ಒಟ್ಟು ನೋಟಗಳು

Thursday, December 22, 2016

ಶ್ರೀ ಸದ್ಗುರು ಮಹಿಮೆ   


   ಅಧ್ಯಾಯ  - 78


    ಗ್ರಂಥ ರಚನೆ - ಚರಣದಾಸ 


ಕಾಲಾತೀತ 





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಗುರು ಎಂಬ ಎರಡಕ್ಷರ ಭೂತ, ಭವಿಷ್ಯ, ವರ್ತಮಾನಗಳೆಲ್ಲವನ್ನೂ ಬದಲಿಸಬಲ್ಲದು, ಹಾಗೂ ಅದು ನಮ್ಮೆಲ್ಲರ ತರ್ಕ ವಿಜ್ಞಾನಗಳನ್ನು ಮೀರಿದ್ದು. 

ಒಮ್ಮೆ ಗುರುನಾಥರು ಗುರುಭಕ್ತರೋರ್ವರ ಕಾರಿನಲ್ಲಿ ಶಿವಮೊಗ್ಗದಿಂದ ಶೃಂಗೇರಿ ಕಡೆಗೆ ಹೊರಟರು. ಅದಾಗಲೇ ಸಂಜೆ ಆಗಿತ್ತು. ಗಾಡಿಗೆ ಇಂಧನ ಹಾಕಿಸಲು ಮರೆತಿದ್ದ ಗಾಡಿಯ ಒಡೆಯ ಗುರುನಾಥರಲ್ಲಿ "ಪೆಟ್ರೋಲ್ ಹಾಕಿಸಬೇಕು" ಎಂದರು. 

ಆಗ ಗುರುನಾಥರು "ನಡಿಯಯ್ಯಾ ಹೋಗೋಣ" ಅಂದ್ರು. ಗಾಡಿ ಭದ್ರಾವತಿ ತಲುಪಲು ಗಾಡಿ ಒಡೆಯ ಪೆಟ್ರೋಲ್ ಹಾಕಿಸಲು ಬಂಕ್ ಗೆ ಹೋದರೆ ಅದಾಗಲೇ ಬಂಕ್ ಬಾಗಿಲು ಹಾಕಿತ್ತು. ನಿರಾಸೆಗೊಂಡ ಒಡೆಯ ತರೀಕೆರೆ ತಲುಪಿ ಅಲ್ಲಿದ್ದ ಸ್ನೇಹಿತರ ಪೆಟ್ರೋಲ್ ಬಂಕ್ ಗೆ ಹೋಗಿ ಬರೋಣ ಎಂದು ಹೋದರೆ, ಅಲ್ಲಿ "ಔಟ್  ಆಫ್ ಸ್ಟಾಕ್" ಬೋರ್ಡ್ ಹಾಕಿರುವುದನ್ನು ನೋಡಿ, "ಇನ್ನು ಶೃಂಗೇರಿ ತಲುಪುವುದು ಕನಸೇ ಸರಿ" ಎಂದು ಆತಂಕಗೊಂಡರು. 

ಆಗ ಗುರುನಾಥರು "ಅಯ್ಯಾ ನಡಿಯಯ್ಯಾ ಮುಂದಕ್ಕೆ ಹೋಗೋಣ. ಎಲ್ಲ ಅವನಿಚ್ಛೆಯಂತೆ ನಡೀಬೇಕು ಅಲ್ವೇ" ಅಂದ್ರು. ಆತ ಕಾರು ಎಲ್ಲಿ ನಡುದಾರಿಯಲ್ಲಿ ನಿಲ್ಲುತ್ತೋ ಅಂತ ಆತಂಕದಿಂದಲೇ ಕಾರು ಚಾಲನೆ ಮಾಡುತ್ತಿದ್ದರು. 

