ಶ್ರೀ ಸದ್ಗುರುನಾಥ ಲೀಲಾಮೃತ
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ಅಧ್ಯಾಯ - 23
ತತ್ವಬೋಧನಜೇಸಿ ಕಾಪಾಡು
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶಿವಮೊಗ್ಗದ ಒಬ್ಬ ಘನಸಂಗೀತ ಸಾಧಕರು, ಸಾತ್ವಿಕರು, ಗುರುಭಕ್ತರು, ಏಕಲವ್ಯನಂತೆ, ಗುರುನಾಥರ ದರ್ಶನವಾಗುವುದಕ್ಕಿಂತ ಮುಂಚಿನಿಂದ ಗುರುನಾಥರ ಮಹಾತ್ಮೆಗಳನ್ನು ಕೇಳಿ ಕೇಳಿ ಅವರ ಶಿಷ್ಯರಾಗಿದ್ದರು. ಅವರ ಉತ್ಕಟ ಭಾವನೆಗಳಿಗೆ ಅನುಗುಣವಾಗಿ ಅನೇಕ ಸಾರಿ ಗುರುನಾಥರ ದರ್ಶನವೂ ಸಿಕ್ಕಿತ್ತು. ಗುರುನಾಥರ ಕೃಪಾದೃಷ್ಠಿಯೂ ಅನೇಕ ಸಂದರ್ಭದಲ್ಲಿ ಅವರಿಗೊದಗಿತ್ತು.
ಭಕ್ತರ ಮನೋಕಾಮನೆಗಳು ಹಲವು ರೀತಿಯವು. ತಮ್ಮಲ್ಲಿದ್ದ ಅತ್ಯುತ್ತಮವಾದುದನ್ನು ಗುರವಿಗರ್ಪಿಸಿ ಧನ್ಯರಾಗುವ ಬಯಕೆ ಸದ್ಭಕ್ತರಿಗೆ ಇರುವುದು ಸಹಜ. ಉತ್ತಮ ಸಂಗೀತಗಾರರಾದ ಇವರ ಸೇವೆ ಅನೇಕ ಮಹಾಮಹಿಮರ ಪಾದತಲದಲ್ಲಾಗಿತ್ತು. ಗುರುನಾಥರಿಗೂ, ತಮ್ಮ ನುಡಿ ನಮನವನ್ನು ಸಲ್ಲಿಸಬೇಕೆಂಬ ಅದಮ್ಯ ಬಯಕೆ ಇವರದಾಗಿತ್ತು. ಇದರ ಜೊತೆಗೆ ಸಹಸ್ರಾರು ಉತ್ತಮ ಸಂಗೀತಗಾರರನ್ನು ತಯಾರು ಮಾಡಿದ ಇವರು ಆ ಶಿಷ್ಯರಲ್ಲಿ ಕೆಲವರು "ಗುರುನಾಥರ ಬಳಿ ಹಾಡುವ ಅವಕಾಶ ಸಿಕ್ಕಿತು. ಇದು ನಿಮ್ಮ ಕೃಪೆಯಿಂದ" ಎಂದಾಗ, ಹೀಗಾದರೂ ಗುರುನಾಥರಿಗೆ ನನ್ನ ನುಡಿ ಸಂದಿದೆಯಲ್ಲಾ, ಎಂದು ತೃಪ್ತರಾದರೂ, ನನಗೂ ಅವಕಾಶ ಏಕೆ ಗುರುನಾಥರು ನೀಡುತ್ತಿಲ್ಲ? ಎಂದು ಮೌನವಾಗಿ ಕೊರಗುತ್ತಾ ಪ್ರಾರ್ಥಿಸುತ್ತಿದ್ದರು.
