ಶ್ರೀ ಸದ್ಗುರು ಮಹಿಮೆ
ಅಧ್ಯಾಯ - 71
ಗ್ರಂಥ ರಚನೆ - ಚರಣದಾಸ
ಆ ಹುಡುಗ.......
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಗುರುನಿವಾಸದಿಂದ ಸುಮಾರು 90 ಕಿಲೋಮೀಟರ್ ದೂರದ ಊರಿನಲ್ಲಿ ವಾಸವಿದ್ದ ಆ ಹುಡುಗ ಪರಮ ದೈವಭಕ್ತನಾಗಿದ್ದು, ಸಮಯ ಸಿಕ್ಕಾಗಲೆಲ್ಲ ಅದ್ವೈತ ಪೀಠವೊಂದರ ಪೀಠಾಧಿಪತಿಯಾಗಿದ್ದ ಸನ್ಯಾಸಿಯೊಬ್ಬರ ಸಮಾಧಿಗೆ ಪ್ರದಕ್ಷಿಣೆ ಹಾಕುವ ಅಭ್ಯಾಸವಿಟ್ಟುಕೊಂಡಿದ್ದರು.
ಗುರುನಾಥರ ಸಂಪರ್ಕಕ್ಕೆ ಬಂದ ನಂತರ ಆತನಲ್ಲಿ ಗುರುವನ್ನು ಪಡೆಯಲೇಬೇಕೆಂಬ ಹಂಬಲ ದಿನೇ-ದಿನೇ ಹೆಚ್ಚಾಗತೊಡಗಿತು. ಗುರುನಾಥರು ಸಿಕ್ಕಾಗಲೆಲ್ಲ ಆ ಬಾಲಕನ ಜನ್ಮಸ್ಥಳದ ಇತಿಹಾಸವೆಲ್ಲವನ್ನೂ ಗುರುನಾಥರು ಹೇಳುತ್ತಿದ್ದರಂತೆ. ಆ ಹುಡುಗ ಗುರುನಿವಾಸಕ್ಕೂ ಆಗಾಗ್ಗೆ ಬರುತ್ತಿದ್ದರು.
ಸಾಮಾನ್ಯವಾಗಿ ಚರಣದಾಸನಾದ ನನಗೆ ವಿಪರೀತ ಕೆಲಸದ ಒತ್ತಡವಿರುತ್ತಿತ್ತು. ಹಾಗೂ ನನ್ನಲ್ಲಿನ ಅಹಂಕಾರವೂ ಕಾರಣವಾಗಿ ಆ ಹುಡುಗನಿಗೆ ತಿಂಡಿ ಕೊಡಲು ಹೋದಾಗ ಆತ ಅದನ್ನು ಬೇಡ ಎನ್ನಲು ನಾನು ಅವರ ಮೇಲೆ ಸಿಡುಕಿದೆ.
ಅದನ್ನು ದೂರದಿಂದಲೇ ಗಮನಿಸಿದ ಗುರುನಾಥರು ನನ್ನನ್ನು ಕರೆದು "ಏನಂದೆ ಅವನಿಗೆ?" ಎನ್ನಲು ನಾನು ಬೈದೆ ಅಂದೆ.
ಕೂಡಲೇ ಗುರುಗಳು "ಯಾರೆದುರು ನಿಂತು ಮಾತನಾಡುತ್ತಿದ್ದೀ ಗೊತ್ತಾ?, ಹೋಗು ತಪ್ಪಾಯಿತು ಎಂದು ಹೇಳಿ ನಮಸ್ಕರಿಸು. ಒಂದು ಎಳನೀರನ್ನು ತಂದು ಅವನಿಗೆ ಕುಡಿಸು" ಎಂದರು.
ನಾನು, ನನ್ನ ಅಹಂಕಾರ ಅಡ್ಡ ಬರುತ್ತಿದ್ದರೂ ಮರುಮಾತನಾಡದೇ ಹಾಗೆಯೇ ಮಾಡಿದೆ.
