ಒಟ್ಟು ನೋಟಗಳು

Tuesday, December 6, 2016

ಶ್ರೀ ಸದ್ಗುರುನಾಥ ಲೀಲಾಮೃತ   

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ಅಧ್ಯಾಯ  - 24


ಭಕ್ತ ಜನರಿಗಾಗಿ 


।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಪ್ರಿಯ ಗುರುಬಂಧು ಓದುಗ ಮಿತ್ರರೇ, ಗುರುನಾಥರ ಚರಿತ್ರೆಗೆ ಕೊನೆ ಎಲ್ಲಿದೆ? ಹಾಗಾಗಿ, ಎಲ್ಲ ಮುಗಿದ ಮೇಲೆ, ಗುರುನಾಥರ ಜೀವನದ ಒಂದು ಪ್ರಮುಖ ಘಟನೆ, ಅಧ್ಯಾಯವನ್ನು ತಮ್ಮ ಭಕ್ತರೊಬ್ಬರಿಂದ ನನಗವರು ಪ್ರಸಾದಿಸಿದಾಗ... ಇದೋ ಮತ್ತೆ ಪ್ರಾರಂಭಿಸುತ್ತೇನೆ. ಆದಿ ಅಂತ್ಯವೆಲ್ಲಿದೆ? ಗುರುನಾಥರಿಗೆ, ಗುರುಚರಿತ್ರೆಗೆ..... 

ಸಖರಾಯಪಟ್ಟಣ, ಬೆಳಗಿನ ಸಮಯ. ಸದ್ ಬ್ರಾಹ್ಮಣರೊಬ್ಬರು ತಮ್ಮ ತೋಟಕ್ಕೆ ಹೋಗಿ ಕೆಲಸಗಳನ್ನು ಮುಗಿಸಿ, ನಾಲ್ಕಾರು ತೆಂಗಿನಕಾಯಿ, ಒಂದು ಬಾಳೆಹಣ್ಣು ಗೊನೆಯನ್ನು ಹೆಗಲ ಮೇಲೆ ಇಟ್ಟುಕೊಂಡು, ತೋಟದ ದಾರಿಯಿಂದ ಸಾಗಿ, ಚಿಕ್ಕಮಗಳೂರು-ಕಡೂರಿನ ಮುಖ್ಯರಸ್ತೆಗೆ ಬರುತ್ತಿದ್ದರು. ಇದ್ದಕ್ಕಿದ್ದಂತೆ ಮುಖ್ಯರಸ್ತೆಗೆ ಬಂದು, ದಾರಿ ಮಧ್ಯದಲ್ಲಿ ಅವರು ದಾರಿಗೆ ಅಡ್ಡವಾಗಿ ನಿಂತುಬಿಟ್ಟರು. ಇದೇ ಸಮಯದಲ್ಲಿ ವೇಗವಾಗಿ ಕಾರೊಂದು ಬರುತ್ತಿತ್ತು. ಕಾರಿನ ಹಿಂದೆ ಮತ್ತೊಂದು ವಾಹನ. ಎಲ್ಲರೂ ತ್ವರಿತವಾಗಿ ನಿಲ್ಲಿಸಿದರು. ಕಾರಿನಲ್ಲಿದ್ದವರು ಒಂದು ಪ್ರಖ್ಯಾತ ಗುರುಮಠದ ಪ್ರಮುಖರು. ತಮ್ಮ ರಸ್ತೆಗೆ ಹೀಗೆ ಅಡ್ಡವಾಗಿ ನಿಂತ ಆ ವ್ಯಕ್ತಿಯನ್ನು ಕಂಡು ಅವರ ಮನ ಕುದಿಯಿತು. 'ಯಾರೋ ಅದು ಹುಚ್ಚ ದಾರಿಗಡ್ಡಲಾಗಿ ನಿಂತು ತೊಂದರೆ ಮಾಡುತ್ತಿದ್ದಾನೆ. ಇಳಿದು ನಾಲ್ಕು..... ' ಎಂಬ ಮಾತು ಅವರ ಬಾಯಿಂದ ಹೊರಬಂತು. ಕಾರಿನಲ್ಲಿದ್ದವರು ಬಾಗಿಲ ಹಿಡಿ ತೆಗೆದು ಇಳಿಯಬೇಕೆಂದಿದ್ದರು. ಅಷ್ಟರಲ್ಲಿ ಎದುರಿನ ದೊಡ್ಡ ಮರವೊಂದು ಇದ್ದಕ್ಕಿದ್ದಂತೆ ಧಡಾರೆಂದು ಧರೆಗುರುಳಿತು. ಎಲ್ಲಾ ಕ್ಷಣಗಳಲ್ಲಿ ನಡೆದು ಹೋಯಿತು. ಅನೇಕ ಜನರು ವಸ್ತು ವಾಹನಗಳು, ಆ ದೈತ್ಯ ಮರದಡಿಯಲ್ಲಿ ನುಜ್ಜುಗುಜ್ಜಾಗುವ ಅನಾಹುತ ತಪ್ಪಿತ್ತು. ಕಾರಿನಲ್ಲಿದ್ದವರು 'ಹುಚ್ಚ ಹುಚ್ಚನಲ್ಲ, ಶಿವಸ್ವರೂಪಿಯಾಗಿ ಬಂದು ರಕ್ಷಿಸಿದ ಪರಮಾತ್ಮನೆಂದು', ಕೋಪವಿಳಿದಾಗ, ವಿವೇಕ ಉದಯಿಸಿ, ದಾರಿಯಲಿ ನಿಂತವರಿಗೆ ನಮಸ್ಕಾರ ಮಾಡಲು ಬಂದರೆ, 'ನನಗೆ ನಮಸ್ಕಾರವೂ ಬೇಡ, ಚಮತ್ಕಾರವೂ ಬೇಡ... ಇನ್ನೂ ಯಾರು ಯಾರ ಉದ್ದಾರ... ಏನೇನು ಆಗಬೇಕಿದೆಯೋ' ಅನ್ನುತಾ ಅಲ್ಲಿಂದ ತೆಂಗಿನಕಾಯಿ, ಬಾಳೆಗೊನೆ ಹೊತ್ತ ಅವರು, ನಿರ್ಲಿಪ್ತವಾಗಿ ಸಾಗಿಬಿಟ್ಟರಂತೆ. 