ಒಂದು ದಿನ ಆಘಾತಕಾರಿ ಸುದ್ದಿಯೊಂದು ಇವರಿಗೆ ಬಂದಪ್ಪಳಿಸಿತು. ಆದೇ ಗುರುನಾಥರ ಮಹಾ ನಿರ್ವಾಣದ ಸುದ್ದಿ. ಮತ್ತೊಬ್ಬ ಗುರು ಬಂಧುಗಳು ಇವರನ್ನು ಕರೆದುಕೊಂಡು ಸಖರಾಯಪಟ್ಟಣಕ್ಕೆ ಧಾವಿಸಿದರು. ಅಲ್ಲಿನ ನೋಟವನ್ನು ಗುರುಬಂಧುಗಳೇ ಅವರ ಮಾತಿನಲ್ಲೇ ಕೇಳಿದರೆ ಹೇಗೆ?
"ಸಾರ್, ನಾನಲ್ಲಿ ಹೋಗುವಾಗ ಕಂಡ ದೃಶ್ಯ ನನ್ನನ್ನು ದಿಗ್ಮೂಢವಾಗಿಸಿತ್ತು. ಜಟಿಜಟಿ ಮಳೆ ಸುರಿಯುತ್ತಿತ್ತು. ಗುರುನಾಥರ ಮಹಾನಿರ್ವಾಣ ಕಂಡು ಪ್ರಕೃತಿ ದೇವಿ ಕಣ್ಣೀರು ಸುರಿಸುತ್ತಿದ್ದಂತೆ ಅನಿಸಿತು. ಅದು ಇಂತಹ ಒಬ್ಬ ಸಂತನನ್ನು ತನ್ನ ಮಡಿಲಿನಿಂದ ಬೀಳ್ಕೊಡುವ ದುಃಖದ ಕಣ್ಣೀರೋ ಅಥವಾ ಇಂತಹ ಮಹಾತ್ಮ ನನ್ನ ಮಡಿಲಲ್ಲಿದ್ದು, ಸೇವೆಗೈದು ಮತ್ತೆ ನನ್ನೊಳಗೆ ಬಂದನೆಂಬ ಆನಂದಾಶ್ರುವೋ, ಆ ಪ್ರಕೃತಿ ಮಾತೆಯೇ ಹೇಳಬೇಕು. ಎಲ್ಲಿ ನೋಡಿದರಲ್ಲಿ ಜನಸ್ತೋಮ, ಭಜನೆಗಳು, ಸಂಕೀರ್ತನೆಗಳು, ಗುರುನಾಥರ ನಾಮಸ್ಮರಣ... ಹಣ್ಣು ಹಂಪಲುಗಳ ದಾನ, ಬಂದವರಿಗೆಲ್ಲಾ ಊಟ, ಉಪಚಾರ, ಇಲ್ಲೇನು ನಡೀತಿದೆ ಎಂದು ತಿಳಿಯಲಾಗದ ಅಯೋಮಯ ಸ್ಥಿತಿ. ನನ್ನ ಮನತುಂಬಿ ಬಂದಿತ್ತು. ಮಳೆಯಲ್ಲೇ ಸಾಲಿನಲ್ಲಿ ಗುರುನಾಥರನ್ನು ಭಜಿಸುತ್ತಾ ಒಳಹೋದೆ. ಶಾಂತಮುಖಭಾವದಲ್ಲಿ ಗುರುನಾಥರು ಮಲಗಿದ್ದಾರೆಂಬುದೇ ನನ್ನ ಭಾವನೆ. ಒಂದು ದನಿ ಕೇಳಿಬಂತು. 