ಒಟ್ಟು ನೋಟಗಳು

Thursday, December 8, 2016

ಶ್ರೀ ಸದ್ಗುರು ಮಹಿಮೆ   


   ಅಧ್ಯಾಯ  - 65


    ಗ್ರಂಥ ರಚನೆ - ಚರಣದಾಸ 


ಕ್ಯಾನ್ಸರ್ ಗುಣವಾದದ್ದು 






ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಇದು ನಡೆದಿದ್ದು ಚರಣದಾಸನಾದ ನನ್ನ ಊರಿನಲ್ಲಿ. ಬಹುಶಃ 2007-08 ಕಾಲ. ನಮ್ಮ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಒಬ್ಬ ವ್ಯಕ್ತಿ ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿದ್ದ. ಆತನ ಧ್ವನಿ ಪೂರ್ತಿ ಬಿದ್ದು ಹೋಗಿತ್ತು. ಗಂಟಲು ನೋವಿನಿಂದ ಆಹಾರ ಸೇವನೆಯೂ ಕಡಿಮೆ ಆಗಿತ್ತು. ನಮ್ಮ ಮನೆಯಲ್ಲೇ ಕೆಲಸಕ್ಕಿದ್ದ ಆತನ ಪತ್ನಿ ದಿನವಿಡೀ ದುಃಖಿಸುತ್ತಿರುವುದನ್ನು ನೋಡಲಾರದೇ ಗುರುದೇವನಲ್ಲಿ ವಿನಂತಿಸಿಕೊಂಡೆನು. 

ಎರಡು ಮೂರು ಬಾರಿ ವಿನಂತಿಸಿದರೂ ಏನೂ ಪರಿಹಾರ ಸಿಕ್ಕಿರಲಿಲ್ಲ. ಮತ್ತೊಮ್ಮೆ ವಿನಂತಿಸಿಕೊಂಡಾಗ ಅವರು ಹೇಳಿದ ಔಷಧಿಯ ಬೆಲೆ 50 ಪೈಸೆಯನ್ನೂ ಮೀರಲಾರದು. ವೈದ್ಯರು ಆಪರೇಷನ್ ಅನಿವಾರ್ಯ. ಆಪರೇಷನ್ ನಂತರವೂ ಬದುಕುವ ಬಗ್ಗೆ ಯಾವುದೇ ನಿಖರ ಉತ್ತರವಿರಲಿಲ್ಲ. ಇದರಿಂದ ಕೆಂಗೆಟ್ಟಿದ್ದ ಈ ದಂಪತಿಗಳ ಮೇಲೆ ಗುರುಕೃಪೆಯಾಯಿತು. ಆತ ಇಂದಿಗೂ ಆರೋಗ್ಯವಾಗಿದ್ದು ಗುರುವನ್ನು ಕೃತಜ್ಞತೆಯಿಂದ ಸ್ಮರಿಸುತ್ತಾರೆ. 

ನಾನು ಅಲ್ಲಿದ್ದ 8-10 ವರ್ಷಗಳಲ್ಲಿ ಇಂತಹ ಘಟನೆಗಳು ಸರ್ವೇಸಾಮಾನ್ಯವಾಗಿತ್ತು. 


ಸನಂದನ ವರಪ್ರಸಾದ 


ಶಿವಮೊಗ್ಗ ಸಮೀಪದ ಊರೊಂದರ ನಿವಾಸಿಗಳಾದ ಆ ದಂಪತಿಗಳಿಗೆ ಮದುವೆ ಆಗಿ ಮೂರು ವರ್ಷ ಕಳೆದರೂ ಸಂತಾನವಾಗಿರಲಿಲ್ಲ. ವೈದ್ಯರ ತಪಾಸಣೆಯಿಂದಲೂ ಯಾವುದೇ ದೋಷ ಕಂಡುಬಂದಿರಲಿಲ್ಲ. ಮನೆಯಲ್ಲಿ ಬಂಧುಗಳಿಂದ ಹಾಗೂ ಸಮಾಜದಲ್ಲಿನ ಮಿತ್ರರ ಪ್ರಶ್ನೆಗಳಿಂದ ಕೆಂಗೆಟ್ಟಿದ್ದ ದಂಪತಿಗಳು ಗುರುನಾಥರಲ್ಲಿ ಈ ಕುರಿತು ಪ್ರಸ್ತಾಪಿಸಿದಾಗ, ಗುರುನಾಥರು, "ನಿಮಗೆ ಎರಡು ಮನೆ ಇದೆ. ಮೂಲ ಮನೆಯಲ್ಲಿ ನಿನಗೆ ಮಾನಸಿಕ ಒತ್ತಡ ವಿಪರೀತವಿದೆ. ಆದ್ದರಿಂದ ಈ ಕೂಡಲೇ ಆ ಮನೆ ಬಿಟ್ಟು ಇನ್ನೊಂದು ಮನೆಯಲ್ಲಿ ಸಂಸಾರ ಹೂಡು. ಕೂಡಲೇ ನಿನಗೆ ಸಂತಾನ ಪ್ರಾಪ್ತಿಯಾಗುವುದು" ಎಂದು ತಿಳಿಸಿದರು. 

