ಒಟ್ಟು ನೋಟಗಳು

Thursday, December 15, 2016


ಶ್ರೀ ಸದ್ಗುರು ಮಹಿಮೆ   


   ಅಧ್ಯಾಯ  - 72


    ಗ್ರಂಥ ರಚನೆ - ಚರಣದಾಸ 


ಪೀಠಾಧಿಪತಿಯ ರಕ್ಷಣೆ 





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।

ಸಾಮಾನ್ಯವಾಗಿ ಗುರುನಾಥರು ಯಾವುದೇ ಮಠ-ಮಾನ್ಯಗಳ ಯತಿಗಳಿಗೆ ಭಿಕ್ಷಾ ವಸ್ತುಗಳನ್ನು ಕಳಿಸುವ ಪರಿಪಾಠವಿಟ್ಟುಕೊಂಡಿದ್ದರು. ಮೈಸೂರು ಸಮೀಪದ ಮಠವೊಂದರ ಉತ್ತರಾಧಿಕಾರಿಯಾಗಿ ಚಿಕ್ಕಮಗಳೂರು ಸಮೀಪದ ವ್ಯಕ್ತಿಯೊಬ್ಬರು ಅದ್ವೈತ ಪೀಠದ ಜಗದ್ಗುರುಗಳಿಂದ ನೇಮಿಸಲ್ಪಟ್ಟರು. 

ಪೀಠಾರೋಹಣ ನಂತರ ಅಲ್ಲಿನ ಕೆಲ ಭಕ್ತರು ಮಠದಲ್ಲಿನ ಸಂಪತ್ತನ್ನು ಕೊಳ್ಳೆ ಹೊಡೆಯಲು ಮಠದ ವಯೋವೃದ್ಧ ಹಿರಿಯ ಯತಿಗಳನ್ನು ಹೆದರಿಸಿ ಸಹಿ ಪಡೆದು ವ್ಯವಸ್ಥೆಯನ್ನು ಹಿಡಿತದಲ್ಲಿಟ್ಟುಕೊಂಡಿರುವುದನ್ನು ತಿಳಿದ ಕಿರಿಯ ಯತೀಂದ್ರರು "ಸನ್ಯಾಸಿ ಸಾಧನೆಗಾಗಿಯೇ ವಿನಃ ರಾಜಕೀಯಕ್ಕಲ್ಲ, ಮಠದ ವ್ಯವಹಾರಕ್ಕೆ ತಲೆ ಹಾಕಬೇಡಿ" ಎಂದು ಎಚ್ಚರಿಸಿದರು. 

ಇದರಿಂದ ಸಿಟ್ಟಿಗೆದ್ದ ಆ ವ್ಯಕ್ತಿಗಳು ಕ್ರಿಯಾ ಯತೀಂದ್ರರಿಗೆ ಅನ್ನಾಹಾರವನ್ನು ನೀಡದೇ ಹಿಂಸಿಸತೊಡಗಿದರು. ಇದರಿಂದ ನೊಂದ ಕಿರಿಯ ಯತಿಗಳು ನೇರವಾಗಿ ಗುರುನಿವಾಸಕ್ಕೆ ಬಂದು ಪ್ರಾರ್ಥಿಸಿದರು. 

ಆಗ ಗುರುನಾಥರು "ಸನ್ಯಾಸಿಯಾದರೂ ತನ್ನ ತಾಯಿಯ ರಕ್ಷಣೆ ಭಾರ ಹೊರಬೇಕು. ಕಾರಣ ಆ ತಾಯಿಯಿಂದ ತಾನೇ ತಾವು ಭೂಮಿಗೆ ಬಂದದ್ದು?" ಎಂದು ಹೇಳಿ "ನೀವು ಎರಡು ವರ್ಷ ಮಠದಿಂದ ಹೊರಬಂದು ತಾಯಿಯೊಂದಿಗೆ ಇರಬೇಕು. ಆ ನಂತರ ಆ ಮಠದ ಉತ್ತರದಾಯಿತ್ವ ನಿಮ್ಮ ಕೈಗೆ ಸಿಗುವುದು" ಎಂದು ಧೈರ್ಯ ಹೇಳಿ ಕಳಿಸಿಕೊಟ್ಟರು. 

ಆ ನಂತರ ತಾವು ಕೂಡ ಆ ಯತೀಂದ್ರರ ನಿವಾಸಕ್ಕೆ ತೆರಳಿ ಧೈರ್ಯ ನೀಡಿ ಬಂದಿದ್ದರು. ಗುರುನಾಥರು ನುಡಿದಂತೆಯೇ ಎರಡು ವರ್ಷದ ನಂತರ ಆ ಯತೀಂದ್ರರು ಆ ಮಠದ ಉತ್ತರಾಧಿಕಾರಿಯಾಗಿ ವಿರಾಜಮಾನರಾಗಿರುವರು. 

ಮತ್ತೊಮ್ಮೆ ಅದ್ವೈತ ಪೀಠದ ಯತಿವರೇಣ್ಯರು ನೆರೆ ರಾಜ್ಯಕ್ಕೆ ಪ್ರವಾಸ ಹೊರಟಿದ್ದರು. ಅವರೊಡನೆ ಬಹಳ ಸಲುಗೆಯಿಂದಿದ್ದ ಗುರುನಾಥರು "ದಯಮಾಡಿ ಮಠ ಬಿಟ್ಟು ತೆರಳಬಾರದೆಂದು" ವಿನಂತಿಸಿದರು. ಆದರೆ ಪ್ರಯೋಜನವಾಗಲಿಲ್ಲ. 