ಇವರು ಯಾರು? ಇವರ ಹೆಸರೇನು? ಎಂಬ ಕುತೂಹಲ ಮನದಲ್ಲಿ ಮೂಡುತ್ತಿದೆಯೇ? ತಮ್ಮಲ್ಲಿ ಅಪಾರವಾದ ದೈವೀಶಕ್ತಿ ಇದ್ದರೂ, ಪ್ರಕಟವಾಗಬಾರದೆಂದು ನಿರ್ಧರಿಸಿ, ಸರಳ ಸಾಮಾನ್ಯ ಮನುಷ್ಯರಂತೆ ಜೀವಿಸುತ್ತಿದ್ದ ಅವರನ್ನು ಲೋಕಕ್ಕೆ ಪರಿಚಯಿಸದೇ ಇರಲು ಆ ಭಗವಂತನಿಗೂ ಇಷ್ಟ ಆಗಲಿಲ್ಲವೇನೋ? ಅವರು ಮತ್ತಾರಾಗಲು ಸಾಧ್ಯ. ಅವರೇ, ನಮ್ಮ ನಿಮ್ಮೆಲ್ಲರ ಆರಾಧ್ಯರೂ, ಹಿತಚಿಂತಕರೂ, ನಿರಂತರ ಭಕ್ತರ ಉದ್ಧಾರಕರೂ ಆದ ಸಖರಾಯಪಟ್ಟಣದ ವೆಂಕಟಾಚಲ ಅವಧೂತರು. ಗುರುವಿನ ಗೌಪ್ಯ ಹೀಗೆ ಹೊರಜಗತ್ತಿಗೆ ತಿಳಿದಿದ್ದು, ಜನಸಾಗರ, ಅವರತ್ತ ಧಾವಿಸಿ ಬಂದದ್ದು, ನಾವು ನೀವೆಲ್ಲಾ ಆವರ ಕೃಪೆಯಿಂದ ಪುನೀತರಾಗುತ್ತಿರುವುದು. 

ಮುಕುಂದೂರು ಗುರುಗಳಂತಹ ಸಾಧಕರ ಪ್ರಭಾವವೂ, ಕರುಣೆಯೂ, ಶ್ರೀ ಶ್ರೀ ಚಂದ್ರಶೇಖರ ಭಾರತೀ ಸ್ವಾಮಿಗಳಂತಹ ಮಹಾತ್ಮರ ಪರಮಾನುಗ್ರಹವೂ ನಮ್ಮ ಗುರುನಾಥರ ಮೇಲಿದ್ದುದನ್ನು, ಅವರ ನಿಕಟ ಗುರು ಬಂಧುಗಳೊಬ್ಬರು ಇದೇ ತಾನೇ ಮೇಲಿನ ಘಟನೆಯೊಂದಿಗೆ ತಿಳಿಸುತ್ತಾ 'ಹರಿ ಓಂ ತತ್ಸತ್  ಶ್ರೀ ದತ್ತಾತ್ರೇಯಾರ್ಪಣಮಸ್ತು' ಎಂದು ಮುಗಿಸಿದ್ದ ಶ್ರೀ ಸದ್ಗುರು ಲೀಲಾಮೃತವನ್ನು ಮತ್ತೆ ಶ್ರೀ ಗಣೇಶನ ಸ್ತುತಿಯಿಂದ ಪ್ರಾರಂಭಿಸುವಂತೆ ಮಾಡಿದ್ದಾರೆ. ಏಕೆಂದರೆ ಇದು ಅನವರತ. 


ಕೆಂಪು ಹೂವನ್ನು ಏರಿಸಿ ಬಂದಿರಲ್ಲವಾ..... ? 


ಶೃಂಗೇರಿ ಜಗದ್ಗುರುಗಳಿಗೆ ಅನನ್ಯವಾಗಿ ನಡೆದುಕೊಳ್ಳುತ್ತಿದ್ದ ಶಿವಮೊಗ್ಗದ ಒಬ್ಬ ಭಕ್ತರಿಗೆ ಗುರುನಾಥರನ್ನು ಕಾಣಬೇಕೆಂಬ ಹಂಬಲ ಪ್ರಬಲವಾಗಿತ್ತು. ಅನೇಕ ಸಂದರ್ಭಗಳಲ್ಲಿ ಗುರುನಾಥರ ಮಹಿಮೆಯನ್ನವರು ಕೇಳಿದ್ದರು. ತಾವು ಬೆಂಗಳೂರಿಗೆ ಹೋಗುವ ಮುನ್ನ ಗುರುನಾಥರನ್ನು ಕಾಣಲು 2001ರಲ್ಲಿ ಅವರು ಹೋದರು. 

ಜೀವನದಲ್ಲಿ ಸುಖದುಃಖಗಳು ಮನುಷ್ಯನನ್ನು ಮಾಗಿಸುತ್ತವೆಯಂತೆ. ಎಲ್ಲವೂ ಇದ್ದರೂ ಕೆಲವೊಂದು ವಿಚಾರಗಳು ಈ ಗುರುಭಕ್ತ ದಂಪತಿಗಳಿಗೆ ಮನಸ್ಸಿಗೆ ನೋವು ತಂದಿದ್ದವು. ಗುರುನಾಥರೇ ನಮ್ಮೆಲ್ಲ ಕಷ್ಟಗಳಿಗೆ ಪರಿಹಾರ ನೀಡಬಲ್ಲದಾತರೆಂದು ನಂಬಿದ ಇವರು, ಒಂದು ದಿನ ಸಂಜೆ, ನಾಳೆ ಗುರುದರ್ಶನಕ್ಕೆ ಸಖರಾಯಪಟ್ಟಣಕ್ಕೆ ಹೋಗಿಬಿಡಬಹುದೆಂದು ತೀರ್ಮಾನಿಸಿದರು. ಆದರೆ ಅವರ ಪತ್ನಿ ಜ್ವರದಿಂದ ನರಳುತ್ತಿದ್ದರು. ಆದರೂ ಅವರಿಗೆ ಗುರುನಾಥರ ದರ್ಶನದ ಆಕಾಂಕ್ಷೆ ತೀವ್ರವಾಗಿತ್ತು. ಬೆಳಗಿನ ನಾಲ್ಕಕ್ಕೆ ಎದ್ದು, ಗುರುನಾಥರನ್ನು ನೆನೆಯುತ್ತ ಮನೆಯ ಗಿಡದಿಂದ ಕೆಂಪುದಾಸವಾಳದ ಹೂವುಗಳನ್ನು ಕಿತ್ತು ಭಕ್ತಿಯಿಂದ ಪೂಜೆ ಮಾಡಿ, ಸಖರಾಯಪಟ್ಟಣಕ್ಕೆ ಹೊರಟೇಬಿಟ್ಟರು. ಗುರುನಾಥರು ಊರಿನಲ್ಲಿ ಇರುತ್ತಾರೋ ಬಿಡುತ್ತಾರೋ ಎಂಬ ಯೋಚನೆಯನ್ನೇ ಮಾಡಲಿಲ್ಲ. 

