ಒಟ್ಟು ನೋಟಗಳು

Friday, December 9, 2016

ಶ್ರೀ ಸದ್ಗುರು ಮಹಿಮೆ   


   ಅಧ್ಯಾಯ  - 66


    ಗ್ರಂಥ ರಚನೆ - ಚರಣದಾಸ 


ಸರ್ಕಾರ ರಚನೆಯಾದ ಕತೆ 






ಸ್ವಾತ್ಮಾ ರಾಮಂ  ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।


ಇದು ನಡೆದದ್ದು ತೀರಾ ಇತ್ತೀಚೆಗೆ, 2007-08 ರಲ್ಲಿ ಎಂದೆನಿಸುತ್ತದೆ. ಸರ್ಕಾರ ರಚಿಸಬೇಕೆಂಬ ಪ್ರಬಲ ಇಚ್ಛೆ ಇದ್ದ ಪ್ರಭಾವಿ ರಾಜಕಾರಣಿಯೊಬ್ಬರು ಎರಡು ಬಾರಿ ಭೇಟಿಯಾಗಲು ಬಂದರೂ ಗುರುನಾಥರು ಸಿಗಲಿಲ್ಲ. 

ಈ ಬಾರಿ ಹೇಗಾದರೂ ಮಾಡಿ ಗುರುನಾಥರನ್ನು ಭೇಟಿಯಾಗಲೇಬೇಕೆಂದು ನಿರ್ಧರಿಸಿದ ಅವರು ಗುರುನಾಥರು ಹೋದಲೆಲ್ಲಾ ಹಿಂಬಾಲಿಸತೊಡಗಿದರು. ಕೊನೆಗೆ ಚಿಕ್ಕಮಗಳೂರಿನ ಭಕ್ತರೋರ್ವರ ಮನೆಯಲ್ಲಿ ಗುರುದರ್ಶನವಾಯಿತು. 

ಅವರ ಮನದ ಇಂಗಿತವನ್ನರಿತ ಗುರುನಾಥರು ಒಂದು ಉಂಗುರ ತರಿಸಿ ಅವರಿಗೆ ಹಾಕಿ "ಇನ್ನು ಇಷ್ಟು ದಿನಗಳಲ್ಲಿ ನಿನ್ನ ಇಚ್ಛೆ ಈಡೇರುವುದು. ನೀನು ಮುಖ್ಯಮಂತ್ರಿಯಾಗುವಿ" ಎಂದು ಹರಸಿ, ಜೊತೆಗೆ "ಆದರೆ ನೀನು ಮಾತು ಉಳಿಸಿಕೊಳ್ಳಲಾರೆ" ಎಂಬ ಮಾತನ್ನೂ ಹೇಳಿಕಳಿಸಿದರು. ಇದರ ಅರ್ಥವನ್ನು ಅರಿಯದ ಅವರು ಹೋದರು. 

ಗುರುವಾಕ್ಯದಂತೆಯೇ ಸಮ್ಮಿಶ್ರ ಸರ್ಕಾರ ರಚನೆಯಾಗಿ ಅವರೇ ಮುಖ್ಯಮಂತ್ರಿಯೂ ಆದರು. ತದನಂತರ ಗ್ರಾಮವಾಸ್ತವ್ಯದ ನೆಪದಲ್ಲಿ ಸಖರಾಯಪಟ್ಟಣದ ಸಮೀಪದ ಗ್ರಾಮದಲ್ಲಿ ವಾಸ್ತವ್ಯ ಹೂಡಿದ ಮುಖ್ಯಮಂತ್ರಿಗಳು ರಾತ್ರಿ ಬಹು ಹೊತ್ತಿನವರೆಗೂ ಗುರುದರ್ಶನಕ್ಕಾಗಿ ಕಾದರು. ಆದರೆ ಪ್ರಯೋಜನವಾಗಲಿಲ್ಲ. 