'ಹಾಡು ಹೇಳಿ, ಹಾಡು ಹೇಳಿ, ಗುರುನಾಥರಿಗೆ ಸಂತೋಷವಾಗುತ್ತೆ. ಅವರು ಬಯಸಿದ್ದಾರೆ, ಹಾಡು ಹೇಳಿ' ಎಂದರು. ಆ ತುಂಬಿದ ಜಾಗದಲ್ಲಿ ನನಗೆ ಗುರುನಾಥರ ಪಾದದ ಬಳಿ ಜಾಗ ಕೊಟ್ಟರು. ಗುರುನಾಥರ ಪಾದವನ್ನು ಬಿಗಿಯಾಗಿ ಹಿಡಿದೆ. 'ಗುರುನೇಕ ಏಟುಉಂಟು' ಎಂಬ ಗೌರಿ ಮನೋಹರಿ ರಾಗದ ತ್ಯಾಗರಾಜರ ಕೃತಿಯನ್ನು ಹಾಡು... ಹಾಡು.... ಎಂದು ಒಳಗಿನಿಂದ ಪ್ರೇರಣೆಯಾಯ್ತು. ಹಾಡತೊಡಗಿದೆ. ಆದರಲ್ಲಿ ಬರುವ ಒಂದು ಸಾಲು 'ತತ್ವಬೋಧನಾ ಜೇಸಿ ಕಾಪಾಡು' ಎಂಬುದನ್ನು ಹಾಡುವಾಗಲಂತೂ ನಾನು ನಾನಾಗಿರಲಿಲ್ಲ. ಗುರುನಾಥರ ಬಳಿ ಹಾಡಬೇಕೆಂಬ ನನ್ನ ಮನದಿಚ್ಛೆಯನ್ನು ಈ ರೀತಿ ಹಾಡಿಸಿ, ನಾನೀಗ ಬೇಕೆಂಬುದನ್ನು ಬೇಡುವಂತೆ ಅವರು ಮಾಡಿಸಿದ್ದನ್ನು ನೆನೆಸಿದರೆ ಇಂದೂ ಮೈ ರೋಮಾಂಚನವಾಗುತ್ತದೆ. ಅಲ್ಲಿನ ಪರಿಸರವನ್ನು ನೋಡಿದಾಗ ಗುರುನಾಥರ ಮತ್ತೊಂದು ಮುಖದ ದರ್ಶನ ಎಲ್ಲರಿಗಾಗುತ್ತಿತ್ತು. ಹಾಡು ಮುಗಿಸಿ ಮತ್ತೆ ಹೊರಗೆ ಬಂದಾಗ 'ಗುರುನಾಥರು ಹೇಳಿದ್ದಾರೆ. ಯಾರೂ ಉಪವಾಸ ಹೋಗಬಾರದು, ಪ್ರಸಾದ ಸ್ವೀಕರಿಸಬೇಕೆಂದು; ಕೈಲಿ ಬಾಳೆತಟ್ಟೆ ಇಟ್ಟರು. ಪ್ರಸಾದ ನೀಡಿದರು. ಅಲ್ಲೊಂದು ಹಬ್ಬದ ಸಡಗರ ಯಾವುದೋ ದೈವಾರಾಧನೆಯ ಸಂಭ್ರಮವೆದ್ದು ಕಾಣುತ್ತಿತ್ತು. ಜಗದ್ಗುರುಗಳು ಬಂದಾಗ ನಡೆಯುತ್ತಿದ್ದಂತಹ ಅನ್ನದಾನ ಸಾಗಿತ್ತು. ನಿಜವಾಗಿಯೂ ನನ್ನ ಜೀವನದ ಒಂದು ದಿವ್ಯಕ್ಷಣವಾದಾಗಿತ್ತು ಎನ್ನುತ್ತಾರೆ" ಭಾವ ತುಂಬಿ ಆ ಸಂಗೀತ ವಿದ್ವಾಂಸರು.