ಆಶ್ಚರ್ಯವೆಂದರೆ ಅದೇ ಮೊದಲ ಬಾರಿಗೆ ಇವರು ಅಲ್ಲಿಗೆ ಹೋಗಿದ್ದು. ಗುರುನಾಥರ ಮನೆಯ ಒಳಗೆ ಹೋಗುತ್ತಿದ್ದರಂತೆ. ಬಹು ದಿನಗಳ ಪರಿಚಯ ಇರುವವರಂತೆ 'ಬಾರಮ್ಮಾ ಬಾ... ಒಳಗೆ ಬನ್ನಿ, ಕೂತ್ಕೊಳ್ಳಿ. ನೀವು ಬರುತ್ತೀರಾ ಅಂತ ನಿಮಗಾಗಿಯೇ ನಾನು ಕಾಯುತ್ತಿದ್ದೆ. ಬೆಳಿಗ್ಗೆ ಎದ್ದು ಕೆಂಪು ಹೂವುಗಳನ್ನು ತಂದು ಪೂಜೆ ಮಾಡಿದೆಯಲ್ಲಮ್ಮಾ.. ಬನ್ನಿ ಕುಳಿತುಕೊಳ್ಳಿ' ಗುರುನಾಥರ ಈ ಮಾತುಗಳು ಬಂದವರನ್ನು ಅವಾಕ್ಕಾಗಿಸಿತ್ತು. ತಮ್ಮ ದುಗುಡಗಳನ್ನು ಅವರು ನಿವೇದಿಸಿಕೊಳ್ಳಲು ಮುಂದಾದಾಗ 'ಇರಲಿ ಆರಾಮಾಗಿರಿ... ಎಲ್ಲ ಸರಿಯಾಗುತ್ತೆ ಆಮೇಲೆ ಎಲ್ಲ ಹೇಳುವಿರಂತೆ, ತಿಂಡಿ ಆಗಿದೆಯೇ' ಎಂದು ಕೇಳುತ್ತಾ ತಿಂಡಿ ತರಿಸಿದರು.

ಇದೇ  ಸಮಯದಲ್ಲಿ ಗುರುನಾಥರ ಮನೆಯಿಂದ ಅವರಿಗೆ ತಿಂಡಿ, ದೋಸೆ ಬಂದಿತ್ತು. ಅದನ್ನಲ್ಲಿಟ್ಟಿದ್ದರು. ಒಂದು ನಾಯಿ ಆ ದೋಸೆಯ ಪ್ಯಾಕೇಟನ್ನು ತೆಗೆದುಕೊಂಡು ತಿನ್ನತೊಡಗಿತ್ತು. ಗುರುನಾಥರು ಶಾಂತಚಿತ್ತರಾಗಿ 'ನೋಡಿ ಅದರ ಅದೃಷ್ಟ... ಇದಕ್ಕೇ  ಹೇಳುವುದು ಏನೂ ಕಳಿಡಬೇಡರೆಂದು... ಇರಲಿ ನೀವು ತೆಗೆದುಕೊಳ್ಳಿ' ಎಂದು ನಮಗೆ ಪಲಾವನ್ನು ನೀಡಿದರು. ನಾವು ತಮ್ಮ ಉಪಾಹಾರವಾಗಿಲ್ಲ... ನೀವು ಸ್ವಲ್ಪ ಮೊದಲು ತೆಗೆದುಕೊಳ್ಳಿ; ಎಂದು ನಮ್ಮ ತಟ್ಟೆಯನ್ನು ಅವರ ಮುಂದೆ ಹಿಡಿದಾಗ, ಪ್ರೀತಿಯಿಂದ ಒಂದು ತುತ್ತು ತೆಗೆದುಕೊಂಡು ಬಾಯಿಗೆ ಹಾಕಿಕೊಂಡರು. ಗುರುಪ್ರಸಾದವನ್ನು ನಾವೂ ತೆಗೆದುಕೊಂಡೆವು. ಮತ್ತೆ ನಮ್ಮ ಮನೆಯವರು ಏನೋ ಹೇಳಲು ಹೊರಟಾಗ 'ಬಾರಮ್ಮ ಇಲ್ಲಿ... ನೋಡು ಶಾಲೆ ಬಿಡುತ್ತಿದೆ. ಈ ಕಿತ್ತಲೆ  ಹಣ್ಣನ್ನು ಸುಲಿದು, ಎಲ್ಲ ಮಕ್ಕಳಿಗೂ ಒಂದೊಂದು ತೊಳೆಯನ್ನು ನೀಡಿರಿ' ಎಂದು ಹಣ್ಣುಗಳನ್ನು ಕೊಟ್ಟರು.

