ಶ್ರೀ ಸದ್ಗುರು ಮಹಿಮೆ
ಅಧ್ಯಾಯ - 86
ಗ್ರಂಥ ರಚನೆ - ಚರಣದಾಸ
ಸಮಾಜ ಸೇವೆ
ಸ್ವಾತ್ಮಾ ರಾಮಂ ನಿಜಾನಂದಂ ।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ ।
ವೆಂಕಟಾಚಲ ದೇಶಿಕಂ ।।
ಒಮ್ಮೆ ಒಂದು ಕಾಲೇಜಿನ ಉಪನ್ಯಾಸಕರೊಬ್ಬರು ಗುರುದರ್ಶನಕ್ಕಾಗಿ ಬಂದಿದ್ದರು. ಅವರು ಒಂದು ಸಂಘಟನೆಯಲ್ಲಿ ತನ್ನನ್ನು ಸಕ್ರೀಯವಾಗಿ ಗುರುತಿಸಿಕೊಂಡಿದ್ದರು. ಅವರು ಗುರುನಾಥರೊಂದಿಗೆ ಮಾತನಾಡುತ್ತಾ "ಗುರುಗಳೇ ತಾವು ಗೋಹತ್ಯೆ ನಿಷೇಧಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು" ಅಂದ್ರು.
ಆಗ ಗುರುನಾಥರು "ಸ್ವಾಮಿ, ನೀವು ಮಾಡುತ್ತಿರುವ ಕಾರ್ಯದ ಉದ್ದೇಶ ನಿಜಕ್ಕೂ ಒಳ್ಳೆಯದೇ. ಆದರೆ ಒಂದೊಮ್ಮೆ ನಿಷೇಧಿಸಿದರೆ ಒಂದು ಹೊತ್ತಿನ ಊಟಕ್ಕೂ ಗತಿಯಿರದ ಕೆಲವರು ಅದರಿಂದಲೇ ಜೀವನ ಕಂಡುಕೊಂಡಿದ್ದಾರೆ. ಅವರ ಬದುಕಿನ ಕತೆಯನ್ನು ಯೋಚಿಸಿದ್ದೀರಾ? ಹೀ ಮಾಡಬೇಡಿ ಅನ್ನೋ ಮೊದಲು ಅವರು ಏನು ಮಾಡಬೇಕು ಅಂತ ತಿಳಿಸಿದ್ರೆ ಒಳ್ಳೆಯದಲ್ಲವೇ?".
"ಒಂದು ಕೆಲಸ ಮಾಡಿ. ತಾವು ಬ್ಯಾಂಕ್ ನಲ್ಲಿ 16 ಲಕ್ಷ ಇಟ್ಟಿದ್ದೀರಲ್ಲ... ಅದನ್ನ ತೆಗೆದು ಆ ಬಡ ಜನರಿಗೆಲ್ಲ ಹಂಚಿ. ಜೀವನಕ್ಕೊಂದು ದಾರಿ ಮಾಡಿ ಅದು ಸಮಾಜ ಸೇವೆ" ಅಂದ್ರು. ಇದನ್ನು ಕೇಳಿದ ಮೇಲೆ ಆ ವ್ಯಕ್ತಿ ನಿರುತ್ತರರಾದರು.
ಅದಕ್ಕೆ ಗುರುನಾಥರು ಆಗಾಗ್ಗೆ ಹೀಗೆ ಹೇಳುತ್ತಿದ್ದರು. ಬ್ಯಾಂಕ್ ನಲ್ಲಿ ಲಕ್ಷ-ಲಕ್ಷ ಇಟ್ಟೊರೆಲ್ಲಾ ನೆಮ್ಮದಿಯಾಗಿ ಇರುತ್ತಾರೆ ಅನ್ನೋದು ಸುಳ್ಳು. ನೆಮ್ಮದಿ ಅನ್ನೋದು ಒಳಗಿನಿಂದ ತಿಳಿದುಕೊಳ್ಳಬೇಕಾದ ವಸ್ತು ವಿಚಾರವೇ ವಿನಃ ಅಂಗಡಿಯಲ್ಲಿ ಸಿಗುವ ವಸ್ತುವಲ್ಲ. ಎಷ್ಟು ಹಣ ಮಾಡಿದ್ರೂ, ತಿನ್ನೋದು ಮೂರು ಮುಷ್ಠಿ ಅನ್ನವೇ ವಿನಃ ಹಣ ತಿನ್ನೋಕೆ ಆಗಲ್ಲ.
ಒಮ್ಮೆ ಒಬ್ಬ ಜೀವವಿಮಾ ನಿಗಮದ ಸದಸ್ಯರು ಗುರುನಾಥರನ್ನು ಸಂದರ್ಶಿಸಿ ಜೀವವಿಮೆ ಮಾಡಿಸಿ ಅಂದ್ರು.
ಅದಕ್ಕೆ ಗುರುನಾಥರು "ನನ್ನ ಜೀವಕ್ಕೆ ಶ್ಯೂರಿಟಿ ಇಲ್ಲ ಅಂದ ಮೇಲೆ ಇನ್ಸೂರೆನ್ಸ್ ಹೆಂಗಪ್ಪಾ ಮಾಡಲಿ? ಆ ಈಶ್ವರ ಇದಕ್ಕೆ (ತನ್ನ ದೇಹವನ್ನು ತೋರಿಸುತ್ತಾ) ಯಾವಾಗ ಚೀಟಿ ಕೊಡುತ್ತಾನೋ ಗೊತ್ತಿಲ್ಲ. ಆಪತ್ಕಾಲಕ್ಕೆ ಆಗ್ಲಿ ಅಂತ ಹಣ ಇಟ್ರೆ ನಾವಾಗಿಯೇ ಆಪತ್ತನ್ನು ರತ್ನಗಂಬಳಿ ಹಾಕಿ ಆಹ್ವಾನಿಸಿದಂತೆ ಅಲ್ಲವೇ?"
