ಒಟ್ಟು ನೋಟಗಳು

Friday, December 30, 2016

ಶ್ರೀ ಸದ್ಗುರು ಮಹಿಮೆ   


   ಅಧ್ಯಾಯ  - 87


    ಗ್ರಂಥ ರಚನೆ - ಚರಣದಾಸ 


ಗುರು ಗುಂಪಿಗಲ್ಲ 





ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।

ಮೂಲತಃ ಸೇನೆಯಲ್ಲಿದ್ದ ಆ ವ್ಯಕ್ತಿ ಗುರುನಾಥರ ಬಗ್ಗೆ ಸಂಬಂಧಿಯೊಬ್ಬರಿಂದ ತಿಳಿದು ಅವರನ್ನು ನೋಡಲೇಬೇಕೆಂಬ ಹಂಬಲದಿಂದ ಮಧ್ಯರಾತ್ರಿ ಒಂದೂವರೆಗೆ ಗುರುನಿವಾಸದ ಕದ ತಟ್ಟಿದರು. 

ಲಾಟೀನು ಹಿಡಿದು "ಯಾರಯ್ಯ ಅದು" ಎಂದು ಕೇಳುತ್ತಾ ಬಾಗಿಲ ತೆಗೆದ ಗುರುನಾಥರು ಅವರಿಗೆ ಮಲಗಲು ವ್ಯವಸ್ಥೆ ಮಾಡಿ, "ಬೆಳಿಗ್ಗೆ ಮಾತನಾಡುವ ಆಯ್ತಾ" ಎಂದು ನುಡಿದು ಒಳ ನಡೆದರು. ಆಗಿನ್ನೂ ಜನಜಂಗುಳಿ ಅಷ್ಟಾಗಿ ಇರಲಿಲ್ಲ. 

ಗುರುನಾಥರು ಇವರೊಂದಿಗೆ ಊರೊಳಗೆ ಹೋಗಿ ಎಲ್ಲರಿಗೂ ಪರಿಚಯ ಮಾಡಿಕೊಟ್ಟು ಎರಡು ದಿನಗಳ ಕಾಲ ಜೊತೆಯಲ್ಲಿ ಇರಿಸಿಕೊಂಡರು. ಆ ಎರಡು ದಿನವೂ "ಗುರು ಶುದ್ಧ ಭಾವನೆಗೆ ಮಾತ್ರ ಸಿಗುವನು" ಎಂದು ಅವರನ್ನೇ ಉದ್ದೇಶಿಸಿ ಮಾತನಾಡುತ್ತಿದ್ದರು. 

ಜೊತೆಗೆ "ನೋಡಿ ನನ್ನ ಮಾತನಾಡಿಸೋಕೆ ಅಂತ ಬೆಂಗಳೂರಿನಿಂದ ಬಂದಿದ್ದಾರೆ" ಅಂತ ಸುತ್ತಲಿದ್ದ ಜನತೆಗೆ ಇವರ ಬಗ್ಗೆ ಹೇಳುತ್ತಿದ್ದ ರೀತಿ ಅಷ್ಟು ಮುಗ್ಧವಾಗಿರುತ್ತಿತ್ತು. ಆ ನಂತರ ಸಂಜೆ ಹೊರಡುವ ಮುನ್ನ ಅವರನ್ನು ಕರೆದು "ಗುರು ಗುಂಪಿಗಲ್ಲ ಕಣಯ್ಯಾ. ನಿನಗೆ ಬೇಕಾದರೆ ಒಬ್ಬನೇ ಬಾ" ಎಂದು ಹೇಳಿ ಕಳಿಸಿದರು. 

ಆ ನಂತರ ಗುರುವಿನ ಆಕರ್ಷಣೆಗೆ ಒಳಗಾದ ಆ ವ್ಯಕ್ತಿ ಪದೇ ಪದೇ ಬರತೊಡಗಿದರು. ಗುರುವಿನ ಅನುಗ್ರಹದಿಂದಾಗಿ ಕೇಂದ್ರ ಸರ್ಕಾರಿ ನೌಕರಿಗೆ ಸೇರಿ ಮೈಸೂರಿನಲ್ಲಿ ಸೇವೆ ಸಲ್ಲಿಸಲು ಆರಂಭಿಸಿದರು. ನಾನು ಗುರುವಿನ ಸಂಪರ್ಕಕ್ಕೆ ಬಂದ ನಂತರವೂ ಅವರು ಹಾಗೆ ನಿರಂತರವಾಗಿ ರಜೆ ಇದ್ದಾಗಲೆಲ್ಲ ಇಲ್ಲಿಗೆ ಬಂದು ಕೈಲಾದಷ್ಟು ಗುರು ಸೇವೆ ಮಾಡಿ ತೆರಳುತ್ತಿದ್ದರು. 