ಗುರುನಾಥರ ಮರ್ಮವರಿಯುವುದೇ ಕಷ್ಟ. ಎಲ್ಲರಿಗೂ ಹಣ್ಣು ಹಂಚಿ ನನ್ನ ಮನೆಯವರು ಬರುವಲ್ಲಿ, ಗುರುನಾಥರ ಸಾನಿಧ್ಯದ ಪ್ರಭಾವದಿಂದ ಅವರ ದುಗುಡ ಕಡಿಮೆಯಾಗಿತ್ತು. ಮನಸ್ಸು ಒಂದು ಸ್ಥಿಮಿತಕ್ಕೆ ಬಂದಿತ್ತು. ನಮ್ಮನ್ನು ಕೂರಿಸಿ "ನೀವೇನೂ ಯೋಚನೆ ಮಾಡಬೇಡಿ. ಬೆಂಗಳೂರಿಗೆ ಹೋಗಿ... ನಿಮ್ಮ ಸಮಸ್ಯೆಗಳೂ ಪರಿಹಾರವಾಗಿ, ಸುಖವಾಗಿ ಇರುತ್ತೀರಿ, ಮನೆಗೆ ಹೋಗಿ ಅಮ್ಮನ ಬಳಿ ಕೇಳಿ, ಊಟ ಮಾಡಿಕೊಂಡು ಹೋಗಿರಿ' ಎಂದು ಆಶೀರ್ವದಿಸಿ ಕಳಿಸಿದರು. ಆ ಗುರುಕರುಣೆ, ನಾವು ನಮ್ಮ ಮನೆ ಮಠ, ಊರು, ತೊರೆದು ಬೆಂಗಳೂರಿನಲ್ಲಿದ್ದಾಗ್ಯೂ ಸತ್ಸಂಗ, ನೆಮ್ಮದಿಯ ಜೀವನ ನಮ್ಮದಾಗಿಸಿತು' ಎಂದು ಗುರುನಾಥರನ್ನವರು ಸ್ಮರಿಸುತ್ತಾರೆ.

ಪಾದಪೂಜೆಯ ಭಾಗ್ಯ ದೊರಕಿಸಿದರು 


ಬೆಂಗಳೂರಿನಲ್ಲಿದ್ದಾಗ್ಯೂ ಈ ಗುರುಭಕ್ತರು ಗುರುನಾಥರ ಚಿಂತನೆಯಲ್ಲೇ ಇರುತ್ತಿದ್ದರು. ಒಮ್ಮೆ ಗುರುನಾಥರು, ಅವರ ಬಂಧುಗಳ ಮನೆಗೆ ಬೆಂಗಳೂರಿಗೆ ಬರುತ್ತಾರೆಂಬ ವಿಚಾರ ತಿಳಿಯುತ್ತಿದ್ದಂತೆ, ಆ ಗುರು ಭಕ್ತರು ಹೋದರು. ಗುರುನಾಥರಿಗೆ ನಮಿಸಿ ಆಶೀರ್ವಾದ ಪಡೆದು ಇನ್ನೇನು ಹೊರಡಬೇಕೆಂದಿರುವಾಗ 'ಇರಲಿ ಸ್ವಲ್ಪ ಹೊತ್ತು ಕುಳಿತುಕೊಳ್ಳಿ' ಎಂದು ಕೂರಿಸಿದರು.

ಅಷ್ಟೊತ್ತಿಗೆ ಅಲ್ಲಿಗೆ ಹೆಬ್ಬೂರು ಗುರುಗಳ ಆಗಮನವಾಯಿತು. ಎಲ್ಲರೂ ಗುರುಗಳನ್ನು ಸ್ವಾಗತಿಸಿದರು. ಗುರುನಾಥರು ಅಲ್ಲಿ ನೆರೆದ ಎಲ್ಲರಿಗೂ ಹೆಬ್ಬೂರು ಗುರುಗಳ ಪಾದಪೂಜೆ ಮಾಡುವ ಅವಕಾಶವನ್ನು ನೀಡಿದರು. "ಹೀಗೆ ನಮ್ಮ ಪ್ರಯತ್ನವಿಲ್ಲದೆ, ಗುರುನಾಥರ ಕೃಪೆಯಿಂದ ಯತಿಗಳೊಬ್ಬರ ದರ್ಶನ, ಪಾದಪೂಜೆ, ಪ್ರಸಾದ ದೊರಕಿತು. ಹೀಗೆ ಗುರುನಾಥರು ಬೆಂಗಳೂರಿನಲ್ಲಿದ್ದರೂ ನಮ್ಮ ಮೇಲೆ ಕೃಪೆ ತೋರುತ್ತಿದ್ದರು" ಎಂದು ಸ್ಮರಿಸುತ್ತಾರೆ.