ಆರ್ತರಾಗಿ ಯಾಚಿಸಿದವರ ಮನೋಭೀಷ್ಟ ಸಲ್ಲಿಸುವ ಗುರುನಾಥರು ಹೀಗೆ ತಮ್ಮ ಮಹಾನಿರ್ವಾಣದ ಸಮಯದಲ್ಲಿ ಆ ಸಂಗೀತ ವಿದ್ವಾಂಸರಿಂದ ನುಡಿನಮನ ಪಡೆದು ಅವರ ಮನೋಭೀಷ್ಟವನ್ನು ನೆರವೇರಿಸಿದ್ದರು. ಈ ದೇಹವಳಿದರೂ, ನಾನು ಯಾವಾಗಲೂ ಇದ್ದೇನೆ. ಭಕ್ತರಿಗೆ ಅಭಯದಾತನಾಗಿದ್ದೇನೆ ಎಂದು ಗುರುನಾಥರು ತೋರಿದ ರೀತಿ ಇದಾಗಿರಬಹುದೇನೋ.
ಇಂದೂ ಈ ಸಂಗೀತ ವಿದ್ವಾಂಸರು ನಿರಂತರ ಗುರುನಾಥರ ವಿನಮ್ರ ಸೇವಕರಾಗಿದ್ದಾರೆ. ಆನಂದಮಯ ಜೀವನ ಅವರದಾಗಿದೆ. ತಮ್ಮ ನಾದೋಪಾಸನೆಯಿಂದ ಗುರುನಾಥರಿಗೆ ನಿತ್ಯ ಸೇವೆಗೈಯುತ್ತಿದ್ದಾರೆ.
ಅಮ್ಮನ ಮಡಿಲಿಗೆ ಬಂದ ಕಂದ... ಗೋವಿಂದ ಮುಕುಂದ
ಅಂದು ಸಖರಾಯಪಟ್ಟಣಕ್ಕೆ ಎಲ್ಲಾ ಕಡೆಯಿಂದ ಬರುವ ಬಸ್ಸುಗಳೂ ಜನರಿಂದ ತುಂಬಿ ತುಳುಕಿ ಅವರನ್ನಿಳಿಸಿ ಉಸ್ಸಪ್ಪಾ ಎನ್ನುತ್ತಿವೆ. ಇದಲ್ಲದೆ ಸ್ವಂತ ವಾಹನಗಳಿದ್ದವರು ಒಂದೇ ಸಮನೆ ಅದಾವುದೋ ತವಕದಿಂದ 'ನಾವು ಕೇಳಿದ ಸುದ್ದಿ ನಿಜವಾಗದಿರಲಿ ಗುರುವೇ' ಎಂದು ಬೇಡುತ್ತಾ ಧಾವಿಸುತ್ತಿದ್ದಾರೆ. ಅತೀವ ನೋವನ್ನು ತಾಳಲಾರದೆ ಉಮ್ಮಳಿಸಿ ಬರುವ ದುಃಖದಂತೆ, ಪ್ರಕೃತಿ ಮಾತೆಯೂ ಅಶ್ರುಧಾರೆ ಸುರಿಸುವಂತೆ ಮಳೆಧಾರೆಯಾಗುತ್ತಿದೆ. ಸಖರಾಯಪಟ್ಟಣಕ್ಕೆ ಬಂದು ಗುರುನಾಥರು ಇತ್ತೀಚೆಗೆ ವಾಸವಾಗಿರುತ್ತಿದ್ದ ಮನೆಯ ಬಳಿ ಬಂದಾಗ ಕಠೋರ ಸತ್ಯದ ಅರಿವಾಗುತ್ತಿದ್ದುದು, ಅಲ್ಲಿದ್ದ ದುಃಖತಪ್ತರ, ನೋವೇ ಮೂರ್ತಿವೆತ್ತಂತಹ ಗುರುಬಾಂಧವರನ್ನು ಕಂಡಾಗ, ಬೆಳಗಿನ ಜಾವದಿಂದಲೇ ಗುರುನಾಥರ ಮಹಾನಿರ್ವಾಣದ ವಿಚಾರ ತಿಳಿದು, ಮೊದಲು ಬಂದ ಭಕ್ತರ ನೋವು ಸ್ವಲ್ಪ ಕಡಿಮೆಯಾಗಿ, ಕರ್ತವ್ಯ ಪ್ರಜ್ಞೆ ಜಾಗೃತರಾಗಿ, ಈ ದಿನದ ವಿಶೇಷ ಗುರುಸೇವೆಗೆ ಅವರು ಸಿದ್ಧವಾಗುತ್ತಿದ್ದರೆ, ಹೊಸದಾಗಿ ಬಂದವರು ನಂಬಲಾರದಂತಹ ಸತ್ಯವನ್ನು ನಂಬಲೇಬೇಕಾಗಿ ವಿವಶರಾಗಿ 'ಗುರುನಾಥರ ದಿವ್ಯವಾಣಿ, 'ನಾನೆಲ್ಲೂ ಹೋಗಲ್ಲ, ನಿನ್ನಲ್ಲೇ ಇದ್ದೀನಿ' ಎಂಬ ಮಾತುಗಳನ್ನು ನೆನೆದು ತಮ್ಮನ್ನು ತಾವು ಮನದೊಳಗೇ ಅತ್ತು, ಸುಧಾರಿಸಿಕೊಳ್ಳುತ್ತಿದ್ದಾರೆ.
ಮೈಲುದ್ದದ ಸಾಲುಗಟ್ಟಿ ಗುರುನಾಥರ ಅಂತಿಮ ದರ್ಶನಕ್ಕೆ ಸ್ಥಿತಪ್ರಜ್ಞರು, ಜೋರಾಗಿ ಆಳುವವರು, ಎದೆ ಬಡಿದುಕೊಳ್ಳುವಂತಹವರು, ಶ್ರೀರಾಮನಾಮ ಸತ್ಯವೆಂದು ಭಜಿಸುವವರು, ಭಜನೆ ಮಾಡುವವರು, ಸಂಕೀರ್ತನೆ ಪಾಡಿಕೊಳ್ಳುವವರು, ದರ್ಶನವಾದರೆ ಸಾಕೆಂದು ಆರ್ತರಾದವರು, ಯಾವಾಗಲೂ ನಗುನಗುತ್ತ ಸ್ವಾಗತಿಸಿ, ಹರಸಿ, ಬೆನು ತಟ್ಟಿದ ಗುರುನಾಥರನ್ನು ಈ ಸ್ಥಿತಿಯಲ್ಲಿ ನೆನೆಸಿಕೊಳ್ಳಲು ಆಗದಂತಹವರು, ಹೀಗೆ ವಿವಿಧ ಭಾವನೆಗಳ ಜನ ಸರತಿಯ ಸಾಲು ಹಿಡಿದಿದ್ದರು. ಗುರುನಾಥರ ದರ್ಶನ ತಮಗೆ ಸರ್ವಸ್ವವೆಂದು, ಗುರುಸೇವೆಗೆ ಸಹಸ್ರ ಮಾರ್ಗಳು ಇವೆ ಎಂದರಿತು ಬಂದಿರುವ ಸಹಸ್ರಾರು ಜನರಿಗೆ, ಬರಲಿರುವ ಸಹಸ್ರಾರು ಜನರಿಗೆ ಊಟ ತಿಂಡಿಯ ವ್ಯವಸ್ಥೆಗಳನ್ನು ಕೆಲವರು ಮಾಡಿದರು. ಕೆಲವೆಡೆ ಗುರುನಾಥ ಸ್ಮರಣ ಸಂಕೀರ್ತನಗಳು ಏರ್ಪಟ್ಟವು. ಸೌಂದರ್ಯಲಹರಿ ಪಠಿಸುತ್ತಿದ್ದವರ ನಿನಾದ, ಭಜನೆಯವರ ಝೇಂಕಾರ, ವೇದಘೋಷ.. ಇದ್ದಕ್ಕಿದ್ದಂತೆ ವಾತಾವರಣವೇ ಬದಲಾಗಿ ದುಃಖದಲ್ಲೊಂದು ದೈವಾರಾಧನೆಯೇ ನಡೆಯುತ್ತಿತ್ತು. ಬಹುಶಃ ಗುರುನಾಥರೇ ತಮ್ಮ ಶಿಷ್ಯರ ದುಃಖವನ್ನು, ಮನೋ ಆವೇಗವನ್ನು ತತ್ ಕ್ಷಣಕ್ಕೆ ದೂರ ಮಾಡಲು ಇದನ್ನೆಲ್ಲಾ ಸಂಯೋಜಿಸಿದ್ದರೇನೋ.....