ಒಮ್ಮೆ ಹೀಗೆಯೇ ಬಂದು ಹೊರಡುವಾಗ ಕರೆದ ಗುರುನಾಥರು "ಬಸ್ಸಿನಲ್ಲಿ ಮುಂದೆ ಒಂದೇ ಸೀಟು ಇರುತ್ತೆ ಅಲ್ಲೇ ಕೂತ್ಕೋ" ಎಂದು ನುಡಿದು ಆಶೀರ್ವದಿಸಿ ಕಳಿಸಿಕೊಟ್ಟರು. ಆಗ ತಡರಾತ್ರಿಯಾಗಿತ್ತು. ಬಸ್ಸನ್ನೇರಿದ ಅವರಿಗೆ ಗುರುನಾಥರು ಹೇಳಿದ ಮಾತಿಗೆ ವ್ಯತಿರಿಕ್ತವಾಗಿ ಹಿಂದುಗಡೆಯ ಕೊನೆಯ ಸೀಟು ಸಿಕ್ಕಿತು. 

"ಇದೇಕೆ ಹೀಗೆ" ಎಂದು ಯೋಚಿಸುತ್ತಾ ಅವರು ಅದೇ ಸೀಟಿನಲ್ಲಿ ಕುಳಿತುಕೊಂಡರು. ಬಸ್ಸು ಮುಂದಿನ ನಿಲ್ದಾಣದಲ್ಲಿ ನಿಂತಾಗ ಗುರುನಾಥರು ಹೇಳಿದ್ದಂತೆಯೇ ಮುಂದಿನ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿ ಇಳಿದು ಹೋದರು. ಕೂಡಲೇ ಇವರು ಗುರುವನ್ನು ಸ್ಮರಿಸುತ್ತಾ ಮುಂದುಗಡೆ ಬಂದು ಕುಳಿತರು. ಆ ನಂತರ ಇವರು ಮೊದಲು ಕುಳಿತಿದ್ದ ಜಾಗದಲ್ಲಿ ಬೇರೊಬ್ಬರು ಆಸೀನರಾದರು. ಬಸ್ಸು ಸಾಗುತ್ತಿರುವಾಗ ಹಿಂದಿನಿಂದ ಬಂದ  ವಾಹನವೊಂದುಇವರು ಹೋಗುತ್ತಿದ್ದ ಬಸ್ಸಿಗೆ ಗುದ್ದಿತು. ಆ ಅಪಘಾತದಲ್ಲಿ ಇವರು ಮೊದಲು ಕುಳಿತಿದ್ದ ಜಾಗದಲ್ಲಿ ಆ ನಂತರ ಬಂದು ಕುಳಿತ ವ್ಯಕ್ತಿ ಮೃತಪಟ್ಟನು. 

ಇದನ್ನು ಕಣ್ಣಾರೆ ಕಂಡ ಅವರು ಗುರು ಕರುಣೆಯನ್ನು ನೆನೆದು ಆ ಸದ್ಗುರುವಿಗೆ ಮನಸಾರೆ ವಂದಿಸಿದರು. ತೀರಾ ಇತ್ತೀಚೆಗೆ ನನಗೆ ಸಿಕ್ಕ ಇವರು ಈ ಘಟನೆಯನ್ನು ವಿವರಿಸುತ್ತಾ ಭಾವಪರವಶರಾದರು. 

ಅಪಾರ ಗುರುಭಕ್ತಿ, ಶ್ರದ್ಧೆ ಹಾಗೂ ಇನ್ನೊಂದು ವಿಚಾರಕ್ಕೆ ಮೂಗು ತೋರಿಸದ ಭಾವ ಪರಿಶುದ್ಧತೆ - ಇದು ನಾನು ಈ ವ್ಯಕ್ತಿಯಿಂದ ಕಲಿತುಕೊಂಡ ಗುಣಗಳು....,,,,,,,

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


1 comment:

  1. Poojya venkatachala avadootarige nanna bhakti poorvaka namanagalu. Guruvarya Yellaranu sadaa kaala Harasi asheervadisi Kaapadi. Sarve jano sukinobavantu.

    ReplyDelete