ಕಾಲು ತರೀಕೆರೆ ಮಾರ್ಗವಾಗಿ ಚಿಕ್ಕಮಗಳೂರು, ಅಲ್ಲಿಂದ ಶೃಂಗೇರಿಗೆ ಬಂದು ಇಳಿಜಾರಿನಲ್ಲಿ ಇಳಿಯುತ್ತಿರುವಾಗ ಗುರುನಾಥರು "ಅಯ್ಯಾ, ಅಲ್ನೋಡು, ಅಲ್ಲೊಂದು ಬಂಕ್ ಇರಬೇಕು. ಅಲ್ಲಿ ಇಂಧನ ಸಿಗಬಹುದು ನೋಡು" ಅಂದ್ರು. ಆಗ ಬೆಳಗಿನ ಜಾವವಾಗಿತ್ತು. ಅಂತೆಯೇ ಅಲ್ಲಿ ಇಂಧನವೂ ಸಿಕ್ಕಿತು. ಇಂಧನ ತುಂಬಿದ ನಂತರ ಗುರುನಾಥರು "ಅಯ್ಯಾ ಇಂಧನವಿಲ್ಲದ ಕಾರು ಇಲ್ಲಿಯವರೆಗೆ ಹೇಗೆ ಬಂತು? ಕರೆ ತಂದವರಾರು? ಅದೇ ಭಗವಂತ ಅಲ್ವೇನಯ್ಯಾ" ಅಂದ್ರು. 

ವಿಜ್ಞಾನಕ್ಕೆ ಮೀರಿದ ತರ್ಕಕ್ಕೆ ನಿಲುಕದ ಈ ಘಟನೆಯನ್ನು ಕಂಡ ಆ ವ್ಯಕ್ತಿ ಮೂಕ ವಿಸ್ಮಿತರಾದರು. 

ಹಾಗೆಯೇ ಇನ್ನೊಮ್ಮೆ ಬೆಂಗಳೂರಿನಲ್ಲಿ ಸರ್ಕಾರಿ ನೌಕರಿಯಲ್ಲಿದ್ದ ವ್ಯಕ್ತಿಯೋರ್ವರು ಗುರುನಾಥರೊಂದಿಗೆ ಸಖರಾಯಪಟ್ಟಣದಿಂದ ಬೆಂಗಳೂರಿನಲ್ಲಿರುವ ಗುರುನಾಥರ ಸಂಬಂಧಿಕರ ಮನೆ ತಲುಪಿದರು. 

ಅಂದು ತನ್ನ ಇಲಾಖೆಯ ರಾಜ್ಯ ಮಟ್ಟದ ಸಮ್ಮೇಳನ ಇರುವುದಾಗಿಯೂ, ತಾನು ಅಂದು ಕಚೇರಿಗೆ ಹಾಜರಾಗಲೇಬೇಕಾದ ಅನಿವಾರ್ಯತೆಯನ್ನು ಗುರುನಾಥರಿಗೆ ತಿಳಿಸಲು, ಗುರುನಾಥರು "8-30ಕ್ಕೆ ಹೊರಡಯ್ಯಾ" ಅಂದ್ರು. ಬೆಳಿಗ್ಗೆ 8-30 ಆದ ನಂತರ "ನಂಗೆ ಹೋಟೆಲ್ ನಿಂದ ಇಡ್ಲಿ ತಂದುಕೊಟ್ಟು ಹೊರಡಯ್ಯಾ" ಅಂದ್ರು. 

ಮತ್ತೆ 9-30ಕ್ಕೆ ಮತ್ತೊಂದು ಬಾರಿ ಇಡ್ಲಿ ತರಲು ಕಳಿಸಿದರು. ಸಮಯ 11-30 ಆಯ್ತು. ಆಗ ಗುರುನಾಥರು ಇದ್ದಕ್ಕಿದ್ದಂತೆ ಇವರ ಮೇಲೆ ರೇಗಾಡಿ "ಏನಯ್ಯಾ ಕಚೇರಿ ಕೆಲಸವಿದೆ ಅಂತೀಯಾ, ಇನ್ನೂ ಇಲ್ಲೇ ಇದ್ದೀಯಾ? ಜವಾಬ್ದಾರಿ ಬೇಡವೇ? ಹೊರಡು ಹೊರಡು, ಹೋಗುವಾಗ ಮೂಲೆ ಅಂಗಡಿಯಿಂದ ದಿನಪತ್ರಿಕೆ ತೆಗೆದುಕೊಂಡು ಹೋಗು ತಿಳೀತಾ" ಅಂದ್ರು. 

ಅಂತೆಯೇ ದಿನಪತ್ರಿಕೆ ತೆಗೆದುಕೊಂಡ ಅವರು ಗಡಿಬಿಡಿಯಿಂದ ಕಚೇರಿ ತಲುಪಿದರು. ಆಗ ಇವರನ್ನು ಎದುರುಗೊಂಡ ಕಚೇರಿ ಸಹಾಯಕ, ಬನ್ನಿ ಸಾರ್, ಸಾಹೇಬರು ಕಾಫಿಗೆ ಹೋಗಿದ್ದಾರೆ. ಇಂದಿನ ಸಭೆ ರದ್ದಾಗಿದೆ ಎಂದು ಹಾಜರಿ ಪುಸ್ತಕಕ್ಕೆ ಸಹಿ ಹಾಕಿಸಿಕೊಂಡರು. ಹಾಗೂ ಯಾರೂ ಯಾಕೆ ತಡವಾಗಿ ಬಂದೆ ಎಂದು ಪ್ರಶ್ನಿಸಲಿಲ್ಲ. ಅಂದ ಹಾಗೆ ಆಗ ಸಮಯ ಮಧ್ಯಾನ್ಹ 12 ಗಂಟೆ. 