ಅತಿಥಿ ದೇವೋಭವವೆಂದು, ತಿಳಿದು ಬಂದ ಬಂದವರಿಗೆಲ್ಲಾ ಹೊತ್ತು ತುಂಬಿ ಬಿರಿಯುವಂತೆ ಗುರುನಾಥರು ಉಣಿಸಿ ಕಳಿಸುತ್ತಿದ್ದರು. ಈ ದಿನವೂ ಹಾಗೆ 'ಗುರುನಾಥರ ಪ್ರಸಾದ ಎಲ್ಲರೂ ತೆಗೆದುಕೊಂಡು ಹೋಗಬೇಕು. ಯಾರೂ ಉಪವಾಸ ಹೋಗಬಾರದು' ಎಂದು ಸಾರಿ ಸಾರಿ ಹೇಳುವಾಗ ತಮ್ಮ ಮಡಿ, ಮೈಲಿಗೆಗಿಂತ ಗುರುವಾಕ್ಯ, ಗುರುಪ್ರಸಾದ, ಪ್ರಮಾಣವೆಂದು ಎಲ್ಲರೂ ಸ್ವೀಕರಿಸಿದರು. ಹಾಗಾಗಿ, ಅಲ್ಲೊಂದು ಮಹಾನವಮಿ ಅನ್ನದಾನ ಏರ್ಪಟ್ಟಿತ್ತು.
ಇದ್ದಾಗಲಂತೂ ಗುರುನಾಥರಿಗೆ ಒಂದು ಕ್ಷಣ ವಿಶ್ರಾಂತಿ ನೀಡದಂತೆ ಮಾಡುತ್ತಿದ್ದ ಜನ ಸಮೂಹ, ಈಗಲೂ ಗುರುನಾಥರ ದಿವ್ಯಾನಂದದಿಂದ ದಿವ್ಯನಿದ್ರೆಯಲ್ಲಿದ್ದಾಗಲೂ ಜನ ಸಾಗರವೇ ಬಂದಿತು. ಯಾರಿಗೂ ನಿರಾಶೆಯಾಗಬಾರದು. ಯಾರೂ ಇಲ್ಲಿ ಬಂದು ವಂಚಿತರಾಗಬಾರದು. 'ಗುರುನಾಥರು ಮಲಗಿದ್ದು, ಭಕ್ತರಿಗಾಗಿ ಚಿಂತಿಸಿ, ನಿಧಾನಿಸಿದರು. ಸಂಜೆಯವರೆಗೆ ದರ್ಶನ ನೀಡಿದರು. ಸಾವಧಾನವಾಗಿ, ವೇದಘೋಷ, ತಾಳ, ತಂಬೂರಿ, ಭಜನೆಗಳ ಅದ್ದೂರಿಯ ಮೆರವಣಿಗೆ ಸಾಗಿತು. ಜೀವಿತಾವಿದ್ದಾಗ, ಯಾವ ಮೆರವಣಿಗೆ, ಪ್ರಚಾರ, ಡಯಾಸ್ ಗಳಿಗೆ ಸಿಕ್ಕದಂತೆ, ಭಕ್ತರು ಅನುರೋಧಿಸಿದರೂ, ನಯವಾಗಿ ತಿರಸ್ಕರಿಸಿ... ದೂರವೇ ನಿಂತಿರುತ್ತಿದ್ದ ಗುರುನಾಥರು ಈ ದಿನ 'ಭಕ್ತಾಧಿಚ್ಛೇತ್ ಪರಾಜಯಂ' ಎಂದು ಎಲ್ಲದಕ್ಕೂ ಒಪ್ಪಿಬಿಟ್ಟಿದ್ದಾರೇನೋ ಅನಿಸುತ್ತಿತ್ತು.
