೋರ್ವ ಜೀವನದಲ್ಲಿ ಎಂದೂ ಯಾವ ಸನ್ಯಾಸಿಗಳನ್ನು ನಂಬಿದವನಲ್ಲ. ಆತ ಕಾಲೇಜಿನಲ್ಲಿ ಕಂಪೆನಿಗಳು ಬಂದು ಕೆಲಸಕ್ಕೆ ನಡೆಸುವ ಸಂದರ್ಶನಗಳಲ್ಲಿ ಆಯ್ಕೆಯಾಗಿರಲಿಲ್ಲ.
ಈ ಕಾರಣಕ್ಕಾಗಿ ಆತಂಕಗೊಂಡು ಗುರುಗಳಲ್ಲಿಗೆ ಬಂದ ಆ ವ್ಯಕ್ತಿಗೆ "ಕೆಂಪು, ಹಳದಿ, ಹಸಿರು ಮೂರು ಬಣ್ಣದ ಅಂಗಿ ಹಾಕಿಕೊಂಡು ಹೋಗಲು ಹೇಳಿದರು. ಸಂದರ್ಶನ ಸಮಯದಲ್ಲಿ ಆ ವ್ಯಕ್ತಿ ತಾನು ನೀಡಿದ ಉತ್ತರಗಳಿಂದ ಈ ಬಾರಿಯೂ ಆಯ್ಕೆ ಆಗುವುದಿಲ್ಲವೆಂದು ಯೋಚಿಸಿದ್ದರು. ಆದರೆ ಆತ ಆಶ್ಚರ್ಯಕರ ರೀತಿಯಲ್ಲಿ ಆಯ್ಕೆಯಾಗಿದ್ದರು. ಮುಂದೆ ಆ ವ್ಯಕ್ತಿ ಕೆಲಸದ ಮೇಲೆ ದೆಹಲಿಗೆ ಹೊರಟುಹೋದರು. ಮಾತ್ರವಲ್ಲ 'ಗುರು' ಎಂಬ ಭಾವದ ಬಗ್ಗೆ ಅಪಾರ ಪ್ರೀತಿ ಭಕ್ತಿ ಬೆಳೆಸಿಕೊಂಡರು.
ಹಾಗೆಯೇ ಇನ್ನೊಂದು ಸಂದರ್ಭ. ಮಲೆನಾಡು ಮೂಲದ ವ್ಯಕ್ತಿಯೋರ್ವ ಸ್ನೇಹಿತರೊಂದಿಗೆ ಶಿವಮೊಗ್ಗದ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಜೊತೆಗಾರನೋರ್ವ "ಅಲ್ಲಿ ನೋಡು ಅವಧೂತರು. ಬಾ ದರುಶನ ಮಾಡುವ ಎಂದು ಉಳಿದವರನ್ನು ಕರೆದುಕೊಂಡು ಹೋದರಂತೆ. ಅದು ಅಂತರಾಷ್ಟ್ರೀಯ ಕ್ರಿಕೆಟ್ ಸ್ಪರ್ಧೆ ನಡೆಯುತ್ತಿದ್ದ ಸಂದರ್ಭ.
ಕುತೂಹಲಗೊಂಡಿದ್ದ ಆ ವ್ಯಕ್ತಿಗೆ ಗುರುನಾಥರು "ನೋಡು ಈಗ ಸಚಿನ್ ವಿಕೆಟ್ ಬಿತ್ತು" ಎಂದರು. ಅದು ನಿಜವಾಗಿತ್ತು. ನಂತರ ಆ ಯುವಕರನ್ನು ಕುರಿತು, ಗುರುನಾಥರು "ನೋಡ್ರಪ್ಪಾ ಗುಂಪಿನಲ್ಲಿ ಗುರು ಇರೋಲ್ಲ ಒಂಟಿಯಾಗಿ ಬನ್ರೋ" ಎಂದರು.
ಆ ನಂತರ ಗುರುನಿವಾಸಕ್ಕೆ ತೆರಳಿದ ಆಕ್ ವ್ಯಕ್ತಿ ತನ್ನ ನಿರುದ್ಯೋಗದ ಕುರಿತು ತನಗಿರುವ ಆತಂಕವನ್ನು ಹೊರಹಾಕಿದರು.
ಆಗ ಗುರುನಾಥರು "ಇನ್ನು ಹದಿಮೂರು ದಿನದಲ್ಲಿ ಕೆಲಸ ಹಿಡೀತೀಯಾ ಆಯ್ತಾ?" ಎಂದು ಕಳಿಸಿದರು. ಅಂತೆಯೇ ಹದಿಮೂರನೇ ದಿನಕ್ಕೆ ಅವರ ಸಂಬಂಧಿಯೊಂದಿಗೆ ಹೋಟೆಲ್ ವ್ಯವಹಾರ ಆರಂಭಿಸಿದರು. ಇಂದು ಆ ವ್ಯವಹಾರದಿಂದಲೇ ಅವರ ಜೀವನ ಹಸನಾಗಿರುವುದು.....,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
No comments:
Post a Comment