ಆ ದಂಪತಿಗಳು ಹಾಗೆಯೇ ಮಾಡಲು ಕೇವಲ ಮೂರು ತಿಂಗಳಲ್ಲಿ ಆಕೆ ಗರ್ಭ ಧರಿಸಿದರು. ಇದೀಗ ಆಕೆಗೆ ಬಹುಶಃ ಹತ್ತು-ಹನ್ನೆರಡು ವರ್ಷದ ಸನಂದನ ಎಂಬ ಮುದ್ದಾದ ಮಗನಿರುವನು. 

ಹಾಗೆಯೇ ಇನ್ನೊಮ್ಮೆ ಓರ್ವ ವ್ಯಕ್ತಿ ವಿಪರೀತ ಶೀತ, ಜ್ವರವೆಂದು ಹೇಳಲು ಅಲ್ಲೇ ಇದ್ದ ಬಾಳೆಹಣ್ಣನ್ನು ತಿನ್ನೆಂದು ಗುರುನಾಥರು ನೀಡಿದರು. 

ಆಗ ಅದರಿಂದ ನನಗೆ ಶೀತ ಜ್ವರ ಜಾಸ್ತಿಯಾಗುತ್ತದೆ ಅಲ್ಲವೇ ಗುರುಗಳೇ ಎಂದರು. 

ಆಗ "ನಿಷಿದ್ಧ ಪದಾರ್ಥಗಳೇ ನಾವು ನೀಡುವ ಔಷಧ. ತಗೋ, ಎಲ್ಲವೂ ಸರಿಯಾಗುವುದು" ಎಂದ ಗುರುವಿನ ಆದೇಶದಂತೆ ಆ ಭಕ್ತರು ಅದನ್ನು ಸೇವಿಸಿದರು. ಗುರುವಾಕ್ಯದಂತೆ ಆ ಭಕ್ತರಿಗೆ ಖಾಯಿಲೆ ವಾಸಿಯಾಯಿತು. ಹೀಗೆ ಗುರುನಾಥರು ನೀಡುತ್ತಿದ್ದ ಔಷಧಿಗೂ, ವ್ಯಕ್ತಿಯ ಖಾಯಿಲೆಗಳಿಗೂ ಮೇಲ್ನೋಟಕ್ಕೆ ಯಾವುದೇ ಸಂಬಂಧವಿರದಂತೆ  ತೋರುತ್ತಿದ್ದರೂ ಒಳಗಿನ ಧಾರ್ಮ ಸೂಕ್ಷ್ಮ ಗುರುವಿಗೆ ಮಾತ್ರ ತಿಳಿದಿತ್ತು. 

ಚರಣದಾಸನಾದ ನನ್ನ ಬಂಧು ಒಬ್ಬರಿಗೆ "ನೀನು ಒಂದು ಕಾರು ತೆಗೆದುಕೋ" ಎಂದರು. 

ಆಗ ಆತ "ಗುರುಗಳೇ, ನನಗೆ ತೆಗೆದುಕೊಳ್ಳಬೇಕೆಂಬ ಆಸೆಯೇನೋ ಇದೆ. ಆದರೆ ಅದರ ಖರ್ಚು-ವೆಚ್ಚ ಹೇಗೆಂಬ ಯೋಚನೆ" ಎಂದು ಮೌನವಾದರು. 

ಅದಕ್ಕೆ ಗುರುನಾಥರು "ನಾ ನಡೆಸ್ತೀನಿ, ತಗೋ" ಎಂದು ಆಶೀರ್ವದಿಸಿದರು. ಅಂತೆಯೇ ಎಲ್ಲವೂ ಸುಗಮವಾಗಿ ನಡೆದಿದೆ.......,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


No comments:

Post a Comment