ಶ್ರೀ ಸದ್ಗುರುನಾಥ ಲೀಲಾಮೃತ
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ಅಧ್ಯಾಯ - 22
ಗುರುವೈಭವವನ್ನು ನೋಡುವುದಾದರೆ ಬಾ
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಗುರುನಾಥರು ತಮಾಷೆ ಮಾಡುತ್ತ ತಮ್ಮ ಭಕ್ತರನ್ನು ಕರೆಸಲು "ನೋಡು ಬೇಗ ಬಾ.... ಎಲ್ಲ ಮುಗಿದು ಹೋಗಿದೆ. ಕಿವಿಗೆ, ಮೂಗಿಗೆ ಹತ್ತಿ ಇಟ್ಟಿದ್ದಾರೆ. ಬೇಗ ಬಂದ್ರೆ ದರ್ಶನ ಸಿಗುತ್ತೆ.. ಇಲ್ಲದಿದ್ದರೆ ಇಲ್ಲವೇ ಇಲ್ಲ... ಗುರುವಿನ ವೈಭವ ನೋಡಬೇಕಂದ್ರೆ ಈಗ ಬರಲೇ ಬೇಕು" ಈ ರೀತಿ ಗುರುನಾಥರು ಫೋನು ಮಾಡುತ್ತಿದ್ದಾಗ, ಗಾಭರಿಯಾದ ನಾವು ಬಿಟ್ಟ ಕೆಲಸ ಬಿಟ್ಟು ಓಡಿ ಹೋಗುತ್ತಿದ್ದೆವು. ಸಖರಾಯಪಟ್ಟಣಕ್ಕೆ ಬಂದು, ನಗುನಗುತ್ತಿರುವ ಗುರುನಾಥರನ್ನು ಕಂಡು ಸಿಟ್ಟಾಗಿ "ಏನು ಗುರುನಾಥರೇ, ನೀವು ಹೀಗೆಲ್ಲಾ ಮಾತನಾಡಬಾರದು. ನಾವೆಷ್ಟು ಗಾಭರಿಯಾಗಿದ್ದೆವು" ಎಂದರೆ, ಗುರುನಾಥರ ಅದೇ ಪ್ರಶಾಂತ ನಗು- ಅದರ ಮುಂದೆ ನಮ್ಮ ಸಿಟ್ಟೆಲ್ಲಾ ತಣ್ಣಗಾಗಿ ಬಿಡುತ್ತಿತ್ತು - ಸಾವು ಎಂಬುದು ನಮಗೆ ಅಪಶಬ್ದವಾಗಿದ್ದರೆ, ಆ ಮಹಾತ್ಮರಿಗೆ ಹುಟ್ಟು-ಸಾವು, ಕಷ್ಟ-ಸುಖ, ಮಾನ-ಅಪಮಾನ ಎಲ್ಲಾ ಒಂದೇ ಆಗಿತ್ತು" ಎನ್ನುತ್ತಾರೆ ಗುರುನಾಥರ ಒಬ್ಬ ಭಕ್ತರು, ಗುರುನಾಥರ ತಮಾಷೆಗಳನ್ನು ನೆನೆದು.
"ಅಂದು ಬುಧವಾರ ಮಧ್ಯಾನ್ಹ ಗುರುನಾಥರು ತುಂಬ ಬಳಲಿದಂತೆ ಕಾಣುತ್ತಿದ್ದರು. ಒಂದು ಲೋಟ ನೀರು ಕೇಳಿ, ಒಂದು ತೊಟ್ಟು ಕುಡಿದು, ನಮಗೆ ಅದನ್ನು ವಾಪಸ್ ಕೊಟ್ಟಾಗ, ಗುರುಪ್ರಸಾದವೆಂದು ನಾವು ಕುಡಿದೆವು. ಗುರುನಾಥರು ಕಾರಿನಲ್ಲಿ ಕುಳಿತು ಹೊರಡುವಾಗ ಬಹಳ ಹೊತ್ತಿನವರೆಗೆ, ಬಹುದೂರದವರೆಗೆ ಕೈಬೀಸುತ್ತಿದ್ದರು. ನಮಗೆಲ್ಲಾ ಅವರ ಮುಖದಲ್ಲಿ, ತಾಯಿ ಮಗುವನ್ನು ಬಿಟ್ಟು ಬಹುದೂರ, ಹೋಗುತ್ತಿರುವ ಭಾವ ಕಂಡು ಬರುತ್ತಿತ್ತು. ಅಂದು ಬೆಳಗಿನ ಜಾವ ಸುದ್ದಿ ತಿಳಿದಾಗ ಹೌಹಾರಿತು ಮನ. ಸಖರಾಯಪಟ್ಟಣಕ್ಕೆ ಹೋದರೆ, ಎಂದಿನಂತೆ ಪ್ರಶಾಂತವಾಗಿ ಮಲಗಿದ ಗುರುನಾಥರು, ಮೈಮುಟ್ಟಿದರೆ ಹತ್ತಿಯಂತೆ ಮೃದುತ್ವ. 'ನಾವು ಕೆಲವೊಮ್ಮೆ ಬೇರೆಡೆಗೆ ಯಾವುದೋ ಕಾರ್ಯ ನಿಮಿತ್ತ ಸಂಚಾರ ಹೋಗಿರುತ್ತೇನೆ. ಆ ಮೇಲೆ ಮತ್ತೆ ಈ ಶರೀರಕ್ಕೆ ಬರುತ್ತೇನೆ' ಎನ್ನುತ್ತಿದ್ದ ಗುರುನಾಥರ ಮಾತು ನೆನಪಾಯಿತು. 'ಹಾಗೆಯೇ ಆಗಿಸು ಗುರುನಾಥ' ಎಂದು ಪ್ರಾರ್ಥಿಸಿದೆ".
