ಒಟ್ಟು ನೋಟಗಳು

Saturday, December 10, 2016

ಶ್ರೀ ಸದ್ಗುರು ಮಹಿಮೆ   


   ಅಧ್ಯಾಯ  - 67


    ಗ್ರಂಥ ರಚನೆ - ಚರಣದಾಸ 


ಮೂರು ಮದುವೆಯ ಕತೆ 






ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಗುರುನಾಥರು ಶುಭಕಾರ್ಯಗಳಿಗೆ ಮುಹೂರ್ತ ನಿಗದಿಪಡಿಸುವುದರಲ್ಲಿ ಸಿದ್ಧಹಸ್ತರು. ಯಾವುದೇ ಪಂಚಾಂಗ ಇತ್ಯಾದಿಗಳನ್ನು ಕೂಡ ನೋಡದೇ ಇದ್ದಕ್ಕಿದ್ದಂತೆಯೇ ಭಕ್ತರ ಅಭೀಷ್ಟಗಳನ್ನು ಈಡೇರಿಸುತ್ತಿದ್ದುದು ಗುರುನಾಥರ ವೈಶಿಷ್ಟ್ಯ. 

ಮೂಲತಃ ಸಖರಾಯಪಟ್ಟಣದವರೇ ಆಗಿದ್ದು ಬೆಂಗಳೂರಿನಲ್ಲಿ ವಾಸವಾಗಿರುವ ಭಕ್ತರೋರ್ವರು ಮನೆ ಕಟ್ಟಬೇಕೆಂಬ  ಬಯಕೆ ಹೊಂದಿದರು. ಇದನ್ನರಿತ ಗುರುನಾಥರು ಬೆಂಗಳೂರಿಗೆ ಹೋಗಿ ತನ್ನ ಸೋದರಿಯೊಂದಿಗೆ ಈ ಭಕ್ತರು ವಾಸವಾಗಿದ್ದ ಬಾಡಿಗೆ ಮನೆಗೆ ತೆರಳಿ ಅಲ್ಲಿಂದ ಅವರು ಮನೆ ಕಟ್ಟಬೇಕೆಂದಿದ್ದ ನಿವೇಶನದ ಜಾಗಕ್ಕೆ ತೆರಳಿ ತನ್ನ ಸೋದರಿಯ ಕೈಯಿಂದಲೇ ಪೂಜೆ ನೆರವೇರಿಸಿದರು. 

ಅದೂ ಜನ ಸಾಮಾನ್ಯರಲ್ಲಿ ನಿಷಿದ್ಧವೆನಿಸಿದ ಅಮಾವಾಸ್ಯೆಯಂದು. ಇದೀಗ ಆ ಭಕ್ತರು ಅದೇ ಮನೆಯಲ್ಲಿ ಸುಖದಿಂದ ವಾಸವಾಗಿರುವರು. 

ಅಂತೆಯೇ ಒಂದು ದಿನ ಬಾಣಾವರದ ಭಕ್ತರೋರ್ವರ ಸಹೋದರಿಯ ಮದುವೆ ನಿಗದಿ ಮಾಡಿದ ಗುರುನಾಥರು ಬೆಂಗಳೂರಿನಲ್ಲಿ ವಾಸವಿದ್ದ ಭಕ್ತರೊಬ್ಬರ ಪುತ್ರ ಹಾಗೂ ಸಾಗರದಲ್ಲಿ ವಾಸವಿದ್ದ ಭಕ್ತರೋರ್ವರ ಪುತ್ರಿಗೂ ಬಾಂಧವ್ಯ ಏರ್ಪಡಿಸಿ ಬೆಂಗಳೂರಿನಲ್ಲಿ ಅದೇ ದಿನ ಬೆಳಿಗ್ಗೆ 4:30 ಕ್ಕೆ ಮುಹೂರ್ತ ನಿಗದಿ ಪಡಿಸಿದರು. ಮಾತ್ರವಲ್ಲ ತಾವು ಸ್ವತಃ ಅಲ್ಲಿಗೆ ತೆರಳಿದರು. 

ಅದೇ ದಿನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಎರಡು ಕುಟುಂಬದವರನ್ನು ಅಲ್ಲಿಯೇ ಸೇರಿಸಿ ಮಾತನಾಡಿಸಿದ ಗುರುನಾಥರು ಅದೇ ದಿನ ಬೆಳಿಗ್ಗೆ ಬಹುಶಃ 6:30 ಕ್ಕೆ ಆ ಕುಟುಂಬದವರ ವಧು ವರರ ವಿವಾಹವನ್ನು ತನ್ನ ಸೋದರಿಯ ಮನೆಯಲ್ಲೇ ನಡೆಸಲು ನಿಗದಿ ಪಡಿಸಿದರು. ಕೆಲವೇ ಕ್ಷಣದಲ್ಲಿ ಅಲ್ಲಿಂದ ಹೊರಟ ಗುರುನಾಥರು ಮಧ್ಯಾನ್ಹದ ಹೊತ್ತಿಗೆ ಸಖರಾಯಪಟ್ಟಣ ತಲುಪಿ ವಿಶ್ರಾಂತಿ ಪಡೆಯುತ್ತಿದ್ದರು. ಬಹುಶಃ ಇಂತಹ ಕಾರ್ಯ ಸಮರ್ಥ ಸದ್ಗುರುವಿನಿಂದ ಮಾತ್ರ ಸಾಧ್ಯವೇನೋ.... !?