ಆಗ ಸಮೀಪದ ಗುರುಭಕ್ತರಿಗೆ ಕರೆಮಾಡಿದ ಗುರುನಾಥರು ಯತಿವರೇಣ್ಯರ ಜೀವಕ್ಕೆ ಆಪಟ್ಟಿದೆಯೆಂದೂ ಅದಕ್ಕಾಗಿ ತಾವು ಒಂದು ಸಹಾಯ ಮಾಡಬೇಕೆಂದು ವಿನಂತಿಸಲು ಅವರು ಆಯಿತೆಂದರು. 

ಗುರುನಾಥರ ಆದೇಶದಂತೆ ಆ ಗುರುಭಕ್ತರು ಒಂದು ಚೀಲ ಮಂಡಕ್ಕಿಯನ್ನು ಹಿಡಿದುಕೊಂಡು ಹೊರಟು ಮಠದ ದ್ವಾರದವರೆಗೆ ಅಲ್ಲಲ್ಲಿ ಚೆಲ್ಲುತ್ತಾ ಹೋದರು. 

ಮಠದ ಗೇಟಿನಿಂದ ಹೊರಬಂದ ಅವರಿಗೆ ಇದ್ದಕ್ಕಿದ್ದಂತೆ ತಾವು ಎಲ್ಲಿಗೆ ಹೋಗುತ್ತಿರುವೆನೆಂಬ ಅರಿವಾಗದೇ ಬೈಕನ್ನೇರಿ ಬೇರಾವುದೋ ದಾರಿಯಲ್ಲಿ ಎರಡು ಮೂರು ಕಿಲೋಮೀಟರ್ ಸಾಗಿದರು. 

ಆಗ ಬೈಕನ್ನು ಅಡ್ಡ ತಡೆದ ಅಪರಿಚಿತನೊಬ್ಬ ಅವರಿಗೆ "ನನ್ನ ಗುರುಗಳು ಸಿಕ್ಕಿದ್ರು. ಈ ಎಳನೀರು ನಿಮಗೆ ಕುಡಿಸು ಅಂತ ಹೇಳಿದ್ರು. ತಗೊಳ್ಳಿ" ಅಂದರು. 

ಏನೂ ತಿಳಿಯದ ಅವರು ಎಳನೀರನ್ನು ಕುಡಿದ ನಂತರ ತಾನೆಲ್ಲಿರುವೆನೆಂಬ ಅರಿವಾಗಿ ಮತ್ತೆ ಹಿಂತಿರುಗಿ ಹೊರಟರು. 

ಸೇತುವೆ ಮಧ್ಯಕ್ಕೆ ಬರುವ ಹೊತ್ತಿಗೆ ಸರಿಯಾಗಿ ಓರ್ವ ವ್ಯಕ್ತಿ ದನ ಹೊಡೆದುಕೊಂಡು ಬಂದು ಇವರನ್ನು ಸಮೀಪಿಸಿ "ಅಯ್ಯಾ ಹಸಿವಾಗುತ್ತಿದೆ. ತಿನ್ನೋಕ್ಕೇನಾದ್ರೂ ಕೊಡಿ" ಎನ್ನಲು, ಅದಾಗಲೇ ಗುರುನಾಥರ ಅಣತಿಯಂತೆ ಇಟ್ಟುಕೊಂಡಿದ್ದ ಹಣ್ಣನ್ನು ಅವನಿಗೆ ನೀಡಿದರು. 

ಆತ ಅದನ್ನು ಕೆಳಕ್ಕೆ ಬೀಳಿಸಿಕೊಂಡು ಹೆಕ್ಕಿ ಕೊಡುವಂತೆ ಇವರನ್ನು ವಿನಂತಿಸಿದರು. ಆದರೆ ಈ ಬಗ್ಗೆ ಗುರುನಾಥರು ಆಗಲೇ ಎಚ್ಚರಿಸಿದ್ದರಿಂದ ಅವರು ಹೆಕ್ಕಿ ಕೊಡಲಿಲ್ಲ. ಅದಾಗಿ ಕೆಲವೇ ಕ್ಷಣದಲ್ಲಿ ಆತ ಜೋರಾಗಿ ಕಿರುಚುತ್ತಾ ಅಲ್ಲಿಂದ ಓಡತೊಡಗಿದನು. 

ತದನಂತರ ಆ ಗುರುಭಕ್ತರು ಚಿಕ್ಕಮಗಳೂರಿನ ಗುರುಭಕ್ತರ ಮನೆಯೊಂದರಲ್ಲಿ ಇದ್ದ ಗುರುನಾಥರಲ್ಲಿಗೆ ಬಂದು ಈ ಎಲ್ಲ ವಿಚಾರವನ್ನು ಗುರುಗಳಿಗೆ ತಿಳಿಸಿದರು. ಅಂದು ಹಾಸಿಗೆ ಹಿಡಿದ ಗುರುನಾಥರ ದೇಹ ಮತ್ತೆ ಜೀವಿಸಿದ್ದು ಕೇವಲ ಮೂರು ತಿಂಗಳು ಮಾತ್ರ. 

"ಗುರು ತನ್ನ ನಂಬಿದ ಭಕ್ತರನ್ನು ಉದ್ಧರಿಸಲು ತನ್ನ ಜೀವನವನ್ನೇ ಮುಡುಪಾಗಿಟ್ಟಿರುವನು. ಅದೇ ಸದ್ಗುರುವಿನ ಲಕ್ಷಣ"......,,,,,,,,,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


No comments:

Post a Comment