ಗುರುನಾಥರ ಜೀವನ ಯಾತ್ರೆ, ಅಂತಿಮ ಯಾತ್ರೆಗಳೆರಡರಲ್ಲೂ ಪ್ರತ್ಯಕ್ಷದರ್ಶಿಗಳಾದ ಗುರುಬಂಧುಗಳೊಬ್ಬರು ಹೀಗೆಂದರು. ಜನಸಾಗರವೇ ಹರಿದು ಬಂತು 'ಗುರುವೈಭವ ನೋಡು' ಎಂದಿದ್ದರು. ಇಂದು ಅವರಾಡಿದಂತೆ ವೈಭವವೇ... ಮಹಾ ನವಮಿಯೇ ಇಷ್ಟೆಲ್ಲಾ ದುಃಖವಿದ್ದರೂ ಒಂದು ಕಡೆ ಭಜನೆ, ಒಂದು ಕಡೆ ಸೌಂದರ್ಯಲಹರಿ ಹಾಡುವವರು ಕೆಲವರು, ಸಂಕೀರ್ತನೆಗಳು, ಅದೇನು ವೈಭವ? ಇದ್ದಾಗಲೂ ಅದೇ ಅನ್ನದಾನ - ಹೊರಟಾಗಲೂ ಅದೇ ಅನ್ನದಾನದ ವೈಭವ. 'ಇಲ್ಲಿ ಕಾಣುವುದೇ ಬೇರೆ- ನಿಜವಾದ ಸತ್ಯವೇ ಬೇರೆ, ಅದನ್ನು ತಿಳಿದುಕೊಳ್ಳೋ ಪ್ರಯತ್ನ ಮಾಡಬೇಕು' ಎನ್ನುತ್ತಿದ್ದ ಗುರುನಾಥರ ಮಾತುಗಳು ನೆನಪಾಯ್ತು. ಕಣ್ಣಲ್ಲಿ ನೀರು ಸುರಿಯುತ್ತಿದ್ದರೂ, ಮನಸ್ಸನ್ನು ಗಟ್ಟಿಯಾಗಿಸಿತ್ತು. ನಮ್ಮನ್ನ ನಮ್ಮ ಗುರುನಾಥರು ಬಿಟ್ಟುಹೋಗಿಲ್ಲ ಎಂಬ ಭಾವನೆಯೊಂದಿಗೆ ಯಾತ್ರೆಯಲ್ಲಿ ಗುರುಬಂಧುಗಳೆಲ್ಲ ಭಾಗವಹಿಸಿದ್ದರು' ಎನ್ನುತ್ತಾರೆ.
ಆದಿ ಅಂತ್ಯ ರಹಿತ
ಗುರುನಾಥರು ಇಹಲೀಲಾ ವಿನೋದವನ್ನು ಮುಗಿಸಿ, ಏಳು ದಿನಗಳಾಗಿತ್ತಂತೆ. ಆಂಧ್ರದಿಂದ ಬಂದ ಗುರುಬಂಧು ಒಬ್ಬರು, ಮೊನ್ನೆ ನಾನು ಗುರುಗಳನ್ನು ಕಂಡಿದ್ದೆ. ಇಂದು ನನಗೆ ಬರಲು ತಿಳಿಸಿದ್ದರು, ಎಂದಾಗ - ಎಲ್ಲರೂ ಅಚ್ಚರಿಗೊಂಡರು. ಇಲ್ಲಾ ಗುರುನಾಥರು ದೇಹಬಿಟ್ಟು ಅನೇಕ ದಿನಗಳಾದವು - ಎಂದಾಗ ಅವರು ಸಂಭ್ರಾಂತರಾದರು.