ನಂತರ ಗುರುಗಳು ತನ್ನ ಪತ್ನಿಯನ್ನು ಕರೆದು ಆ ಬಾಲಕನನ್ನು ತೋರಿಸಿ "ಇವನ್ಯಾರು ಗೊತ್ತೇ? ದೊಡ್ಡ ಶಕ್ತಿ ಭೂಮಿಗೆ ಬಂದಿದೆ. ನನಗಿಂತ ಹೆಚ್ಚು ಹೆಸರು ಮಾಡುತ್ತೆ. ನಮಸ್ಕರಿಸು ಅವನಿಗೆ" ಎಂದು ಹೇಳಲು ಅಮ್ಮ ಹಾಗೇ ಮಾಡಿದರು.
ಗುರು ಪತ್ನಿಯನ್ನು ನಾನು ಅಮ್ಮ ಎಂದೇ ಕರೆಯುತ್ತಿದ್ದೆ. ಆ ಹುಡುಗ ತನ್ನ ಹನ್ನೆರಡನೇ ವರ್ಷದ ವಿದ್ಯಾ ವರ್ಷದಲ್ಲಿ ಕಡಿಮೆ ಅಂಕ ಪಡೆದ ಕಾರಣವಾಗಿ ಗುರುನಾಥರಲ್ಲಿಗೆ ಬಂದು "ನನಗ್ಯಾಕೆ ಇಷ್ಟು ಕಡಿಮೆ ಅಂಕ ಬಂದಿದೆ? ಗುರುಗಳೇ ನಿಮ್ಮ ಕೃಪೆಯಿದ್ದೂ ನಂಗೇಕೆ ಹೀಗಾಯ್ತು" ಎಂದು ಕೇಳಿದರು.
ಮುಂದೇನು ಓದಬೇಕೆಂಬ ತೊಳಲಾಟದಲ್ಲಿದ್ದ ಅವನಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೆಲೆಸಿ ಇಂಜಿನೀಯರಿಂಗ್ ಮಾಡಬೇಕೆಂದು ಗುರುನಾಥರೇ ತಿಳಿಸಿದರು. ಅದಕ್ಕೂ ಮೊದಲು ಆ ಹುಡುಗನಿಗೆ "ನೀನು ವೈದ್ಯನಾಗ್ತೀಯಾ" ಅಂತ ಹೇಳಿದ್ರು. ಆದ್ರೆ ಆತ ಹನ್ನೆರಡನೇ ಇಯತ್ತೇಯಲ್ಲಿ ಕಡಿಮೆ ಅಂಕಗಳಿಸಿ ಆ ಅವಕಾಶದಿಂದ ವಂಚಿತನಾದನು. ಇದರಿಂದ ಬೇಸರಗೊಂಡ ಆ ಹುಡುಗ ಗುರುನಾಥರನ್ನು ದರ್ಶಿಸಿ ಏಕೆ ಹೀಗಾಯಿತೆಂದು ಕೇಳಲು, ಗುರುನಾಥರು "ಆ ಗುಂಪು ಕಟ್ಕೊಂಡು ಬಂದ್ರೆ ಇನ್ನೆನಯ್ಯಾ ಆಗುತ್ತೆ? ಇನ್ನು ಮುಂದೆ ಆದ್ರೂ, ಒಬ್ಬನೇ ಬಾ ಆಯ್ತಾ" ಅಂದ್ರು. ಗುರುಗಳ ಮೇಲೆ ಅಪಾರ ಪ್ರೀತಿಯಿದ್ದ ಆ ಹುಡುಗನನ್ನು ಕುರಿತು ಗುರುಗಳು "ನಿನಗೇನು ಬೇಕು" ಎಂದು ಕೇಳಲು, ಆತ "ಗುರು ಬೇಕು" ಎಂದನು.
ಆಗ ಆತನನ್ನು ಪರೀಕ್ಷಿಸಲು ಗುರುಗಳು ಆತ ತನಗಾಗಿ ತಂದಿದ್ದ ತಿನಿಸನ್ನು ನೋಡಿ "ಅಪ್ಪ ದುಡಿದ ಹಣದಿಂದ ನನಗೆ ತಿಂಡಿ ತರೋದಲ್ಲಪ್ಪಾ. ನಿನ್ನ ದುಡಿಮೆಯಿಂದ ತರಬೇಕು" ಎಂದು ಗದರಿಸಿದರು.