ಗುರು ದೃಷ್ಟಿ ಬಿದ್ದಿತೆಂದರೆ ಸೂರ್ಯನ ಬೆಳಕೂ ಹೆಚ್ಚಾಗುವುದು. ಹಾಗಿರುವಾಗ ನೆಪಮಾತ್ರಕ್ಕೆ ದೇಹಧಾರಿಯಾಗಿರುವ, ನಾರಾ ಮಾನವರ ಉದ್ಧಾರಿಸಲೋಸುಗ ಭುವಿಗೆ ಬಂದ ಗುರುವಿಗೆ ದೇಹ ಪೋಷಣೆಗಾಗಿ ಯಾವ ಆಹಾರಗಳ ಅಗತ್ಯವೂ ಇರದು. ಹಾಗೆಯೇ ಗುರು ಬಳಸುವ ಯಾವುದೇ ವಸ್ತುವಾದರೂ ಅಯಸ್ಕಾಂತವನ್ನು ಸ್ಪರ್ಶಿಸಿದ ಕಬ್ಬಿಣದಂತೆ ಅದೇ ಗುಣವನ್ನು ಪಡೆಯಬಲ್ಲದು. 

ಗುರುನಾಥರ ನಿವಾಸದಿಂದ ಸುಮಾರು ಇಪ್ಪತ್ತು ಕಿಲೋಮೀಟರ್ ದೂರದಿಂದ ಓರ್ವ ಹುಡುಗ ಆಗಾಗ್ಗೆ ಗುರುನಿವಾಸಕ್ಕೆ ಬರುತ್ತಿದ್ದರು. ಗುರುಗಳೊಂದಿಗೆ ಹಾಗೂ ನನ್ನೊಂದಿಗೂ ಆಪ್ತವಾಗಿದ್ದ ಆತ ಗುರುಗಳ ಮೇಲೆ ಅಪಾರ ಭಕ್ತಿ ಇಟ್ಟುಕೊಂಡಿದ್ದರು. 

ಒಮ್ಮೆ ಆ ಹುಡುಗನ ಮನೆಗೆ ಆತನ ಸ್ನೇಹಿತರೊಬ್ಬರು ಬಂದು ಅಲ್ಲಿಂದ ಗುರುನಿವಾಸಕ್ಕೆ ಹೋಗುವ ಇಚ್ಛೆ ವ್ಯಕ್ತಪಡಿಸಿದರು. ಅಲ್ಲಿಂದ ಹೊರಟ ಅವರು ಕಾರಿನಲ್ಲಿ ಕೇವಲ ಒಂದು ಲೀಟರ್ ನಷ್ಟು ಮಾತ್ರ ಪೆಟ್ರೋಲ್ ಇದೆ ಎಂಬುದನ್ನರಿತು ಪೆಟ್ರೋಲ್ ಹಾಕಿಸ ಹೊರಟವರು, ಗುರು ನಿವಾಸಕ್ಕೆ ಹೋಗಿ ಅಲ್ಲಿಯೇ ಹಾಕಿಸೋಣವೆಂದುಕೊಂಡು ಸಖರಾಯಪಟ್ಟಣಕ್ಕೆ ಹೋದರು. ಅದೃಷ್ಟವಶಾತ್ ಅಂದು ಗುರುನಾಥರು ಊರಿನಲ್ಲಿದ್ದರು. ಇವರು ಗುರುನಿವಾಸದೊಳಗೆ ಪ್ರವೇಶಿಸಿದಾಕ್ಷಣ ಗುರುನಾಥರು ಅವರನ್ನು ಕುರಿತು ಹೀಗೆ ಹೇಳಿದರು. "ನಾನು ಗುರುದರ್ಶನಕ್ಕೆ ಹೋಗಬೇಕೆಂದಿದ್ದೆ. ಸರಿಯಾದ ಸಮಯಕ್ಕೆ ಬಂದಿರುವಿರಿ. ನಡೆಯಿರಿ ನಿಮ್ಮ ಕಾರಿನಲ್ಲಿ ಹೋಗೋಣ" ಎಂದರು. 