'ನನ್ನ ವೈಭವ ನೋಡಬೇಕು ಎಂದರೆ ಈಗಲೇ ಹೊರಟು ಬಾ.. ಆಗಲೇ ನನ್ನನ್ನ ಹೊರಗಿಟ್ಟಿದ್ದಾರೆ, ಕಿವಿಗೆ ಮೂಗಿಗೆ ಹತ್ತಿ ಇಟ್ಟಿದ್ದಾರೆ. ಬೇಗ ಬಂದರೆ ಸಿಕ್ತೀನಿ.. ಇಲ್ಲಾ ಅಂದರೆ ಗುರು ವೈಭವ ನೋಡಲು ನಿನಗೆ ಸಿಗುವುದೇ ಇಲ್ಲ' ಎಂದು ಗುರುನಾಥರು ಅನೇಕ ಸಾರಿ ತಮಗೆ ತುಂಬಾ ಬೇಕಾದವರು ಬಹಳ ದಿನ ಬರದಿದ್ದಾಗ, ಅವರಲ್ಲೇ ಯಾವುದೋ ಸಂಕಟ, ನೋವು ಅನುಭವಿಸುತ್ತಿದ್ದಾಗ, ಹೀಗೆ ಫೋನು ಮಾಡಿ ಕರೆಸಿದ್ದಿದೆಯಂತೆ'. ಆ ವ್ಯಕ್ತಿಗಳೂ ಬಂದಿದ್ದರು. ಆ ದಿನ ಸುಳ್ಳು, ಸುಳ್ಳು, ನಾಟಕವಿರಬಹುದು ಎಂದರೆ ಈ ದಿನ ಗುರುನಾಥರು ಜೀವನ ನಾಟಕವನ್ನೇ ಮುಗಿಸಿಬಿಟ್ಟರಲ್ಲ' ಎಂದು ಅವಲತ್ತುಗೊಂಡರು.
ಜನ್ಮ ಕೊಟ್ಟ ತಾಯಿ ಮಾತ್ರವೇ ಅಮ್ಮನಲ್ಲ. ಈ ಪಂಚಭೂತಗಳೂ ನಮ್ಮ ಬರುವಿಕೆಗೆ, ಇರುವಿಕೆಗೆ ಮೂಲವಾಗಿ ತಾಯಿ ಸ್ಥಾನದಲ್ಲಿ ನಿಂತಿವೆ. ಗುರುನಾಥರು ಈ ಎಲ್ಲಾ ತಾಯಂದಿರನ್ನು ಮರೆಯುವುದುಂಟೇ, ಭೌತಿಕ ಶರೀರ ಪಂಚಭೂತಗಳಾಗಿ ಪಂಚತ್ವ ಪಡೆಯಿತು. ಇನ್ನು ಜನ್ಮ ಕೊಟ್ಟ ತಾಯಿಯ ಋಣ ಅದನ್ನು.....