ನೀನೇ ಗತಿ ನೀನೇ ಮತಿ 


ಗುರುನಾಥರ ಬಗ್ಗೆ ಸಾಕಷ್ಟು ಕೇಳುತ್ತಾ ಬಂದಿದ್ದ ಹಾಸನದ ಹೆಣ್ಣುಮಗಳೊಬ್ಬರು ಅವರ ದರ್ಶನ ಪಡೆಯಬೇಕೆಂಬ ಆಸೆ ಹೊಂದಿದರು. ಮನೆಯಲ್ಲಿ ಗುರುಚರಿತ್ರೆ ಪ್ರಾರಂಭಿಸಿದ್ದರು. ಅದೇ ಸಮಯಕ್ಕೆ ಮನೆಯವರೆಲ್ಲಾ ಸಖರಾಯಪಟ್ಟಣಕ್ಕೆ ಹೋಗುವುದೆಂದಾಗ ಇವರೂ ಹೊರಟರು. ಗುರುನಾಥರ ಮನೆಗೆ ಹೋದಾಗ ಅವರು ಇರಲಿಲ್ಲ. ಗುರುನಾಥರ ದರ್ಶನವೆಂದರೆ ಏನೋ ಪುಳಕ, ಏನೋ ಭಯ, ಭಕ್ತಿ ಮನದಲ್ಲಿ ಅವರಿಗೆ. ಐಯ್ಯನ ಕೆರೆ ನೋಡಿ, ಬರುವಾಗ ಗುರುನಾಥರು ಬಂದಿರುವುದು ತಿಳಿದು ಅವರ ಮನೆಯ ಒಳಗಡೆ ಕಾಲಿಡುತ್ತಿದ್ದಂತೆ ಗುರುನಾಥರ ಸಿಟ್ಟಿನ ಮಾತುಗಳು, ಮನೆ ತುಂಬಾ ಜನ ಗುರುನಾಥರು ಹೇಳುತ್ತಿದ್ದುದು ಕೇಳಿ ಬರುತ್ತಿತ್ತು. 'ಗುರುದರ್ಶನ ಎಂದರೆ ಅದೇನು ಪಿಕ್ ನಿಕ್ ಅಂತ ತಿಳಿದಿದ್ದಾರಾ.. ಕಷ್ಟ ಪಡಬೇಕು' ಇನ್ನೂ ಹೀಗೆ ಗುರುನಾಥರು ಯಾರು ಯಾರಿಗೋ ಬಯ್ಯುತ್ತಿದ್ದರು. ಗುರುನಾಥರ ಸಿಟ್ಟಿನ ಆ ರೂಪ, ಈ ಹೆಣ್ಣು ಮಗಳನ್ನು ನಡುಗಿಸಿಬಿಟ್ಟಿತ್ತು. ಸ್ವಲ್ಪ ಹೊತ್ತಿನಲ್ಲಿ ಗುರುನಾಥರು ಎಲ್ಲರಿಗೂ ಮಸಾಲೆ ದೋಸೆ ತರಿಸಿಕೊಟ್ಟರು. ತಿನ್ನಲೂ ಆಗದೆ ಅಳುತ್ತಿರುವ ಅವರಿಗೆ ಪಕ್ಕದಲ್ಲಿದ್ದವರು 'ಹಾಡು ಹೇಳಮ್ಮ' ಎಂದರು. ನೀನೇ ಗತಿ ನೀನೇ ಮತಿ ನೀನೇ ಸ್ವಾಮಿ... "ಎಂಬುವ ಹಾಡನ್ನವರು' ಹೇಳುತ್ತಾ ಗುರುನಾಥರಿಗೆ ಅರ್ಪಿಸಿದಾಗ, ಶಾಂತರಾದ ಅವರು 'ನೀನು ಯಾವ ಜಾತಿ' ಎಂದು ಕೇಳಿದರು. 'ಬ್ರಾಹ್ಮಣರು' ಎಂದರಿವರು. 'ಹೊಳಲೂರಿನ ಹನುಮಂತಪ್ಪನವರು ಗೊತ್ತಾ ಅವರು ನಿಜವಾದ ಬ್ರಾಹ್ಮಣರು' ಎಂದುಬಿಟ್ಟರು ಗುರುನಾಥರು. 

ಸಣ್ಣ ವಯಸ್ಸಿನಿಂದ ಹೊಳಲೂರಿನ ಹನುಮಂತಪ್ಪನವರ ಶಿಷ್ಯಳಾದ ಇವರು ಮನಸ್ಸಿನಲ್ಲಿಯೇ 'ಏನಪ್ಪಾ ಅಜ್ಜಾ.. ನಿನ್ನ ಪ್ರಶಾಂತ, ಪ್ರೀತಿಯ ಮುಖವನ್ನು ಆಗ ತೋರಿಸಿದ್ದೆ. ಈಗ ಏಕೆ ಕೋಪ ತೋರಿಸುತ್ತಿದ್ದೀಯಾ' ಎಂದು ಸ್ವಲ್ಪ ಹೊತ್ತಿನ ಮುಂಚೆ ಬೇಡಿದ್ದು, ಗುರುನಾಥರಿಗೆ ಗೊತ್ತಾಗಿ ಹೋಗಿತ್ತಂತೆ. ತತ್ ಕ್ಷಣ ಪ್ರಶಾಂತ ಚಿತ್ತರಾದ 'ಗುರುನಾಥರು ಬಾ ಇಲ್ಲಿ ಏನು ಬೇಕು ನಿನಗೆ?' ಎಂದು ಕೇಳಿದರಂತೆ. 'ನಿಮ್ಮ ಕೃಪೆ, ನಿಮ್ಮ ಸಾನ್ನಿಧ್ಯ' ಬೇಕು ಎಂದಾಗ, 'ಅದು ಪ್ರಯತ್ನಪಡಬೇಕು. ಸಾಧನೆ ಮಾಡಬೇಕು ಸಿದ್ಧಿಸಲು' ಎಂದರಂತೆ. ಮತ್ತೆ ನಡಗುತ್ತಾ ನಾಲ್ಕಾರು ಹಾಡುಗಳನ್ನು ಹೇಳಿದಾಗ ಗುರುನಾಥರು ಹತ್ತಿರ ಕರೆದರು. 'ನಮಸ್ಕಾರ ಮಾಡಬೇಡ' ವೆಂದರೂ ನಮಸ್ಕರಿಸಿದಾಗ ಪ್ರಶಾಂತವಾಗಿ ಸ್ವೀಕರಿಸಿ 'ನಿಮ್ಮತ್ತೆಗೆ ಬಯ್ಯಬೇಡ, ನಿನ್ನ ಗಂಡನ್ನ ಕೇಳಿ ನಮಸ್ಕಾರ ಮಾಡು. ಮುತ್ತು ವಜ್ರಗಳನ್ನು ಹಾಕಿಕೊಳ್ಳಬೇಡ' ಎಂದರಂತೆ. ಅಲ್ಲಿಯೇ ಹತ್ತಿರದಲ್ಲಿದ್ದ ಅವರ ಯಜಮಾನರನ್ನು ಕರೆದು, 'ಒಳ್ಳೆಯ ಹುಡುಗಿ ಸಿಕ್ಕಿದ್ದಾಳೆ. ಚೆನ್ನಾಗಿ ಬಾಳುತ್ತೀರಿ' ಎಂದು ಆಶೀರ್ವದಿಸಿ, ಅವರ ಪುಟ್ಟ ಮಗುವಿನ ನಮಸ್ಕಾರವನ್ನೂ ಸ್ವೀಕರಿಸಿ, ಆ ಮಗುವಿನ ಹಣೆಯನ್ನು ಒಂದೆರಡು ನಿಮಿಷ ಸ್ಪರ್ಶಿಸಿ ಆಶೀರ್ವಾದ ಮಾಡಿ ಕಳುಹಿಸಿದರಂತೆ. ಮುಂದಿನ ಅವರ ಎಲ್ಲ ಗುರುನಾಥರ ದರ್ಶನವೂ ಅತ್ಯಂತ ಸುಖಮಯವಾಗಿತ್ತು. 