ಆದಿ ಅಂತ್ಯವಿಲ್ಲದ ಗುರುನಾಥರು, ಹೀಗೆ ಅನೇಕರಿಗೆ ತಮ್ಮ ದೇಹ ತೊರೆದ ವರ್ಷಗಳ ಮೇಲೆ ಎಲ್ಲೆಲ್ಲೂ ದರ್ಶನ ನೀಡಿದ ಉದಾಹರಣೆಗಳಿವೆ. ಸದೇಹಿಯಾಗಿದ್ದಾಗಲೇ ಒಂದೇ ಸಮಯದಲ್ಲಿ ಹಲವು ಕಡೆ ಪ್ರಕಾಶಿತರಾಗಿ ಮೆರೆದ ಗುರುನಾಥರಿಗೆ, ಹಲವು ಮುಖಗಳಲ್ಲಿ ಹಲವು ಪ್ರಾಣಿಗಳಲ್ಲಿ ಪ್ರಕಟಿತವಾಗುವುದು ಅಸಾಧ್ಯವಲ್ಲ. ಇದೆಲ್ಲಾ ಗುರುಬಂಧುಗಳ ಹಿತಕ್ಕಾಗಿಯೇ ಎಂಬುದು ಗಮನೀಯ.
ಹನ್ನೆರಡು ತಲೆಮಾರುಗಳನ್ನು ಕಾಯುತ್ತದೆ
ಒಮ್ಮೆ ಗುರುನಾಥರು ಮಾತನಾಡುತ್ತಾ "ಅಲ್ಲಯ್ಯಾ, ಶೃಂಗೇರಿಗೆ ಹೋದಾಗಲೆಲ್ಲಾ ಯಾವುದಾದರೂ ಗುರುಗಳನ್ನು ನೋಡಿದಾಗೆಲ್ಲಾ, ಸೆರಗೊಡ್ಡಿ ಫಲಮಂತ್ರಾಕ್ಷತೆಯನ್ನು ಪದೇ ಪದೇ ತೆಗೆದುಕೊಳ್ಳುತ್ತೀರಲ್ಲಾ, ಯಾಕೆ? ಅದರ ಪಾವಿತ್ರ್ಯತೆ, ಮಹಿಮೆ ಎಷ್ಟಿದೆ ಎಂದು ತಿಳಿದುಕೊಳ್ಳಬೇಕು. ಒಮ್ಮೆ ಒಬ್ಬ ಗುರುವು ನಿನಗೆ ಫಲಮಂತ್ರಾಕ್ಷತೆ ನೀಡಿದರೆಂದರೆ, ಹನ್ನೆರಡು ತಲೆಮಾರುಗಳವರೆಗೆ ನಿಮ್ಮನ್ನು ಕಾಯುತ್ತದೆ. ಹಾಗಂತ ಗುರುಸ್ಥಾನಕ್ಕೆ ಪದೇ ಪದೇ ಹೋಗಬೇಡಿರೆಂದು ನನ್ನ ಮಾತಿನ ಅರ್ಥವಲ್ಲ. ಕ್ಷೇತ್ರಯಾತ್ರೆ ಮಾಡಿರಿ, ಅಮ್ಮನವರ ದರ್ಶನ ಮಾಡಿ, ಎಲ್ಲ ವೇದಿಕೆಗಳಿಗೆ ಹೋಗಿ ಭಕ್ತಿಯಿಂದ ನಮಸ್ಕರಿಸಿ ಬನ್ನಿ. ಗುರುದರ್ಶನ ಮಾಡಿ ಬನ್ನಿ. ಪದೇ ಪದೇ ಮಂತ್ರಾಕ್ಷತೆಗಾಗಿ ಒದ್ದಾಡಬೇಡಿ" ಹೀಗೆ ಗುರುನಾಥರು ನಮ್ಮ ಅದೆಷ್ಟೋ ತಪ್ಪು ತಿಳಿವಳಿಕೆಗಳನ್ನು ತಿದ್ದುತ್ತಿದ್ದರು. ಅವರ ಒಂದೊಂದು ಮಾತುಗಳೂ ತಿಳಿವಳಿಕೆಯ ಗಣಿಗಳಾಗಿರುತ್ತಿದ್ದವು ಎನ್ನುತ್ತಾರೆ, ತಮ್ಮ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಾರೆ. ಕಳಸಾಪುರದ ಆ ಗುರುನಾಥರ ಭಕ್ತರು.
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
No comments:
Post a Comment