ಮುಖ್ಯಮಂತ್ರಿಗಳು ತನ್ನನ್ನು ಹುಡುಕುತ್ತಿದ್ದ ಬಗ್ಗೆ ಅರಿವಿದ್ದ ಗುರುನಾಥರು ಅವರಿಗೆ "ನಿನಗೆ ಗುರುವೆಂಬ ಭಾವದ ಅರಿವಿದ್ದಲ್ಲಿ ನಿನ್ನ ದಂಡು, ಹಿಂಬಾಲಕರೆನ್ನೆಲ್ಲ ಬಿಟ್ಟು ನೀನೊಬ್ಬನೇ ಬಾ. ಏನು ಬೇಕಾದರೂ ಮಾಡಿಕೊಡ್ತೀನಿ. ಅದಿಲ್ಲಾಂದ್ರೆ ನೀ ಸಿ.ಎಂ. ಆದ್ರೆ ರಾಜ್ಯಕ್ಕೆ, ನನ್ನನ್ನೇನು ಮಾಡಲು ಸಾಧ್ಯ?" ಎಂದು ಗುಡುಗಿದರು. ಇದರ ಅರ್ಥ ಗುರು ಗೌಪ್ಯ. ಪ್ರದರ್ಶನಕ್ಕಾಗಿ ಅಲ್ಲ ಎಂಬುದಾಗಿತ್ತು. 

ಗುರುದರ್ಶನವಾಗದೇ ಹತಾಶರಾಗಿ ಹಿಂತಿರುಗಿದ ಮುಖ್ಯಮಂತ್ರಿಗಳಿಗೆ ಒಂದು ಆಶ್ಚರ್ಯ ಕಾದಿತ್ತು. 

ಒಂದು ವಾರದ ನಂತರ ಗುರುನಾಥರು ಚರಣದಾಸನಾದ ನನ್ನನ್ನು ಕರೆದು "ಅಯ್ಯಾ ಸಿ.ಎಂ. ನನ್ನ ನೋಡ್ಬೇಕಂತೆ, ಹೋಗಿ ಬರ್ತೀನಿ ಕಣಯ್ಯಾ... ಮನೆ ಕಡೆ ಜೋಪಾನ" ಎಂದು ಹೇಳಿ ಹೊರಟು  ಬೆಂಗಳೂರಿಗೆ ಹೋದರು.

ರಾಜರಾಜೇಶ್ವರಿ ನಗರಕ್ಕೆ ಕಾರ್ಯನಿಮಿತ್ತ ಹೋಗಿದ್ದ ಸಿ.ಎಂ.ಗೆ ಆಶ್ಚರ್ಯ ಕಾದಿತ್ತು. ಅವರು ಬರುವ ದಾರಿಯಲ್ಲಿ ಗುರುನಾಥರು ನಿಂತಿದ್ದನ್ನು ಕಂಡ ಸಿ.ಎಂ. ಲಗುಬಗೆಯಿಂದ ಕಾರಿನಿಂದಿಳಿದು ಬಂದು ಗುರುಗಳಿಗೆ ನಮಸ್ಕರಿಸಿ, "ಗುರುಗಳೇ, ಮನೆಗೆ ಬರಬೇಡವೆಂದು ಹೇಳಿದ ನೀವು ಇಲ್ಲಿಗೇ ಬಂದು ನನಗೆ ದರ್ಶನ ನೀಡಿದ್ರಲ್ಲಾ... !? ನಾ ನಿಮಗೆ ಏನು ಕೊಡಲು ಸಾಧ್ಯ? ನಾ ನಿಮ್ಮನೆಗೆ ಬಂದು ಒಂದು ಗಂಟೆ ಇರಲು ಅವಕಾಶ ಕೊಡಿ. ಒಂದು ಲೋಟ ನೀರು ಕೊಡಿ. ನನಗದೇ ಭಾಗ್ಯ" ಎಂದು ಭಾವಪರವಶರಾಗಿ ಪ್ರಾರ್ಥಿಸಲು, ಗುರುಗಳು ಆಗಬಹುದೆಂದರು. 

ನಂತರ ಗುರುನಾಥರು ಮುಖ್ಯಮಂತ್ರಿಗಳ ಬೆಂಗಾವಲು ಪಡೆ  ಹಾಗೂ ಓಡಾಡುವ ಜನರೆಲ್ಲರಿಗೂ ಹಣ್ಣು ಹಂಚಿ ಅಲ್ಲಿಂದ ಹೊರಟುಹೋದರು. 

ಗುರು ಕರುಣಾ ಸಮುದ್ರ. ಆತನ ಕೃಪೆಯಾಗಲು ಕಾಯುವ ತಾಳ್ಮೆ ನಮಗಿರಬೇಕು. ಅಷ್ಟೇ.... 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು..... 


।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।


No comments:

Post a Comment