ಆಗ ಆ ಹುಡುಗ ನೇರವಾಗಿ ರಸ್ತೆಯ ಬದಿ ತಿನಿಸು ಮಾರುವ ಅಂಗಡಿಗೆ ಹೋಗಿ ಒಂದು ಗಂಟೆ ಕೆಲಸ ಮಾಡಿ ಪ್ರತಿಯಾಗಿ ಹತ್ತು ರೂಪಾಯಿ ತೆಗೆದುಕೊಂಡು ಆ ಹಣದಿಂದ ಹಣ್ಣು ಖರೀದಿಸಿ ಗುರುವಿಗೆ ಸಮರ್ಪಿಸಿದರು.
ಮತ್ತೊಮ್ಮೆ ಗುರುಗಳು "ನಿನಗೆ ಗುರು ಬೇಕೇ ಬೇಕೆಂದಾದಲ್ಲಿ ನಿಮ್ಮೂರಿನ ಮುಖ್ಯ ರಸ್ತೆಯನ್ನು ಗುಡಿಸಿ ಸ್ವಚ್ಛಗೊಳಿಸಿ ಬಾ" ಎಂದರಂತೆ.
ಆಗ ಆ ಹುಡುಗ ಬೆಳಗಾದಲ್ಲಿ ಎಲ್ಲರೂ ನನ್ನ ನೋಡಬಹುದು ಎಂಬ ಅಂಜಿಕೆಯಿಂದ ಬೆಳಗಿನ ಜಾವ ಪೊರಕೆ ಹಿಡಿದು ರಸ್ತೆಯನ್ನು ಸ್ವಚ್ಛಗೊಳಿಸಿ ಗುರುನಾಥರಲ್ಲಿಗೆ ಬಂದರು.
ವಿಷಯ ತಿಳಿದ ಗುರುನಾಥರು "ಗುರು ಬೇಕಾದವನಿಗೆ ಮಾನ-ಮರ್ಯಾದೆ, ಅಂಜಿಕೆ ಇರುತ್ತಾ? ಹೋಗಿ ಜನಗಳು ನೋಡುತ್ತಿರುವಾಗಲೇ ಮತ್ತೊಮ್ಮೆ ಗುಡಿಸಿ ಬಾ" ಎನ್ನಲು ಆ ಹುಡುಗ ಹಾಗೆಯೇ ಮಾಡಿದರಂತೆ.
ಆ ಹುಡುಗ ತನ್ನ ಸಹಪಾಠಿಗಳೊಂದಿಗೆ ಕಾಲೇಜಿಗೆ ಹೋಗುತ್ತಿದ್ದಾಗ, ಪಟ್ಟಣದ ಮುಖ್ಯ ಚರಂಡಿ ಸಮೀಪ ನಿಂತಿದ್ದ ಗುರುನಾಥರು ಆ ಹುಡುಗನನ್ನು ಕರೆದು "ನಿನಗೆ ಗುರು ಬೇಕೆಂದಾದಲ್ಲಿ ಈಗಲೇ ಚರಂಡಿ ಒಳಗಿಳಿದು ಸ್ವಚ್ಛಗೊಳಿಸು" ಎಂದರು. ಮರು ಮಾತನಾಡದೇ ಆ ಹುಡುಗ ಚರಂಡಿ ಒಳಗೆ ಧುಮುಕಿ ಸ್ವಚ್ಛಗೊಳಿಸಿದರು.
ಆಗಾಗ್ಗೆ ಗುರುನಾಥರು ಆ ಹುಡುಗನನ್ನು ಚರಣದಾಸನಾದ ನನ್ನನ್ನು ಕುರಿತು ನನ್ನಲ್ಲಿ "ಸಾಧನೆ ಮಾಡಿದರೆ ಆ ಹುಡುಗನಂತೆ ಮಾಡಬೇಕು" ಅಂತ ಹೇಳುತ್ತಾ ಇದ್ದರು. ಇಂದು ಆ ಹುಡುಗ ಒಂದು ಪ್ರಚಂಡ ಶಕ್ತಿಯಾಗಿ ಬೆಳೆದು ನಿಂತಿದ್ದರೂ ಗುರುವಾಕ್ಯವನ್ನು ಕಿಂಚಿತ್ತೂ ಲೋಪವಾಗದಂತೆ ನಡೆಸುತ್ತಿರುವರು.