ಗುರುಮರೆತರೆ ಕೈಯ ಗಂಟೀ ಕಗ್ಗಂಟು 


ಭದ್ರಾವತಿಯ ಬಂಧುಗಳೊಬ್ಬರು ಗುರುನಾಥರನ್ನು ಮರೆತರೆ, ಅವರ ಮಾತನ್ನು ಮೀರಿದರೆ ಅದೆಂತಹ ಅವಘಡಗಳಾಗುತ್ತವೆ ಎಂಬುದನ್ನು ಹಂಚಿಕೊಂಡಿದ್ದು ಹೀಗೆ. 'ನನಗಾಗ ಪೆನ್ಷನ್ ಹಣ ಬಂದಿತ್ತು. ವ್ಯಾಪಾರದ ಹುಚ್ಚು ಹತ್ತಿತ್ತು. ಗುರುವಿನ ಹುಚ್ಚು ಅದೇಕೋ ಮುಸುಕಾಗಿತ್ತು. ಎಲ್ಲಾ ತಯಾರಿ ಮಾಡಿಕೊಂಡ ನಾನು ಗುರುನಾಥರ ಬಳಿ ಹೋಗಿ ಕೇಳಿದಾಗ, 'ಅದೆಲ್ಲಾ ಬೇಡ ಕಣಯ್ಯಾ. ವ್ಯಾಪಾರ ನಿನಗಾಗಿ ಬರಲ್ಲ. ಶುರುಮಾಡಬೇಡ, ನಿನ್ನ ಮಗ ಬರುವವರೆಗೆ ಸುಮ್ಮನಿರು' ಎಂದಿದ್ದರು. 

ಆದರೂ ಸಿದ್ಧತೆ ಮಾಡಿಕೊಂಡು ಬಿಟ್ಟಿದ್ದೆ. ನಮ್ಮ ಸಿದ್ಧತೆಗಳೆಲ್ಲ ಅವಘಡಗಳದ್ದೇ. ಮೂರು ನಾಲ್ಕು ಲಕ್ಷ ಹಾಕಿ, ಎರಡು ಮೂರು ಲಾರಿಗಳ ಉಪ್ಪಿನ ವ್ಯಾಪಾರ, ನಾಲ್ಕಾರು ಜಿಲ್ಲೆಗಳ ಏಜನ್ಸಿ, ಕೈ ತುಂಬಾ ದುಡ್ಡಿನ ಓಡಾಟ, ಮೈ ತುಂಬಾ ಸಾಲವಾಗಿದ್ದು, ತಿಳಿಯಲೇ ಇಲ್ಲ. ಗುರುವಿನ ದರ್ಶನವನ್ನು ಮರೆಸಿ ಸುಮಾರು ಎಂಟು ವರ್ಷಗಳು, ನನ್ನನ್ನು ಗುರು ಸ್ನೇಹದಿಂದ, ನನ್ನ ದುರ್ವಿಧಿ ದೂರವಿರಿಸಿತ್ತು. ಗುರುಮಾತು, ಗುರುವಿನ ಬಳಿ ಹೋಗಬೇಕೆಂದರೂ ಹೋಗಲಾರದ ಸ್ಥಿತಿ ಬಂದು ಬಿಟ್ಟಿತು. ಮತ್ತೆ ಗುರುವಿನ ಪಾದ ಹಿಡಿದಾಗ ಗುರುನಾಥರು ಕರುಣೆ ತೋರಿಸಿದರು. 

ಕೊನೆಗೆ ನನ್ನ ಮಡದಿ ಹೋದಾಗ, ಗುರುನಾಥರ ಕೋಪವೊಂದೇ ಸಿಕ್ಕಿದ್ದು, ಮಾಗಿದ ಮೇಲೆ ಬಾಗುವುದು ಅನಿವಾರ್ಯವೋ, ಮತ್ತೆ ಗುರುನಾಥರ ಕರುಣೆ ನನ್ನ ಮೇಲೆ ಆಯಿತೋ, ಅಹಂ ತೊರೆದು, ಹಣ್ಣುಹಣ್ಣಾಗಿ ಗುರುವಿನ ಬಳಿ ಹೋದಾಗ 'ಗುರುನಾಥರು ಕರುಣೆ ತೋರಿದರು. 'ಎಲ್ಲಾ ಆಟಗಳು ಮುಗಿತಲ್ಲ. ಆಗಿದ್ದೆಲ್ಲಾ ಆಗಿ ಹೋಯಿತು. ನಿನ್ನ ಕಷ್ಟಗಳಿಗೆ ನಿನಗಾದ ಅನ್ಯಾಯಕ್ಕೆ ಪೊಲೀಸು, ಕೋರ್ಟ್ ಎಂದು ಹೋಗದೆ ನೆಮ್ಮದಿಯಾಗಿ ಸುಮ್ಮನಿರಬೇಕು. ನಿನ್ನ ಮಗನಿಗೆ ಕೆಲಸವಾಗುತ್ತದೆ... ಏನೂ ಮಾಡದೇ ಸುಮ್ಮನಿದ್ದರೆ, ಮತ್ತೆ ಹಿನ್ನಡೆ ಇಲ್ಲಾ' ಎಂದು ಆಶೀರ್ವದಿಸಿದರು. 