ಗುರುನಾಥರ ಮಾತಿಗೆ ಎಂದೂ ಎದುರಾಡದ ಆ ಹುಡುಗ ಗಾಡಿಯಲ್ಲಿ ಪೆಟ್ರೋಲ್ ಇಲ್ಲಾಂತ ಹೇಗೆ ಹೇಳೋದು ಅಂತ ಹಿಂಜರಿದರು. ಕಾರಿನಲ್ಲಿ ಕುಳಿತ ಗುರುನಾಥರು ಮನೆಯಿಂದ ಒಂದು ಲೋಟ ನೀರು ತರಿಸಿ ಕಾರಿನ ಡ್ಯಾಶ್ ಬೋರ್ಡ್ ನಲ್ಲಿ ಇಟ್ಟರು. ನಂತರ ಕಾರು ಮುಂದುವರೆಯಿತು. 

ಆತ, ಮನೆಯಿಂದ ಹೊರಡುವಾಗ ಇದ್ದದ್ದೇ ಒಂದು ಲೀಟರ್ ಪೆಟ್ರೋಲ್. ನಾವು ತಲುಪಬೇಕಾಗಿದ್ದ ಊರು ಸುಮಾರು ತೊಂಬತ್ತು ಕಿಲೋಮೀಟರ್ ದೂರವಿದೆ. ಕಾರು ದಾರಿ ಮಧ್ಯೆ ನಂತರೇನು ಮಾಡಲಿ ಎಂದು ಯೋಚಿಸುತ್ತಾ ಕಾರು ಚಲಾಯಿಸಿದನು. 

ಗುರುನಾಥರೊಂದಿಗೆ ಗುರುದರ್ಶನ ಮಾಡಿಕೊಂಡು ಗುರುನಿವಾಸಕ್ಕೆ ಹಿಂತಿರುಗಿದರು. ಆಶ್ಚರ್ಯವೆಂದರೆ ಕಾರು ಕೇವಲ ಒಂದು ಲೀಟರ್ ಇಂಧನದಲ್ಲಿ ಸುಮಾರು ನೂರಾ ಎಂಬತ್ತು ಕಿಲೋಮೀಟರ್ ಸಾಗಿತ್ತು. ಇದು ಹೇಗೆ ಸಾಧ್ಯವೆಂದು ಅರಿಯದ ಆ ಹುಡುಗ ಚಿಂತೆಗೆ ಒಳಗಾದರು. ಗುರುನಿವಾಸ ತುಲುಪಿದ ನಂತರ ಆ ಹುಡುಗನ ಕೈಲೇ ಅವರ ಕಾರಿನ ಡ್ಯಾಶ್ ಬೋರ್ಡ್ ನಲ್ಲಿ ಇರಿಸಿದ್ದ ನೀರನ್ನು ತರಿಸಿ ಅವರಿಗೆ ಕುದಿಸಿದ ಗುರುನಾಥರು ಅವರನ್ನು ಊರಿಗೆ ಕಳುಹಿಸಿಕೊಟ್ಟರು. ಆತ ಸಖರಾಯಪಟ್ಟಣದಲ್ಲಿ ಪೆಟ್ರೋಲ್ ತುಂಬಿಸಿಕೊಂಡರೂ ಪೆಟ್ರೋಲ್ ರಹಿತ ಗಾಡಿ ಚಲಿಸಲು ಸಾಧ್ಯವೇ? ಡ್ಯಾಶ್ ಬೋರ್ಡ್ ನಲ್ಲಿಟ್ಟ ನೀರು ಅದೆಂತು ಚಲ್ಲದೆ ಹಾಗೆ ಲೋಟದಲ್ಲಿ ಉಳಿದಿತ್ತು? ಎಂದು ಯೋಚಿಸುತ್ತಾ ಮನೆಗೆ ತೆರಳಿದನು. ಇಂದಿಗೂ ಈ ಪ್ರಶ್ನೆಗೆ ಉತ್ತರ ಸಿಗದ ಆತ ಇದೆಲ್ಲ ಗುರುಕೃಪೆಯಿಂದ ಮಾತ್ರ ಸಾಧ್ಯವೆಂದು ತೀರ್ಮಾನಕ್ಕೆ ಬಂದಿರುವನು......,,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


No comments:

Post a Comment