ಜಗದ್ಗುರು ಬಂದಾಗ ಮಳೆ ನಿಲ್ಲಿಸಿದ್ದು 


ನಾಡಿನ ಅದ್ವೈತ ಪೀಠದ ಮೇಲೆ ಗುರುನಾಥರಿಗೆ ಅತೀವವಾದ ಪ್ರೀತಿ, ಗೌರವವಿತ್ತು. ಅಂತೆಯೇ ಆ ಯತಿಗಳಿಗೂ  ಗುರುನಾಥರ ಬಗ್ಗೆ ಅಷ್ಟೇ ಅಭಿಮಾನವಿತ್ತು. ಗುರುನಾಥರು ತಮ್ಮ ಮನೆಗೆ ಆ "ಮಹಾ ಸಂಸ್ಥಾನದ" ಹೆಸರನ್ನೇ ಬರೆಸಿದ್ದರು. ಮಾತ್ರವಲ್ಲ ತನ್ನದೆಲ್ಲವೂ ಆ ಪೀಠಕ್ಕೆ ಸೇರಿದ್ದೆಂದು ಆಗಾಗ್ಗೆ ಹೇಳುತ್ತಿದ್ದರು. 

"ನೋಡಯ್ಯಾ ಚರಣದಾಸ.... ನನಗೆ ಗೊತ್ತಿರೋದು ಎರಡಕ್ಷರ ಮಾತ್ರ. ಗ ಕೊಂಬು ಗು, ರ ಕೊಂಬು ರು = ಗುರು ಎರಡಕ್ಷರ ಮಾತ್ರ" ಎಂದು ಆಗಾಗ್ಗೆ ಹೇಳುತ್ತಿದ್ದರು. ಪ್ರತೀ ವರ್ಷವೂ ಆ ಪೀಠದ ಯತಿಗಳು ಸಖರಾಯಪಟ್ಟಣಕ್ಕೆ ಬಂದು ಒಂದು ದಿನ ವಾಸ್ತವ್ಯ ಮಾಡುವ ಪರಿಪಾಠವಿತ್ತು. 

ಅದು ಜಗದ್ಗುರುಗಳ (ಬಹುಶಃ) ಎರಡನೆಯ ಭೇಟಿ ಸಂದರ್ಭ. ಜಗದ್ಗುರುಗಳು ಭೇಟಿ ನೀಡಿದ್ದರು. ಆಗ ಇದ್ದಕ್ಕಿದ್ದಂತೆ ಮೋಡ ಕವಿದು ಮಳೆ ಸುರಿಯಲಾರಂಭಿಸಿತು. ಆಗ ಅಲ್ಲೇ ಇದ್ದ ಆ ಪೀಠದ ಸೇವಕರೊಬ್ಬರು "ಸ್ವಾಮಿ, ಮಳೆ ಬಂದ್ರೆ ಕಾರ್ಯಕ್ರಮಕ್ಕೆ ತೊಂದರೆ ಆಗುತ್ತದೆ ಅಲ್ಲವೇ?" ಎಂದು ಗುರುನಾಥರನ್ನು ಕೇಳಿದರು. 

ಅದಕ್ಕೆ ಗುರುನಾಥರು ನಗುತ್ತಾ ಮಳೆ ಸಿಲ್ಲಿಸ್ತೀರಾ ನೀವು? ಎಂದು ಕೇಳುತ್ತಲೇ ನನ್ನನ್ನು ಕರೆದು "ಒಂದು ಕಾಯಿ ತಾ" ಎಂದರು. ನಾನು ಕಾಯಿ ತರಲು ಅದನ್ನು ಮುಟ್ಟಿ "ರಸ್ತೆಯಲ್ಲಿ ಉರುಳಿ ಬಿಡು" ಎಂದರು. 

ನಾನು ಹಾಗೆಯೇ ಮಾಡಿದೆ. ಅದಾಗೆ ಕೆಲವೇ ಕ್ಷಣದಲ್ಲಿ ದಟ್ಟ ಮೋಡ ಸರಿದು, ಸುರಿಯುತ್ತಿದ್ದ ಮಳೆ ನಿಂತುಹೋಗಿತ್ತು. ಇದನ್ನು ಕಂಡ ಮಠದ ಪರಿವಾರವೆಲ್ಲವೂ ಆಶ್ಚರ್ಯಚಕಿತರಾಗಿದ್ದರು. 

ಗುರುನಾಥರ ಜೀವನದಲ್ಲಿ ನಡೆದ ಇಂತಹ ಘಟನೆಗಳೆಲ್ಲವೂ "ಎಲ್ಲವೂ ಅವನದಾಗಿರಬೇಕು. ಅವನದು ನಿನ್ನದಾಗಿರಬೇಕು. ನಿನ್ನಂತೆಯೇ ಏನೂ ನಡೆಯಬಾರದು. ಎಲ್ಲವೂ ಅವನಿಚ್ಛೆಯಂತೆಯೇ ನಡೆಯಬೇಕು. ಆಗ ಮನುಷ್ಯ ಮೆರೆಯಲಾರ" ಎನ್ನುತ್ತಿದ್ದ ಗುರುನಾಥರ ನುಡಿಗಳಿಗೆ ಇಂಬು ಕೊಡುತ್ತದೆ. ಹಾಗೆಯೇ "ಅಯ್ಯಾ ಚರಣದಾಸ, ಈಶ+ವರ = ಬೇಡಿದ್ದನ್ನು ನೀಡುವವನು. ಅವನೇ ಈಶ್ವರ" ಎಂಬ ಅವರ ಮಾತು ಇಂದಿಗೂ ನನ್ನ ಮನದಲ್ಲಿ ಮಾರ್ದನಿಸುತ್ತಿದೆ....,,,,,,,, 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


No comments:

Post a Comment