ಎಂಟು ವರ್ಷಗಳ ನಂತರ ಗುರುನಾಥರ ಬಾಂಧವ್ಯ ಮತ್ತೆ ಪ್ರಾರಂಭವಾಯಿತು. ಹದಿನೈದು ದಿನ, ತಿಂಗಳಿಗೊಮ್ಮೆ ದರ್ಶನ ಭಾಗ್ಯ ಸಿಕ್ಕಿತು. ನಿರ್ವಾಣದ ಹದಿನೈದು ದಿನಗಳ ಹಿಂದೆ ನನ್ನನ್ನು ಕರೆಸಿ, ಊಟ ಹಾಕಿಸಿ, 'ತಲೆ ಕೆಡಿಸಿಕೊಳ್ಳಬೇಡ, ನಾನೆಲ್ಲಾ ನಡೆಸ್ತೀನಿ' ಎಂದಿದ್ದರು. ನಲವತ್ತು ಲಕ್ಷಗಳ ಸಾಲ ಅದೆಂತೋ ತೀರುತ್ತಿದ್ದು, ಮಗ ದುಡೀತಿದ್ದಾನೆ.. ಗುರು ಕರುಣೆಯಿಂದ ದೂರಾಗಿ ಸುಸ್ತಾಗಿ ಹೋಗಿದ್ದೆ. 'ಗುರುನಾಥರ ಕರುಣೆಯಿಂದ ಈಗ ನಿಜವಾದ ಸಂಸಾರದಿಂದ ನಿವೃತ್ತಿ- ಗುರುಸ್ಮರಣೆಯ ಪ್ರವೃತ್ತಿಯಲ್ಲಿ ಆನಂದವಾಗಿದ್ದೇನೆ' ಎನ್ನುತ್ತಾರೆ ಅವರು. ತೃಪ್ತಿಯಿಂದ ಗುರುನಾಥರನ್ನು ಸ್ಮರಿಸುತ್ತಾ.... 


ಅಪಾರ ಮಹಿಮಾ ಕರುಣಾಸಾಗರ.. ಅನಾಥನಾಥ ಪರಮಾಪ್ತ ಬಂಧು 


'ಗುರು ನಿಮಗೆ ಸುಲಭವಾಗಿ ಸಿಕ್ಕಿಬಿಟ್ಟಿದ್ದಾನಯ್ಯಾ - ಅದಕ್ಕೆ ನಿಮಗಿವನ ಬೆಲೆ ತಿಳಿಯಲ್ಲ' ಎಂದು ಗುರುನಾಥರು ಪದೇ ಪದೇ ಆಡುತ್ತಿದ್ದ ಮಾತಿಂದು ಸತ್ಯವಾಗಿದೆ. ಇದನ್ನು ನೆನೆಯುತ್ತ, ಭದ್ರಾವತಿಯ ಗುರುನಾಥರ ಭಕ್ತೆಯೊಬ್ಬರು ಹೀಗೆ ಗುರುನಾಥರ ಪರಿಚಯದ ಆ ದಿನವನ್ನು ಸ್ಮರಿಸುತ್ತಾರೆ. (ಇವರ ಅನುಭವಗಳನ್ನು ಲೀಲಾಮೃತಕ್ಕೆ ಸೇರಿಸಲು ನಾನು ಅನೇಕ ಬಾರಿ ಪ್ರಯತ್ನಿಸಿದರೂ, ಏನೇನೋ ವಿಘ್ನಗಳು ಬರುತ್ತಿದ್ದವು. ಲೀಲಾಮೃತ ಪುಸ್ತಕ ಡಿಟಿಪಿ ಮುಗಿದು ಪ್ರಿಂಟಿಗೆ ಹೋಗುವ ಕೊನೆಯ ಸಂದರ್ಭದಲ್ಲಿ ಅನುಭವವನ್ನು ನನಗೆ ಒದಗಿಸಿದಾಗ ಗುರುನಾಥರ 'ಗುರುಲೀಲೆಯ' ನಿರಂತರತೆಯನ್ನು ನಾವಿಲ್ಲಿ ಕಾಣಬಹುದಾಗಿದೆ). 

ಭದ್ರಾವತಿಯ ಇವರಿಗೆ ನಾಲ್ಕು ದಶಕಗಳ ಹಿಂದಿನಿಂದ ಗುರುನಾಥರ ಪರಿಚಯ. ಅಂದು ಒಬ್ಬರ ಮನೆಗೆ ಬಂದ ಸಖರಾಯಪಟ್ಟಣದ ಇವರನ್ನು ಪರಿಚಯ ಮಾಡಿಕೊಂಡಾಗ, ಇವರು ತಿಳಿದಿದ್ದು ಇವರೊಬ್ಬ ಜ್ಯೋತಿಷಿಗಳೆಂದು. ಈ ಪರಿಚಯ ಸ್ನೇಹವಾಗಿ ಯಾವಾಗೆಂದರೆ ಅವಾಗ, ತಡರಾತ್ರಿಗಳಲ್ಲೂ ಗುರುನಾಥರು ಇವರ ಮನೆಗೆ ಬರುತ್ತಿದ್ದರು. ಅವರ ಬೈಕಿನಲ್ಲಿ ಭದ್ರಾವತಿ, ಅತ್ತ ಇತ್ತ, ಎಲ್ಲಾ ಸುತ್ತುತ್ತಿದ್ದರು. ಗುರುನಾಥರ ಮಹಿಮೆಯರಿಯುವುದಕ್ಕಿಂತ ಅವರ ಸಹವಾಸ ಇವರಿಗೇನೋ ಮುದ ನೀಡುತ್ತಿತ್ತು. ಸ್ನೇಹಭಾವ, ಗುರುಭಾವ, ಹೀಗೆ ಏನೇನೋ ಅವರೊಂದಿಗಿತ್ತು. 

ಗುರುನಾಥರು ಒಬ್ಬರ ಮನೆಗೆ ಹೋಗಿದ್ದರು. ಅವರಿಗೆ ನಾಲ್ಕೈದು ಹೆಣ್ಣುಮಕ್ಕಳು, ಭದ್ರಾವತಿಯ ಬಂಧುಗಳೇ ಗುರುನಾಥರಿಗೆಂದರು. 'ನೋಡಿ ಸ್ವಾಮಿ, ಅವರ ಮನೆಯ ಒಬ್ಬರದೂ ಮದುವೆಯಾಗಿಲ್ಲ. ಏನಾದರೂ ಮಾಡಿ' ಎಂದಾಗ, 'ಈಗ ಸುಮ್ಮನಿರಿ' ಎಂದ ಅವರು ಸಖರಾಯಪಟ್ಟಣಕ್ಕೆ ಹೊರಡುವಾಗ 'ಅವರ ಮನೆಗೆ ಒಂದಿಷ್ಟು ಕೊಬ್ಬರಿ, ಕಡಲೆ, ಬೆಲ್ಲ ಕೊಟ್ಟು ಬನ್ನಿ ಎಂದರು. ಅದೇ ರೀತಿ ಕೊಟ್ಟು ಬಂದರಿವರು. ಕೆಲವೇ ದಿನಗಳಲ್ಲಿ ಅವರ ಮನೆಯಲ್ಲಿ ಮದುವೆಯ ಚಪ್ಪರ ಹಾಕಿದರಂತೆ. 