ಸುಂದರವಾದ ಹಸಿರು ತುಂಬಿದ ಪ್ರಶಾಂತವಾದ, ನಿರಂತರ ಹಕ್ಕಿಗಳ ಚಿಲಿಪಿಲಿಯ ದನಿ ಕೇಳುವ ತಮ್ಮ ತೋಟವೆಂದರೆ ಗುರುನಾಥರಿಗೆ ಪ್ರಿಯ. ಹಿರಿಯರ ಆಸ್ತಿ ಅವರಿಗೆ ಆಶೀರ್ವಾದ. ಹಾಗಾಗಿ ತಮ್ಮ ತಾಯಿಯವರ ವೇದಿಕೆಯನ್ನು ಗುರುನಾಥರು ಆ ತೋಟದಲ್ಲಿ ನಿರ್ಮಿಸಿದ್ದರು. ಆಗಾಗ, ವೇದಿಕೆಯ ದರ್ಶನಕ್ಕೆ ಹೋದಾಗ ಅಮ್ಮ ಮಗನ ಮಧ್ಯೆ ಅದೇನು ಮಾತುಕತೆಯಾಗುತ್ತಿತ್ತೋ ಬಹುಶಃ ಮಗನ ಅಗಲಿಕೆ... ಆ ತಾಯಿಗೆ ಹೆಚ್ಚು ದಿನ ಸಹಿಸಲಾಗಲಿಲ್ಲವೇನೋ 'ಬಾ ಕಂದ... ಮುಕುಂದ... ಬಹಳ ಬಳಲಿದ್ದೀಯ ಜನಗಳ ಸೇವೆ ಮಾಡುತ್ತಾ, ಬಾ ನನ್ನ ತೊಡೆಯಲ್ಲಿ ಸ್ವಲ್ಪ ವಿಶ್ರಮಿಸು' ಎಂದು ವಿನಂತಿಸಿದರೇನು...
ಇಂದು ಅದೇ ತೋಟದ ಹಸಿರು ಛಾಯೆಯಲ್ಲಿ ಪ್ರಶಾಂತ ದಿವ್ಯ ಸನ್ನಿಧಿಯಲ್ಲಿ ಗುರುನಾಥರ ವೇದಿಕೆ ನಿರ್ಮಾಣವಾಗಿದೆ. ಅಮ್ಮನ ಮಡಿಲು ನೆಮ್ಮದಿಯ ಕಡಲಾಗಿ ತಾಯ ನೆರಳಿನಲ್ಲಿ, ನಮಗೆಲ್ಲಾ ಗುರುನಾಥರಾದರೂ ಅವರ ತಾಯಿಗೆ ಕಂದ ಮುಕುಂದರಾಗಿ ಅವರು ಅವರ ಬಳಿ ಸೇರಿದ್ದಾರೆ.
ಗುರುಬಾಂಧವರೇ, ಇಂದೂ ಆ ವೇದಿಕೆಗೂ ಗುರುಬಾಂಧವರೂ ಆಸೆ, ಅಕ್ಕರಾಸೆ ಭಕ್ತಿಗಳಿಂದ ಬರುತ್ತಿರುತ್ತಾರೆ. ಆದರೆ ಮಾತಿಲ್ಲ... ಕಥೆ ಇಲ್ಲ... ಎಲ್ಲಾ ಮೌನ.. ಸ್ವಲ್ಪ ಹೊತ್ತು ಧ್ಯಾನ... ಆಮೇಲೆ ಮುಂದಿನ ಪಯಣ. ಒಂದು ವೇಳೆ 'ಹೊರಡಬಹುದೇ' ಎಂದೇನಾದರೂ ಮನದಲ್ಲಿ ಬಂದ್ರೆ 'ನಾನೇನು ನಿನ್ನನ್ನ ಕರೆದಿದ್ದೆನೇನಯ್ಯಾ... ನೀನು ಬಂದೆ.. ನಿನಗೆ ಬೇಕಾದಾಗ ಹೊರಡು' ಎಂದು ಗುರುವಾಣಿ ಮನಕ್ಕೆ ಕೇಳೀತು...
ಹರಿ ಓಂ ತತ್ಸತ್ ಶ್ರೀ ಗುರು ದತ್ತಾತ್ರೇಯಾರ್ಪಣಮಸ್ತು. ಶುಭಂ ಭವತು.
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
No comments:
Post a Comment