ಅದಕ್ಕೆ "ಠೇವಣಿ ಇಡೋದಾದ್ರೆ ಭಗವಂತನ ಬ್ಯಾಂಕ್ ನಲ್ಲಿ ಅವನ ನಾಮ ಸ್ಮರಣೆ ಹಾಗೂ ನಿಮ್ಮ ಉತ್ತಮ ನಡವಳಿಕೆ ಎಂಬ ಹಣವನ್ನು ಠೇವಣಿ ಮಾಡಿ. ಆಗ ಆ ಸದ್ಗುರು ನಿಮ್ಮ ಜೀವನಕ್ಕೆ ಎಲ್ಲೂ ಆಪತ್ತು ಬರದಂತೆ ನಿಮ್ಮನ್ನು ಕರೆದೊಯ್ಯುವನು" ಅಂದರು.
ಒಮ್ಮೆ ಚರಣದಾಸನಾದ ನಾನು ಜನರ ಮಧ್ಯೆ ಸುತ್ತಾಡುತ್ತಿದ್ದ ಆ ನಾಲ್ಕು ನಾಯಿಗಳನ್ನು ಓಡಿಸಲು ಹೋದೆ. ಆಗ ನನ್ನನ್ನು ತಡೆದ ಗುರುನಾಥರು "ಯಾಕಯ್ಯಾ ಓಡಿಸ್ತೀಯಾ?. ಈ ಮನೆ ನಂದು ಅಲ್ಲ ನಿಂದು ಅಲ್ಲ. ನಾವಾದ್ರೆ ಬೇಜಾರಾಯಿತು ಅಂತ ಬೇರೆ ಕಡೆಗೆ ಹೋಗ್ತೀವಿ. ಇನ್ನೊಬ್ಬರ ವಿಚಾರ ಮಾತಾಡುತ್ತೀವಿ, ಚಾಡಿ ಹೇಳ್ತೀವಿ. ಆದರೆ, ಈ ನಾಯಿಗಳು ಹಾಗೆ ಮಾಡಲ್ವಲ್ಲಾ? ನಮಗಿಂತ ಹೆಚ್ಚಾಗಿ ಈ ಮನೆಯಲ್ಲಿ ಅವೇ ಇರುತ್ತವೆ. ಅಂದ ಮೇಲೆ ಈ ಮನೆ ಅವುಗಳದ್ದೇ ಅಲ್ಲವೇ?" ಅಂದ್ರು. ಅವರ ಈ ಸಮಾನತೆಯ ಮಾತು ನನ್ನ ಜೀವನಕ್ಕೂ ಒಂದು ಪಾಠ ಕಲಿಸಿತ್ತು.
ಇನ್ನೂ ಮುಂದುವರೆದ ಗುರುನಾಥರು "ನಾಯಿಗೆ ಜೊಲ್ಲಿನಲ್ಲಿ ವಿಷ, ಹಾವಿಗೆ ಹಲ್ಲಲ್ಲಿ ವಿಷ. ಆದರೆ, ಮನುಷ್ಯನಿಗೆ ಮೈಯೆಲ್ಲ ವಿಷ, ಅಲ್ಲವೇ? ಅವನ ಅಸೂಯೆ, ದ್ವೇಷ, ದುರಹಂಕಾರ, ಇಡೀ ಸಮಾಜದ ಆರೋಗ್ಯವನ್ನೇ ಹಾಲು ಮಾಡುತ್ತಿದೆ. ಒಂದು ಕೆಲಸ ಮಾಡು. ಕೆಲವು ದಿನ ಸ್ನಾನ ಮಾಡುವುದನ್ನು ನಿಲ್ಲಿಸು. ಆಗ ದೇಹ ಎಷ್ಟು ಸುಂದರ ಅಂತ ತಿಳಿಯುತ್ತೆ".
"ಆದ್ರೆ ಅದೇ ನಾಯಿ, ಜಾನುವಾರುಗಳು ಸ್ನಾನಾನೇ ಮಾಡಲ್ಲ. ಆದರೆ ಹಸುವಿನ ಗಂಜಲ, ಸಗಣಿ ಎಲ್ಲವೂ ಉಪಯುಕ್ತ. ಮನುಷ್ಯನ ಯಾವ ಭಾಗ ಉಪಯುಕ್ತವಾದುದು ತಿಳಿಸ್ತೀರಾ? ಆದ್ರೆ ಸಾಧನೆಗೆ ಮನುಷ್ಯ ಜನ್ಮ ಬಿಟ್ಟರೆ ಇನ್ನೊಂದು ಶ್ರೇಷ್ಠ ಜನ್ಮವಿಲ್ಲ ತಿಳೀತೇ?" ಅಂತಿದ್ರು.......,,,,,,,,,,
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರು ಮಹಿಮೆ ಕನ್ನಡ ಮತ್ತು ಇಂಗ್ಲೀಷ್ ಗ್ರಂಥವನ್ನು ಪರಾಂಬರಿಸುವುದು.....
।। ಶ್ರೀ ಗುರು ವೆಂಕಟಾಚಲ ಶರಣಂ ಪ್ರಪದ್ಯೇ ।।
For more info visit : http:// srivenkatachalaavadhoota. blogspot.in/
Poojya Guruvarya venkatachala Avara paadagalige naanu sharanu. Yellaranu sadaa kaala nimma krupe haagu rakshe kottu Kaapadi swamy. Hari om tatsat.
ReplyDelete