ಒಮ್ಮೆ ಲಕ್ಯದ ಬಳಿ ಒಂದು ದತ್ತ ಕ್ಷೇತ್ರದಲ್ಲಿ ದತ್ತ ಜಯಂತಿಗೆ ಗುರುನಾಥರ ಜೊತೆ ಇವರು ಹೋಗಿದ್ದರಂತೆ. ತುಂಡು ಪಂಚೆಯಲ್ಲಿದ್ದ ಗುರುನಾಥರಿಗೆ ಆ ಮನೆಯವರು ಒಂದು ಅಮೂಲ್ಯ ಶಾಲು ನೀಡಿ, ಇವರಿಗೆ ಎಚ್ಚರಿಸಿದರಂತೆ. 'ಏ ನೋಡು ಆ ಶಾಲನ್ನು ಯಾರಿಗಾದರೂ ಕೊಟ್ಟಾರು, ಜೋಪಾನ.' ಸಂಜೆ ಬರುವಾಗ ಛಳಿ ಇತ್ತು. ಅಲ್ಲಿ ಛಳಿಯಲ್ಲಿ ನಡುಗುತ್ತಿದ್ದ ಒಬ್ಬ ವೃದ್ಧರಿಗೆ ಗುರುನಾಥರು ಶಾಲು ಹೊದಿಸಿ ಬಂದಿದ್ದರು. ನನ್ನ ಶಲ್ಯ ಅವರಿಗೆ ಹೊದೆಯಲು ಕೊಟ್ಟರೆ 'ಏ ಬೇಡ ಬಿಡೋ.... ಏನಾಗೋಲ್ಲ' ಅಂದು ಬಿಟ್ಟರು. ಮುಂದೆ ಬಸ್ಸು ಹತ್ತುವಾಗ ಈ ಬರಿ ಪಂಚೆಯನ್ನುಟ್ಟ ಇವರನ್ನು ಹಿಂದೆ ಬಿಟ್ಟು ನಾವಿಬ್ಬರೂ ಮುಂದೆ ಹತ್ತಿದೆವು. 

ಕಂಡಕ್ಟರ್ ಬಂದಾಗ ದುಡ್ಡು ಕೊಡಲು ಹೋದೆವು. ಅವನು 'ಸ್ವಾಮಿಗಳು ಆಗಲೇ ಕೊಟ್ಟರು' ಎಂದ. ಸಖರಾಯಪಟ್ಟಣ ತಲುಪಿ 'ಸ್ವಾಮಿಗಳೇ ನಿಮ್ಮ ಹತ್ತಿರ ದುಡ್ಡಿರಲಿಲ್ಲ. ಬರೀ ಪಂಚೆ ಉಟ್ಟಿದ್ದೀರಿ. ದುಡ್ಡೆಲ್ಲಿಂದ ಬಂತು?" ಎಂದು ಕೇಳಿದರೆ 'ಸುಮ್ಮನಿರೋ. ನನ್ನನ್ನು ನೋಡಿ ಕಂಡಕ್ಟರ್ ಹಾಗೇ  ಕರೆದುಕೊಂಡು ಬಂದ ' ಎಂದು ತೇಲಿಸಿಬಿಟ್ಟಿದ್ದರು. 

ಮತ್ತೊಮ್ಮೆ ವಿರಾಜಾನಂದ ಸ್ವಾಮಿಗಳು ಟೆಂಪೋ ಟ್ರ್ಯಾಕ್ಸ್ ನಲ್ಲಿ ಗುರುನಾಥರನ್ನು ಕಾಣಲು ತಮ್ಮ ಭಕ್ತರ ಸಹಿತ ಹೊರಟಾಗ, 'ಗುರುಗಳು ಇದ್ದಾರೋ ಇಲ್ಲವೋ ಕೇಳಬೇಕಾಗಿತ್ತಲ್ಲ' ಎಂದಿದ್ದೆ. 'ಸುಮ್ಮನಿರಯ್ಯಾ ಟೆಲಿಪತಿಯಲ್ಲಿ ಹೇಳಿದ್ದೇನೆ' ಎಂದರು ಅವರು. ಸಖರಾಯಪಟ್ಟಣದ ಊರ ಹೊರಗೆ ಬಾಜಾಭಜಂತ್ರಿಗಳ ಶಬ್ದ ಕೇಳಿಬರುತ್ತಿತ್ತು. ಅವರು ನಿಲ್ಲಿಸಿ 'ವಿರಾಜಾನಂದ ಸ್ವಾಮಿಗಳಿದ್ದಾರಾ' ಎಂದು ಕೇಳಿ, ಭವ್ಯ ಸ್ವಾಗತದಲ್ಲಿ ಕರೆದೊಯ್ದರು. ಯತಿಗಳೆಂದರೆ ಗುರುನಾಥರಿಗೆ ಅಪಾರ ಗೌರವ... ಈಗ ಎಲ್ಲಾ ಬರಿ ನೆನಪುಗಳು. ಸಾವಿರಾರು ಸಾರಿ ಭೇಟಿ ನೀಡಿ, ಹತ್ತಿರ ಕುಳ್ಳಿರಿಸಿಕೊಂಡು, ಗುರುನಾಥರು ಅಪಾರ ಪ್ರೀತಿ ತೋರುತ್ತಿದ್ದರು.. ಹೀಗೆ ಗುರುಲೀಲೆ ನಿರಂತರ ಎಂದ ಅವರು, 'ನಾನ್ಯಾರೋ, ಅವರ್ಯಾರೋ ಆಗಿದ್ದರೂ, ಅನಾಥರನಾಥ, ಪರಮಾತ್ಮ ಬಂಧು ಎನಗಾಗಿದ್ದರು' ಎನ್ನುತ್ತಾರೆ ಆನಂದಬಾಷ್ಪಗಳೊಂದಿಗೆ. 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 


।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


For more info visit :  http://srivenkatachalaavadhoota.blogspot.in/

No comments:

Post a Comment