ಪರಮ ದೈವಭಕ್ತರೂ, ಸಾತ್ವಿಕರೂ ಆಗಿದ್ದ ಆ ಹುಡುಗನ ಪೋಷಕರು ಪ್ರತಿನಿತ್ಯ ಬೆಳಿಗ್ಗೆ ತುಳಸೀ ಪೂಜೆ ಮಾಡಿ ಮನೆಯೆದುರು ಬರುವ ಗೋವುಗಳಿಗೆ ಪಾಯಸ ನೈವೇದ್ಯ ಮಾಡಿ, ಬಂದ ಭಿಕ್ಷುಕರಿಗೆ ಪಾದ ತೊಳೆದು ಆಹಾರ ನೀಡಿ ಗುರುನಾಥರ ಹೆಸರಿನಲ್ಲಿ ದೀಪವೊಂದನ್ನು ಬೆಳಗುತ್ತಿದ್ದರು.
ಒಮ್ಮೆ ಗುರುನಿವಾಸಕ್ಕೆ ಬಂದ ಅವರನ್ನು ಕುರಿತು "ನನ್ನ ಹೆಸರಿನಲ್ಲಿ ದೀಪ ಹೊರಗೆ ಇಡ್ತೀರಲ್ವಾ? ನಾನು ಮನೆ ಒಳಗೆ ಬರೋದು ಬೇಡವೇ? ಇನ್ನು ಮುಂದೆ ದೀಪವನ್ನು ಒಳಗಿಡಿ ಆಯ್ತಾ... " ಎಂದರು.
ಮತ್ತೊಮ್ಮೆ "ನಾನು ನಿಮ್ಮ ಮನೆಗೆ ಬರ್ತೀನಿ" ಅಂದಿದ್ದರಂತೆ.
ಗುರುಗಳು ಬಂದೇ ಬರುವರೆಂದು ದಿನವಿಡೀ ಕಾದರೂ ಗುರುನಾಥರು ಬರಲಿಲ್ಲ. ಇದರಿಂದ ಬೇಸರಗೊಂಡ ಅವರು ಮರುದಿನ ಗುರುದರ್ಶನಕ್ಕೆ ಬಂದು "ಗುರುಗಳೇ ನಿನ್ನೇ ಬರ್ತೀನಿ ಅಂತ ಹೇಳಿ ಬರಲಿಲ್ವಲ್ಲಾ" ಎನ್ನಲು,
ಗುರುನಾಥರು "ಬಂದಿದ್ದಾನಲ್ಲಾ ಅಮ್ಮ ಗೋವಿನ ರೂಪದಲ್ಲಿ. ಆ ತರ ಬಿಸಿ ಅನ್ನ ಹಾಕೋದೇ? ನೋಡು ನನ್ನ ನಾಲಿಗೆ ಎಲ್ಲ ಸುಟ್ಟು ಬೊಬ್ಬೆ ಬಂದಿದೆ" ಎಂದು ನಾಲಿಗೆ ಹೊರಚಾಚಿದರು. ಆಗ ಅವರ ನಾಲಿಗೆಯಲ್ಲಿ ಸುತ್ತ ಬೊಬ್ಬೆಗಳು ಇದ್ದವು. ಆ ದಂಪತಿಗಳು ದನಕ್ಕೆ ಬಿಸಿ ಅಣ್ಣ ಇಟ್ಟಿದ್ದಕ್ಕಾಗಿ ಬಹಳ ಬೇಸರಿಸಿದರು.
"ಗುರು ಎಂಬುದು ಭಾವವೇ ವಿನಃ ದೇಹವಲ್ಲ, ಶುದ್ಧ ಭಾವವಿರುವಲ್ಲಿ ಆತ ಯಾವ ರೂಪದಲ್ಲಿ ಬೇಕಾದರೂ ಬರುವನೆಂಬುದಕ್ಕೆ ಈ ಘಟನೆ ಸಾಕ್ಷಿ"......,,,,,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
No comments:
Post a Comment